ಕಥೆ - ನೀತಾ ವಿಶ್ವನಾಥ್
ನಳಿನಿ ಕಳೆದ ಏಳು ವರ್ಷಗಳಿಂದ ಈ ಸುಸಂದರ್ಭಕ್ಕಾಗಿಯೇ ಕಾಯುತ್ತಿದ್ದಳು. ಹತ್ತು ವರ್ಷದ ಹಿಂದೆ ಮಹೇಶನೊಂದಿಗೆ ವಿವಾಹವಾಗಿದ್ದ ನಳಿನಿ, ಇದೀಗ ಮೂರು ವರ್ಷಗಳ ಕೆಳಗೆ ಮಗುವನ್ನು ಪಡೆಯಲು ನಿರ್ಧರಿಸಿದ್ದಳು. ತನ್ನ ಸೋದರಿ ರಾಧಿಕಾ ಮದುವೆ ಆದ ವರ್ಷದಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದನ್ನು ನೋಡಿ ನಳಿನಿಗೆ ಅಚ್ಚರಿ ಎನಿಸಿತ್ತು.
ನಳಿನಿ ಆಗಷ್ಟೇ ಫೈನ್ ಆರ್ಟ್ಸ್ ಮೊದಲ ವರ್ಷದ ಪದವಿ ವಿದ್ಯಾಭ್ಯಾಸಕ್ಕೆ ಸೇರಿದ್ದಳು. ರಾಧಿಕಾ ತಾನು ಮದುವೆಯಾಗಲು ಆರಿಸಿದ ವ್ಯಕ್ತಿಯನ್ನು ಕಂಡು ನಳಿನಿ ಸೇರಿದಂತೆ ಅವಳ ಪರಿವಾರಕ್ಕೆ ದಿಗ್ಭ್ರಮೆಯಾಯಿತು.
ರಾಧಿಕಾ ಎಂಬಿಎ ಪದವೀಧರೆ. ಅದು ಅವಳು ಆಕ್ಸ್ ಫರ್ಡ್ ಬಿಸ್‌ನೆಸ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯ. ಅಗ ಅವಳಿಗೆ ರೋಹನ್ ಪರಿಚಯವಾಗಿದ್ದ. ಬಹಳ ಬೇಗನೇ ಇಬ್ಬರೂ ಆತ್ಮೀಯ ಸ್ನೇಹಿತರಾದರು. ಜೊತೆಗೆ ಇಬ್ಬರೂ ಮಾರುತಿ ಉದ್ಯೋಗ್ ಶಿಬಿರದಲ್ಲಿ ಒಟ್ಟಾಗಿ ಭಾಗವಹಿಸಿದ್ದರು. ಆಗಲೇ ನಳಿನಿಗೆ ಇವರಿಬ್ಬರು ಒಳ್ಳೆಯ ಜೋಡಿ ಎನಿಸಿತ್ತು. ಮತ್ತೊಮ್ಮೆ ರಾಧಿಕಾಳ ಇಪ್ಪತ್ತೆರಡನೇ ಹುಟ್ಟುಹಬ್ಬದಂದು ರೋಹನ್ ತಾನು ವಿಶೇಷ ಉಡುಗೊರೆಯೊಂದಿಗೆ ಶುಭಾಶಯ ಕೋರಿದಾಗ, ರೋಹನ್ ರಾಧಿಕಾಳನ್ನು ಪ್ರೀತಿಸುತ್ತಿದ್ದಾನೆಂದು ಭಾವಿಸಿದಳು.
ತನಗೂ ರೋಹನ್‌ನಂತಹ ಗೆಳೆಯ ಸದ್ಯದಲ್ಲೇ ಸಿಗಲಿರುವನೆಂದು ನಂಬಿದ್ದ ನಳಿನಿ ತಾನು ಕಾಲೇಜಿಗೆ ಹೋಗುವಾಗಲೆಲ್ಲಾ ಅಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಳು.
ರಾಧಿಕಾ ವಿದ್ಯಾಭ್ಯಾಸದ ನಂತರ ಮಾರುತಿ ಉದ್ಯೋಗ್‌ನಲ್ಲಿಯೇ ಮ್ಯಾನೇಜರ್ ಆಗಿ ನೌಕರಿ ಪ್ರಾರಂಭಿಸಿದಳು. ರೋಹನ್ ಇನ್‌ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ್ದ. ನಳಿನಿ ರೋಹನ್ ವಿಷಯವಾಗಿ ಅಕ್ಕನಲ್ಲಿ ಕೇಳುತ್ತಿದ್ದರೂ ಕೂಡ ರಾಧಿಕಾ ಏನೊಂದನ್ನೂ ಬಿಚ್ಚುಮನಸ್ಸಿನಿಂದ ಹೇಳುತ್ತಿರಲಿಲ್ಲ. ತನ್ನ ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ರಾಧಿಕಾಳಿಗೆ ಮೊದಲಿನಿಂದಲೂ ಅಷ್ಟು ಸಮಂಜಸ ಎನಿಸುತ್ತಿರಲಿಲ್ಲ.
ರೋಹನ್ ಪ್ರತಿ ರಾತ್ರಿ ಒಂಬತ್ತಕ್ಕೆ ಸರಿಯಾಗಿ ರಾಧಿಕಾಳಿಗೆ ಕರೆ ಮಾಡುತ್ತಿದ್ದ. ಆಗ ಇಬ್ಬರೂ ಬಹಳ ಆತ್ಮೀಯವಾಗಿ ಮಾತನಾಡುತ್ತಿದ್ದರು. ಒಮ್ಮೆ ರಾಧಿಕಾಳಿಗೆ ಬಂದ ಕರೆಯನ್ನು ನಳಿನಿ ಸ್ವೀಕರಿಸಿದಳು. ರೋಹನ್ ರಾಧಿಕಾಳನ್ನು ಕೇಳಿದ. ಅವಳಿಗೆ ಫೋನ್ ನೀಡಿದ ನಳಿನಿ ಅಲ್ಲೇ ಮರೆಯಲ್ಲಿ ನಿಂತು ಇವರ ಮಾತುಗಳನ್ನು ಕುತೂಹಲದಿಂದ ಆಲಿಸಿದಳು. ಆದರೆ ಅವರ ಮಾತುಕಥೆ ಬಹುತೇಕ ಅವರ ಕಛೇರಿ ಕೆಲಸದ ವಿಚಾರವಾಗಿದ್ದರಿಂದ ಅದು ನಳಿನಿಗೆ ನಿರಾಶೆಯಾಗಿತ್ತು.
ದಿನಗಳು ಸರಿದವು. ಒಮ್ಮೆ ರಾಧಿಕಾ ತನ್ನ ಸಹಪಾಠಿಯಾಗಿದ್ದ ವಿನೋದ್‌ನನ್ನು ವಿವಾಹವಾಗುವುದಾಗಿ ಮನೆಯಲ್ಲಿ ಪ್ರಸ್ತಾಪಿಸಿದಾಗ ನಳಿನಿ ಸೇರಿದಂತೆ ಎಲ್ಲರಿಗೂ ಅಚ್ಚರಿಯಾಗಿತ್ತು. ರೋಹನ್‌ಗೆ ಹೋಲಿಸಿದರೆ ವಿನೋದ್ ಅಷ್ಟೇನೂ ಸ್ಛುರದ್ರೂಪಿಯಲ್ಲ. ರಿಲೆಯನ್ಸ್ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ವಿನೋದ್‌ನನ್ನು ವಿವಾಹವಾಗುವುದಾಗಿ ರಾಧಿಕಾ ಗಟ್ಟಿ ನಿರ್ಧಾರ ಮಾಡಿದ್ದಳು. ನಳಿನಿ ಈ ಕುರಿತು ರಾಧಿಕಾಳನ್ನು ಕೇಳಿದಾಗಲೂ ಕಾರಣ ತಿಳಿಸಲು ಅವಳು ನಿರಾಕರಿಸಿದ್ದಳು.
ರಾಧಿಕಾ-ವಿನೋದ್ ವಿವಾಹ ಕೆಲವೇ ಬಂಧುಮಿತ್ರರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ವಿನೋದ್ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನಾಗಿದ್ದ. ಮದುವೆಯ ಸಮಯದಲ್ಲಿ ಕೆಲವರು ಸಣ್ಣ ಪುಟ್ಟ ಕಾರಣಗಳಿಗೆ ಜಗಳ ತೆಗೆದಿದ್ದು ಹೊರತಾಗಿ ಶುಭಕಾರ್ಯ ಸುಸೂತ್ರಾಗಿ ನಡೆಯಿತು. ಇದೆಲ್ಲದರ ನಡುವೆ ನಳಿನಿಗೆ ಮಾತ್ರ ವಿನೋದ್ ಹಿಡಿಸಲಿಲ್ಲ. ತಾನು ಮದುವೆಯಾದಲ್ಲಿ ರೋಹನ್‌ನಂತಹವನನ್ನೇ ಆರಿಸಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದಳು.