ಅಭಿಮಾನಿಗಳಿಗೇನೂ ಬರವಿಲ್ಲ :  ವೈಲಿನ್‌ಗಿಂತ ತುಸು ದೊಡ್ಡದಾದ ವಾದ್ಯ ಮಿಲೋ ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಇದೀಗ ಮಾನ್ಯ. ಚೀನಾದ ಲೂಶಾ ಫೇಂಗ್‌ ಇತ್ತೀಚೆಗೆ ವಿಯೆಟ್ನಾಮ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಇದನ್ನು ನುಡಿಸಿದಾಗ 22 ಸಾವಿರ ಯೂರೋಗಳ ನಗದು ಬಹುಮಾನ ಸಿಕ್ಕಿತು! ಇದೀಗ ಲೂಶಾ ಅಮೆರಿಕಾಕ್ಕೆ ವಲಸೆ ಹೋಗಿದ್ದಾಳೆ. ಚೀನಾ ಕ್ರಮೇಣ ಶ್ರೀಮಂತ ದೇಶ ಆಗುತ್ತಿದ್ದರೂ, ಅಲ್ಲಿ ಪ್ರತಿಭೆಗೆ ಮನ್ನಣೆ ಇಲ್ಲ.

 

ಐಕ್ಯತೆ ಹೀಗೆ ಬೆಳೆಸಿಕೊಳ್ಳಿ :  ಕೇವಲ ಅಕ್ಕಪಕ್ಕದ ಮನೆಯವರನ್ನೆಲ್ಲ ಸೇರಿಸಿಕೊಂಡು ರಾತ್ರಿಯಿಡೀ ಭಜನೆ ಮಾಡುವುದರಿಂದ ಭಾವೈಕ್ಯತೆ ಹೆಚ್ಚುವುದಿಲ್ಲ. ಎಲ್ಲರೂ ಬಯಲಲ್ಲಿ ಹೀಗೆ ಹಾಯಾಗಿ ಕುಳಿತು ಸಹಭೋಜನ ಮಾಡುವುದರಿಂದ ಹೆಚ್ಚುತ್ತದೆ. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ, ಹಾಡು ಕುಣಿತ ಮುಕ್ತವಾಗಿತ್ತು. ಅಮೆರಿಕಾದ ಎಲ್ವಿನ್‌ ನಗರದಲ್ಲಿ ಆಗಸ್ಟ್ ನಲ್ಲಿ ನಡೆದ ಸ್ಟಾಕ್‌ ಮ್ಯೂಸಿಕ್‌ ಫೆಸ್ಟಿವ್‌ನಲ್ಲಿ ಸಣ್ಣ ನಗರವಾದರೂ ಬಹು ಸಂಖ್ಯೆಯಲ್ಲಿ ಜನ ಸೇರಿದ್ದರು. ಇಲ್ಲಿ ಬಣ್ಣ, ಜಾತಿ, ಧರ್ಮಗಳ ಭೇದಭಾವ ಇರಲಿಲ್ಲ. ಸಾವಿರ ಕುಂದು ಕೊರತೆಗಳಿರಲಿ, ಇಂದಿಗೂ ಅಮೆರಿಕಾ ಎಲ್ಲರಿಗೂ ಪ್ರಿಯವಾಗುವುದು ಈ ಕಾರಣಗಳಿಗಾಗಿಯೇ!

ಇದಲ್ಲವೇ ಬದುಕುವ ಪರಿ? :  ಪುಟಾಣಿಗಳನ್ನು ಆಕರ್ಷಿಸಲೆಂದೇ ಮಕ್ಕಳ ಟಿವಿ ನಿಕಲ್ಡನ್‌ ಹಲವು ಬಗೆಯ ಪಾರ್ಟಿ ಏರ್ಪಡಿಸುತ್ತದೆ. ಈ ಪಾರ್ಟಿಗಾಗಿ ಮಕ್ಕಳು ಆ ಚ್ಯಾನೆಲ್‌ನಲ್ಲಿ ಬರುವ ಕಾರ್ಟೂನ್‌ ಪಾತ್ರಗಳಂತೆ ವಿವಿಧ ವೇಷ ಧರಿಸಿ ಬರುತ್ತಾರೆ. ಈ ಮಕ್ಕಳು ಅಲ್ಲಿ ಬಗೆಬಗೆಯ ಮನರಂಜನೆ ನೀಡಿ ಎಲ್ಲರನ್ನೂ ರಂಜಿಸುತ್ತಾರೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಇಂಥದೇ ಒಂದು ಪಾರ್ಟಿಯಲ್ಲಿ ಈ ಬಾರಿ ಮಕ್ಕಳ ಜೊತೆ ಹಿರಿಯರೂ ಪಾತ್ರಧಾರಿಗಳಾಗಿ ಮಿಂಚಿದರು. ಇಲ್ಲಿನ ತಾತಾ ನೋಡಿ, ಮಜವಾಗಿ ಫೋಟೋ ತೆಗೆಸಿಕೊಂಡು ಪೋಸ್‌ ನೀಡುತ್ತಿದ್ದಾರೆ, ಇವರ ಮೊಮ್ಮಕ್ಕಳು ಇಲ್ಲೇ ಎಲ್ಲೋ ಆಡುತ್ತಿರಬೇಕು.

ಫಿಟ್‌ ಆಗಿರಲು ತುಸು ವಿಭಿನ್ನವಾದುದನ್ನೇ ಮಾಡಿ : ಫಿಟ್‌ ಆಗಿರಲು ಕೇವಲ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌, ಏರೋಬಿಕ್ಸ್ ಹಳೆಯ ಕಾಲದ ಮಾತಾಯಿತು. ಇದೀಗ ಆ ಚಟುವಟಿಕೆಗಳ ಬದಲಾಗಿ ಜುಂಬಾ, ಆ್ಯಂಟಿಗ್ರಾವಿಟಿ ಯೋಗ, ಕಿಕ್‌ ಬಾಕ್ಸಿಂಗ್‌, ಟ್ರಾಂಪೊಲೀನ್‌ ಇತ್ಯಾದಿಗಳ ನೆರವು ಪಡೆಯಿರಿ. ಆಗ ಮಾತ್ರ ಈ ಷೋಡಶಿಯರಂತೆ ನೀವು ಬಳುಕಬಲ್ಲಿರಿ. ಇದರಲ್ಲಿ ಈಗ ಪೋಲ್ ಡ್ಯಾನ್ಸಿಂಗ್‌ ಕೂಡ ಸೇರಿದೆ, ಹಿಂದೆ ಅದು ಕೇವಲ ನೈಟ್‌ ಕ್ಲಬ್ಬಿಗೆ ಮಾತ್ರ ಸೀಮಿತವಾಗಿತ್ತು. ಸದಾ ನಸುನಗುತ್ತಾ, ಇತರರನ್ನೂ ನಕ್ಕುನಲಿಸುವ ಈ ಹೆಂಗಸರು ಹಿಂದಿನ ತಮ್ಮ ಸ್ಥೂಲ ದೇಹ ತ್ಯಜಿಸಿದ್ದಾರೆ. ಇವರನ್ನು ಕೆಣಕಲು ಹೋದವರಿಗೆ ರಪ್‌ ಎಂದು ತಿರುಗೇಟು ಬೀಳುತ್ತೆ ಹುಷಾರ್‌!

ಬಂದೂಕಿನ ಮೇಲೆ ನಿಯಂತ್ರಣ ಇರಲಿ : ಅಮೆರಿಕಾದಲ್ಲಿ ಭಾರಿ ಭಾರಿ ಜನವಿರೋಧ ಇದ್ದರೂ, ಸಾಮಾನ್ಯ ಜನ ಬಂದೂಕು ಖರೀದಿಸುವ ಹಕ್ಕಿನ ಮೇಲೆ ಯಾವುದೇ ನಿಯಂತ್ರಣ, ನಿಷೇಧ ಹೇರಿಲ್ಲ. ಇಂಥ ಜನರ ನಡುವೆ ಯಾವನೋ ಒಬ್ಬ ತಲೆಕೆಟ್ಟು ಕೈಗೆ ಬಂದೂಕು ಸಿಕ್ಕೊಡನೆ 10-20 ಮಂದಿಯನ್ನು ಯಾವ ಕಾರಣ ಇಲ್ಲದೆ ಸುಟ್ಟು ಕೊಲ್ಲುತ್ತಾನೆ. ಕೆಲವರೇನೋ ಸಿಕ್ಕಿಬೀಳುತ್ತಾರೆ, ಬಹುತೇಕರು ಆ ಮಂದಿ ಮಧ್ಯೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಮೆರಿಕಾದ ಸಂವಿಧಾನ ಹೀಗೆ ಯಾರು ಬೇಕಾದರೂ ಬಂದೂಕು ಚಲಾಯಿಸಬಹುದೆಂದು ಫ್ರೀಯಾಗಿ ಹಕ್ಕು ನೀಡಿರುವುದರಿಂದಲೇ ಇಂಥ ರಾದ್ಧಾಂತ ದಿನೇದಿನೇ ಹೆಚ್ಚುತ್ತಿದೆ. ಅದನ್ನು ವಿರೋಧಿಸಲೆಂದೇ ಅಲ್ಲಿನ ಸಂಸತ್ತಿನ ಮುಂದೆ ಇಂಥ ಜನಸಾಗರ ಹೀಗೆ ಸೇರಿದೆ, ಆದರೆ ಅಲ್ಲಿನ ಸರ್ಕಾರ ಮಾತ್ರ ಜಾಣಕಿವುಡು ತೋರುತ್ತಿದೆ.

ಪ್ರಾಣಿಗಳೂ ಮಾಡಲಾರವು ಇಂಥ ಕಸರತ್ತು : ಇದೀಗ ವಿಶ್ವದೆಲ್ಲೆಡೆ ಸರ್ಕಸ್‌ಗಳಲ್ಲಿ ಪ್ರಾಣಿಗಳ ಕಸರತ್ತು ಪ್ರದರ್ಶಿಸುವಂತಿಲ್ಲ ಎಂದಾದ ಮೇಲೆ, ಅಲ್ಲಿ ಕಲಾವಿದರನ್ನೇ ಪ್ರಾಣಿಗಳ ಚಮತ್ಕಾರ ತೋರಿಸುವಂತೆ ತರಬೇತುಗೊಳಿಸಿದ್ದಾರೆ. ಅವರುಗಳು ವಿಶಾಲ ವೇದಿಕೆಯ ಮೇಲೆ ಇಂಥ ನೂರಾರು ಬಗೆಯ ಕಸರತ್ತು ಮಾಡಿ ಪ್ರದರ್ಶಿಸುತ್ತಾರೆ. ಈ ಬಗೆಯ ಕಲೆ ದಿನೇ ದಿನೇ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ವಿಶ್ವದಲ್ಲೇ ಶ್ರೇಷ್ಠವೆನಿಸಿದ ಆಸ್ಕರ್‌ ಪ್ರಶಸ್ತಿ ನೀಡುವಾಗಲೂ ಇವರ ಈ ಬಗೆಯ ಸರ್ಕಸ್‌ ಪ್ರದರ್ಶಿಸಲಾಗುತ್ತದೆ, ಜೊತೆಗೆ ಬ್ಯಾಲೆ ಡ್ಯಾನ್ಸ್ ಮಜಾವಂತೂ ಇದ್ದೇ ಇರುತ್ತದೆ.

ಕೇವಲ ಚಾಕಲೇಟ್‌ ಹೀರೋಗಳಷ್ಟೇ ಮಿಂಚಲಾರರು : ಹೆಚ್ಚು ಹೆಚ್ಚು ಹಣ ಸೇರುತ್ತಿದ್ದಂತೆ ಚೀನಾದಲ್ಲೂ ಸಹ ಸೋಮಾರಿ, ಕೋಮಲ, ನಾಜೂಕಾದ ಸ್ಟೈಲಿಶ್‌ ಹುಡುಗರ ಒಂದು ಪೀಳಿಗೆ ರೂಪುಗೊಳ್ಳುತ್ತಿದೆ, ನಮ್ಮಲ್ಲಿ ಇಂಗ್ಲಿಷ್‌ ಮೀಡಿಯಂ ಪಬ್ಲಿಕ್‌ ಸ್ಕೂಲುಗಳಲ್ಲಿರುವಂತೆ! ಓದಿನಲ್ಲಿ ಚುರುಕು ಆದರೆ ದೈಹಿಕವಾಗಿ ದುರ್ಬಲರಾಗಿ ಇರುವವರಿಗೆಂದೇ ಅಲ್ಲಿ ಟ್ಯಾಂಗ್‌ ದೇನ್‌ ಒಂದು ಕೋರ್ಸ್‌ ಆರಂಭಿಸಿದ್ದಾರೆ. ಹಾಗಾಗಿ ಅವರುಗಳು ಬೀಜಿಂಗ್‌ನ ಕೊರೆಯುವ ಚಳಿಯಲ್ಲೂ ಸ್ವೆಟರ್‌ ರಹಿತರಾಗಿ ಅಂಗಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ವಯಸ್ಸಿನ ಅಡ್ಡಿಯಿಲ್ಲ.

Tags:
COMMENT