“ಪ್ರಸಾದ್‌ ಆಫೀಸಿನಲ್ಲಿ ನಡೆದಿರುವ ನೂತನ ಬೆಳವಣಿಗೆಗೆ ಬಗ್ಗೆ ನಿನಗೇನಾದರೂ ಗೊತ್ತಾ?” ಸೂರಜ್‌ ಕೇಳಿದ.

ಗಣಕದಲ್ಲಿ ಬರುತ್ತಿದ್ದ ನಕಾಶೆಗಳು, ಲೆಕ್ಕಾಚಾರದಲ್ಲಿ ಕಳೆದುಹೋಗಿದ್ದ ಪ್ರಸಾದನ ಭುಜದ ಮೇಲೆ ಕೈಯಿಡುತ್ತಾ ಸೂರಜ್‌ಮುಂದುವರಿಸುತ್ತಾ, “ಸೋನಾಲಿ ಹಾಗೂ ರೂಪೇಶ್‌ ಇತ್ತೀಚಿನ ದಿನಗಳಲ್ಲಿ ಬಹಳ ಹತ್ತಿರವಾಗುತ್ತಿದ್ದಾರೆ. ಅವರಿಬ್ಬರದೂ ಒಂದು ವಿಶೇಷ ಸಂಬಂಧ ಎನಿಸುತ್ತಿದೆ,” ಎಂದ.

ಪ್ರಸಾದ್‌ ಒಮ್ಮೆ ತನ್ನ ಸ್ನೇಹಿತ ಸಹೋದ್ಯೋಗಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ.

“ನಿಜ…..” ಸೂರಜ್‌ ಒಮ್ಮೆ ಸುತ್ತಲೂ ಕಣ್ಣಾಡಿಸಿ ಎದುರಿನ ಕೋಣೆಯನ್ನೊಮ್ಮೆ ಅವಲೋಕಿಸಿದ. ಅದು ಇನ್ನೂ ಖಾಲಿ ಇರುವುದನ್ನು ಖಚಿತಪಡಿಸಿಕೊಂಡು, “ಅವರಿಬ್ಬರೂ ಬಹಳ ಕಾಲದಿಂದ ಗೊತ್ತಿರುವವರಂತೆ ಓಡಾಡುವುದನ್ನು, ಮಾತನಾಡುವುದನ್ನು ನಾನೇ ನೋಡಿದ್ದೇನೆ,” ಎಂದ.

“ಆದರೆ, ಹೀಗೇ ಎಂದು ನಿನಗೆ ಹೇಗೆ ತಿಳಿಯಿತು?”

“ಓಹ್‌! ನೀನು ಬೇಕಾದಲ್ಲಿ ಗಮನಿಸಿ ನೋಡು. ನಾನೇನೂ ಕಲ್ಪಿಸಿಕೊಂಡು ಹೇಳುತ್ತಿಲ್ಲ. ಸೋನಾಲಿ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವನಾದ ರೂಪೇಶನನ್ನು ಪ್ರೀತಿಸುತ್ತಿದ್ದಾಳೆ ಎನ್ನಲೂ ಆಗುವುದಿಲ್ಲ. ಆದರೆ ಪ್ರೀತಿ ಕುರುಡಲ್ಲವೇ? ಏನಾದರೂ ಆಗಬಹುದು.”

“ಹೂಂ….! ಅದೂ ನಿಜವೇ!”

ಅಷ್ಟರಲ್ಲಾಗಲೇ ಸಮಯ ಹತ್ತಾಗಿತ್ತು. ಆಫೀಸಿನಲ್ಲಿ ಅನೇಕರು ತಮ್ಮ ಕೆಲಸದಲ್ಲಿ ತೊಡಗಿದ್ದರು.

“ಸರಿ, ನಾನಿನ್ನೂ ಕೆಲಸ ಮುಂದುವರಿಸುತ್ತೇನೆ. ಬಿಡುವಿನ ವೇಳೆಯಲ್ಲಿ ಮತ್ತೆ ಸಿಗೋಣ,” ಎಂದ ಪ್ರಸಾದ್‌.

ಪ್ರಸಾದ್‌ ತಾನು ಕೆಲಸದಲ್ಲಿ ತೊಡಗಿದರೂ ಅವನ ತಲೆಯಲ್ಲಿ ಸೋನಾಲಿ ರೂಪೇಶರ ವಿಚಾರಗಳೇ ಕೊರೆಯುತ್ತಿದ್ದವು. ಅವರ ಸಂಬಂಧಗಳ ಕುರಿತಂತೆ ನಾನಾ ವಿಚಾರಗಳು ಅವನ ಮನದಲ್ಲಿ ಮೂಡಿ ಮರೆಯಾಗುತ್ತಿದ್ದವು. ಅವುಗಳನ್ನೆಲ್ಲಾ ಬದಿಗೊತ್ತಿ ತಾನು ಕೆಲಸದಲ್ಲಿ ತಲ್ಲೀನನಾಗಲು ಅವನು ಸಾಕಷ್ಟು ಪ್ರಯತ್ನಿಸಬೇಕಾಯಿತು.

ಪ್ರಸಾದ್‌ ಸೋನಾಲಿಯನ್ನು ಗಮನಿಸಿದ. ಅವಳು ರೂಪೇಶನೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದ ಅವನಿಗೆ ಸೂರಜ್ ಹೇಳಿಕೆ ನಿಜವಿರಬಹುದು ಎನಿಸಿ, ಸೋನಾಲಿಯೊಡನೆ ಹೆಚ್ಚು ಮಾಡನಾಡುವುದು ಬೇಡ ಎಂದು ನಿರ್ಧರಿಸಿದ. ಆದರೆ ಅಂದು ಮಧ್ಯಾಹ್ನ ಊಟದ ವಿರಾಮದಲ್ಲಿ ಸೋನಾಲಿ ತಾನೇ ಪ್ರಸಾದನತ್ತ ಬಂದಳು. ಸ್ನೇಹದ ನಗು ಚೆಲ್ಲಿದ ಆಕೆ ಅವನನ್ನು ಜೊತೆಯಲ್ಲಿ ಊಟಕ್ಕೆ ಕರೆದಳು. ಅವಳಿಗಾಗಿ ಅತ್ತ ಕಡೆಯ ಟೇಬಲ್‌ನಲ್ಲಿ ರೂಪೇಶ್‌ ಕಾಯುತ್ತಿರುವುದನ್ನು ಕಂಡ ಪ್ರಸಾದ್‌, ಒಮ್ಮೆ ಸೋನಾಲಿಯತ್ತ ನೋಡಿದ. ಅವಳೂ ಮತ್ತೊಮ್ಮೆ ಇವನತ್ತ ನೋಡಿ ಮುಗುಳ್ನಕ್ಕಳು. ಬಳಿಕ ಪ್ರಸಾದ್‌, `ಸೋನಾಲಿ ಆಫೀಸಿನ ಪ್ರತಿಯೊಬ್ಬರೊಂದಿಗೂ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದಾಳೆ, ತಾನು ಇನ್ನಷ್ಟು ಜನರ ಸ್ನೇಹ ಬಯಸಿದ್ದಾಳೆ,’ ಎಂದು ಯೋಚಿಸಿದ.

ಒಂದು ವಾರ ಕಳೆಯಿತು. ಪ್ರಸಾದ್‌ ಸೋನಾಲಿಯೊಂದಿಗೆ ಅತ್ಯಂತ ವಿರಳವಾಗಿ ಮಾತನಾಡುತ್ತಿದ್ದ. ಆಫೀಸಿನಲ್ಲೇ ಸೋನಾಲಿ ಹಾಗೂ ರೂಪೇಶರ ನಡುವಿನ ಸಂಬಂಧಗಳ ಕುರಿತಂತೆ ನಾನಾ ಪ್ರಕಾರವಾಗಿ ಗುಲ್ಲುಗಳೆದ್ದಿದ್ದವು. ಇವೆಲ್ಲ ಎಲ್ಲಿಗೆ ಹೋಗಿ ನಿಲ್ಲುವುದೋ ಎಂಬ ಕುತೂಹಲದಿಂದ ಎಲ್ಲರಂತೆ ಪ್ರಸಾದನೂ ಎದುರುನೋಡುತ್ತಿದ್ದ. ಇನ್ನೂ ಕೆಲವರು ಅವರಿಬ್ಬರೂ ಮದುವೆ ಆಗುವವರಿದ್ದಾರೆಂಬ ತೀರ್ಮಾನಕ್ಕೂ ಬಂದಿದ್ದರು. ಕೆಲವರಿಗೆ ಅವಳು ರೂಪೇಶನಿಗಿಂತಲೂ ಹಿರಿಯಳಾಗಿದ್ದೂ ಅವನೊಂದಿಗೆ ಅತ್ಯಂತ ಸಹಜವಾಗಿ ವರ್ತಿಸುವುದು ಒಂದು ಬಗೆಯ ಸೋಜಿಗವನ್ನುಂಟು ಮಾಡಿತ್ತು.

ಪ್ರಸಾದ್‌ ಈ ಯಾವ ಚರ್ಚೆಯಲ್ಲಿಯೂ ಭಾಗಿಯಾಗುತ್ತಿರಲಿಲ್ಲ. ಸೋನಾಲಿಯ ಹೆಸರಿನೊಂದಿಗೆ ವಿನಾಕಾರಣವಾಗಿ ಪರಪುರುಷನ ಹೆಸರು ಜೋಡಿಸುತ್ತಿರುವುದು ಅವನಿಗೆ ಬಹಳ ನೋವನ್ನುಂಟು ಮಾಡಿತ್ತು.

`ಇನ್ನೊಬ್ಬರ ಬಗೆಗೆ ಅವರ ಬೆನ್ನ ಹಿಂದೆ ಗಾಸಿಪ್‌ಗಳನ್ನು ಹರಡುವುದರಲ್ಲಿ ಜನರಿಗೆ ಅದೆಷ್ಟು ಆಸಕ್ತಿ?’ ಪ್ರಸಾದ್‌ ತನ್ನಲ್ಲೇ ತರ್ಕಿಸುತ್ತಿದ್ದ. ಆ ದಿನ ಸಂಜೆ ಪ್ರಸಾದ್‌ ಕೆಲಸ ಮುಗಿಸುವಷ್ಟರಲ್ಲಿ ಕೊಂಚ ತಡವಾಗಿತ್ತು. ಅದೇ ವೇಳೆಗೆ ಸೋನಾಲಿ ಅವನ ಕ್ಯಾಬಿನ್‌ಗೆ ಬಂದಳು.

“ನಾನು ನಿನ್ನೊಂದಿಗೆ ಕೊಂಚ ಮಾತನಾಡಬಹುದೇ?”

“ಓಹ್‌!”

“ಏಕೆಂದು ನನಗೆ ತಿಳಿದಿಲ್ಲ. ಆದರೆ ಇತ್ತೀಚೆಗೆ ನೀವು ನನ್ನನ್ನು ಸರಿಯಾಗಿ ಮಾತನಾಡಿಸುತ್ತಿಲ್ಲ…..?”

“ಹಾಂ! ಹಾಗೇನೂ ಇಲ್ಲ ಸೋನಾಲಿ, ತಪ್ಪು ತಿಳ್ಕೋಬೇಡ.”

ಸೋನಾಲಿಗೆ ಪ್ರಸಾದನ ಮಾತಿನಲ್ಲಿ ನಂಬಿಕೆ ಇಲ್ಲ ಎನ್ನುವುದು ಅವಳ ಮುಖವೇ ಹೇಳುತ್ತಿತ್ತು. ಆದರೆ ಪ್ರಸಾದ್‌ಗೆ ಸೋನಾಲಿ ಜೊತೆ ಮಾತನಾಡುವುದು ಬಹಳ ಹಿಡಿಸುತ್ತಿತ್ತು. ಸ್ವಲ್ಪ ಸಮಯದ ಬಳಿಕ ಸೋನಾಲಿ ಬ್ಯಾಗ್‌ನಿಂದ ವೆಲ್ವೆಟ್‌ ಕವರ್‌ ಹೊರತೆಗೆದಳು. ಅದರಲ್ಲಿ ಚಿನ್ನದ ಬಣ್ಣದಲ್ಲಿ  `ವೆಡ್ಡಿಂಗ್‌’ ಎಂದು ಬರೆದಿದ್ದನ್ನು ನೋಡಿದ ಪ್ರಸಾದ್‌, ಸೋನಾಲಿ ರೂಪೇಶನನ್ನು ಮದುವೆಯಾಗಲಿದ್ದಾಳೆ ಎಂದು ಲೆಕ್ಕ ಹಾಕಿದ. ಅವನ ಎದೆ  ಒಮ್ಮೆ `ಝಲ್’ ಎಂದಿತು.

“ನೀವು ಮದುವೆಗೆ ಖಂಡಿತಾ ಬರಬೇಕು. ನನ್ನ ತಂಗಿ ಸುನೀತಾ ನಮ್ಮ ಸಹೋದ್ಯೋಗಿ ರೂಪೇಶನನ್ನು ವಿವಾಹವಾಗುತ್ತಿದ್ದಾಳೆ. ನನಗಂತೂ ಇದರಿಂದ ಬಹಳ ಆನಂದವಾಗಿದೆ.”

`ಓಹ್‌! ರೂಪೇಶ್‌ ಸೋನಾಲಿಯ ತಂಗಿಯನ್ನು ಮದುವೆಯಾಗುತ್ತಿದ್ದಾನೆ. ಅದಕ್ಕಾಗಿಯೇ ಅಂದಿನಿಂದಲೂ ಸೋನಾಲಿಯೊಂದಿಗೆ ತಿರುಗುತ್ತಿದ್ದಾನೆ,’ ಪ್ರಸಾದ್‌ ಮನದಲ್ಲೇ ಅಂದಕೊಂಡ.

“ನಾನು ನಿನ್ನನ್ನು ಬಹಳ ತಪ್ಪಾಗಿ ಭಾವಿಸಿದ್ದೆ. ನೀನೂ, ರೂಪೇಶ್‌ ಒಟ್ಟಾಗಿ ತಿರುಗುವುದನ್ನು ಕಂಡು…… ನನ್ನನ್ನು ಕ್ಷಮಿಸು.”

“ನೀವೇನು ಹೇಳುತ್ತಿದ್ದೀರಿ….?” ಅವಳ ಮನಸ್ಸು ಒಂದು ಕ್ಷಣ ಸ್ತಬ್ಧಗೊಂಡಿತು.

“ನಿಮಗೆ ಈ ಯೋಚನೆ ಹೇಗೆ…..?”

“ಹೂಂ, ನಮ್ಮ ಆಫೀಸಿನವರೆಲ್ಲಾ ನೀನೂ, ರೂಪೇಶ್‌ ಒಟ್ಟಾಗಿರುವುದನ್ನು ಕಂಡು ನೀವಿಬ್ಬರೂ ಮದುವೆಯಾಗಲಿದ್ದೀರಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.”

“ಏನು….? ಎಲ್ಲರೂ ಹಾಗೆಂದು ಕೊಂಡಿದ್ದಾರೆಯೇ? ಓಹ್‌……!” ಅವಳು ಜೋರಾಗಿ ನಗತೊಡಗಿದಳು.

ಸೋನಾಲಿಯ ಈ ನಗು ಪ್ರಸಾದನನ್ನು ಸ್ವಲ್ಪ ನಿರಾಳಗೊಳಿಸಿತು. ಇವಳು ಈ ವಿಚಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎನ್ನುವುದು ಖಾತ್ರಿಯಾಯಿತು.

“ನನ್ನ ತಂಗಿ ರೂಪೇಶನನ್ನು ಬಹಳ ದಿನಗಳಿಂದಲೂ ಪ್ರೀತಿಸುತ್ತಿದ್ದಳು. ರೂಪೇಶ್‌ ನಮ್ಮ ಆಫೀಸಿನಲ್ಲೇ ಕೆಲಸಕ್ಕಿರುವುದು ತಿಳಿದ ನಂತರ ಅವಳೇ ನನ್ನ ಬಳಿ ಅವನು ಎಂಥವನೆನ್ನುವುದನ್ನು ತಿಳಿದುಕೊಳ್ಳಲು ಹೇಳಿದ್ದಳು. ಆ ಪ್ರಕಾರವಾಗಿ ನಾನು ಅವನೊಂದಿಗೆ ಸಾಕಷ್ಟು ಮಾತನಾಡಿ ನೋಡಿದ್ದೆ. ಅವನು ಒಳ್ಳೆಯ ವಿಚಾರವಂತ ಎನ್ನುವುದನ್ನು ತಿಳಿದ ಮೇಲೆ ಮದುವೆಗೆ ಒಪ್ಪಿಗೆ ಸೂಚಿಸಿದೆ.”

ಅವಳು ಅವನತ್ತಲೇ ದೃಷ್ಟಿ ನೆಟ್ಟಳು ಅವನು ಅನ್ಯಮನಸ್ಕನಾಗಿದ್ದುದ್ದನು ಕಂಡ ಸೋನಾಲಿ, “ಪ್ರಸಾದ್‌….” ಎಂದು ಒಮ್ಮೆ ಕರೆದು ಅವನತ್ತ ಪ್ರಶ್ನಾರ್ಥಕವಾಗಿ ನೋಡಿದಳು.

“ಹೂಂ?!” ಒಮ್ಮೆಲೆ ಎಚ್ಚೆತ್ತವನಂತೆ ಅವಳತ್ತ ತಿರುಗಿದ ಪ್ರಸಾದ್‌, “ಯಾರೇನೇ ಹೇಳಿದರೂ ನಾನು ನಿನ್ನನ್ನು ನಂಬುತ್ತೇನೆ. ನಿನ್ನ ಬಗೆಗೆ ಹರಡಿದ ಈ ಸುದ್ದಿಗಳಿಂದ ನನಗೆ ಬಹಳ ನೋವಾಗಿದೆ,” ಎಂದ.

“ಓಹ್‌….! ನಿಜವೇ?”

“ಹೌದು. ಏಕೆಂದರೆ ನಾನು…. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನಗೆ, ನಿನ್ನ ಕುರಿತು ಯಾರಾದರೂ ಏನಾದರೂ ಅಂದ ಮಾತ್ರಕ್ಕೆ ನನಗೆ ಬಹಳ ಬೇಸರವಾಗುತ್ತದೆ.”

ಒಮ್ಮೆಲೇ ಸೋನಾಲಿ ತನ್ನ ಕಣ್ಣುಗಳನ್ನು ಅಗಲಿಸಿ ಅವನತ್ತ ನೋಡಿದಳು. ಅವನು ಅವಳ ಕೈಗಳನ್ನು ಹಿಡಿದುಕೊಂಡು, “ನಾನು ನಿನ್ನನ್ನು ನಿರ್ಲಕ್ಷಿಸಿದೆ. ಅದಕ್ಕೂ ಸಹ ನನಗೆ ನಿನ್ನ ಮೇಲೆ ಇರುವ ಪ್ರೇಮವೇ ಕಾರಣವಾಗಿತ್ತು. ನೀನು ರೂಪೇಶನೊಂದಿಗೊ ಅಥವಾ ಇನ್ನಾರೊಂದಿಗೊ ಚೆನ್ನಾಗಿರುವುದೇ ನನಗೆ ಮುಖ್ಯವಾಗಿತ್ತು.”

“ಯೂ…. ಫೂಲ್! ನನ್ನ ಅಭಿಪ್ರಾಯ ಏನು ಎನ್ನುವುದನ್ನು ನೀವೇ ಕಲ್ಪಿಸಿಕೊಳ್ಳುತ್ತಿದ್ದೀರಾ? ನನ್ನನ್ನೇ ನೇರವಾಗಿ ಕೇಳಬಹುದಿತ್ತು…?”

“ಕೇಳಿದ್ದರೆ?”

“ಹೇಳುತ್ತಿದ್ದೆ. ನನಗೆ ಎಂತಹವರು ಇಷ್ಟವಾಗುತ್ತಾರೆಂದು ವಿವರಿಸುತ್ತಿದ್ದೆ. ತುಂಬಾ ಪ್ರೀತಿಸುವ, ನಿಸ್ವಾರ್ಥಿಯಾದ, ತನ್ನ ಭಾವನೆಗಳನ್ನು ವ್ಯಕ್ತಪಡಿಸುವಾಗ ಹೆಣ್ಣು ಮಗುವಿನಂತೆ ನಾಚಿಕೊಳ್ಳುವ ಸ್ವಭಾವದವನು ನನಗೆ ಬಹಳ  ಇಷ್ಟ.”

“ನಿಜವಾಗಿಯೂ….?”

ಸೋನಾಲಿ ಅವನ ಕೈಗಳನ್ನೊಮ್ಮೆ ಹಿತವಾಗಿ ಅದುಮಿದಳು. ಜೊತೆಗೆ ಅವನನ್ನು ನೇರವಾಗಿ ದಿಟ್ಟಿಸಿ ಮುಗುಳ್ನಕ್ಕಳು. ಇಬ್ಬರೂ ಹೋಟೆಲ್‌ಗೆ ಹೋಗಿ ಊಟ ಮುಗಿಸಿದರು. ಅಲ್ಲಿಂದ ಸಿನಿಮಾ ವೀಕ್ಷಿಸಲೆಂದು ಸಿನಿಮಾಮಂದಿರದತ್ತ ನಡೆದರು. ಅಲ್ಲಿ ಪ್ರದರ್ಶಿತವಾಗುತ್ತಿದ್ದ ಸಿನಿಮಾ `ಕಛೇರಿಯಲ್ಲಿನ ಸಲ್ಲಾಪ’ ಎನ್ನುವುದನ್ನು ತಿಳಿದು ಇಬ್ಬರೂ ನಗುವಿನಿಯಲ್ಲಿ ತೇಲಿದರು.

Tags:
COMMENT