ಲಾಕ್‌ಡೌನ್ ಕಾಲವಾದ್ದರಿಂದ ಮಧ್ಯಾಹ್ನ ಗಡದ್ದಾಗಿ ಉಂಡು ಮಲಗಿದ್ದೆ. ಸ್ವಲ್ಪ ಗೊರಕೆ ಹೊಡೆದು 4 ಗಂಟೆಗೆ ಎದ್ದು ಮನೆಯ ಅಂಗಳದಲ್ಲಿ ಅಡ್ಡಾಡೋಣ ಎಂದು ಹೊರಬರಲು ಹಾಲ್ ದಾಟಲು ಯತ್ನಿಸುತ್ತಿದ್ದೇನೆ.... ಅಲ್ಲಿ ಕಾಲಿಡಲಿಕ್ಕೂ ಜಾಗವಿಲ್ಲದಂತೆ ಏನೇನೋ ಹರಡಿಕೊಂಡಿತ್ತು.
ವಿವೇಕ ಕಂಟ್ರೊಲ್ ಮಾಡುತ್ತಿದ್ದರೂ ಮನಸ್ಸು ಚೀರುವಂತೆ ಪ್ರೇರೇಪಿಸಿತು, ``ಏನಿದು ಕರ್ಮ.... ಜನ ಮನೆಯಲ್ಲಿ ನೆಮ್ಮದಿಯಾಗಿ ಓಡಾಡೋದು ಬೇಡವೇ? ಹೀಗಾ ನೀನು ವಸ್ತುಗಳನ್ನು ಹರಡುವುದು?
''ಅತ್ತಲಿಂದ ಶ್ರೀಮತಿಯ ಉತ್ತರ ಅಷ್ಟೇ ಗಡುಸಾಗಿತ್ತು, ``ದಿನವಿಡೀ ಆರಾಮಾಗಿ ನಿದ್ದೆ ಮಾಡ್ತಾ ಇರ್ತೀರಿ. ಈಗ ಬಿಡುವಾಗಿದ್ದರೆ ನೀವೇ ಅದನ್ನೆಲ್ಲ ನೀಟಾಗಿ ಎತ್ತಿಟ್ಟು ಸಹಕರಿಸಬಾರದೇ?
''ಈಗ ಧೈರ್ಯ ತೆಗೆದುಕೊಂಡು ನಾನೂ ಗೊಣಗುಟ್ಟಿದೆ,
``ಈಗ ನೀನೂ ನನ್ನ ತರಹವೇ ವರ್ಕ್ ಫ್ರಂ ಹೋಂ ಅಂತ ದಿನವಿಡೀ ಮನೆಯಲ್ಲೇ ಇರ್ತೀಯಾ ತಾನೇ? ಇಂಥ ಶುಚಿತ್ವದ ಕೆಲಸಗಳನ್ನೆಲ್ಲ ನೀನೇ ಮಾಡೋದು ತಾನೇ?''
``ನೀವು ಮಾತ್ರ ದಿನವಿಡೀ ಗೊರಕೆ ಹೊಡೆಯೋದು ಬಿಟ್ಟು ಏನು ಕಡಿದು ಕಟ್ಟೆ ಹಾಕ್ತಿರೋದು? ಮನೆಯ ಕ್ಲೀನಿಂಗ್ ಕೆಲಸ ಮಾಡಿದರೆ ಕೈಗಳು ಸವೆದು ಹೋಗುತ್ತೇನೋ?'' ಅಂದುಕೊಂಡದ್ದಕ್ಕಿಂತಲೂ ಮಾತು ಮೊನಚಾಗಿತ್ತು.
ನಾನು ಎದೆ ಸೆಟೆಸಿ ಹೇಳಿದೆ, ``ಇದೆಲ್ಲ ನನ್ನ ಕೆಲಸಲ್ಲ... ನಾನು ಗಂಡಸು!''
ಆಗ ಸುಮಿ ಹತ್ತಿರ ಬಂದು ಹೇಳಿದಳು, ``ಹೌದೇ? ಯಾವ ಮಹಾ ಗ್ರಂಥದಲ್ಲಿ ಗಂಡಸರು ಮನೆಗೆಲಸ ಮಾಡಬಾರದು ಅಂತಿದೆ? ತೋರಿಸಿ ನೋಡೋಣ?''
``ಅದು ನಾನೇ ರಚಿಸಿದ ಗ್ರಂಥದಲ್ಲಿದೆ!''
ಸುಮಿ ಸೀರೆಯ ಸೆರಗನ್ನು ಎಳೆದು ಸೊಂಟಕ್ಕೆ ಸಿಗಿಸಿ ಪೂರ್ತಿ ತಯಾರಾಗುತ್ತಾ, ``ಓಹೋ... ಹಾಗೋ... ಹಾಗಿದ್ದರೆ ಗಂಡಸು ಮಾತ್ರ ಇಂತಿಂಥ ಕೆಲಸಗಳನ್ನು ಮಾಡಬೇಕು ಅಂತಲೂ ಬರೆದಿರಬೇಕಲ್ಲವೇ? ಅವೇನು ಅಂತ ಹೇಳಿ ನೋಡೋಣ!'' ಎಂದು ಎರಡೂ ಕೈ ತಟ್ಟುವಂತೆ ಒದರುತ್ತಾ ಸಿಡುಕಿದಳು.
``ಅದು.... ಅದು.... ಬೇಕಾದಷ್ಟು ಬರೆದಿದೆ. ಇದೆಲ್ಲ ನಿನ್ನಂಥವರಿಗೆ ಎಲ್ಲಿ ಗೊತ್ತಾಗಬೇಕು?''ಎಲ್ಲಿತ್ತೋ ಕೆಂಡಾಮಂಡಲ ಸಿಟ್ಟು, ಧುತ್ತೆಂದು ಅವಳ ಮುಖ ಆಕ್ರಮಿಸಿತು,
``ಕ್ವಾರಂಟೈನ್‌ನಲ್ಲಿದ್ದೀರಿ ಅಂತ ತುಸು ಜ್ಞಾನವಿರಲಿ. ಆದಷ್ಟೂ ಡಿಸ್ಟೆನ್ಸ್ ಮೇಂಟೇನ್ ಮಾಡಿ.''
``ಅದನ್ನೇ ನಾನೂ ಮಾಡ್ತಿರೋದು. ಅದಕ್ಕೆ ನೀನಿರುವ ಜಾಗ ಬಿಟ್ಟು ದೂರ ನಮ್ಮ ರೂಮಿಗೆ ಹೋಗಿ ಬಾಗಿಲು ಹಾಕ್ಕೋತೀನಿ. 24 ಗಂಟೆ ಒಟ್ಟಿಗಿದ್ದರೂ ಈ ಅಂತರ ಮಾತ್ರ ತಪ್ಪಲಿಲ್ಲ.....''
ನಾನು ಸುಮಿಯನ್ನು ಬಳಸಲು ಅವಳ ಹತ್ತಿರ ಸರಿದರೆ, ಅವಳು ಬೇಕೆಂದೇ ದೂರ ಸರಿಯುತ್ತಾ, ``ಇಂಥ ಬೇಕೂಫಿ ಕೆಲಸ ಮಾಡೋದು ಬಿಟ್ಟು ಸ್ವಲ್ಪ ಪ್ರಯೋಜನಕಾರಿ ಆಗುವ ಕೆಲಸ ಮಾಡಿ.''
``ಇದೂ ನಮ್ಮಿಬ್ಬರ ಬಾಂಧವ್ಯಕ್ಕೆ ಬೇಕಾದ ಕೆಲಸವೇ ಅಲ್ಲವೇ.....?'' ಕಣ್ಣು ಮಿಟುಕಿಸುತ್ತಾ ಹೇಳಿದೆ.
``ಈ ಕರ್ಮಕಾಂಡಗಳಿಗೇನೂ ಕೊರತೆ ಇಲ್ಲ. ಅದಕ್ಕಿಂತಲೂ ಒಂದು ರಾಶಿ ಮುಖ್ಯ ಕೆಲಸ ಬಾಕಿ ಇದೆ. ಮೊದಲು ಅದನ್ನು ಪೂರೈಸೋದು ನೋಡಿ. ಆಗಲೇ ರಾತ್ರಿಗೆ ಭೋಜನ!''
``ಆಗಲೇ ಹೇಳಿದೆನಲ್ಲ.... ಅದೆಲ್ಲ ನನ್ನಂಥ ಗಂಡಸರ ಕೆಲಸ ಅಲ್ಲ ಅಂತ!''
ಸುಮಿಗಂತೂ ಪಿತ್ತ ನೆತ್ತಿಗೇರಿತ್ತು, ``ಈಗೇನು.....? ಅಡುಗೆಮನೆಗೆ ಬಂದು ಅಲ್ಲಿ ಬಿದ್ದಿರೋ ರಾಶಿ ಪಾತ್ರೆ ಉಜ್ಜಿ ಹಾಕ್ತೀರೋ ಇಲ್ಲವೇ?'' ಕಟಕಟನೆ ಹಲ್ಲು ಕಡಿಯುತ್ತಿದ್ದಳು.