`ಆಶಿಮಾ ಎಸ್‌ ಕುಟೀರ್‌’ನ ಸಂಸ್ಥಾಪಕಿ ಮತ್ತು ಫ್ಯಾಷನ್‌ ಡಿಸೈನರ್‌ ಆಶಿಮಾ ಶರ್ಮ 5 ವರ್ಷಗಳಿಂದ ತಮ್ಮ ಫ್ಯಾಷನ್‌ ಪೋರ್ಟ್‌ ನಡೆಸುತ್ತಿದ್ದಾರೆ. 7 ವರ್ಷದವರಿದ್ದಾಗ ಪೋರ್ಟ್ರೇಟ್‌ ತಯಾರಿಸುತ್ತಾ, ಪೇಂಟಿಂಗ್‌ ಮಾಡುತ್ತಿದ್ದರು. ಕಲಾ ವಿಭಾಗದಲ್ಲಿ ಆಸಕ್ತಿವಹಿಸಿ ಕೆಲವು ವರ್ಷ ಮುಂದುವರಿದು ಫ್ಯಾಷನ್‌ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಆಶಿಮಾ ಹಲವಾರು ಅಂತಾರಾಷ್ಟ್ರೀಯ ಬ್ರಾಂಡ್‌ ಆರ್ಟ್‌ ಗ್ಯಾಲರೀಸ್‌ ಜೊತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬರವಣಿಗೆಯಲ್ಲೂ ಅಪಾರ ಆಸಕ್ತಿ. ಆಕೆಗೆ 2018ರಲ್ಲಿ `ವುಮನ್‌ ಎಕ್ಸಲೆನ್ಸ್ ಅವಾರ್ಡ್‌’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2015ರಲ್ಲಿ ಆಕೆಗೆ ಲಾಸ್‌ ಏಂಜಲೀಸ್‌ನಲ್ಲಿ ವಿಶ್ವದಲ್ಲೇ 19ನೇ ಸ್ಥಾನ ದೊರಕಿತು. ಆಕೆಗೆ 2012ರಲ್ಲಿ ಪರ್ಥ್‌ ಅಂತಾರಾಷ್ಟ್ರೀಯ ಆರ್ಟ್‌ ಫೆಸ್ಟಿವಲ್ ನಲ್ಲಿ ಬೆಸ್ಟ್ ಅಂತಾರಾಷ್ಟ್ರೀಯ ಟ್ಯಾಲೆಂಟ್‌ಎಂದು ಸನ್ಮಾನಿಸಲಾಯಿತು.

ಅವರೊಂದಿಗೆ ನಡೆಸಿದ ಮಾತುಕಥೆಯ ಮುಖ್ಯಾಂಶ :

ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್‌ ಎಂದರೇನು?

ನನ್ನ ದೃಷ್ಟಿಯಲ್ಲಿ ಫ್ಯಾಷನ್‌ ಕೇವಲ ಟ್ರೆಂಡ್ಸ್ ಫಾಲೋ ಮಾಡುವುದು ಮಾತ್ರವಲ್ಲ, ಬದಲಿಗೆ ವ್ಯಕ್ತಿಯ ಮೂಲಕ ತನ್ನ ಇಷ್ಟದ ಪ್ರಕಾರ ಆರಾಮದಾಯಕ ಟ್ರೆಂಡ್‌ ಅನುಸರಿಸುವುದೂ ಮುಖ್ಯ. ಫ್ಯಾಷನ್‌ನಿಂದ ವ್ಯಕ್ತಿಗೆ ಪ್ರತ್ಯೇಕ ಐಡೆಂಟಿಟಿ ಸಿಗುತ್ತದೆ.

ಫ್ಯಾಷನ್‌ನ್ನು ಆತ್ಮವಿಶ್ವಾಸದಿಂದ ಹೇಗೆ ನೋಡಬಹುದಾಗಿದೆ?

ಫ್ಯಾಷನ್‌ ಅಂದ್ರೆ ಕೇವಲ ಆತ್ಮವಿಶ್ವಾಸದ ಪ್ರತೀಕ ಎನ್ನಬಹುದು. ಆತ್ಮವಿಶ್ವಾಸ ಇಲ್ಲದೆ ಯಾವುದೇ ಉಡುಗೆ ಬೆಸ್ಟ್ ಎನಿಸದು. ಏಕೆಂದರೆ ಹೊಸ ಉಡುಗೆ ಧರಿಸಿದವರು ಆತ್ಮವಿಶ್ವಾಸದೊಂದಿಗೆ ಮುನ್ನಡೆಯದಿದ್ದರೆ, ಮೆಟೀರಿಯಲ್ ಎಷ್ಟೇ ಚೆನ್ನಾಗಿದ್ದರೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ನಾವು ಯಾವುದೇ ಲುಕ್‌ನ್ನು ಸದಾ ಆತ್ಮವಿಶ್ವಾಸದಿಂದ ಕ್ಯಾರಿ ಮಾಡಬೇಕಾಗುತ್ತದೆ.

ಭಾರತದಲ್ಲಿ ಹೆಂಗಸರ ಸ್ಥಿತಿಯ ಕುರಿತು ಏನು ಹೇಳುತ್ತೀರಿ?

ಇಂದಿಗೂ ಸಹ ಹೆಂಗಸರನ್ನು ನಮ್ಮ ದೇಶದಲ್ಲಿ ವಸ್ತು ಎಂಬಂತೆ ಪರಿಗಣಿಸಿರುವುದು ಬಲು ಶೋಚನೀಯ. ಬದಲಿಗೆ ಜನ ಹೆಣ್ಣನ್ನು ಗೌರವಾದರಗಳಿಂದ ಕಾಣುವ ಅಗತ್ಯವಿದೆ. ಸಮಾಜದಲ್ಲಿ ಹೆಣ್ಣಿನ ಪಾತ್ರ ಹಿರಿದು. ಇಂದು ಹೆಣ್ಣು ಗಂಡು ಕೂಡಿ ಕೆಲಸ ಮಾಡಿದರೇನೇ ಅದು ಪರಿಪೂರ್ಣ ಆಗುವುದು. ಹೆಂಗಸರು ತಮ್ಮ ಕೆಲಸ ಹಾಗೂ ಪ್ರೊಫೆಶನಲ್ ಜೀವನದ ಜೊತೆ ಜೊತೆಯಲ್ಲೇ ಮನೆಯನ್ನೂ ಸಂಭಾಳಿಸಬೇಕಾಗುತ್ತದೆ. ಹೆಣ್ಣಿನಿಂದಲೇ ಮನೆ, ಹೆಣ್ಣೇ ಮನೆಯ ಕೇಂದ್ರಬಿಂದು! ಹೆಣ್ಣಿನಿಂದಲೇ ಕುಟುಂಬ ನಡೆಯುವುದು, ಗಂಡಿನ ಹೆಗಲಿಗೆ ಹೆಗಲು ನೀಡಿ ಹೊರ ಪ್ರಪಂಚದಲ್ಲೂ ಹೆಸರು ಪಡೆಯುತ್ತಾಳೆ. ಗಂಡಸು ಇದನ್ನು ಸರಿಯಾಗಿ ಗುರುತಿಸಬೇಕಷ್ಟೆ.

ಹೆಣ್ಣಿನ ಪ್ರಗತಿಯ ಹಾದಿಯಲ್ಲಿ ಅಸುರಕ್ಷತೆಯ ಪಾತ್ರವೇನು?

ಒಬ್ಬ ಹೆಣ್ಣಾದ ಕಾರಣ ನಾನು ಸದಾ ಎದುರಿಸಿದ್ದು ಎಂದರೆ, ನನ್ನ ಸಹೋದ್ಯೋಗಿಗಳಿಗಿಂತ ನಾನು ಪ್ರತಿ ಸಲ ಉತ್ತಮ ಪರ್ಫಾರ್ಮೆನ್ಸ್ ನೀಡಲೇಬೇಕು. ಏಕೆಂದರೆ ಮಹಿಳೆಯರು ತಮ್ಮದೇ ಛಾಪು ಮೂಡಿಸುವುದು ಸುಲಭದ ಮಾತಲ್ಲ! ಆದರೆ ಕಠಿಣ ಪರಿಶ್ರಮ ಎಂದೂ ಉತ್ತಮ ಪ್ರತಿಫಲ ನೀಡದಿರದು. ಯಾರು ಸವಾಲುಗಳನ್ನು ದಿಟ್ಟಾಗಿ ಎದುರಿಸುತ್ತಾರೋ ಅವರಿಗೆ ಮಾತ್ರ ಯಶಸ್ಸು ಲಭ್ಯ. ಒಂದು ಹಂತದವರೆಗೆ ಇದ್ದ ಅಸುರಕ್ಷತೆಯ ಭಾವನೆ ನಂತರ ತಂತಾನೇ ನನ್ನನ್ನು ಬಿಟ್ಟುಹೋಯಿತು. ನಾನು ನನ್ನ ಪ್ರಯಾಸಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇನೆ ಎಂದು ಅರ್ಥ ಮಾಡಿಕೊಂಡೆ.

ಮನೆ ಮತ್ತು ಕೆರಿಯರ್‌ಎರಡನ್ನೂ ಹೇಗೆ ಸಂಭಾಳಿಸುತ್ತೀರಿ?

ಪರ್ಸನಲ್ ಪ್ರೊಫೆಶನಲ್ ಲೈಫ್‌ ಮಧ್ಯೆ ಬ್ಯಾಲೆನ್ಸ್ ಉಳಿಸಿಕೊಳ್ಳುವುದು ಮಹತ್ವಪೂರ್ಣ ವಿಚಾರ. ನನ್ನ ಕೆರಿಯರ್‌ ಹಾಗೂ ವೈಯಕ್ತಿಕ ಜೀವನ ಕ್ಲ್ಯಾಶ್‌ ಆಗದಂತೆ ಸದಾ ಎಚ್ಚರ ವಹಿಸುತ್ತೇನೆ. ಪರ್ಸನಲ್ ಪ್ರೊಫೆಶನಲ್ ಜೀವನದಲ್ಲಿ ಎರಡೂ ಕಡೆ ಯಶಸ್ಸು ಪಡೆಯಲು ಶಿಸ್ತುಬದ್ಧ ಯೋಜನೆ ಮತ್ತು ಅನುಸರಣೆ ಅತಿ ಅಗತ್ಯ. ನಾನು ನಿಯಮಿತವಾಗಿ ಈ ಕೆಲಸ ಕಾರ್ಯಗಳ ನೋಟ್ಸ್ ಮಾಡಿಡುತ್ತೇನೆ. ಅವನ್ನು ಸರಿಯಾಗಿ ಪಾಲಿಸುತ್ತಾ ಬಾಕಿ ಏನೂ ಉಳಿದಿಲ್ಲ ತಾನೇ ಎಂದು ಅಲರ್ಟ್‌ ಆಗಿರುತ್ತೇನೆ. ಸ್ವಸ್ಥ ಸುಖೀ ಜೀವನಕ್ಕಾಗಿ ಪರ್ಸನಲ್ ಪ್ರೊಫೆಶನಲ್ ಜೀವನದ ಮಧ್ಯೆ ಬ್ಯಾಲೆನ್ಸ್ ಮೇಂಟೇನ್‌ ಮಾಡಬೇಕಾದುದು ಅತ್ಯಗತ್ಯ.

ಗ್ಲಾಸ್‌ ಸೀಲಿಂಗ್‌ ಕುರಿತಾಗಿ ನಿಮ್ಮ ಅಭಿಪ್ರಾಯ?

ಇಂದು ಮಹಿಳೆ ಯಾವ ಹುದ್ದೆಯನ್ನಾದರೂ ಸುಲಭವಾಗಿ ನಿರ್ವಹಿಸಿ ಸೈ ಎನಿಸಬಲ್ಲಳು. ಅವಳ ಕಠಿಣ ಪರಿಶ್ರಮ ಎಂದೂ ವ್ಯರ್ಥವಾಗದು. ಸಾಗಬೇಕಾದ ಮಾರ್ಗ ಅತಿ ಕಠಿಣವೇ ಇರಬಹುದು, ಆದರೆ ಗುರಿ ಸಾಧಿಸಲು ಅಸಾಧ್ಯ ಅಂತೇನಿಲ್ಲ. ಪರಿಶ್ರಮ ಎದುರಿಸಲು ಸದಾ ಸಿದ್ಧ ಎನ್ನುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಗ್ಲಾಸ್‌ ಸೀಲಿಂಗ್‌ ಸಮಸ್ಯೆ ಅಂದಿನಿಂದ ಇಂದಿಗೂ ಉಳಿದುಬಂದಿದೆ, ಆದರೆ ಇವನ್ನೆಲ್ಲ ಎದುರಿಸಿ ಸಹನೆಯಿಂದ ಮುಂದುವರಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

– ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ