ಕಥೆ - ಕೆ. ಚಂದ್ರಕಲಾ
ಕಳೆದ ಹದಿನೈದು ದಿನಗಳಿಂದಲೂ ಫಾತಿಮಾ ನೋಡುತ್ತಿದ್ದಂತೆ ಕಾಯಿಲೆಯಿಂದ ನರಳುತ್ತಿದ್ದ ಲೀಲಾಳ ಸುತ್ತಲೂ ಸಾಕಷ್ಟು ಜನರು ಸೇರುತ್ತಿದ್ದರು. ಲೀಲಾ ಮಲಗಿದ್ದ ಮಂಚದ ಒಂದು ಮೂಲೆಯಲ್ಲಿ ಕುಳಿತಿದ್ದ ಫಾತಿಮಾ ಮೌನವಾಗಿ ಬಿಕ್ಕುತ್ತಿದ್ದಳು.
ಇಪ್ಪತ್ತು ವರ್ಷಗಳಿಂದ ಲೀಲಾಳ ಮನೆಯಲ್ಲಿ ಕೆಲಸಕ್ಕಿದ್ದ ಫಾತಿಮಾ, ಲೀಲಾಳ ಕುಟುಂಬದಲ್ಲಿ ಒಬ್ಬಳೆನ್ನುವಂತೆ ಬೆರೆತುಹೋಗಿದ್ದಳು. ಲೀಲಾ ಮತ್ತು ಫಾತಿಮಾರ ಧಾರ್ಮಿಕ ವಿಚಾರಗಳು, ನಂಬಿಕೆಗಳೂ ಬೇರೆ ಬೇರೆ ಆಗಿದ್ದರೂ ಅದಾವುದೂ ಲೀಲಾ ಮತ್ತವಳ ಕುಟುಂಬಕ್ಕೆ ಫಾತಿಮಾ ಬಗೆಗೆ ಭಿನ್ನಾಭಿಪ್ರಾಯ ಬರಲು ಕಾರಣವಾಗಿರಲಿಲ್ಲ. ಲೀಲಾಳ ಮೂರು ಗಂಡು, ಇಬ್ಬರು ಹೆಣ್ಣುಮಕ್ಕಳಿಗೂ ಫಾತಿಮಾಳ ಬಗೆಗೆ ಆದರ, ಅಭಿಮಾನಗಳು ಇತ್ತು. ಲೀಲಾಗೆ ಸಹ ಫಾತಿಮಾ ಒಳ್ಳೆಯ ಸ್ನೇಹಿತೆ, ಸಲಹೆಗಾರ್ತಿಯಾಗಿದ್ದಳು. ಜೀವನದಲ್ಲಿ ಯಾವುದೇ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಲ್ಲಿ ಲೀಲಾ, ಫಾತಿಮಾಳ ಸಲಹೆ ಕೇಳುತ್ತಿದ್ದಳು.
ಲೀಲಾಳ ಪತಿ ಭಾನುಪ್ರಸಾದ್. ಮಕ್ಕಳು ಚಿಕ್ಕವರಾಗಿರಬೇಕಾದರೆ ಆಕೆ ಪತಿಯನ್ನು ಕಳೆದುಕೊಂಡಿದ್ದರು. ಅದೇ ವೇಳೆಯಲ್ಲಿ ಅವಳಿಗೆ ಫಾತಿಮಾ ಪರಿಚಯವಾಗಿತ್ತು. ಲೀಲಾಗೆ ಫಾತಿಮಾ ಗುಣಗಳು ಬಹುವಾಗಿ ಹಿಡಿಸಿದ್ದರಿಂದ ಅವಳಿಗೆ ತನ್ನ ಮನೆಯ ಒಂದು ಪ್ಯಾಸೇಜ್‌ನಲ್ಲೇ ವಾಸವಾಗಿರಲು ಭಾಗ ಕೊಟ್ಟಿದ್ದಲ್ಲದೆ, ತನ್ನ ಮನೆಯ ಕೆಲಸಗಳನ್ನು ಮಾಡಿಕೊಂಡಿರುವಂತೆ ಹೇಳಿದ್ದಳು.
ಅಂದಿನಿಂದಲೂ ಲೀಲಾಳ ಜೊತೆಗಿದ್ದ ಫಾತಿಮಾ ಅವಳ ಬದುಕಿನ ಏರಿಳಿತಗಳನ್ನೆಲ್ಲವನ್ನು ಕಂಡಿದ್ದಳು. ಲೀಲಾಳ ಐವರು ಮಕ್ಕಳ ಬೆಳವಣಿಗೆ ಮತ್ತು ಅವರ ಕುಟುಂಬ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ಕಂಡು ಆನಂದಿಸಿದ್ದಳು. ಇನ್ನು ಲೀಲಾ ಸಹ ಫಾತಿಮಾ ಮತ್ತು ಅವಳ ಇಬ್ಬರು ಮಕ್ಕಳಿಗೆ ಬೇಕಾದ ಆರ್ಥಿಕ ನೆರವನ್ನು ನೀಡುತ್ತಿದ್ದಳು. ಅವಳ ಮಕ್ಕಳ ಶಿಕ್ಷಣದ ವೆಚ್ಚವನ್ನು ಲೀಲಾಳೆ ಭರಿಸಿದ್ದಳು.
ಇದೀಗ ಲೀಲಾ ತನ್ನ ಬದುಕಿನ ಅಂತಿಮ ಘಟ್ಟದಲ್ಲಿದ್ದಳು. ಇದು ಅವಳ ಪರಿವಾರಕ್ಕೆ ಭರಿಸಲಾಗದ ದುಃಖ ಉಂಟುಮಾಡಿತ್ತು. ಅವಳ ಐವರು ಮಕ್ಕಳು, ಸಾಕಷ್ಟು ಸಂಖ್ಯೆಯಲ್ಲಿದ್ದ ಮೊಮ್ಮಕ್ಕಳು ಎಲ್ಲರೂ ಈಗ ಲೀಲಾಳ ಸುತ್ತಲೇ ಇರುತ್ತಿದ್ದರು. ಲೀಲಾಳ
ಮೊಮ್ಮಕ್ಕಳೆಲ್ಲರೂ ತಮ್ಮ ಶಾಲೆಯ ಅನುಭವಗಳನ್ನು ಹೇಳುವುದರ ಮೂಲಕವೇ, ತಮಗೆ ಅಜ್ಜಿಯೇ ಹೇಳಿದ್ದ ಕಥೆಗಳ್ನು ಈಗ ಪುನಃ ಅವಳಿಗೆ ಹೇಳುತ್ತಲೋ ಲೀಲಾಳ ನೋವನ್ನು ಕಡಿಮೆ ಮಾಡಲು ಬಯಸುತ್ತಿದ್ದರು.
ಸಂತೋಷ್, ಲೀಲಾಳ ಹಿರಿಯ ಮೊಮ್ಮಗ, ಅಂದರೆ ಹಿರಿಯ ಮಗನ ಮಗ. ಅವನ ಬಾಲ್ಯದ ದಿನಗಳ ಆಟ, ಸ್ನೇಹಿತರು ತನ್ನ ಸೋದರರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದ. ಅಲ್ಲದೆ, ಚಿಕ್ಕವನಿದ್ದಾಗ ಮಾಡುತ್ತಿದ್ದ ಚೇಷ್ಟೆಗಳನ್ನು ಹೇಳಿ ನಗಿಸುತ್ತಿದ್ದ. ಆಗೆಲ್ಲ ಲೀಲಾ ಸಹ ನಗುವುದಕ್ಕೆ ಪ್ರಯತ್ನಿಸುತ್ತಿದ್ದಳು.
ಲೀಲಾಳ ಎರಡನೆ ಮಗನ ಮಗಳು ಸ್ಮಿತಾ ಯಾವಾಗಲೂ ಗಂಭೀರ ಸ್ವಭಾವದವಳು. ಈಗಲೂ ಕೂಡ ಕುರ್ಚಿಯಲ್ಲಿ ಕುಳಿತು ಒಂದೇ ದೃಷ್ಟಿಯಿಂದ ಅಜ್ಜಿಯತ್ತ ದಿಟ್ಟಿಸುತ್ತಿದ್ದಳು. ತನ್ನಲ್ಲಿನ ನೋವನ್ನು ಮರೆಯಲೆನ್ನುವಂತೆ ಆಗೊಮ್ಮೆ ಈಗೊಮ್ಮೆ ನಗು ಬೀರುತ್ತಿದ್ದಳು.
ಸುಚಿತ್ರಾ, ಲೀಲಾಳ ಮೊದಲನೇ ಮಗಳ ಒಬ್ಬಳೇ ಮಗಳು. ಅವಳು ಅಜ್ಜಿಯನ್ನು ಕಂಡು ಜೋರಾಗಿ ಅಳುತ್ತಲಿದ್ದಳು. ಅಲ್ಲದೆ, ತನ್ನ ತಾಯಿಯ ಕಡೆ ನೋಡುತ್ತಾ ಕೆಲವೊಮ್ಮೆ ಅವಳನ್ನು ತಬ್ಬಿಕೊಂಡು ತನ್ನ ಭಾವೋದ್ವೇಗವನ್ನು ಶಮನ ಮಾಡಿಕೊಳ್ಳುತ್ತಿದ್ದಳು.