ಕಥೆ - ಎಂ.ಕೆ. ಗೋದಾವರಿ
ಚಂದ್ರಲೇಖಾಳ ಮನೆ ಅಡುಗೆ ಕೆಲಸದವಳಾದ ಸರಸೂಳ ಒಬ್ಬಳೇ ಮಗಳು ಶಾಲಿನಿ. ಇಪ್ಪತ್ತು ವರ್ಷದವಳಾದ ಅವಳೀಗ ಬಿ.ಕಾಂ. ಪದವಿ ಮುಗಿಸಿ, ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದಳು. ಫಲಿತಾಂಶ ಉತ್ತಮವಾಗಿ ಬಂದಲ್ಲಿ ಒಳ್ಳೆಯ ಕಡೆ ಬ್ಯಾಂಕಿಂಗ್ ಉದ್ಯೋಗ ದೊರಕುತ್ತಿತ್ತು. ಆ ಕುರಿತು ಸರಸೂ ಮತ್ತು ಅವಳ ಗಂಡ ರಾಜುಗೆ ಅತ್ಯಂತ ಹೆಮ್ಮೆ. ಇದಕ್ಕೆ ಕಾರಣ ಇಲ್ಲದಿಲ್ಲ. ಅವರ ಮನೆ, ಕುಟುಂಬದವರಲ್ಲಿ ಇದುವರೆಗೂ ಯಾರೂ ಪದವಿ ವ್ಯಾಸಂಗ ಪೂರೈಸಿರಲಿಲ್ಲ.
ಇಷ್ಟಕ್ಕೂ ಕೆಲವು ಸಂಬಂಧಿಕರು ಶಾಲಿನಿ ಹೈಸ್ಕೂಲಿನಲ್ಲಿದ್ದಾಗಲೇ ವಿದ್ಯಾಭ್ಯಾಸ ಮುಂದುವರಿಸುವುದು ಬೇಡ, ಬೇಗ ಅವಳಿಗೊಂದು ಮದುವೆ ಮಾಡೆಂದು ಸಲಹೆ ನೀಡಿದ್ದರು. ಆದರೆ ಶಾಲಿನಿ 10ನೇ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆದಾಗ ರಾಜು ಅವಳನ್ನು ಕಾಲೇಜು ಸೇರಿಸಿದ್ದ. ಮುಂದೆ ಪಿಯುಸಿಯಲ್ಲಿಯೂ ವಿಶೇಷ ದರ್ಜೆಯಲ್ಲಿ ಪಾಸ್ ಆಗಿದ್ದ ಶಾಲಿನಿ ಬಿ.ಕಾಂ. ಪದವಿಗೆ ಸೇರಿ ಮುಂದೆ ಬ್ಯಾಂಕ್ ಉದ್ಯೋಗಿ ಆಗುವೆನೆಂದಾಗ ಪೋಷಕರಿಬ್ಬರೂ ಸಮ್ಮತಿಸಿದ್ದರು.
ಇದೀಗ ಮಗಳು ಬಿ.ಕಾಂ. ಮುಗಿಸಿದ್ದು, ಇನ್ನೇನು ಬ್ಯಾಂಕ್ ಉದ್ಯೋಗ ಸಿಗುತ್ತದೆ ಎನಿಸಿದಾಗ ಸರಸೂ ಮತ್ತು ರಾಜುಗೆ ಮಗಳ ಮದುವೆ ಮಾಡಲು ಇದೇ ಸಕಾಲ ಎನಿಸಿತು. ಅದರಂತೆ ರಾಜು ತನಗೆ ತಿಳಿದ ಬಹಳಷ್ಟು ಜನರಿಗೆ ತಿಳಿಸಿದ್ದ. ಜೊತೆಗೆ ಕೆಲವು ವೈವಾಹಿಕ ನೋಂದಣಿ ಕೇಂದ್ರಗಳಲ್ಲಿಯೂ ನೋಂದಾವಣೆ ಮಾಡಿಸಿದ್ದ. ಸರಸೂ ಕೂಡ ತನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕುತ್ತಿದ್ದಳು. ಮಗಳು ಪದವೀಧರೆ, ಬ್ಯಾಂಕ್ ಕೆಲಸ ಸಿಗುವುದರಲ್ಲಿದೆ, ಇಂತಹವರಿಗೆ ಅವಳ ಹುದ್ದೆ, ಗೌರವಕ್ಕೆ ತಕ್ಕ ವರನನ್ನೇ ಹುಡುಕಬೇಕೆಂಬುದು ಸರಸೂ ಆಸೆಯಾಗಿತ್ತು. ಹೀಗಾಗಿ ಅವಳು ಮಗಳಿಗೆ ಬಂದ ಕೆಲವು ಸುಮಾರಾದ ಸಂಬಂಧಗಳನ್ನು ತಾನಾಗಿಯೇ ತಿರಸ್ಕರಿಸಿದ್ದಳು.
ಸರಸೂಳ ಪರಿಚಯಸ್ಥರ ಮಗನೊಬ್ಬ ದುಬೈನಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ. ಒಳ್ಳೆಯ ದುಡಿಮೆ ಹಾಗೂ ಸಾಕಷ್ಟು ಸಂಬಳವಿದ್ದು ಉತ್ತಮ ರೀತಿಯಲ್ಲಿ ಜೀವನ ನಡೆಸಬಹುದಾದ ಈ ಸಂಬಂಧವನ್ನು ಸರಸೂ ನಿರಾಕರಿಸಿದ್ದಳು. ಶಾಲಿನಿ ಬಿ.ಕಾಂ. ಮಾಡಿದ್ದಾಳೆ. ಅವನು ಕೇವಲ ಹತ್ತನೇ ತರಗತಿ ಕಲಿತಿದ್ದಾನೆ. ಇದು ಶಾಲಿನಿಗೆ ಸರಿಯಾದ ಜೋಡಿಯಲ್ಲ ಎಂದು ಅವಳ ತೀರ್ಮಾನವಾಗಿತ್ತು.
ಇನ್ನೊಮ್ಮೆ ರಾಜುವಿನ ಸಂಬಂಧಿಕರಿಂದ ಶಾಲಿನಿಗೆ ವೈವಾಹಿಕ ಸಂಬಂಧ ಬಂದಿತ್ತು. ಹುಡುಗ ಎಂ.ಕಾಂ. ಮಾಡಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ. ನೋಡಲು ಚೆನ್ನಾಗಿದ್ದು ಮನೆಯಲ್ಲಿಯೂ ಸಾಕಷ್ಟು ಅನುಕೂಲವಿತ್ತು. ಆದರೆ ಇದಕ್ಕೂ ಸರಸೂ ಒಪ್ಪಲಿಲ್ಲ. ಹುಡುಗನ ತಾಯಿ ಮಹಾ ಜಗಳಗಂಟಿ. ಅವಳು ಯಾರಿಗೂ ಅಷ್ಟು ಸುಲಭದಲ್ಲಿ ಹೊಂದಿಕೊಳ್ಳಲಾರಳು. ಅಂತಹವಳೊಂದಿಗೆ ಶಾಲಿನಿ ಹೇಗೆ ಜೀವನ ನಡೆಸಿಯಾಳು? ಇದು ಅವಳ ವಾದ.
ಆ ಹುಡುಗನ ಬಗ್ಗೆ ಮತ್ತೊಮ್ಮೆ ಯೋಚಿಸು. ಹುಡುಗ ಉತ್ತಮ ಗುಣ, ನಡತೆಯವನು ಎಂದು ರಾಜು, ಸರಸೂಗೆ ತಿಳಿಸಿದರೂ, ಸರಸೂ ಮಾತ್ರ ನೀವು ನಿಮ್ಮ ಸೋದರ ಸಂಬಂಧಿಕರ ಮಗನೆಂಬ ಸಲುಗೆಯಿಂದ ಮಾತಾಡುತ್ತಿದ್ದೀರಿ. ನಮ್ಮ ಶಾಲಿನಿ ಬಗ್ಗೆ ನಿಮಗಿಂತ ಹೆಚ್ಚು ನನಗೆ ಕಾಳಜಿ ಇದೆ ಎಂದು ಹೇಳಿದ್ದಲ್ಲದೆ ನಾನೆಂದಿಗೂ ಈ ಮದುವೆಗೆ ಒಪ್ಪಲಾರೆ ಎಂದು ಖಚಿತವಾದ ದನಿಯಲ್ಲಿ ಉತ್ತರಿಸಿದಳು. ಕೆಲವು ವಾರಗಳು ಕಳೆದವು. ಒಮ್ಮೆ ರಾಜು ನೋಂದಾಯಿಸಿದ್ದ ಒಂದು ವೈವಾಹಿಕ ಕೇಂದ್ರದಿಂದ ಶಾಲಿನಿಗೆ ಕರೆ ಬಂದಿತು. ಶಾಲಿನಿ ಮತ್ತು ರಾಜು ಹೋಗಿ ವಿಚಾರಿಸಲಾಗಿ ಹುಡುಗ ಬಿ.ಟೆಕ್ ಪೂರೈಸಿ ಪೂನಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಒಳ್ಳೆಯ ಸ್ಥಿತಿವಂತರಾಗಿದ್ದರು. ಹುಡುಗನ ಫೋಟೋ ನೋಡಿದ್ದ ಶಾಲಿನಿಗೂ ಒಪ್ಪಿಗೆಯಾಯಿತು. ಮನೆಗೆ ಹಿಂದಿರುಗಿ ಸರಸೂಗೆ ತಿಳಿಸಿದಾಗ ಅವಳು ಮಾತ್ರ ಶಾಲಿನಿಯನ್ನು ಅಷ್ಟು ದೂರ ಕಳಿಸಲು ಒಪ್ಪಲೇ ಇಲ್ಲ.