ಪಕ್ಷಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಾನಾ ವರ್ಣದ ರೆಕ್ಕೆ, ಪುಕ್ಕ, ವೈವಿಧ್ಯಮಯ ಕತ್ತು, ಕೊಕ್ಕು ಮೊದಲಾದುವುಗಳ ಮನವೋಹಕ ಮೈಮಾಟ, ಕತ್ತು ಕೊಂಕಿಸಿ ನೋಡುವ ಮುದ್ದಾದ ಮುಗ್ಧ ನೋಟ, ವಿಮಾನದ ಆವಿಷ್ಕಾರಕ್ಕೆ ಆಯಾಮನ್ನು ಒದಗಿಸಿ, ಕಲ್ಪನೆಗೂ ಮೀರಿ ಬಾನಂಗಳದಲ್ಲಿ ಸ್ವಚ್ಛಂಧವಾಗಿ ವಿಹರಿಸುವ ಅಥವಾ ಶಿಸ್ತುಬದ್ಧ ಸಿಪಾಯಿಗಳಂತೆ ಅಥವಾ ವಾಯುಪಡೆಯ ಏರ್‌ ಷೋನಂತೆ ಬಾನಿಗೆ ತೋರಣ ಅಥವಾ ಪುಷ್ಪ ಮಾಲೆಯಂತಿವೆ ಗುಂಪುಗುಂಪಾಗಿ ಸಾಗುವ ಹಾಗೂ ನೀರಿನಲ್ಲಿ ತೇಲಾಡುವ ನಯನ ಮನೋಹರ ಹಾಗೂ ಕಾವ್ಯಮಯವಾದ ದೃಶ್ಯವೈಭವ, ಮಂತ್ರಮುಗ್ಧಗೊಳಿಸುವ ಇನಿದನಿಗಳ ಇಂಚರ, ಮಾನವರಿಗೆ ಮಾದರಿಯಾಗುವಂತೆ ಶಿಸ್ತುಬದ್ಧ ಜೀವನ, ಗೂಡು ಕಟ್ಟುವ ಕೌಶಲ್ಯ, ಮರಿಗಳನ್ನು ಸಲಹುವ ಅಪರಿಮಿತ ಮಾತೃವಾತ್ಸಲ್ಯ, ಸಾಮರಸ್ಯ ಬದುಕು ಮೊದಲಾದವುಗಳೆಲ್ಲಾ ಯಾರನ್ನು ತಾನೇ ಸಮ್ಮೋಹನಗೊಳಿಸುವುದಿಲ್ಲ. ಆದರೇನು ಮಾಡುವುದು?

ಇತ್ತೀಚಿನ ದಿನಗಳಲ್ಲಿ ಕಾಡುಗಳೆಲ್ಲಾ ಕಾಂಕ್ರಿಟ್‌ ಜಂಗಲ್ ಆಗಿರುವ, ಆಗುತ್ತಿರುವ, ಆಗಲಿರುವ ನಗರ ಪ್ರದೇಶಗಳಲ್ಲಿ ವಿಶೇಷ ಪಕ್ಷಿಗಳಿರಲಿ ಸಾಮಾನ್ಯ ಪಕ್ಷಿಗಳಾದ ಕಾಗೆ, ಗುಬ್ಬಚ್ಚಿಗಳೂ ಕಾಣ ಸಿಗುತ್ತಿಲ್ಲ. ಆದರೆ, ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಅದೃಷ್ಟಕ್ಕೆ ಹಲವು ಪಕ್ಷಿಧಾಮಗಳು ಪಕ್ಷಿ ಸಂಕುಲವನ್ನು ಪೋಷಿಸುತ್ತಾ ಆಸಕ್ತರಿಗೆ ಪಕ್ಷಿಗಳ ಪ್ರಪಂಚವನ್ನು ಪರಿಚಯಿಸುತ್ತಿರುವುದು ಸಮಾಧಾನಕರ ಸಂಗತಿ. ಅಂತಹವುಗಳಲ್ಲಿ ಕಾವೇರಿ ನದಿ ತನ್ನ ಒಡಲಲ್ಲಿ ಮಮತೆಯಿಂದ ಪೋಷಿಸುತ್ತಾ ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವ `ಕರ್ನಾಟಕ ಪಕ್ಷಿಕಾಶಿ’ ಖ್ಯಾತಿಯ ರಂಗನತಿಟ್ಟು ಪ್ರಮುಖವಾದುದು. ಅದು ಮೈಸೂರು ಸಂಸ್ಥಾನದ ಅರಸರಾದ ಕಂಠೀರವ ನರಸಿಂಹರಾಜ ಒಡೆಯರ್‌ರವರ ಆಡಳಿತಾವಧಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಡ್ಡಿನ ಪರಿಣಾಮವಾಗಿ ಸುಂದರ ದ್ವೀಪಗಳು ಸೃಷ್ಟಿಯಾದವು. ಅವುಗಳಲ್ಲಿ ಶ್ರೀರಂಗಪಟ್ಟಣದಿಂದ 3 ಕಿ.ಮೀ. ದೂರದಲ್ಲಿ ನಿಸರ್ಗದ ರಮಣೀಯ ತಾಣದ ಪ್ರಶಾಂತ ಪರಿಸರದಲ್ಲಿ 40 ಎಕರೆ ವ್ಯಾಪ್ತಿಯನ್ನೊಳಗೊಂಡ ಆರು ಚಿಕ್ಕ ದ್ವೀಪ ಸಮೂಹವಾದ ರಂಗನತಿಟ್ಟು ಅಸಂಖ್ಯ ಪಕ್ಷಿ ಸಂಕುಲಕ್ಕೆ ಪೂರಕ ನೆಲೆಯಾಯಿತು.

ಇದನ್ನು ಕಂಡ ಪಕ್ಷಿತಜ್ಞ ಡಾ. ಸಲೀಂ ಅಲಿಯವರು ರಂಗನತಿಟ್ಟನ್ನು ಪಕ್ಷಿಧಾಮ ಎಂದು ಘೋಷಿಸಿ ಸೂಕ್ತ ವ್ಯವಸ್ಥೆಯೊಂದಿಗೆ ಪಕ್ಷಿ ಸಂಕುಲವನ್ನು ಪೋಷಿಸುವಂತೆ ವಿನಂತಿಸಿದರು. ಪ್ರಾಣಿಪಕ್ಷಿ ಪ್ರಿಯರಾದ ಒಡೆಯರ್‌ರವರೂ ಡಾ. ಸಲೀಂರಲ್ಲಿದ್ದ ಪಕ್ಷಿ ಸಂಕುಲದ ಕಳಿಕಳಿಯನ್ನು ಮನಗಂಡು ರಂಗನತಿಟ್ಟನ್ನು ಸಂರಕ್ಷಿತ ಪಕ್ಷಿಧಾಮ ಎಂದು ಘೋಷಿಸಿದರು. ಒಡೆಯರ್‌ರವರು ಈ ಕ್ರಮ ಕೈಗೊಳ್ಳದಿದ್ದರೆ, ವಿಶೇಷ ಹಾಗೂ ವಿಶಿಷ್ಟವಾದ ಇಲ್ಲಿನ ಪಕ್ಷಿಗಳು ಯಾರು ಯಾರ ಮನೆ ಅಥವಾ ಉದರ ಸೇರಿ ಅಸ್ತಿತ್ವದಲ್ಲಿ ಇಲ್ಲದಂತಾಗಿ ಬಿಡುತ್ತಿದ್ದವೋ ಏನೋ? ಈ ಕಾರಣಕ್ಕಾದರೂ ನಾವು ಒಡೆಯರ್‌ ಮತ್ತು ಡಾ. ಸಲೀಂ ಅಲಿಯವರಿಗೆ ಆಭಾರಿಯಾಗಿರಬೇಕು. ಈಗ ಅರಣ್ಯ ಇಲಾಖೆಯ ಸುಪರ್ದು ಮತ್ತು ನಿರ್ವಹಣೆಗೆ ಒಳಪಟ್ಟಿರುವುದು ಸಮಾಧಾನಕರ ಸಂಗತಿ. ಕಳೆದ ಹತ್ತಾರು ವರ್ಷಗಳ ಹಿಂದೆ ಈ ಪಕ್ಷಿಧಾಮದಲ್ಲಿ ಪಕ್ಷಿಗಳಿಗೇನೂ ಬರವಿರಲಿಲ್ಲ. ಆದರೆ, ಅವುಗಳನ್ನು ವೀಕ್ಷಿಸಲು ಬರುವ ಸಂದರ್ಶಕರಿಗೆ ಹೇಳಿಕೊಳ್ಳುವಂತಹ ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳು ಇರಲಿಲ್ಲ. ಆದರೀಗ ರಂಗನತಿಟ್ಟು  ಮೂಲಭೂತ ಅವಶ್ಯಕತೆ ಹಾಗೂ ಹಲವು ಹೊಸತನದಿಂದ ಕಂಗೊಳಿಸುತ್ತಾ ಪಕ್ಷಿ ಪ್ರೇಮಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪರಿವರ್ತನೆಯ ಪರ್ವದಲ್ಲಿರುವುದು ಶ್ಲಾಘನೀಯ. ಕಾವೇರಿ ನದಿಯ ಬಲ ದಂಡೆಯ ಮೇಲಿರುವ ಪಕ್ಷಿಧಾಮ ಪ್ರದೇಶದ ಆಸುಪಾಸಿನ ಖಾಸಗಿ ಕೃಷಿ ಭೂಮಿಯನ್ನು ಖರೀದಿಸಿ ವಿಸ್ತರಣೆಯ ವಿವಿಧ ಕಾಮಗಾರಿಗಳ ಮೂಲಕ ವಿನೂತನ ಸ್ಪರ್ಶ ನೀಡಲಾಗಿದೆ. ಸಂದರ್ಶಕರ ವಾಹನಗಳ ನಿಲುಗಡೆಗಾಗಿ ಈಗ ವಿಶಾಲ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ. ಮಣ್ಣಿನಿಂದ ಕೂಡಿದ್ದ ಕಾಲು ಹಾದಿಗೆಲ್ಲಾ ಟೈಲ್ಸ್ ಗಳನ್ನು ಅಳಡಿಸಲಾಗಿದೆ.

ಕಾಲು ಹಾದಿಯ ಇಕ್ಕೆಲಗಳಲ್ಲೂ ಬಿದಿರು ಹಾಗೂ ಇತರ ಜಾತಿಯ ಗಿಡಮರಗಳನ್ನು ಬೆಳೆಸಲಾಗಿದೆ. ಎಡ ಪಾರ್ಶ್ವದಲ್ಲಿ ಹಚ್ಚಹಸುರಿನಿಂದ ಕಂಗೊಳಿಸುವ ರಾಕ್‌ಗಾರ್ಡನ್‌ ಮೊದಲಾದ ಉದ್ಯಾನವನಗಳಿವೆ. ಸುಂದರವಾದ ಒಂದೆರಡು ಕೊಳಗಳೂ ಸಹ ಪಕ್ಷಿಧಾಮದ ಸೊಬಗನ್ನು ಹೆಚ್ಚಿಸಿವೆ. ಎತ್ತ ನೋಡಿದರೂ ಕಣ್ಣು ತುಂಬುವ ಹಸಿರು ಸಂದರ್ಶಕರಿಗೆ ತಂಪೆನ್ನೆರದು ತನುಮನ ತಣಿಸಿ ಆಯಾಸವನ್ನು ಪರಿಹರಿಸುತ್ತವೆ. ಸಂದರ್ಶಕರ ಹಸಿವನ್ನು ನೀಗಿಸುವ ಉಪಾಹಾರ ಮಂದಿರ ಹಾಗೂ ವಿಶ್ರಮಿಸಲು ಅಥವಾ ತಾವು ತಂದಿರುವ ಆಹಾರವನ್ನು ಸೇವಿಸಿ ಆಹಾರ ವಿಹಾರಾನಂದವನ್ನು ಅನುಭವಿಸಲು ಅನುವಾಗುವಂತೆ ಹೆಂಚು ಹೊದಿಕೆಯ ಅಷ್ಟಕೋನಾಕಾರದ ಚಪ್ಪರದಂತಹ ಮಂಟಪಗಳಿವೆ. ಪಕ್ಷಿಗಳ ವೀಕ್ಷಣೆಗಾಗಿ ವೀಕ್ಷಣಾ ಗೋಪುರಗಳು, ತೂಗು ಸೇತುವೆ ಮೊದಲಾದವುಗಳೆಲ್ಲ ರಂಗನತಿಟ್ಟಿನ ಆಕರ್ಷಣೆಯನ್ನು ಇಮ್ಮಡಿಸಿವೆ.

ಇಲ್ಲಿನ ವಿಶೇಷವೇನೆಂದರೆ ದೋಣಿ ವಿಹಾರದ ಮೂಲಕ ಪಕ್ಷಿಗಳ ವೀಕ್ಷಣೆ. ಇದಕ್ಕಾಗಿ 50 ರೂ. ಶುಲ್ಕವನ್ನು ವಿಧಿಸಲಾಗಿದೆ. ನದಿಯ ಮಧ್ಯೆ ಸೃಷ್ಟಿಯಾಗಿರುವ ರೇನ್‌ ಟ್ರೀ ಐಲ್ಯಾಂಡ್‌, ನಿರವಂಜಿ ಐಲ್ಯಾಂಡ್‌, ಸ್ಟೋನ್‌ ಫ್ಲವರ್‌ ಐಲ್ಯಾಂಡ್‌, ಮತ್ತಿ ಮರ, ವಿಸ್ಲಿಂಗ್‌ ಟ್ರೀ‌ನಲ್ಲಿ ಪಕ್ಷಿಗಳು ತಮ್ಮ ಸಂತಾನ ಅಭಿವೃದ್ಧಿಗಾಗಿ ಸಾವಿರಾರು ಗೂಡು ಕಟ್ಟಿ ಸಂಸಾರ ಹೂಡಿವೆ. ದೋಣಿ ವಿಹಾರಾರ್ಥಿಗಳಿಗೆ ತುಸು ದೂರದಿಂದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಇವುಗಳನ್ನು ಅತೀ ಸಮೀಪದಿಂದ ವೀಕ್ಷಿಸುವ ವಿಶೇಷ ದೋಣಿ ವಿಹಾರದ ಶುಲ್ಕ ಮಾತ್ರ 1,500 ರೂ.ಗಳಂತೆ! ಅತೀ ಸಮೀಪದಿಂದ ದ್ವೀಪ ಸಮೂಹವನ್ನು ಸಂದರ್ಶಿಸುವವರಿಗೆ ಪಕ್ಷಿಗಳು ಕಲಾತ್ಮಕವಾಗಿ ಕಟ್ಟಿರುವ ಹಾಗೂ ಕಟ್ಟುತ್ತಿರುವ ಅಸಂಖ್ಯ ಗೂಡುಗಳು, ಗಂಡು ಹೆಣ್ಣಿನ ಮಿಲನದ, ತತ್ತಿಗಳನ್ನಿಟ್ಟು, ಕಾವು ಕೊಟ್ಟು ಮರಿ ಮಾಡುವ ಹಾಗೂ ಮೀನು ಅಥವಾ ಹುಳು ಹುಪ್ಪಟೆಗಳನ್ನು ಹಿಡಿದು ತಂದು ತಮ್ಮ ಮರಿಗಳಿಗೆ ಪ್ರೀತಿ ವಾತ್ಸಲ್ಯದಿಂದ ತುತ್ತು ನೀಡಿ ಪೋಷಿಸುವ ದೃಶ್ಯಗಳು ಒಂದೆಡೆ ಹೃದಯಸ್ಪರ್ಶಿ ಎನಿಸಿದರೆ, ಮತ್ತೊಂದೆಡೆ ಪಕ್ಷಿಗಳ ಮೊಟ್ಟೆಗಳು ಹಾಗೂ ಹಾರಲಾಗದ ಮರಿಗಳನ್ನು ಹಾವು ಮತ್ತು ಗಿಡುಗಗಳು ಆಪೋಷಣೆ ತೆಗೆದುಕೊಳ್ಳುವ ಹೃದಯವಿದ್ರಾವಕ ದೃಶ್ಯಗಳು ಮನಕಲಕದಿರದು. ಪ್ರವಾಹ ಹೆಚ್ಚಿರುವ ದಿನಗಳಲ್ಲಿ ದೋಣಿ ವಿಹಾರದ ಸೌಲಭ್ಯ ಇರುವುದಿಲ್ಲ.

ಈ ಪಕ್ಷಿಧಾಮ ಅಸ್ತಿತ್ವಕ್ಕೆ ಬಂದಾಗಿನಿಂದ 170ಕ್ಕೂ ಹೆಚ್ಚಿನ ಪ್ರಭೇದದ ಪಕ್ಷಿ ಸಂಕುಲಗಳು ರಂಗನತಿಟ್ಟಿನಲ್ಲಿ ಕಾಣಿಸಿಕೊಂಡಿವೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ 30ಕ್ಕೂ ಹೆಚ್ಚಿನ ವಿವಿಧ ಜಾತಿ ಪಕ್ಷಿಗಳು ಗೋಚರವಾಗುತ್ತವೆ. ಅವುಗಳಲ್ಲಿ ಬಣ್ಣದ ಕೊಕ್ಕರೆ, ಚಮಚದ ಕೊಕ್ಕಿನ ಪಕ್ಷಿ, ಕರಿಕೆಂಬರಲು, ಶಿಳ್ಳೆ ಬಾತುಕೋಳಿ, ಉದ್ದ ಕೊಕ್ಕಿನ ನೀರುಕಾಗೆ, ಹೆಮ್ಮಿಂಚುಳ್ಳಿ, ಬೆಳ್ಳಕ್ಕಿ, ನೀರುಕಾಗೆ, ಹಾಲಕ್ಕಿ, ಬಕಪಕ್ಷಿಗಳು ಇಲ್ಲಿನ ನಿವಾಸಿಗಳಾಗಿವೆ.

ಪ್ರತಿ ವರ್ಷ ಇಲ್ಲಿ ಸರಿಸುಮಾರು 8000ದಷ್ಟು ಮರಿ ಹಕ್ಕಿಗಳು ರೆಕ್ಕೆ ಬಿಚ್ಚಿ ತಮ್ಮ ಬದುಕನ್ನು ಪ್ರಾರಂಭಿಸುತ್ತವೆ. ಹೆರ್ಜ್ಜಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಿಧಾಮವನ್ನು ತಮ್ಮ ಶಾಶ್ವತ ನೆಲೆಯನ್ನಾಗಿಸಿಕೊಂಡಿವೆ. ಚಳಿಗಾಲದ ಅವಧಿಯಲ್ಲಿ ಸುಮಾರು 40,000 ಪಕ್ಷಿಗಳು ಗುಂಪುಗುಂಪಾಗಿ ಉತ್ತರ ಭಾರತದಿಂದಲೇ ಅಲ್ಲದೆ, ದೂರದ ಲ್ಯಾಟಿನ್‌ ಅಮೆರಿಕಾ, ಸೈಬೀರಿಯಾ ಸೇರಿದಂತೆ ಹಲವು ವಿದೇಶಗಳಿಂದ ಸಂತಾನ ಅಭಿೃದ್ಧಿಗಾಗಿ ರಂಗನತಿಟ್ಟಿಗೆ ವಲಸೆ ಬರುತ್ತವೆ. ಕೆಲವೊಮ್ಮೆ ಬರುವ ಹುಚ್ಚು  ಪ್ರವಾಹ ಸಾಕಷ್ಟು ಪಕ್ಷಿ ಸಂಕುಲವನ್ನು ಆಪೋಷಣೆ ತೆಗೆದುಕೊಂಡಿದೆ. ಅಲ್ಲದೆ, ಮೂರು ದ್ವೀಪದ ಕೆಲವು ಭಾಗಗಳು ಹಾನಿಗೊಳಗಾಗಿವೆ.

ರಂಗನತಿಟ್ಟಿನಲ್ಲಿ ಪಕ್ಷಿಗಳನ್ನೇ ಅಲ್ಲದೆ ಚಿಕ್ಕ ಚಿಕ್ಕ ಸಸ್ತನಿಗಳಾದ ಕೋತಿಗಳು, ಬಾನೆಟ್‌ ಮೆಕಾಕ್‌, ಪುನುಗು ಬೆಕ್ಕುಗಳು, ನೀರು ನಾಯಿಗಳು, ಹಿರಿ ಹಲ್ಲಿಗಳು ಹಾಗೂ ಅಸಂಖ್ಯ ಸಿಹಿ ನೀರಿನ ಮೊಸಳೆಗಳನ್ನು ಸಹ ಕಾಣಬಹುದಾಗಿದೆ. ಇವುಗಳಲ್ಲಿ ಹಲವು ಬಾಯನ್ನು ಅಗಲವಾಗಿ ತೆರೆದು ಸಾಣೆ ಹಿಡಿದ ಚೂಪಾದ ಹಲ್ಲುಗಳನ್ನು ಭಯಾನಕವಾಗಿ ಪ್ರದರ್ಶಿಸುತ್ತಾ `ದಮ್ಮಿದ್ದವರು ಹತ್ತಿರ ಬನ್ನಿ!’ ಎಂಬ ಸವಾಲಿನೊಂದಿಗೆ ಸ್ಟ್ಯಾಚ್ಯುಗಳಂತೆ ಸ್ತಬ್ಧವಾಗಿ ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಠದೊಳಗಿನ ಬೆಕ್ಕಿನಂತೆ ಹಾಯಾಗಿ ವಿರಮಿಸುತ್ತಿರುತ್ತವೆ.

ಪ್ರವೇಶದ್ವಾರದ ಮೂಲಕ ಒಳಗೆ ಅಡಿ ಇಡುತ್ತಿದ್ದಂತೆ ಬಿಳಲು ಬೇರು ಬಿಟ್ಟಿರುವ ಬೃಹತ್‌ ಆಲದಮರ, ಪ್ರಸನ್ನ ದನದ ಜಟಾಜೂಟ ಧಾರಿ ತಪಸ್ವಿಯಂತೆ ಸಂದರ್ಶಕರ ಗಮನ ಸೆಳೆಯುತ್ತದೆ. ಕಾಲು ಹಾದಿಯ ಎರಡೂ ಬದಿಯಲ್ಲಿ ದಟ್ಟವಾಗಿ ಬೆಳೆದಿರುವ ಗಿಡಮರಗಳು, ಬಿದಿರು ಮೆಳೆಯ ಸಮೂಹಗಳು ಯಾವುದೋ ವನ್ಯಧಾಮದಲ್ಲಿ ಇರುವಂತಹ ಅನುಭವವನ್ನು ನೀಡುತ್ತವೆ. ಪ್ರವೇಶದ್ವಾರದಿಂದ ಸ್ವಲ್ಪ ಮುಂದುವರಿದು ಬಲಕ್ಕೆ ಕಾಲು ಹಾದಿ ಸುಮಾರು 20 ಅಡಿ ಎತ್ತರದ ಗುಡ್ಡದ ಮೇಲಿರುವ ವೀಕ್ಷಣಾ ಗೋಪುರ ಮಂಟಪಕ್ಕೆ ಕೊಂಡೊಯ್ಯುತ್ತದೆ. ಇಲ್ಲಿಂದ ಕಾವೇರಿ ನದಿ ಹಾಗೂ ಅದರ ಮಡಿಲಲ್ಲಿ ಇರುವ ಪಕ್ಷಿಧಾಮದ ದ್ವೀಪಗಳ ವಿಹಂಗಮ ದೃಶ್ಯ ನೇತ್ರಾನಂದವನ್ನು ಉಂಟು ಮಾಡದಿರದು. ಮಧ್ಯಾಹ್ನ ಭೋಜನದ ಸಮಯವನ್ನು ಹೊರತುಪಡಿಸಿ ಉಳಿದ ವೇಳೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಇರುತ್ತದೆ. ದೋಣಿ ವಿಹಾರ ಸ್ಥಳದ ಪಕ್ಕದಲ್ಲೇ ನದಿ ಪಾತ್ರದುದ್ದಕ್ಕೂ ಇರುವ ಕಾಲು ಹಾದಿಯಲ್ಲಿ ಕ್ರಮಿಸಿದರೆ ತೂಗು ಸೇತುವೆ ಮತ್ತು ವೀಕ್ಷಣಾ ಗೋಪುರ ಸಿಗುತ್ತದೆ.

ಬೋಟಿಂಗ್‌ ಸ್ಪಾಟ್‌ನ ದಂಡೆಯ ಮೇಲಿರುವ ಬೆಂಚುಗಳಲ್ಲಿ ಕುಳಿತ ಸಂದರ್ಶಕರು ಎಸೆದ ತಿನಿಸುಗಳನ್ನು ತಿನ್ನಲು ಬುಳುಬುಳುಕ್ಕನೆ ಮೇಲಕ್ಕೆ ಬಂದು ಪೈಪೋಟಿ ನಡೆಸುವ ಮೀನುಗಳ ಚಿನ್ನಾಟ, ಆಗಿದಾಂಗ್ಗೆ ದ್ವೀಪದಲ್ಲಿರುವ ಮರದ ರೆಂಬೆಕೊಂಬೆಗಳ ಮೇಲೆ ಕುಳಿತುಕೊಳ್ಳುವ ಮನಮೋಹಕ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಸಂಜೆ ವೇಳೆ ಸಮೀಪಿಸುತ್ತಿದ್ದಂತೆ ಪಶ್ಚಿಮ ದಿಗಂತದ ಕೆಂದೋಕುಳಿ ಆಟದ ಹಿನ್ನೆಲೆಯಲ್ಲಿ ಗೂಡು ಸೇರಲು ತವಕದಿಂದ ಆಗಮಿಸುವ ಹಿಂಡು ಹಿಂಡು ಪಕ್ಷಿಗಳ ಹಾರಾಟ ಹಾಗೂ ಕಲರವ ಅವಿಸ್ಮರಣೀಯ.

ರಂಗನತಿಟ್ಟಿನ ಮತ್ತೂ ಒಂದು ವಿಶೇಷವೆಂದರೆ, ಯುವ ಪ್ರೇಮಿಗಳು. ಅದೇನು ನಂಟೋ ಗಂಟೋ ತಿಳಿಯದು, ಆದರೆ ಪ್ರತಿದಿನ ಈ ಪಕ್ಷಿಧಾಮಕ್ಕೆ ಲಗ್ಗೆ ಹಾಕುವವರಲ್ಲಿ ಹೆಚ್ಚಿನ ಸಂಖ್ಯೆಯವರು ಮಾತ್ರ ಹದಿಹರೆಯದ ಯುವ ಪ್ರೇಮಿಗಳು! `ಲವ್ ಬರ್ಡ್ಸ್’ ಎಂಬುದು ಪ್ರೀತಿ, ಪ್ರೇಮ ಮತ್ತು ಪ್ರಣಯಕ್ಕೆ ಸಾಂಕೇತಿಕ ಅಥವಾ ಪರ್ಯಾಯ ಪದವಾಗಿರುವ ಹಿನ್ನೆಲೆಯಲ್ಲಿ ಯುವ ಪ್ರೇಮಿಗಳು ತಮ್ಮ ಪ್ರೀತಿಯನ್ನು ಪೋಷಿಸಲು  ಈ ಪಕ್ಷಿಕಾಶಿಯನ್ನು ಸಂದರ್ಶಿಸುವ ಸಂಪ್ರದಾಯಕ್ಕೆ ಶರಣಾಗಿದ್ದಾರೋ ಏನೋ ಅರಿಯದು. ಆದರೆ, ಇಲ್ಲಿ ಬಹುತೇಕ ಮಂದಿ ಪ್ರೇಮಿಗಳು ಪ್ರೀತಿಯ ಸಾಫಲ್ಯಕ್ಕಿಂತ ಸಾರ್ವಜನಿಕರು ಸುಳಿಯದ ಏಕಾಂತ ಸ್ಥಳಗಳಲ್ಲಿ (ಕೆಲವರು ಸಾರ್ವಜನಿಕರ ಎದುರೇ ಎಗ್ಗಿಲ್ಲದೆ) ಸರಸದಲ್ಲಿ ತೊಡಗಿರುವುದೇ ಹೆಚ್ಚಂತೆ! ಈ ಪ್ರವೃತ್ತಿ ರಂಗನತಿಟ್ಟಿನ ಖ್ಯಾತಿಗೆ ಕಪ್ಪುಚುಕ್ಕೆ ಎಂದರೂ ತಪ್ಪಾಗಲಾರದು. ಇಂತಹ ಅಪಶೃತಿಗಳನ್ನು ನಿರ್ಬಂಧಿಸುವತ್ತ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.

ಈ ಪಕ್ಷಿಧಾಮದ ವೀಕ್ಷಣೆಗೆ ನವೆಂಬರ್‌ನಿಂದ ಮುಂದಿನ ಜೂನ್‌ವರೆಗಿನ ಅವಧಿ ಬಹಳ ಪ್ರಶಸ್ತವಾದುದು. ವಾರದ ಎಲ್ಲಾ ದಿನಗಳಲ್ಲೂ ಪಕ್ಷಿಧಾಮವನ್ನು ಬೆಳಗಿನ 8.30 ರಿಂದ ಸಂಜೆ 6.00 ಗಂಟೆಯವರೆಗೆ ಸಂದರ್ಶಿಸಬಹುದಾಗಿದೆ. ಆದರೆ, ಈ ಪಕ್ಷಿಧಾಮವನ್ನು ಸಂದರ್ಶಿಸಬೇಕೆನ್ನುವ ಜನಸಾಮಾನ್ಯರಿಗೆ ನಿರಾಸೆ ಮೂಡಿಸುವ ಬೇಸರದ ಸಂಗತಿ ಎಂದರೆ, ದುಬಾರಿ ಪ್ರವೇಶ ಶುಲ್ಕ. ಮತ್ತೊಂದು ತೊಡಕೆಂದರೆ ಶ್ರೀರಂಗಪಟ್ಟಣದಿಂದ ಸಾರಿಗೆ ವ್ಯವಸ್ಥೆ ಇಲ್ಲದಿರುವುದು. ಪಕ್ಷಿ ಸಂಕುಲದ ಅಧ್ಯಯನ ಕೇಂದ್ರದಂತಿರುವ ಕರ್ನಾಟಕದ ಪಕ್ಷಿಕಾಶಿ ರಂಗನತಿಟ್ಟು ಲಾಭದ ಕೇಂದ್ರವಾಗದೆ ಜನಸಾಮಾನ್ಯರ ಸಂದರ್ಶನಕ್ಕೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವಂತಾಗಲೆಂದು ಆಶಿಸೋಣ.

– ರಾಮಕೃಷ್ಣಾರ್ಪಣಾನಂದ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ