ಕಥೆ – ಭವ್ಯಾ ಕೆ. ರಾವ್
ರಾತ್ರಿ 11 ಗಂಟೆಯಾಗಿತ್ತು, ಹೊರಗೆ ಮಳೆ ಬೀಳುತ್ತಿತ್ತು. ವನಿತಾ ತನ್ನ ಬೆಡ್ರೂಮಿನ ತೆರೆದ ಕಿಟಕಿಯಿಂದ ಹೊರಗಿನ ದೃಶ್ಯ ನೋಡುತ್ತಿದ್ದಳು. ಕಣ್ಣೀರು ಅವಳ ಕೆನ್ನೆಗಳನ್ನು ತೋಯಿಸುತ್ತಿತ್ತು. ಎದೆಯಲ್ಲಿ ಬಿರುಗಾಳಿ ಏಳುತ್ತಿತ್ತು. ಅವಳು ಬಹಳ ಉದಾಸಳಾಗಿದ್ದಳು. ಅವಳು ಅಂತಹ ಸುಂದರ ವಾತಾರಣದಲ್ಲಿ ಸತೀಶನ ತೋಳುಗಳಲ್ಲಿ ಹುದುಗಿ ಆನಂದ ಹೊಂದಬೇಕೆಂದು ಬಯಸಿದ್ದಳು. ಆದರೆ ಈಗ ಏಕಾಂಗಿಯಾಗಿ ಉದಾಸಳಾಗಿ ಮಲಗಿದ್ದಳು. ಅವಳು 2 ಗಂಟೆಯಿಂದ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ನನ್ನು ಕಂಡು ತನ್ನನ್ನು ನಿಯಂತ್ರಿಸಿಕೊಳ್ಳಲಾರದೆ ಕೇಳಿದಳು, “ಸತೀಶ್, ಏನಾಗ್ತಿದೆ? ಇನ್ನೂ ಎಷ್ಟು ಹೊತ್ತು ಕೆಲಸ ಮಾಡ್ತೀರಿ?”
“ನೀನು ಮಲಕ್ಕೋ. ನನಗೆ ನಿದ್ದೆ ಬರ್ತಿಲ್ಲ.”
ನಿದ್ದೆ ಬರ್ತಿಲ್ಲ ಅಂದ್ರೆ ಸ್ವಲ್ಪ ಹೊತ್ತು ಹೆಂಡತಿ ಜೊತೆ ಕಳೆಯಬಹುದಲ್ವಾ? ಎಂದು ಹೇಳಬೇಕೆನ್ನಿಸಿತು. ಆದರೆ ವನಿತಾಗೆ ಹೇಳಲಾಗಲಿಲ್ಲ. ಇದು ಒಂದು ದಿನದ ವಿಷಯವಾಗಿರಲಿಲ್ಲ. ದಿನ ಇದೇ ಪರಿಸ್ಥಿತಿಯಾಗಿತ್ತು. ತಿಂಗಳಲ್ಲಿ 10 ದಿನ ಸತೀಶ್ ಟೂರ್ನಲ್ಲಿರುತ್ತಿದ್ದ. ಉಳಿದ ದಿನಗಳು ಆಫೀಸ್ ಅಥವಾ ಮನೆಯಲ್ಲಿ ಲ್ಯಾಪ್ಟಾಪ್ ಅಥವಾ ತನ್ನ ಫೋನ್ನಲ್ಲಿ ವ್ಯಸ್ತನಾಗಿರುತ್ತಿದ್ದ.
ವನಿತಾಗೆ ಗಂಟಲು ಒಣಗಿದಂತಾದಾಗ ಅಡುಗೆಮನೆಗೆ ನೀರು ಕುಡಿಯಲು ಹೋದಳು. ಅತ್ತೆ ಮಾವನ ರೂಮಿನ ಲೈಟ್ ಆಫ್ ಆಗಿತ್ತು. ಮಕ್ಕಳ ರೂಮಿಗೆ ಹೋಗಿ ನೋಡಿದಾಗ ಶರತ್ ಮತ್ತು ಶ್ವೇತಾ ನಿದ್ದೆ ಮಾಡುತ್ತಿದ್ದರು. ಮನೆ ಶಾಂತವಾಗಿತ್ತು.
ಅವಳು ನೀರು ಕುಡಿದು ರೂಮಿಗೆ ಬಂದು ಮಲಗಿದಳು. ಪ್ರೀತಿಯ ನಶೆ ಕೆಲವು ವರ್ಷಗಳ ನಂತರ ಅದು ಹೇಗೆ ಇಳಿದುಹೋಗುತ್ತದೆ ಎಂದು ಯೋಚಿಸತೊಡಗಿದಳು. ರೊಮ್ಯಾನ್ಸ್ ಕನಸು ಇಷ್ಟು ಬೇಗ ಏಕೆ ಕಮರಿಹೋಗುತ್ತದೆ? ದಿನನಿತ್ಯದ ವ್ಯಸ್ತ ದಿನಚರಿಯ ಭಾರದಡಿ ಪ್ರೀತಿ ಹೇಗೆ ಮತ್ತು ಏಕೆ ಮಾಯವಾಗುತ್ತದೆ ಎಂದು ತಿಳಿಯುವುದೇ ಇಲ್ಲ. ಪ್ರೀತಿ ಇದ್ದರೂ ಅದರ ಮೇಲೆ ಮಂಜಿನ ಹೊದಿಕೆ ಹೊದಿಸಲಾಗಿರುತ್ತದೆ. ಹಳೆಯ ದಿನಗಳು ಕನಸಿನಂತೆ ಕಾಣುತ್ತವೆ.
ಸತೀಶ್ ತನ್ನ ಗೆಳೆಯರ ಮುಂದೆ ನನಗಂತೂ ಮನೆ ಕಡೆ ಟೆನ್ಶನ್ನೇ ಇಲ್ಲ. ಅಪ್ಪ ಅಮ್ಮನ ಬಗ್ಗೆ, ಮಕ್ಕಳ ಓದಿನ ಬಗ್ಗೆ ಚಿಂತೆಯೇ ಇಲ್ಲ. ಎಲ್ಲವನ್ನೂ ವನಿತಾ ಸಂಭಾಳಿಸುತ್ತಾಳೆ ಅಂತ ಜಂಭ ಕೊಚ್ಚಿಕೊಳ್ತಾನೆ. ಆಗೆಲ್ಲಾ ವನಿತಾಗೆ ಚುಚ್ಚಿದಂತಾಗುತ್ತದೆ. ಹ್ಞೂಂ, ಸತೀಶ್ಗೆ ತನ್ನ ಹೆಂಡತಿಯ ಬಗ್ಗೆ ಏನಾದರೂ ಕರ್ತವ್ಯ ಇದೆ ಅನ್ನಿಸೋದಿಲ್ವಾ?
ಇಂದು ಅವಳು ಬಹಳ ಒಂಟಿತನ ಅನುಭವಿಸುತ್ತಿದ್ದಳು. ಅವಳು ಬೇಸರದಿಂದ ಎದ್ದು ಕುಳಿತಳು. ನಂತರ ಹೇಳಿದಳು, “ಸತೀಶ್, ನಾವು ಹೀಗೇ ಯಾಂತ್ರಿಕವಾಗಿ ಬದುಕಿರೋದಾ? ನಾವು ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ತಿದ್ದೀವಿ ಅಂತ ನಿಮಗೆ ಅನ್ನಿಸೋದಿಲ್ವಾ? ಅವು ಮತ್ತೆ ನಮಗೆ ಸಿಗಲ್ಲ.”
ಸತೀಶ್ ಲ್ಯಾಪ್ಟಾಪ್ನಿಂದ ದೃಷ್ಟಿ ತೆಗೆಯದೆ ಹೇಳಿದ, “ವನಿತಾ, ಇವತ್ತು ನಾನು ಇರೋ ಪೊಸಿಷನ್ನಿಂದಲೇ ಮನೇಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ನಿನಗೆ ಯಾವುದೇ ರೀತಿಯ ಕೊರತೆಯಿಲ್ಲ. ನೀನ್ಯಾಕೆ ಉದಾಸಳಾಗಿದ್ದೀಯ?”
“ನನಗೆ ನಿಮ್ಮ ಜೊತೆ ಹಾಗೂ ಕೊಂಚ ಸಮಯ ಬೇಕು.”
“ನಾನೆಲ್ಲಿ ಓಡಿಹೋಗ್ತೀನಿ? ಆಯ್ತು. ಈಗ ಅರ್ಜೆಂಟಾಗಿ ಒಂದು ಮೇಲ್ ಕಳಿಸ್ಬೇಕು. ಆಮೇಲೆ ಮಾತಾಡ್ತೀನಿ.”
ನಂತರ ಸತೀಶ್ ಯಾವಾಗ ಮಲಗೋಕೆ ಬಂದ, ವನಿತಾಳಿಗೆ ಯಾವಾಗ ನಿದ್ದೆ ಬಂತೂಂತ ತಿಳಿಯಲೇ ಇಲ್ಲ.
ವನಿತಾಳ ಅತ್ತೆ ಮಾವನಿಗೆ ಮಗ ಹಾಗೂ ಸೊಸೆಯ ನಡುವಿನ ಮೌನ ಅನುಭವಕ್ಕೆ ಬಂದಿತ್ತು. ಆ ವಯಸ್ಸಿನಲ್ಲಿಯೂ ಅತ್ತೆ ಮಾವನ ಬಳಿ ಮಾತುಗಳ ಭಂಡಾರವೇ ಇತ್ತು. ಅವರ ಆಧುನಿಕ ಮಗ ಮತ್ತು ಸೊಸೆ ನೀರಸವಾದ ಬದುಕು ಸಾಗಿಸುತ್ತಿದ್ದರು. ವನಿತಾ ಸತೀಶನ ಜೊತೆ ಸಮಯ ಕಳೆಯಲು ಅವನ ಹಿಂದೆ ಮುಂದೆ ಸುತ್ತುತ್ತಿದ್ದಳು. ಆದರೆ ಸತೀಶ್ ಸದಾ ವ್ಯಸ್ತನಾಗಿರುತ್ತಿದ್ದ. ಎಲ್ಲಿಯವರೆಗೆಂದರೆ ಊಟ ಮಾಡುವಾಗಲೂ ಯಾರೊಂದಿಗೋ ಫೋನ್ನಲ್ಲಿ ಮಾತನಾಡುತ್ತಿದ್ದ. ತಾನು ಏನು ತಿಂದೆನೆಂದೂ ಅವನಿಗೆ ತಿಳಿಯುತ್ತಿರಲಿಲ್ಲ. ವನಿತಾಳ ಬಾಡಿದ ಮುಖ ಅತ್ತೆಮಾವನಿಗೆ ಬೇಸರ ತರುತ್ತಿತ್ತು. ಮಕ್ಕಳು ತಮ್ಮ ಓದು, ಹೋಂವರ್ಕ್, ಟಿ.ವಿ.ಯಲ್ಲಿ ಮಗ್ನರಾಗಿರುತ್ತಿದ್ದರು. ಅವರ ಜೊತೆ ಮಾತುಕಥೆ, ಆಡಿಯೂ ವನಿತಾಳ ಮುಖದಲ್ಲಿ ಕಳೆ ಇರುತ್ತಿರಲಿಲ್ಲ.
ಒಂದು ದಿನ ಸತೀಶನ ತಂದೆ ಅವನನ್ನು ಕರೆದು ಹೇಳಿದರು, “ನೀನು ಕೆಲಸದಲ್ಲಿ ಬಿಜಿಯಾಗಿರೋದು ಒಳ್ಳೆ ವಿಷಯಾನೆ, ಆದರೆ ಹೆಂಡತೀಗೂ ಸಮಯ ಕೊಡದೇ ಇರೋದು ತಪ್ಪು.”
“ಏನಪ್ಪಾ ಹೇಳ್ತಿದ್ದೀರಿ? ನನಗೆ ಟೈಂ ಎಲ್ಲಿದೆ. ಎಷ್ಟು ಕೆಲಸ ಮಾಡಬೇಕು ಗೊತ್ತಾ?”
“ವನಿತಾ ಅಷ್ಟು ಓದಿದ್ರೂ ಎಲ್ಲೂ ಕೆಲಸಕ್ಕೆ ಹೋಗಲಿಲ್ಲ. ಮನೆಯನ್ನು ಸಂಭಾಳಿಸುತ್ತಿದ್ದಾಳೆ. ಹಗಲೂ ರಾತ್ರಿ ಎಲ್ಲರನ್ನೂ ನೋಡಿಕೊಳ್ತಾಳೆ. ಸ್ವಲ್ಪ ಅವಳನ್ನೂ ಗಮನಿಸೋದು ನಿನ್ನ ಕರ್ತವ್ಯ ಸತೀಶ್,” ಅಮ್ಮ ಹೇಳಿದರು.
“ಅಮ್ಮಾ, ಅವಳೇನಾದರೂ ನಿಮ್ಮ ಬಳಿ ಹೇಳಿಕೊಂಡ್ಲಾ? ನನ್ನ ಜವಾಬ್ದಾರಿಗಳನ್ನು ಅವಳು ಅರ್ಥ ಮಾಡಿಕೊಂಡ ಹಾಗಿಲ್ಲ.”
“ಅವಳು ಯಾವತ್ತೂ ನಿನ್ನ ಮೇಲೆ ದೂರು ಹೇಳುವುದಿಲ್ಲ. ಆದರೆ ನಮಗೆ ಅವಳ ಬೇಸರ ಕಾಣ್ತಿದೆ. ಸತೀಶ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ದೂರ ಅಂದ್ರೆ ಬರೀ 14 ಇಂಚು ಮಾತ್ರ. ಮೆದುಳಿನಿಂದ ಹೃದಯದವರೆಗೆ. ಅದನ್ನು ನಿರ್ಧರಿಸುವಷ್ಟರಲ್ಲಿ ಸಾಕಷ್ಟು ವಯಸ್ಸು ದಾಟಿರುತ್ತದೆ. ಒಮ್ಮೊಮ್ಮೆ ಈ ಅಂತರ ಮನುಷ್ಯನಿಂದ ಬಹಳಷ್ಟನ್ನು ಕಸಿದುಕೊಳ್ಳುತ್ತದೆ. ಅವನಿಗೆ ಅದರ ಬಗ್ಗೆ ತಿಳಿಯೋದೇ ಇಲ್ಲ,” ಅತ್ತೆ ಗಂಭೀರ ಸ್ವರದಲ್ಲಿ ಹೇಳಿದರು. ಸತೀಶ್ ಏನೂ ಉತ್ತರಿಸದೆ ಟೈಮ್ ನೋಡುತ್ತಾ ಹೊರಡಲನುವಾದ.
ತಂದೆ ಹೇಳಿದರು, “ನೀನು ಹೇಳಿದ್ದು ಇವನ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.”
ಅಮ್ಮ ಹೇಳಿದರು, “ಇವತ್ತು ವನಿತಾಳೊಂದಿಗೂ ಮಾತಾಡ್ತೀನಿ. ಈಗಲೇ ಅವಳನ್ನು ಕರೀತೀನಿ.”
ಅವರಿಬ್ಬರ ಧ್ವನಿ ಕೇಳಿ ವನಿತಾ ಅಲ್ಲಿಗೆ ಬಂದಳು. ಅತ್ತೆ ಪ್ರೀತಿಯಿಂದ, “ಬಾ ವನಿತಾ, ನೀನು ಈ ನಡುವೆ ಬಹಳ ಸೈಲೆಂಟ್ ಆಗಿದ್ದೀಯ. ಭಾವುಕಳಾಗಿದ್ರೆ ಕೆಲಸ ಆಗಲ್ಲ. ನಿನ್ನ ಉದಾಸೀನತೆಗೆ ಕಾರಣ ಅರ್ಥ ಮಾಡ್ಕೋತೀನಿ,” ಎಂದರು.
ಮಾವ ಕೂಡ ಅವರ ಸಂಭಾಷಣೆಯಲ್ಲಿ ಸೇರಿಕೊಂಡು, “ಸ್ಥಳ, ಸಮಯ ಮತ್ತು ಪಾತ್ರಕ್ಕೆ ತಕ್ಕಂತೆ ಮನುಷ್ಯ ತನ್ನನ್ನು ಅದರಲ್ಲಿ ಎರಕ ಹೊಯ್ದುಕೊಳ್ಳಬೇಕು. ನೀನೂ ಪ್ರಯತ್ನಿಸು. ಸುಖವಾಗಿರ್ತೀಯ,” ಎಂದರು.
ವನಿತಾ `ಹ್ಞೂಂ’ ಎಂದು ನಗುತ್ತಾ ತಲೆಯಾಡಿಸಿದಳು. ಅತ್ತೆ ಮಾವ ತನ್ನನ್ನು ಬಹಳ ಪ್ರೀತಿಸುತ್ತಾರೆಂದು ಅವಳಿಗೆ ತಿಳಿದಿತ್ತು.
ವನಿತಾ ಒಬ್ಬಳೇ ಕುಳಿತು ಯೋಚಿಸತೊಡಗಿದಳು, `ಅತ್ತೆ ಮಾವ ಸರಿಯಾಗೇ ಹೇಳಿದ್ದಾರೆ. ನಾನ್ಯಾಕೆ ಯಾವಾಗಲೂ ಅಳುಮುಖ ಮಾಡ್ಕೊಂಡು ಸತೀಶನೊಂದಿಗೆ ಸಮಯ ಕಳೆಯೋಕೆ ಅವನ ಹಿಂದೆ ಹಿಂದೆ ಅಲೆಯಬೇಕು? ದಿನ ನೆರೆಯವರಲ್ಲಿ ಆರೋಪವನ್ನು ಕೇಳಲು ಮನಸ್ಸಾಗುವುದಿಲ್ಲ. ಲೈಬ್ರರಿಯ ಮೆಂಬರ್ಶಿಪ್ ತಗೋತೀನಿ. ಪತ್ರಿಕೆಗಳನ್ನು ಓದ್ತೀನಿ. ಕಂಪ್ಯೂಟರ್ ಕಲಿತಿದ್ದೀನಿ. ಅದಕ್ಕಿಂತ ಹೆಚ್ಚಾಗಿ ನಮ್ಮವರೊಂದಿಗೆ ಮಾತು ಆಡುವುದು ಚೆನ್ನಾಗಿರುತ್ತದೆ.’
ಯಾಕೋ ಗೊತ್ತಿಲ್ಲ. ಇವತ್ತು ಇದ್ದಕ್ಕಿದ್ದಂತೆ ಅವಳಿಗೆ ಒಂದು ಹೆಸರು ನೆನಪಾಯಿತು. `ಆಕಾಶ್!’ ಎಲ್ಲಿದ್ದಾನೆ….? ಹೇಗಿರಬಹುದು?` ಅವಳು ಆ ಅಧ್ಯಾಯವನ್ನು ಮದುವೆಗೆ ಮುಂಚೆ ಮರೆತು ಗಂಡನ ಮನೆಗೆ ಬಂದಿದ್ದಳು. ಆದರೆ ಇಂದು ಅದೇ ಮುಗಿದ ಅಧ್ಯಾಯದ ಪುಟಗಳು ಮತ್ತೆ ತೆರೆದುಕೊಳ್ಳಲು ಅವಳ ಮುಂದೆ ಓಡಾಡಿದವು.
ಆಕಾಶ್ನನ್ನು ತನ್ನ ಮದುವೆಯ ನಂತರ ಮನಸ್ಸಿನಿಂದ ಸಂಪೂರ್ಣವಾಗಿ ದೂರ ಮಾಡಿದ್ದಳು. ಆಕಾಶ್ ಬೇರೆ ಜಾತಿಯವನಾಗಿದ್ದರಿಂದ ಇಬ್ಬರ ತಾಯಿತಂದೆಯರು ಅವರ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ತಾಯಿ, ತಂದೆಗೆ ತಿರುಗಿಬೀಳುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಇಬ್ಬರೂ ತಮ್ಮ ತಾಯಿ ತಂದೆಯರ ಇಚ್ಛೆಗೆ ತಲೆಬಾಗಿದ್ದರು. ಇಂದು ಬದುಕಿನ ಈ ಹಂತದಲ್ಲಿ ನೀರಸ ಜೀವನದ ಏಕಾಂಗಿತನದಿಂದ ಬೇಸತ್ತು ವನಿತಾ ಆಕಾಶ್ನನ್ನು ಹುಡುಕತೊಡಗಿದಳು.
ವನಿತಾ ಕಂಪ್ಯೂಟರ್ ಆನ್ ಮಾಡಿದಳು. ಅವಳ ಫೇಸ್ಬುಕ್ ಅಕೌಂಟ್ ಇತ್ತು. ಅವನೂ ಫೇಸ್ಬಕ್ನಲ್ಲಿರಬಹುದು, ಹುಡುಕೋಣ ಎಂದುಕೊಂಡಳು. ಹೆಸರು ಟೈಪ್ ಮಾಡಿದ ಕೂಡಲೇ ನೂರಾರು ಆಕಾಶ್ ಕಾಣಿಸತೊಡಗಿದರು. ಇದ್ದಕ್ಕಿದ್ದಂತೆ ಅವಳ ದೃಷ್ಟಿ ಒಂದು ಫೋಟೋ ಮೇಲೆ ಬಿತ್ತು. ಅವನೇ ಆಕಾಶ್! ಅವನ ಪ್ರೊಫೈಲ್ ಪರೀಕ್ಷಿಸಿದಾಗ ಅವನ ಊರು, ಓದಿದ ಕಾಲೇಜ್, ಜನ್ಮ ದಿನಾಂಕ ಅದೇ ಆಗಿತ್ತು. ಅವಳು ಕೂಡಲೇ ಮೆಸೇಜ್ ಕಳಿಸಿದಳು, “ವನಿತಾ ಜ್ಞಾಪಕ ಇದೆಯಾ?”
3 ದಿನಗಳ ನಂತರ ಉತ್ತರ ಬಂತು, “ಓಹೋ….. ಮರೆತಿದ್ರೆ ತಾನೇ?”
ಅದನ್ನು ಓದಿದ ಕೂಡಲೇ ವನಿತಾ ತನ್ನ ಮೊಬೈಲ್ ನಂಬರ್ ಕಳಿಸಿದಳು. ಸ್ವಲ್ಪ ಹೊತ್ತಿನ ನಂತರ ಅವನು ಆನ್ಲೈನ್ಗೆ ಬಂದ. ಕೆಲವೇ ಕ್ಷಣಗಳಲ್ಲಿ ತಮ್ಮ ಜೀವನ 15 ವರ್ಷಗಳು ಮುಂದೆ ಬಂದಿದೆ ಎಂದು ಇಬ್ಬರೂ ಮರೆತುಬಿಟ್ಟರು. ವನಿತಾಗೆ ಮಕ್ಕಳಿದ್ದರು. ಆಕಾಶ್ಗೂ ಒಬ್ಬ ಮಗನಿದ್ದ. ವನಿತಾ ಬೆಂಗಳೂರಿನಲ್ಲಿದ್ದರೆ ಆಕಾಶ್ ದಾವಣಗೆರೆಯಲ್ಲಿದ್ದ.
ಇಬ್ಬರೂ ಆಗಾಗ್ಗೆ ಚ್ಯಾಟ್ ಮಾಡತೊಡಗಿದರು. ಹಳೆಯ ವಿಷಯಗಳನ್ನೆಲ್ಲಾ ಕೆದಕುತ್ತಿದ್ದರು. ಅವರು ಎಷ್ಟು ಮಾತಾಡಿದರೂ ಮುಗಿಯುತ್ತಲೇ ಇರಲಿಲ್ಲ.
ಅತ್ತೆ ಮಾವ ಮನೆಯಲ್ಲಿ ಇರುತ್ತಿದ್ದರಿಂದ ಸೊಸೆಯಲ್ಲಿ ಬಂದ ಈ ಪರಿವರ್ತನೆ ಅವರಿಗೆ ಸ್ಪಷ್ಟವಾಗಿ ತಿಳಿಯಿತು. ವನಿತಾಳ ಸಪ್ಪೆ ಮುಖದಲ್ಲಿ ಈಗ ಸದಾ ಹೊಳಪು ಇರುತ್ತಿತ್ತು. ಅವಳು ನಗುನಗುತ್ತಾ ಬೇಗನೆ ತನ್ನ ಅಡುಗೆ ಮತ್ತು ಇತರ ಕೆಲಸಗಳನ್ನು ಮುಗಿಸಿ ತನ್ನ ಬೆಡ್ರೂಮಿನಲ್ಲಿದ್ದ ಕಂಪ್ಯೂಟರ್ ಮುಂದೆ ಕೂರುತ್ತಿದ್ದಳು. ಅವಳು ಹಲವು ಬಾರಿ ಆಕಾಶ್ನನ್ನು ಮನಸ್ಸಿನಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಳು. ಆದರೆ ಕಳೆದುಹೋದ ಕ್ಷಣಗಳು ಸಾಕಾರಗೊಂಡಾಗ ಅವನನ್ನು ಮರೆಯುವುದು ಅಸಾಧ್ಯವಾಗಿತ್ತು.
ಈಗ ಸತೀಶ್ ಲ್ಯಾಪ್ಟಾಪ್ನಲ್ಲಿ ಮಗ್ನನಾಗಿದ್ದರೆ ವನಿತಾ ತನ್ನ ಫೇಸ್ಬುಕ್ನಲ್ಲಿ ತಲ್ಲೀನಳಾಗಿ ಇರುತ್ತಿದ್ದಳು. 1-2 ಬಾರಿ ಸತೀಶ್ ಕೇಳಿದ, “ಏನು ಮಾಡುತ್ತಿದ್ದೀಯಾ?”
“ಚ್ಯಾಟ್ ಮಾಡ್ತಿದ್ದೀನಿ.”
“ಹೌದಾ! ಯಾರ ಜೊತೆ?”
“ಕಾಲೇಜ್ ಫ್ರೆಂಡ್ ಜೊತೆ.”
ಸತೀಶ್ಗೆ ಆಶ್ಚರ್ಯವಾಯಿತು. ಆದರೂ ಸುಮ್ಮನಿದ್ದ. ಆಕಾಶ್ ಹಾಗೂ ವನಿತಾ ನಡುವೆ ಹಳೆಯ ನೆನಪುಗಳು ತಾಜಾ ಆಗಿತ್ತು. ಇಬ್ಬರೂ ತಮ್ಮ ಮನೆಯವರ ಬಗ್ಗೆ ಹೇಳಿಕೊಳ್ಳತೊಡಗಿದರು. ಫೋನ್ನಲ್ಲಿ ಮೆಸೇಜ್ ಕಳಿಸುವುದು ಮಾಮೂಲಿಯಾಗಿತ್ತು.
ಒಂದು ದಿನ ಬೆಳಗ್ಗೆ ಸತೀಶ್ ತಿಂಡಿ ತಿನ್ನುವಾಗ ವನಿತಾಳ ಫೋನ್ಗೆ ಮೆಸೇಜ್ ಬಂದ ಸದ್ದು ಕೇಳಿ ಪ್ರಶ್ನಿಸಿದ, “ಬೆಳಗ್ಗೇನೇ ಯಾರ ಮೆಸೇಜ್ ಬಂತು?”
“ಫ್ರೆಂಡ್ದು,” ವನಿತಾ ಹೇಳಿದಳು.
“ಯಾವ ಫ್ರೆಂಡ್?”
“ನನ್ನ ಫ್ರೆಂಡ್ಸ್ ಬಗ್ಗೆ ಆಸಕ್ತಿ ವಹಿಸೋಕೆ ನಿಮಗೆ ಟೈಂ ಯಾವಾಗ ಸಿಕ್ತು?”
ವನಿತಾ ಮೆಸೇಜ್ ಓದುತ್ತಿದ್ದಳು. ಓದಿದ ನಂತರ ಅವಳ ಮುಖದಲ್ಲಿ ಮುಗುಳ್ನಗೆ ಅರಳಿತು. ಆಕಾಶ್ ಕಳಿಸಿದ್ದ, “ನಿನಗೆ ನೆನಪಿದೆಯಾ? ನನ್ನ ಹೋಂವರ್ಕ್ ಬುಕ್ನಲ್ಲಿ ನೀನು ಒಂದು ಚಿಕ್ಕ ಗಿಡದ ಚಿತ್ರ ಬರೆದಿದ್ದೆ. ಆ ಗಿಡದಲ್ಲಿ ಈಗ ಹೂ ಬಿಟ್ಟಿದೆ. ಬಂದು ನೋಡು.”
ವನಿತಾಳ ಮುಖದಲ್ಲಿನ ತುಂಟನಗೆಯನ್ನು ಎಲ್ಲರೂ ಗಮನಿಸಿದರು ಸತೀಶ್ನ ಮುಖದ ಬಣ್ಣ ಬದಲಾಯಿತು. ಅವನು ಮೌನವಾಗಿದ್ದ. ಅತ್ತೆ ಮಾವ ಕೂಡ ಏನೂ ಮಾತಾಡಲಿಲ್ಲ. ವನಿತಾಳ ಮಗ ಹೇಳಿದ, “ಅಮ್ಮಾ, ನೀವು ಈಗೀಗ ಫೋನ್ನಲ್ಲಿ ಬಹಳ ಬಿಜಿಯಾಗಿರ್ತೀರಿ. ನಿಮಗೂ ನಮ್ಮ ಹಾಗೆ ಬಹಳಷ್ಟು ಫ್ರೆಂಡ್ಸ್ ಇದ್ದಾರಾ?”
“ಈಗ ಚೆನ್ನಾಗಿದೆ ಅಮ್ಮ. ಒಂದ್ಸಾರಿ ಕಂಪ್ಯೂಟರ್, ಒಂದ್ಸಾರಿ ಫೋನ್ನಲ್ಲಿ. ಚೆನ್ನಾಗಿ ಟೈಮ್ ಪಾಸಾಗುತ್ತಲ್ವಾ?” ಮಗಳು ಕೇಳಿದಳು.
“ಇನ್ನೇನು ಮಾಡೋದು ಶ್ವೇತಾ? ಎಲ್ಲಾದರೂ ಒಂದು ಕಡೆ ಬಿಜಿಯಾಗಿ ಇರಲೇಬೇಕು. ಇಲ್ಲದಿದ್ದರೆ, ನಿಮಗೆಲ್ಲಾ ಡಿಸ್ಟರ್ಬ್ ಮಾಡುತ್ತಿರುತ್ತೇನೆ.”
ಸತೀಶ್ಗೆ ಅವಳ ಮಾತಿನಲ್ಲಿರುವ ವ್ಯಂಗ್ಯ ತಿಳಿಯಿತು. ಅತ್ತೆ, ಮಾವ ತಮ್ಮ ರೂಮಿನಲ್ಲಿ ಮನೆಯಲ್ಲಿನ ಗಂಭೀರ ಪರಿಸ್ಥಿತಿಯ ಬಗ್ಗೆ ಮಾತಾಡುತ್ತಿದ್ದರು. ಮಾವ ಹೇಳಿದರು, “ನನಗೆ ಅನ್ನಿಸುತ್ತೆ, ವನಿತಾ ಯಾರನ್ನಾದರೂ…”
ಗಂಡನ ಮಾತನ್ನು ಮಧ್ಯದಲ್ಲೇ ತಡೆದು ಅತ್ತೆ ಹೇಳಿದರು, “ನನಗೆ ವನಿತಾಳ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ. ಸತೀಶನಿಗೆ ಹೇಳಿ ಹೇಳಿ ನಮಗೆ ಸುಸ್ತಾಯಿತು. ವನಿತಾಗೆ, ನಿನ್ನ ಸಂಸಾರಕ್ಕೆ ಕೊಂಚ ಗಮನ ಕೊಡೂಂತ. ಅವನು ಕಿವೀಗೆ ಹಾಕ್ಕೊಳ್ಳಲೇ ಇಲ್ಲ. ಹೆಂಡತಿಯ ಬಗ್ಗೆ ಅವನ ಅಸಡ್ಡೆ ನೋಡೋಕಾಗಲ್ಲ. ಈಗ ವನಿತಾ ಅವಳ ಫ್ರೆಂಡ್ ಜೊತೆ ಮಾತಾಡ್ತಾಳೇಂದ್ರೆ ಮಾತಾಡ್ಲಿ ಬಿಡಿ. ಇವತ್ತು ನಾನು ಸತೀಶನ ಮುಖ ನೋಡಿದೆ. ಬಹಳ ಬೇಗನೆ ಅವನಿಗೆ ತನ್ನ ತಪ್ಪು ತಿಳಿಯುತ್ತೆ.”
“ನೀನು ಹೇಳಿದ್ದು ಸರಿ. ಸತೀಶ್ ತನ್ನ ಕೆಲಸಕ್ಕೇ ಮಹತ್ವ ಕೊಡ್ತಾನೆ. ಅದೂ ಮುಖ್ಯಾನೇ. ಆದರೆ ಅದರ ಜೊತೆಯಲ್ಲಿ ಗಂಡನ ಹೊಣೆಗಾರಿಕೆಯನ್ನೂ ಮರೀಬಾರದು.”
ನಂತರ ಸತೀಶನಿಗೆ ಕೆಲವು ದಿನಗಳಿಂದ ವನಿತಾ ತನ್ನ ಜೊತೆ ಸರಿಯಾಗಿ ಮಾತನಾಡದಿರೋದು ಅನುಭವಕ್ಕೆ ಬಂತು. ಅವಳು ಮಾತಾಡದೆ ಗಂಡನ ಕೆಲಸಗಳನ್ನು ಮಾಡುತ್ತಿದ್ದಳು. ಅವನು ಏನಾದರೂ ಕೇಳಿದರೆ ಅಷ್ಟಕ್ಕೆ ಮಾತ್ರ ಉತ್ತರ ಕೊಟ್ಟು ತನ್ನ ಲೋಕದಲ್ಲೇ ಮುಳುಗಿರುತ್ತಿದ್ದಳು. ಅವನು ಆಫೀಸಿಗೆ ಹೋದ ನಂತರ ಕಂಪ್ಯೂಟರ್ ಮುಂದೆಯೇ ಕೂರುತ್ತಿದ್ದಳೆಂದು ಅಪ್ಪ ಅಮ್ಮನಿಂದ ತಿಳಿಯಿತು. ಅವನಿರುವಾಗ ತನ್ನ ಫೋನ್ನಲ್ಲಿ ವ್ಯಸ್ತಳಾಗಿರುತ್ತಿದ್ದಳು. ವನಿತಾಳ ಫೋನ್ ಚೆಕ್ ಮಾಡಲು ಅವನಿಗೆ ಮನಸ್ಸಾಗುತ್ತಿತ್ತು. ಆದರೆ ಧೈರ್ಯವಿರಲಿಲ್ಲ. ಯಾರ ಫೋನನ್ನು ಯಾರೂ ಮುಟ್ಟುತ್ತಿರಲಿಲ್ಲ. ಅದು ಮನೆಯಲ್ಲಿನ ಒಂದು ನಿಯಮವಾಗಿತ್ತು.
ಒಂದು ದಿನ ರಾತ್ರಿ 9 ಗಂಟೆಯಾಗಿತ್ತು. ವನಿತಾ ಆಕಾಶ್ನೊಡನೆ ಚ್ಯಾಟ್ ಮಾಡಲು ಯೋಚಿಸಿ ಬೇಗನೆ ತನ್ನ ಕೆಲಸಗಳನ್ನು ಮುಗಿಸತೊಡಗಿದಳು. ವನಿತಾಳ ಗಮನವನ್ನು ಕಂಪ್ಯೂಟರ್ ಮತ್ತು ಫೋನ್ನಿಂದ ದೂರ ಮಾಡಲು ಸತೀಶ್ ತನ್ನ ಲ್ಯಾಪ್ಟಾಪ್ ನ್ನು ಬೇಗ ಆಫ್ ಮಾಡಿದ.
ವನಿತಾ ಆಶ್ಚರ್ಯದಿಂದ, “ಏನಾಯ್ತು?” ಎಂದಳು.
“ಕೆಲಸ ಮಾಡೋಕೆ ಮೂಡ್ ಇಲ್ಲ.”
“ಮತ್ತೆ ಏನ್ಮಾಡ್ತೀರಿ?”
ಸತೀಶ್ ಅವಳನ್ನು ಬಾಹುಗಳಲ್ಲಿ ಬಿಗಿದಪ್ಪಿದ. ತುಂಟ ನಗೆಯೊಂದಿಗೆ, “ಬಹಳ ಕೆಲಸ ಇದೆ ಮಾಡೋಕೆ,” ಎಂದು ಅವಳ ಮೇಲೆ ಪ್ರೀತಿಯ ಮಳೆಗರೆದ.
ವನಿತಾ ಚಕಿತಳಾಗಿ ಆ ಮಳೆಯಲ್ಲಿ ನೆಂದು ತೊಪ್ಪೆಯಾಗುತ್ತಿದ್ದಳು. ಅವಳ ತನು, ಮನ ಅರಳಿತು. ಮುಂದೆ ಹಲವಾರು ದಿನಗಳವರೆಗೆ ಸತೀಶ್ ಹೆಂಡತಿಗೆ ಸಾಕೆನ್ನಿಸುವಷ್ಟು ಪ್ರೀತಿ ನೀಡಿದ. ಅವಳನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋದ. ಆಫೀಸಿನಿಂದ ಹಲವು ಬಾರಿ ಫೋನ್ ಮಾಡಿ ವಿಚಾರಿಸುತ್ತಿದ್ದ, ರೇಗಿಸುತ್ತಿದ್ದ. ಅದನ್ನು ನೆನೆಸಿಕೊಂಡು ಒಬ್ಬಳೇ ಇದ್ದಾಗಲೂ ವನಿತಾ ನಗುತ್ತಿದ್ದಳು. ಗಂಡ ಹೆಂಡತಿಯರ ನಡುವೆ ರೇಗಿಸುವುದು, ಚುಡಾಯಿಸುವುದನ್ನು ವನಿತಾ ಬಹುತೇಕ ಮರೆತೇ ಬಿಟ್ಟಿದ್ದಳು. ಅವಳು ಸತೀಶನ ಹೊಸ ರೂಪ ನೋಡುತ್ತಿದ್ದಳು. ಈಗ ಅವಳಿಗೆ ಒಮ್ಮೆಯೂ ಆಕಾಶನ ನೆನಪಾಗಲಿಲ್ಲ. ಫೋನ್ನಲ್ಲಿ ಮೆಸೇಜ್ ಓದಲೂ ಆಸೆಯಾಗಲಿಲ್ಲ.
ಸತೀಶನಿಗೆ ತನ್ನ ತಪ್ಪು ಅರಿವಾಗಿತ್ತು. ಅವನು ಸುಧಾರಿಸಿದ್ದ.“ನಾನು ದೋಷಿ. ನಾನು ನಿನಗೆ ಅನ್ಯಾಯ ಮಾಡಿದೆ. ನಿನ್ನ ಮನಸ್ಸಿಗೆ ನೋವುಂಟು ಮಾಡಿದ ಅಪರಾಧಿ,” ಎಂದು ವನಿತಾಗೆ ಹೇಳಿದ.
ವನಿತಾ ಏನೂ ಹೇಳದೆ ಅವನ ಎದೆಗೊರಗಿದ್ದಳು. ಅವಳ ಎಲ್ಲ ಆಕ್ಷೇಪಣೆಗಳೂ ದೂರಾಗಿದ್ದವು. ಆಕಾಶ್ನೊಂದಿಗೆ ಸಂಪರ್ಕ ಇಟ್ಟುಕೊಂಡು ಅವಳಿಗೂ ಅಪರಾಧಿ ಮನೋಭಾವ ಕಾಡುತ್ತಿತ್ತು.
14 ಇಂಚಿನ ದೂರವನ್ನು ಸತೀಶ್ ತನ್ನ ಪ್ರೀತಿ ಹಾಗೂ ತಿಳಿವಳಿಕೆಯಿಂದ ಕೊನೆಗಾಣಿಸಿದ್ದ. ಈಗ ವನಿತಾಗೆ ಎಲ್ಲಾದರೂ ಅಲೆದಾಡುವ ಅಗತ್ಯ ಇರಲಿಲ್ಲ.
ಒಂದು ದಿನ ಇದ್ದಕ್ಕಿದ್ದಂತೆ ವನಿತಾ ತನ್ನ ಫೋನ್ನಿಂದ ಆಕಾಶ್ನ ನಂಬರ್ ಡಿಲೀಟ್ ಮಾಡಿ ಫೇಸ್ಬಕ್ನಿಂದ ಅನ್ಫ್ರೆಂಡ್ ಮಾಡಿಬಿಟ್ಟಳು.