ಕಥೆ –  ಪೂರ್ಣಿಮಾ ಆನಂದ್‌

ಡಿಸೆಂಬರ್‌ ತಿಂಗಳು. ಈ ಬಾರಿ ಕಿಟಿ ಪಾರ್ಟಿ ಪದ್ಮಾಳ ಮನೆಯಲ್ಲಿತ್ತು. ತಮ್ಮ ಹೌಸಿ ಆಟದ ನಂಬರ್‌ ಬಂದಾಗಲೂ ಕೂಡ ಎಲ್ಲರಿಗಿಂತ ಹಿರಿಯರಾಗಿದ್ದ 55 ವರ್ಷದ ಶಾರದಮ್ಮ ಎಂದಿನಂತೆ ಖುಷಿಯಾಗಿರಲಿಲ್ಲ. ಉಳಿದ 9 ಸದಸ್ಯರು ಕಣ್ಣುಗಳಲ್ಲೇ ಆಂಟಿಗೆ ಏನಾಯಿತೆಂದು ಪ್ರಶ್ನಿಸಿಕೊಂಡಾಗ ಎಲ್ಲರೂ ತಮಗೆ ಗೊತ್ತಿಲ್ಲವೆಂದು ತಲೆಯಾಡಿಸಿದರು.

ಸದಸ್ಯರಲ್ಲಿ ಅತ್ಯಂತ ಕಿರಿಯಳು ಪದ್ಮಾ. ಅವಳು ಕೇಳಿದಳು, “ಆಂಟಿ ಏನಾಯ್ತು? ಬಂದಾಗಿನಿಂದ ಸಪ್ಪಗಿದ್ದೀರಿ?”

ಶಾರದಮ್ಮ ಬಲವಂತವಾಗಿ ನಗುತ್ತಾ, “ಇಲ್ಲ, ಅಂಥದ್ದೇನಿಲ್ಲ,” ಎಂದರು.

“ಇಲ್ಲ ಆಂಟಿ. ಏನೋ ವಿಷಯ ಇದೆ. ಹೇಳಿ,” ಕಾರುಣ್ಯಾ ಆಗ್ರಹಿಸಿದಳು.

“ಕಿರಣ್‌ ಚೆನ್ನಾಗಿದ್ದಾನಾ?” ಶಾರದಮ್ಮನ ಆತ್ಮೀಯ ಗೆಳತಿ ಅನಿತಾ ಕೇಳಿದರು.

“ಚೆನ್ನಾಗಿದ್ದಾನೆ. ಮೊದಲು ಈ ರೌಂಡ್‌ ಮುಗಿಸೋಣ.’’

”ಹೌಸಿ ಆಟದ ಮೊದಲ ರೌಂಡ್‌ ಮುಗಿದಾಗ ಪದ್ಮಾ ಕೇಳಿದಳು,

“ಹೊಸ ರ್ಷಕ್ಕೆ ನೀವುಗಳು ಏನು ಪ್ಲಾನ್‌ ಮಾಡ್ಕೊಂಡಿದ್ದೀರಿ?”

ಸುಮನಾ ಹೇಳಿದಳು,“ಇನ್ನೂ ಪ್ಲಾನ್‌ ಮಾಡಿಲ್ಲ. ನೋಡೋಣ ಸೊಸೈಟಿ ಏನಾದ್ರೂ ವ್ಯವಸ್ಥೆ ಮಾಡ್ತಾರಾ ಅಂತ.”

ಸುನೀತಾಳ ಗಂಡ ವಿನೋದ್‌ ಸೊಸೈಟಿಯ ಕಮಿಟಿ ಮೆಂಬರ್‌ ಆಗಿದ್ದರು. “ಈ ಬಾರಿ ಯಾವ ಪ್ರೋಗ್ರಾಂ ಇಲ್ಲಾಂತ ನಮ್ಮ ಯಜಮಾನರು ಹೇಳುತ್ತಿದ್ದರು,” ಸುನೀತಾ ಹೇಳಿದಳು.

ಅದಕ್ಕೆ ಸರಿತಾ ರೇಗುತ್ತಾ, “ಛೇ, ಸೊಸೈಟೀಲಿ ಎಷ್ಟು ಒಳ್ಳೆಯ ಪ್ರೋಗ್ರಾಂಗಳು ನಡೀತಿದ್ವು. ಹೊಸ ವರ್ಷದಂದು ಆಚೆ ಹೋಗಕ್ಕಾಗಲ್ಲ. ಆವತ್ತು ಹೋಟೆಲ್‌ಗಳಲ್ಲಿ ಬಹಳ ರಶ್‌ ಇರುತ್ತೆ. ಜೊತೆಗೆ ಕಾಸ್ಟ್ಲಿ ಕೂಡ. ಹಾಗೆ ಹೋದರೂ ಸಹ ಊಟ ಮಾಡಿ ವಾಪಸ್‌ ಬರೋದಷ್ಟೇ ನ್ಯೂ ಇಯರ್‌ ಸೆಲೆಬ್ರೆಷನ್‌  ಮುಗಿದುಹೋಯ್ತು. ಮಜಾನೇ ಇರಲ್ಲ. ಸೊಸೈಟೀಲಿ ಏನಾದರೂ ಪ್ರೋಗ್ರಾಂ ಇದ್ದಿದ್ರೆ ಚೆನ್ನಾಗಿತ್ತು,” ಎಂದಳು.

ಪದ್ಮಾ ಮತ್ತೆ ಕೇಳಿದಳು, “ಆಂಟಿ ನಿಮ್ಮದೇನು ಪ್ಲಾನ್‌? ಕಿರಣ್‌ ಮನೆಗೆ ಹೋಗ್ತೀರಾ?”

“ಇನ್ನೂ ಯೋಚನೆ ಮಾಡಿಲ್ಲ ಪದ್ಮಾ.”

ಹೌಸಿ ಆಡಿದ ನಂತರ ಎಲ್ಲರೂ ಇನ್ನೆರಡು ಆಟಗಳನ್ನು ಆಡಿ ತಿಂಡಿ ತಿಂದು ತಮ್ಮ ತಮ್ಮ ಮನೆಗೆ ಹೊರಟರು. ಶಾರದಮ್ಮ ಕೂಡ ಮನೆಗೆ ಬಂದರು. ಬಟ್ಟೆ ಬದಲಿಸಿ ಮಲಗಿಕೊಂಡರು. ಎದುರಿಗೆ ಗೋಡೆಯ ಮೇಲೆ ತೂಗುಹಾಕಿದ್ದ ಗಂಡ ಶೇಖರ್‌ರ ಫೋಟೋ ಮೇಲೆ ದೃಷ್ಟಿ ಬಿದ್ದಾಗ ಕಣ್ಣೀರಿನಿಂದ ದೃಷ್ಟಿ ಮಂಜಾಯಿತು.

ಶೇಖರ್‌ ತೀರಿಕೊಂಡು 7 ವರ್ಷಗಳಾಗಿದ್ದವು. ಹಾರ್ಟ್‌ ಅಟ್ಯಾಕ್‌ ಆಗಿ ತೀರಿಕೊಂಡಿದ್ದರು. ಒಬ್ಬನೇ ಮಗ ಕಿರಣ್‌ ಬೆಂಗಳೂರಿನಲ್ಲಿ ಎರಡು ಬೆಡ್‌ ರೂಮಿನ ಫ್ಲ್ಯಾಟ್‌ನಲ್ಲಿ ಇವರ ಜೊತೆಗೇ ಇದ್ದ. ಅಪ್ಪ ಸಾಯುವ 2 ತಿಂಗಳ ಹಿಂದೆ ಅವನ ಮದುವೆಯಾಗಿತ್ತು. ಕೆಲವು ತಿಂಗಳುಗಳ ನಂತರ ಸೊಸೆ ಅಂಜಲಿ ಬೇರೆ ಮನೆ ಮಾಡಲು ಬಯಸಿದಳು. ಅಂಜಲಿ ಅತ್ತೆಯೊಂದಿಗೆ ಎಂದಿಗೂ ಆ ಬಗ್ಗೆ ಮಾತನಾಡಲಿಲ್ಲ. ಆದರೆ ಕಿರಣನ ಮಾತುಗಳಿಂದ ಅವರಿಬ್ಬರೂ ಬೇರೆ ಇರಲು ಇಚ್ಛಿಸುತ್ತಾರೆಂದು ಶಾರದಮ್ಮನವರಿಗೆ ತಿಳಿಯಿತು. ಅವರು ಅಂಜಲಿಯನ್ನು ಯಾವಾಗಲೂ ಮಗಳಂತೆ ನೋಡುತ್ತಿದ್ದರು. ಅವಳು ತಪ್ಪು ಮಾಡಿದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಮಗೆ ಮಗಳಿಲ್ಲದ ಕೊರತೆಯನ್ನು ಅಂಜಲಿಯನ್ನು ಕಂಡು ಪೂರೈಸಿಕೊಳ್ಳುತ್ತಿದ್ದರು.

ಕಿರಣನ ಆಫೀಸ್‌ ತುಮಕೂರು ರಸ್ತೆಯಲ್ಲಿತ್ತು. ಅವನು ಅಮ್ಮನಿಗೆ ಹೇಳಿದ, “ಅಮ್ಮಾ, ಅಷ್ಟು ದೂರ ಹೋಗಿಬರಲು ಬಹಳ ಆಯಾಸವಾಗುತ್ತೆ. ಅದಕ್ಕೆ ಅಲ್ಲೇ ಒಂದು ಫ್ಲಾಟ್‌ ಕೊಂಡು ಇರೋಣ ಅಂದ್ಕೊಂಡಿದ್ದೀನಿ.”

“ನಿನಗೆ ಸರಿ ಅನ್ನಿಸಿದ ಹಾಗೆ ಮಾಡು. ಆದರೆ ಈ ಮನೇನ ಬಾಡಿಗೆಗೆ ಕೊಡೋ ಹಾಗಿದ್ರೆ ಎಲ್ಲಾ ಸಾಮಾನುಗಳನ್ನೂ ತಗೊಂಡು ಹೋಗಬೇಕಾಗುತ್ತೆ,” ಶಾರದಮ್ಮ ಹೇಳಿದರು.

“ಯಾಕಮ್ಮಾ, ಬಾಡಿಗೆಗೆ ಯಾಕೆ ಕೊಡಬೇಕು? ನೀವು ಇಲ್ಲೆ ಇರ್ತಿರಲ್ವಾ?” ಅದನ್ನು ಕೇಳಿ ಶಾರದಮ್ಮನವರಿಗೆ ಆಘಾತವಾಯಿತು. “ನಾನಿಲ್ಲಿ….? ಒಬ್ಬಳೇ?” ಎಂದರು.“

ಅಮ್ಮಾ, ನಾನಲ್ಲಿ ತಗೋತಿರೋದು ಸಿಂಗಲ್ ಬೆಡ್‌ರೂಮ್ ಮನೆ. ಅಲ್ಲಿ ಮನೆಗಳು ಬಹಳ ದುಬಾರಿ. ನೀವಿಲ್ಲಿ ಆರಾಮವಾಗಿರಿ. ಇಲ್ಲಿ ನಿಮಗೆ ಪರಿಚಿತರು ಬಹಳ ಜನ ಇದ್ದಾರೆ. ಅಲ್ಲಿ ನಿಮಗೆ ಈ ವಯಸ್ಸಿನಲ್ಲಿ, ಹೊಸ ಪರಿಸರದಲ್ಲಿ ಬಹಳ ಬೋರ್‌ ಆಗುತ್ತೆ. ನಾವು ಪ್ರತಿವಾರ ಬರುತ್ತಾ ಇರ್ತೀವಿ. ನೀವು ಆಗಾಗ್ಗೆ ಬರ್ತಾ ಇರಿ.”

ಆಮೇಲೆ ಶಾರದಮ್ಮ ಏನೂ ಹೇಳಲಿಲ್ಲ. ಕಣ್ಣೀರೆಲ್ಲಾ ಮನಸ್ಸಿನೊಳಗೆ ಹೆಪ್ಪುಗಟ್ಟಿತ್ತು. ಅವರು ಹೊರಗೆ ದುಃಖ ತೋರಿಸಿಕೊಳ್ಳಲಿಲ್ಲ. ನಂತರ ಕಿರಣ್‌ 2 ತಿಂಗಳೊಳಗೆ ಬೇರೆ ಮನೆಗೆ ಹೊರಟುಹೋದ. ಅಂಜಲಿಯ ಉತ್ಸಾಹ ನೋಡಬೇಕಿತ್ತು. ಶಾರದಮ್ಮನವರಿಗೆ ದುಡ್ಡಿನ ಕೊರತೆ ಇರಲಿಲ್ಲ. ಗಂಡ ಉನ್ನತ ಹುದ್ದೆಯಲ್ಲಿ ಇದ್ದರು. ಅವರು ಒಂದು ಅಂಗಡಿ ಖರೀದಿಸಿ ಬಾಡಿಗೆಗೆ ಕೊಟ್ಟಿದ್ದರು. ಬಾಡಿಗೆ ಹಾಗೂ ಉಳಿದ ಹಣದ ಮೊತ್ತದಿಂದ ಅವರ ಜೀವನ ಆರಾಮದಾಯಕವಾಗಿ ಸಾಗುತ್ತಿತ್ತು. ತಾಯಿಯನ್ನು ಬಿಟ್ಟು ಮಗ ಸೊಸೆ ತುಮಕೂರು ರಸ್ತೆಗೆ ಶಿಫ್ಟ್ ಆಗಿದ್ದರು. ಏನೇ ಆದರೂ ಶಾರದಮ್ಮ ಧೈರ್ಯವಂತೆ ಹಾಗೂ ಶಾಂತ ಸ್ವಭಾವದ ಮಹಿಳೆಯಾಗಿದ್ದರು. ಈ ಸೊಸೈಟಿಯಲ್ಲಿ 20 ವರ್ಷದಿಂದ ಸದಸ್ಯೆಯಾಗಿದ್ದರು. ಬಹಳಷ್ಟು ಜನ ಪರಿಚಿತರಾಗಿದ್ದರು. ಸುಶಿಕ್ಷಿತರಾಗಿದ್ದ ಅವರನ್ನು ಎಲ್ಲ ವಯೋಮಾನದವರೂ ಇಷ್ಟಪಡುತ್ತಿದ್ದರು. ಅವರಿಗೆ ಬಿಡುವಾಗಿದ್ದಾಗ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಡುತ್ತಿದ್ದರು. ಹೀಗೆ ಅವರಿಗೆ ಟೈಂಪಾಸ್‌ ಚೆನ್ನಾಗಿ ಆಗುತ್ತಿತ್ತು. ಅಂಜಲಿ ಗಂಡುಮಗುವಿಗೆ ಜನ್ಮವಿತ್ತಳು. ಮಗು ಹುಟ್ಟುವುದಕ್ಕೆ ಕೆಲ ದಿನಗಳ ಮುಂಚೆಯೇ ಕಿರಣ್‌ ಶಾರದಮ್ಮನವರನ್ನು ಕರೆದುಕೊಂಡು ಹೋಗಿದ್ದ. ಅಂಜಲಿಯ ತಂದೆತಾಯಿ ವಿದೇಶದಲ್ಲಿರುವ ತಮ್ಮ ಮಗನ ಜೊತೆಗೇ ಹೆಚ್ಚಾಗಿ ಇರುತ್ತಿದ್ದರು. ಶಾರದಮ್ಮ ತಮ್ಮ ಮೊಮ್ಮಗ ರಮಣ್‌ನನ್ನು ಚೆನ್ನಾಗಿ ನೋಡಿ ಕೊಂಡರು. ಅವನಿಗೆ 1 ತಿಂಗಳು ತುಂಬಿದಾಗ ಕಿರಣ್‌ ಶಾರದಮ್ಮನನ್ನು ಅವರ ಮನೆಗೆ ಬಿಟ್ಟುಬಂದ. ಮಗುವನ್ನು ಬಿಟ್ಟು ಹೋಗುವಾಗ ಶಾರದಮ್ಮನವರಿಗೆ ಹೃದಯ ಭಾರವಾಗಿತ್ತು. ಆದರೆ ಕೆಲವು ವರ್ಷಗಳಿಂದ ನಡೆಯುತ್ತಿರುವ ಘಟನೆಗಳಿಂದ ಅವರಿಗೆ ಬೇಸರವಾಗಿತ್ತು. ಹಬ್ಬಗಳು ಮತ್ತು ಕೆಲವು ಸಂದರ್ಭಗಳಲ್ಲಿ ಕಿರಣ್‌ ಬಂದು ಅವರನ್ನು ಕರೆದೊಯ್ಯುತ್ತಿದ್ದ. ಅವರೂ ಖುಷಿಯಿಂದ ಅವನ ಜೊತೆ ಹೋಗುತ್ತಿದ್ದರು. ಆದರೆ ಅವನ ಮನೆಗೆ ಹೋಗುತ್ತಲೇ ಅಡುಗೆ ಮನೆಯ ಕೆಲಸ ಅವರಿಗೆ ಒಪ್ಪಿಸಿ ಇಬ್ಬರೂ ಶಾಪಿಂಗ್‌ ಮಾಡಲು, ಗೆಳೆಯರನ್ನು ಭೇಟಿಯಾಗಲು ಹೊರಟುಬಿಡುತ್ತಿದ್ದರು. ಹೋಗುವಾಗ ಇಬ್ಬರೂ ತಮಗೆ ಇಷ್ಟವಾದ ತಿಂಡಿಗಳನ್ನು ಮಾಡಲು ಹೇಳುತ್ತಿದ್ದರು. ಎಲ್ಲ ಸಾಮಾನುಗಳನ್ನೂ ತೋರಿಸಿ ರಮಣ್‌ನನ್ನೂ ಅವರ ಜೊತೆ ಬಿಟ್ಟುಹೋಗುತ್ತಿದ್ದರು. ಮಗುವನ್ನು ಸಂಭಾಳಿಸುವುದು, ಅಡುಗೆ ಕೆಲಸ ಮಾಡುವುದು ಇತ್ಯಾದಿಗಳಿಂದ ಅವರ ಪರಿಸ್ಥಿತಿ ಹಾಳಾಯಿತು. ಕೆಲಸ ಮುಗಿದ ಕೂಡಲೇ ಅವರನ್ನು ವಾಪಸ್‌ ಮನೆಗೆ ಬಿಡುತ್ತಿದ್ದ. ಮನೆಯಲ್ಲಿ ಅವರು ಎಲ್ಲ ಕೆಲಸಗಳನ್ನೂ ಒಬ್ಬರೇ ಮಾಡಿ ಮುಗಿಸುತ್ತಿದ್ದರು.

ಮೊನ್ನೆ ದೀಪಾವಳಿಯಲ್ಲೂ ಹೀಗೇ ಆಯಿತು. ಮಗನ ಮನೆಯಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಅಡುಗೆಮನೆಯಲ್ಲಿ ನಿಂತುಕೊಂಡೇ ಅಡುಗೆ, ತಿಂಡಿ, ಸ್ವೀಟ್ಸ್ ಇತ್ಯಾದಿ ಮಾಡಿ ಮಾಡಿ  ಶಾರದಮ್ಮ ದಣಿದುಹೋದರು. ಹಾಲ್‌ಗೆ ಬಂದಾಗ ಒಳಗಡೆ ರೂಮಿನಲ್ಲಿ ಸೊಸೆ ಹೇಳುತ್ತಿದ್ದುದು ಕೇಳಿಸಿತು,

“ಕಿರಣ್‌, ಅಮ್ಮನನ್ನು ಇವತ್ತೇ ಮನೆಗೆ ಬಿಟ್ಬಿಡಿ. ಎಲ್ಲ ಕೆಲಸ ಮುಗೀತು. ಅವರು ಮನೇಲಿ ಆರಾಮವಾಗಿ ರೆಸ್ಟ್ ತಗೋಬಹುದು.”

ಅವರ ಗರ್ಭದಲ್ಲಿ ಜನಿಸಿದ ಏಕೈಕ ಪುತ್ರ ದೀಪಾವಳಿಯಂದು ಸಂಜೆ ಅವರನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟುಹೋದಾಗ ಅವರ ಮನಸ್ಸು ಕಲ್ಲಾಯಿತು. ಎಲ್ಲ ಸಂಬಂಧಗಳೂ ಮಿಥ್ಯೆ ಅನ್ನಿಸತೊಡಗಿತು. ಎಲ್ಲಿಯವರೆಗೆ ಮಗ ಸೊಸೆಯಿಂದ ಮೂರ್ಖರಾಗುವುದು? ಒಂದು ವೇಳೆ ಅವರಿಗೆ ತಾಯಿಯ ಅಗತ್ಯವಿಲ್ಲ ಎಂದಾದರೆ ಈಗ ತಮಗೆ ಯಾರೂ ಇಲ್ಲ ಎಂದು ಒಪ್ಪಿಕೊಳ್ಳಲಿ. ಎದುರಿನ ಫ್ಲಾಟ್‌ನ ಸರಿತಾ ಅವರು ಬೀಗ ತೆರೆಯುತ್ತಿರುವುದನ್ನು ಕಂಡು ಆಶ್ಚರ್ಯದಿಂದ, “ಆಂಟಿ ನೀವಿಲ್ಲಿ? ಕಿರಣ್‌ ಎಲ್ಲಿ?”

“ಅವನ ಮನೇಲಿದ್ದಾನೆ,” ಶಾರದಮ್ಮನವರಿಗೆ ಅಷ್ಟು ಮಾತ್ರ ಹೇಳಲು ಸಾಧ್ಯವಾಯಿತು. ಅವರು ಸರಿತಾಳನ್ನು ನೋಡಿದ ರೀತಿಯಿಂದ ಅವಳು  ಮರುಪ್ರಶ್ನೆ ಹಾಕಲಿಲ್ಲ. ಅವಳು ಹಬ್ಬದ ತಯಾರಿಗೆ ಸಹಾಯ ಮಾಡಿದಳು. ನಂತರ ಮನೆಯಿಂದ ಕೊಂಚ ಅಡುಗೆ ತಂದು ಬಲವಂತವಾಗಿ ತಿನ್ನಿಸಿದಳು. ಅಂದಿನ ನೋವು ನೆನೆದು ಶಾರದಮ್ಮನವರ ಕಣ್ಣುಗಳು ತುಂಬಿ ಬಂದವು.

ಇಂದು ಕಿಟಿ ಪಾರ್ಟಿಗೆ ಸಿದ್ಧರಾಗುತ್ತಿದ್ದಾಗ ಕಿರಣನ ಫೋನ್‌ ಬಂತು. “ಅಮ್ಮಾ, ನ್ಯೂ ಇಯರ್‌ಗೆ ನಮ್ಮ ಬಾಸ್‌ ಹಾಗೂ ಕೆಲವು ಕೊಲೀಗ್ಸ್ ಊಟಕ್ಕೆ ಮನೆಗೆ ಬರ್ತಿದ್ದಾರೆ. ನಿಮ್ಮನ್ನು ಕರೆದುಕೊಂಡು ಹೋಗೋಕ್ಕೆ ಬರ್ತಿದ್ದೀನಿ,” ಎಂದ.

ದೀಪಾವಳಿಯ ನಂತರ ಕಿರಣ್‌ ಇವತ್ತು ಫೋನ್‌ ಮಾಡ್ತಿದ್ದಾನೆ. ಇದರ ಮಧ್ಯೆ ಶಾರದಮ್ಮ ಏನಾದರೂ ಫೋನ್‌ ಮಾಡಿದರೆ, “ಅಮ್ಮಾ, ಬಹಳ ಬಿಝಿಯಾಗಿದ್ದೀನಿ. ಆಮೇಲೆ ಫೋನ್‌ ಮಾಡ್ತೀನಿ,” ಎನ್ನುತ್ತಿದ್ದ. ಅಂಜಲಿ ಕೆಲಸಕ್ಕೇನೂ ಹೋಗುತ್ತಿರಲಿಲ್ಲ. ಆದರೂ 1 ತಿಂಗಳು 2 ತಿಂಗಳಿಗೊಮ್ಮೆ ಬಹಳ ಔಪಚಾರಿಕವಾಗಿ ಫೋನ್‌ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಫೋನ್‌ ಶಬ್ದ ಕೇಳಿ ಶಾರದಮ್ಮ ಫೋನ್‌ ಎತ್ತಿಕೊಂಡರು. ಅಂಜಲಿ ಫೋನ್‌ ಮಾಡಿದ್ದಳು. ಅವರಿಗೆ ಆಶ್ಚರ್ಯವಾಗಿತ್ತು. “ಅಮ್ಮಾ ನಮಸ್ತೆ,” ಎಂದಳು.

“ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೀರಾ ಅಂಜಲಿ?”

“ಚೆನ್ನಾಗಿದ್ದೀವಿ. ನಿಮಗೆ ಕಿರಣ್‌ ಹೇಳಿರಬಹುದು. ಡಿಸೆಂಬರ್‌ 31ಕ್ಕೆ ನಮ್ಮ ಮನೆಗೆ ಕೆಲವು ಅತಿಥಿಗಳು ಬರ್ತಿದ್ದಾರೆ. 15-20 ಜನರ ಪಾರ್ಟಿ ಇಟ್ಕೊಂಡಿದ್ದೀವಿ. ಅಮ್ಮ ನೀವು 1 ದಿನ ಮೊದಲೇ ಬಂದುಬಿಡಿ. ಬಹಳಷ್ಟು ಐಟಂಗಳನ್ನು ಮಾಡಬೇಕು. ನನಗೆ ಅಡುಗೆ ಮಾಡೋದು ಅಷ್ಟು ಬರಲ್ಲ. ನೀವು ಮಾಡೋ ಅಡುಗೆ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ನೀವು ರೆಡಿಯಾಗಿರಿ. ಆಮೇಲೆ ಫೋನ್‌ ಮಾಡ್ತೀನಿ,” ಎಂದು ಅಂಜಲಿ ಫೋನ್‌ ಕಟ್‌ ಮಾಡಿದಳು.

ಶಾರದಮ್ಮ ಯೋಚಿಸುತ್ತಿದ್ದರು. ಮಕ್ಕಳು ಇಷ್ಟು ಚಾಲಾಕಿಗಳೂ, ನಿರ್ಮೋಹಿಗಳೂ ಏಕಾಗುತ್ತಾರೆ? ಅದೂ ತಮ್ಮ  ಸ್ವಂತ ತಾಯಿಯ ಮೇಲೆ. ನೀವು ಹೇಗಿದ್ದೀರಿ? ಒಬ್ಬರೇ ಹೇಗಿರ್ತೀರಿ? ಎಂದು ಯಾರೂ ಕೇಳುವುದಿಲ್ಲ. ಬರೀ ತಮ್ಮದೇ ಪ್ರೋಗ್ರಾಂ, ತಮ್ಮದೇ ಮಾತು. ಮಗನೇ ಇಷ್ಟು ಸೆಲ್ಛಿಶ್‌ ಆಗಿರುವಾಗ ಇನ್ನು ಸೊಸೆ, ಬೇರೇ ಮನೆಯಿಂದ ಬಂದವಳು. ಅವಳನ್ನು ಅಂದೇನು ಪ್ರಯೋಜನ? ಶಾರದಮ್ಮ ದೀರ್ಘವಾಗಿ ಉಸಿರೆಳೆದುಕೊಂಡರು. ಇನ್ನು ಮೇಲೆ ಸ್ವಾರ್ಥಿ ಮಗನ ಕೈಗೊಂಬೆಯಾಗಿ ಇರೋದಿಲ್ಲ. ಕಳೆದ ಬಾರಿ ಮಗನ ಮನೆ ಕೆಲಸಗಳನ್ನು ಮುಗಿಸುವಷ್ಟರಲ್ಲಿ ಸೊಂಟ ಹಿಡಿದುಕೊಂಡುಬಿಟ್ಟಿತ್ತು. ನೋವು ಕಡಿಮೆಯಾಗಲು 10 ದಿನಗಳು ಬೇಕಾಗಿತ್ತು. ಈಗ ಅವರಿಂದ ಅಷ್ಟು ಕೆಲಸಗಳು ಮಾಡಲಾಗುವುದಿಲ್ಲ.

ಮುಂದಿನ ಕಿಟಿ ಪಾರ್ಟಿ ರೇಖಾಳ ಮನೆಯಲ್ಲಿತ್ತು. ನ್ಯೂ ಇಯರ್‌ ಸೆಲೆಬ್ರೆಶನ್‌ ವಿಷಯ ಬಂದಾಗ ಸೀಮಾ ಹೇಳಿದಳು, “ಏನಾದರೂ ಪ್ರೋಗ್ರಾಂ ಇಟ್ಟುಕೊಳ್ಳೋಣ ಅಂದ್ರೆ ಮನೇಲಿ ಮಕ್ಕಳ ಸಾಮಾನು ತುಂಬಿಕೊಂಡಿದೆ. ನಮ್ಮ ಮನೇಲಿ ಪಾರ್ಟಿ ಮಾಡೋಕೆ ಜಾಗವೇ ಇಲ್ಲ. ಏನ್ಮಾಡೋದು?”

ರೇಖಾ ಕೇಳಿದಳು, “ಆಂಟಿ, ನಿಮ್ಮ ಪ್ರೋಗ್ರಾಂ ಏನು? ಕಿರಣನ ಮನೆಗೆ ಹೋಗ್ತೀರಾ ಆವತ್ತು?”

“ಇನ್ನೂ ಯೋಚನೆ ಮಾಡಿಲ್ಲ,” ಎಂದು ಶಾರದಮ್ಮ ಯೋಚನಾಮಗ್ನರಾದರು.

“ಆಂಟಿ, ಏನು ಯೋಚಿಸ್ತಿದ್ದೀರಿ?” ರೇಖಾ ಕೇಳಿದಳು.

“ಅದೇ…. ನೀವು ಇಷ್ಟಪಟ್ಟರೆ ನ್ಯೂ ಇಯರ್‌ ಪಾರ್ಟೀನ ನಮ್ಮ ಮನೇಲಿ ಇಟ್ಕೋಬಹುದು. ಮನೇಲಿ ನಾನೊಬ್ಬಳೇ ಇರೋದು. ನೀವು ಬಂದರೆ ನಮ್ಮ ಮನೆಗೂ ಕಾಂತಿ ಬರುತ್ತೆ.”

“ಏನೂ! ನಿಮ್ಮ ಮನೇಲಾ?” ಎಲ್ಲರೂ ಆಶ್ಚರ್ಯದಿಂದ ಕೇಳಿದರು.

“ಹೌದು. ಅದರಲ್ಲಿ ಆಶ್ಚರ್ಯ ಏನಿದೆ?” ಶಾರದಮ್ಮ ನಗುತ್ತಾ ಕೇಳಿದರು.

ಆಗ ಪದ್ಮಾ, “ವಾಹ್ ಆಂಟಿ, ಒಳ್ಳೆ ಐಡಿಯಾ ಕೊಟ್ಟಿದ್ದೀರಿ. ಆದರೆ ನೀವು ಮಗನ ಮನೆಗೆ…..”

ಶಾರದಮ್ಮ ಮಧ್ಯದಲ್ಲೆ ಹೇಳಿದರು, “ಈ ಬಾರಿ ಕೊಂಚ ಭಿನ್ನವಾಗಿ ಯೋಚಿಸ್ತಿದ್ದೀನಿ. ಹೊಸ ವರ್ಷದ ಆರಂಭವನ್ನು ನಮ್ಮ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸೋಣಾಂತ. ಊಟಾನ ಹೋಟೆಲ್‌ನಿಂದ ತರಿಸೋಣ. ನಿಮ್ಮಲ್ಲಿ ಊರಿಗೆ ಹೋಗದೆ ಇರೋರು ಮನೆಯವರೆಲ್ಲರ ಜೊತೆ ನಮ್ಮ ಮನೆಗೆ ಬಂದುಬಿಡಿ. ಕೆಲವು ಆಟಗಳನ್ನು ಆಡೋಣ. ನಂತರ ಊಟ ಮಾಡೋಣ…. ಬಹಳ ಮಜವಾಗಿರುತ್ತದೆ. ನಮ್ಮ ಗ್ರೂಪ್‌ ಎಲ್ಲಿದ್ದರೂ ಬಹಳ ಜೋರಾಗಿರುತ್ತದೆ.”

ಪದ್ಮಾ ಆಂಟಿಯನ್ನು ತಬ್ಬಿಕೊಂಡು, `ವ್ಹಾ ಆಂಟಿ, ನಿಮ್ಮ ಮನೇಲೇ ಪಾರ್ಟಿ ಮಾಡೋಣ! ಅಂತೂ ಜಾಗದ ಪ್ರಾಬ್ಲಂ ಸಾಲ್ವ್ ಆಯ್ತು,” ಎಂದಳು.

ಸರಿತಾ ಹೇಳಿದಳು, “ಆಂಟಿ, ನೀವೇನೂ ತೊಂದರೆ ತಗೋಬೇಡಿ. ನಾವೆಲ್ಲಾ ಸೇರಿ ನಿಭಾಯಿಸೋಣ. ಖರ್ಚನ್ನು ಎಲ್ಲರೂ ಶೇರ್‌ ಮಾಡಿಕೊಳ್ಳೋಣ.”

“ನ್ಯೂ ಇಯರ್‌ ಮಾತ್ರ ಯಾಕೆ, ನೀವು ಯಾವಾಗ ಪಾರ್ಟಿ ಮಾಡಬೇಕಿದ್ರೂ ನಮ್ಮ ಮನೇಲೇ ಮಾಡಿ. ನನಗೂ ನಿಮ್ಮ ಕಂಪನಿ ತುಂಬಾ ಇಷ್ಟ,” ಶಾರದಮ್ಮ ಹೇಳಿದರು.

“ಆದರೆ ಆಂಟಿ, ಕಿರಣ್‌ ಕರೆದುಕೊಂಡು ಹೋಗೋಕೆ ಬಂದರೆ?”

“ಇಲ್ಲ. ಈ ಸಾರಿ ನಾನು ಖಂಡಿತಾ ಇಲ್ಲೇ ಇರ್ತೀನಿ!”

ಎಲ್ಲರಿಗೂ ಬಹಳ ಖುಷಿಯಾಯಿತು. ಎಲ್ಲರೂ ಉತ್ಸಾಹದಿಂದ ಪ್ಲಾನ್‌ ಮಾಡಿಕೊಳ್ಳತೊಡಗಿದರು.

ಕೆಲವು ದಿನಗಳ ನಂತರ ಎಲ್ಲರೂ ಶಾರದಮ್ಮನವರ ಮನೆಯಲ್ಲಿ ಸೇರಿದರು. ಸುಮನಾ, ಸುನೀತಾ, ಸರಿತಾ ಅಂದು ಹೊರಗೆಹೋಗಿದ್ದರು. ಪದ್ಮಾ, ರೇಖಾ, ಸೀಮಾ, ಸರೋಜಾ ಕುಟುಂಬ ಸಮೇತ ಈ ಪಾರ್ಟಿಗೆ ಬರಲಿದ್ದರು. ಎಲ್ಲರ ಗಂಡಂದಿರು ಪರಸ್ಪರ ಒಳ್ಳೆಯ ಸ್ನೇಹಿತರಾಗಿದ್ದರು. ಶಾರದಮ್ಮ ಎಲ್ಲರಿಗೂ ಪರಿಚಿತರಾಗಿದ್ದರು. ಪಾರ್ಟಿಯ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದವು.

ಡಿಸೆಂಬರ್‌ 30ರ ಬೆಳಗ್ಗೆ ಕಿರಣನ ಫೋನ್‌ ಬಂತು, “ಅಮ್ಮಾ, ಇವತ್ತು ನಿಮ್ಮನ್ನು ಕರೆದುಕೊಂಡು ಹೋಗೋಕೆ ಬರ್ತಿದ್ದೀನಿ. ರೆಡಿಯಾಗಿರಿ,” ಎಂದ.

“ಇಲ್ಲ ಕಿರಣ್‌, ಈ ಸಾರಿ ನಾನು ಬರೋಕಾಗಲ್ಲ.”

“ಯಾಕೆ?”

“ಇಲ್ಲಿ ಏನೋ ಪ್ರೋಗ್ರಾ ಇದೆ.”

ಕಿರಣ್‌ ರೇಗಿದ, “ನಿಮ್ಮದೇನಮ್ಮಾ ಪ್ರೋಗ್ರಾಂ ಇರುತ್ತೆ? ಒಬ್ಬರೇ ಇದ್ದೀರಿ…..”

“ಒಬ್ಬಳೇ ಎಲ್ಲಿದ್ದೀನಿ. ಮನೇಲಿ ನಮ್ಮ ಫ್ರೆಂಡ್ಸ್ ಜೊತೆ ನ್ಯೂ ಇಯರ್‌ ಪಾರ್ಟಿ ಇಟ್ಕೊಂಡಿದ್ದೀನಿ.”

“ಅಮ್ಮಾ, ನಿಮ್ಮ ತಲೆ ಸರಿಯಾಗಿದೆ ತಾನೇ? ಈ ವಯಸ್ಸಿನಲ್ಲಿ ಪಾರ್ಟಿ ಏಕೆ ಇಟ್ಕೊಂಡ್ರಿ? ಇಲ್ಲಿ ಎಲ್ಲವನ್ನೂ ಮಾಡೋದ್ಯಾರು?”

“ವಯಸ್ಸಿನ ಬಗ್ಗೆ ನಾನು ಯೋಚನೆ ಮಾಡಿಲ್ಲ. ಈ ಸಾರಿ ನಿನ್ನ ಮನೆಗೆ ಬರೋಕಾಗ್ತಿಲ್ಲ ಅಷ್ಟೆ…..”

ಕಿರಣ್‌ ಸ್ವಲ್ಪ ಮೆತ್ತಗಾದ, “ಅಮ್ಮಾ, ಹಬ್ಬದ ದಿನ ಒಬ್ಬರೇ ಯಾಕಿರ್ತೀರಿ? ನಿಮ್ಮ ಮಗನ ಮನೇಲಿರೋದು ಚೆನ್ನಾಗಿರುತ್ತೆ ಅಲ್ವಾ?”

“ಒಬ್ಬಳೇ ಬಹಳ ವರ್ಷಗಳಿಂದ ಇದ್ದೀನಿ ಕಿರಣ್‌. ಇದೇನೂ ನನಗೆ ಹೊಸದಲ್ಲ. ಒಬ್ಬಳೇ ಇರೋದು ಅಭ್ಯಾಸವಾಗಿ ಹೋಗಿದೆ.”

ಕಿರಣ್‌ ಸಿಡುಕುತ್ತಾ, “ನಾನು ಹೇಳೋದು ಹೇಳಿದ್ದೀನಿ. ನಿಮ್ಮಿಷ್ಟ,” ಎಂದು ಫೋನ್‌ ಕುಕ್ಕಿದ.

ಕಿರಣ್‌ನ ಕೋಪ ಕಂಡು ಅಂಜಲಿ ಕೇಳಿದಳು, “ಏನಾಯ್ತು?”

“ಅಮ್ಮ ಬರಲ್ವಂತೆ.”

“ಯಾಕೆ?”

“ಮನೇಲಿ ಪಾರ್ಟಿ ಇಟ್ಕೊಂಡಿದ್ದಾರೆ.”

“ಹೌದಾ? ಯಾಕಂತೆ? ಈಗೇನ್ಮಾಡೋದು? ನಾನು ನಿಮ್ಮ ಆಫೀಸಿನವರಿಗೆಲ್ಲ ಅಡುಗೆ ಮಾಡಕ್ಕಾಗಲ್ಲ.”

“ಈಗ ನೀನೇ ಮಾಡಬೇಕು.”

“ಇಲ್ಲ ಕಿರಣ್‌….. ನನ್ನಿಂದ ಆಗಲ್ಲ.”

“ನಾನು ಎಲ್ಲರನ್ನೂ ಕರೆದುಬಿಟ್ಟಿದ್ದೀನಿ!”

“ಹೊರಗಡೆಯಿಂದ ತರಿಸಿ.”

“ಇಲ್ಲ. ಬಹಳ ದುಬಾರಿಯಾಗುತ್ತೆ.”

“ಇಲ್ಲ. ನನಗೆ ಖಂಡಿತಾ ಸಾಧ್ಯವಿಲ್ಲ.”

ಇದೇ ವಿಷಯಾಗಿ ಇಬ್ಬರಲ್ಲೂ ದೊಡ್ಡ ಜಗಳ ನಡೆಯಿತು. ಕೊನೆಯಲ್ಲಿ ಕಿರಣ್‌ ತನ್ನ ತಾಯಿಗೆ ಲೈಟ್‌ ಹಾರ್ಟ್‌ ಅಟ್ಯಾಕ್‌ ಆಗಿದ್ದರಿಂದ  ಪಾರ್ಟಿ ಕ್ಯಾನ್ಸಲ್ ಮಾಡಿ, ಅವರ ಯೋಗಕ್ಷೇಮಕ್ಕಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದೇನೆ ಎಂಬ ನೆಪ ಒಡ್ಡಿದ. ಇಬ್ಬರಿಗೂ ಈ ವಿಷಯವಾಗಿ ರೋಸಿಹೋಗಿತ್ತು.

ಕಿರಣ್‌ ಮತ್ತೆ ರೇಗಿದ, “ನೀನು ಅಮ್ಮನ ಜೊತೆ ಸ್ನೇಹ ಸಂಬಂಧ ಇರಿಸಿಕೊಂಡಿದ್ದರೆ, ಇಂದು ನನಗೆ ಹೀಗೆ ಎಲ್ಲರಿಗೂ ಸುಳ್ಳು ಹೇಳುವ ಅಗತ್ಯ ಬರುತ್ತಿರಲಿಲ್ಲ. ಅಮ್ಮನಿಗೆ ನಮ್ಮೊಂದಿಗೆ ಇಲ್ಲಿರುವುದೇ ಇಷ್ಟವಿಲ್ಲ. ಇಲ್ಲದಿದ್ದರೆ ಅಲ್ಲೇ ಒಂಟಿಯಾಗಿ ತಮ್ಮ ಪಾಡಿಗೆ ತಾವು ಏಕಿರುತ್ತಿದ್ದರು?”

ಅಂಜಲಿ ಥಟ್ಟನೆ ಉತ್ತರಿಸಿದಳು, “ನೀವೆಂಥ ಮಗ ಕಣ್ರಿ….. ಸ್ವಂತದ ಕೆಲಸ ಆಗಬೇಕು ಅಂದಾಗ ಮಾತ್ರ ನಿಮ್ಮ ಸ್ವಾರ್ಥಕ್ಕಾಗಿ ಅವರಿಗೆ ಫೋನ್‌ ಮಾಡ್ತೀರಿ. ನಿಮಗಿಲ್ಲದ ಅಕ್ಕರೆ ನನಗೆಲ್ಲಿಂದ ಬರಬೇಕು?”

ಹೀಗೆ ಇವರಿಬ್ಬರ ಕಿತ್ತಾಟ ಕೊನೆ ಮೊದಲಿಲ್ಲದೆ ಸಾಗಿತ್ತು.

ಅತ್ತ ಶಾರದಮ್ಮ ತಮ್ಮ ಅಕ್ಕಪಕ್ಕದವರು, ಹಿತೈಷಿಗಳೊಂದಿಗೆ ಕೂಡಿ ತಮ್ಮದೇ ಆದ ರೀತಿಯಲ್ಲಿ ಹೊಸ ವರ್ಷ ಆಚರಿಸುತ್ತಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ