ತಮ್ಮ ಛಲ ಹಾಗೂ ಉತ್ಕಟ ಬಲದ ಆಧಾರದ ಮೇಲೆ ಸೋನಾ ಚೌಧರಿ ಕೇವಲ ಫುಟ್‌ಬಾಲ್‌ನಲ್ಲಷ್ಟೇ ಮಿಂಚದೆ, ತಮ್ಮ ಅದ್ಭುತ ಆಟದ ಬಲದಿಂದ ಭಾರತೀಯ ಮಹಿಳಾ ಫುಟ್‌ಬಾಲ್ ತಂಡದ ನಾಯಕಿಯಾಗಿಯೂ ಮಿಂಚಿದರು. ಹರಿಯಾಣ ರಾಜ್ಯದ ಒಂದು ಪುಟ್ಟ ಹಳ್ಳಿಯ ರೈತ ಕುಟುಂಬದಿಂದ ಬಂದ ಸೋನಾ ಫುಟ್‌ಬಾಲ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದು ವಿಚಿತ್ರವಾದರೂ ನಿಜ. 80ರ ದಶಕದಲ್ಲಿ ಮಹಿಳೆಯರಿಗೆ ಫುಟ್‌ಬಾಲ್ ಆಡಲು ಪ್ರತ್ಯೇಕ ಮೈದಾನ ಕೂಡ ಇರಲಿಲ್ಲ. ಆದರೆ ಅವರ ಉಸಿರಲ್ಲಿ ಫುಟ್‌ಬಾಲ್ ಬೆರೆತು ಹೋಗಿತ್ತು.
ಹೀಗಾಗಿ ಸೋನಾ ಸೋಲು ಒಪ್ಪಿಕೊಳ್ಳಲಿಲ್ಲ. ತಮ್ಮ ಅಪಾರ ಪರಿಶ್ರಮ ಹಾಗೂ ಛಲದ ಬಲದಿಂದಾಗಿ ಅವರು ಮೊದಲು ಹರಿಯಾಣ (1992-96) ಹಾಗೂ ಆ ಬಳಿಕ ಭಾರತ ತಂಡದ (1996-98) ಮಹಿಳಾ ಫುಟ್‌ಬಾಲ್ ತಂಡದ ನಾಯಕಿಯಾಗಿ ಮಿಂಚಿದರು. ಅವರ ನೇತೃತ್ವದಲ್ಲಿ ಭಾರತೀಯ ಮಹಿಳಾ ತಂಡ ನೇಪಾಳ ಹಾಗೂ ಬಾಂಗ್ಲಾ ದೇಶಕ್ಕೆ ಹೋಗಿ ಆಡಿತ್ತು.
ಕಷ್ಟದ ದಾರಿ ಹಾಗೂ ಯಶಸ್ಸು
`ಮಹಿಳಾ ಆಟಗಾರ್ತಿಗೆ ಆಟ ಹಾಗೂ ಸಮಾಜಕ್ಕೆ ಸಂಬಂಧಪಟ್ಟಂತೆ ಯಾವ ಯಾವ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ?' ಈ ಪ್ರಶ್ನೆಗೆ ಸೋನಾ ಚೌಧರಿ ಉತ್ತರಿಸಿದ್ದು ಹೀಗೆ, ``ನಾನು ಆ ಕ್ರೀಡೆಯನ್ನು ಏಕೆ ಒಪ್ಪಿಕೊಂಡೆನೆಂದರೆ, ಅದರ ಬಗ್ಗೆ ನನಗೆ ಅಪಾರ ಪ್ರೀತಿಯಿತ್ತು. ನನ್ನ ಛಲ ಹಾಗೂ ಉತ್ಕಟ ಅಭಿಲಾಷೆ ನನ್ನನ್ನು ಫುಟ್‌ಬಾಲ್ ಆಟಗಾರ್ತಿ ಆಗಿಸಿತ್ತು. ಆಗ ನನಗೆ ಯಾರೋ ಒಬ್ಬರು, ``ನೀನು ಹುಡುಗಿ, ಹೀಗಾಗಿ ನೀನು ಫುಟ್‌ಬಾಲ್ ಆಡಲು ಆಗುವುದಿಲ್ಲ,'' ಎಂದಿದ್ದರು. ಆ ಮಾತು ನನ್ನನ್ನು ಬಹಳ ಘಾಸಿಗೊಳಿಸಿತ್ತು. ಆಗ ನಾನು ದಿಟ್ಟ ಹೆಜ್ಜೆ ಇಟ್ಟೆ. ಆ ಬಳಿಕ ನಾನು ಎಷ್ಟು ದೂರ ಕ್ರಮಿಸಿದೆನೆಂದರೆ, ಅದು ನನ್ನ ಊಹೆಗೂ ಮೀರಿದ್ದಾಗಿತ್ತು. ಆಗ ಭಾರತ ತಂಡದಲ್ಲಿ ಆಡುವುದೆಂದರೆ ಒಲಿಂಪಿಕ್ ಕ್ರೀಡೆಯಲ್ಲಿ ಭಾಗಹಿಸಿದಂತಿತ್ತು.``
ಈ ಕ್ರೀಡೆಯಿಂದ ನನಗೆ ದೊರೆತ ಜನರ ಪ್ರೀತಿ ಎಲ್ಲಕ್ಕೂ ದೊಡ್ಡ ಸಾಧನೆಯಂತಿತ್ತು. ನಾವು ಎಲ್ಲಿಯೇ ಆಡಲು ಹೋದರೂ ಜನರು ನಮ್ಮ ಬಗ್ಗೆ ಅಪಾರ ಗೌರವ ಸೂಚಿಸುತ್ತಿದ್ದರು. ಆ ಕ್ಷಣಗಳನ್ನು ನಾನಿನ್ನೂ ಮರೆತಿಲ್ಲ. ಅವು ನನ್ನನ್ನು ರೋಮಾಂಚನಗೊಳಿಸುತ್ತವೆ.''
ಅವರು ಮುಂದುವರಿದು ಹೇಳುತ್ತಾರೆ, ``ಮಹಿಳೆಯೊಬ್ಬಳು ಕ್ರೀಡೆಯಲ್ಲಿ ಭಾಗಿಯಾಗುವುದು ಈಗ ಸಾಮಾನ್ಯ ಸಂಗತಿ ಎನಿಸುತ್ತದೆ. ಆದರೆ ನಾವು ಆಡುವಾಗ ಅದು ಬಹಳ ವಿಶೇಷತೆ ಎನಿಸುತ್ತಿತ್ತು. ಆಗ ಕುಟುಂಬದವರೇ ಸಹಕಾರ ಕೊಡುವುದು ಅಪರೂಪ. ಯಾರೇ ಭೇಟಿಯಾದರೂ ಹುಡುಗಿಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎಂಬಂತೆ ಹೇಳುತ್ತಿದ್ದರು.
``ನನ್ನ ಅಣ್ಣನ ಎಷ್ಟೋ ಸ್ನೇಹಿತರು ನಾನು ಹುಡುಗರ ಜೊತೆ ಏಕೆ ಫುಟ್‌ಬಾಲ್ ಆಡುತ್ತಿದ್ದೆ ಎಂದು ಪ್ರಶ್ನಿಸುತ್ತಿದ್ದರು. ಒಂದು ಕಹಿ ಸತ್ಯವೆಂದರೆ, ಜನರು ಹೇಳಿದ್ದನ್ನು ಕೇಳಿಸಿಕೊಳ್ಳಲೂ ಬೇಕು. ಅವರೊಂದಿಗೆ ಹೋರಾಡುವುದೂ ಗೊತ್ತಿರಬೇಕು. ಆ ನಿಟ್ಟಿನಲ್ಲಿ ನಾನು ಬಹಳಷ್ಟು ನೋವು ಉಂಡಿರುವೆ. ಮನೆಯನ್ನು ನಿರ್ವಹಿಸುತ್ತಲೇ ಮುಂದೆ ಮುಂದೆ ಸಾಗಿದೆ.''
ಗೇಮ್ ಇನ್ ಗೇಮ್