ಕಥೆ – ಆಶಾ ಕುಮಾರ್‌ 

ಬೆಳಗ್ಗೆ  ಏಳುವಾಗಲೂ ನನ್ನಲ್ಲಿದ್ದ ಹ್ಯಾಂಗೋವರ್‌ ಕಡಿಮೆ ಆಗಿರಲಿಲ್ಲ. ಗಡಿಯಾರ ನೋಡಿದಾಗ ಆಗಲೇ ಒಂಬತ್ತು ಗಂಟೆಯಾಗಿತ್ತು. ಎದ್ದು ಕಿಟಕಿ ಬಳಿ ಬಂದಾಗ ಹೊರಗೆ ಇನ್ನೂ ಮೋಡ ಕವಿದಿತ್ತು. ಜೊತೆಗೆ ಮಂಜು ಬೀಳುತ್ತಲಿತ್ತು. ಇದೇ ರೀತಿ ಕೋಣೆಯ ಒಳಗೂ ಕತ್ತಲಾಗಿತ್ತು. ನಾನು ಪುನಃ ಬೆಡ್‌ ಬಳಿ ಬಂದು ಕುಳಿತುಕೊಳ್ಳುವಷ್ಟರಲ್ಲಿ ನನ್ನ ಮೊಬೈಲ್ ರಿಂಗಣಿಸಿತ್ತು. ಟೇಬಲ್ ಮೇಲಿದ್ದ ಅದನ್ನು ಎತ್ತಿ ರಿಸೀವ್ ಮಾಡುತ್ತಲೇ ಅತ್ತ ಕಡೆಯಿಂದ ಪಲ್ಲವಿಯ ಧ್ವನಿ ಕೇಳಿಸಿತು.

“ಆದಿತ್ಯಾ ಎದ್ದಿದ್ದೀಯಾ? ಈಗ ಹ್ಯಾಂಗೋವರ್‌ ಹೇಗಿದೆ?” ಎಂದು ಕೇಳಿದಾಗ ನನಗೆ ನಿನ್ನೆ ರಾತ್ರಿ ನಾನು ಪಲ್ಲವಿಯನ್ನು ಭೇಟಿಯಾದ ಪ್ರಸಂಗ ನೆನಪಾಯಿತು.

ಸುಮಾರು ಎರಡು ವರ್ಷಗಳ ನಂತರ ಪಲ್ಲವಿ ನನ್ನನ್ನು ಭೇಟಿಯಾಗಿದ್ದಳು. ನನ್ನ ಹಳೆಯ ಗೆಳತಿಯಾದರೂ ಇತ್ತೀಚೆಗೆ ನಾನು ಅವಳನ್ನು ಹೆಚ್ಚು ಭೇಟಿ ಆಗಿರಲಿಲ್ಲ. ಅಂತಹುದರಲ್ಲಿ ನಿನ್ನೆ ವೀಕೆಂಡ್‌ನ ನೆಪದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ನಡೆಸುತ್ತಿದ್ದೆ. ಆಗ ನಡೆದ ನನ್ನ ಮತ್ತು ಅವಳ ಭೇಟಿ ನನ್ನಲ್ಲಿ ಅಚ್ಚರಿ ಮತ್ತು ಸಂತಸವನ್ನು ಉಂಟು ಮಾಡಿತ್ತು.

“ಆದಿತ್ಯ, ಈ ಸ್ವಾತಿ ಎಂದರೆ ಯಾರು?” ಪಲ್ಲವಿ ಕೇಳಿದ ನೇರ ಪ್ರಶ್ನೆಯಿಂದ ನನಗೆ ದಿಗ್ಭ್ರಮೆಯಾಗಿತ್ತು. ನಾನು ಇದುವರೆವಿಗೂ ಪಲ್ಲವಿಗೆ ನನ್ನ ಮತ್ತು ಸ್ವಾತಿಯ ವಿಚಾರ ತಿಳಿಸಿರಲಿಲ್ಲ. ಈಗ…..?  ನಿನ್ನೆ ರಾತ್ರಿ ನನ್ನ ಪರಿಸ್ಥಿತಿಯಲ್ಲಿ ಇನ್ನು ಏನೇನು ಹೇಳಿದ್ದೆನೊ…..?! ಎನಿಸಿತು.

“ಆದಿ, ಏಕೆ ಮೌನವಾದೆ….? ಅವಳು ಅಷ್ಟು ಒಳ್ಳೆಯ ಹುಡುಗಿ. ನಿನಗೆ, ನಿನ್ನ ಹೃದಯಕ್ಕೆ ಅಷ್ಟು ಹತ್ತಿರದವಳು ಎನಿಸಿದ್ದರೆ ಈಗ ಅವಳೆಲ್ಲಿರುವಳೋ ಅಲ್ಲೇ ಹೋಗಿ ನೋಡಿ ಬಾ.”

“ಹಾಂ…! ನಿನ್ನೆ ನಾನು ಸ್ವಾತಿ ಬಗ್ಗೆ ನಿನ್ನೊಂದಿಗೆ ಮಾತನಾಡಿದ್ದೆನಾ?”

“ಸ್ವಾತಿ ಯಾರು ಎನ್ನುವುದನ್ನು ನೀನು ತಿಳಿಸಲಿಲ್ಲ. ಆದರೆ ಅವಳನ್ನು ನೀನೆಷ್ಟು ಇಷ್ಟಪಡುತ್ತಿಯೋ ಎನ್ನುವುದು ನಿನ್ನ ಮಾತಿನಿಂದ ನನಗೆ ಸ್ಪಷ್ಟ ಅರ್ಥವಾಯಿತು. ಜೊತೆಗೆ ಈ ಎರಡು ವರ್ಷಗಳಲ್ಲಿ ನೀನು ಅವಳಿಂದ ಬೇರೆಯಾಗಿ ಅನುಭವಿಸಿದ್ದ ನೋವು ಸಂಕಟದ ದರ್ಶನ ಆಯಿತು.”

“ಸರಿ, ನೀನೀಗ ಎಲ್ಲಿದ್ದೀಯಾ?”

“ನಾನಿನ್ನೂ ಮನೆಯಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ಸಿಂಗಾಪುರಕ್ಕೆ ಹೊರಡಬೇಕಿದೆ. ಅಲ್ಲಿ ತುಸು ಕೆಲಸವಿದೆ.”

“ಹಾಗಾದರೆ…. ನಾಳೆ ನಮ್ಮನೆಗೆ ಬರುವೆಯಾ? ಇಬ್ಬರೂ ಊಟಿಗೆ ಹೋಗೋಣ. ಸ್ವಾತಿ ಈಗ ಊಟಿಯದಲ್ಲಿ ರೇಖಾ ಅವರ ಅಪಾರ್ಟ್‌ಮೆಂಟ್‌ನಲ್ಲಿದ್ದಾಳೆ.”

“ನಾನು….? ನಿನ್ನೊಂದಿಗೆ ಬರಲು ನನಗೇನೂ ಬೇಸರವಿಲ್ಲ. ಆದರೆ… ನಾಳೆ ನನಗೊಂದಿಷ್ಟು ಕೆಲಸಗಳಿವೆ.”

“ಸರಿ, ನಾನೇ ಹೊರಡುತ್ತೇನೆ…..” ಅಲ್ಲಿಗೆ ಕರೆ ಮುಗಿದಿತ್ತು. ಆದರೆ ನನ್ನ ಮನದಲ್ಲಿ ನೆನಪಿನ ಅಲೆಗಳು ಪುಟಿದೇಳತೊಡಗಿತು.

ಸ್ವಾತಿ ಕಾಲೇಜು ದಿನಗಳಲ್ಲಿ ನನಗೆ ಪರಿಚಯವಾಗಿದ್ದಳು. ಅತೀ ಶೀಘ್ರವಾಗಿ ನಾವಿಬ್ಬರೂ ಆತ್ಮೀಯರಾದೆವು. ಒಬ್ಬರಿಗೊಬ್ಬರನ್ನು ಅರ್ಥೈಸಿಕೊಂಡೆವು ಎಂದು ನಾನು ತಿಳಿದುಕೊಂಡಿದ್ದೆ. ಆದರೆ ಅದೊಂದು ಗಳಿಗೆಯಲ್ಲಿ ನಮ್ಮಿಬ್ಬರ ಮಧ್ಯೆ ಬಿರುಕು ಮೂಡಿತು. ಹೇಮಲತಾ ಎನ್ನುವ ಸ್ವಾತಿಯ ಗೆಳತಿಯೇ ನಮ್ಮಿಬ್ಬರ ಮಧ್ಯದ ವಿರಸಕ್ಕೆ ಕಾರಣವಾಗಿದ್ದಳು. ಅವಳ್ಯಾವ ಉದ್ದೇಶದಿಂದ ಹಾಗೆ ಮಾಡಿದಳೋ ನನಗೆ ಗೊತ್ತಾಗಲಿಲ್ಲ. ಆದರೆ ಅವಳ ಮಾತುಗಳನ್ನು ನಂಬಿದ ಸ್ವಾತಿ ದಿನದಿಂದ ದಿನಕ್ಕೆ ನನ್ನನ್ನು ಕಡೆಗಣಿಸುತ್ತಾ ಬಂದು ನನ್ನೊಂದಿಗೆ ಅಂತರ ಕಾಪಾಡಿಕೊಳ್ಳತೊಡಗಿದಳು. ಇದಾಗಿ ಮುಂದೆ ನಾನು ಮೈಸೂರಿನಿಂದ ಮಂಗಳೂರಿಗೆ ಬಂದೆ, ಅಲ್ಲೇ ಕೆಲಸ ಸಿಕ್ಕಿತು. ಅವಳು ಮೈಸೂರಿನಲ್ಲೇ ಇದ್ದಳು. ಅಲ್ಲಿಂದ ಮುಂದೆ ಊಟಿಯನ್ನು ಸೇರಿದಳು. ಇಷ್ಟೆಲ್ಲ ಆಗಿ ಈಗಾಗಲೇ ಐದಾರು ವರ್ಷಗಳೇ ಉರುಳಿದವು. ಈಗ ಪಲ್ಲವಿಯ ಭೇಟಿ. ನಿನ್ನೆಯ ನನ್ನ ಪರಿಸ್ಥಿತಿಗಳಿಂದಲೇ ಪುನಃ ಸ್ವಾತಿಯನ್ನು ಭೇಟಿಯಾಗುವ ನಿರ್ಧಾರ ಗಟ್ಟಿಯಾಗಿತ್ತು. ಅದು ನಮ್ಮಿಬ್ಬರ ಪುನರ್ಮಿಲನ ಆಗಲಿದ್ದ ಕ್ಷಣ, ಅದಕ್ಕಾಗಿ ನಾನು ಕಾಯುತ್ತಿದ್ದೆ.

“ಸರ್‌, ಊಟಿಗೆ ಹೋಗುವ ದಾರಿಯಲ್ಲಿ ಧಾರಾಕಾರ ಮಳೆ ಬಿದ್ದು ರಸ್ತೆ ಮಧ್ಯೆ ಗುಡ್ಡ ಜರುಗಿ ಸಂಚಾರ ಅಸ್ತ್ಯವ್ಯಸ್ತವಾಗಿದೆ. ಯಾವ ವಾಹನಗಳೂ ಮುಂದೆ ಚಲಿಸಲು ಸಾಧ್ಯವಾಗುತ್ತಿಲ್ಲ,”

ಮೈಸೂರು ದಾಟಿದ ಬಳಿಕ ನನ್ನ ಕಾರು ಚಾಲಕ ರವಿ ಹೇಳಿದ. ನಾನು ಕಾರಿನಿಂದ ಹೊರಗೆ ನೋಡಿದಾಗ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಆದರೆ ಸ್ವಾತಿಯನ್ನು ಭೇಟಿಯಾಗಬೇಕೆನ್ನುವ ನನ್ನ ನಿರ್ಧಾರ ಅಚಲವಾಗಿದ್ದರಿಂದ ನಾನು ಹಿಂದಿರುಗುವ ಪ್ರಶ್ನೆಯೇ ಇರಲಿಲ್ಲ.

“ನಾನು ನಿನಗೆ ಹೇಳಿದ್ದಕ್ಕಿಂತ ಇನ್ನೂರು ರೂ. ಹೆಚ್ಚು ಕೊಡುತ್ತೇನೆ. ಸ್ವಲ್ಪ ಮುಂದೆ ಹೋಗು.”

“ಸರ್‌, ಇದು ದುಡ್ಡಿನ ಪ್ರಶ್ನೆಯಲ್ಲ. ನನಗೂ ಮನೆ, ಕುಟುಂಬ ಇದೆಯಲ್ಲವೇ? ದಾರಿ ನಡುವೆ ಏನಾದರೂ ಆದರೆ….?”

“ನೋಡು, ನಾನು ನನ್ನ ಜೀವನದಲ್ಲಿ ಬಹಳ ಬೇಕಾದ ವ್ಯಕ್ತಿಯನ್ನು ಭೇಟಿಯಾಗಬೇಕು. ಅದಕ್ಕಾಗಿ ನಾನು ಯಾವ ಬಗೆಯ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧನಿದ್ದೇನೆ,” ಎಂದು ಪರಿಪರಿಯಾಗಿ ಹೇಳಿದ ಮೇಲೆ ಡ್ರೈವರ್‌ ಕಡೆಗೂ ಬರುವುದಾಗಿ ಒಪ್ಪಿದ.

ಇದಾಗಿ ಎಲ್ಲಾ ಅಡೆತಡೆಗಳನ್ನೂ ಎದುರಿಸಿ ಊಟಿ ತಲುಪಿದಾಗ ಸಂಜೆ ಆರು ದಾಟಿತ್ತು. ನೇರವಾಗಿ ಸ್ವಾತಿ ತಂಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಬಂದಿಳಿದ ನನಗೆ ನಿರಾಶೆ ಕಾದಿತ್ತು. ಸ್ವಾತಿ ಇನ್ನೂ ಮನೆಗೆ ಬಂದಿರಲಿಲ್ಲ. ಮಳೆ ಹನಿಯುತ್ತಿದ್ದ ಹೊತ್ತಿನಲ್ಲಿ ಮೆಟ್ಟಿಲ ಮೇಲೆ ಹಾಗೇ ಸ್ವಾತಿಗಾಗಿ ಕಾಯುತ್ತಾ ಕುಳಿತೆ. ಸಮಯ ಕಳೆದು ಮಳೆ ನಿಂತು ಹೋದರೂ ತಲೆಯಿಂದ ಹನಿ ತೊಟ್ಟಿಕ್ಕುತ್ತಿತ್ತು. ಅಷ್ಟರಲ್ಲಿ ಒಂದು ಕಾರು ಅಪಾರ್ಟ್‌ಮೆಂಟ್‌ನ ಗೇಟ್‌ ಬಳಿ ನಿಂತಿದ್ದನ್ನು ಕಂಡೆ. ಅದರಿಂದ ಇಳಿದಿದ್ದು ಸ್ವಾತಿ! ಕಾರು ಪುನಃ ಮುಂದೆ ಸಾಗಿತು. ಸ್ವಾತಿ ಮೊದಲ ಮಹಡಿಯಲ್ಲಿದ್ದ ತನ್ನ ಮನೆಯತ್ತ ಹೆಜ್ಜೆ ಹಾಕಿದಳು.

ಹೀಗೆ ಮೆಟ್ಟಿಲೇರಿದಾಗ ಅಚಾನಕ್‌ ಎಂಬಂತೆ ನನ್ನತ್ತ ನೋಡಿದ ಅವಳ ಮುಖದಲ್ಲಿ ಒಮ್ಮೆಲೇ ಅಚ್ಚರಿ, ಸಂತೋಷ ಮೂಡಿತು!

“ಆದಿ….” ಅದೇ ಜೇನಿನಂತಹ ದನಿ. ಕುಳಿತಲ್ಲಿಂದ ಎದ್ದು ಅವಳ ಬಳಿ ಹೋದೆ. ಇಬ್ಬರೂ ಮನೆಯೊಳಗೆ ಸೇರಿದೆವು. ಮತ್ತೆ ಇಬ್ಬರಿಗೂ ಮಾತುಗಳೇ ಹೊರಡಲಿಲ್ಲ. ಹೃದಯ ಬಡಿತಗಳು ಮಾತ್ರ ಪರಸ್ಪರ ಅರ್ಥಪೂರ್ಣವಾಗಿ ಬಡಿದುಕೊಂಡು ಒಬ್ಬರಿಂದ ಒಬ್ಬರಿಗೆ ಪ್ರೇಮ ಸಂದೇಶ ರವಾನಿಸಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ