ಕಥೆ - ರಾಧಿಕಾ ರವೀಂದ್ರ
ದೇವಿಕಾಳಿಗೆ ಈಗ ಏನು ಮಾಡಲಿಕ್ಕೂ ಅರ್ಥವಾಗದೆ ಕಸಿವಿಸಿಗೆ ಒಳಗಾಗಿದ್ದಳು. ಕಳೆದ 25 ವರ್ಷಗಳ ಹಿಂದೆ ಅವಳು ಯಾವ ದ್ವಂದ್ವಕ್ಕೆ ಸಿಲುಕಿದ್ದಳೋ, ಇಂದು ಅದೇ ಸ್ಥಿತಿಯಲ್ಲಿ ಅವಳ ಮಗಳು ನಿಂತಿದ್ದಳು. ವ್ಯತ್ಯಾಸವಿಷ್ಟೆ, ಅಂದು ಸ್ವಯಂ ದೇವಿಕಾ ತಾನೇ ಆ ಕಷ್ಟಕ್ಕೆ ಸಿಲುಕಿದ್ದಳು, ಇಂದು ಅವಳ ಮಗಳು ಆ ಕಷ್ಟಕ್ಕೆ ಗುರಿಯಾಗಿದ್ದಳು.
ದೇವಿಕಾ ಒಟ್ಟು ಕುಟುಂಬಕ್ಕೆ ಸೇರಿದವಳಾಗಿದ್ದರೂ ಅವಳಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. ಅವಳ ಪತಿ ಸುಮಂತ್ ಅಂತೂ ತಾನಾಯಿತು, ತನ್ನ ಕೆಲಸಾಯಿತು ಎನ್ನುವ ವರ್ಕೋಹಾಲಿಕ್ ಪತಿ. ಸದಾ ತನ್ನ ಫ್ಯಾಕ್ಟರಿಯ ಕೆಲಸಗಳಲ್ಲಿ ಬಿಝಿ ಆಗಿರುತ್ತಿದ್ದ ಆತ, ತಿಂಗಳಿಗೊಮ್ಮೆ ಸಂಬಳ ತಂದು ಹೆಂಡತಿಯ ಕೈಗೆ ಹಾಕಿಬಿಟ್ಟರೆ ಮುಗಿಯಿತು. ಮನೆಯ ಯಾವ ಜವಾಬ್ದಾರಿಗಳನ್ನೂ ಅಂಟಿಸಿಕೊಳ್ಳುತ್ತಿರಲಿಲ್ಲ. ಆತನಿಂದ ಏನಾದರೂ ಸಲಹೆ, ಸಹಾಯ ಅಪೇಕ್ಷಿಸುವುದು ದಂಡವೇ ಆಗಿತ್ತು. ಮದುವೆಯಾದ ಇಷ್ಟು ವರ್ಷಗಳಿಗೆ ಒಮ್ಮೆಯೂ ಸಂಸಾರದಲ್ಲಿ ಏನು ನಡೆಯುತ್ತಿದೆ, ಗಂಡನಾಗಿ ತಾನು ಎಂಥ ಜವಾಬ್ದಾರಿ ನಿರ್ವಹಿಸಬೇಕು ಎಂಬುದರ ಗೊಡವೆಯೇ ಇರಲಿಲ್ಲ. ಆತನಿಂದ ಎರಡು ಪ್ರೀತಿಯ ಮಾತುಗಳನ್ನು ಕೇಳಲು ಅವಳ ಮನಸ್ಸು ಸದಾ ಕಾತರಿಸುತ್ತಿತ್ತು. ಮನೆಗೆ ಬೇಕಾದ ರೇಷನ್ ಬಟ್ಟೆಬರೆ, ಹೊರಗಿನ ಸಮಸ್ತ ಕೆಲಸಗಳನ್ನೂ ಅವಳೇ ನಿರ್ವಹಿಸುತ್ತಿದ್ದಳು. ಅವಳೇನಾದರೂ ಮನೆಗೆ ಇಂಥ ಕೆಲಸ ಆಗಬೇಕು ಎಂದರೆ, ``ಅದಕ್ಕೆ ಎಷ್ಟು ಹಣ ಬೇಕೋ ಅದನ್ನು ತೆಗೆದುಕೋ.... ನನಗೆ ಮಾತ್ರ ಏನೂ ಹೇಳಬೇಡ,'' ಎಂದು ಒಂದೇ ಮಾತಿನಲ್ಲಿ ತಳ್ಳಿಬಿಡುತ್ತಿದ್ದ.
ಅವಿಭಕ್ತ ಕುಟುಂಬದ ಸೊಸೆಯಾದ ದೇವಿಕಾ ಸದಾ ಒಂದಿಲ್ಲೊಂದು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು. ಒಡಹುಟ್ಟಿದವರಲ್ಲಿ ಎಲ್ಲರಿಗಿಂತ ತಾನೇ ಹೆಚ್ಚು ಆದರ್ಶವಾದಿ ಎಂದು ಸಾಬೀತುಪಡಿಸುವಲ್ಲಿ ಸುಮಂತ್ ಸದಾ ಮುಂದು. ಅವನ ಅಂಥ ಕೆಲಸಗಳಿಗೆ ಗಾಣದ ಎತ್ತಿನಂತೆ ಸಿಕ್ಕಿಹಾಕಿಕೊಂಡು ಚಡಪಡಿಸಬೇಕಾದವಳು ದೇವಿಕಾ. 25 ವರ್ಷಗಳ ಸಂಸಾರ ಭಾರ ಹೊರುವುದರಲ್ಲಿ ಅವಳು ಎರಡು ಪಟ್ಟು ಹೈರಾಣಾಗಿದ್ದಳು. ಈ ಸಂದಿಗ್ಧದ ಸಂದರ್ಭದಲ್ಲಿ ದೇವಿಕಾಳಿಗೆ ಅವಳ ಗತ ಜೀವನ ಒಂದು ಕಡೆ ಎಳೆಯುತ್ತಿದ್ದರೆ, ಮಗಳು ಅನನ್ಯಾಳ ಭವಿಷ್ಯ ಇನ್ನೊಂದು ಯಕ್ಷಪ್ರಶ್ನೆ ಆಗಿತ್ತು.
ಅವಳಿಗೆ ಮತ್ತೆ ತನ್ನ ಕಳೆದ ದಿನಗಳ ನೆನಪಾಯಿತು. ಅವಳು ಆಗ ತಾನೇ ಪಿ.ಯು.ಸಿ. ಮುಗಿಸಿ ಪದವಿಯ ಮೊದಲ ವರ್ಷದಲ್ಲಿ ದಾಖಲಾತಿ ಪಡೆದಿದ್ದಳು. ಅದೇ ಕಾಲೇಜಿನ ಲೆಕ್ಚರರ್ ಆಗಿದ್ದ ರಾಮಮೂರ್ತಿಗಳ ಮಗ ಅವಿನಾಶ್‌ಗೆ ಅವಳು ಮನಸೋತಿದ್ದಳು. ಇಬ್ಬರ ಮನೆಯೂ ಹತ್ತಿರವೇ ಇದ್ದುದರಿಂದ ಬಂದು ಹೋಗುವ ಗೆಳೆತನ ಎರಡು ಕುಟುಂಬದವರಿಗೂ ಇತ್ತು. ಹೀಗೆ ದೇವಿಕಾ ಮತ್ತು ಅವಿನಾಶ್ ಮಧ್ಯೆ ಸಹಜವಾಗಿ ಒಲವು ಹೆಚ್ಚತೊಡಗಿತು.
ಇಬ್ಬರೂ ಕಾಲೇಜಿನ ಕ್ಯಾಂಪಸ್ ಅಲ್ಲದೆ ಹೊರಗಿನ ಸುತ್ತಾಟಕ್ಕೂ ಮುಂದಾಗಿದ್ದರು. ಚೆಲುವಿನ ಖನಿಯಾಗಿದ್ದ ದೇವಿಕಾ ಅವಿನಾಶ್‌ನನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದಳು. ಅವಳನ್ನು ಪಡೆಯವುದಕ್ಕಾಗಿ ಸ್ಛುರದ್ರೂಪಿ ಅವಿನಾಶ್ ಹಾತೊರೆಯುತ್ತಿದ್ದ. ಯಾವುದೋ ನೆಪದಲ್ಲಿ ಇಬ್ಬರೂ ಒಟ್ಟಾಗಿ ಹೊರಗೆ ಓಡಾಡುತ್ತಿದ್ದರು. ಕಲಿಕೆಯಲ್ಲೂ ಮುಂದಾಗಿದ್ದ ಅವಿನಾಶ್, ದೇವಿಕಾಳಿಗೆ ಪಾಠ ಪ್ರಚನಗಳಲ್ಲೂ ನೆರವಾಗುತ್ತಿದ್ದ. ಬರ್ತ್‌ಡೇ, ಹಬ್ಬಗಳ ನೆಪದಲ್ಲಿ ಇಬ್ಬರಲ್ಲೂ ಉಡುಗೊರೆಗಳ ವಿನಿಮಯ ನಡೆಯುತ್ತಿತ್ತು. ಅವಳು ಅವಿನಾಶ್‌ನ ಪ್ರೇಮದ ಹೊಳೆಯಲ್ಲಿ ಹುಚ್ಚಳಾಗಿದ್ದರೂ ತನ್ನ ಓದು, ಕರ್ತವ್ಯಗಳನ್ನು ಎಂದೂ ಕಡೆಗಣಿಸಿದವಳಲ್ಲ. ಹೀಗೆ ವಾರ, ತಿಂಗಳುಗಳು ಸರಿದು ಪದವಿಯ ಅಂತಿಮ ವರ್ಷಕ್ಕೆ ಕಾಲಿಟ್ಟಳು.