ಅನುಪಮಾ ಕಾಫಿ ಡೇ ರೆಸ್ಟೋರೆಂಟ್‌ನಲ್ಲಿ ಮೇಜಿನ ಮುಂದೆ ಕುಳಿತಿದ್ದಳು. ಅವಳ ಎದೆ ಬಡಿತ ಅತಿ ವೇಗವಾಗಿದ್ದು, ಹೃದಯ ಹೊರಗೆ ಬಂದು ಬಿಡುವುದೇನೋ ಎಂಬಂತೆ ಡವಗುಟ್ಟುತ್ತಿತ್ತು. ಕೈಯಲ್ಲಿದ್ದ ಪುಟ್ಟ ವಾಚ್‌ನಲ್ಲಿ ಅವಳು ಈಗಾಗಲೇ ಹಲವು ಸಲ ಸಮಯ ನೋಡಿಕೊಂಡಿದ್ದಾಗಿತ್ತು. 5 ಗಂಟೆಗೆ ಇನ್ನೂ 10 ನಿಮಿಷ ಉಳಿದಿತ್ತು. ಅಂದರೆ ಪ್ರವೀಣನ ಪತ್ನಿಯ ಬರುವಿಕೆಗೆ ಹೆಚ್ಚೇನೂ ಕಾಯಬೇಕಾಗಿರಲಿಲ್ಲ.

ಪ್ರವೀಣನ ಪತ್ನಿಯ ಹೆಸರು ಸಹ ಅನುಪಮಾಳಿಗೆ ತಿಳಿದಿರಲಿಲ್ಲ. ಆಕೆ ಭೇಟಿ ಮಾಡಬೇಕೆಂದು ಫೋನ್‌ ಮಾಡಿದಾಗ, ಅನುಪಮಾ ಎರಡನೇ ಮಾತಿಲ್ಲದೆ ಒಪ್ಪಿದಳು. ಅವಳ ಸ್ಥಿತಿಯನ್ನು ನೆನೆಸಿಕೊಂಡು ಅನುಪಮಾ ಮನಸ್ಸಿನಲ್ಲೇ ನಕ್ಕಳು. 5 ಗಂಟೆಗೆ ಕಾಫಿ ಡೇ ರೆಸ್ಟೋರೆಂಟ್‌ನಲ್ಲಿ ಭೇಟಿ ಮಾಡುವುದೆಂದು ನಿಗದಿಯಾಗಿದ್ದರೂ, ಅವಳು 4 ಗಂಟೆಗೇ ಮನೆಯಿಂದ ಹೊರಬಿದ್ದಳು. ಬೇಗನೇ ರೆಸ್ಟೋರೆಂಟ್‌ಗೆ ಬಂದು ನಿರೀಕ್ಷಿಸುತ್ತಾ ಕುಳಿತ ಅವಳು, ಮೇಜಿನ ಮೇಲಿದ್ದ ಹೂದಾನಿಯನ್ನು ಒಮ್ಮೆ, ಕಾಫಿ ಹೌಸ್‌ನ ಬಾಗಿಲನ್ನು ಮತ್ತೊಮ್ಮೆ ದಿಟ್ಟಿಸುತ್ತಿದ್ದಳು.

ಒಂದಷ್ಟು ಹೊತ್ತಿನ ನಂತರ ಬಾಗಿಲು ತೆರೆದುಕೊಂಡು ಒಬ್ಬ ಸುಂದರ ಮಹಿಳೆ ಒಳಗೆ ಪ್ರವೇಶಿಸಿದಳು. ಅತ್ತ ಇತ್ತ ನೋಡಿ ಅವಳು ಅನುಪಮಾಳತ್ತ ಬಂದಳು. ಮೇಜಿನ ಹತ್ತಿರ ಬಂದು ಬಾಗಿ, “ನೀವು ಅನುಪಮಾ ಅಲ್ಲವೇ?” ಎಂದು ಕೇಳಿದಳು.

ಅನುಪಮಾ ಎದ್ದು ನಿಂತು, “ಹೌದು……. ನೀವು…….?” ಎಂದಳು.

“ಹಲೋ, ನಾನು ಗೀತಾ….. ಪ್ರವೀಣನ ಪತ್ನಿ.”

“ಹಲೋ…. ಪ್ಲೀಸ್‌ ಕುಳಿತುಕೊಳ್ಳಿ…..” ಅನುಪಮಾ ಎದುರಿಗಿದ್ದ ಕುರ್ಚಿಯನ್ನು ತೋರಿಸುತ್ತಾ ಹೇಳಿದಳು.

ಗೀತಾ ಕುರ್ಚಿಯಲ್ಲಿ ಕುಳಿತು ತನ್ನ ಪರ್ಸನ್ನು ಮೇಜಿನ ಮೇಲಿಟ್ಟು, ಅನುಪಮಾಳ ಕಡೆ ತಿರುಗಿ ಮುಗುಳ್ನಗುತ್ತಾ, “ನನ್ನನ್ನು ಭೇಟಿ ಮಾಡಲು ಬಂದುದಕ್ಕೆ ಥ್ಯಾಂಕ್ಸ್,” ಎಂದಳು.

ಆ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಅನುಪಮಾ, “ಕಾಫಿ ತೆಗೆದುಕೊಳ್ಳುತ್ತೀರಲ್ಲವೇ?” ಎನ್ನುತ್ತಾ ಆರ್ಡರ್ ಮಾಡಿದಳು.

ಕೆಲವು ಕಾಲ ಇಬ್ಬರೂ ಮೌನವಾಗಿ ಕುಳಿತಿದ್ದರು. ಅನುಪಮಾ ತೀಕ್ಷ್ಣ ದೃಷ್ಟಿಯಿಂದ ಗೀತಾಳನ್ನು ನೋಡಿದಳು. ತಾನು ಭಾವಿಸಿದ್ದಕ್ಕಿಂತ ಗೀತಾ ಹೆಚ್ಚು ಸುಂದರ ಮತ್ತು ಸ್ಮಾರ್ಟ್‌ ಆಗಿದ್ದಾಳೆ ಎಂದುಕೊಂಡಳು. ಮುಖದಲ್ಲಿ ಕೋಪ ಅಥವಾ ತಿರಸ್ಕಾರದ ಭಾವ ಇಲ್ಲದೆ ಅವಳು ಶಾಂತವಾಗಿ ಕುಳಿತಿದ್ದಳು.

`ಕಾಫಿ ಕೆಫೆಯಲ್ಲಿ ಇಷ್ಟು ಜನರ ಮುಂದೆ ಏನು ಮಾಡುತ್ತಾಳೆ? ತನ್ನ ಮೇಲೆ ಕೂಗಾಡುವಳೇ, ಅವಳ ಪತಿಯನ್ನು ಪ್ರೀತಿಯ ಬಲೆಯಲ್ಲಿ ಸಿಕ್ಕಿಸಿಕೊಂಡಿದ್ದೇನೆಂದು ದೂರುವಳೇ ಅಥವಾ ಅವಳ ಪತಿಯ ಜೀವನದಿಂದ ದೂರ ಹೊರಟು ಹೋಗೆಂದು ಅತ್ತು ಗೋಗರೆಯುವಳೇ….’ ಎಂದೆಲ್ಲಾ ಯೋಚಿಸಿದಳು.

ಭೇಟಿ ಮಾಡಬೇಕೆಂದು ಬಂದ ಗೀತಾ ಮೌನವಾಗಿ ಕುಳಿತಿರುವುದು ಅನುಪಮಾಳಿಗೆ ಇಷ್ಟವಾಗಲಿಲ್ಲ. ಅಷ್ಟರಲ್ಲಿ ಕಾಫಿ ಬಂದಿತು. ಬೇರರ್‌ ಅತ್ತ ಹೋದ ಕೂಡಲೇ ಅನುಪಮಾ, “ನೀವು ನನ್ನನ್ನೇಕೆ ಭೇಟಿ ಮಾಡಲು ಬಂದಿರಿ?” ಎಂದು ಕೇಳಿದಳು.

ಗೀತಾ ಮುಗಳ್ನಕ್ಕು ಕಾಫಿ ಕಪ್‌ನ್ನು ಕೈಗೆತ್ತಿಕೊಳ್ಳುತ್ತಾ, “ನಿಮ್ಮಿಂದ ಈ ಪ್ರಶ್ನೆ ಬರಲಿ ಎಂದು ನಾನು ಮಾತನ್ನು ಪ್ರಾರಂಭಿಸಲು ಕಾಯುತ್ತಿದ್ದೆ,” ಎಂದಳು.

ಅನುಪಮಾಳಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಗೀತಾಳ ಆತ್ಮವಿಶ್ವಾಸದಿಂದ ಕೂಡಿದ ಮಾತು ಅವಳನ್ನು ಧೃತಿಗೆಡಿಸಿತು.

“ನೋಡಿ ನನಗೆ ಹೆಚ್ಚು ಸಮಯ ಇಲ್ಲ. ನೀವು ನನ್ನನ್ನು ಇಲ್ಲಿಗೆ ಕರೆದ ಉದ್ದೇಶ ಏನು ಅಂತ ಹೇಳಿ,” ಎಂದಳು.

“ನೀವು ಇಂದು ಆಫೀಸ್‌ಗೆ ರಜೆ ತೆಗಿದುಕೊಂಡಿದ್ದೀರಿ. ಪ್ರವೀಣ್‌ ಸಹ 3 ದಿನ ಊರಿನಿಂದ ಹೊರಗೆ ಹೋಗಿದ್ದಾರೆ. ನನಗೆ ತಿಳಿದಿರುವ ಪ್ರಕಾರ ನಿಮ್ಮಿಬ್ಬರ ಭೇಟಿ ಇತ್ತೀಚೆಗೆ ಕಡಿಮೆಯಾಗಿದೆ. ಹಾಗಿರುವಾಗ ನೀವು ಸಮಯ ಇಲ್ಲ ಅಂತ ಹೇಳುವುದು ನಿಜವಲ್ಲ. ಇರಲಿ, ನಾನು ಮುಖ್ಯ ವಿಷಯದ ಬಗ್ಗೆ ಮಾತನಾಡುತ್ತೇನೆ. ನೀವು ಪ್ರವೀಣ್‌ನ ಸಹವಾಸ ಮಾಡಿ ಸುಮ್ಮನೆ ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ. ಅವರು ನನ್ನನ್ನು ದೂರ ಮಾಡಿ ನಿಮ್ಮನ್ನು ವಿವಾಹವಾಗುವುದಿಲ್ಲ ಅನ್ನುವುದನ್ನು ನಿಮಗೆ ತಿಳಿಸುವುದಕ್ಕೆ ನಿಮ್ಮನ್ನು ಇಲ್ಲಿಗೆ ಕರೆದೆ,” ಎಂದಳು.

ಅನುಪಮಾ ಈ ಮಾತನ್ನು ನಿರೀಕ್ಷಿಸಿದ್ದಳು. ಗೀತಾ ಇಂತಹದೇ ಏನಾದರೂ ಹೇಳಬಹುದೆಂದು ಅವಳು ಪೂರ್ವ ತಯಾರಿಯಿಂದ ಬಂದಿದ್ದಳು. ಅವಳ ಮುಂದೆ ಸೋಲಬಾರದೆಂದು ಅನುಪಮಾ ಮುಖದಲ್ಲಿ ಆತ್ಮವಿಶ್ವಾಸ ತುಂಬಿಕೊಂಡು ಹೇಳಿದಳು, “ಓಹೋ…! ಹಾಗಾದರೆ ನಿಮ್ಮೊಡನೆ ಸಂಸಾರ ಮಾಡುತ್ತಿದ್ದೂ ನನ್ನ ಜೊತೆ ಸಂಬಂಧ ಏಕೆ ಇರಿಸಿಕೊಂಡಿದ್ದಾರೆ?”

“ಏಕೆಂದರೆ ಅವರೊಬ್ಬ ದುರ್ಬಲ ಮನಸ್ಸಿನ ದಡ್ಡ ವ್ಯಕ್ತಿ.  ಈಗ ದಾರಿ ತಪ್ಪಿ ನಡೆದಿದ್ದಾರೆ. ಆದರೆ ಮತ್ತೆ ಮನೆಗೆ ಬರುತ್ತಾರೆ.”

“ನಿಮ್ಮ ಈ ದಡ್ಡ ವ್ಯಕ್ತಿ ದಿನಕ್ಕೆ 10 ಸಲ ನನಗೆ ಐ ಲವ್ ಯೂ ಎನ್ನುತ್ತಾರೆ.”

“ಅದರಲ್ಲೇನು….? ಅವರು ದಿಸದ 24 ಗಂಟೆಯಲ್ಲಿ ನನಗೆ ಮತ್ತು ನಮ್ಮ ಮಗ ಸಿದ್ಧಾರ್ಥ್‌ಗೆ 48 ಸಲ ಐ ಲವ್ ಯೂ ಎನ್ನುತ್ತಾರೆ.”

“ಆದಷ್ಟು ಬೇಗನೆ ನಿಮಗೆ ವಿಚ್ಛೇದನ ನೀಡಿ ನನ್ನನ್ನು ವಿವಾಹವಾಗುವುದಾಗಿ ಪ್ರಾಮಿಸ್‌ ಮಾಡಿದ್ದಾರೆ?”

“ನಿಮ್ಮಿಬ್ಬರ  ರಿಲೇಶನ್‌ಶಿಪ್‌ ಇರುವುದು ಎಷ್ಟು ಸಮಯದಿಂದ?”

“ಸುಮಾರು ಎರಡು ವರ್ಷಗಳಿಂದ.”

“ಹಾಗಾದರೆ ಅವರು ತಮ್ಮ ಪೊಳ್ಳು ಪ್ರಾಮಿಸ್‌ನ್ನು ನಡೆಸಿಕೊಡುವುದಕ್ಕೆ ಏನು ಮಾಡಿದ್ದಾರೆ? ನಾನು ಇಂದೂ ಸಹ ಅವರ ಪತ್ನಿಯಾಗಿಯೇ ಇದ್ದೇನಲ್ಲ…..”

“ನೀನು ಹೀಗೇಕೆ ಹೇಳುತ್ತಿದ್ದೀಯ ಎಂದು ನನಗೆ ಗೊತ್ತು. ನೀನು ನಿಮ್ಮಿಬ್ಬರ ಸಂಬಂಧವನ್ನು ಮುರಿಯುವುದಕ್ಕೆ ಪ್ರಯತ್ನಿಸುತ್ತಿದ್ದೀಯ. ಪ್ರವೀಣ್‌ ನನ್ನನ್ನು ಬಿಟ್ಟು ನಿನ್ನಲ್ಲಿಗೆ ವಾಪಸ್‌ ಬರಲಿ ಅನ್ನುವುದು ನಿನ್ನ ಆಸೆ,” ಗೀತಾಳನ್ನು ದುರುಗುಟ್ಟಿ ನೋಡುತ್ತಾ ಅನುಪಮಾ ಹೇಳಿದಳು.

“ಪ್ರವೀಣ್‌ ವಾಪಸ್‌ ಬರಲಿ ಅನ್ನುವುದಕ್ಕೆ ಅವರು ನನ್ನನ್ನು ಬಿಟ್ಟುಹೋಗಿಯೇ ಇಲ್ಲವಲ್ಲ….. ಅವರು ಇಂದೂ ಸಹ ನನ್ನ ಜೊತೆ, ನನ್ನ ಹತ್ತಿರವೇ ಇದ್ದಾರೆ.”

“ಈ ಭೇಟಿಯನ್ನು ನಾನು ಏನೆಂದು ಅರ್ಥ ಮಾಡಿಕೊಳ್ಳಲಿ? ನನ್ನ ಮುಂದೆ ಕುಳಿತಿರುವ ಒಬ್ಬ ಅಸಹಾಯಕ ಪತ್ನಿ ತನ್ನ ಪತಿಯನ್ನು ಹಿಂದೆ ಪಡೆಯಲು ವಿನಂತಿಸುತ್ತಿದ್ದಾಳೆ ಎಂದು ತಿಳಿಯಲೇ?”

“ನನ್ನ ಮುಂದೆ ಕುಳಿತಿರುವ ಹೆಣ್ಣು ಜೀವನದಲ್ಲಿ ಸೋತು ಅದೆಷ್ಟು ಹತಾಶಳಾಗಿದ್ದಾಳೆಂದರೆ, ಬೇರೊಬ್ಬಳ ಪತಿಯನ್ನು ಕಿತ್ತುಕೊಂಡು `ಇಟ್ಟುಕೊಂಡವಳು’ ಎಂದು ಕರೆಸಿಕೊಳ್ಳಲು ಸಿದ್ಧಳಾಗಿದ್ದಾಳೆ.”

“ಏನಾಗಬೇಕಾಗಿದೆ ನಿನಗೆ? ನನ್ನನ್ನು ಅವಮಾನ ಮಾಡುವುದಕ್ಕೆ ಇಲ್ಲಿಗೆ ಕರೆಸಿದೆಯಾ?” ಎಂದಳು ಅನುಪಮಾ ಸಿಟ್ಟಿನಿಂದ.

“ನೀನೇ ಹೇಳು. ನಾನು ಕರೆದದ್ದಕ್ಕೆ ನೀನು ಏಕೆ ಬಂದೆ? ನನ್ನಿಂದ ಅವಮಾನ ಮಾಡಿಸಿಕೊಳ್ಳುತ್ತೀಯಾ?” ಗೀತಾ ಮುಗುಳ್ನಗುತ್ತಾ ಕೇಳಿದಳು.

ಅನುಪಮಾ ಆವೇಶಗೊಂಡಳು. ತನ್ನ ಕೋಪವನ್ನು ಅಡಗಿಸಿಕೊಳ್ಳುತ್ತಾ, “ನೀನು ಪ್ರವೀಣ್‌ಗೆ ವಿಚ್ಛೇದನ ಕೊಡುವುದಕ್ಕೆ ಸಿದ್ಧಳಿದ್ದೀಯಾ ಎಂದು ಕೇಳುವುದಕ್ಕೆ ಇಲ್ಲಿಗೆ ಬಂದೆ,” ಎಂದಳು.

“ಪ್ರವೀಣ್‌ ನನ್ನನ್ನು ವಿಚ್ಛೇದಕ್ಕಾಗಿ ಕೇಳಿಯೇ ಇಲ್ಲವಲ್ಲ…..”

“ಕೇಳದೆ ಇದ್ದರೆ, ಈಗ ಕೇಳುತ್ತಾರೆ. ನಾವಿಬ್ಬರೂ ವಿವಾಹವಾಗಲಿದ್ದೇವೆ!”

“ಕನಸು ಕಾಣುವುದಕ್ಕೆ ಚೆನ್ನಾಗಿರುತ್ತದೆ ಅನುಪಮಾ. ಆದರೆ ಕನಸು ಒಡೆದಾಗ ಬಹಳ ಆಘಾತವಾಗುತ್ತದೆ ಅನ್ನುವುದನ್ನು ತಿಳಿದುಕೊ.”

“ಯಾರ ಕನಸು ಒಡೆಯುತ್ತದೆ ಅನ್ನುವುದನ್ನು ಕಾಲವೇ ನಿರ್ಧರಿಸುತ್ತದೆ,” ಅನುಪಮಾ ಜಂಬದಿಂದ ಗೀತಾಳನ್ನು ನೋಡುತ್ತಾ ಹೇಳಿದಳು.

ಗೀತಾ ಈಗಲೂ ಶಾಂತವಾಗಿದ್ದಳು. ಅವಳ ಮುಖದಲ್ಲಿ ಆತಂಕದ ಛಾಯೆಯೇ ಇರಲಿಲ್ಲ. ಅವಳು ಗಂಭೀರವಾಗಿ, “ನಿನಗೆ ಅಭ್ಯಂತರವಿಲ್ಲದಿದ್ದರೆ ನಾನು ನಿನಗೊಂದು ಪ್ರಶ್ನೆ ಕೇಳಲೇ?” ಎಂದಳು. ಅನುಪಮಾಳ ಒಪ್ಪಿಗೆ ಪಡೆದು, “ನೀನು ವಿಚ್ಛೇದಿತೆಯಲ್ಲವೇ?” ಎಂದು ಕೇಳಿದಳು.

“ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಲು ನಿನಗೆ ಅಧಿಕಾರವಿಲ್ಲ ಗೀತಾ,” ಅನುಪಮಾ ಕೋಪದಿಂದ ಹೇಳಿದಳು.

“ನನಗೆ ಸಂಪೂರ್ಣ ಅಧಿಕಾರವಿದೆ ಅನುಪಮಾ. ನೀನು ನನ್ನ ವೈಯಕ್ತಿಕ ಬದುಕಿಗೆ ಕಾಲಿಟ್ಟು ನನ್ನ ಪತಿಯನ್ನು ನನ್ನಿಂದ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದ್ದೀಯಾ. ನಾನು ಕೇವಲ ಪ್ರಶ್ನೆ ಕೇಳುತ್ತಿದ್ದೇನೆ,” ಎಂದಳು.

ಗೀತಾಳ ಈ ತರ್ಕಕ್ಕೆ ಅನುಪಮಾ ಬೇರೇನೂ ಹೇಳಲಾಗದೆ, “ಆಗಲಿ,” ಎನ್ನಬೇಕಾಯಿತು.

“ನಿನ್ನ ವಿಚ್ಛೇದನ ಏಕಾಯಿತು?”

“ಈ ಮಾತಿಗೂ ನನ್ನ ಮತ್ತು ಪ್ರವೀಣನ ರಿಲೇಶನ್‌ಶಿಪ್‌ಗೂ ಯಾವುದೇ ಸಂಬಂಧವಿಲ್ಲ.”

“ಪ್ಲೀಸ್‌ ಅನುಪಮಾ…. ಸ್ವಲ್ಪ ಹೊತ್ತು ನಿನ್ನ ಕೋಪ ಮರೆತು ನನ್ನ ಪ್ರಶ್ನೆಗೆ ಉತ್ತರ ಕೊಡು. ಏನು ಸಂಬಂಧ ಇದೆ ಅನ್ನುವುದು ನಿನಗೆ ತಿಳಿಯುತ್ತದೆ. ಆಮೇಲೆ ನೀನು ನನ್ನನ್ನು ಏನು ಬೇಕಾದರೂ ಪ್ರಶ್ನಿಸಬಹುದು.”

ಗೀತಾಳ ಪ್ರಶ್ನೆಗಳಿಗೆ ಉತ್ತರಿಸಲು ಅನುಪಮಾಳಿಗೆ ಇಷ್ಟವಿರಲಿಲ್ಲ. ಇಲ್ಲಿಗೆ ಬಂದು ತಪ್ಪು ಮಾಡಿದೆ ಎಂದು ಅವಳಿಗೆ ಅನ್ನಿಸತೊಡಗಿತು. ಆದರೆ ಬಂದ ಮೇಲೆ ಏನು ಮಾಡಬಲ್ಲಳು? ಬೇಕೆಂದರೆ ಅಲ್ಲಿಂದ ಎದ್ದು ಹೋಗಬಹುದು. ಆದರೆ ಹಾಗೆ ಮಾಡಿ ತನ್ನ ದೌರ್ಬಲ್ಯವನ್ನು ತೋರಿಸಲು ಅವಳಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವಳು ತನ್ನ ಗತ ಜೀವನದ ಬಗ್ಗೆ ಹೇಳತೊಡಗಿದಳು, “ನನ್ನ ಪತಿ ಅರುಣ್‌ಗೆ ಬೇರೆ ಹುಡುಗಿಯ ಜೊತೆ ಅಫೇರ್‌ ಇತ್ತು. ನನಗೆ ಆ ವಿಷಯ ತಿಳಿದಾಗ ನಾನು ವಿಚ್ಛೇದನ ಪಡೆಯಲು ತೀರ್ಮಾನಿಸಿದೆ.”

“ಓಹೋ…..! ನಿನ್ನ ವಿವಾಹ ಜೀವನ ಎಷ್ಟು ಕಾಲ ಇತ್ತು?”

“ಸುಮಾರು ಒಂದೂವರೆ ವರ್ಷ. ವಿಚ್ಛೇದನದ ನಂತರ 2 ವರ್ಷಗಳ ಹಿಂದೆ ನಾನು ಈ ಊರಿಗೆ ಬಂದೆ.”

“ಇಲ್ಲಿಗೆ ಬಂದ ಮೇಲೆ ನೀನು ಪ್ರವೀಣ್‌ರನ್ನು ಭೇಟಿ ಮಾಡಿದೆ. ನಂತರ ನಿಮ್ಮಿಬ್ಬರ ಅಫೇರ್‌ಪ್ರಾರಂಭವಾಯಿತು.”

“ಹೌದು….”

“ಪ್ರವೀಣ್‌ ವಿವಾಹಿತ ಮತ್ತು 1 ಮಗುವಿನ ತಂದೆ ಎಂದು ನಿನಗೆ ಮೊದಲೇ ತಿಳಿದಿತ್ತೇನು?”

“ಹೌದು. ನಾನು ಅವರ ಕ್ಯಾಬಿನ್‌ನಲ್ಲಿ ನಿಮ್ಮ ಮೂವರ ಫೋಟೋಗಳನ್ನು ನೋಡಿದ್ದೇನೆ.”

ಗೀತಾ ಸ್ವಲ್ಪ ಹೊತ್ತು ಸುಮ್ಮನಿದ್ದಳು. ಆಮೇಲೆ ಅನುಪಮಾಳನ್ನು ಗಂಭೀರವಾಗಿ ನೋಡುತ್ತಾ, “ನೀನು ಅರುಣ್‌ನನ್ನು ಮತ್ತೆ ಪಡೆಯಲು ಪ್ರಯತ್ನವನ್ನೇ ಮಾಡಲಿಲ್ಲವೇ? ಅಷ್ಟು ಸುಲಭವಾಗಿ ಏಕೆ ಅವನಿಗೆ ವಿಚ್ಛೇದನ ಕೊಟ್ಟೆ?”

ಗೀತಾ ಮಾತಿನ ಜಾಲದಲ್ಲಿ ತನ್ನನ್ನು ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾಳೆಂದು ಅನುಪಮಾಳಿಗೆ ಅರ್ಥವಾಯಿತು. ಆದರೆ ಈ ಪ್ರಶ್ನೆಯಿಂದ ತನ್ನ ಮಾತು ಮೇಲಾಗಲು ಅವಕಾಶವಾಯಿತೆಂದು ಅವಳು ಕೂಡಲೇ ಉತ್ತರಿಸಿದಳು, “ಇಲ್ಲ, ಏಕೆಂದರೆ ಬೇರೆ ಯಾರನ್ನೋ ಪ್ರೀತಿಸುತ್ತಿರುವ ವ್ಯಕ್ತಿಯ ಜೊತೆ ಬಾಳುವುದರಲ್ಲಿ ಏನೂ ಪ್ರಯೋಜನವಿಲ್ಲ. ಅದಕ್ಕೇ ನಾನು ಅವರಿಗೆ ವಿಚ್ಛೇದನ ಕೊಟ್ಟುಬಿಟ್ಟೆ. ನೀನೂ ಪ್ರವೀಣ್‌ಗೆ ವಿಚ್ಛೇದನ ಕೊಟ್ಟುಬಿಡು.”

“ಸ್ಮಾರ್ಟ್‌ ಮೂವ್‌,” ಗೀತಾ ನಗುತ್ತಾ, “ಆದರೆ ನಿನಗೂ ನನಗೂ ಬಹಳ ವ್ಯತ್ಯಾಸವಿದೆ. ನಾನು ಬೆನ್ನು ತೋರಿಸಿ ಮೈದಾನದಿಂದ  ಓಡಿ ಹೋಗುವ ಗುಂಪಿಗೆ ಸೇರಿದವಳಲ್ಲ.”

`ಈ ಹೆಂಗಸು ಬರಿಯ ಮಾತಿಗೆ ಬಗ್ಗುವಳಲ್ಲ,’ ಎಂದು ಅನುಪಮಾ ಮನದಲ್ಲೇ ಸಿಟ್ಟಾದಳು. ಆದರೆ ಅದನ್ನು ತೋರಗೊಡದೆ,

“ನಿನ್ನ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಈಗ ಪ್ರಶ್ನಿಸುವ ಸರದಿ ನನ್ನದು,” ಎಂದಳು ಅನುಪಮಾ.

“ಸರಿ ಕೇಳು.” ಗೀತಾಳ ಕಣ್ಣುಗಳನ್ನು ನೇರವಾಗಿ ನೋಡುತ್ತಾ ಅನುಪಮಾ, “ನಿನ್ನ ಪತಿ ನನ್ನೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದಾರೆಂದು ತಿಳಿದೂ ಸಹ ನೀನು ಇಲ್ಲಿ ನನ್ನೊಂದಿಗೆ ಕುಳಿತು ಕಾಫಿ ಕುಡಿಯುತ್ತಿರುವೆಯಲ್ಲ….. ಇದು ಹೇಗೆ?”

“ನಿನ್ನ ಈ ಪ್ರಶ್ನೆಗೆ ಉತ್ತರವನ್ನು ನಾನು ಇಲ್ಲಿಗೆ ಬಂದಾಗಲೇ ಹೇಳಿದೆ. ಪ್ರವೀಣ್‌ ನಿನ್ನನ್ನು ವಿವಾಹವಾಗುವುದಿಲ್ಲ ಎಂದು ತಿಳಿಸಲೆಂದೇ ನಾನಿಲ್ಲಿಗೆ ಬಂದೆ.”

“ಪ್ರವೀಣ್‌ ಪ್ರೀತಿಸುತ್ತಿರುವುದು ನಿನ್ನನ್ನಲ್ಲ. ನನ್ನನ್ನು ಎಂದು ನಾನೂ ನಿನಗೆ ಹೇಳಿದ್ದೇನೆ. ಅವರು ಸದ್ಯದಲ್ಲೇ ನನ್ನನ್ನು ವಿವಾಹವಾಗುತ್ತಾರೆ.”

“ಮುಂದಿನ ಪ್ರಶ್ನೆ,” ಗೀತಾ ಅಳುಕದೆ ಹೇಳಿದಳು.

“ನಿನಗೆ ನನ್ನನ್ನು ಕಂಡು ಭಯವಾಗುತ್ತಿಲ್ಲವೇ…?”

“ಖಂಡಿತ ಇಲ್ಲ! ತಪ್ಪು ಮಾಡಿದವರು ಹೆದರುತ್ತಾರೆ. ನೀನು ಪತಿಯಿಂದ ಮೋಸ ಹೋಗಿ ವಿಚ್ಛೇದನ ಪಡೆದಿದ್ದೀಯಾ. ಈಗ ಪ್ರವೀಣನ ಬಾಳಿನಲ್ಲಿ `ಇಟ್ಟುಕೊಂಡವಳಾಗಿ’ ಇದ್ದೀಯಾ… ನೀನು ಈ ಸಲ ಮೋಸ ಹೋಗುತ್ತೀಯ ಹೆದರಬೇಕಾದವಳು ನೀನು ಅನುಪಮಾ…..”

ಅನುಪಮಾಳ ಮುಖದಲ್ಲಿ ನಗು ಮಾಯವಾಗಿ ಕಳೆಗುಂದಿತು. ಅವಳು ಹಲ್ಲು  ಕಡಿಯುತ್ತಾ,“ಹೌ ಡೇರ್‌ ಯೂ?” ಎಂದಳು.

ಗೀತಾ ನೆಟ್ಟಗೆ ಕುಳಿತುಕೊಳ್ಳುತ್ತಾ, “ಇಷ್ಟಕ್ಕೇ ನಿನಗೆ ಕೋಪ ಬಂದಿತೇನು? ನಾನು ಹೇಳಿದ್ದು ವ್ಯಂಗ್ಯದ ಮಾತಲ್ಲ, ಸತ್ಯಕ್ಕೆ ಹಿಡಿದ ಕನ್ನಡಿ. ಸತ್ಯ ಸಿಹಿಯಾಗಿರುವುದಿಲ್ಲ ಅಲ್ಲವೇ?”

“ನಿನ್ನ ಮಾತಿಗೆ ನಾನು ಹೆದರುತ್ತೇನೆ ಅಂದುಕೊಂಡೆಯಾ?” ಅನುಪಮಾ ಕೆಂಗಣ್ಣು ಬಿಡುತ್ತಾ ಹೇಳಿದಳು.

ಗೀತಾ ಮೆಲುವಾಗಿ ನಗುತ್ತಾ, “ನಿನ್ನನ್ನು ಹೆದರಿಸುವುದು ನನ್ನ ಉದ್ದೇಶವಲ್ಲ. ನೀನು ನನಗೆ ಅನ್ಯಾಯ ಮಾಡಿದ್ದೀಯಾ ಎನ್ನುವುದು ನಿನಗೂ ಗೊತ್ತು. ಆದರೆ ನಾನು ನಿನ್ನ ಮೇಲೆ ಕಿರುಚಿ ಕೂಗಾಡಿದೆನೇನು? ನಾನು ಹಾಗೇನಾದರೂ ಮಾಡಿದರೆ ಇಲ್ಲಿರುವ ಜನರು ನಾನು ಮಾಡಿದ್ದು ಸರಿ ಅನ್ನುತ್ತಾರೆ. ಅವರ ದೃಷ್ಟಿಯಲ್ಲಿ ನೀನು ಏನಾಗುತ್ತೀಯಾ ಅನ್ನುವುದು ನಿನಗೂ ಗೊತ್ತು,” ಎಂದಳು.

ಅನುಪಮಾ ಏನೂ ಮಾತನಾಡದಿರಲು ಗೀತಾ ಮಾತು ಮುಂದುವರಿಸಿದಳು, “ನಾನು ಇಲ್ಲಿಗೆ ಬಂದಾಗಿನಿಂದ ಪ್ರವೀಣ್‌ ನಿನ್ನನ್ನು ವಿವಾಹವಾಗುತ್ತಾರೆ ಎಂದು ಒಂದೇ ರಾಗ ಹಾಡುತ್ತಿದ್ದೀಯಾ. ಆದರೆ ಯಾವಾಗ ಆಗುತ್ತಾರೆ ಅಂತ ಹೇಳುತ್ತೀಯಾ?”

“ಬೇಗನೇ…..”

“ಬೇಗ ಅಂದರೆ ಯಾವಾಗ ಅನುಪಮಾ? ಪ್ರವೀಣ್‌ ನನಗೆ ವಿಚ್ಛೇದನ ಕೊಡದೆ ನಿನ್ನನ್ನು ಹೇಗೆ ವಿವಾಹವಾಗುತ್ತಾರೆ? ಇದನ್ನು ನೀನು ಯೋಚಿಸಿದ್ದೀಯಾ?”

ಏನು ಹೇಳುವುದೆಂದು ಅನುಪಮಾ ಯೋಚಿಸುತ್ತಿರುವಾಗ ಗೀತಾಳೇ ಮಾತನಾಡಿದಳು, “ಪ್ರವೀಣ್‌ ನನ್ನ ಜೊತೆ ಸುಖವಾಗಿಲ್ಲ. ನಾನು ಅವರ ಬಾಳನ್ನು ನರಕ ಮಾಡಿದ್ದೇನೆ. ಅವರು ತಮ್ಮ ಮಗನಿಗೋಸ್ಕರ ನನ್ನನ್ನು ಸಹಿಸಿಕೊಂಡಿದ್ದಾರೆ ಎಂದೆಲ್ಲ ನಿನ್ನ ಜೊತೆ ಹೇಳಿರಬಹುದಲ್ಲವೇ?”

“ನಿನಗೆ ಇದೆಲ್ಲ ಹೇಗೆ ಗೊತ್ತು?” ಅನುಪಮಾ ಅಚ್ಚರಿಗೊಂಡಳು.

“ನೀನು ಬುದ್ಧಿವಂತೆಯ ಹಾಗೆ ಕಾಣುತ್ತೀಯ. ಜೀವನದಲ್ಲಿ ಇಷ್ಟೆಲ್ಲ ನೋಡಿದ್ದೀಯ. ಹಾಗಿರುವಾಗ, ಪ್ರವೀಣ್‌ನಂಥವರು  ಮೊದಲು ಇಂತಹ ಮಾತುಗಳಿಂದ ನಿನ್ನಂತಹ ಹುಡುಗಿಯರಲ್ಲಿ ಅನುಕಂಪ ಮತ್ತು ಆಮೇಲೆ ಪ್ರೀತಿ ಹುಟ್ಟುವಂತೆ ಮಾಡುತ್ತಾರೆ…… ಎಂದು ನಿನಗೆ ಗೊತ್ತಿಲ್ಲವೇ?

“ನೋಡು, ನಾನು ಫೇಸ್‌ಬುಕ್‌ನಲ್ಲಿ ಹುಡುಕಿ ನಿನ್ನ ಬಗ್ಗೆ ವಿವರ ಪಡೆದುಕೊಳ್ಳಬಲ್ಲೆ ಎಂದರೆ ನೀನೂ ಸಹ ಅದರಲ್ಲಿ ನಮ್ಮ ಬಗ್ಗೆ ತಿಳಿದುಕೊಂಡಿರಬಹುದು. ಕಳೆದ ತಿಂಗಳು ನಮ್ಮ ವೆಡ್ಡಿಂಗ್‌ ಆ್ಯನಿವರ್ಸರಿ ಇತ್ತು. ನಮ್ಮ ಫೋಟೋ ನೋಡಿ ನಾವೆಷ್ಟು ಸಂತೋಷವಾಗಿದ್ದೇವೆ ಎಂದು ಅರ್ಥ ಮಾಡಿಕೊಂಡಿರಬಹುದು. ಇದರ ಬಗ್ಗೆ ಪ್ರವೀಣ್‌ನನ್ನು ನೀನು ಏನೂ ಕೇಳಲಿಲ್ಲವೇ?”

“ಪ್ರವೀಣ್‌ಗೆ ಗೊತ್ತಿಲ್ಲದ ಹಾಗೆ ನೀನು ಪಾರ್ಟಿ ವ್ಯವಸ್ಥೆ ಮಾಡಿದ್ದೆ. ಆದ್ದರಿಂದ ಅನಿವಾರ್ಯವಾಗಿ ಸೇರಬೇಕಾಯಿತು ಅಂತ ಅವರು ಹೇಳಿದರು.”

“ಓಹೋ…. ನಿಜವಾದ ವಿಷಯ ಏನು ಅಂದರೆ ಪ್ರವೀಣ್‌ ನನಗೆ ಸರ್ಪ್ರೈಸ್‌ ಪಾರ್ಟಿ ಇಟ್ಟಿದ್ದರು. ನೀನು ನಿನ್ನ ಕಣ್ಣಿನಿಂದ ಪ್ರೀತಿಯ ಪರದೆಯನ್ನು ಸರಿಸಿ ಬುದ್ಧಿವಂತಿಕೆ ಬಳಸಿ ಆ ಫೋಟೋಗಳನ್ನು ನೋಡಿದರೆ ನಿನಗೆ ಬಹುಶಃ ಸತ್ಯ ಕಾಣಬಹುದು. ಇದು ಬರಿಯ ಫೋಟೋಗಳ ವಿಷಯವಲ್ಲ. ಪ್ರವೀಣ್‌ ನಿಜವಾಗಲೂ ನನಗೆ ವಿಚ್ಛೇದನ ಕೊಡುತ್ತಾರೆ ಅಂತ ನಿನಗೆ ಅನ್ನಿಸಿದೆಯಾ? ನಿನಗೆ ಅವರು ಏನೇನೋ ಪ್ರಾಮಿಸ್‌ ಮಾಡಿರಬಹುದು. ಆದರೆ ಅವುಗಳನ್ನು ನಡೆಸಿಕೊಟ್ಟಿದ್ದಾರಾ? ನೀನು ಅವರಿಗಾಗಿ ನನ್ನ ಮುಂದೆ ಬಂದು ಕುಳಿತಿದ್ದೀಯಾ. ಆದರೆ ಇವರು ನಿನಗಾಗಿ ಸಮಾಜವನ್ನು ಎದುರಿಸುತ್ತಾರಾ? ಅವರು ನಿನ್ನನ್ನು ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಪರಿಚಯ ಮಾಡಿದ್ದಾರಾ? ನಿನ್ನ ಬಂಧುಮಿತ್ರರನ್ನು ಭೇಟಿ ಮಾಡಲು ಸಿದ್ಧರಿದ್ದಾರಾ? ಕಾಲ ಮೀರುವುದಕ್ಕೆ ಮೊದಲು ಎಚ್ಚೆತ್ತುಕೋ ಅನುಪಮಾ. ಪ್ರವೀಣ್‌ನ ಪ್ರಾಮಿಸ್‌ಗಳಂತೆ ಅವರ ಪ್ರೀತಿ ಸಹ ಟೊಳ್ಳು.”

ಅನುಪಮಾಳ ಕೈಕಾಲುಗಳು ಮರಗಟ್ಟಿದಂತಾದವು. ಗೀತಾ ಹೇಳಿದ ಒಂದೊಂದು ಮಾತೂ ಅವಳ ಎದೆಯನ್ನು ಇರಿಯುತ್ತಿತ್ತು. ಆ ಮಾತು ಕಹಿಯಾಗಿದ್ದುದು ನಿಜ. ಆದರೆ ಅದರಲ್ಲಿ ಸತ್ಯ ಹುದುಗಿತ್ತು. ಅವಳು ಪ್ರವೀಣ್‌ನೊಂದಿಗೆ ಅವನ ಮನೆಯವರೊಡನೆ ಭೇಟಿ ಮಾಡುವ ಮಾತನಾಡಿದರೆ ಅಥವಾ ತನ್ನ ತಾಯಿ ತಂದೆಯರನ್ನು ಭೇಟಿ ಮಾಡಲು ಅವನಿಗೆ ತಿಳಿಸಿದರೆ, ಅವನು ಪ್ರತಿಸಲ ಏನಾದರೊಂದು ಕಾರಣ ಹೇಳಿ ತಪ್ಪಿಸುತ್ತಿದ್ದ. ಅವನು ತನ್ನ ಪತ್ನಿ ಮತ್ತು ಮಗನ ಜೊತೆ ತಿರುಗಾಡಲು ಅಥವಾ ಸಮಾರಂಭಗಳಿಗೆ ಹೋಗಿದ್ದ ವಿಷಯ ತಿಳಿದು ಅವಳು ಕೋಪ ಮಾಡಿಕೊಂಡರೆ ಅವನು ತನ್ನ ಅಸಹಾಯಕತೆಯ ಕಾರಣ ಕೊಟ್ಟು ಎಲ್ಲಕ್ಕೂ ಗೀತಾಳೇ ಕಾರಣ ಎಂದು ಹೇಳುತ್ತಿದ್ದ.

story-image

ಫೋಟೋಗಳ ವಿಷಯಕ್ಕೂ ಅವನು ಸಾವಿರ ಸುಳ್ಳುಗಳನ್ನು ಹೇಳಿದ್ದ. ಅವರಿಬ್ಬರ ಭೇಟಿ ಸಹ ಪ್ರಪಂಚದ ಕಣ್ಣು ತಪ್ಪಿಸಿ ಅನುಪಮಾಳ ಮನೆಯಲ್ಲೇ ಆಗುತ್ತಿತ್ತು. ಆಫೀಸ್‌ನಲ್ಲಿಯೂ ಪ್ರವೀಣನ ವ್ಯವಹಾರ ಒಬ್ಬ ಬಾಸ್‌ ತನ್ನ ಸ್ಟಾಫ್‌ನೊಂದಿಗೆ ನಡೆಸುವಂತೆ ಇರುತ್ತಿತ್ತು.

ಅವಳು ವಿವಾಹದ ವಿಷಯ ತೆಗೆದಾಗೆಲ್ಲ ಅವನು ಒಂದು ಹೊಸ ಕಾರಣ ಹೇಳಿ ಮುಂದೂಡುತ್ತಿದ್ದ. ಅವಳು ಪ್ರವೀಣನನ್ನು ತನ್ನ ಸರ್ವಸ್ವವೆಂದು ಭಾವಿಸಿದ್ದಳು. ಆದರೆ ಪ್ರವೀಣ್‌? ಗೀತಾ ಹೇಳುತ್ತಿರುವುದು ಸರಿಯಾಗಿದೆ. ಅವನು ಸುಳ್ಳು ಪ್ರಾಮಿಸ್‌ಗಳನ್ನು ಮಾಡಿದುದಲ್ಲದೆ, ಮತ್ತೇನೂ ಕೊಡಲಿಲ್ಲ. ಈಗ ಕೆಲವು ದಿನಗಳಿಂದಲಂತೂ ದೂರವೇ ಇದ್ದಾನೆ. ಅವಳ ಮನೆಗೂ ಬರುತ್ತಿಲ್ಲ, ಫೋನ್‌ ಕೂಡ ಮಾಡುತ್ತಿಲ್ಲ. ಅವಳೇ ಫೋನ್‌ ಮಾಡಿದರೆ ತಲೆನೋವಿನ ನೆಪ ಹೇಳುತ್ತಾನೆ.

ಅವನು ಈಗ 3 ದಿನಗಳು ಊರಿಗೆ ಹೋಗಿದ್ದಾನೆಂಬ ವಿಷಯ ಅವಳ ಸಹೋದ್ಯೋಗಿಯಿಂದ ತಿಳಿಯಿತು. ಇವೆಲ್ಲ ಪ್ರವೀಣ್‌ ಅವಳಿಂದ ದೂರ ಹೋಗುತ್ತಿದ್ದಾನೆ ಎಂಬುದನ್ನು ತೋರಿಸುತ್ತಿದೆ. ಅವಳಿಗೆ ಮನಸ್ಸಿನ ಒಂದು ಮೂಲೆಯಲ್ಲಿ ಈ ಭಾವನೆ ತಲೆಯೆತ್ತಿದೆ. ಆಗ ಅರುಣ್‌ ಅವಳ ಬಾಳನ್ನು ಹಾಳು ಮಾಡಿದ್ದ. ಈಗ ಪ್ರವೀಣ್‌ ಹಾಗೆ ಮಾಡಲು ಹೊರಟಿದ್ದಾನೆ. ಅನುಪಮಾಳ ಮೌನವನ್ನು ಕಂಡು ಗೀತಾಳೇ ಮಾತನಾಡಿದಳು, “ನೀನೇ ತಪ್ಪಿತಸ್ಥೆ ಎಂದು ನಾನು ಖಂಡಿತ ಹೇಳುತ್ತಿಲ್ಲ. ಈಗ ನಡೆದಿರುವುದರಲ್ಲಿ ನಿನಗಿಂತ ಹೆಚ್ಚು ತಪ್ಪು ಪ್ರವೀಣ್‌ನಿಂದ ಆಗಿದೆ. ನೀನು ಈ ಊರಿಗೆ ಮೊದಲು ಬಂದಾಗ ಬಹಳ ನೊಂದಿದ್ದೆ. ಪ್ರವೀಣ್‌ ಅದನ್ನು ಬಳಸಿಕೊಂಡು ನಿನ್ನನ್ನು ಮರುಳು ಮಾಡಿದರು, ನೀನದನ್ನು ಪ್ರೀತಿ ಎಂದು ಭಾವಿಸಿದೆ. ಅವರು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಂಡರು, ಇಬ್ಬಗೆಯ ಜೀವನ ನಡೆಸಿದರು. ಒಂದು ನನ್ನ ಮತ್ತು ಮಗ ಸಿದ್ಧಾರ್ಥ್‌ನೊಂದಿಗೆ ಹಾಗೂ ಇನ್ನೊಂದು ಸಮಾಜದ ಕಣ್ಣು ತಪ್ಪಿಸಿ ನಿನ್ನೊಂದಿಗೆ. ಅವರು ನಿನಗೆ ಸುಳ್ಳು ಹೇಳುತ್ತಾ ನಿನ್ನನ್ನು ಬಳಸಿಕೊಂಡರು, ನೀನದನ್ನು ಪ್ರೀತಿಯೆಂದೇ ತಿಳಿದೆ.”

ಗೀತಾಳ ಮಾತಿನಿಂದ ಅನುಪಮಾಳ ಕಣ್ಣುಗಳಲ್ಲಿ ನೀರು ತುಂಬಿತು. ಅವಳು ನಿಧಾನವಾಗಿ, “ನೀನು ಪ್ರವೀಣ್‌ ಜೊತೆ ಈ ವಿಷಯದ ಬಗ್ಗೆ ಮಾತನಾಡಿದಾಗ ಅವರು ಏನೆಂದರು…..?” ಎಂದು ಕೇಳಿದಳು.

“ನಿನ್ನ ವಿಷಯ ನನಗೆ ತಿಳಿದು ಬಂದಾಗ ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ನೀನೇ ಅವರ ಹಿಂದೆ ಬಿದ್ದಿದ್ದು, ಮರುಳು ಮಾಡಿದ್ದೀಯಾ ಎಂದು ಹೇಳಿದರು. ಇದಕ್ಕಾಗಿ ನನ್ನ ಬಳಿ ಮತ್ತೆ ಮತ್ತೆ ಕ್ಷಮೆ ಕೇಳಿದರು. ಸಿದ್ಧಾರ್ಥನ ಮೇಲೆ ಆಣೆಯಿಟ್ಟು ನಿನ್ನನ್ನು ಇನ್ನೂ ಎಂದೂ ಭೇಟಿ ಮಾಡುವುದಿಲ್ಲವೆಂದು ಹೇಳಿದರು. ಅವರು ಟ್ರಾನ್ಸ್ ಫರ್‌ಗಾಗಿ ಅರ್ಜಿಯನ್ನೂ ಕೊಟ್ಟಿದ್ದಾರೆ.”

ಅನುಪಮಾಳ ಕಣ್ಣೀರು ಅವಳ ಕೆನ್ನೆಯನ್ನೂ ತೋಯಿಸಿತು. ಪ್ರವೀಣ್‌ ಹಿಂದೆ ಕೆಲವು ವಾರಗಳ ಕಾಲ ಅವಳ ಬೆನ್ನು ಬಿದ್ದಿದ್ದ. ಅವಳ ಮೇಲೆ ಪ್ರೀತಿಯ ಪ್ರಭಾವ ಬೀರಲು ಅದೆಷ್ಟೋ ಪ್ರಯತ್ನಿಸಿದ್ದ. ತನ್ನ ಸಂಸಾರದ ಸಂಬಂಧ ಸರಿಯಿಲ್ಲವೆಂದು ಹೇಳಿ ಅವಳ ಮನಸ್ಸಿನಲ್ಲಿ ಅನುಕಂಪ ಮೂಡಿಸಿದ್ದ. ಅವಳಿಗಾಗಿ ಪ್ರಪಂಚವನ್ನೇ ಎದುರಿಸುವೆನೆಂಬ ಮಾತು ಹೇಳುತ್ತಿದ್ದವನು ಇಂದು ತಮ್ಮ ಗುಟ್ಟು ತಿಳಿದುಬಂದಾಗ ತಲೆ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನದಲ್ಲಿದ್ದಾನೆ.

ಅವಳ ಗಂಟಲು ಬಿಗಿಯಿತು. ಅವಳು ತಲೆ ತಗ್ಗಿಸಿ, “ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನಾನು ನಿಮ್ಮನ್ನು ಹೇಗೆ ಕ್ಷಮೆ ಕೇಳಲಿ ಎಂದು ಗೊತ್ತಾಗುತ್ತಿಲ್ಲ. ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಾನು ನಿಮಗೆ ಅನ್ಯಾಯ ಮಾಡಿದೆ.”

“ಅನ್ಯಾಯ ನಮ್ಮಿಬ್ಬರಿಗೂ ಆಗಿದೆ ಅನುಪಮಾ. ನೀನು ತಪ್ಪು ಮಾಡಿದ್ದೀಯಾ ಅಂತ ಅಂದುಕೊಂಡಿದ್ದರೆ, ನಾನೀಗ ನಿನ್ನ ಮುಂದೆ ಕುಳಿತು ಮಾತನಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ನನಗೆ ನಿನ್ನ ಮೇಲೆ ಏನೂ ಕೋಪವಿಲ್ಲ. ಪ್ರವೀಣ್‌ ನಮ್ಮಿಬ್ಬರಿಗೂ ಮೋಸ ಮಾಡಿದ್ದಾರೆ. ಮತ್ತೆ, ನೀನು ಕ್ಷಮೆ ಕೇಳಲಿ ಅಂತ ನಾನಿಲ್ಲಿಗೆ ಬರಲಿಲ್ಲ. ನನ್ನ ಉದ್ದೇಶ ಏನಿದ್ದರೂ, ನಿನ್ನನ್ನು ಎಚ್ಚರಿಸುವುದಾಗಿತ್ತು.”

ಗೀತಾಳ ಮಾತಿನಿಂದ ಅನುಪಮಾಳ ಮನಸ್ಸಿಗೆ ಮತ್ತಷ್ಟು ಚುಚ್ಚಿದಂತಾಯಿತು, ತಪ್ಪಿತಸ್ಥ ಭಾವನೆ ತುಂಬಿಕೊಂಡಿತು. ನಾನು ಈ ಮಹಿಳೆಯ ಮನೆ ಮುರಿಯಲು ಹೊರಟಿದ್ದೆ. ಆದರೆ ಇವಳು ನನ್ನ ಮೇಲೆ ದೋಷಾರೋಪಣೆ ಮಾಡುವ ಬದಲು ಇಲ್ಲಿ ಕುಳಿತು ಸಹಾನುಭೂತಿ ತೋರಿಸುತ್ತಿದ್ದಾಳೆ. ಅನುಪಮಾ ಸೋತು ಒರಗಿ ಕುಳಿತುಬಿಟ್ಟಳು.

ಅವಳ ಸ್ಥಿತಿ ಕಂಡು ಗೀತಾ ಸಮಾಧಾನಪಡಿಸಲು ಪ್ರಯತ್ನಿಸಿದಳು, “ಅನುಪಮಾ, ಧೈರ್ಯ ಕಳೆದುಕೊಳ್ಳಬೇಡ. ಆಗ ನಿನ್ನ ಮನಃಸ್ಥಿತಿ ಹೇಗಿತ್ತೆಂದರೆ, ಪ್ರವೀಣನೇ ಅಲ್ಲ, ಅನಂತಹ ಯಾವುದೇ ವಿಕೃತ ಮನಸ್ಸಿನ ಪುರುಷನೂ ಸಹ ನಿನ್ನನ್ನು ಬಳಸಿಕೊಳ್ಳಬಹುದಿತ್ತು. ನಿನ್ನಿಂದ ತಪ್ಪೇನೂ ಆಗಿಲ್ಲ ಎಂದು ನಾನು ಹೇಳುತ್ತಿಲ್ಲ. ನೀನೂ ಸಹ ತಪ್ಪು ಮಾಡಿದ್ದೀಯಾ. ಒಮ್ಮೆ ಮೋಸ ಹೋದ ಮೇಲೆ ನೀನು ಏನೊಂದೂ ಯೋಚಿಸದೆ ಕಣ್ಣು ಮುಚ್ಚಿಕೊಂಡು ಪ್ರವೀಣನ ಮೇಲೆ ವಿಶ್ವಾಸವಿರಿಸಬಾರದಿತ್ತು. ಆದ ತಪ್ಪಿಗೆ ಈಗ ಪಶ್ಚಾತ್ತಾಪ ಪಟ್ಟು ಅಳುತ್ತಾ ಸಮಯ ವ್ಯರ್ಥ ಮಾಡಬೇಡ, ಬದಲಿಗೆ ಅದರಿಂದ ಪಾಠ ಕಲಿತು ಜೀವನದಲ್ಲಿ ಮುಂದೆ ಹೋಗು.”

“ನನಗೆ…. ಅಷ್ಟು ಧೈರ್ಯವಿಲ್ಲ ಗೀತಾ…..”

“ಹಾಗೆ ಹೇಳಬೇಡ ಅನುಪಮಾ. ನಿನಗೆ ಜೀವನ ಸಾಗಿಸಲು ಪ್ರವೀಣನಂತಹ ವ್ಯಕ್ತಿಯ ಅಗತ್ಯವಿಲ್ಲ. ನಿನ್ನನ್ನು ಅಷ್ಟು ಕೆಳಮಟ್ಟಕ್ಕೆ ಇಳಿಸಬೇಡ.  ನೀನು ಸುಂದರವಾಗಿದ್ದಿಯ, ವಿದ್ಯಾವಂತೆ ಮತ್ತು ಸ್ಮಾರ್ಟ್‌ ಆಗಿದ್ದೀಯ. ನಿನ್ನ ಜೀನವನ್ನು ರೂಪಿಸಿಕೊ. ವಿಚ್ಛೇದನ ಪಡೆಯುವುದು ಅಥವಾ ಇನ್ನೊಂದು ವಿವಾಹವಾಗುವುದೇನೂ ತಪ್ಪಲ್ಲ. ಸ್ವಲ್ಪ ಸಮಯ ಸಹನೆಯಿಂದಿರು. ನಿನ್ನ ಬಾಳಿನಲ್ಲಿ ಯಾರಾದರೊಬ್ಬರು ಖಂಡಿತ ಬರುತ್ತಾರೆ. ನಿಮ್ಮ ಸಂಬಂಧಕ್ಕೊಂದು ಹೆಸರು ಕೊಟ್ಟು, ನಿನಗೆ ಪತ್ನಿಯಾಗುವ ಗೌರವ ದೊರಕಿಸಿ ಕೊಡುತ್ತಾರೆ,” ಗೀತಾ ಧೈರ್ಯ ತುಂಬುವ ಮಾತನ್ನಾಡಿದಳು.

ಅನುಪಮಾ ತನ್ನ ಕಣ್ಣೀರನ್ನು ಒರೆಸಿಕೊಳ್ಳುತ್ತಾ, “ನಿಮ್ಮನ್ನು ನನ್ನ ದಾರಿಯಿಂದ ದೂರ ಮಾಡಲು ಬಯಸಿದ್ದೆ. ಆದರೆ ನೀವು ನನಗೆ ಸರಿಯಾದ ದಾರಿ ತೋರಿಸಿದಿರಿ. ನೀವು ನನಗಿಂತ ದೊಡ್ಡವರು. ನಾನು ನಿಮ್ಮನ್ನು ಆಕ್ಕ ಎಂದು ಕರೆಯಬಹುದೇ?”

ಗೀತಾ ಮುಗುಳ್ನಕ್ಕು ಒಪ್ಪಿಗೆ ಸೂಚಿಸಿದಳು.

ಆಗ ಅನುಪಮಾ ಕೈ ಜೋಡಿಸಿ ಕ್ಷಮೆ ಕೇಳುತ್ತಾ, “ನನ್ನನ್ನು ಕ್ಷಮಿಸಿ ಅಕ್ಕಾ, ನನ್ನಿಂದ ದೊಡ್ಡ ತಪ್ಪಾಗಿದೆ. ಇನ್ನೊಂದು ಹೆಣ್ಣು ನನಗೆ ಮಾಡಿದ ಮೋಸವನ್ನೇ ನಾನು ನಿಮಗೆ ಮಾಡಲು ಹೊರಟಿದ್ದೆ,” ಎಂದಳು.

ಅನುಪಮಾ ಜೋಡಿಸಿದ್ದ ಕೈಗಳನ್ನು ಹಿಡಿದು ಮೆಲ್ಲನೆ ಅದುಮಿದ ಗೀತಾ, “ನೀನು ಕ್ಷಮೆ ಕೇಳುವ ಅಗತ್ಯವಿಲ್ಲ ಅನುಪಮಾ. ನಾನು ಹೇಳಿದ ವಿಷಯದ ಬಗ್ಗೆ ಯೋಚನೆ ಮಾಡು. ನೀನು ಜೀವನದಲ್ಲಿ ತಲೆ ಎತ್ತಿ ನಡೆಯಲು ಪ್ರಯತ್ನಿಸು,” ಎಂದಳು.

“ಇನ್ನು ಮುಂದೆ ಪ್ರವೀಣ್‌ ಅಥವಾ ಅವರಂಥವರಿಗೆ ನನ್ನ ಜೀವನದಲ್ಲಿ ಅವಕಾಶ ಕೊಡುವುದಿಲ್ಲ ಎಂದು ನಿಮಗೆ ಪ್ರಾಮಿಸ್‌ಮಾಡುತ್ತೇನೆ. ನಾನು ಊರಿಗೆ ಹಿಂದಿರುಗಿ ನನ್ನ ತಾಯಿ ತಂದೆಯರ ಜೊತೆ ಇದ್ದುಕೊಂಡು ಯಾವುದಾದರೂ ಕೆಲಸ ಹುಡುಕಿಕೊಳ್ಳುತ್ತೇನೆ.”

ಈಗ ಅನುಪಮಾಳಿಗೆ ಎದೆಯ ಮೇಲಿನಿಂದ ಭಾರವೊಂದು ಇಳಿದು ಹಗುರವಾದ ಅನುಭವವಾಗ ತೊಡಗಿತು. ಅವಳು ಹೊರಗೆ ತಾನು ಸರಿ ಇದ್ದೇನೆ ಎಂದು ಹೇಳುತ್ತಿದ್ದರೂ ಅವಳ ಮನಸ್ಸಿನಾಳದಲ್ಲಿ ತಪ್ಪು ಮಾಡುತ್ತಿದ್ದೇನೆ ಎಂಬ ಭಾರವಿತ್ತು. ಇನ್ನವಳು ಅಪರಾಧಿಯಂತೆ ಬಾಗಿ ನಡೆಯದೆ ಧೈರ್ಯವಾಗಿ ತಲೆಯೆತ್ತಿ ನಿಲ್ಲಲು ಬಯಸಿದಳು. ಗೀತಾ ಹೇಳಿದ ಮಾತುಗಳು ಅವಳಲ್ಲಿ  ಸಕಾರಾತ್ಮಕ ಮನೋಭಾವವನ್ನು ಮೂಡಿಸಿದವು. ಮುಂದಿದ್ದ ಕಾಫಿ ಹಾಗೇ ತಣ್ಣಗಾಗಿತ್ತು. ಮತ್ತೊಮ್ಮೆ ಕಾಫಿಗೆ ಆರ್ಡರ್‌ ಮಾಡಿ, ಇಬ್ಬರೂ ಹವಾಮಾನದ ಬಗ್ಗೆ ಮಾತನಾಡುತ್ತಾ ಕುಳಿತರು. ಕಾಫಿ ಕುಡಿಯುತ್ತಾ ಅನುಪಮಾ ಯೋಚಿಸುತ್ತಿದ್ದಳು. 2 ವರ್ಷಗಳ ಹಿಂದೆ ತಾನೂ ಹೀಗೇ ಧೈರ್ಯ ಮಾಡಿ ಅರುಣ್‌ ಮತ್ತು ನಿಶಾಳ ಮುಂದೆ ಗೋಡೆಯಂತೆ ನಿಂತಿದ್ದರೆ, ಇಂದಿನ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಅವಳ ಕಣ್ಣೀರಿನಲ್ಲಿ ದುಃಖ ಮತ್ತು ಅವಮಾನದ ಬದಲು ಸ್ವಾಭಿಮಾನ ಮತ್ತು ಗೆಲುವಿನ ಹೊಳಪಿತ್ತು. ಅವಳು ತನ್ನ ವಿವಾಹ ಜೀವನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತೋ ಇಲ್ಲವೋ, ಆದರೆ ಸಂಬಂಧವನ್ನು ಕಾಪಾಡಲು ಪೂರ್ತಿ ಪ್ರಯತ್ನ ಮಾಡಿದೆನೆಂಬ ಸಮಾಧಾನವಿರುತ್ತಿತ್ತು. ಒಂದು ದೊಡ್ಡ ತಪ್ಪು ಮಾಡಿ ಇಂದು ಗೀತಾಳ ಮುಂದೆ ತಲೆ ತಗ್ಗಿಸಿ ನಿಲ್ಲುವುದು ತಪ್ಪುತ್ತಿತ್ತು. ಗೀತಾಳಂತೆ ಅವಳೂ ವಿಶಾಲ ಮನೋಭಾದವಳಾಗಿರ ಬೇಕಿತ್ತು. ಈ ದಿನ ಗೀತಾಳ ಜೊತೆ ಕುಳಿತು ಕುಡಿದ ಕಾಫಿ ಜೀವನ ಮತ್ತು ಸಂಬಂಧಗಳ ಬಗೆಗಿನ ಅವಳ ಆಲೋಚನಾ ವಿಧಾನವನ್ನೇ ಬದಲಿಸಿಬಿಟ್ಟಿತು.

“ಸರಿ, ನಾನಿನ್ನು ಹೊರಡುತ್ತೇನೆ. ಸಿದ್ಧಾರ್ಥನನ್ನು ಅಮ್ಮನ ಹತ್ತಿರ ಬಿಟ್ಟು ಬಂದಿದ್ದೇನೆ. ಅವರಿಗೆ ತೊಂದರೆ ಮಾಡಿರಬಹುದು,” ಎನ್ನುತ್ತಾ ಗೀತಾ ಮೇಜಿನ ಮೇಲಿದ್ದ ತನ್ನ ಪರ್ಸ್‌ನ್ನು ಕೈಗೆತ್ತಿಕೊಂಡಳು.

“ಅಕ್ಕಾ…. ಒಂದು ನಿಮಿಷ. ಮತ್ತೆ ನೀವು ಪ್ರವೀಣ್‌ನನ್ನು ಹೇಗೆ ಕ್ಷಮಿಸಿದಿರಿ? ಸಿದ್ಧಾರ್ಥನಿಗೋಸ್ಕರವೇ….?” ಅನುಪಮಾ ತನ್ನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಯನ್ನು ಮುಂದಿಟ್ಟಳು.

“ಪ್ರವೀಣ್‌ನನ್ನು ಕ್ಷಮಿಸಿದ್ದೇನೆ ಎಂದು ನಾನು ಯಾವಾಗ ಹೇಳಿದೆ?”

“ನೀವು ನನ್ನನ್ನು ಕ್ಷಮಿಸಿದ್ದೀರಲ್ಲ. ಹಾಗೇ……”

“ನಿನ್ನ ವಿಷಯ ಬೇರೆ ಅನುಪಮಾ. ನೀನು ಜೀವನದಲ್ಲಿ ಸೋತು ನೊಂದಿದ್ದೆ, ತಪ್ಪು ಮಾಡಿದ್ದೆ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದೆ. ನೀನು ನನಗೇನೂ ಸಂಬಂಧವಿಲ್ಲ. ಆದರೆ ಪ್ರವೀಣ್‌ ನನ್ನವರು. ಅವರು ನನಗೆ ಮೋಸ ಮಾಡಿದರು. ಅವರ ಮೋಸನ್ನು ನಾನು ಪತ್ತೆ ಮಾಡಿಲ್ಲದಿದ್ದರೆ ಅವರು ಈಗಲೂ ಕದ್ದು ಮುಚ್ಚಿ ನಿನ್ನನ್ನು ಭೇಟಿಯಾಗುತ್ತಿದ್ದರು.”

“ಆದರೆ ಅವರೀಗ ಟ್ರಾನ್ಸ್ ಫರ್‌ ತೆಗೆದುಕೊಳ್ಳುತ್ತಿದ್ದಾರಲ್ಲಾ…… ನನ್ನನ್ನು ನಂಬಿ, ನಾನು ಇನ್ನೆಂದೂ ಅವರನ್ನು ಭೇಟಿ ಮಾಡುವುದಿಲ್ಲ.”

ಅಶ್ರುಪೂರಿತ ನಯನಗಳಿಂದ ಅನುಪಮಾಳನ್ನು ನೋಡುತ್ತಾ ಗೀತಾ, “ನಿನ್ನ ಸಹವಾಸ ಮಾಡಿದ್ದು ಪ್ರವೀಣನ ಮೊದಲನೆ ಮತ್ತು ಕೊನೆಯ ತಪ್ಪು ಅಂತ ತಿಳಿದಿದ್ದೀಯಾ? ನಿನಗಿಂತ ಮೊದಲು ಸಹ ಅವರು ಇಂತಹ ತಪ್ಪು ಮಾಡುತ್ತಲೇ ಬಂದಿದ್ದಾರೆ. ಅವರ ಆಟ ಗೊತ್ತಾಗಿಬಿಟ್ಟಾಗ ಕ್ಷಮೆ ಕೇಳುತ್ತಾರೆ ಅಷ್ಟೇ. ಅವರು ಸರಿಯಾಗುವುದಿದ್ದರೆ ಮೊದಲನೆಯ ಸಲ ತಪ್ಪು ಮಾಡಿ ಸಿಕ್ಕಿಕೊಂಡಾಗಲೇ ಸರಿದಾರಿಯಲ್ಲಿರುತ್ತಿದ್ದರು. ಪ್ರವೀಣ್‌ನಂತಹ ಕಪಟಿಗಳು ತಮ್ಮ ಮೋಸಗಾರಿಕೆಯನ್ನು ಎಂದೂ ಬಿಡುವುದಿಲ್ಲ.

“ಈಗ ನಾನು ಅವರನ್ನು ಮತ್ತೆ ಕ್ಷಮಿಸಿದರೆ ಅದೇ ತಪ್ಪನ್ನು ಪುನಃ ಪುನಃ ಮಾಡುತ್ತಾರೆ. ಅದು ಹಾಗೇ ಮುಂದುವರಿಯುತ್ತಾ ಹೋಗುತ್ತದೆ. ಇನ್ನು ಅವರನ್ನು ಕ್ಷಮಿಸುದಕ್ಕೆ ನನ್ನ ಸ್ವಾಭಿಮಾನ ಒಪ್ಪುವುದಿಲ್ಲ.”

ಇಷ್ಟು ಹೊತ್ತಿನವರೆಗೆ ಗೀತಾಳ ಕಣ್ಣುಗಳಲ್ಲಿ ಅನುಪಮಾ ಆತ್ಮವಿಶ್ವಾಸ ಮತ್ತು ಧೈರ್ಯದ ಹೊಳಪನ್ನು ಕಂಡಿದ್ದಳು. ಆ ಕಣ್ಣುಗಳಲ್ಲಿ ಇಷ್ಟೊಂದು ನೋವು ಸಹ ಅಡಗಿರಬಹುದೆಂಬ ಕಲ್ಪನೆಯೇ ಅವಳಿಗಿರಲಿಲ್ಲ. ಗೀತಾಳ ಕಷ್ಟವನ್ನು ಅರ್ಥ ಮಾಡಿಕೊಂಡ ಅನುಪಮಾ ಮೆಲ್ಲನೆ, “ಅಕ್ಕಾ ಆದರೆ ಅವರು ಟ್ರಾನ್ಸ್ ಫರ್‌ ತೆಗೆದುಕೊಂಡರೆ…..?” ಎಂದು ಕೇಳಿದಳು.

“ಬೇರೆ ಊರಿನಲ್ಲಿ ಒಬ್ಬರೇ ಹೇಗೆ ಇರುತ್ತಾರೆ ಅನ್ನುವುದಕ್ಕೆ  ಪ್ರವೀಣ್‌ ಏನೂ ಚಿಕ್ಕ ಮಗುವಲ್ಲ. ಇಲ್ಲಿರುವಾಗಲೂ ಅವರಿಗೆ ಹೆಂಡತಿ, ಮಗುವಿನ ಅಗತ್ಯ ಇರಲಿಲ್ಲ. ಎಲ್ಲಿ ಹೋಗುತ್ತಾರೋ ಅಲ್ಲಿ ಇನ್ನೊಬ್ಬಳು ಅನುಪಮಾ ಅಥವಾ ನಿರುಪಮಾಳನ್ನು ಹುಡುಕಿಕೊಳ್ಳುತ್ತಾರೆ. ನನಗೆ ಮತ್ತು ಸಿದ್ಧಾರ್ಥ್‌ಗೆ ಅವರ ಅಗತ್ಯವಿಲ್ಲ. ನಾನು ಇದುವರೆಗೆ ಹೇಗೆ ಮಗುವನ್ನು ಪಾಲನೆ ಮಾಡಿದೆನೋ, ಮುಂದೆಯೂ ಹಾಗೇ ಮಾಡುತ್ತೇನೆ. ನಾನು ವಿದ್ಯಾವಂತೆ. ನನ್ನ ಮತ್ತು ಸಿದ್ಧಾರ್ಥ್‌ನ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತೇನೆ.

“ಇದುವರೆಗೆ ನಾನು ನಮ್ಮ ಸಂಬಂಧದಲ್ಲಿ ಏನನ್ನೂ ಆಶಿಸದೆ ಪ್ರವೀಣ್‌ಗೆ ನನ್ನದೆಲ್ಲವನ್ನೂ ಕೊಟ್ಟಿದ್ದೇನೆ. ಆದರೆ ಇನ್ನು ಮುಂದೆ ಹಾಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ, ಕ್ಷಮೆಯೂ ಇಲ್ಲ,” ಎಂದು ಹೇಳಿ ಗೀತಾ ವೇಗವಾಗಿ ಹೆಜ್ಜೆಯಿರಿಸುತ್ತಾ ರೆಸ್ಟೋರೆಂಟ್‌ನ ಹೊರಗೆ ನಡೆದಳು. ಒಳಗೇ ಉಳಿದ ಅನುಪಮಾ, ಒಮ್ಮೆ ರೆಸ್ಟೋರೆಂಟ್‌ನ ಬಾಗಿಲನ್ನು ಮತ್ತೊಮ್ಮೆ ಮೇಜಿನ ಮೇಲಿದ್ದ ಹೂದಾನಿಯನ್ನು ದಿಟ್ಟಿಸುತ್ತಾ ಕುಳಿತಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ