ಬರ್ಮಾದ ಸಾಮಾನ್ಯ ಗೃಹಿಣಿ ಅಂಗ್ ಸಾನ್ ಸೂ ಕೀ ಮುಂದೆ ಮಹಿಳೆಯರಿಗೆ ಆದರ್ಶಪ್ರಾಯರಾಗಿ ಯಾವ ರೀತಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ದೇಶಕ್ಕಾಗಿ ಎಂತಹ ತ್ಯಾಗ ಮಾಡಿದ್ದಾರೆ ಎಂಬುದನ್ನು ವಿವರವಾಗಿ ಅರಿಯೋಣವೇ…….?

ಅಂಗ್‌ ಸಾನ್‌ ಸೂ ಕೀ ಹುಟ್ಟಿದ್ದು 1945ರ ಜೂನ್‌ 19ರಂದು. ಅವರ ತಂದೆ ಅಂಗ್‌ ಸಾನ್‌ ಬರ್ಮಾ ಸ್ವಾಧೀನ ಸೇನೆಯ ಕಮಾಂಡರ್‌ ಆಗಿದ್ದರು. ಅವರ ತಾಯಿ ರಿನ್‌ ರಂಗೂನ್‌ ಜನರಲ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದರು.

ಬರ್ಮಾಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಅವರ ತಂದೆ ಮುಂಚೂಣಿಯ ನಾಯಕರಾಗಿದ್ದರಿಂದ ಅಲ್ಲಿನ ಜನರು ಅವರನ್ನು ರಾಷ್ಟ್ರಪಿತ ಎಂದೇ ಭಾವಿಸಿದ್ದಾರೆ. 1947ರಲ್ಲಿ ಸೂ ಕೀ ಕೇವಲ 2 ವರ್ಷದವರಿದ್ದಾಗ ಅವರ ತಂದೆಯನ್ನು ರಾಜಕೀಯ ಷಡ್ಯಂತ್ರದಿಂದಾಗಿ ಕೊಲ್ಲಲಾಯಿತು. 1960ರಲ್ಲಿ ಅಂಗ್‌ ಸಾನ್‌ ಸೂ ಕೀ ದೆಹಲಿಗೆ ಬಂದು ಅಲ್ಲಿನ ಲೇಡಿ ಶ್ರೀರಾಮ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಆ ಬಳಿಕ ಆಕ್ಸ್ ಫರ್ಡ್ ವಿ.ವಿ.ಯಿಂದ ತತ್ವಶಾಶ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. 1972ರಲ್ಲಿ ಮೈಕೆಲ್ ಎರಿಸ್‌ ಜೊತೆಗೆ ವಿವಾಹವಾಯಿತು.

ಹೋರಾಟ ಆರಂಭ

ಮನೆಗೆಲಸದಿಂದ ಬಿಡುವು ಸಿಕ್ಕಾಗ ಅವರು ಲೇಖನ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹಿಮಾಲಯ ಕುರಿತಂತೆ ಪತಿ ನಡೆಸುತ್ತಿದ್ದ ಸಂಶೋಧನಾ ಕೆಲಸಕ್ಕೂ ಅವರು ನೆರವು ನೀಡುತ್ತಿದ್ದರು. 1988ರಲ್ಲಿ ಅವರ ತಾಯಿ ತುಂಬಾ ಅನಾರೋಗ್ಯ ಪೀಡಿತರಾದರು. ಅದು ಅವರ ಜೀವನದ ನಿರ್ಣಾಯಕ ಹಂತವಾಗಿತ್ತು. ತಮ್ಮ ಪತಿ ಹಾಗೂ ಮಕ್ಕಳನ್ನು ಬಿಟ್ಟು ಅವರು ಎಂಥದೊಂದು ದಾರಿಯಲ್ಲಿ ಸಾಗಿದರೆಂದರೆ, ಆ ದಾರಿ ಕಲ್ಲುಮುಳ್ಳಿನಿಂದ ಕೂಡಿದ್ದಾಗಿತ್ತು. ಅವರು ಸರ್ವಾಧಿಕಾರತ್ವದ ವಿರುದ್ಧ ಆಂದೋಳನಕ್ಕಿಳಿದರು. ಸೈನ್ಯಾಡಳಿತ ಅವರನ್ನು ಹತ್ತಿಕ್ಕಲು ಪ್ರಯತ್ನಿಸಿತು. ಅವರಿಗೆ ಬಗೆಬಗೆಯ ರೀತಿಯಲ್ಲಿ ಹೆದರಿಸಲು ನೋಡಿತು. ಆದರೆ ಯಾವ ಹೆದರಿಕೆಗೂ ಬಗ್ಗದೆ ಅಂಗ್‌ ಸಾನ್‌ ಸೂ ಕೀ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತ ಹೋರಾಟಕ್ಕೆ ಇಳಿದರು. ಆದರೆ ಸೈನ್ಯಾಡಳಿತ ಯಾವ ಕಾರಣವನ್ನೂ ಕೊಡದೆ ಆಕೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯೊಡ್ಡಿತು. ಒಂದು ಸಲ ಸಾರ್ವಜನಿಕ ರಾಲಿಯೊಂದರಲ್ಲಿ ಸೈನಿಕನೊಬ್ಬ ಅವರತ್ತ ರೈಫಲ್ ತೋರಿಸಿದಾಗ, ಅಂಗ್‌ ಸಾನ್‌ ಸೂ ಕೀ ಹೆದರದೆ ನಿಂತು, “ಏನು ಅಪರಾಧ ಮಾಡಬೇಕೆನ್ನುತ್ತಿಯೋ ಮಾಡು. ಆದರೆ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ,” ಎಂದರಂತೆ.

ಈ ಘಟನೆಯ 3 ತಿಂಗಳ ಬಳಿಕ ಅಂಗ್‌ ಸಾನ್‌ ಸೂ ಕೀ ತಮ್ಮ ಮನೆಯಲ್ಲಿ ವಿದ್ಯಾರ್ಥಿಗಳ ಸಮೂಹವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆಗ ಸೈನಿಕರು ಮನೆಯೊಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗೆ ತಳ್ಳಿದರು. ಸೂಕೀ ಅವರನ್ನು ಅವರದೇ ಮನೆಯಲ್ಲಿ ಗೃಹಬಂಧನದಲ್ಲಿ ಇರಿಸಿದರು. ಸೈನ್ಯಾಡಳಿತದ ಈ ಕ್ರಮವನ್ನು ವಿರೋಧಿಸಿ ಆಕೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರ ಇಬ್ಬರು ಪುತ್ರರು ಕೂಡ ಅವರ ಜೊತೆ ಇರಲು ಬಂದರು. ಮೂರನೇ ದಿನ ಅವರ ಪತಿ ಉಪವಾಸ ಸತ್ಯಾಗ್ರಹಕ್ಕೆ ಕೈ ಜೋಡಿಸಿದರು. ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಸೈನ್ಯಾಡಳಿತ ವಿದ್ಯಾರ್ಥಿಗಳನ್ನು ಮುಕ್ತಗೊಳಿಸಿತು.

ಚುನಾವಣೆ ಹತ್ತಿರದಲ್ಲಿಯೇ ಇತ್ತು. ಸೂಕೀ ಗೃಹಬಂಧನದಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿ ವಿರೋಧಪಕ್ಷ ನೆಲಕಚ್ಚಬಹುದೆಂದು ಸೈನ್ಯಾಡಳಿತ ಭಾವಿಸಿತ್ತು. ಆದರೆ ಅವರ ಅನುಪಸ್ಥಿತಿಯ ನಡುವೆಯೂ ಅವರದೇ ಪಕ್ಷದ ಅಭ್ಯರ್ಥಿಗಳು ಶೇ.82ರಷ್ಟು ಕಡೆ ಗೆಲುವು ಸಾಧಿಸಿದರು. ಆದಾಗ್ಯೂ ಅವರಿಗೆ ಸರ್ಕಾರ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಸೈನ್ಯಾಡಳಿತ ಹೇಳಿತು. ಸೈನ್ಯಾಡಳಿತದ ನಿರ್ಧಾರದ ಬಗ್ಗೆ ಬೇರೆ ಬೇರೆ ದೇಶಗಳು ಅಪಸ್ಪರ ಎತ್ತಿದವು.

ಅಂಗ್‌ ಸಾನ್‌ ಸೂ ಕೀ ಅವರ ಹೋರಾಟದ  ದಾರಿಯನ್ನು ಅವಲೋಕನ ಮಾಡಿ ಅಕ್ಟೋಬರ್‌ 1990ರಲ್ಲಿ ಅವರಿಗೆ ರಾಪ್ತೆ ಹ್ಯೂಮನ್‌ ರೈಟ್ಸ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಮರುವರ್ಷ ಯುರೋಪಿಯನ್‌ ಪಾರ್ಲಿಮೆಂಟ್‌ ಸಖರೋಲ್ ಹ್ಯೂಮನ್‌ರೈಟ್‌ ಪುರಸ್ಕಾರ ನೀಡಿ ಸನ್ಮಾನಿಸಿತು. ಜುಲೈ 10, 1991ರಂದು ನೊಬೆಲ್‌ ಸಮಿತಿ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಿ ಗೌರವಿಸಿತು!

ಬಳಿಕ ಮ್ಯಾನ್ಮಾರ್‌ನ ಸೈನ್ಯಾಡಳಿತ ಅಂಗ್‌ ಸಾನ್‌ ಸೂ ಕೀ ಎದುರು ಒಂದು ಷರತ್ತು ಇಟ್ಟಿತ್ತು. ಒಂದು ವೇಳೆ ರಾಜಕೀಯ ಮತ್ತು ಬರ್ಮಾವನ್ನು  ತೊರೆಯಲು ಒಪ್ಪಿದರೆ ಖಂಡಿತವಾಗಿಯೂ ಸ್ವಾತಂತ್ರ್ಯ ಕೊಡುವುದಾಗಿ ಹೇಳಿದರು. ಆದರೆ ದೇಶದ ನಾಗರಿಕರ ನಂಬಿಕೆ ಭರವಸೆಯನ್ನು ಹತ್ತಿಕ್ಕಿ ಇನ್ನೊಂದು ದೇಶಕ್ಕೆ ಹೋಗಿ ಐಷಾರಾಮಿ ಜೀವನ  ನಡೆಸುವುದು ಅವರಿಗೆ ಇಷ್ಟವಿರಲಿಲ್ಲ. ಅಂಗ್‌ ಸಾನ್‌ ಸೂ ಕೀ ಅವರು ನೊಬೆಲ್‌  ಮೂಲಕ ಬಂದ ಪ್ರಶಸ್ತಿ ಮೊತ್ತವನ್ನು ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ರಚನೆಗೊಂಡ ಒಂದು ಟ್ರಸ್ಟಿಗೆ ದೇಣಿಗೆಯಾಗಿ ನೀಡಿದರು.

ಧೈರ್ಯಗುಂದದ ಸೂ ಕೀ ಮಕ್ಕಳಿಬ್ಬರು ಚಿಕ್ಕವರಿದ್ದರು ಹಾಗೂ ತಾಯಿಗೆ ಲಕ್ವಾ ಹೊಡೆದಿತ್ತು. ಆಗ ಮಕ್ಕಳು ಅಮ್ಮನ ಬಳಿ ಹೋಗಿ ಸಾಕಷ್ಟು ಸೇವೆ ಮಾಡಿದರು. ಆ ಬಳಿಕ ಅವರು ಬರ್ಮಾಕ್ಕೆ ವಾಪಸ್ಸಾದಾಗ ಕ್ರೂರ ಶಾಸನದ ವಿರುದ್ಧ ಜನರ ಆಕ್ರೋಶದ ಕಟ್ಟೆಯೊಡೆದಿತ್ತು. ಈ ಮಧ್ಯೆ ಅಂಗ್‌ ಸಾನ್‌ ಸೂ ಕೀ  ಮಧ್ಯಂತರ ಚುನಾವಣೆಗೆ ಪಟ್ಟುಹಿಡಿದರು. ತಮ್ಮದೇ ಗೆಲುವು ಎಂದು ನಂಬಿದ ಸೈನ್ಯಾಡಳಿತ ಚುನಾವಣೆಗೆ ಒಪ್ಪಿಗೆ ನೀಡಿತು. ಆಗಲೇ ಸರ್ಕಾರದ ಪತನದ ಕ್ಷಣಗಣನೆ ಆರಂಭವಾಗಿತ್ತು.

ಸರ್ಕಾರ 6ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವುದನ್ನು ನಿರ್ಬಂಧಿಸಿತು. ಯಾವುದೇ ಕಾರಣ ಕೊಡದೆ ತಂದ ಈ ಕಾನೂನಿನ ಪ್ರಕಾರ ಯಾರನ್ನು ಯಾವಾಗ ಬೇಕಾದರೂ ಜೈಲಿಗೆ ಅಟ್ಟಬಹುದಾಗಿತ್ತು. ಆ ಸಮಯದಲ್ಲಿಯೇ ಅಂಗ್‌ ಸಾನ್‌ ಸೂ ಕೀ `ನ್ಯಾಷನಲ್ ಲೀಗ್‌ ಫಾರ್‌ ಡೆಮಾಕ್ರಸಿ’ ಎಂಬ ಪಕ್ಷವೊಂದನ್ನು ಹುಟ್ಟು ಹಾಕಿದರು. ಅವರೇ ಸ್ವಂತ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು.  ತಾನು ಅಹಿಂಸೆಯ ಪೂಜಾರಿ. ಹಿಂಸೆಯ ವಿರುದ್ಧ ತನ್ನ ಹೋರಾಟ ಮುಂದುವರಿಯಲಿದೆ ಎಂದು ಅವರು ಘೋಷಿಸಿದರು. ಚುನಾಣೆಯಲ್ಲಿ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆ ಅವಧಿಯಲ್ಲಿ ಅವರ `ಫ್ರೀಡಂ ಫ್ರಮ್ ಫಿಯರ್‌’ ಎಂಬ ಪುಸ್ತಕ ಕೂಡ ಅವರ ಹೋರಾಟವನ್ನು ಜಗತ್ತಿಗೆ ತೋರಿಸಿಕೊಟ್ಟಿತು.

ಅಂಗ್‌ ಸಾನ್‌ ಸೂ ಕೀ ಅವರನ್ನು ಹಲವು ಬಾರಿ ಗೃಹಬಂಧನದಲ್ಲಿ ಇರಿಸಲಾಗಿತ್ತು ಮತ್ತು ಮುಕ್ತಗೊಳಿಸಲಾಗಿತ್ತು. ದೇಶದ ಎಲ್ಲ ಭಾಗಗಳಿಗೂ ಅವರು ಸುಲಭವಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ.  ಒಂದು ಸಲ ಅವರ ಸಭೆಯೊಂದರಲ್ಲಿ ಹಿಂಸೆ ಉಲ್ಬಣಗೊಳ್ಳುವಂತೆ ಮಾಡಿ, ಹಿಂಸೆ ಉಲ್ಬಣಗೊಳ್ಳಲು ಅಂಗ್‌ ಸಾನ್‌ ಸೂ ಕೀ ಅವರೇ ಹೊಣೆ ಎಂದು ಆಪಾದನೆ ಹೊರಿಸಿ ಸರ್ಕಾರ ಆಕೆಯನ್ನು ಜೈಲಿಗೆ ತಳ್ಳಿತು.  ಗಂಡ ಹಾಗೂ ಮಕ್ಕಳಿಗೂ ಅವರ ಭೇಟಿಯನ್ನು ನಿಷೇಧಿಸಿತು. ಪತಿ ಕ್ಯಾನ್ಸರ್‌ ಪೀಡಿತರಾಗಿದ್ದರು. 1999ರಲ್ಲಿ ಅವರು ನಿಧನರಾದ ಸಮಯದಲ್ಲೂ ಈಕೆಯನ್ನು ಹೊರಗೆ ಬಿಡಲಿಲ್ಲ.

2012ರ ಚುನಾಣೆಯಲ್ಲಿ 45 ಸ್ಥಾನಗಳಲ್ಲಿ 43ನ್ನು ಗೆದ್ದು ಜನರಿಗೆ ತಮ್ಮ ಮೇಲೆ ಅದೆಷ್ಟು ನಂಬಿಕೆಯಿದೆ ಎನ್ನುವುದನ್ನು ಸಾಬೀತು ಪಡಿಸಿದರು. 24 ವರ್ಷಗಳ ಬಳಿಕ ಅವರು ವಿದೇಶಕ್ಕೆ ಹೋದರು. ಅಮೆರಿಕ ಸರ್ಕಾರ ಅವರಿಗೆ ಸಂಸತ್ತಿನಲ್ಲಿ ಸ್ವರ್ಣಪದಕ ನೀಡಿ ಗೌರವಿಸಿತು. ಅದು ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ದೀರ್ಘ ಸಂಘರ್ಷದ ಬಳಿಕ ತಮ್ಮ ದೇಶದ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಕೊಡಿಸಿ, ಸತ್ಯಕ್ಕೆ ಯಾವಾಗಲೂ ಗೆಲುವು ಇರುತ್ತದೆ ಎಂಬುದನ್ನು ಸೂ ಕೀ ಸಾಬೀತುಪಡಿಸಿದರು.

– ಶೋಭಾ  ವಿಜಯ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ