ಬೆಳಗ್ಗೆ ಟಿವಿ ಆನ್ ಮಾಡಿ ನ್ಯೂಸ್ ಚಾನೆಲ್ ನೋಡುತ್ತಿದ್ದಾಗ, ರಿಪೋರ್ಟರ್‌ಈ ರೀತಿ ಹೇಳುತ್ತಿದ್ದಳು. `ತಮ್ಮ ಮೇಲೆ ಶೋಷಣೆ ನಡೆಯಲು ಹೆಂಗಸರು ಮೂಲತಃ ತಾವೇ ಕಾರಣರು.'
ಇದನ್ನು ಕೇಳಿ ಮನಸ್ಸಿಗೆ ಬಹಳ ಕೋಪ ಬಂತು. ನಂತರ ಖಿನ್ನ ಮನದಿಂದ ಟಿ.ವಿ ಆಫ್ ಮಾಡಿ ಬಂದು ಎಂದಿನ ನನ್ನ ಅಡುಗೆಮನೆ ಕೆಲಸದಲ್ಲಿ ನಿರತಳಾದೆ. ಪ್ರತಿ ಸಲ ಹೆಣ್ಣನ್ನೇ ದೋಷಿ ಎನ್ನುವುದು ಎಷ್ಟು ಸರಿ? ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಇವೆಲ್ಲ ನಮ್ಮ ದೇಶಕ್ಕೆ ಏನು ಹೊಸತೇ? ಅತ್ತ ಬಾಬಾಗಳೂ ಹೊಸಬರಲ್ಲ, ಇತ್ತ ಆಶ್ರಮಗಳೂ ರಾತ್ರೋರಾತ್ರಿ ತಯಾರಾಗಿ ಬಿಡಲಿಲ್ಲ. ನನ್ನ ಈ ಯೋಚನೆಗಳಿಗೆ ಕೊನೆ ಮೊದಲಿರಲಿಲ್ಲ.
ಇವರು ಆಫೀಸಿಗೆ ಹಾಗೂ ಮಕ್ಕಳು ಶಾಲೆಗೆ ಹೊರಟಾಗಿತ್ತು. ಯಾಕೋ ಖಿನ್ನತೆ ಹೆಚ್ಚುತ್ತಾ ತಲೆನೋವು ಬಂತು. ಒಂದಿಷ್ಟು ಬಿಸಿ ಬಿಸಿ ಟೀ ಕುಡಿಯೋಣ ಎಂದು ಟೀ ಮಾಡತೊಡಗಿದೆ. ಟೀ ಹಿಡಿದು ಬಂದು ಬಾಲ್ಕನಿಯಲ್ಲಿ ಕುಳಿತರೂ ತಲೆನೋವು ಕಡಿಮೆ ಆಗಲಿಲ್ಲ. ಹಳೆಯ ನೆನಪುಗಳೆಲ್ಲ ಓತಪ್ರೋತವಾಗಿ ಹರಿದು ಬರತೊಡಗಿತು. ನಂತರ ಇಡೀ ದಿನ ಮನಸ್ಸು ಅದೇ ಯೋಚನೆಯ ತಾಕಾಟದಲ್ಲಿ ಮುಳುಗಿಹೋಯಿತು. ಈ ಯೋಚನೆಗಳಿಂದ ಹೊರಬರೋಣ ಎಂದು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಏನೇ ಮಾಡಿದರೂ ಮನಸ್ಸು ಮತ್ತೆ ಮತ್ತೆ ಅದನ್ನೇ ಯೋಚಿಸುತ್ತಿತ್ತು.
ಒಮ್ಮೊಮ್ಮೆ ಅನಿಸುವುದು, ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದೆ ಅಂತ. ಆದರೆ ಮತ್ತೊಂದು ಕ್ಷಣದಲ್ಲಿಯೇ ಅದು ನಮ್ಮಿಂದ ದೂರ ಚಿಮ್ಮಿ ಹೋಗಿಬಿಡುತ್ತಿತ್ತು. ಜೀವನದ ಏರಿಳಿತಗಳಲ್ಲಿ ಅದೆಷ್ಟು ಸಲ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿಲ್ಲ? ಆದರೆ ಪ್ರತಿ ಸಲ ಗೆಲುವು ಮಾತ್ರ ಮನಸ್ಸಿನದೇ!
ಇಂದು ಆಂಟಿ ಮತ್ತೆ ಮತ್ತೆ ನೆನಪಾಗುತ್ತಿದ್ದರು. ಬಾಲ್ಯದಲ್ಲಿ ನಮಗೆ ಯಾವುದೂ ಸ್ಪಷ್ಟ ಅರ್ಥ ಆಗುತ್ತಿರಲಿಲ್ಲ. ಕಮಲಾ ಆಂಟಿ ಬಂದರೆಂದರೆ ನಾವೆಲ್ಲ ಬಹಳ ಖುಷಿಯಾಗಿ ಕುಣಿಯುತ್ತಿದ್ದೆ. ಅವರು ನಮ್ಮ ತಾಯಿಯ ತಂಗಿ. ಈ ಚಿಕ್ಕಮ್ಮ ಬಂದಾಗೆಲ್ಲ ನಮ್ಮನ್ನು ಲಾಲ್‌ಬಾಗ್, ಕಬ್ಬನ್ ಪಾರ್ಕ್ ಅಥವಾ ಬನ್ನೇರುಘಟ್ಟ ಎಂದು ಎಲ್ಲಾದರೂ ಕರೆದೊಯ್ಯದೆ ಇರುತ್ತಿರಲಿಲ್ಲ.
ಅಲ್ಲಿ ನಾವು ಕೇಳಿದ್ದನ್ನೆಲ್ಲ ಕೊಡಿಸಿ ಇನ್ನಷ್ಟು ಖುಷಿಪಡಿಸುತ್ತಿದ್ದರು. ಅಮ್ಮನ ಹಾಗೆ ಅದು ಬೇಡ, ಇದು ಬೇಡ ಎಂದು ಗದರುತ್ತಿರಲಿಲ್ಲ. ಹಾಗಾಗಿಯೇ ಮಕ್ಕಳಿಗೆಲ್ಲ ಕಮಲಾ ಆಂಟಿ ಬಂದರೆಂದರೆ ಬಲು ಖುಷಿ!
ಆದರೆ ಮನೆಯಲ್ಲಿ ಅವರಿಬ್ಬರೂ ಹರಟಲು ಕುಳಿತಾಗ ನಮ್ಮನ್ನೆಲ್ಲ ಬಲವಂತವಾಗಿ ಆಟಕ್ಕೆ ಕಳುಹಿಸಿಬಿಡುತ್ತಿದ್ದರು. ನಮಗೆ ಅಲ್ಲಿಯೇ ಕುಳಿತು ಆಂಟಿ ಬಳಿ ಇನ್ನಷ್ಟು ಮುದ್ದು ಪಡೆಯುವ ಆಸೆ.
ನಾವು ಅಲ್ಲೇ ಅಂಗಳದಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದರೆ ಅವರ ಮಾತು ಅರ್ಧಂಬರ್ಧ ಕೇಳಿ ಬರುತ್ತಿದ್ದವು, ನೆಟ್ಟಗೆ ಯಾವುದೂ ಅರ್ಥವಾಗುತ್ತಿರಲಿಲ್ಲ. ಅವರ ಮಾತುಗಳಿಂದ ಅಸ್ಪಷ್ಟವಾಗಿ ಅರ್ಥವಾಗಿದ್ದೆಂದರೆ ಚಿಕ್ಕಮ್ಮ ಬಾಲವಿಧವೆ ಎಂಬುದು. ವಿಧವೆ ಎಂದರೆ ಏನೆಂದು ನಮಗೆ ಗೊತ್ತಾಗುತ್ತಲೂ ಇರಲಿಲ್ಲ. ನಾವು ಹೈಸ್ಕೂಲಿಗೆ ಬಂದ ಮೇಲೆ ಅಮ್ಮನನ್ನು ಕೇಳಿದ್ದುಂಟು, ಆಂಟಿ ಹೇಗೆ ಬಾಲವಿಧವೆ ಆದಳೆಂದು.
ಆಗ ಅಮ್ಮ ಹೇಳಿದ್ದೆಂದರೆ, ಆಂಟಿಗೆ 10 ವರ್ಷ ಇದ್ದಾಗಲೇ ಮದುವೆ ಆಗಿತ್ತಂತೆ. ಅವಳು 12 ವರ್ಷಕ್ಕೆ ಬಂದು ಮೈ ನೆರೆಯುವಷ್ಟರಲ್ಲಿ ಅವಳ ಗಂಡ ಆ್ಯಕ್ಸಿಡೆಂಟ್‌ನಲ್ಲಿ ತೀರಿಹೋಗಿದ್ದ. ಆಂಟಿ ಅತ್ತೆಮನೆಗೆ ಹೋಗದೆ ಬಾಲವಿಧವೆ ಪಟ್ಟ ಹೊತ್ತು ಶಾಶ್ವತವಾಗಿ ತವರಿನಲ್ಲೇ ಉಳಿದಳು. ಹತ್ತಿರದ ಸಂಬಂಧಿಗಳ ಮನೆಯಲ್ಲಿ ಏನೇ ವಿಶೇಷ ನಡೆಯಲಿ, ಹಿಂದಿನ ದಿನವೇ ಹೋಗಿ ಬಿಟ್ಟಿ ಆಳಾಗಿ ದುಡಿಯುವುದು, ಯಾರಿಗಾದರೂ ಆರೋಗ್ಯ ಕೆಟ್ಟರೆ ವಾರಗಟ್ಟಲೇ ಅಲ್ಲೇ ಉಳಿದು ಅವರ ಸೇವೆ ಮಾಡುವುದು, ಬಾಣಂತನಕ್ಕೆ ಹೋಗಿ 3-4 ತಿಂಗಳು ಬಿಟ್ಟು ಬರುವುದು ಇದೇ ಅವಳ ಬದುಕಾಯಿತು. ಓದುಬರಹ ಇರದ ಅವಳಿಗೆ ಅವರು ಕೊಡುವ ಬಟ್ಟೆಬರೆ, ಊಟ ತಿಂಡಿಯೇ ದೊಡ್ಡ ಉಡುಗೊರೆ! ಮುಂದೆ ಅವಳ ಬಗ್ಗೆ ಹೆಚ್ಚಾಗಿ ಕೇಳಲಿಕ್ಕೆ ಏನೂ ಇರಲಿಲ್ಲ. ಹೀಗೇ ದೊಡ್ಡವರಾಗಿ ನಾವು ಕಾಲೇಜು ಸೇರಿದ್ದಾಯಿತು.