ಹಿಂದೂ ವಿವಾಹದ ಕಾನೂನು ಯಾವ ಪುರುಷಾರ್ಥಕ್ಕಾಗಿ?

ಹಿಂದೂ ಮಹಿಳೆಯರಿಗೆ ವಿಚ್ಛೇದನದ ತೊಂದರೆ ಎಷ್ಟು ಹೀನಾಯ ಎನ್ನುವುದು ಸುಪ್ರೀಂಕೋರ್ಟ್‌ನ ಮೇ 2019ರ ತೀರ್ಪಿನಿಂದ ಸ್ಪಷ್ಟವಾಯಿತು.

ಉತ್ತರ ಪ್ರದೇಶದ ಇಟಾವಾ ನಗರದ ಪ್ರವೀಣ್‌ ಹಾಗೂ ನೀಲಮ್ ರ ವಿವಾಹ 1998ರಲ್ಲಿ ನಡೆದಿತ್ತು. ನೀಲಮ್ ರಿಗೆ ಆಗ ಕೇವಲ 18 ತುಂಬಿತ್ತು. ಇಬ್ಬರಿಗೂ ಒಬ್ಬಳು ಮಗಳು ಕೂಡ ಇದ್ದಾಳೆ. ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ, ಇಬ್ಬರೂ ಬೇರೆ ಬೇರೆ ವಾಸ ಮಾಡತೊಡಗಿದರು. 2009ರಲ್ಲಿ ಗಂಡ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಮೊಕದ್ದಮೆ ಹಾಕಿದ. ಹೆಂಡತಿಯ ಏನೇ ಕಾರಣಗಳಿರಬಹುದು, ಕೌಟುಂಬಿಕ ನ್ಯಾಯಾಲಯ ಒತ್ತಾಯಪೂರ್ವಕವಾಗಿ ನೂಕಿಕೊಂಡು ಹೊರಟಿದ್ದ ಸಂಬಂಧಕ್ಕೆ ಕಾನೂನುರೀತ್ಯಾ ಮುಕ್ತಿ ಕೊಡಬೇಕಿತ್ತು. ಆದರೆ ಆ ನ್ಯಾಯಾಲಯ ಅರ್ಜಿಯನ್ನು ರದ್ದುಗೊಳಿಸಿತು.

ಜೊತೆಗಿರಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಗಂಡ ಜಿಲ್ಲಾ ನ್ಯಾಯಾಲಯದ ಕದ ತಟ್ಟಿದ. ಜಿಲ್ಲಾ ನ್ಯಾಯಾಲಯ 3 ವರ್ಷ ಕಾಯಿಸಿ 2012ರಲ್ಲಿ ವಿಚ್ಛೇದನ ನೀಡಲು ನಿರಾಕರಿಸಿತು.

ಪ್ರವೀಣ್‌ ಬಳಿಕ ಉಚ್ಚ ನ್ಯಾಯಾಲಯಕ್ಕೆ ಹೋದ. ಮೇ 2013ರಲ್ಲಿ ವಿಚ್ಛೇದನಕ್ಕೆ ಮಂಜೂರಾತಿ ನೀಡಲಿಲ್ಲ. ಪ್ರಕರಣ ಕೋರ್ಟಿಗೆ  ಬಂದು 15 ವರ್ಷ ಆಗಿತ್ತು. ಅಲ್ಲಿಯವರೆಗೆ ಇಬ್ಬರೂ ತಮ್ಮ ಯೌವನ ಮರೆತುಬಿಟ್ಟಿದ್ದರು.

ಗಂಡ ಛಲ ಬಿಡದೆ ಸಪ್ರೀಂ ಕೋರ್ಟ್‌ಗೂ ಹೋದ. ಇಬ್ಬರ ನಡುವಿನ ಹೊಂದಾಣಿಕೆಯ ಸಂದರ್ಭದಲ್ಲಿ ಹೆಂಡತಿಗೆ 10 ಲಕ್ಷ ರೂ. ನೀಡಲು ಹಾಗೂ 3 ಲಕ್ಷ ರೂ. ಫಿಕ್ಸೆಡ್‌ ಡಿಪಾಸಿಟ್‌ ಇಡುವುದಾಗಿ ಪ್ರಸ್ತಾಪ ಮುಂದಿಟ್ಟ. ಆದರೆ ಇದೆಲ್ಲ ಆಗಲು ಸುಪ್ರಿಂ ಕೋರ್ಟ್‌ಗೆ 6 ವರ್ಷಗಳೇ ಬೇಕಾದವು.

ಈ ಮಧ್ಯೆ ಎರಡೂ ಕಡೆಯವರಿಂದ ಹಲವು ಮೊಕದ್ದಮೆಗಳು ದಾಖಲಾದವು. 2009ರಲ್ಲಿ ಜೀವನಾಂಶಕ್ಕಾಗಿ ಕ್ರಿಮಿನಲ್ ಪ್ರೊಸೀಜರ್‌ ಕೋಡ್‌ನನ್ವಯ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆ ದಾಖಲಾಯಿತು. 2009ರಲ್ಲಿಯೇ ನೀಲಮ್ ಕೌಟುಂಬಿಕ ದೌರ್ಜನ್ಯದಡಿ ಮತ್ತೊಂದು ಮೊಕದ್ದಮೆಯನ್ನು ಹೂಡಿದಳು. 2002ರಲ್ಲಿ ವರದಕ್ಷಿಣೆ ಕಾಯ್ದೆಯನ್ವಯ ಒಂದು ಪ್ರಕರಣ ಹಾಗೂ ಐಪಿಸಿ ಕೋರ್ಟ್‌ 406 ಅನ್ವಯ ಬ್ರೀಟ್‌ ಆಫ್‌ ಟ್ರಸ್ಟ್ ಅನ್ವಯ ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲ, ಗಂಡನ ವಿರುದ್ಧ ಒಂದು ಡಕಾಯಿತಿ ಪ್ರಕರಣ ಕೂಡ ದಾಖಲಾಯಿತು. ಗಂಡ 5 ಜನರೊಂದಿಗೆ ಲೂಟಿ ಮಾಡಲು ಬಂದಿದ್ದ ಎಂದು ಆಕೆ ಅದರಲ್ಲಿ ಹೇಳಿದ್ದಳು.

ಆಂತರಿಕ ವಿವಾದಗಳು ಏನೇ ಆಗಿರಬಹುದು, ವಿವಾಹದ ಕುರಿತಂತೆ ಇಷ್ಟೊಂದು ಮೊಕದ್ದಮೆಗಳು ಸಾಮಾನ್ಯ ಎಂಬಂತಾಗಿವೆ. ಇದರಲ್ಲಿ ತೊಂದರೆಗೊಳಗಾಗುವವಳು ಮಹಿಳೆಯೇ ಹೊರತು ಪುರುಷನಲ್ಲ. ಯಾವ ಯುವತಿಯ ಮದುವೆ 1998ರಲ್ಲಿ ಯಾವ ಕನಸು ಹೊತ್ತು ಆಗಿರುತ್ತೊ ಏನೋ, ಆದರೆ ಅವರ ನಡುವೆ ಏನೇ ಮತಭೇದ ಬಂದರೂ 20 ವರ್ಷ ಆಕೆ ನ್ಯಾಯಾಲಯಕ್ಕೆ ಅಲೆದಾಡುವಂತಾಗಬಾರದು.

ವಕೀಲರ ಲಕ್ಷಾಂತರ ಫೀಗೆ ಬದಲಾಗಿ 13 ಲಕ್ಷ ರೂ. ಸಿಕ್ಕಿತು. ಇದು ಹೆಚ್ಚೇನು? ಅವರ ಯೌವನ ಈಗ ಮರಳಿ ಬಂದೀತೆ? ಮಗಳೇ ಈಗ ಮದುವೆಗೆ ಸಜ್ಜಾಗಿದ್ದಾಳೆ.

ಮಹಿಳೆಯರನ್ನು 20-30 ವರ್ಷ ವಿಚ್ಛೇದನವಿಲ್ಲದೆ ಸತಾಯಿಸುವ ಹಿಂದೂ ವಿವಾಹ ಕಾನೂನು ಯಾವ ಪುರುಷಾರ್ಥಕ್ಕೆ? ಇದು ಕೂಡ ತ್ರಿವಳಿ ತಲಾಖ್‌ನ ಸಮಸ್ಯೆಗಿಂತ ಕಡಿಮೆ ಏನಿಲ್ಲ. ಆದರೆ ಹಿಂದೂ ಧರ್ಮಾಧೀಶರು ಇದನ್ನು ತಲೆಗೆ ಸುತ್ತಿದ ಪೇಟಾ, ಹಣೆಗೆ ಹಚ್ಚಿಕೊಳ್ಳುವ ತಿಲಕವೆಂದು ಒಪ್ಪಿಕೊಂಡು ಮುನ್ನಡೆಸಿದ್ದಾರೆ.

ಮಹಿಳೆಯರು ತಮ್ಮ ಕಾಲಕಸ, ಹೇಳಿದಂತೆ ಕೇಳುತ್ತಾರೆ ಎಂದವರು ತಿಳಿದಿದ್ದಾರೆ. ಮದುವೆ ಧರ್ಮದ ವ್ಯಾಪಾರಿಗಳ ಲೆಕ್ಕದಲ್ಲಿ ಸಂಸ್ಕಾರ. ಜಾತಕ ನೋಡಿ ಹೊಂದಿಸುವ ಮದುವೆಯಲ್ಲಿ ಹುಡುಗಿಯ ಒಪ್ಪಿಗೆಯನ್ನೇ ಪಡೆಯಲಾಗುವುದಿಲ್ಲ. ಮೊದಲು ಸುಧಾರಣೆ ಬಯಸುತ್ತಾರೆ. ಹಾಗೆ ನೋಡಿದರೆ ಮುಸ್ಲಿಂ ಮಹಿಳೆಯರು ದಾಸಿಯರಂತಿಲ್ಲ. ಈ ತೀರ್ಪು ಅದನ್ನೇ ಬಿಂಬಿಸುತ್ತದೆ.

ಸಾಮಾಜಿಕ ದುರ್ಗತಿಗೆ ಯಾರು ಹೊಣೆ?

ಧಾರ್ಮಿಕ ಕಥೆಗಳು ಯಾವ ರೀತಿ ತಲೆ ಕೆಡಿಸುತ್ತವೆ, ಯಾವ ರೀತಿ ಮಹಿಳೆಯರ ಅತ್ಯಾಚಾರಕ್ಕೆ ಹೊಣೆಯಾಗಿವೆ ಎನ್ನುವುದು ರಾಮಾಯಣ ಹಾಗೂ ಮಹಾಭಾರತದಿಂದ ಸ್ಪಷ್ಟವಾಗುತ್ತದೆ. ದೇಶದಲ್ಲಿ ಸಾವಿರಾರು ಮಹಿಳೆಯರು ತಾವು ಪವಿತ್ರರು ಎಂದು ಸಾಬೀತುಪಡಿಸಲು ತಮ್ಮ ಕೈಕಾಲುಗಳನ್ನು ಸುಟ್ಟುಕೊಳ್ಳಬೇಕಾಗಿ ಬರುತ್ತಿದೆ. ಹೆಂಡತಿ ಯಾರೊಂದಿಗೋ ಸಂಬಂಧ ಹೊಂದಿದ್ದಾಳೆಂದು ಗಂಡ ಆರೋಪಿಸಿದಾಗ, ರಾಮ ಸೀತೆಯ ಪ್ರಸಂಗದ ಲಾಭ ಪಡೆದು ಕೇವಲ ಮನೆಯವರಷ್ಟೇ ಅಲ್ಲ, ಇಡೀ ಸಮಾಜವೇ ಅವಳನ್ನು ಅಗ್ನಿಪರೀಕ್ಷೆಗೆ ನಿಲ್ಲಿಸಿಬಿಡುತ್ತದೆ. ಅವಳು ತಪ್ಪಿತಸ್ಥೆ ಎಂದು ಕಂಡು ಬಂದರೆ, ಎಂದೆಂದಿಗೂ ಕೆಟ್ಟವಳು ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ.

ಅದೇ ರೀತಿ ಯುಧಿಷ್ಠಿರ ಜೂಜಾಟದಲ್ಲಿ ದ್ರೌಪದಿಯನ್ನು ಸೋತ ಕಥೆಯನ್ನು ಅದೆಷ್ಟು ಬಾರಿ ಹೇಳಲಾಗುತ್ತದೆ ಎಂದರೆ, ಸಾಮಾನ್ಯ ಜನರು ಅದನ್ನೇ ಸರಿ ಎಂದು ಭಾವಿಸಿ ತಮ್ಮ ಹೆಂಡತಿಯನ್ನು ಪಣಕ್ಕೊಡ್ಡುವ ಹಕ್ಕು ದೊರೆತಿದೆ ಎಂಬಂತೆ ಭಾವಿಸುತ್ತಾರೆ. ರಾಮಸೀತೆಯ ನಾಡು ಉತ್ತರ ಪ್ರದೇಶದ ಜೌನ್‌ಪುರದ ಒಬ್ಬ ಪತಿ ತನ್ನ ಹೆಂಡತಿಯನ್ನು ಒಂದು ಸಲವಲ್ಲ, 2 ಸಲ ಪಣಕ್ಕೊಡ್ಡಿ ಸೋತುಬಿಟ್ಟ.

ಜಾಫರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಜುಲೈ 2019ರಲ್ಲಿ ದಾಖಲಾದ ಒಂದು ವರದಿಯ ಪ್ರಕಾರ, ಜೂಜಾಟದ ಚಟವಿದ್ದ ಕುಡುಕ ಪತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಜೂಜಾಟ ಆಡುತ್ತ ಎಲ್ಲವನ್ನೂ ಸೋತ. ಕೊನೆಗೆ ತನ್ನ ಹೆಂಡತಿಯನ್ನು ಪಣಕ್ಕೊಡ್ಡಿದ. ತಾನು ಸೋತ ಬಳಿಕ ಯಾರಾದರೂ ಕೃಷ್ಣ ಬಂದು ಹೆಂಡತಿಯನ್ನು ಕಾಪಾಡುತ್ತಾನೆ ಎಂದು ಅವನು ಭಾವಿಸಿದ್ದ. ಆದರೆ ಯಾರೂ ಬರಲಿಲ್ಲ. ಮತ್ತೊಂದು ದುರಂತದ ಸಂಗತಿಯೆಂದರೆ, ಆ ಇಬ್ಬರು ಸ್ನೇಹಿತರು ಇವನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿದರು.

ನೊಂದ ಪತ್ನಿಗೆ ಗಂಡನ ಮನೆ ಬಿಟ್ಟು ಹೋಗುವುದರ ಹೊರತು ಬೇರೇನೂ ಉಪಾಯವಿರಲಿಲ್ಲ. ಗಂಡ ಯಾವ ಧರ್ಮನಿಷ್ಟ ಕೆಲಸ ಮಾಡಿದ್ದನೊ, ಹೆಂಡತಿಯ ದೃಷ್ಟಿಯಲ್ಲಿ ಅದು ಯಾವುದೇ ಅಪರಾಧ ಆಗಿರಲಿಲ್ಲ. ಅವಳು ಗಂಡನ ವಿರುದ್ಧ ಪೊಲೀಸ್‌ ಠಾಣೆಗೆ ದೂರೂ ನೀಡಲಿಲ್ಲ ಹಾಗೂ ಗಂಡನಿಂದ ವಿಚ್ಛೇದನ ಕೂಡ ಕೇಳಲಿಲ್ಲ. ಆಕೆ ಮನೆಬಿಟ್ಟು ಹೋದ ಬಳಿಕ ಗಂಡ ತಪ್ಪಾಯ್ತು ಎಂದು ಅವಳನ್ನು ತನ್ನ ಮನೆಗೆ ಕರೆತಂದ.

ಹೆಂಡತಿ ತನ್ನ ಆಸ್ತಿ, ತನ್ನ ಕೈ ಗಡಿಯಾರ, ಕಾಲಿನ ಚಪ್ಪಲಿ ಎಂದೇ ಗಂಡ ಭಾವಿಸಿದ್ದ. ಅವನು ಪುನಃ ಧರ್ಮರಾಯನಾಗಿ ಹೆಂಡತಿಯನ್ನು ಪಣಕ್ಕೊಡ್ಡಿದ. ಈ ಸಲ ದ್ರೌಪದಿ ಕೆರಳಿದಳು. ಅವಳು ಸೀದಾ ಪೊಲೀಸ್‌ ಸ್ಟೇಶನ್ನಿಗೆ ತೆರಳಿ ದೂರು ಕೊಟ್ಟಳು.

ಅಪರಾಧಿಗಳನ್ನು ಬಂಧಿಸಲಾಯಿತು. ಆದರೆ ಮುಂದೇನಾಗುತ್ತದೆ? ಏನೂ ಇಲ್ಲ. ಮಹಿಳೆ ಅನಿವಾರ್ಯವಾಗಿ ವಾಪಸ್ಸಾಗಲೇ ಬೇಕಾಗುತ್ತದೆ.

ರಾಮಾಯಣ, ಮಹಾಭಾರತದ ಹೆಸರಿನ ಮೇಲೆ ಕಥೆಗಳನ್ನು ಅದೆಷ್ಟು ಬಾರಿ ನೆನಪಿಸಲಾಗುತ್ತದೆ ಎಂದರೆ, ಮಹಿಳೆ ತನ್ನ  ಜೀವಮಾನವಿಡೀ ಗಂಡನ ಆದೇಶ ಪಾಲಿಸಲು ಸದಾ ಸನ್ನದ್ಧಳಾಗಿ ಇರಬೇಕಾಗುತ್ತದೆ. ವಿಚ್ಛೇದನ ಬೇಕೆಂದಾಗ ನ್ಯಾಯಾಲಯಗಳಂತೂ ಕೊಡುವುದೇ ಇಲ್ಲ. ಗಂಡನಿಲ್ಲದೆ ಹೆಂಡತಿ ದುರ್ಬಲಳು, ನಿಸ್ಸಹಾಯಕಳು ಎಂಬ ಮಾತು ಅವರ ಮೆದುಳಿನಲ್ಲಿ ಕುಳಿತುಬಿಟ್ಟಿದೆ. ಈ ಸಾಮಾಜಿಕ ದುರ್ಗತಿಗೆ ಬಿಜೆಪಿ ಸರ್ಕಾರವಂತೂ ಏನೂ ಮಾಡಲಾಗದು. ಮಹಿಳೆಯರೇ ಈ ನಿಟ್ಟಿನಲ್ಲಿ ಮುಂದೆ ಬರಬೇಕು. ಆದರೆ ಅವರು ಹೇಗೆ ಬರಲು ಸಾಧ್ಯ? ಪೂಜೆಪುನಸ್ಕಾರಗಳು ವ್ರತಗಳು, ನಂತರ ಸೇವೆ, ತೀರ್ಥಯಾತ್ರೆಗಳು ಮತ್ತು ಜಲಾಭಿಷೇಕದಿಂದ ಪುರಸತ್ತು ಸಿಕ್ಕರೆ ತಾನೇ?

ವಿದ್ಯುತ್‌ ಉಚಿತ ಮಹಿಳೆಯರು ನಿರಾಳ

ದೆಹಲಿಯಲ್ಲಿ  2 ವಿದ್ಯುದ್ದೀಪ, 1 ಟಿವಿ, 1 ಫ್ಯಾನ್‌, 1 ಫ್ರಿಜ್‌, 1 ಕೂಲರ್‌ ಹಾಗೂ 1 ಕಂಪ್ಯೂಟರ್‌ಗೆ ಸಾಕಾಗುವಷ್ಟು 200 ಯೂನಿಟ್‌ ತನಕದ ವಿದ್ಯುತ್‌ನ್ನು ಉಚಿತವಾಗಿ ಕೊಡುವ ಅರವಿಂದ್‌ ಕೇಜ್ರಿವಾಲ್‌ ಸರ್ಕಾರದ ನಿರ್ಧಾರ ಚಾತುರ್ಯದಿಂದ ಕೂಡಿದೆ. ಸುಮಾರು 4-5 ಲಕ್ಷ ಬಳಕೆದಾರರಿಗೆ ಇದರ ಲಾಭ ದೊರಕಲಿದೆ.

ದೆಹಲಿಯ ಶೇ.33ರಷ್ಟು ಮನೆಗಳಲ್ಲಿ 200ಕ್ಕೂ ಕಡಿಮೆ ಯೂನಿಟ್‌ ಖರ್ಚಾಗುತ್ತದೆ. ಇಷ್ಟು ಯೂನಿಟ್‌ಗೆ 600-700 ರೂ. ಸಂದಾಯ ಮಾಡಲಾಗುತ್ತಿತ್ತು. ಈವರೆಗೆ ರೂ.1000ಕ್ಕೂ ಹೆಚ್ಚು ಬಿಲ್‌ ತುಂಬುವವರು ಇನ್ನು ಮುಂದೆ 200ಕ್ಕೂ ಕಡಿಮೆ ಯೂನಿಟ್‌ ಬಳಸಲು ಯೋಚಿಸಬಹುದು.

ಇದರಿಂದ ಸರ್ಕಾರಕ್ಕೆ 1400 ಕೋಟಿ ರೂ. ಖರ್ಚು ಬರಬಹುದು. 60,000 ಕೋಟಿ ರೂ. ಬಜೆಟ್‌ನಲ್ಲಿ ಇದೇನು ಅಷ್ಟು ಹೊರೆಯಲ್ಲ. ಬಿಲ್ ಪ್ರತಿ ಮುದ್ರಿಸಲು, ಹಣ ವಸೂಲಿ ಮಾಡಲು 50-100 ರೂ. ಖರ್ಚು ಆಗಿಯೇ ಆಗುತ್ತಿತ್ತು. ಇನ್ಮುಂದೆ ಅದು ಸರ್ಕಾರಕ್ಕೆ ಉಳಿತಾಯವಾಗುತ್ತದೆ.

ಸರ್ಕಾರ ಅಲ್ಲಲ್ಲಿ ವೈಫೈ ಉಚಿತವಾಗಿ ನೀಡುತ್ತಿದೆ. ಅದನ್ನು ಬಳಸುವುದರ ಮೂಲಕ ಜನರು ಸರ್ಕಾರದ ಋಣದಲ್ಲಿರಬೇಕಾದರೆ ಬಡವರಿಗೆ ವಿದ್ಯುತ್‌ ಕೊಡುವುದು ತಪ್ಪೇನಲ್ಲ, ಬಡ ಮಹಿಳೆಯರಿಗೆ ಇದೊಂದು ರೀತಿಯಲ್ಲಿ ವರದಾನವೇ ಹೌದು. ಮಕ್ಕಳು ಕೂಡ ಇನ್ಮುಂದೆ ಎಷ್ಟು ಬೇಕಾದರೂ ಓದಬಹುದು.

ಸರ್ಕಾರಗಳು ಜನಹಿತಕ್ಕಾಗಿ ಪಾರ್ಕ್‌ ನಿರ್ಮಿಸುತ್ತಲೇ ಅದರ ಉಪಯೋಗಕ್ಕೆ ಜನರಿಂದೇನೂ ಶುಲ್ಕ ಪಡೆಯುವುದಿಲ್ಲ. ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗುತ್ತದೆ. ಅವನ್ನು ಬಳಸಲು ಹಣವನ್ನೇನೂ ಕೇಳುವುದಿಲ್ಲ. ಶಾಲೆ-ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. `ತೆರಿಗೆದಾರರ ಜೇಬಿಗೆ ಕನ್ನ’ ಎಂದು ಯಾರು ಇದನ್ನು ಹೇಳುತ್ತಿದ್ದಾರೊ, ಅವರು ಒಂದು ಸಂಗತಿ ಮರೆಯುತ್ತಿದ್ದಾರೆ. ಇನ್ಮುಂದೆ ತಮ್ಮ ಉದ್ಯೋಗಗಳು ಹೆಚ್ಚು ಸುರಕ್ಷಿತ, ಸುಖಿ ಹಾಗೂ ಪ್ರೊಡಕ್ಟಿವ್‌ ಎಂದು ಭಾವಿಸಬೇಕು.

ಜನಹಿತ ಕೆಲಸ ಎಂದರೆ ಕಾವಡಿ ಯಾತ್ರೆ ಅಥವಾ ಪಟೇಲ್‌ ಮೂರ್ತಿ ಅನಾವರಣ, ಮನ್‌ ಕೀ ಬಾತ್‌ನ ಒತ್ತಾಯಪೂರ್ವಕ ಪ್ರಸಾರ ಅಷ್ಟೇ ಅಲ್ಲ, ವಿದ್ಯುತ್‌, ನೀರಿನ ವಿತರಣೆ ಕೂಡ ಆಗಿದೆ. ಸ್ವಚ್ಛ ಗಾಳಿಯ ಹಾಗೆ ಮಹಿಳೆಯರಿಗೆ ಒಂದಿಷ್ಟು ವಿದ್ಯುತ್‌ ಉಚಿತವಾಗಿ ದೊರೆತರೆ ತಪ್ಪೇನಿದೆ? ಇನ್ಮುಂದೆ ಅವರು ವಿದ್ಯುತ್‌ ಸಂಪರ್ಕ ಕಡಿತದ ಭಯದಿಂದ ಮುಕ್ತರಾಗುತ್ತಾರೆ.

Tags:
COMMENT