ಶಾಲೆಗೆ ಹೋಗೋದ್ರಿಂದ ಸ್ನೇಹಿತರು ಸಿಗುತ್ತಾರೆ. ಅವರ ಜೊತೆ ಆಟವಾಡಿಕೊಂಡು ಕಾಲ ಕಳೆಯಬಹುದು ಎಂದುಕೊಂಡು ಶಾಲೆಗೆ ಸೇರಿದ ಕೆಲವೇ ಮಕ್ಕಳಲ್ಲಿ ಇವರೂ ಒಬ್ಬರು. ಓದಿನಲ್ಲಿ ಆಸಕ್ತಿ ಇರಲಿಲ್ಲ. ಮನೆಯವರ ಬಲವಂತಕ್ಕೆ ಶಾಲೆಗೆ ಹೋಗೋ ಆಟ. ಅಲ್ಲೊಂದು ಪಾಠ. ಓದದೇ, ಹೋಂವರ್ಕ್‌ ಮಾಡದೇ ಟೀಚರ್ಸ್ ಹತ್ತಿರ ಬೈಸಿಕೊಳ್ಳುತ್ತಿದ್ದ ದಿನಗಳನ್ನು ಈಗ ನೆನೆದು ನಗುತ್ತಾರೆ. ಸ್ನೇಹಿತರೆಲ್ಲ ಒಟ್ಟಾಗಿ ಸೇರಿ ಇವರು ಕುಳಿತುಕೊಳ್ಳುತ್ತಿದ್ದ ಗಾಲಿ ಕುರ್ಚಿಯನ್ನು ತಳ್ಳುತ್ತ…. ಅಕ್ಕಪಕ್ಕದವರ ತೋಟಕ್ಕೆ ನುಗ್ಗಿ ಸೀಬೆ, ಮಾವು ಕೀಳುತ್ತಾ, ಸಿನಿಮಾ ನೋಡುತ್ತಾ, ಊರೂರು ತಿರುಗಾಡುತ್ತಾ ಇದ್ದದ್ದು ಇದೇ ಜೀವನವಾಗಿತ್ತು.

ಮನೆಯಲ್ಲೂ ಬಹಳ ಮುದ್ದಿನಿಂದ ಸಾಕಿದ್ದರು. ವಿದ್ಯೆಯಲ್ಲಿ ಆಸಕ್ತಿಯೂ ಇರಲಿಲ್ಲ. ತಲೆಗೆ ಹತ್ತಲೂ ಇಲ್ಲ. ಆದರೂ 10ನೇ ತರಗತಿಯಲ್ಲಿ ಹಿರಿಯರ ಬುದ್ಧಿವಾದಗಳಿಂದ ಶ್ರಮಪಟ್ಟು ಓದಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದು ಮಾತ್ರ ಸಾಧನೆಯೇ ಹೌದು. ಒಟ್ಟಿನಲ್ಲಿ ಬಾಲ್ಯವನ್ನು ತರಲೆ, ಚೇಷ್ಟೆ ಹಾಗೂ ಸ್ನೇಹಿತರೊಂದಿಗೆ ಕಳೆದ ನೆನಪುಗಳು ಈಗಿನವರೆಗೆ ಹಚ್ಚಹಸಿರು! ಹೌದು ಇವರೇ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ 70ರ ಹರೆಯದ ವಿಜಯಕುಮಾರಿ ಮುರಾರಪ್ಪ.

ಸವಾಲಾದ ಜೀವನಶೈಲಿ

70 ವರ್ಷಗಳಿಂದಲೂ ವೀಲ್‌ಚೇರ್‌ ಮೇಲೇ ಕಳೆದಿರುವ ಇವರ ಜೀವನಕ್ಕೊಂದು ಸವಾಲ್! 1949, ಸೆಪ್ಟೆಂಬರ್‌ರಂದು ಅನಂತಮತಿ ಹಾಗೂ ಮುರಾರಪ್ಪ ದಂಪತಿಗಳ 6 ಮಕ್ಕಳಲ್ಲಿ ಇವರೂ ಒಬ್ಬರಾಗಿ ಜನಿಸಿದರು. ಮನೆಯಲ್ಲಿ ಪ್ರೀತಿಯ ವಾತಾವರಣ, ಯಾವುದಕ್ಕೂ ಕೊರತೆಯಿಲ್ಲದ ಕುಟುಂಬ. ಬಡತನವನ್ನು ನೋಡೇ ಇಲ್ಲ!

ಮೂಲತಃ ಹಾಸನದವರಾದ ಇವರು ಬದುಕನ್ನು ಬಹಳ ಜಾಲಿಯಾಗೇ ಕಳೆದರು. ಅಂತಹ ಕಷ್ಟಗಳೇನೂ ಒದಗಿಲ್ಲ! ವರ್ಷದ ಮಗುವಿದ್ದಾಗ ಕಾಡಿದ ಜ್ವರಕ್ಕೆ ಮಹಾಮಾರಿ ಪೋಲಿಯೋ ಬಂದು ತಮ್ಮೆರಡೂ ಕಾಲುಗಳನ್ನು ಕಳೆದುಕೊಂಡು ಆಗಿಂದ ಈಗಿನರೆಗೂ ಗಾಲಿಕುರ್ಚಿಯಲ್ಲೇ ಜೀವನ ಸವೆಸುತ್ತಿದ್ದಾರೆ.

ಪೂರಕ ಪ್ರವೃತ್ತಿ

ಪಾಠಕ್ಕಿಂತ ಆಟಗಳಲ್ಲಿ ಹೆಚ್ಚು ಆಸಕ್ತಿ. ಸಣ್ಣವರಿದ್ದಾಗ ಕುಂಟೆಬಿಲ್ಲೆ ಆಡುತ್ತ ಬಚ್ಚಗಳನ್ನು ಮನೆಗಳಿಗೆ ಇವರು ಎಸೆದರೆ ಸ್ನೇಹಿತರು ಇವರ ಪರ ಆಡುತ್ತ ಸಂತಸಪಡುತ್ತಿದ್ದರು. ಬಾಲಿನ ಆಟ, ಟೆನಿಸ್‌ ಹೀಗೆ ಆಟದ ಕಡೆಗೆ ನಿಗಾ ಜಾಸ್ತಿ. ಇದೇ ಆಸಕ್ತಿಯಿಂದ ಮುಂದೊಂದು ದಿನ ವೀಲ್‌ಚೇರ್‌ ರನ್ನಿಂಗ್‌ ರೇಸ್‌ ಹಾಗೂ ಇದರ ಮೇಲೆ ಕೂತು ಆಡುವ ಹಲವು ಆಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತ ಸಾಧನೆಗೈದ ಅಪರೂಪದ ಮಹಿಳೆ! 750 ರೀತಿಯ ತಿಂಡಿಗಳು, 450 ಸ್ಪರ್ಧಿಗಳಿದ್ದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಅಮೆರಿಕಾ ಗೋಧಿ ಸಂಸ್ಥೆಗಳ ಒಕ್ಕೂಟದಲ್ಲಿ ಏರ್ಪಡಿಸಿದ್ದ ಗೋಧಿ ಖಾದ್ಯ ತಯಾರಿಕಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಇವರದು!

ಇವರ ಮಗದೊಂದು ಆಸಕ್ತಿ ತೋಟಗಾರಿಕೆ. ಹೂ ಹಣ್ಣುಗಳನ್ನು ಬೆಳೆಯೋದು, ಅವುಗಳಿಂದ ಅಲಂಕಾರಿಕ ಕೆಲಸಗಳನ್ನು ನಿರ್ವಹಿಸೋದು. ಹೀಗೆ ಮಾಡುತ್ತ ದೊಡ್ಡ ದೊಡ್ಡ ಹೂದೋಟಗಳಲ್ಲಿ ಇವರ ಕೈಚಳಕ ನೋಡಿದರೆ ಆಶ್ಚರ್ಯವಾಗುತ್ತದೆ. ಕಡೆಗೊಂದು ದಿನ ತೋಟಗಾರಿಕೆಯೇ ಮುಖ್ಯ ಕಾಯಕವಾಯಿತು. ತೋಟಗಾರಿಕೆಗೆ ಸಂಬಂಧಪಟ್ಟ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನಗಳನ್ನು ಪಡೆಯುತ್ತಾ ಬಂದರು. ಇಂದಿಗೂ ಇವರ ಉಸ್ತುವಾರಿಯಲ್ಲಿ ಹಲವಾರು ತೋಟಗಳು ಬೆಳೆಯುತ್ತಿವೆ, ಜನಮನಗಳಿಗೆ ಮನೋಲ್ಲಾಸ ನೀಡುತ್ತಿದೆ.

ಇವರ ತಂಗಿಯ ಮನೆ ಬೆಂಗಳೂರಿನಲ್ಲಿತ್ತು. 40 ವರ್ಷದ ಕೆಳಗೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದರು. ನಂತರ ಆಗಾಗ ಬರಲಾರಂಭಿಸಿದ ಇವರು, ತಂಗಿಗೆ ಪರಿಚಯವಿದ್ದ ವಿಕಲಚೇತನರ ಸಂಘ ಸಂಸ್ಥೆಗಳಿಗೆ ಪರಿಚಿತರಾದರು. ಕ್ರಮೇಣ ಆ ಸಂಘ ಸಂಸ್ಥೆಗಳ ಮುಖೇನ ತಮ್ಮನ್ನು ತಾವು ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅವರೊಂದಿಗೆ ಬೆರೆತು ಕಲೆತು ಬೆಳೆಯುತ್ತಾ ಸಾಗಿದರು.

.ಪಿ.ಡಿ ಸಂಸ್ಥೆಗೆ ಸೇರ್ಪಡೆ

ಹತ್ತಾರು ಜನಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಂದುವರಿದರು. ಏನೋ ಆಟವಾಡಿಕೊಂಡೇ ಬೆಳೆದ ಮಗಳಲ್ಲಿನ ಒಂದು ಸಣ್ಣ ಬದಲಾವಣೆಯನ್ನು ಗುರುತಿಸಿದ ತಂದೆ ತಾಯಿ ಇವರ ಆಸೆಗಳಿಗೆ ನೀರೆರೆದರು. ಅದರ ಫಲವಾಗಿ ಇಂದು ನಾಡಿನಲ್ಲಿ ಹೆಸರಾಂತ ಸಮಾಜ ಸೇವಕಿಯೆಂದು ಗುರುತಿಸಿಕೊಂಡಿದ್ದಾರೆ. ಇದುವರೆವಿಗೂ 300ಕ್ಕೂ ಹೆಚ್ಚು ಗಾಲಿ ಕುರ್ಚಿಗಳನ್ನು ಅವಶ್ಯಕರಿಗೆ ನೀಡಿದ್ದಾರೆ.  ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಂಡು ತಮ್ಮ ಉಳಿದ ಜೀವನವನ್ನು ಇದಕ್ಕಾಗಿ ಮುಡಿಪಾಗಿಡುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ದುಡ್ಡು ಯಾರು ಬೇಕಾದರೂ ಹೇಗೆ ಬೇಕಾದರೂ ಸಂಪಾದಿಸಬಹುದು. ಆದರೆ ಜನರನ್ನು ಸಂಪಾದಿಸೋದು ಬಹಳ ಕಷ್ಟ ಎನ್ನುತ್ತಾರೆ ವಿಜಯಕುಮಾರಿ.

ಅಂಗವೈಕಲ್ಯತೆಯನ್ನು ಬಂಡವಾಳವನ್ನಾಗಿಸಿಕೊಂಡು ಅಲ್ಲಿಂದ ಇಲ್ಲಿಂದ ಸಿಗುವ ಸವಲತ್ತುಗಳ ಅರಸುವಿಕೆ ಅಥವಾ ದಾನಿಗಳ ಅನ್ವೇಷಣೆಯಲ್ಲೇ ಹೆಚ್ಚಿನ ಜೀವನವನ್ನು ವಾಸಿಸುವ ಹಲವು ಮಂದಿಗೆ ಇವರು ಸ್ಛೂರ್ತಿದಾಯಕರಾಗಬೇಕು, ಪ್ರೇರಕರಾಗಬೇಕು. ಇವರನ್ನು ನೋಡಿ ಕಲಿಯಬೇಕು. ಆದರೂ ಈ ವಿಶೇಷ ವ್ಯಕ್ತಿಗಳಲ್ಲಿ ಈ ರೀತಿಯ ಗುಣವಿರುವವರು ಬಹಳವೇ ಕಮ್ಮಿ ಇರುತ್ತಾರೆ. ಇವರಲ್ಲಿ ಸ್ವಾಭಿಮಾನ ಹೆಚ್ಚಿರುತ್ತೆ, ಆತ್ಮಸ್ಥೈರ್ಯ ಬಹಳವೇ ಇರುತ್ತದೆ. ಸ್ವಾವಲಂಬನೆಯತ್ತ ಹೆಚ್ಚಿನ ನಿಗಾ ಇರುತ್ತದೆ. ತಂಗಿಯ ಸಹಾಯದಿಂದ ಎ.ಪಿ.ಡಿ (ಅಸೋಸಿಯೇಷನ್‌ ಆಫ್‌ ದಿ ಪೀಪಲ್ ವಿತ್‌ ಡಿಸೇಬಲ್) ಸೇರಿದರು. ಅಲ್ಲಿನ ಮುಖ್ಯಸ್ಥರಾದ ಹೇಮಾ ಅಯ್ಯಂಗಾರ್‌ರವರ ಪರಿಚಯವಾಯಿತು. `ಮನೇಲೇ ಕೂತು ಕಾಲಹರಣ ಮಾಡುತ್ತಿರುವೆಯಲ್ಲಾ? ಇಷ್ಟು ಚೆನ್ನಾಗಿ ಮಾತನಾಡುತ್ತಿರುವೆಯಲ್ಲಾ…. ನೀನು ಎಪಿಡಿಗೆ ಸೇರಲೇಬೇಕು,’ ಎಂದು ನನ್ನನ್ನು ಒಳಗೆ ಎಳೆದುಕೊಂಡರಷ್ಟೇ! ಅಲ್ಲಿಂದ ನನ್ನ ಜೀವನಕ್ಕೊಂದು ಹೊಸ ತಿರುವು ಸಿಕ್ಕಿತು,  ಬದುಕು ಬದಲಾಯಿತು ಎನ್ನುತ್ತಾರೆ. ಇದೇ ಸಮಯದಲ್ಲಿ ಇವರ ತಂದೆಯೂ ಕಾಲವಾದರು. ಹೆಣ್ಣುಮಕ್ಕಳನ್ನು ಹಾಗೆಲ್ಲ ಮನೆಯಿಂದ ಹೊರಗೆ ಕಳಿಸಲ್ಲವೆಂಬ ಸಾಂಪ್ರದಾಯಿಕ ಕಟ್ಟುಪಾಡು ಎದುರಾದರೂ ಸಹ ಎಲ್ಲವನ್ನೂ ಮೆಟ್ಟಿ ಬೆಂಗಳೂರಿಗೆ ಬಂದರು. ದೊಡ್ಡ ಊರಲ್ಲಿ ಕೈಕಾಲು ಚೆನ್ನಾಗಿರುವವರು ಬದುಕೋದೇ ಕಷ್ಟ ಅಂಥದರಲ್ಲಿ ನಿನ್ನಂಥಹ ಹೆಣ್ಣುಮಗಳು ಬದುಕೋದು ಸಾಧ್ಯವಿಲ್ಲ. ಆಸೆ ಬಿಟ್ಟುಬಿಡು ಎಂದವರೇ ಹೆಚ್ಚು.

ಸಾಹಸಮಯ ಬದುಕು

ಹೇಮಾ ಬಿಡಲೊಲ್ಲರು, ಸಂಸ್ಕಾರದ ಕಟ್ಟುಪಾಡುಗಳು ಬಿಡಲೊಲ್ಲದು! ಕಡೆಗೂ ಹೇಮಾರ ಅಭಿಲಾಷೆಯೇ ನೆರವೇರಿತು. ಎಲ್ಲವನ್ನೂ ತೊರೆದು ಸಮಾಜ ಸೇವೆಗೆ ಟೊಂಕಕಟ್ಟಿ ನಿಂತರು. ಹೇಮಾರ ಜೊತೆಯಾದರು. ಅಲ್ಲಿಂದ ಮುಂದೆ ನಡೆದದ್ದೆಲ್ಲಾ ಅದ್ಭುತ ಸಾಧನೆಗಳೇ ಹೊರತು ಮತ್ತೇನಿಲ್ಲ. ಹೀಗೆಂದು ಹೇಮಾರವರು ಎಂದೂ ಬಲವಂತ ಮಾಡಲಿಲ್ಲ. ಬದಲಾಗಿ ಪ್ರೀತಿಯಿಂದ ಉತ್ತಮ ರೀತಿಯಲ್ಲಿ ಕರೆಸಿಕೊಂಡರು, ನಡೆಸಿಕೊಂಡರು.

ಇಷ್ಟಾಗಿ ಆಕೆಯೂ ಸಹ ವೀಲ್‌ಚೇರ್‌ನಲ್ಲೇ ಜೀವನ ಸಾಗಿಸುತ್ತಿದ್ದ ದಿಟ್ಟ ಮಹಿಳೆ. ಪ್ರಾರಂಭಿಕ ಹಂತದಲ್ಲಿ ಸೂಪರ್‌ವೈಸರ್‌ ಕೆಲಸ. ಇವರಂತಿದ್ದ ಹಲವರನ್ನು ಕರೆದುಕೊಂಡು ಬಂದು ಅವರುಗಳಿಗೆ ತರಬೇತಿ ನೀಡೋದು. ಗಾರ್ಡನಿಂಗ್‌ನಲ್ಲಿ ಆಸಕ್ತಿ ಹೆಚ್ಚು. ಹಾಗಾಗಿ ಅದರಲ್ಲಿ ಹಲವು ರೀತಿಯ ವಿನ್ಯಾಸಗಳನ್ನು ಮಾಡೋದು ಇವರ ಕಾಯಕವಾಯಿತು. ಮಕ್ಕಳಿಗೆ ಗಿಡ ನೆಡುವ ಬಗ್ಗೆ ಅದನ್ನು ಬೆಳೆಸುವ ರೀತಿ, ಮಣ್ಣು ಗೊಬ್ಬರ ಮಿಶ್ರಣ ಹೀಗೇ ತೋಟಗಾರಿಕೆಯ ಬಗ್ಗೆ ತರಬೇತಿ ನೀಡಲು ಪ್ರಾರಂಭಿಸಿದರು.

ಎನ್‌.ಜಿ.ಓ ಗಳಿಗೆ ಸೇರಿ ತಮ್ಮ ಕೈಲಾದ ಸಹಾಯ ಮಾಡಲು ಅಣಿಯಾದರು. ಕುರುಡರು, ವಿಶೇಷ ಮಕ್ಕಳೊಂದಿಗೆ ಬೆರೆತರು. ಅವರ ನೋವುಗಳಿಗೆ ಸ್ಪಂದಿಸಿದರು. ಅವರಿಗೆ ಮಾರ್ಗದರ್ಶನ ನೀಡುತ್ತ ಸಾಂತ್ವನ ಹೇಳತೊಡಗಿದರು. ರೇಡಿಯೋ ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನೂ ನೀಡಿರುವರು.

ಎಪಿಡಿ, ಮಾರ್ಗದರ್ಶಿ, ಹಾಸನ ಜಿಲ್ಲಾ ಅಂಗವಿಕಲ ಸಂಸ್ಥೆಯಲ್ಲಿ ಗೌರವ ಅಧ್ಯಕ್ಷರು, ವಿಶ್ವಮಾನವ, ಅನನ್ಯ ಟ್ರಸ್ಟ್ ಮಿತ್ರಜ್ಯೋತಿ, ಲಲಿತಗಿರಿ ಲಯನೆಸ್‌ ಸಂಸ್ಥೆ, ಪ್ರೈಡ್‌ ಲಯನ್ಸ್ ಸಂಸ್ಥೆ ಹೀಗೆ ಹತ್ತು ಹಲವಾರು ಸಂಸ್ಥೆಗಳಲ್ಲಿ ಸದಸ್ಯತ್ವದೊಂದಿಗೆ ಸಮಾಜ ಕಾರ್ಯದ ಸೇವೆಯಲ್ಲಿ ಸದಾ ನಿರತರು. `ಸೇವೆಯೇ ಪರಮ ಧರ್ಮ!’ ಎನ್ನುತ್ತಾ ದುಡಿಯುತ್ತಿರುವರು. ಪ್ರಾವಿಷನ್‌ ಏಷ್ಯಾ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿ ಅದರ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಇದುವರೆವಿಗೂ 300ಕ್ಕೂ ಹೆಚ್ಚಿನ ವೀಲ್‌ಚೇರ್‌ಗಳನ್ನು ಅವಶ್ಯಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡಿದ್ದಾರೆ. ಸ್ವೀಕರಿಸಿದವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಸಮಾಜ ಸೇವೆಯೇ ಧ್ಯೇಯ

ಆಗಾಗ ಸ್ಪಾನ್ಸರ್ಸ್ ಹಿಡಿದು ಮಕ್ಕಳ ಶಾಲಾಶುಲ್ಕ, ಬಟ್ಟೆಬರೆ, ಪುಸ್ತಕ ಇತ್ಯಾದಿ ನೀಡಿದ್ದಾರೆ. ಇವರೇ ಉಪಯೋಗಿಸುವ ಸಲಕರಣೆಗಳನ್ನು ಸಹ ನೀಡಿದ್ದಾರೆ. (ಬಹುಶಃ ಇದೇ ನಿಜವಾದ ಸೇವೆಯಲ್ಲವೇ….. ನಮಗೆ ಬೇಡದ ವಸ್ತುಗಳನ್ನು ದಾನ ಮಾಡುವ ಬದಲು, ನಮಗೆ ಇಷ್ಟವಾದ ಚೆನ್ನಾಗಿರುವ ವಸ್ತುಗಳನ್ನು ದಾನ ಮಾಡಿದಾಗ ಹೆಚ್ಚಿನ ಪುಣ್ಯ ಲಭಿಸುವುದಲ್ಲವೇ?) ಇತ್ತೀಚೆಗೆ ವಾಟರ್‌ ಬೆಡ್‌ಗಳನ್ನೂ ಸಹ ನೀಡಿದ್ದಾರೆ. ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಇತ್ತೀಚೆಗೆ ರಾಮನಗರದಲ್ಲಿ ವಿಜಯಕುಮಾರಿ ಚಾರಿಟೆಬಲ್ ಟ್ರಸ್ಟ್ ವೃದ್ಧಾಶ್ರಮ ತೆರೆದಿದ್ದಾರೆ. 12 ಜನರಿರುವ ಈ ವೃದ್ಧಾಶ್ರಮ ಉಚಿತವಾಗಿದೆ. ಅವರುಗಳಿಗೆ ಊಟ, ವಸತಿ, ಔಷಧೋಪಚಾರ ನೋಡಿಕೊಳ್ಳಲು ಆಯಾಗಳು ಇದ್ದಾರೆ.

ಅಪರೂಪದ ವ್ಯಕ್ತಿ ಎನ್ನುತ್ತಾರೆ ಇವರ ಆತ್ಮೀಯರಾದ ಪ್ರೀತಿಯ ಗೆಳತಿ ಗೋಧಿ ನಾಗರತ್ನಾ. ಮನೆಗೆ ಬಂದವರನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ಕಾಣುತ್ತಾರೆ. ಉಪಚಾರ ಮಾಡಿ ಮನೆಯಲ್ಲೇ ತಂಗಲು ಹೇಳುತ್ತಾರೆ. ಪ್ರೀತಿ ಸ್ನೇಹಕ್ಕೆ ಸೋಲುವ ವ್ಯಕ್ತಿತ್ವ!

ಇವರಿಗೆ ಸಂದ ಸನ್ಮಾನಗಳು ಪ್ರಶಸ್ತಿ, ಪುರಸ್ಕಾರಗಳಿಗಂತೂ ಲೆಕ್ಕವೇ ಇಲ್ಲ! ತಮ್ಮದೇ ಆದ ಒಂದು ಓಮ್ನಿ ವ್ಯಾನ್‌ಇಟ್ಟುಕೊಂಡಿದ್ದಾರೆ. ಅದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವೆನಿಸುತ್ತೆ. ವೀಲ್‌ಚೇರ್‌ ಸಮೇತ ರಾಡ್‌ ಗಾಲಿಗಳ ಸುವ್ಯವಸ್ಥೆ ಇದರಲ್ಲಿದ್ದು, ವೀಲ್‌ಚೇರ್‌ನ್ನು ಇದಕ್ಕೆ ಸೇರಿಸಿದರೆ ಸಾಕು ಅದೇ ಗಾಡಿಯೊಳಗೆ ಕೂರಿಸುತ್ತದೆ. ಒಟ್ಟಿನಲ್ಲಿ ಸಾವಿರಾರು ಜನರಿಗೆ ಸ್ಛೂರ್ತಿದಾಯಕರು, ಸೇವಾ ನಿರತರು ಆಗಿರುವ ವಿಜಯಕುಮಾರಿಯವರ ಈ ಸಮಾಜಮುಖಿ ಸೇವೆಯು ನಿರಂತರವಾಗಿರಲಿ, ಎಂದು ಗೃಹಶೋಭಾ ಹಾರೈಸುತ್ತಾಳೆ.  

– ಸವಿತಾ ನಾಗೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ