ಪಾರ್ಟಿ ಬಲು ಜೋರಾಗಿ ನಡೆಯುತ್ತಿತ್ತು. ದೀಪ್ತಿ ಮತ್ತು ದೀಪಕ್‌ರ 16ನೇ ವಿವಾಹ ವಾರ್ಷಿಕೋತ್ಸದ ಸಂದರ್ಭವದು. ಇಬ್ಬರ ಮುಖದಲ್ಲೂ ಅಪೂರ್ವ ಕಳೆ ತುಂಬಿತ್ತು. ಇಬ್ಬರೂ ಬೆಂಗಳೂರಿನ ಪಾಷ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಖ್ಯಾತ ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರು.
ದೀಪ್ತಿ ಈ ಪಾರ್ಟಿಗೆಂದೇ ಆಕಾಶ ದೇವತೆಯಂತೆ ನೀಲಿ ಮೈಸೂರು ಸಿಲ್ಕ್ ಸೀರೆಯುಟ್ಟು ಮಿಂಚಿಂತೆ ಸುಳಿದಾಡುತ್ತಿದ್ದಳು. ಇಬ್ಬರೂ ಈ ಪಾರ್ಟಿಗೆ ತಮ್ಮ ಹತ್ತಿರದ ನೆಂಟರಿಷ್ಟರು, ಗೆಳೆಯರನ್ನು ಕರೆದಿದ್ದರು. ದೀಪಕ್‌ನ ಗೆಳೆಯರು ದೀಪ್ತಿಯ ಸೌಂದರ್ಯ ಕಂಡು ಮನದಲ್ಲೇ ನಿಟ್ಟುಸಿರು ಬಿಡುತ್ತಿದ್ದರೆ, ದೀಪಕ್ ಹೆಂಡತಿಯ ಪ್ರೇಮದಲ್ಲಿ ಹುಚ್ಚನಾಗಿರುವುದನ್ನು ಕಂಡು ಅವಳ ಗೆಳತಿಯರು ಮೇಲ್ನೋಟಕ್ಕೆ ಹರ್ಷ ವ್ಯಕ್ತಪಡಿಸಿದರೂ ಒಳಗೊಳಗೆ ಅಸೂಯೆಯಿಂದ ಕುದ್ದು ಹೋಗುತ್ತಿದ್ದರು.
ಪಾರ್ಟಿ ಸಲುವಾಗಿ ಕೇಕ್ ಕಟ್ ಮಾಡಿದ ನಂತರ, ಬಂದ ಅತಿಥಿಗಳಿಗಾಗಿ ಹಲವು ಬಗೆಯ ಗೇಮ್ಸ್ ಏರ್ಪಡಿಸಲಾಗಿತ್ತು. ಅತಿಥಿಗಳ ಒತ್ತಾಯದ ಮೇರೆಗೆ ದೀಪ್ತಿ ದೀಪಕ್ ಸಹ ಅದರಲ್ಲಿ ಭಾಗವಹಿಸಿದರು. ಹೆಚ್ಚಿನ ಗೇಮ್ಸ್ ನಲ್ಲಿ ಅವರೇ ಗೆಲ್ಲುತ್ತಿದ್ದರು. ಅಂತೂ ಒಳ್ಳೆಯ ಮೂಡ್‌ನಲ್ಲಿ ಮಸ್ತಿ, ಜೋಶ್‌ನಿಂದ ಪಾರ್ಟಿ ಮುಗಿಯಿತು. ಊಟ ಆದ ನಂತರ ನಸುನಗುತ್ತಾ ಇರುವ ಅತಿಥಿಗಳನ್ನು ಬೀಳ್ಕೊಂಡರು.
ಅದಾದ ಮೇಲೆ ಇಬ್ಬರೂ ದ್ವೀಪಗಳಂತಿದ್ದ ತಂತಮ್ಮ ಬೇರೆ ಬೇರೆ ಕೋಣೆಗಳಿಗೆ ಹೋಗಿ ಬಾಗಿಲಿಕ್ಕಿಕೊಂಡರು. ಅಲ್ಲಿ ನೀನಾ ಎಂದು ಕೇಳುವ ಬೇರೊಂದು ಪ್ರಾಣಿಗೆ ತಾವಿರಲಿಲ್ಲ. ಇಂದಿನ ಅತ್ಯಾಧುನಿಕ ಜೋಡಿಗಳು ಜೊತೆಯಲ್ಲಿದ್ದೂ, ಪರಸ್ಪರ ಸಂಧಿಸದ ಸಮಾನಾಂತರ ರೇಖೆಗಳಂತೆ ಬಾಳುತ್ತಿದ್ದರು. ಇಬ್ಬರಿಗೂ ಬೆಳಗ್ಗೆ ಎದ್ದು ತಂತಮ್ಮ ಆಫೀಸಿಗೆ ಓಡುವುದೇ ಜೀವನ, ರಾತ್ರಿ ಬರುವುದು 9 ಅಥವಾ 10 ಆಗಬಹುದು. ಊಟ, ವಿಶ್ರಾಂತಿ.... ನಿದ್ದೆ.... ಅಲ್ಲಿಗೆ ದಿನ ಮುಗಿಯಿತು. ಯಾವಾಗ ವೈಯಕ್ತಿಕವಾಗಿ ಪರಸ್ಪರ ಅಪರಿಚಿತರಾದರೋ ಅವರಿಗೇ ತಿಳಿಯಲಿಲ್ಲ.
ಆ ರಾತ್ರಿ ಮುಂಬೈನಿಂದ ದೀಪಕ್‌ನ ಅಕ್ಕ ಶೀಲಾ ಬರುವವಳಿದ್ದಳು. ದೂರ ದೂರಿನಿಂದ ಅಪರೂಪಕ್ಕೆ ಹಿರಿಯ ನಾದಿನಿ ಬರಲಿದ್ದಾಳೆ ಎಂದು ದೀಪ್ತಿ ಇಡೀ ದಿನ ಆಫೀಸಿಗೆ ರಜೆ ಹಾಕಿ ಕೆಲಸದವಳ ನೆರವಿನೊಂದಿಗೆ ಮನೆಯನ್ನೆಲ್ಲ ತಿದ್ದಿ ತೀಡಿ ಸರಿಪಡಿಸಿದಳು. ದೀಪಕ್ ಸಹ ಸಂಜೆ ಬೇಗ ಆಫೀಸ್‌ನಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೊರಟು ಅಕ್ಕನನ್ನು ಬರಮಾಡಿಕೊಂಡ.
ಸಂಜೆ 7 ಗಂಟೆ ಹೊತ್ತಿಗೆ ಕರೆಗಂಟೆ ಸದ್ದಾದಾಗ, ದೀಪ್ತಿ ಚುರುಕಾಗಿ ಓಡಿಬಂದು ಬಾಗಿಲು ತೆರೆದಳು. ತನ್ನ ಅತ್ತೆಮನೆಯವರಲ್ಲಿ ಎಲ್ಲರಿಗಿಂತ ಆಪ್ತಳಾಗಿದ್ದ ಶೀಲಕ್ಕಾ ಎಂದರೆ ಅವಳಿಗೂ ಎಷ್ಟೋ ಗೌರವ, ಹೆಮ್ಮೆ! 46ರ ಶೀಲಾ ಒಬ್ಬ ಬಿಂದಾಸ್, ಮಾಡ್, ಸ್ಮಾರ್ಟ್ ಮಹಿಳೆ ಆಗಿದ್ದಳು. ಅವಳು ಹಾಲನ್ನು ಹಾಲೆಂದೂ, ನೀರನ್ನು ನೀರೆಂದೂ ಹಂಸಕ್ಷೀರ ನ್ಯಾಯ ಒಪ್ಪಿಸುವ ಖಂಡಿತಾದಿ.
ಶೀಲಾ ಎದುರು ಮಾತ್ರವೇ ದೀಪ್ತಿ ತನ್ನ ಗಂಡ, ಅತ್ತೆ ಮಾವಂದಿರ ಕುರಿತಾಗಿ ಟೀಕೆ ಮಾಡಬಲ್ಲವಳಾಗಿದ್ದಳು. ಅವರಿಬ್ಬರ ನಡುವೆ ಅಷ್ಟು ಸಲುಗೆ ವಿಶ್ವಾಸ ಬೆಳೆದಿತ್ತು. ಶೀಲಾ ಹೆಚ್ಚು ಕಡಿಮೆ ಅವಳ ಪಾಲಿಗೆ ಹಿರಿಯ ನಾದಿನಿ ಎನ್ನುವ ಬದಲು ಸ್ವಂತ ಅಕ್ಕನೇ ಆಗಿದ್ದಳು. ಶೀಲಾ ಮೆರೂನ್ ಪಂಜಾಬಿ ಸೂಟ್‌ನಲ್ಲಿ ಬಹಳ ಸ್ಟೈಲಾಗಿ ಕಾಣಿಸುತ್ತಿದ್ದಳು. ದೀಪ್ತಿ ಸಹ ಹೊಸ ಅಚ್ಚ ಬಿಳುಪಿನ ಗೌನಿನಲ್ಲಿ ಮುದ್ದಾಗಿ ಕಂಡುಬರುತ್ತಿದ್ದಳು.