_*ಹೇಮಂತ್ ಚಿನ್ನು*_
ಕಡಲಾಮೆಗಳು ಮೊಟ್ಟೆಯಿಡಲು ಕೋಡಿ ಕಿನಾರೆಯತ್ತ ಈ ವರುಷವೂ ಮರಳಿ ಬರುತ್ತಿವೆ. ಆದರೆ ವರುಷದಿಂದ ವರುಷಕ್ಕೆ ಇವುಗಳ ಅಸ್ತಿತ್ವದ ಉಳಿವಿನ ಹೋರಾಟ ಮಾತ್ರ ಹೆಚ್ಚುತ್ತಲೇ ಇದೆ! ಇದರ ಪರಿ ನೋಡಿದರೆ ಕೆಲವೇ ವರ್ಷಗಳಲ್ಲಿ ಇವುಗಳು ಭೂಮಿಯಿಂದ ಶಾಶ್ವತವಾಗಿ ಕಣ್ಮರೆಯಾದ ಜೀವಿಗಳ ಪಟ್ಟಿಗೆ ಸೇರಿದರೂ ಯಾವುದೇ ಆಶ್ಚರ್ಯವಿಲ್ಲ.
ತಿಂಗಳ ಹಿಂದೆ ಬೆಳಿಗ್ಗೆ ವಾರದ ಸಮುದ್ರ ತೀರ ಸ್ವಚ್ಛತೆ ಮಾಡಿ ಮರಳುವಾಗ ನಾಯಿಗಳೇನೋ ಮರಳು ಅಗೆಯುತ್ತಿರುವುದು ದೂರದಲ್ಲೇ ಗಮನಿಸಿ ತರಾತುರಿಯಾಗಿ ಓಡಿ ನೋಡಿದರೆ, ನಾನು ಊಹಿಸಿದ ಅಪಾಯ ನಿಜವಾಗಿತ್ತು. ನನ್ನ ನೋಡಿ ದೂರ ಹೋದ ನಾಯಿ ತಿಂದು ಬಿಟ್ಟ ಅರ್ಧ ಮೊಟ್ಟೆಯಿಂದ ಇಣುಕುತ್ತಿದ್ದ ಪುಟ್ಟ ಕಾಲು ವರ್ಷದ ಹಿಂದೆ ಇದೇ ತೀರದಲಿ ಪುಟು ಪುಟು ಸಾಗಿದ ಆಮೆ ಮರಿಯ ನೆನೆಸಿ ಕಣ್ಣು-ಹೃದಯ ಎರಡು ಒದ್ದೆಯಾಗಿತ್ತು. ಇದಾದ ಒಂದು ವಾರದ ಮೊದಲು ಬಲೆಗೆ ಸಿಕ್ಕು ಸತ್ತು ದಡದಲ್ಲಿ ಬಿದ್ದ ಕಡಲಾಮೆಯ ಪೋಸ್ಟ್ ಮಾರ್ಟಮ್ ಮಾಡಿದರೆ ಅದರೊಳಗೆ ಇದ್ದ ಮೊಟ್ಟೆಗಳು ತಾಯ್ತನದ ಶೋಕ ಗೀತೆ ಹಾಡಿದ್ದರೆ ಇದು ಎರಡನೇ ದುರಂತ!
ಅಷ್ಟಕ್ಕೂ ಈ ಆಮೆಗಳ ಕುರಿತು ಅಷ್ಟು ತಲೆಕೆಡಿಸಿಕೊಳ್ಳಲು ಏನಿದೆ? ಇಷ್ಟು ಸಣ್ಣ ವಿಚಾರದಿಂದ ನಾವುhc ಕಳೆದುಕೊಳ್ಳುವುದೇನಿದೆ?
ಕಡಲಾಮೆಗಳು ಆರೋಗ್ಯಪೂರ್ಣ ಸಮುದ್ರದ ಜೀವಕೊಂಡಿ. ಜೆಲ್ಲಿ ಫಿಶ್ ಗಳ ಸಂಖ್ಯೆ ವೃದ್ಧಿಯಾಗದಂತೆ ಕಾಯುವುದರೊಂದಿಗೆ ಸಮುದ್ರದ ಜೈವಿಕ ವ್ಯವಸ್ಥೆಯನ್ನು ಸಮತೋಲನದಲ್ಲಿಡುವ ಮೂಲ ಬೇರು. ಒಟ್ಟು 7 ಬಗೆಯ ಸಮುದ್ರ ಆಮೆಗಳಿದ್ದು ನಮ್ಮ ರಾಜ್ಯದ ಮಟ್ಟಿಗೆ ಆಲಿವ್ ರೀಡ್ಲೆ ಹೆಚ್ಚಾಗಿ ಕಂಡುಬರುವ ಕಡಲಾಮೆ.
ಈ ಕಡಲಾಮೆಯ ಸಂತಾನೋತ್ಪತ್ತಿ ಕ್ರಿಯೆ ಅದೊಂದು ಅದ್ಭುತ! ನವೆಂಬರ್ ನಿಂದ ಜನವರಿಯವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ವಯಸ್ಕ ಹೆಣ್ಣಾಮೆ ಸಾಗಿ ಬರುತ್ತವೆ. ಚಂದ್ರನ ಸುತ್ತ ವೃತ್ತಾಕಾರದ ಕೊಡೆಯಂತ ಚಿತ್ತಾರ ಮೂಡಿದ ರಾತ್ರಿ ಆಮೆ ಮೊಟ್ಟೆಯಿಡಲು ಬರುತ್ತೆನ್ನುವುದು ನಮ್ಮ ಹಿರಿಯರ ನಂಬಿಕೆ, ನಾ ಕಂಡ ಹಾಗೆ ಅದು ನಿಜವೂ ಕೂಡ. ಸಮುದ್ರದ ಅಲೆ ಬೀಳುವ ಜಾಗದಿಂದ 50-100 ಅಡಿ ದೂರದ ಪ್ಲಾಸ್ಟಿಕ್ ಕಸ ಇರದ ತೀರ ಆಯ್ದುಕೊಳ್ಳುವ ಆಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತದೆ. ಹೇ ಚಿ. ನಂತರ ತನ್ನ ಕಾಲುಗಳ ಸಹಾಯದಿಂದ ಪಟ ಪಟನೇ ಮರಳು ಅಗೆದು 3 - 4 ಅಡಿ ಹೊಂಡದೊಳಗೆ 100-120 ಮೊಟ್ಟೆಗಳನ್ನು ಇಟ್ಟು ಮರಳನ್ನು ಪುನಹ ಮುಚ್ಚುತ್ತದೆ. ಅಲ್ಲೇನೂ ಕುರುಹು ಶತ್ರುಗಳಿಗೆ ಸಿಗದಂತೆ ತನ್ನ ಹೆಜ್ಜೆ ಗುರುತು ಆಚೀಚೆ ಗೊಂದಲಕಾರಿಯಾಗಿ ಮೂಡಿಸಿ ಕಡಲೊಡಲ ಸೇರುತ್ತದೆ. ಸ್ಥಳೀಯ ಹಿರಿಯ ಅನುಭವಿಗಳಿಗೆ ಹೊರತು ಪಡಿಸಿದರೆ ಮತ್ಯಾರಿಗೂ ಇದನ್ನು ಗುರುತಿಸುವುದು ಸುಲಭವಿಲ್ಲ. ಹೀಗೆ ಮೊಟ್ಟೆಯಿಟ್ಟು ಆಳಸಮುದ್ರದತ್ತ ತೆರಳುವ ತಾಯಿಯ ಕರ್ತವ್ಯ ಇಲ್ಲಿಗೆ ಮುಗಿಯಿತು. ಇನ್ನು ಪ್ರಕೃತಿ ಮತ್ತು ಅದೃಷ್ಟದೊಂದಿಗೆ ಅಳಿವು-ಉಳಿವಿನ ಹೋರಾಟ ಮೊಟ್ಟೆಯೊಳಗಿನ ಈ ಪುಟ್ಟ ಕಂದಮ್ಮಗಳದ್ದು!! ಹೀಗೆ ಮೊಟ್ಟೆಯೊಡೆದು ಹೊರಬಂದು ಉಳಿದ ಮರಿಗಳು ಅಷ್ಟು ವಿಸ್ತಾರದ ಸಮುದ್ರ ಸೇರಿದ ಮೇಲೆ ತನ್ನ ತಾಯಿಯನ್ನು ಹೇಗೆ ಸಂಧಿಸುತ್ತವೆ ಮತ್ತು ಹೇ ಚಿ ಗುರುತಿಸುತ್ತವೆ ಅನ್ನುವುದು ಆಶ್ಚರ್ಯವೇ ಸರಿ!