ಗೀತಾ ಕಾಲೇಜಿನಿಂದ ಬಂದಾಗ ಪ್ರಸಾದ್ ಪೇಪರ್ ಓದುತ್ತಿದ್ದ. ಮಗ ಭರತ್ ಅಲ್ಲೇ ವರಾಂಡದಲ್ಲಿ ತನ್ನ ಆಟದ ಸಾಮಾನುಗಳೊಂದಿಗೆ ಆಡುತ್ತಿದ್ದ. ಅವನ ಸ್ಕೂಲ್ ಯೂನಿಫಾರಂ ಬದಲಿಸಿರಲಿಲ್ಲ. ಮೇಜಿನ ಮೇಲೆ ಹಾಲು ತುಂಬಿದ ಗ್ಲಾಸ್ ಇಡಲಾಗಿತ್ತು.
ಆ ಸ್ಥಿತಿಯಲ್ಲಿ ಮಗನನ್ನು ಕಂಡು ಗೀತಾಗೆ ಕೋಪ ಉಕ್ಕಿ ಬಂತು. ಆದರೆ ಅವಳು ತನ್ನ ಆಕ್ರೋಶ ವ್ಯಕ್ತಪಡಿಸಲಿಲ್ಲ. ಅವಳು ಗಂಡನಿಗೆ ಹೇಳಿದಳು, ``ನೋಡಿ, ನೀವು ಪತ್ರಿಕೆ ಓದೋದ್ರಲ್ಲಿ ಮಗ್ನರಾಗಿದ್ದೀರಿ. ಅಲ್ಲಿ ಭರತನ ಹಾಲಿನ ಗ್ಲಾಸನ್ನು ಮುಚ್ಚಿಟ್ಟಿಲ್ಲ. ಅವನು ಕುಡಿದ್ನಾ ಇಲ್ವಾಂತ ಸ್ವಲ್ಪ ಗಮನಿಸಬೇಕು. ಅಲ್ಲದೆ ಅವನ `ಯೂನಿಫಾರಂ' ಕೂಡ ಬದಲಿಸಿಲ್ಲ.''
ಪ್ರಸಾದ್ ನ ಹಣೆಯಲ್ಲಿ ನೆರಿಗೆಗಳು ಮೂಡಿದವು. ಅವನು ತೀಕ್ಷ್ಣವಾಗಿ ಹೇಳಿದ, ``ಇವೆಲ್ಲಾ ನೋಡೋದು ನನ್ನ ಕೆಲಸ ಅಲ್ಲ.''
``ಹಾಗಂದ್ರೆ ಹೇಗೆ? ಎರಡು ದಿನದಿಂದ ಕೆಲಸದವಳು ಬಂದಿಲ್ಲ. ಒಮ್ಮೊಮ್ಮೆ ನಾನು ಕಾಲೇಜಿನಿಂದ ಬರೋದು ಲೇಟಾಗುತ್ತೆ. ಆದರೂ ನಾನೇ ಎಲ್ಲವನ್ನೂ ಮಾಡಬೇಕು,'' ಎಂದ ಗೀತಾ ಭರತ್ ಗೆ ಹಾಲು ಕುಡಿಸತೊಡಗಿದಳು.
`ನಾನು ಎಲ್ಲಿಯವರೆಗೆ ಇದೆಲ್ಲಾ ಸಹಿಸಲಿ? ಪ್ರಸಾದ್ ರ ಸ್ವಭಾವ ಬದಲಾಗೋ ಭರವಸೆ ಇಲ್ಲ. ಮದುವೆಯಾಗಿ ಒಂದು ವರ್ಷದವರೆಗೆ ಎಲ್ಲಾ ಚೆನ್ನಾಗಿತ್ತು. ಪ್ರಸಾದ್ ನನ್ನನ್ನು ಎಷ್ಟು ಹೊಗಳ್ತಿದ್ರು. ಮನೆಯಲ್ಲಿ ಸಂತಸ ತುಳುಕಾಡುತ್ತಿತ್ತು. ಈಗ ಕೋಪದ ಕೂಗಾಟಗಳು ಗೋಡೆಗಳನ್ನು ಸೀಳಿ ಹೊರಬರುತ್ತಿವೆ. ಸಂತಸದ ಸುಗಂಧದಿಂದ ಸುವಾಸಿತವಾಗಿದ್ದ ಮನೆ ಈಗ ಪಾಳುಬಿದ್ದಂತಿದೆ. ನಮ್ಮ ಮಗನೂ ಯಾವಾಗಲೂ ಹೆದರಿದಂತಿರುತ್ತಾನೆ.' ಗೀತಾ ಹೀಗೆಲ್ಲಾ ಯೋಚಿಸುತ್ತಿದ್ದಳು.
ಈಗ ಹೊಗಳಿಕೆಯಂತೂ ಇಲ್ಲ. ಬದಲಿಗೆ ಯಾವಾಗಲೂ ವ್ಯಂಗ್ಯವಾಗಿ ಇಲ್ಲವೇ ಸಿಡುಕಿಕೊಂಡೇ ಪ್ರಸಾದ್ ಮಾತಾಡುತ್ತಾರೆ. ಬಹುಶಃ ನನ್ನ ಯಶಸ್ಸು ಅವರಲ್ಲಿ ಒತ್ತಡ ಹಾಗೂ ಪ್ರತಿಸ್ಪರ್ಧೆ ಉಂಟು ಮಾಡಿರಬೇಕು. ಯಾವಾಗಲೂ ಏನಾದರೂ ವಿವಾದ ನಮ್ಮಿಬ್ಬರ ಮಧ್ಯೆ ಇದ್ದೇ ಇರುತ್ತೆ.
ಮೊದಲಿಗೆ ಜಗಳ ಬರೀ ಬೈದಾಟಕ್ಕೆ ಸೀಮಿತಾಗಿದ್ದುದು ಈಗ ತಳ್ಳಾಟ, ಏಟು, ಒದೆತದವರೆಗೆ ತಲುಪಿದೆ. ಅಂದು ಅಂಥದ್ದೇನೂ ನಡೆದಿರಲಿಲ್ಲ. ನಾನು ಅತ್ತೆಗೆ, ಈಗ ಭರತ್ ಗೆ ಹಾಲು ಕುಡಿಯೋ ಸಮಯ, ನೀವು ಬಿಸ್ಕೆಟ್. ಖಾರದ ಕಡಲೆಬೀಜ ತಿನ್ನಿಸ್ತಾ ಇದ್ದೀರಿ ಅಂದಿದ್ದೆ.... ಆಗ ಪ್ರಸಾದ್‌ಗೆ ಎಷ್ಟು ಕೋಪ ಬಂದಿತ್ತು. ಬಿಸ್ಕೆಟ್, ಕಡಲೆಬೀಜ ಇಟ್ಟಿದ್ದ ಪ್ಲೇಟನ್ನು ಅವರು ಬಿಸಾಡಿದ ರಭಸಕ್ಕೆ ಪ್ಲೇಟ್ ಒಡೆದಿತ್ತು. ಅದರ ಶಬ್ದ ಕೇಳಿ ಪಕ್ಕದ ಮನೆಯ ಆಂಟಿ ಬಂದಿದ್ದರು. ಆಗ ಭರತ್ ಪ್ಲೇಟನ್ನು ಬಿಸಾಡಿದ, ಅದಕ್ಕೆ ಅವನಿಗೆ ಬೈತಿದ್ದೀವೀಂತ ಸುಳ್ಳು ಹೇಳಬೇಕಾಯಿತು.
ನಮ್ಮ ಜಗಳಕ್ಕೆ ವಿರಾಮವನ್ನು ಮಗನೇ ಒದಗಿಸುತ್ತಾನೆ. ಜೋರಾಗಿ ಅಳುತ್ತಾ, `` ಅಪ್ಪಾ, ಅಮ್ಮನನ್ನು ಬಿಟ್ಬಿಡು. ಅವರಿಗೆ ಏಟು ಬೀಳುತ್ತೆ'', ಎನ್ನುತ್ತಾನೆ. ನಾವಿಬ್ಬರೂ ಸುಶಿಕ್ಷಿತರು. ಆದರೂ ಅಶಿಕ್ಷಿತರಂತೆ ಕಿತ್ತಾಡುತ್ತೇವೆ. ನಾನೇನು ಮಾಡಲಿ? ನನಗೆ ಏನೂ ಅರ್ಥ ಆಗ್ತಿಲ್ಲ. ಮನೆಗೆ ಎಲ್ಲ ಸಾಮಾನುಗಳನ್ನೂ ನಾನೇ ತರುತ್ತೇನೆ. ಮಗನ ಔಷಧಗಳಿಗೆ, ಸ್ಕೂಲಿನ ಖರ್ಚುಗಳಿಗೆ ನಾನೇ ಕೊಡುತ್ತೇನೆ. ಆದರೂ ಪ್ರಸಾದ್ ಮುಖ ಗಂಟಿಕ್ಕಿಕೊಂಡಿರುತ್ತಾರೆ. ಅಪರೂಪಕ್ಕೆ ನಕ್ಕರೆ ಅದು ಕೃತಕವಾಗಿರುತ್ತದೆ.