ಸುರೇಖಾ ಹೊಸ ಮೊಬೈಲ್‌ನಿಂದ ಅಮ್ಮನಿಗೆ ಫೋನ್ ಮಾಡುತ್ತಿದ್ದಂತೆ ಅತ್ತ ಕಡೆಯಿಂದ ಗಾಬರಿ ಮಿಶ್ರಿತ ಧ್ವನಿ ಕೇಳಿಸಿತು, ``ಹಲೋ, ಯಾರು....?''
``ಅವ್ವಾ... ನಾ ಸುರೇಖಾ.''
``ನಾ ನಾಕ್ ದಿನದಿಂದ ನಿನಗ ಮುಂಜಾನಿಂದ ಸಂಜಿತನಕ ಫೋನ್ ಮಾಡಾಕ್ ಹತ್ತೀನಿ, ಏನೂ ಉತ್ತರಾ ಇಲ್ಲ. ನೀ ನನಗ ಯಾಕ್ ಹೀಂಗ್ ತ್ರಾಸ್ ಕೊಡಾಕ್ ಹತ್ತಿದೀ?''
``ಅವ್ವಾ ನನ್ನ ಫೋನ್ ಕಳದಹೋತು. ಇತ್ತ ನಾ ಹೊಸಾ ಫೋನ್ ತಗೊಂಡು ನಿನಗ ಪೋನ್ ಮಾಡಾಕತ್ತೀನಿ,'' ಎಂದು ಹೇಳುತ್ತಾ ಆಕೆ ತನ್ನ ನಂಬರ್ ಕೊಡುತ್ತಾ ಹೇಳಿದಳು, ``ಅವ್ವಾ ನೀ ಸುಮ್ಮಸುಮ್ಮಕ ತೊಂದ್ರಿ ಮಾಡಿಕೋತಿ. ನಾ ಇಲ್ಲಿ ಆಶ್ರಮದಾಗ ಬ್ಹಾಳ ಖುಷಿಯಿಂದ ಇದೀನಿ. ಇಲ್ಲಿನ ವ್ಯವಸ್ಥಾನೂ ಬ್ಹಾಳ್ ಚಲೋ ಐತಿ. ನನಗೆ ಯಾವ ತೊಂದ್ರಿನೂ ಇಲ್ಲ.''
ಅವಳು ಅವ್ವನಿಗೆ ಧೈರ್ಯ ನೀಡಿದಳು. ಆದರೆ ಸ್ವಾಮಿ ಹೀರಾನಂದನ ಕುಟಿಲ ನಡತೆಯ ಬಗ್ಗೆ ಆಕೆಯ ಮನಸ್ಸು ಮೆದುಳಿನಲ್ಲಿ ಅಲ್ಲೋಲಕಲ್ಲೋಲ ನಡೆದಿತ್ತು. ಆದರೆ ಆಕೆ ಆ ಬಗ್ಗೆ ಅವ್ವನ ಮುಂದೆ ಪ್ರಸ್ತಾಪಿಸಲೇ ಇಲ್ಲ.
``ಅಂದ್ಹಂಗ ನವೀನ್ ಬ್ಹಾಳ ದುಃಖಿ ಆಗ್ಯಾನ. ಮೊದಲು ಅಂವ ನಿನ್ನ ಮಾತ ಕೇಳಿ ಹೆಂಗೊ ಸಹಿಸಿಕೋತಿದ್ದ. ಈಗ ಬ್ಹಾಳ ವ್ಯಥಿ ಪಡ್ತಾನ ಮತ್ತ ಸಪ್ಪಗಿರ್ತಾನ. ಹುಚ್ಚಿ, ಒಮ್ಮೊಮ್ಮೆ ಹರೇದಾಗ ಇಂಥ ತಪ್ಪ ನಡದ ನಡೀತಾ. ನವೀನ್ ನನ್ನ ಕಾಲ ಹಿಡಿದು ಮ್ಯಾಲಿಂದ ಮ್ಯಾಲ ತನ್ನ ತಪ್ಪಿನ ಬಗ್ಗೆ ಕ್ಷಮಾ ಕೂಡ ಕೇಳ್ಯಾನ. `ನಶೆದಾಗ ಅದರಲ್ಲೂ ಒಬ್ಬನ ಇದ್ದದ್ದರಿಂದ ಮೈಮ್ಯಾಲಿನ ಪ್ರಜ್ಞಾ ಕಳೆದುಕೊಂಡಿದ್ನಿ.' ಎಂದು ಅ ಎಷ್ಟೋ ಸಲ ನನ್ನ ಮುಂದೆ ಹೇಳ್ಯಾನ.''
``ಸಾಕ ಸಾಕ ಅವ್ವಾ. ಸಧ್ಯ ಅವನ ಯಾವ ಕ್ಷಮಾಪಣಿ ಅಥವಾ ಸ್ಪಷ್ಟೀಕರಣದ ಮಾತ ಕೇಳಾಕ ನಾವು ತಯಾರಿಲ್ಲ.''
``ಮಗಳ, ನನ್ನ ಮಾತ ಸ್ಪಲ್ಪ ಕೇಳು. ಅಂವ ನಿನ್ನ ಭೆಟ್ಟಿ ಮಾಡಾಕಂತ ನೀ ಇದ್ದ ಆಶ್ರಮಕ್ಕ ಹೋಗಿದ್ದ. ಆದ್ರ ನೀ ಸ್ವಾಮೀಜಿ ಹುಟ್ಟುಹಬ್ಬ ಆಚರಿಸಾಕಂತ ಗಿರಿಜಾಪುರಕ ಹೋಗೀದಿ ಅಂತ ಗೊತ್ತಾತು. ನಿನ್ನೆ ಅಂ ನನ್ನ ಹತ್ರ ಬಂದು ನಾ ಅಲ್ಲಿಗೇ ಹೊಂಟೀನಿ ಎಂದು ಹೇಳಿ ಹೊರಟೋದ. ಒಂದ್ಯಾಳೆ ನೀ ಅವನ್ನ ತಪ್ಪ ಕ್ಷಮಿಸದ ಇದ್ರ ತಾನೂ ಆಶ್ರಮದಾಗ ಇದ್ದುಬಿಡ್ತೀನಿ ಎಂದು ಬ್ಯಾರೆ ಹೇಳಿ ಹೋಗ್ಯಾನ.
``ನೋಡ ಸುರೇಖಾ, ನಿನ್ನ ಜೀವನದಾಗ ನಡಿದ ಈ ಘಟನಾದ ಬಗ್ಗೆ ನಾ ಮೂವರ್ನ ಬಿಟ್ಟ ಬ್ಯಾರೆ ಯಾರಿಗೂ ಗೊತ್ತಿಲ್ಲ. ನಿಮ್ಮ ಅಪ್ಪನಿಗೂ ಇದರ ಖಬರಿಲ್ಲ. ನೀ ಆಶ್ರಮಕ್ಕೆ ಯಾಕ್ ಹೋದಿ ಅಂತಾ ಕೇಳಿದಾಗ, ಸ್ವಾಮೀಜಿ ಬಗ್ಗೆ ನಿನಗ ಬ್ಹಾಳ ಶ್ರದ್ಧಾ ಐತಿ, ಸ್ವಲ್ಪ ದಿನ ಆಶ್ರಮದಾಗ ಇದ್ದು ಸೇವಾ ಮಾಡಿ ಬರ್ತಾಳು ಎಂದಷ್ಟೇ ನಾ ಹೇಳೀನಿ. ಒಂದ್ಯಾಳೆ ನವೀನ್ ಅಲ್ಲಿಗೆ ಖರೇನ್‌ಬಂದುಬಿಟ್ರ ನೀ ಹಠಕ್ಕ ಬಿದ್ದ ಅವನ ಜೊತಿ ವೈರತ್ವ ಕಟಕೋಬ್ಯಾಡ. ಒಳ್ಳೆ ಗೆಳೆಯನಾಂಗ ಆದ್ರೂ ಅವನ ಜೊತಿ ಇರು.''