ಕಥೆ –  ಜಿ. ಸುಮತಿ 

ತನಗೆ ಸೂಕ್ತವಾಗಿ ಹೊಂದದಿದ್ದರೂ ಪ್ರತಿ ವಾರದ ಟ್ರೆಂಡಿ ಫ್ಯಾಷನ್‌ ಡ್ರೆಸ್‌ಗಳನ್ನು ಕೊಂಡುತಂದು ಹಾಕಿಕೊಳ್ಳುತ್ತಿದ್ದ ನಿಧಿಯ ಈ ಫ್ಯಾಷನ್‌ ಹುಚ್ಚಿಗೆ ಅವಳ ಪೋಷಕರೇ ಬೇಸರಗೊಂಡಿದ್ದರು. ಕಡೆಗೆ ಅವಳು ಈ ಫ್ಯಾಷನ್‌ ಕ್ರೇಜ್‌ನಿಂದ ಹೊರ ಬಂದದ್ದಾದರೂ ಹೇಗೆ….?

ನಿಧಿ ತನ್ನ ಪರ್ಸ್‌ ಮತ್ತು ಅದೇ ತಾನೇ ಖರೀದಿಸಿದ್ದ ಫ್ಯಾಷನ್‌ ನಿಯತಕಾಲಿಕೆ ಹಿಡಿದು ಅವಸರವಾಗಿ ಮನೆಯಿಂದ ಹೊರಡುತ್ತಿದ್ದಾಗ, ಅವಳ ತಂದೆ ಮನಮೋಹನ್‌, “ಇದೇ ಅರ್ಧ ಗಂಟೆಗೆ ಮುನ್ನ ನಾಳಿನ ಎಗ್ಸಾಮ್ ಗೆ ಓದಿಕೊಳ್ಳಬೇಕೆಂದು ಹೋದವಳು, ಥಟ್ಟನೆ ಎಲ್ಲಿ ಹೊರಟೆ?” ಎಂದು ಕೇಳಿದ.

“ಪಪ್ಪಾ, ನಾನು ಬಿಝಿಯಾಗಿದ್ದೇನೆ. ಬಂದ ನಂತರ ತಿಳಿಸುತ್ತೇನೆ,” ಎನ್ನುತ್ತಾ ಕಾರ್ ತೆಗೆದಳು.

“ಇದೆಲ್ಲ ಏನು ಪುಷ್ಪಾ….?” ನಿಧಿ ತನ್ನ ನೆರಮನೆಯ ಗೆಳತಿ ಸಂಯುಕ್ತಾಳ ಜೊತೆಗೆ ಶಾಪಿಂಗ್‌ಗಾಗಿ ಹೊರಟಿದ್ದನ್ನು ನೋಡಿದ ಮನಮೋಹನ್‌ ತನ್ನ ಪತ್ನಿಯನ್ನು ಕೇಳಿದ.

“ಇತ್ತೀಚೆಗೆ ನಿಧಿ ಫ್ಯಾಷನ್‌ ಹುಚ್ಚು ಹಚ್ಚಿಕೊಂಡಿದ್ದಾಳೆ. ಅದಕ್ಕಾಗಿಯೇ ಸದಾ ಫಾರಿನ್‌ ನಿಯತಕಾಲಿಕೆಗಳನ್ನು ತರಿಸಿಕೊಳ್ಳುತ್ತಾಳೆ. ಅಲ್ಲಿನ ಟ್ರೆಂಡಿ ಫ್ಯಾಷನ್‌ಗಳನ್ನು ತನಗೆ ಸರಿಹೊಂದದಿದ್ದರೂ ತೆಗೆದುಕೊಂಡು ತೊಡುತ್ತಿದ್ದಾಳೆ.”

“ಆದರೆ ಆ ಬಟ್ಟೆಗಳು… ಅವುಗಳ ಬಣ್ಣಗಳೂ ಯಾವುದೂ ಅವಳಿಗೆ ಒಪ್ಪುವುದಿಲ್ಲ!”

“ಹೌದು ನೀವು ಹೇಳೋದು ಸರಿ. ಅವಳ ಕುಳ್ಳಗಿನ ವ್ಯಕ್ತಿತ್ವಕ್ಕೆ ಅವಳು ಹಾಕುವ ಈ ಬಗೆ ಬಗೆಯ ಫ್ಯಾಷನ್‌ ಡ್ರೆಸ್‌ಗಳು ಸೂಟ್‌ ಆಗುವುದಿಲ್ಲ… ಇಂದು ಕೂಡ ನಾಳಿನ ಫ್ಯಾಷನ್‌ ಪೆರೇಡ್‌ಗಾಗಿ ಇನ್ನೊಂದು ವಿನೂತನ ಡ್ರೆಸ್‌ ಕೊಳ್ಳಲು ಹೊರಟಿದ್ದಾಳೆ….!”

“ನಾಳೆ ಅವಳಿಗೆ ಎಗ್ಸಾಮ್ ಇದೆ ತಾನೇ?”

“ಎಗ್ಸಾಮ್ ಮುಗಿದ ನಂತರದ ಕಾರ್ಯಕ್ರಮ. ಎಲ್ಲರೂ ಕಾಲೇಜು ಪಕ್ಕದ ರೆಸ್ಟೋರೆಂಟ್‌ನಲ್ಲಿ ಸೇರುತ್ತಿದ್ದಾರಂತೆ.”

“ನಾನೊಮ್ಮೆ ಅವಳಿಗೆ ಕಟ್ಟುನಿಟ್ಟಾಗಿ ತಿಳಿಸಲೇ?”

“ಬೇಡ….ಬೇಡ….! ಹಾಗೇನಾದರೂ ಮಾಡಿದಲ್ಲಿ ನಾವು ನಮ್ಮ ಮಗಳನ್ನು ಕಳೆದುಕೊಳ್ಳಬೇಕಾದೀತು. ಸಧ್ಯ ಅವಳು ಕೇವಲ ಫ್ಯಾಷನ್‌ ಹುಚ್ಚನ್ನು ತಲೆಗೇರಿಸಿಕೊಂಡಿದ್ದಾಳೆ. ಸಿಗರೇಟ್‌, ಮದ್ಯದ ಆಸಕ್ತಿ ಇಲ್ಲ ಎನ್ನುವುದೇ ಸಮಾಧಾನದ ಸಂಗತಿ,” ಎನ್ನುತ್ತಾ ಪುಷ್ಪಾ ನಿಟ್ಟುರಿಸಿಟ್ಟಳು. ಇದನ್ನು ಕೇಳಿದ ಮನಮೋಹನ್‌ ಸಹ ಮಗಳಿಗೆ ಏನೂ ಹೇಳದೆ ಸುಮ್ಮನಾಗುವುದೆಂದು ನಿರ್ಧರಿಸಿದ. ನಿಧಿ ಶಾಪಿಂಗ್‌ ಮುಗಿಸಿ ಬಂದು ತಂದಿದ್ದ ಬಟ್ಟೆಗಳನ್ನೆಲ್ಲ ಪೋಷಕರಿಗೆ ತೋರಿಸಿ ಸಂಭ್ರಮಿಸಿದಳು,

“ನನಗಿನ್ನೂ ಮೂರು ಎಗ್ಸಾಮ್ ಇವೆ. ಹೀಗಾಗಿ ಇನ್ನೂ ಮೂರು ಡ್ರೆಸ್‌ ಬೇಕಿದೆ. ನಾನು ನಿನ್ನ ಕ್ರೆಡಿಟ್‌ ಕಾರ್ಡ್‌ ಬಳಸುತ್ತೇನೆ. ನೀನೇ ಅದನ್ನು ಪೇ ಮಾಡು….” ಎಂದರೂ ಮನಮೋಹನ್‌ ಏನೂ ಮಾತನಾಡಲಿಲ್ಲ.

ಮರುದಿನ ಮುಂಜಾನೆ ಎಲ್ಲರೂ ತಿಂಡಿಗೆ ಕುಳಿತಾಗ ನಿಧಿ ತೊಟ್ಟಿದ್ದ ಸ್ಲೀವ್ ಲೆ‌ಸ್‌ ಟಾಪ್‌ ಮತ್ತು ವಿಚಿತ್ರ ಡಿಸೈನ್‌ಗಳಿರುವ ಜೀನ್ಸ್ ನೋಡಿ ಮನಮೋಹನ್‌, “ಓಹ್‌….?!” ಎಂದು ಉದ್ಗರಿಸಿದ.

ಪುಷ್ಪಾ ಏನೂ ಹೇಳದಿದ್ದರೂ ಅವಳ ಕಣ್ಣುಗಳಲ್ಲಿ  ಬೇಸರ ಕಾಣುತ್ತಲಿತ್ತು. ಆದರೆ ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಪ್ರದ್ಯುಮ್ನ, “ನಿಧಿ, ಎಗ್ಸಾಮ್ ಗೆ ಇದೇ ಡ್ರೆಸ್‌ನಲ್ಲಿ ಹೊರಟಿದ್ದೀಯಾ? ಸ್ವಲ್ಪ ಚೆನ್ನಾಗಿ ಕಾಣಿಸ್ತಿಲ್ಲ…” ಎಂದ.

“ಓಹೋ, ನೀನು ಹೇಳಿದೊಡನೆ ನಾನು ಬದಲಾಗಬೇಕೇ? ನಾನೇನು ನಿನ್ನ ತಂಗಿ ಪ್ರಜ್ಞಾ ಅಲ್ಲ….”

“ನೀನು ನನ್ನ ತಂಗಿಯಾಗಿಲ್ಲದೇ ಇರುವುದು ನನ್ನ ಪುಣ್ಯ. ಒಂದು ವೇಳೆ ನೀನು ನನ್ನ ತಂಗಿಯಾಗಿದ್ದಿದ್ದರೆ… ಈ ಡ್ರೆಸ್‌ನಲ್ಲಿ ಹೊರಗಡೆ ಹೋಗಲು ನಾನು ಖಂಡಿತಾ ಬಿಡುತ್ತಿರಲಿಲ್ಲ.”

“ಹೌದಾ…!? ಸರಿ ನೀನೀಗಲೇ ಇಲ್ಲಿಂದ ತೊಲಗು!” ನಿಧಿ ಗಟ್ಟಿ ದನಿಯಲ್ಲಿ ಕಿರುಚಿದಳು.

“ಕೂಲ್‌ ನಿಧಿ ಕೂಲ್…. ನಾನು ಹೊರಡುತ್ತೇನೆ. ಆದರೆ ನಿನಗಿಂದು ನನ್ನ ಕಾರು ಸಿಗಲ್ಲ. ನಾನೀಗಲೇ ಆಫೀಸ್‌ಗೆ ಹೊರಟೆ. ಪ್ರಜ್ಞಾ ಕಾರಿನಲ್ಲಿ ಕುಳಿತಿದ್ದಾಳೆ. ಅವಳನ್ನು ಕಾಲೇಜಿಗೆ ಬಿಟ್ಟು ಹೊರಡಬೇಕು,” ಎಂದವನೇ ಅಲ್ಲಿಂದ ಹೊರಟುಹೋದ.

“ಪಪ್ಪಾ, ನನ್ನನ್ನು ಕಾಲೇಜಿಗೆ ಬಿಡು…”

“ಅಯ್ಯೋ! ನನಗೆ ಮೀಟಿಂಗ್‌ ಇದೇಮ್ಮ. ನಾನೀಗಲೇ ಆಫೀಸ್‌ಗೆ ಹೊರಟೆ. ನನಗೆ ನಿನ್ನನ್ನು ಕಾಲೇಜಿಗೆ ಬಿಡಲು ಸಮಯವಿಲ್ಲ.”

ನಿಧಿಯ ಮುಖ ಚಿಕ್ಕದಾಯಿತು. ಅವಳು ಮತ್ತೆ ಪ್ರದ್ಯುಮ್ನನ ಹಿಂದೆ ಓಡಿಹೋಗಿ, “ಪ್ರದ್ಯುಮ್ನ… ಸಾರಿ ಕಣೋ. ಬೇಜಾರು ಮಾಡ್ಕೋಬೇಡ. ನಾನೂ ನಿನ್ನ ಜೊತೆ ಬರ್ತೀನಿ….”

ಪ್ರದ್ಯುಮ್ನ ಒಮ್ಮೆ ನಿಧಿಯನ್ನು ನೋಡಿ ಬಳಿಕ, “ಸರಿ, ಬೇಗ ಹೊರಡು. ಈಗಾಗಲೇ ತಡವಾಗಿದೆ,” ಎಂದ. ನಿಧಿ ಬಂದೊಡನೆ ಮೂವರೂ ಕಾರಿನಲ್ಲಿ ಹೊರಟರು. ನಿಧಿಯ ಡ್ರೆಸ್‌ ನೋಡಿದ ಪ್ರಜ್ಞಾ, “ಎಷ್ಟು ಚೆನ್ನಾಗಿದೆ!” ಎಂದು ಹೊಗಳಿದಳು.

ಆಗ ಪ್ರದ್ಯುಮ್ನ, “ಪ್ರಜ್ಞಾ, ನೀನು ಅವಳನ್ನು ವಹಿಸಿಕೊಳ್ಳಬೇಡ. ಅವಳಿಗೆ ಈ ಡ್ರೆಸ್‌ ಸ್ವಲ್ಪವೂ ಹೊಂದುತ್ತಿಲ್ಲ….” ಎಂದ.

ಇದಾದ ತುಸು ಹೊತ್ತಿನಲ್ಲಿ ಕಾರಿಗೆ ಒಂದು ಮದುವೆ ದಿಬ್ಬಣ ಎದುರಾಯಿತು. ವಧು ಅಷ್ಟೇನೂ ಅಲಂಕಾರವಿಲ್ಲದೆಯೂ ಲಕ್ಷಣವಾಗಿದ್ದಳು. ಪ್ರದ್ಯುಮ್ನ ನಿಧಿಯನ್ನು ಕುರಿತು, “ಹೋ, ಆ ದಿಬ್ಬಣದಲ್ಲಿ ವಧು ಹೇಗಿದ್ದಾಳೆ?”

ನಿಧಿ ಒಮ್ಮೆ ಅತ್ತ ನೋಡಿದಳು. ಕೆಂಪು ಬಣ್ಣದ ಸಾಧಾರಣ ಜರಿಯಂಚಿನ ಸೀರೆಯುಟ್ಟಿದ್ದ ತುಸು ಎತ್ತರದ ವಧು ಉದ್ದ ಜಡೆ ಮತ್ತು ಹೂವಿನ ಅಲಂಕಾರ ಬಿಟ್ಟರೆ ಅಂತಹ ಮಾಡರ್ನ್‌ ಮೇಕಪ್‌ ಏನೂ ಇಲ್ಲದೆಯೇ ಚೆನ್ನಾಗಿ ಕಾಣಿಸುತ್ತಿದ್ದಳು.

“ಸಿಂಪಲ್ ಆಗಿ ಚೆನ್ನಾಗಿದ್ದಾಳೆ,” ಎಂದು ಪ್ರತ್ಯುತ್ತರ ನೀಡಿದಾಗ ಪ್ರದ್ಯುಮ್ನ ಮೌನ ತಾಳಿದ. ಅಷ್ಟರಲ್ಲಿ ಪ್ರಜ್ಞಾಳ ಕಾಲೇಜು ಸಮೀಪಿಸಿತು. ಅವಳು ಕಾರಿನಿಂದ ಇಳಿದು ತೆರಳಿದಳು. ಇದೀಗ ಕಾರಿನಲ್ಲಿ ಪ್ರದ್ಯುಮ್ನ ಮತ್ತು ನಿಧಿ ಇಬ್ಬರೇ ಉಳಿದರು.

“ನಿಧಿ ನಾನೊಂದು ಮಾತು ಹೇಳ್ಲಾ? ನೀನು ಇಂತಹ ಡ್ರೆಸ್‌ ಹಾಕುವುದರಿಂದ ನಿನ್ನ ತಂದೆ ತಾಯಿಗೆ ಬೇಸರ ಮಾತ್ರವೇ ಅಲ್ಲ, ನಿನಗೆ ಅಪಾಯ ಒದಗುವ ಸಂಭವ ಇದೆ. ಪೋಲಿ ಹುಡುಗರ ಕಣ್ಣು ನಿನ್ನ ಮೇಲೆ ಬಿದ್ದರೆ ಏನು ಮಾಡುವೆ? ನಿನ್ನ ಹುಚ್ಚುತನದಿಂದ ಬೇರೊಬ್ಬರಿಗೇಕೆ ನೋವು ಕೊಡುತ್ತೀಯಾ?”

“ಅಯ್ಯೋ ಬಿಡು. ಇದಕ್ಕೆಲ್ಲ ನೀನೇಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಿ? ಇಷ್ಟಕ್ಕೂ ನಾನೇನು ಹಳ್ಳಿ ಗುಗ್ಗು ಅಲ್ಲ…. ನನ್ನನ್ನು ನಾನು ರಕ್ಷಿಸಿಕೊಳ್ಳುವ ಬಗೆ ನನಗೆ ತಿಳಿದಿದೆ,” ನಿಧಿ ಹೀಗೆಂದು ಹೇಳುತ್ತಿದ್ದಂತೆ ಎರಡು ಕ್ಷಣ ಪ್ರದ್ಯುಮ್ನ ಮೌನ ತಾಳಿದ.

“ನಿಧಿ, ನಾನು ನಿನ್ನನ್ನು ಪ್ರೀತಿಸುತ್ತೀದ್ದೀನಿ. ಹಾಗಾಗಿ ಇಷ್ಟೆಲ್ಲ ಹೇಳಿದ್ದು. ಪ್ಲೀಸ್‌ ಅರ್ಥ ಮಾಡಿಕೋ, ಐ ಲವ್ ಯೂ…..” ಎಂದು ಪ್ರದ್ಯುಮ್ನ ಗೋಗರೆಯುವಂತೆ ಕೇಳಿದ.

ನಿಧಿಯ ಮುಖ ಅರಳಿತ್ತು. ಮುಗುಳ್ನಗುತ್ತಾ ಅವಳು, “ಹೌದು, ನಾನು ನಿನ್ನನ್ನು ಆಕರ್ಷಿಸುವುದಕ್ಕಾಗಿಯೇ ಇಂತಹ ಡ್ರೆಸ್‌ಗಳನ್ನು ಹಾಕಿಕೊಳ್ಳುತ್ತಿದ್ದೆ. ಇಂದು ನೀನೇ `ಐ ಲವ್ ಯೂ’ ಹೇಳಿದೆಯಲ್ಲ. ಇದೇ ನನಗೆ ಬೇಕಿತ್ತು. ಪ್ರದ್ಯು, ನಾನು ಇನ್ನೆಂದೂ ಇಂತಹ ಡ್ರೆಸ್‌ ಹಾಕಲ್ಲ, ಹೀಗೆ ಅಲಂಕಾರ ಮಾಡಿಕೊಳ್ಳಲ್ಲ. ಎಲ್ಲರಂತೆ ಸಾದಾ ಸೀದಾ ಸರಳ ಅಲಂಕಾರ ಮಾಡಿಕೊಳ್ಳುವೆ,” ಎಂದಳು.

ಪ್ರದ್ಯುಮ್ನ ಅವಳ ಉತ್ತರ ಕೇಳಿ ಆನಂದದಿಂದ ಉಬ್ಬಿ ಹೋದ. ಇಬ್ಬರೂ ಕಾರಿನಿಂದ ಇಳಿದು ಪಕ್ಕದಲ್ಲೇ ಇದ್ದ ರೆಸ್ಟೋರೆಂಟ್‌ಗೆ ಹೋದರು. ಅಲ್ಲಿ ಕಾಫಿ ಕುಡಿದು ನಂತರ ಪುನಃ ಅವಳನ್ನು ಎಗ್ಸಾಮ್ ಗಾಗಿ ಕಾಲೇಜಿಗೆ ಬಿಟ್ಟು ಬಂದಾಗ ಪ್ರದ್ಯುಮ್ನನ ಹೃದಯದಲ್ಲಿ ಪ್ರೀತಿಯ ಹೂವು ಬಿರಿದು ನಿಂತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ