ನಟ ವಿಜಯ್ ಅವರ ಗೆಲುವು ದಶಕದ ಆಡಳಿತದ ವಿರುದ್ಧ ಜನರಲ್ಲಿ ಬೆಳೆದ ಅಸಮಾಧಾನದ ಫಲ ಎಂದು ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಷ್ ಹೇಳಿದ್ದಾರೆ.
ವಿಜಯ್ ಅವರ ಅಪಾರ ಜನಪ್ರಿಯತೆ ಮತಗಳಾಗಿ ಪರಿವರ್ತನೆಗೊಂಡಿದ್ದು, ಅವರ ಗೆಲುವಿಗೆ ಕಾರಣವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವನ್ನು ಗೌರವಿಸಲೇಬೇಕು. ಆದರೆ, ಅತಂತ್ರ ವಿಧಾನಸಭೆಯ ಉಪಸ್ಥಿತಿಯು ಸ್ಥಿರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿಜಯ್ ಅವರ ಚುನಾವಣಾ ಭರವಸೆಗಳನ್ನೂ ಟೀಕಿಸಿರುವ ಅವರು, ಅನಾವಶ್ಯಕ ಹಾಗೂ ಅನುಷ್ಠಾನಕ್ಕೆ ಕಷ್ಟವಾದ ಭರವಸೆಗಳು ಇದರಲ್ಲಿ ಹೆಚ್ಚಿವೆ. ಈಗಾಗಲೇ ಸಾಲಭಾರ ಹೆಚ್ಚಿರುವ ತಮಿಳುನಾಡಿನಲ್ಲಿ ಇಂತಹ ಭರವಸೆಗಳನ್ನು ಜಾರಿಗೊಳಿಸುವುದು ಆಡಳಿತಕ್ಕೆ ಸವಾಲಾಗಬಹುದು ಎಂದು ತಿಳಿಸಿದರು.
ಇದರ ನಡುವೆ, ಕನ್ನಡ ಚಿತ್ರರಂಗದ ಹಲವರು ವಿಜಯ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಟೀಕೆಗಳ ನಡುವೆ ಮೌನದಿಂದ ಕೆಲಸದ ಮೂಲಕ ಉತ್ತರ ನೀಡುವುದು ದೊಡ್ಡ ಗೆಲುವು ಎಂದು ಪ್ರಶಂಸಿಸಿದ್ದಾರೆ.
ನಟ ರಿಷಬ್ ಶೆಟ್ಟಿ ಅವರು ವಿಜಯ್ ಗೆ ಶುಭಾಶಯ ಕೋರಿದ್ದು, ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





