ಅತಿ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಹೆಣ್ಣುಮಗಳು, ಇಂದು ನಮ್ಮ ಇಡೀ ದೇಶವೇ ಕೊಂಡಾಡುವಂತೆ ಹಿರಿಯ ಕ್ಯಾನ್ಯರ್ ತಜ್ಞೆಯಾಗಿ ಬೆಳೆದು ಬಂದದ್ದು ಹೇಗೆ.......?
ಸಂಸ್ಕೃತದ ಶ್ಲೋಕವೊಂದರಲ್ಲಿ ವೈದ್ಯೋ ನಾರಾಯಣೋ ಹರಿಃ ಎನ್ನುವ ಸಾಲು ಬರುತ್ತದೆ. ಅದಕ್ಕೆ ಹಲವರು ರೋಗದಿಂದ ಬಳಲುತ್ತಿದ್ದವರನ್ನು ವೈದ್ಯರುಗಳು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿ ರಕ್ಷಿಸುವ ಕಾರಣ ಅವರನ್ನು ಸಾಕ್ಷಾತ್ ನಾರಾಯಣನ ಅಪರಾವತಾರ ಎಂದು ಅರ್ಥೈಸುತ್ತಾರೆ. ಆದರೆ ವಾಸ್ತವವಾಗಿ ಇಂದಿನ ಕಾಲದಲ್ಲಿ ಅಂತಹ ವೈದ್ಯರು ಸಿಗುವುದು ಬಹಳ ಕಷ್ಟ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ಅದರಲ್ಲೂ ಸರ್ಕಾರೀ ವೈದ್ಯರೆಂದರೆ, ಅವರ ಮೇಲೆ ಜನರ ನಂಬಿಕೆಗಳು ಅಷ್ಟಕ್ಕಷ್ಟೇ. ಆದರೆ ಅಪರೂಪಕ್ಕೆ ಜನ ಸೇವೆಯೇ ಜನಾರ್ಧನನ ಸೇಲೆ ಎಂದು ರೋಗಿಗಳ ಸೇವೆಗಾಗಿಯೇ ತಮ್ಮನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟು, ಸರ್ಕಾರಿ ಸೇವೆಯಿಂದ ನಿವೃತ್ತರಾದರೂ, ಸಮಾಜ ಸೇವೆಯಲ್ಲೇ ನಿರತರಾಗಿರುವ ಅಪರೂಪ ಮತ್ತು ಅನುರೂಪದ ವೈದ್ಯೋಕದ ದೈತ್ಯ ಮತ್ತು ಮಾನವೀಯ ಪ್ರತಿಮೆಯಾಗಿರುವ ಹಿರಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆಯವರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕಷ್ಟ ಕಾರ್ಪಣ್ಯದ ಬಾಲ್ಯ
ವಿಜಯಲಕ್ಷ್ಮಿ ಮೂಲತಃ ಗುಲ್ಬರ್ಗಾದ ಕೊಳೆಗೇರಿಯಲ್ಲಿ ಹಳೆಯ ಚಪ್ಪಲಿಯನ್ನು ಹೊಲಿಯುವ ಕಾರ್ಯವನ್ನು ಮಾಡುತ್ತಿದ್ದ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದ ಬಾಬುರಾವ್ ದೇಶಮಾನೆ ಮತ್ತು ರತ್ನಮ್ಮನವರ ಮಗಳು. ಯಜಮಾನರ ಆದಾಯದಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿರಲಿಲ್ಲವಾದ ಕಾರಣ ರಸ್ತೆ ಬದಿಯಲ್ಲಿ ಬಿಸಿಲು ಮಳೆ ಎಂಬುದನ್ನು ಲೆಕ್ಕಿಸದೇ ರತ್ನಮ್ಮ ತರಕಾರಿಯನ್ನು ಮಾರುತ್ತಿದ್ದರು. ಇವರ ಎಂಟು ಮಕ್ಕಳಲ್ಲಿ ಈಕೆ ಹಿರಿಯ ಮಗಳಾಗಿ ಜನಿಸಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ, ಔಪಚಾರಿಕವಾಗಿ ಯಾವುದೇ ಶಿಕ್ಷಣವನ್ನು ಪಡೆಯದಿದ್ದರೂ ಬಾಬೂರಾವ್ ತಮ್ಮ ಜಾತಿ ಮತ್ತು ವೃತ್ತಿಪರತೆಯ ತಡೆಗೋಡೆಗಳನ್ನು ಮುರಿದು ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬದುಕಬೇಕೆಂಬ ಆಸೆಯಿಂದಾಗಿ ಮಕ್ಕಳೆಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಬೇಕು ಎನ್ನುವುದು ಹೆತ್ತವರ ಆಸೆಯಾಗಿತ್ತು.
ಹೆತ್ತವರ ಹಿರಿಯಾಸೆ
ಅದರಲ್ಲೂ ತಮ್ಮ ಹಿರಿಯ ಮಗಳನ್ನು ಸರ್ಜನ್ ಮಾಡಿಸಬೇಕೆಂಬ ಆಸೆ. ಹಾಗಾಗಿ ಅಂದಿನ ಕಾಲದಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಬೂರಾವ್ ತಮ್ಮ ಏಳು ಹೆಣ್ಣುಮಕ್ಕಳು ಮತ್ತು ಒಬ್ಬನೇ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿ ಓದಲು ಅನುವು ಮಾಡಿಕೊಟ್ಟರು.
ವಿಜಯಲಕ್ಷ್ಮಿ ತಮ್ಮ ಶಾಲೆ ಮುಗಿಸಿದ ಕೂಡಲೇ ನೇರವಾಗಿ ತಮ್ಮ ತಾಯಿಯವರ ಅಂಗಡಿಗೆ ಹೋಗಿ ಅಲ್ಲಿ ಅಮ್ಮನ ಜೊತೆ ತರಕಾರಿ ಮಾರಲು ಸಹಾಯ ಮಾಡುತ್ತಿದ್ದುದಲ್ಲದೇ, ಅಲ್ಲೇ ಬಿಡುವು ಮಾಡಿಕೊಂಡು ಅಂಗಡಿಯಲ್ಲೇ ಓದುತ್ತಿದ್ದರು. ಅವರಮ್ಮ ತುಂಬಾ ಧೈರ್ಯವಂತೆ ಮತ್ತು ಗಟ್ಟಿಗಿತ್ತಿಯೂ ಕೂಡ ಆಗಿದ್ದ ಕಾರಣ, ಆಕೆ ದುಡಿದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮೀಸಲಿಟ್ಟಿದ್ದರು.
ಮಕ್ಕಳೂ ಸಹ ತಮ್ಮ ತಾಯಿ ತಂದೆಯರ ಆಸೆಗೆ ತಣ್ಣೀರು ಎರಚದೇ ತಮಗೆ ಸಿಗುತ್ತಿದ್ದ ಸಕಲ ಸರ್ಕಾರಿ ಅನುಕೂಲಗಳನ್ನು ಸೂಕ್ತವಾಗಿ ಬಳಸಿಕೊಂಡು ಕಷ್ಟಪಟ್ಟು ಓದತೊಡಗಿದರು. ಅದರಲ್ಲೂ ವಿಜಯಲಕ್ಷ್ಮಿ ಎಂಬಿಬಿಎಸ್ ಗೆ ಪ್ರವೇಶ ಪಡೆಯುವ ವೇಳೆಯಲ್ಲಿ ಗುಲ್ಬರ್ಗಾದಲ್ಲಿ ತೀವ್ರವಾದ ಬರಗಾಲವಿದ್ದ ಕಾರಣ, ಆಕೆಯ ಕಾಲೇಜು ಪ್ರವೇಶಕ್ಕೆ ಹಣ ಹೊಂಚಲು ಆಗದೇ ಹೋದ ಸಂದರ್ಭದಲ್ಲಿ ಆಕೆಯ ತಾಯಿ, ತಮ್ಮ ತಾಯಿಯ ಮಂಗಳಸೂತ್ರವನ್ನೇ ಮಾರಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದರು.