ಕಥೆ – ಕೆ. ಕುಮುದಾ

“ಈ ಉಪಾಯ ಫಲಿಸುತ್ತದೆ ಎಂದು ನಿನಗೆ ನಂಬಿಕೆ ಇದೆಯಾ?” ಪ್ರಶಾಂತ್‌ ರಾಜೀವನನ್ನು ಕೇಳಿದ.

“ನನಗೆ ತಿಳಿದಂತೆ ಬಹುತೇಕ ಯಶಸ್ವಿ ಆಗುತ್ತದೆ. ನೀನು ಯಾವುದಕ್ಕೂ ಒಮ್ಮೆ  ಪ್ರಯತ್ನಿಸಿ ನೋಡು. ನಿನ್ನನ್ನು ಅವಳೂ, ಅವಳನ್ನು ನೀನೂ ನಿಜವಾಗಿಯೂ ಇಷ್ಟಪಡುವಿರೆಂದು ಆದಲ್ಲಿ ಇದು ಖಂಡಿತಾ ಸಾಧ್ಯವಿದೆ. ಜಾಹ್ನವಿಯನ್ನು ನಿನ್ನತ್ತ ಆಕರ್ಷಿಸಲು ಇದು ಉತ್ತಮ ಮಾರ್ಗವೆಂದು ನನ್ನ ಅನಿಸಿಕೆ. ಜೊತೆಗೆ ಇದೇನೂ ಕಾನೂನುಬಾಹಿರ ಕೆಲಸವಲ್ಲ. ನೀನೇನೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ,” ರಾಜೀವ್ ಸ್ಪಷ್ಟಪಡಿಸಿದ.

“ನಾವು ಕಾಲೇಜು ಸೇರಿದ ಮೇಲೆ ಎಂದು ಜಾಹ್ನವಿಯ ಸ್ನೇಹ ದೊರೆಕಿತೋ ಅಂದಿನಿಂದಲೂ ನಾನು ಅವಳನ್ನು ಇಷ್ಟಪಡುತ್ತಿದ್ದೇನೆ. ಆದರೆ ಅವಳನ್ನು ನನ್ನತ್ತ ಸೆಳೆಯಲು ಇಂತಹ ಉಪಾಯ ಮಾಡಿ ಅದೇನಾದರೂ ಅನಾಹುತಕ್ಕೆ ಕಾರಣವಾದರೆ ಈ ಯೋಜನೆಯ ಸೂತ್ರಧಾರ ನೀನೇ ಎಂದು ಸಾರಿಬಿಡುತ್ತೇನೆ,” ಎಂದ ಪ್ರಶಾಂತ್‌.

“ಒಂದು ವೇಳೆ ನೀನು ಇದರಲ್ಲಿ ಯಶಸ್ವಿಯಾದರೆ ನನಗೊಂದು ಕ್ರೆಡಿಟ್‌ ಇರಲಿ,” ಎಂದು ರಾಜೀವ್ ನಗುತ್ತಾ ಹೇಳಿದ.

ಮರುದಿನ ಪ್ರಶಾಂತ್‌ ಮತ್ತು ರಾಜೀವ್‌ ಇಬ್ಬರೂ ಖ್ಯಾತ ಕ್ಯಾನ್ಸರ್‌ ತಜ್ಞ ಡಾ. ಜಗದೀಶ್‌ರನ್ನು ಭೇಟಿಯಾದರು. ರಾಜೀವ್‌, ಪ್ರಶಾಂತನ ಕುರಿತಂತೆ ಎಲ್ಲವನ್ನೂ ವಿವರಿಸಿದ ಬಳಿಕ ಡಾ. ಜಗದೀಶ್‌ ಒಮ್ಮೆ ಪ್ರಶಾಂತ್‌ನನ್ನು ಸೂಕ್ಷ್ಮವಾಗಿ ಗಮನಿಸಿ,

“ಓಹೋ, ಹೀಗಿದೆ ವಿಷಯ,” ಎಂದು ನುಡಿದ ಅವರು ತಮ್ಮ ಕುರ್ಚಿಗೆ ಒರಗಿಕೊಂಡರು. ಅಲ್ಲಿ ಎರಡು ನಿಮಿಷ ವೌನ ಆವರಿಸಿತ್ತು.

“ಸರಿ… ಆದರೆ ನನ್ನದೊಂದು ಷರತ್ತಿದೆ,” ಎಂದರು ಡಾ. ಜಗದೀಶ್‌ ವೌನ ಮುರಿಯುತ್ತ.

“ಓಹೋ, ನನ್ನ ಹುಡುಗಿಗೋಸ್ಕರ ನಾನು ಯಾವ ಷರತ್ತಿಗೂ ಸಿದ್ಧ!” ವಿಷಯ ಏನೆಂದು ತಿಳಿಯುವ ಮುನ್ನವೇ ಪ್ರಶಾಂತ್‌ ತನ್ನ ಒಪ್ಪಿಗೆ ಸೂಚಿಸಿದ.

“ನಮ್ಮದೇ ಆದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರವಿರುವುದು ನಿಮಗೂ ತಿಳಿದಿರಬಹುದು,” ಎನ್ನುತ್ತಿದ್ದಂತೆ, ರಾಜೀವ್‌ ಮತ್ತು ಪ್ರಶಾಂತ್‌ ಪರಸ್ಪರ ಮುಖ ಮುಖ ನೋಡಿಕೊಂಡರು.

“ಈ ಭಾನುವಾರ ನಮ್ಮ ಕೇಂದ್ರದ ವ್ಯವಸ್ಥಾಪಕರಲ್ಲಿ ಒಬ್ಬರಾದ ಡಾ. ಮಹೇಶ್‌ ಈ ನಗರದ ನೆಹರೂ ಮೈದಾನದಲ್ಲಿ ಸ್ತನ ಕ್ಯಾನ್ಸರ್‌ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದಾರೆ. ಅಲ್ಲಿಗೆ ನೀವಿಬ್ಬರೂ, ನಿಮ್ಮ ಕಾಲೇಜಿನ ಇತರೇ ಸ್ನೇಹಿತರೂ ಕೂಡಿ ಬಂದು ಸ್ವಯಂ ಸೇವಕರಾಗಿ ಭಾಗವಹಿಸಬೇಕು. ಹೀಗೆ ಮಾಡಿದರೆ ನಾನು ನಿನ್ನ ಪ್ರೀತಿಗೆ ಸಹಾಯ ಮಾಡುತ್ತೇನೆ,” ಎಂದರು.

ಪ್ರಶಾಂತ್‌ ಈ ಷರತ್ತಿಗೆ ಒಪ್ಪಿಕೊಂಡ. ಇಬ್ಬರೂ ಡಾ. ಜಗದೀಶ್‌ಗೆ ಧನ್ಯವಾದ ಹೇಳಿ ಆಸ್ಪತ್ರೆಯಿಂದ ಹೊರಬಂದರು. ಒಟ್ಟಾರೆ ಅವರ ಬೇಡಿಕೆಯ ಮುಂದೆ ಡಾ. ಜಗದೀಶ್‌ರ ಷರತ್ತು ಅಷ್ಟೇನೂ ದೊಡ್ಡದಾಗಿ ಕಾಣಲಿಲ್ಲ.

ಹೇಳಿದಂತೆ ಮುಂದಿನ ಭಾನುವಾರ ಒಂಬತ್ತು ಗಂಟೆಯೊಳಗೆ ತಯಾರಾದ ಪ್ರಶಾಂತ್‌, ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಬಿದ್ದ. ಅವನು ಆ ಜಾಗ ತಲುಪುವುದರೊಳಗೇ ಅಲ್ಲಿ ಸಾಕಷ್ಟು ಜನ ಸೇರಿದ್ದರು. ರಾಜೀವ್‌  ಮತ್ತು  ಪ್ರಶಾಂತ್‌ ಡಾ. ಜಗದೀಶ್‌ರನ್ನು ಕಂಡು ತಾವೇನು ಮಾಡಬೇಕೆಂದು ಕೇಳಿ ತಿಳಿದುಕೊಂಡರು.

ಅಷ್ಟರಲ್ಲಿ ಅದೇ ವೇದಿಕೆಯ ಇನ್ನೊಂದು ಭಾಗದಲ್ಲಿ ಜಾಹ್ನವಿ ಡಾ. ಮಹೇಶ್‌ರೊಂದಿಗೆ ಇದ್ದದ್ದು ಕಂಡಿತು. ಪ್ರಶಾಂತ್‌  ಮತ್ತು ರಾಜೀವ್ ಅತ್ತ ಹೊರಟರು.

“ಡ್ಯಾಡ್‌, ಇವನು ಪ್ರಶಾಂತ್‌. ನನ್ನ ಕ್ಲಾಸ್‌ಮೇಟ್‌,” ಜಾಹ್ನವಿ ಡಾ. ಮಹೇಶ್‌ರತ್ತ ತಿರುಗಿ ಹೇಳಿದಳು. ಅವರು ಅವನತ್ತ ತಿರುಗಿ ಕಿರುನಗೆ ಬೀರಿದರು.

ಕಾರ್ಯಕ್ರಮಗಳೆಲ್ಲ ಮುಗಿದ ನಂತರ ಡಾ. ಮಹೇಶ್‌ ಪ್ರಶಾಂತ್‌ನನ್ನು ಕರೆದು, “ಒಬ್ಬ ಹುಡುಗಿಯನ್ನು ನಿನ್ನತ್ತ ಆಕರ್ಷಿಸಿಕೊಳ್ಳುವ ಸಲುವಾಗಿ ನೀನು ಮಾಡುತ್ತಿರುವ ಈ ಪ್ರಯತ್ನ ಅತ್ಯಂತ ಹಾಸ್ಯಾಸ್ಪದವಾದದ್ದು ಎನಿಸುತ್ತಿಲ್ಲವೆ?

ಈ ಕಾರ್ಯಕ್ರಮದಲ್ಲಿ ನೋಡಿದೆಯಲ್ಲ….. ಕ್ಯಾನ್ಸರ್‌ ರೋಗಿಗಳು ಹೇಗಿರುತ್ತಾರೆ? ಅವರ ಮನೆಯವರ ಮನಸ್ಥಿತಿ ಹೇಗಿರುತ್ತದೆ….? ಎನ್ನುವುದರ ಕುರಿತು ಅರ್ಥವಾಗಿದೆಯಲ್ಲವೇ?

“ಇನ್ನು ನನ್ನ ಮಗಳು ಜಾಹ್ನವಿ ಬಗ್ಗೆ ನಿನಗೆ ಗೊತ್ತಿದೆಯಲ್ಲ. ಅವಳ ತಾಯಿ ಸುಮಾರು ವರ್ಷಗಳಿಂದಲೂ ಈ ಕ್ಯಾನ್ಸರ್‌ನಿಂದ ನರಳಿ ಪ್ರಾಣಬಿಟ್ಟರು. ಅವಳಿಗೂ ಸಹ ಕ್ಯಾನ್ಸರ್‌ ಕುರಿತು ಅವರ ಮನೆಯವರ ಮನಸ್ಥಿತಿ ಕುರಿತು ಚೆನ್ನಾಗಿ ಗೊತ್ತಿದೆ.  ಕ್ಯಾನ್ಸರ್‌ ರೋಗಿಗಳು ಅನುಭವಿಸುವ ಕಷ್ಟಗಳು ಮತ್ತು ಅವರ ಕುಟುಂಬದವರು ಅನುಭವಿಸುವ ತೊಂದರೆ, ದುಃಖಗಳು ಆಗಾಧವಾದದ್ದು. ಅಂತಹದರಲ್ಲಿ ನೀನು ಒಬ್ಬ ವಿದ್ಯಾವಂತನಾಗಿ ಈ ರೀತಿ ಸುಳ್ಳು ನಾಟಕದ ರೋಗಿಯಾಗುವುದು ಎಷ್ಟು ಹಾಸ್ಯಾಸ್ಪದವಲ್ಲವೆ?” ಎಂದು ಕೇಳಿ ಅವರ ಪಾಡಿಗೆ ಅವರು ಹೊರಟುಹೋದರು.

ಪ್ರಶಾಂತ್‌ಗೆ ತಲೆ ಎಲ್ಲ ಖಾಲಿಯಾದಂತಾಗಿ ಏನು ಮಾಡಲೂ ಆಗದಂತಿತ್ತು. ಅವನು ಅಲ್ಲಿಂದ ರಾಜೀವ್‌ನೊಂದಿಗೆ ಮನೆಗೆ ಹೋಗುವುದೆಂದು ತೀರ್ಮಾನಿಸುತ್ತಿದ್ದಾಗಲೇ ಜಾಹ್ನವಿ  ಬಂದು, “ಪ್ರಶಾಂತ್‌, ನೀನು ಇಂದು ನಮ್ಮೊಂದಿಗೆ ಟೀಗೆ ಬರುತ್ತೀಯಾ?” ಎಂದು ಕೇಳಿದಳು.

“ಹಾಂ…..! ಅದಕ್ಕೇನು ಬರುತ್ತೇನೆ,“ ಎಂದ.

“ಅಂದಹಾಗೆ ನಿನಗೆ ಗೊತ್ತಾ ಪ್ರಶಾಂತ್‌, ನಾನು ಕಳೆದ 13 ವರ್ಷಗಳಿಂದಲೂ ನನ್ನ ಕ್ಯಾನ್ಸರ್‌ ಪೀಡಿತ ತಾಯಿಯನ್ನು ನೋಡಿಕೊಂಡಿದ್ದೇನೆ. ಹೀಗಾಗಿ ನನಗೆ ಕ್ಯಾನ್ಸರ್‌ ರೋಗಿಗಳ ಬಗೆಗೆ ಅಪಾರವಾದ ಸಹಾನುಭೂತಿ ಇದೆ. ಯಾರು ಕ್ಯಾನ್ಸರ್‌ ರೋಗಿಗಳಿಗೆ ಅಂತಹ ಸಹಾನುಭೂತಿ ತೋರಿಸುತ್ತಾರೋ ಅವರನ್ನು ನಾನು ಸಹ ಮೆಚ್ಚಿಕೊಳ್ಳುತ್ತೇನೆ,” ಎಂದಳು ಜಾಹ್ನವಿ.

ಪ್ರಶಾಂತ್‌ ಮತ್ತು ರಾಜೀವ್, ಜಾಹ್ನವಿಯೊಂದಿಗೆ ಕ್ಯಾಂಟೀನ್‌ಗೆ ಪ್ರವೇಶಿಸುತ್ತಿದ್ದಂತೆ ಡಾ. ಮಹೇಶ್‌ ಮತ್ತು ಡಾ. ಜಗದೀಶ್‌ ಇಬ್ಬರೂ ಅಲ್ಲಿಗೆ ಬಂದರು. ಪ್ರಶಾಂತ್‌ ಏನು ಹೇಳಲೂ ಸಾಧ್ಯವಾಗದೆ ಮೌನವಾಗಿದ್ದ.

ಹೀಗಿರುವಾಗ ಡಾ. ಮಹೇಶ್‌ ಜಾಹ್ನವಿಯ ಕಡೆ ತಿರುಗಿ, “ಜಾನು, ನಾನು ನನ್ನ ವೃತ್ತಿ ಬದುಕಿನಲ್ಲೇ ಇಂತಹ ವಿಚಿತ್ರ ವ್ಯಕ್ತಿಯನ್ನು ಕಂಡಿಲ್ಲ. ತಾನು ಪ್ರೀತಿಸಿದ ಹುಡುಗಿಯನ್ನು ತನ್ನತ್ತ ಆಕರ್ಷಿಸುವ ಸಲುವಾಗಿ ಇವನು ಸ್ವತಃ ಕ್ಯಾನ್ಸರ್‌ ರೋಗಿ ಎಂದು ಹೇಳಿಕೊಳ್ಳುತ್ತಾನಂತೆ…!? ಇದು ಹಾಸ್ಯಾಸ್ಪದ ಎನಿಸುವುದಿಲ್ಲವೆ?” ಎಂದರು.

“ಹಾಂ ಡ್ಯಾಡಿ, ನಾನೂ ಈಗ ಅದನ್ನೇ ನೋಡುತ್ತಿದ್ದೇನೆ,” ಎನ್ನುತ್ತಾ ಜಾಹ್ನವಿ ಪ್ರಶಾಂತ್‌ನತ್ತ ತಿರುಗಿ ಕಣ್ಣು ಮಿಟುಕಿಸಿದಳು. ಅದೇ ಸಮಯದಲ್ಲಿ ಪ್ರಶಾಂತನ ಪಕ್ಕದಲ್ಲಿ ಕುಳಿತಿದ್ದ ಡಾ. ಜಗದೀಶ್‌ ಸಹ ಅವನ ಭುಜ ತಟ್ಟಿ ಕಣ್ಣು ಮಿಟುಕಿಸಿದರು. ಎಲ್ಲರೂ ಟೀ ಕುಡಿದು ಹೊರಟ ನಂತರ ರಾಜೀವನ ಬಳಿ ಬಂದ ಪ್ರಶಾಂತ್‌ ಮುಖದಲ್ಲಿ ಒಂದು ಬಗೆಯ ಮುಜುಗರದ ಜೊತೆಗೆ ಬೇಸರವಿತ್ತು.

“ನಾವಂದುಕೊಂಡಂತೆ ಏನೂ ನಡೆಯಲಿಲ್ಲ….. ಆದರೆ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾನ್ಸರ್‌ ರೋಗಿಗಳ ಬಗ್ಗೆ ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಅನುಕೂಲವಾಯಿತು ಎನ್ನುವುದೇ ಸಮಾಧಾನ,” ಎಂದ ಬೇಸರದಿಂದ.

“ಹೌದು.”

“ಮತ್ತೀಗ ಮುಂದೇನು?”

“ನಾವೀಗಲೇ ಕೇಶವನ ಮನೆಗೆ ಹೋಗಬೇಕು. ಅಲ್ಲಿ ಅವನೇನು ಮಾಡುತ್ತಿದ್ದಾನೋ….?” ರಾಜೀವ್ ಹೇಳಿದೊಡನೆ ಇಬ್ಬರೂ ಕೇಶವನ ಮನೆಯತ್ತ ಓಡಿದರು. ಅಲ್ಲಿ ಕೇಶವ್  ಸ್ಟ್ರೆಚರ್‌ ಸೇರಿದಂತೆ ಎಲ್ಲ ರೀತಿಯ ಉಪಕರಣ ತಯಾರಿಟ್ಟುಕೊಂಡು ಇವರಿಗಾಗಿ ಕಾಯುತ್ತಿದ್ದ. ಆದರೆ ಇವರು ಬಂದ ವೇಗ ನೋಡಿ ಅವನಿಗೂ ಗಾಬರಿಯಾಗಿತ್ತು.

“ಕೇಶವ್ ಎಲ್ಲ ತೆಗೆದಿಡು. ಇನ್ನು ಇವುಗಳ ಅಗತ್ಯವಿಲ್ಲ. ನಾವು ಅಲ್ಲಿಂದಲೇ ಬಂದೆವು,”  ಎಂದು ರಾಜೀವ್ ಎಲ್ಲವನ್ನೂ ವಿವರಿಸಿದ.

“ಜಾಹ್ನವಿಯ ತಂದೆ ಹೇಳಿದಂತೆಯೇ ನಮ್ಮದು ಒಂದು ಹಾಸ್ಯಾಸ್ಪದ ಪ್ರಯತ್ನವಾಯಿತು,” ಎಂದು ಬೇಸರದಿಂದ ನುಡಿದ ಪ್ರಶಾಂತ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ