ಕಥೆ - ರಮಣಿ ಶೇಖರ್
ನಾನು ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ಕಾರೊಂದು ನನ್ನ ಸನಿಹ ಬಂದು ನಿಂತಿತು. ದೀಪಕ್ ಕಾರಿನಿಂದ ಕೆಳಗಿಳಿದು ತಡವರಿಸುತ್ತಾ ಹೇಳಿದರು, ``ಅಂಜಲಿ, ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು.''
ನಾನು ಮುಖ ತಿರುಗಿಸಿಕೊಂಡು ಕಠೋರವಾಗಿ ಹೇಳಿದೆ, ``ನಿಮ್ಮ ಜೊತೆ ಮಾತಾಡೋದು ನನಗೇನೂ ಬೇಕಿಲ್ಲ.''
``ಅಂಜಲಿ ಹುಡುಗಾಟ ಆಡಬೇಡ. ಆಫೀಸಿಗೆ ಹೋಗ್ತಿದ್ದೀಯಾ? ಬಾ ನಿನ್ನನ್ನ ಅಲ್ಲಿಗೆ ಕರ್ಕೊಂಡು ಹೋಗ್ತೀನಿ.''
``ಥ್ಯಾಂಕ್ ಯು. ನಾನು ಬಸ್ಸಿನಲ್ಲೇ ಹೋಗ್ತೀನಿ.''
``ಅಂಜಲಿ, ವಿಕ್ಕಿ ಬಗ್ಗೆ ನಿನ್ನ ಜೊತೆ ಮಾತನಾಡಬೇಕು.''
``ವಿಕ್ಕಿಯಿಂದ ಈಗ ನಿಮಗೇನು ಆಗಬೇಕಾಗಿದೆ?'' ನಾನು ರೋಷದಿಂದ ಕಿರುಚಿದೆ.
``ಏನು ಮಾತಾಡ್ತೀ ಅಂಜಲಿ, ವಿಕ್ಕಿ ನನ್ನ ಮಗನೇ ಅಲ್ವೇ? ಅವನು ಅಮೆರಿಕಾಗೆ ಹೋಗಿ ಓದಬೇಕೂಂತ ಇದ್ದಾನೇಂತ ಕೇಳಿದೆ.''
``ಅದಕ್ಕೆ?'' ನಾನು ಹುಬ್ಬುಗಂಟಿಕ್ಕಿದೆ.
``ನಾನು. ಅವನಿಗೆ ನೆರವಾಗೋಣಾಂತ....''
``ಅವನು ನಿಮ್ಮಿಂದ ಯಾವ ನೆರವನ್ನೂ ಸ್ವೀಕರಿಸೋದಿಲ್ಲ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.''
``ಇರಬಹುದು. ಆದರೆ ನೀನಾದ್ರೂ ತೊಗೋಬಹುದು.''
``ಇಲ್ಲ. ನಾನು ವಿಕ್ಕಿಗೆ ತಿಳಿಸದೆ ನಿಮ್ಮಿಂದ ಒಂದು ಪೈಸೆ ಕೂಡಾ ತೆಗೆದುಕೊಳ್ಳಲ್ಲ.''
``ಅಯ್ಯೋ! ಅಂಜಲಿ, ನೀನ್ಯಾಕೆ ಅರ್ಥನೇ ಮಾಡಿಕೊಳ್ತಿಲ್ಲ? ಇದು ವಿಕ್ಕಿಯ ಭವಿಷ್ಯದ ಪ್ರಶ್ನೆ. ಅವನ ಬಗ್ಗೆ ನನ್ನ ಹೊಣೆಗಾರಿಕೆಯೂ ಇದ್ದೇ ಇದೆ.''
``ಈ ಬಗ್ಗೆ ನಾನು ನಿಮ್ಮಿಂದ ಏನನ್ನೂ ಕೇಳಬಯಸುವುದಿಲ್ಲ. ದಾರಿ ಬಿಡಿ, ನನ್ನ ಬಸ್ಸು ಬಂತು.''
ದೀಪಕ್ ಕಾರನ್ನೇರಿ ಕುಳಿತು ವೇಗವಾಗಿ ಹೊರಟುಹೋದರು. ನನ್ನ ಬಸ್‌ಅಪರೂಪಕ್ಕೆ ಸಾಕಷ್ಟು ಖಾಲಿ ಇತ್ತು. ನಾನು ಸೀಟಿಗೆ ಒರಗಿ ಕುಳಿತು ಬಿಕ್ಕಳಿಕೆಯನ್ನು ತಡೆಯುವ ಪ್ರಯತ್ನ ಮಾಡುತ್ತಾ ಕಣ್ಣು ಮುಚ್ಚಿದೆ. ದೀಪಕ್‌ರನ್ನು ಮೊದಲ ಬಾರಿಗೆ ಕಂಡ ನೆನಪುಗಳು ಮನಸ್ಸಿನ ಪರದೆಯ ಮೇಲೆ ಮೂಡಿಬಂದವು.
ನಮ್ಮ ಕಾಲೇಜಿನಲ್ಲಿ ಸಂಗೀತ ಸ್ಪರ್ಧೆ ಏರ್ಪಾಡಾಗಿತ್ತು. ಅದರಲ್ಲಿ ನಾನೂ ಭಾಗವಹಿಸಿದ್ದೆ. ನನ್ನ ಗೆಳತಿ ನೀನಾ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ``ಅಂಜಲಿ ಜಡ್ಜ್ ಆಗಿ ಬಂದಿರುವವರನ್ನು ನೋಡಿದ್ಯಾ? ಒಳ್ಳೆ ಸಿನಿಮಾ ಹೀರೋ ಹಾಗೆ ಕಾಣಿಸ್ತಾರೆ ಅಲ್ವೇನೇ?''
``ಯಾರೇ ಅವ್ರು….?'' ನಾನೂ ಕುತೂಹಲದಿಂದ ಪ್ರಶ್ನಿಸಿದೆ.
``ದೀಪಕ್ ಅಂತ, ಆಕಾಶವಾಣಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅಬ್ಬಾ! ಎಂಥ ಮಧುರ ಸಂಗೀತ ಕೊಡ್ತಾರೆ ಗೊತ್ತಾ? ಅವರ `ರಾಗಸುಧಾ' ಕಾರ್ಯಕ್ರಮ ನೀನು ಕೇಳಿಲ್ವಾ?''ಅಷ್ಟರಲ್ಲಿ ದೀಪಕ್ ಘೋಷಿಸಿದರು.
``ಪ್ರಥಮ ಬಹುಮಾನ ಕುಮಾರಿ ಅಂಜಲಿ ಅವರಿಗೆ ನೀಡಲಾಗಿದೆ.....'' ಬೆಳ್ಳಿಯ ಕಪ್ ಸ್ವೀಕರಿಸುವಾಗ ನನ್ನ ಕೈ ಬೆರಳುಗಳು ಅವರ ಹಸ್ತಕ್ಕೆ ತಗುಲಿ, ಶರೀರದ ರಕ್ತವೆಲ್ಲ ಮುಖಕ್ಕೆ ನುಗ್ಗಿಬಂದಂತಾಯಿತು.
ನಾನು ಮನೆಗೆ ಬಂದು ಅಮ್ಮನಿಗೆ ಹೇಳಿದೆ, ``ಅಮ್ಮಾ, ನಾನು ಮತ್ತೆ ಸಂಗೀತ ಕಲೀತೀನಿ.''
``ಎಲ್ಲ ನಾಲ್ಕು ನಾಲ್ಕು ದಿನ ಕಲೀತೀನಿ ಅಂತೀಯ. ಹೋಗ್ಲಿ ರುಕ್ಮಿಣಮ್ಮ ನಡೆಸುತ್ತಿರೋ ಸಂಗೀತ ಶಾಲೆಗೆ ಸೇರಿಕೊ.''
``ಬೇಡಮ್ಮ, ನಾನು ದೀಪಕ್ ಹತ್ರ ಸಂಗೀತ ಹೇಳಿಸ್ಕೋತೀನಿ.''
``ಯಾರೇ ಈ ದೀಪಕ್?''
``ನಿಮಗೆ ಗೊತ್ತಿಲ್ವಾ? ಅವರು ಬಹಳ ದೊಡ್ಡ ಸಂಗೀತ ವಿದ್ವಾನ್. ರೇಡಿಯೋದಲ್ಲಿ ಅವರ `ರಾಗಸುಧಾ' ಕಾರ್ಯಕ್ರಮ ಬರುತ್ತೆ, ನೀವು ಕೇಳಿಲ್ವಾ?''
ದೀಪಕ್ ನನಗೆ ಸಂಗೀತ ಹೇಳಿಕೊಡಲು ಮನೆಗೆ ಬರತೊಡಗಿದರು. ಅವರು ಯಾವಾಗಲೂ `ಕಾಮನಬಿಲ್ಲಿನ ಉಯ್ಯಾಲೆಯಲ್ಲಿ ತೂಗಾಡೋಣ,' ಎಂಬ ಹಾಡನ್ನು ಗುಣಿಗುಣಿಸುತ್ತಿದ್ದರು.