ಕಳೆದ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಇನ್ಮುಂದೆ ದೀಪಾವಳಿ ಖರೀದಿಯನ್ನು 5-6 ದಿನಗಳ ಮುಂಚೆಯೇ ಮುಗಿಸಿಬಿಡಬೇಕು, ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರುದ್ರೇಶ್ ನಿರ್ಧರಿಸಿಬಿಟ್ಟಿದ್ದರು. ಕಳೆದ ದೀಪಾವಳಿ ಹಬ್ಬದ ಮುಂಚೆ ತಮ್ಮದೇ ನಗರದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ನಲುಗಿಹೋಗಿದ್ದರು.
ಅವರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಇತ್ತು. ಹೀಗಾಗಿ ಅವರು ಆಫೀಸ್‌ನಿಂದ ಹೊರಡುತ್ತಿದ್ದಂತೆ ಶಾಪಿಂಗ್ ಹೋಗುವುದಾಗಿ ನಿರ್ಧರಿಸಿದರು. ಅವರು ಪತ್ನಿಗೆ ಮೊದಲೇ ಕಾಲ್ ಮಾಡಿ, ``7 ಗಂಟೆಗೆ ಸರಿಯಾಗಿ ರೆಡಿ ಇರು. ನಾನು ಹೊರಗಡೆ ಬಂದು ಹಾರ್ನ್ ಹಾಕ್ತಿದ್ದಂತೆ ಕಾರಿನಲ್ಲಿ ಬಂದು ಕುಳಿತುಕೊಳ್ಳಬೇಕು. ಹೋಗುವಾಗ ಅಲ್ಲಿಯೇ ಎಲ್ಲಿಯಾದರೂ ತಿಂಡಿ ತಿನ್ನೋಣ,'' ಎಂದು ಹೇಳಿದರು.
ಅವರು ಹೇಳಿದಂತೆಯೇ ಸರಿಯಾದ ಸಮಯದಲ್ಲಿ ಮನೆಗೆ ಬಂದರು. ಹೆಂಡತಿ ಹಾಗೂ ಇಬ್ಬರು ಮಕ್ಕಳು ಕೂಡ ಕಾರಿನಲ್ಲಿ ಹತ್ತಿ ಕುಳಿತರು. 3 ಕಿ.ಮೀ. ದೂರ ಸಾಗುತ್ತಿದ್ದಂತೆ ಟ್ರಾಫಿಕ್‌ನಲ್ಲಿ ಸಿಲುಕಿಬಿಟ್ಟರು. ರಸ್ತೆಯ ಉದ್ದಕ್ಕೂ ದೀಪ ಮಾಲೆಗಳು ಗೋಚರಿಸುತ್ತಿದ್ದವು. ಅಲ್ಲಿ ಪಟಾಕಿಗಳು ಸಿಡಿಯುತ್ತಿದ್ದವು. ರುದ್ರೇಶ್ ಒಮ್ಮೆ ತಮ್ಮನ್ನು ಹಾಗೂ ಇನ್ನೊಮ್ಮೆ ಟ್ರಾಫಿಕ್‌ನ್ನು ಹಳಿಯುತ್ತಿದ್ದರು. ಇನ್ನೊಂದೆಡೆ ಹೆಂಡತಿ ಹಾಗೂ ಮಕ್ಕಳು ಕೂಡ ಟ್ರಾಫಿಕ್‌ನಿಂದಾಗಿ ಬೇಸತ್ತು ಹೋಗಿದ್ದರು. ಮುಂದಿನ ಒಂದು ವಾಹನ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇನ್ನೇನು ಟ್ರಾಫಿಕ್ ಕ್ಲಿಯರ್ ಆಯ್ತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಅದೇ ಹಾಡು ಎಂಬಂತಾಗುತ್ತಿತ್ತು.
ಅವರು ಟ್ರಾಫಿಕ್ ವ್ಯವಸ್ಥೆ, ಸರ್ಕಾರ, ಏಕಕಾಲಕ್ಕೆ ಎಲ್ಲರೂ ಮಾರುಕಟ್ಟೆಗೆ ದಾಳಿ ಇಡುವುದು ಹಾಗೂ ಪರಂಪರೆಯನ್ನು ಹಳಿದರೂ, ಹೆಚ್ಚಾಗಿ ಹಳಿದುಕೊಂಡದ್ದು ತಮ್ಮನ್ನೇ! ದೀಪಾವಳಿಯಂತಹ ಮಹತ್ವದ ಹಬ್ಬದ ಖರೀದಿಯನ್ನು 5-6 ದಿನಗಳ ಮುಂಚೆಯೇ ಮಾಡಿ ಮುಗಿಸಿದ್ದರೆ ತಾವು ಹೀಗೆ ರಸ್ತೆ ಮಧ್ಯೆ ಸಿಲುಕಿಕೊಂಡು ಮುಂದೆಯೂ ಹೋಗುವ ಹಾಗಿರಲಿಲ್ಲ, ಹಿಂದೆ ವಾಪಸ್ ಹೋಗಲು ಸಾಧ್ಯವಿರಲಿಲ್ಲ ಎಂದು ಕಷ್ಟಪಡುವ ಅಗತ್ಯವಿರುತ್ತಿರಲಿಲ್ಲ.
ಮಕ್ಕಳು ಆಗಲೇ ಹಸಿವಿನಿಂದ ಕಂಗಾಲಾಗಿ ಹೋಗಿದ್ದರು. ದೊಡ್ಡ ಮಗನಿಗೆ ಅಂಗಡಿಗಳು ಎಲ್ಲಿ ಮುಚ್ಚಿಬಿಡುತ್ತವೋ ಎಂಬ ಆತಂಕ, ಚಿಕ್ಕವನಿಗೆ ಹಸಿವು.
ದೀಪಾವಳಿಯ ಖುಷಿ ಒಂದು ದಿನದ ಮುಂಚೆಯೇ ಠುಸ್ಸಾಗಿತ್ತು. ಅವರು ಅಂಗಡಿ ಹತ್ತಿರ ಹೋದಾಗ 10 ಗಂಟೆ ಆಗಿಬಿಟ್ಟಿತ್ತು. ಮೊದಲು ಅವರು ಮಗನಿಗೆ ತಿಂಡಿ ಕೊಡಿಸಿದರು. ಬಳಿಕವೇ ಖರೀದಿಗಿಳಿದರು. ತಿಂಗಳ ಮೊದಲೇ ಏನೇನು ಖರೀದಿಸಬೇಕೆಂದು ಯೋಚಿಸಿದ್ದರೂ ಅದೆಲ್ಲ ಸರಿಯಾಗಿ ಆಗಲಿಲ್ಲ.
ಕಳೆದ ಸಲದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಗಮನದಲ್ಲಿಟ್ಟುಕೊಂಡು ಹಬ್ಬದ ಖರೀದಿಯನ್ನು ಇನ್ನು ಮುಂದೆ 5-6 ದಿನಗಳ ಮುಂಚೆಯೇ ಮುಗಿಸಬೇಕು ಹಾಗೂ ರಾತ್ರಿ ಮಾರ್ಕೆಟ್‌ಗೆ ಹೋಗುವ ಬದಲು ಮಧ್ಯಾಹ್ನವೇ ಹೊರಡಬೇಕೆಂದು ತೀರ್ಮಾನಿಸಿದರು. ವಾಹನದಲ್ಲಿ ಮಕ್ಕಳಿಗೆ ಏನಾದರೂ ತಿಂಡಿ ಹಾಗೂ ಕಾರಿಗೆ ಪೆಟ್ರೋಲ್ ಹಾಕಿಸುವ ಬಗ್ಗೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ನಿರ್ಧರಿಸಿದರು. ಕಳೆದ ಸಲ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ, ಕಾರಿಗೆ ಮೊದಲೇ ಪೆಟ್ರೋಲ್ ಹಾಕಿಸಿದ್ದು, ಇಲ್ಲದಿದ್ದರೆ ರಸ್ತೆ ಮಧ್ಯೆಯೇ ತುಂಬಾ ಕಿರಿಕಿರಿ ಅನುಭವಿಸಬೇಕಾಗುತ್ತಿತ್ತು.