ಕರ್ನಾಟಕದ ಪಶ್ಚಿಮಘಟ್ಟಗಳು ಜಾಗತಿಕ ಮಟ್ಟದಲ್ಲಿ ಅಮೂಲ್ಯ ಅಪರೂಪದ ವನ್ಯಜೀವಿಗಳ ತಾಣಗಳಾಗಿವೆ. ಅದರಲ್ಲಿ ಸ್ಕೈಸ್ ಪಾಯಿಂಟ್ ಕೂಡ ಒಂದು. ಇದರ ಕುರಿತಾಗಿ ನಾವು ಹೆಚ್ಚಿನ ವಿವರಗಳನ್ನು ತಿಳಿಯೋಣವೇ………..?
ವನಪಾಲಕರ ಅರಣ್ಯ ಇಲಾಖೆಯ ರಕ್ಷಣಾ ಗೇಟ್ ಅಣಶಿ, ದಾಂಡೇಲಿ, ಕುಂಬಾರವಾಡಾ, ಪನಸೋಲಿ ಹೀಗೆ ಎಲ್ಲ ಮಾರ್ಗಗಳಲ್ಲಿಯೂ ತಪಾಸಣಾ ಚೌಕಿಗಳಿಂದ ನಿರ್ಬಂಧಿತ ಪ್ರದೇಶವಾಗಿ ಈ ಸ್ಥಳಗಳು ರಕ್ಷಣೆಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿವೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಕಾಳಿ ಜಲ ವಿದ್ಯುತ್ ಯೋಜನೆಯ ಅಂಬಿಕಾನಗರದಿಂದ 6.5 ಕಿ.ಮೀ. ಅಂತರದಲ್ಲಿ ಸ್ಕೈಸ್ ಪಾಯಿಂಟ್ ಇದೆ. ಒಂದೆಡೆ 6 ಕಿ.ಮೀ. ಅಂತರದಲ್ಲಿ ನಾಗಝರಿ ವಿದ್ಯುದಾಗರ, ಮತ್ತೊಂದೆಡೆ 8.5 ಕಿ.ಮೀ. ಅಂತರದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟು. ಹೀಗೆ ಅಂಬಿಕಾನಗರದ ತಿರುವಿನ ರಸ್ತೆಯ ಮೂಲಕ ಚಲಿಸಬಹುದಾದ ಸ್ಥಳಗಳಿವೆ. ಇಲ್ಲಿ ಸೂರ್ಯಾಸ್ತಮಾನ ಮತ್ತು ಸೂರ್ಯೋದಯ ನೋಡುವುದೇ ಒಂದು ವಿಸ್ಮಯ. ಸ್ಕೈಸ್ ಎಂಬ ಬ್ರಿಟಿಷ್ ಎಂಜಿನಿಯರ್ ಶೋಧಿಸಿದ ಈ ಸ್ಥಳ ಅವನ ಹೆಸರಿನಿಂದಲೇ ಕರೆಯಲ್ಪಟ್ಟಿದೆ. ಒಮ್ಮೆಯಾದರೂ ನಾಗಝರಿ ವಿದ್ಯುದಾಗರ ಮತ್ತು ಸ್ಕೈಸ್ ಪಾಯಿಂಟ್ ನೋಡೋಣ ಎಂಬುದು ಸ್ನೇಹಿತ ಮಂಜುನಾಥನ ಆಸೆಯಾದ ಕಾರಣ ಪ್ರತಿವರ್ಷ ವಿಜಯದಶಮಿ ದಿನ ಮಾತ್ರ ನಾಗಝರಿಗೆ ರಜೆಯ ನಿಮಿತ್ತ ಅಲ್ಲಿನ ಸಿಬ್ಬಂದಿಗಳು ಹಾಗೂ ಅವರೊಡನೆ ಕೆಲವು ಜನರಿಗೆ ಮಾತ್ರ ಅನುಮತಿ ಎನ್ನುವ ಕಾರಣ ನಾವು ಅಲ್ಲಿಗೆ ಹೋದೆವು. ನಿಜಕ್ಕೂ ಇದು ಅದ್ಭುತ ತಾಣ ಅಷ್ಟೇ ಅಲ್ಲ, ನಿರ್ಬಂಧಿತ ಪ್ರದೇಶ ಹೌದು. ಒಂದೆಡೆ ವನ್ಯ ಮೃಗಗಳ ದಟ್ಟವಾದ ಕಾಡು. ಇಲ್ಲಿನ ಅಪರಿಮಿತ ಪ್ರಕೃತಿ ಸೌಂದರ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನುವಂತೆ ಬೆಳೆದು ನಿಂತ ಹಸಿರುಟ್ಟ ಅರಣ್ಯ ರಾಶಿ. ಇಕ್ಕಟ್ಟಾದ ರಸ್ತೆ ಫೋಟೋ ತೆಗೆಯಲು ಕೂಡ ಅನುಮತಿ ನಿರಾಕರಿಸಿರುವ ಸೂಚನಾ ಫಲಕಗಳು, ಅನುಮತಿ ಪಡೆದು ನಿಜಕ್ಕೂ ಇಂತಹ ತಾಣ ನೋಡುವುದೇ ಒಂದು ಭಾಗ್ಯ.
ಸ್ಕೈಸ್ ಪಾಯಿಂಟ್ ಸುತ್ತಲೂ ನೋಡಿದರೆ ಎತ್ತ ನೋಡಿದರೂ ಬೆಟ್ಟಗಳ ಸಾಲು ಸಾಲು. ಅದರಲ್ಲಿನ ಗಿಡಮರಗಳು, ಮೋಡ, ಆ ಗಿಡಗಳಿಗೆ ತಾಗಿದಂತೆ ಕಾಣುವ ನಯನಮನೋಹರ ದೃಶ್ಯಕಾವ್ಯ! ಕೆಳಗೆ ಭೋರ್ಗರೆವ ಕಾಳಿ ನದಿ ಹಾಗೂ ನಾಗಝರಿ ವಿದ್ಯುದಾಗರ. ಇಳಿಜಾರಿನ ರಸ್ತೆಯಲ್ಲಿ ನಡೆಯುತ್ತ ಸುತ್ತಲೂ ಕಣ್ಣು ಹಾಯಿಸತೊಡಗಿದರೆ ಸಾಕು ಅಬ್ಬಾ ಎಂತಹ ಆಶ್ಚರ್ಯ ಎನ್ನುವಂತೆ ಮೋಡಗಳು ಬೆಟ್ಟಕ್ಕೆ ಮುತ್ತಿಕ್ಕುವ ದೃಶ್ಯ ಕಣ್ಣು ಕೋರೈಸತೊಡಗುತ್ತದೆ. ಅಲ್ಲಲ್ಲಿ ನಿರ್ಮಿಸಿರುವ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಪಾಯಿಂಟ್‌ಗಳು ಅವುಗಳಲ್ಲಿ ನಿಂತು ನೋಡತೊಡಗಿದರೆ, ತಗ್ಗು ಪ್ರದೇಶದಲ್ಲಿ ಕಾಣುವ ಕಾಳಿ ಮತ್ತು ನಾಗಝರಿ ನದಿಯ ವಿಹಂಗಮ ನೋಟ ರಮ್ಯವಾಗಿದೆ.
ಒಂದೆಡೆ ಬೊಮ್ಮನಹಳ್ಳಿ ಅಣೆಕಟ್ಟು, ಮತ್ತೊಂದೆಡೆ ತಟ್ಟೇಹಳ್ಳಿ ಅಣೆಕಟ್ಟು, ಸೂಪಾ ಅಣೆಕಟ್ಟಿನ ನದಿ ಪಾತ್ರದಿಂದ 35 ಕಿ.ಮೀ. ಅಂತರದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟು ಇದೆ. ಬೊಮ್ಮನಹಳ್ಳಿಯಿಂದ ಮುಂದೆ ಕಾಳಿ ನದಿಯನ್ನು ಅದರ ಉಪನದಿಗಳಾದ ತಟ್ಟೇಹಳ್ಳಿ ಮತ್ತು ನಾಗಝರಿಗಳು ಸೇರಿಕೊಳ್ಳುತ್ತವೆ. ಕಾಳಿ ನದಿ ಪಾತ್ರದ ಭೌಗೋಳಿಕ ರಚನೆ ಹೇಗಿದೆಯೆಂದರೆ ಬೊಮ್ಮನಹಳ್ಳಿಯ ಬಳಿಕ ಕೇವಲ 15 ಕಿ.ಮೀ. ಕ್ರಮಿಸುವಷ್ಟರಲ್ಲಿ ಕಾಳಿ 960 ಅಡಿಗಳಷ್ಟು ಆಳಕ್ಕೆ ಹರಿಯುತ್ತಾಳೆ. ಈ ಪ್ರಾಕೃತಿಕ ಇಳಿಜಾರಿನ ಪ್ರದೇಶದಲ್ಲಿ ನಾಗಝರಿ ವಿದ್ಯುದಾಗರ ನಿರ್ಮಾಣಗೊಂಡಿದೆ. ಇಲ್ಲಿನ ಸುತ್ತಲಿನ ಬೆಟ್ಟಗುಡ್ಡ ಕಣಿವೆಗಳು ಸ್ಕೈಸ್ ಪಾಯಿಂಟ್ ಮೂಲಕ ಕಣ್ಮನ ಸೆಳೆಯುತ್ತವೆ. ಬ್ರಿಟಿಷ್ ಎಂಜಿನಿಯರ್ ಸ್ಕೈಸ್ ನಾಗಝರಿ ವಿದ್ಯುದಾಗರ ಪ್ರದೇಶ ನೋಡುತ್ತ ಈ ಬೆಟ್ಟದ ಮೇಲೆ ಬಂದು ವಿರಮಿಸಿಕೊಳ್ಳುತ್ತಾ ಇದೊಂದು ಅದ್ಭುತ ರಮ್ಯತಾಣ ಎಂದು ಉದ್ಗರಿಸಿದ್ದ.