ಕಥೆ ಭವಾನಿ ಶಂಕರ್

ಸಂಜೆ ಶುರುವಾದ ತುಂತುರು ಮಳೆ ಎಡೆಬಿಡದೇ ಸುರಿಯುತ್ತಲೇ ಇತ್ತು. ಆದರೂ ಮೀರಾ ಎಂದಿನಂತೆ ಅಲಂಕರಿಸಿಕೊಂಡು ಸಿದ್ಧಳಾದಳು. ಅಮ್ಮನಿಗೆ ಊಟ ತಿನ್ನಿಸಿ ಅವರನ್ನು ಕೋಣೆಯಲ್ಲಿ ಮಲಗಲು ಬಿಟ್ಟು ಅವಳು ಹೊರಬಂದಳು. ಅಡುಗೆಯ ಹಾಗೂ ಡ್ರೈವರ್‌ ಇಬ್ಬರಿಗೂ ರಜೆ ಕೊಟ್ಟಿದ್ದಳು. ಅವಳ ರಾತ್ರಿಯ ಊಟ, ಡ್ರಿಂಕ್ಸ್ ಯಾವುದಾದರೂ ಫೈವ್ ಸ್ಟಾರ್‌ ಹೋಟೆಲ್‌ನಲ್ಲಿಯೇ ಆಗಲಿತ್ತು.

ರಾತ್ರಿ ಎಷ್ಟು ಹೊತ್ತಾಗುತ್ತದೆ, ರಾತ್ರಿ ಮನೆಗೆ ವಾಪಸ್‌ ಬರುತ್ತೇನೋ ಇಲ್ಲವೋ ಎಂದು ಅವಳಿಗೆ ತಿಳಿಯುತ್ತಿರಲಿಲ್ಲ. ಆದ್ದರಿಂದ ಅವಳು ರಾತ್ರಿ ಹೊತ್ತು ಡ್ರೈವರ್‌ ಜೊತೆ ಹೋಗುತ್ತಿರಲಿಲ್ಲ. ಅವಳು ಹೊರಗೆ ಇಣುಕಿ ನೋಡಿದಳು. ಮಳೆ ಇನ್ನೂ ಹೆಚ್ಚಾಗಿತ್ತು. ಅವಳಿಗೆ ಬೇಸರವಾಯಿತು. ಕಾರನ್ನು ಡ್ರೈವ್ ಮಾಡುವುದು ಕಷ್ಟವಾಗಿತ್ತು. ಜೊತೆಗೆ ಈ ಹವಾಮಾನದಲ್ಲಿ ಹೋಟೆಲ್‌ಗಳಲ್ಲಿಯೂ 3-4 ಜನ ಮಾತ್ರ ಇರುತ್ತಾರೆ.

ಸಂಭಾವಿತ ಹುಡುಗರು ಅವಳಿಂದ ಕೊಂಚ ದೂರವೇ ಇರುತ್ತಿದ್ದರು. ಅವಳಿಗೆ ಅದರಿಂದ ಕೊಂಚ ಕೆಟ್ಟದೆನಿಸುತ್ತಿತ್ತು. ಆದರೆ ಯಾವುದಾದರೂ ವಿಷಯದ ಬಗ್ಗೆ ಹೆಚ್ಚಾಗಿ ಯೋಚಿಸುವುದು ಅಥವಾ ಪಶ್ಚಾತ್ತಾಪಪಡುವುದು ಅವಳ ಅಭ್ಯಾಸವಾಗಿರಲಿಲ್ಲ. ಆಗಿದ್ದಾಯ್ತು. ಅವಳಲ್ಲಿ ಹಣವಿತ್ತು, ಯೌವನ ಮತ್ತು ಸೌಂದರ್ಯ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಅವಳು ಬದುಕಿನ ಸಂಪೂರ್ಣ ಆನಂದವನ್ನು ಏಕೆ ಹೊಂದುವುದಿಲ್ಲ? ಒಂದುವೇಳೆ ಅಪ್ಪ ಬದುಕಿದ್ದರೆ ಅಥವಾ ಅಣ್ಣ, ತಂಗಿ ಇದ್ದಿದ್ದರೆ ತನಗೆ ನಿಯಂತ್ರಣ ಹಾಕಿಕೊಳ್ಳುತ್ತಿದ್ದಳೇನೋ? ಮೀರಾಳ ತಾಯಿ ಗಂಡ ಬಿಟ್ಟುಹೋಗಿದ್ದ ವ್ಯಾಪಾರ ವಹಿವಾಟುಗಳನ್ನು ಸಂಭಾಳಿಸುವುದು, ಸಾಮಾಜಿಕ ಕಾರ್ಯಕಲಾಪಗಳು, ಧಾರ್ಮಿಕ ಸಂಘಟನೆ ಇತ್ಯಾದಿಗಳಲ್ಲಿ ಸಕ್ರಿಯವಾಗಿದ್ದು ಈಗ 70 ವರ್ಷದ ವೃದ್ಧಾಪ್ಯದಿಂದಾಗಿ ಮಗಳಿಗಾಗಿ ಹೆಚ್ಚು ಸಮಯ ನೀಡಲಾಗಲಿಲ್ಲ. ಹೀಗಾಗಿ ಆಕೆ ಮಗಳ ಮೇಲೆ ಹಣದ ಸುರಿಮಳೆ ಸುರಿಸಿ ಧನ್ಯಳಾಗಲು ಬಯಸಿದ್ದರು. ಮೀರಾ ಈಗ ಇಡೀ ವ್ಯವಹಾರದ ಮಾಲೀಕಳಾಗಿದ್ದಳು. ವಹಿವಾಟು ನೋಡಿಕೊಳ್ಳಲು ಅವಳ ಬಳಿ ಸಿಬ್ಬಂದಿ ಇದ್ದರು. ಅವಳು ಕೆಲವು ಅಗತ್ಯ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಫೈಲುಗಳಿಗೆ ಸಹಿ ಹಾಕಬೇಕಿತ್ತು. ಬ್ಯಾಂಕಿನ ಖಾತೆಗಳಲ್ಲಿ ಅವಳ ವೈಯಕ್ತಿಕ ಸಂಪತ್ತು ವಾರ್ಷಿಕವಾಗಿ ಎಷ್ಟೋ ಕೋಟಿ ರೂ.ಗಳು, ಹೆಚ್ಚಾಗುತ್ತಿದ್ದವು. ಅವಳ ತಂದೆಗೆ ತಾನು ಅಕಾಲ ಮೃತ್ಯುವಿಗೀಡಾಗುತ್ತೇನೆಂದು ತಿಳಿದಿತ್ತೋ ಏನೋ, ಅವರು ಆರಂಭದಿಂದಲೇ ಹೆಂಡತಿ ಹಾಗೂ ಮಗಳಿಗೆ ತಮ್ಮ ಬೃಹತ್‌ವ್ಯಾಪಾರ ವಹಿವಾಟನ್ನು ಬಿಟ್ಟುಹೋಗಿದ್ದರು. ಅದನ್ನು ಮೀರಾಳ ಅಮ್ಮ ಸದೃಢವಾಗಿ ಬೆಳೆಸಿದ್ದರು. ಮಗಳಿಗೆ ಸ್ವಲ್ಪ ಸಮಸ್ಯೆ ಇರಲಿಲ್ಲ. ಈಗ 70 ವರ್ಷದ ವೃದ್ಧಾಪ್ಯದಲ್ಲಿ ತಾಯಿಗೂ ಮೀರಾ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾಳೆಂದು ತಿಳಿಯಿತು. ಮಗಳು ಮದುವೆಯಾಗಿ ತನ್ನ ಸಂಸಾರ ನಿರ್ವಹಿಸಲಿ ಎಂಬುದು ಆಕೆಯ ಬಯಕೆಯಾಗಿತ್ತು.

rista-abhi-1

ಮೀರಾ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದಳು ಹಾಗೂ ತನ್ನ ನಿಯಂತ್ರಣವಿಲ್ಲದ ಬದುಕಿನಿಂದ ಬೇಸತ್ತು ಮದುವೆಯಾಗಲು ಬಯಸುತ್ತಿದ್ದಳು. ಆದರೆ ಕಾಂತಿ ಕಳೆದುಕೊಂಡ ಮುಖ ಹಾಗೂ ಅವಳ ಹಿಂದಿನ ಬದುಕನ್ನು ತಿಳಿದ ಸಂಭಾವಿತ ಪುರುಷರು ಅವಳನ್ನು ಹೆಂಡತಿಯಾಗಿ ಮಾಡಿಕೊಳ್ಳಲು ಬಯಸುವುದಿಲ್ಲ. ಅವಳ ವಿಲಾಸಿ ಜೀವನದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದ್ದು ಯಾರು ತಾನೆ ಅವಳನ್ನು ಮದುವೆಯಾಗಲು ಮುಂದೆ ಬರುತ್ತಾರೆ?

ಬರೀ ಸಿಗರೇಟ್‌ ಹಾಗೂ ಡ್ರಿಂಕ್ಸ್ ಅಷ್ಟೇ ಅಲ್ಲ, ಅವಳಿಗೆ ಎಷ್ಟು ಪುರುಷರೊಂದಿಗೆ, ಯಾವ್ಯಾವ ರೀತಿ ಸಂಬಂಧಗಳು ಉಂಟಾಗುತ್ತವೋ ಹಾಗೂ ಮುರಿಯುತ್ತವೋ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಬರೀ ಹಣದಾಸೆಗಾಗಿ ಬರುವ ಪುರುಷರೊಂದಿಗೆ ಮದುವೆಯಾಗುವುದು ಎಷ್ಟೊಂದು ಆತ್ಮಘಾತುಕವಾಗಿರುತ್ತದೆ ಎಂದು ಅವಳು ಚೆನ್ನಾಗಿ ತಿಳಿದಿದ್ದಳು. ಆಸ್ತಿಗಾಗಿಯೇ ಅವಳ ಹಿಂದೆ ಮುಂದೆ ಸುತ್ತುವ ಜನರನ್ನು ಕಂಡರೆ ಅವಳಿಗೆ ಅಸಹ್ಯವಾಗುತ್ತಿತ್ತು.

ಮೀರಾ ತಾಯಿಯ ಇಚ್ಛೆ ಪೂರೈಸಲು ಬಯಸುತ್ತಿದ್ದಳು. ಆದರೆ ಅದು ಹೇಗೆ ಸಾಧ್ಯವಾಗುತ್ತದೆ ಎಂಬ ದ್ವಂಧ್ವವಿತ್ತು. ಇವತ್ತು ರಾತ್ರಿ ಈ ಮಳೆಯಲ್ಲಿ ಆಚೆ ಹೋಗುವುದೋ, ಬೇಡವೋ ಎಂದು ಯೋಚಿಸುತ್ತಿದ್ದಳು.

ಅಷ್ಟರಲ್ಲಿ ಮನೆಯಲ್ಲಿ ಅಳವಡಿಸಿದ್ದ ಇಂಟರ್‌ ಕಾಮ್ ಸದ್ದು ಮಾಡಿತು. ಮೋಹನ್‌ ಅನ್ನುವವರು ಭೇಟಿಯಾಗಲು ಬಯಸಿದ್ದಾರೆ ಎಂದು ವಾಚ್‌ಮನ್‌ ಹೇಳಿದ. ಮೀರಾಗೆ ನೆನಪಾಯಿತು. ಮೋಹನ್‌ ಕಾಲೇಜಿನಲ್ಲಿ ಅವಳಿಗಿಂತ 2 ವರ್ಷ ಸೀನಿಯರ್‌ ಆಗಿದ್ದ. ಅವನಿಗೆ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವಿತ್ತು.

ಹಾಗೆ ನೋಡಿದರೆ ಅವನು ಅಂಥ ದೊಡ್ಡ ನಟನೇನೂ ಅಲ್ಲ. ಆದರೆ ಅವನ ಉತ್ಸಾಹ ಕಂಡು ಕಾಲೇಜಿನ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಕೊಡುತ್ತಿದ್ದರು. ಮೀರಾಳಂತೂ ಹೆಚ್ಚಿನ ನಾಟಕಗಳಲ್ಲಿ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಳು. ರಂಗ ನಾಟಕಗಳಲ್ಲಿ ಎಲ್ಲ ಕಲಾವಿದರೂ ಒಟ್ಟಾಗಿಯೇ ಇರುತ್ತಾರೆ. ಮೀರಾ ಹಾಗೂ ಮೋಹನ್‌ರದು ಇದೇ ರೀತಿ ಹಳೆಯ ಪರಿಚಯವಿತ್ತು. ಆದರೆ ಕೆಲವು ತಿಂಗಳುಗಳಿಂದ ಅವರಿಬ್ಬರೂ ಭೇಟಿಯಾಗಿರಲಿಲ್ಲ. ಇಬ್ಬರಿಗೂ ಸಾಕಷ್ಟು ಅಂತರಗಳಿದ್ದವು. ಮೋಹನ್‌ ಒಂದು ಸಣ್ಣ ಹಳ್ಳಿಯ ಪುರೋಹಿತರ ಮಗನಾಗಿದ್ದ. ಅವನಿಗೆ ಒಬ್ಬ ಅಂಗವಿಕಲ ತಮ್ಮನಿದ್ದ. ಕೆಲವು ದಿನಗಳ ಹಿಂದೆ ಅಪ್ಪನಿಗೆ ಕಾಯಿಲೆಯಾಗಿ ತೀರಿಕೊಂಡರು. ವಿಧವೆ ತಾಯಿ ಇದ್ದಾರೆ. ಇತಿಹಾಸದಲ್ಲಿ ಎಂ.ಎ. ಮಾಡಿದ ನಂತರ ಅವನಿಗೆ ನಗರದಲ್ಲಿ ಸಣ್ಣ ನೌಕರಿಯೊಂದು ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಮೋಹನ್‌ ಮೀರಾಳಿಗೆ ಫೋನ್‌ ಮಾಡಿ ತನ್ನ ಕಷ್ಟ ಹೇಳಿಕೊಂಡಿದ್ದ. ಅವನ ತಮ್ಮನಿಗೆ ಮೊಣಕಾಲಿನಲ್ಲಿ ಒಂದು ಗಂಟು ಆಗಿದ್ದು ಕ್ಯಾನ್ಸರ್‌ಗೆ ತಿರುಗುವ ಸಂಭವವಿತ್ತು. ಅದನ್ನು ಕೂಡಲೇ ವೈದ್ಯರಲ್ಲಿ ತಿಳಿಸಿ ಕೂಡಲೇ ಆಪರೇಶನ್‌ ಮಾಡಿಸಿಕೊಳ್ಳಬೇಕೆಂದು ಸಲಹೆ ಪಡೆಯಲಾಗಿತ್ತು. ಆದರೆ ಅದಕ್ಕೆ ಕನಿಷ್ಠ 35,000 ರೂ. ಬೇಕಿತ್ತು.

ಮೋಹನ್‌ ಬಹಳ ಹಿಂಜರಿಕೆಯಿಂದ ತನ್ನಲ್ಲಿ ಅಷ್ಟು ಹಣ ಇಲ್ಲವೆಂದೂ, ತನಗೆ ಇಷ್ಟು ಹಣ ಕೊಡಲು ಮೀರಾ ಬಿಟ್ಟರೆ ಇನ್ನಾರೂ ಪರಿಚಯ ಇಲ್ಲವೆಂದು ಹೇಳಿದ. ಒಂದು ವೇಳೆ ಮೀರಾ ಅಷ್ಟು ಹಣವನ್ನು ಸಾಲಾಗಿ ಕೊಟ್ಟರೆ 2-3 ವರ್ಷಗಳಲ್ಲಿ ಅದನ್ನು ತೀರಿಸುತ್ತೇನೆಂದು ಹೇಳಿದ್ದ. ಮೀರಾ ಅವನನ್ನು ಮನೆಗೆ ಬಂದು ಕಾಣುವಂತೆ ಹೇಳಿದ್ದಳು.

ಮೋಹನ್‌ ಕೊಡೆ ತಂದಿದ್ದರೂ ಜೋರು ಮಳೆಯಲ್ಲಿ ಸಾಕಷ್ಟು ನೆಂದು ಹೋಗಿದ್ದ.

“ಓ, ಮೋಹನ್‌ ಬಾ. ಇಷ್ಟು ಜೋರಾದ ಮಳೆಯಲ್ಲಿ ಯಾಕೆ ಬರೋಕೆ ಹೋದೆ? ಬಾಥ್‌ ರೂಮಿಗೆ ಹೋಗಿ ಟವೆಲ್‌ನಲ್ಲಿ ಒರೆಸ್ಕೊ. ಬಿಸಿ ಬಿಸಿ ಕಾಫಿ ಕೊಡ್ತೀನಿ,” ಮೀರಾ ಹೇಳಿದಳು.

“ಬೇಡ ಬೇಡ. ನಾನು ಇಲ್ಲಿಗೆ ಬರಲೇಬೇಕಿತ್ತು. ನೀನು ಇರ್ತಿಯೋ ಇಲ್ವೋ ಅಂದ್ಕೊಂಡೆ. ನೀನು ಇರದಿದ್ರೆ ನಿಮ್ಮ ಅಮ್ಮನನ್ನು ಭೇಟಿಯಾಗಿ ಹೋಗೋಣಾಂತಿದ್ದೆ.”

ಕಾಲೇಜಿನಲ್ಲಿದ್ದಾಗ ಮೋಹನ್‌ ನಾಟಕಗಳ ಬಗ್ಗೆ ಮಾತಾಡಲು ಮೀರಾಳ ಅಮ್ಮನೊಂದಿಗೆ ಭೇಟಿಯಾಗಲು 3-4 ಬಾರಿ ಮನೆಗೆ ಬಂದಿದ್ದು ಮೀರಾಳಿಗೆ ನೆನಪಾಯಿತು.

“ಇವತ್ತು ಒಂದೇ ಸಮನೆ ಮಳೆ ಬರ್ತಿದೆ. ನಾನು ಹೊರಗೆ ಹೋಗಲ್ಲ. ಅಡುಗೆಯವನನ್ನು ಕರೆಸ್ತೀನಿ. ಇಬ್ಬರೂ ಇಲ್ಲೇ ಊಟ ಮಾಡೋಣ. ನಿನ್ನನ್ನು ಮನೆಗೆ ಬಿಡೋಕೆ ಡ್ರೈವರ್‌ನನ್ನೂ ಕರೆಸ್ತೀನಿ,” ಎಂದಳು. ಮೋಹನ್‌ ಬೇಡ ಎಂದರೂ ಕೇಳಿಸಿಕೊಳ್ಳದೆ ಮೀರಾ ಅಡುಗೆಯವನಿಗೆ ಹಾಗೂ ಡ್ರೈವರ್‌ಗೆ ಬರುವಂತೆ ಫೋನ್‌ ಮಾಡಿದಳು.

ನಂತರ, “ನೀನು ದುಡ್ಡು ಇಸ್ಕೋಳೋಕೆ ಇನ್ನೂ ಬೇಗನೆ ಬರ್ತೀಯಾ ಅಂದ್ಕೊಂಡಿದ್ದೆ,” ಎಂದಳು.

ಮೋಹನ್‌ ತಲೆ ತಗ್ಗಿಸಿ ಹೇಳಿದ, “ಹಾಗೆ ನೋಡಿದರೆ ನನಗೆ ನಿನ್ನ ಬಳಿ ಹಣ ಪಡೆಯುವುದು ಇಷ್ಟವಿರಲಿಲ್ಲ. ಅದಕ್ಕೇ ಮುಂದೂಡ್ತಾ ಇದ್ದೆ. ಆದರೆ ನೀನು ಕೊಡೋದಾದ್ರೆ ತೆಗೆದುಕೊಳ್ಳಲೇಬೇಕಾಗಿದೆ.”

“ಅರೆ, ಇವತ್ತೇ ಚೆಕ್‌ ತಗೊಂಡು ಹೋಗು. ನಿಧಾನವಾಗಿ ವಾಪಸ್‌ ಕೊಡು ಪರವಾಗಿಲ್ಲ. ನನಗೆ ಗೊತ್ತು. ನಿನಗೆ 5-6 ಸಾವಿರ ಮಾತ್ರ ಸಂಬಳ ಬರುತ್ತೇಂತ.”

“5 ಸಾವಿರ,” ಮೋಹನ್‌ ಹೇಳಿದ, “ಏಕೆಂದರೆ ಇತಿಹಾಸಕ್ಕೆ ಬೆಲೆ ಇಲ್ಲ. ಆದರೆ ನನಗೆ ಗಣಿತ ಎಂದೂ ಬರಲಿಲ್ಲ. ಹೀಗಾಗಿ ನಾನು ಸೈನ್ಸ್ ಹಾಗೂ ಕಾಮರ್ಸ್‌ ಓದಲಾಗಲಿಲ್ಲ.”

“ಅರೆ, ನಾನಂತೂ ಇತಿಹಾಸದಲ್ಲಿ ಪಾಸೂ ಆಗ್ಲಿಲ್ಲ,” ಮೀರಾ ನಗತೊಡಗಿದಳು, “ಮತ್ತೆ, ಈಗಲೂ ನಾಟಕಗಳಲ್ಲಿ ಮಾಡ್ತಿದ್ದೀಯಾ?”

“ಹೆಚ್ಚಿಲ್ಲ. ಅವಕಾಶ ಸಿಕ್ಕಿದ್ರೆ ಟ್ಯೂಶನ್‌ ಮಾಡ್ತೀನಿ. ಏಕೆಂದರೆ ಹಣ ಬಹಳ ಅಗತ್ಯ ಇದೆ. ತಮ್ಮನ ಚಿಕಿತ್ಸೆಗೆ ಬಹಳ ಹಣ ಖರ್ಚಾಗ್ತಿದೆ.”

ಪ್ರಪಂಚದಲ್ಲಿ ಇಂಥವರು ಬಹಳ ಜನ ಇದ್ದಾರೆ ಎಂದು ಮೀರಾ ಯೋಚಿಸಿದಳು. ಅವಳಿಗೆ ಮೋಹನನ ಬಗ್ಗೆ ಸಹಾನುಭೂತಿ ಇತ್ತು. ಅವನು ಬಹಳ ಸರಳ ಹಾಗೂ ವಿನಯಿಯಾಗಿದ್ದ. ಜಂಭ, ಅಹಂಕಾರ ಚೂರೂ ಇರಲಿಲ್ಲ. ತನ್ನ ಬಡತನದ ಬಗ್ಗೆ ಬೇಸರ ಇತ್ತು. ಆದರೆ ತನ್ನನ್ನು ಕೀಳು ಎಂದು ಭಾವಿಸುತ್ತಿರಲಿಲ್ಲ. ಅವನ ಈ ಗುಣಗಳಿಂದ ಕಾಲೇಜಿನಲ್ಲಿ ಎಲ್ಲರೂ ಅವನನ್ನು ಬಹಳ ಇಷ್ಟಪಡುತ್ತಿದ್ದರು.

“ಒಂದು ಮಾತು ಹೇಳ್ಲಾ ಮೋಹನ್‌, ನಿನ್ನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು. ನಿನಗೆ 35 ಸಾವಿರ ರೂ. ನಾನು ಕೊಡ್ತೀನಿ. ಅದನ್ನು ನೀನು ಹೇಗೋ ವಾಪಸ್‌ ಕೊಡ್ತೀಯ. ಆದರೆ ನಿನಗೆ ಹಣದ ಅಗತ್ಯ ಬೀಳ್ತಾನೇ ಇರುತ್ತೆ.”

“ಅದಂತೂ ನಿಜ. ಆದರೆ ನಾನು ಏನು ಮಾಡೋಕಾಗುತ್ತೆ?” ಮೋಹನ್‌ ಹೇಳಿದ.

ಮೀರಾ ಸ್ವಲ್ಪ ಯೋಚಿಸಿ ಹೇಳಿದಳು, “ನೀನ್ಯಾಕೆ ಮದುವೆ ಮಾಡ್ಕೋಬಾರ್ದು? ಎಂ.ಎ. ಮಾಡಿದ್ದೀಯ. ಯಾರಾದರೂ ಮಿಡ್ಲ್ ಕ್ಲಾಸ್‌ ಫ್ಯಾಮಿಲಿಯಿಂದ ಒಳ್ಳೆಯ ವರದಕ್ಷಿಣೆ ಸಿಗುತ್ತೆ. ಇಲ್ಲಾಂದ್ರೆ ಕೆಲಸದಲ್ಲಿರೋ ಹುಡುಗೀನ ಹುಡುಕು. ನಿನ್ನ ಪ್ರಾಬ್ಲಂ ಸಾಲ್ವ್ ಆಗುತ್ತೆ.”

ಮೋಹನ್‌ ನಕ್ಕ, “ಮೀರಾ, ನೀನು ವರದಕ್ಷಿಣೆ ಬಗ್ಗೆ ಮಾತಾಡ್ತಿದ್ದೀಯ. ನೀನು ವರದಕ್ಷಿಣೆ ವಿರೋಧಿ ಸಮಿತಿ ಅಧ್ಯಕ್ಷಳಾಗಿದ್ದೆ.”

“ಅದೆಲ್ಲಾ ಕಾಲೇಜ್‌ ಲೈಫ್‌ನಲ್ಲಿನ ಆಲೋಚನೆಗಳು. ಈಗ ನಾನು ನಿನ್ನ ಬಗ್ಗೆ ಮಾತಾಡ್ತಿದ್ದೀನಿ. ಅವರೇ ತಮ್ಮ ಮಗಳಿಗೆ ಏನಾದರೂ ಕೊಡೋಕೆ ಇಷ್ಟಪಟ್ಟರೆ ಅದರಲ್ಲಿ ತಪ್ಪೇನಿದೆ?”

ಮೋಹನ್‌ ಮತ್ತೆ ನಕ್ಕ, “ಬಿಡು ಮೀರಾ, ನನ್ನನ್ಯಾರು ಮದುವೆ ಆಗ್ತಾರೆ? ನನಗೆ ಬಹಳ ಸಮಸ್ಯೆಗಳಿವೆ. ಅದು ಸರಿ. ನಿನಗೇನು ಸಮಸ್ಯೆ ಇದೆ? ನೀನ್ಯಾಕೆ ಇನ್ನೂ ಮದುವೆ ಆಗಿಲ್ಲ?”

ಈಗ ಮೀರಾ ನಗತೊಡಗಿದಳು.“ಈಗ ನೀನು ಹೇಳಿದ್ದನ್ನೇ ನಾನೂ ಹೇಳ್ತೀನಿ. ನನ್ನನ್ನು ಯಾರು ಮದುವೆ ಆಗ್ತಾರೆ? ನೀನು ಆಗ್ತೀಯಾ?”

ಮೋಹನ್‌ ಮತ್ತೆ ನಕ್ಕ.“ನನ್ನ ವಿಷಯ ಬಿಡು. ನಾನು ನಿನಗೆ ಲಾಯಕ್‌ ಅಲ್ಲ,”

ಮೀರಾ ಸಪ್ಪಗೆ ನಗುತ್ತಾ, “ನಾನೂ ನಿನಗೆ ಲಾಯಕ್‌ ಅಲ್ಲ ಮೋಹನ್‌. ನಾನು ಯಾವುದೇ ಒಳ್ಳೆಯ, ಸಂಭಾವಿತ ಪುರುಷನ ಹೆಂಡತಿಯಾಗೋಕೆ ಅರ್ಹಳಲ್ಲ. ನನ್ನ ಬಲಹೀನತೆಗಳು, ನನ್ನ ಹಿಂದಿನ ಜೀವನ ಇದಕ್ಕೆ ಕಾರಣ. ಸಿಗರೇಟ್‌, ಮದ್ಯ, ದಿನಕ್ಕೊಂದು ಹೊಸ ವಿಲಾಸಿತನ ಈ ದುರಭ್ಯಾಸಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರೂ ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಈಗ ನೀನು ಹೇಳು. ಇವೆಲ್ಲಾ ಅಭ್ಯಾಸಗಳಿರೋ ಹೆಂಡ್ತೀನ ಸಹಿಸಿಕೊಳ್ತೀಯಾ?”

ಮೋಹನ್‌ ಮತ್ತೆ ನಗುತ್ತಾ, “ನಾನು ಹೇಳಲಿಲ್ವಾ ನನ್ನ ವಿಷಯ ಬಿಡು. ಕಾಲ ಹಾಗೂ ಪರಿಸ್ಥಿತಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಪ್ರಯತ್ನಪಡು,” ಎಂದ.

ಅಷ್ಟರಲ್ಲಿ ಊಟ ಬಂತು. ಇಬ್ಬರೂ ಊಟ ಮಾಡುತ್ತಾ ಹರಟುತ್ತಿದ್ದರು. ಮೀರಾಳ ಮನದಲ್ಲಿ ವಿಚಿತ್ರ ಗೊಂದಲಗಳು ಮೂಡುತ್ತಿದ್ದವು. ಅವಳು ಸದ್ದಿಲ್ಲದೆ ಮೋಹನ್‌ನನ್ನು 2-3 ಬಾರಿ ಗಮನವಿಟ್ಟು ನೋಡಿದಳು. ಅವನು ಬಹಳ ಸರಳ ವ್ಯಕ್ತಿತ್ವದವನಾಗಿದ್ದ. ಯಾವುದೇ ರೀತಿಯ ಪೊಳ್ಳುತನ ಅವನಲ್ಲಿರಲಿಲ್ಲ.

ಊಟದ ನಂತರ ಮೀರಾ 35 ಸಾವಿರ ರೂ.ಗಳ ಚೆಕ್‌ನ್ನು ಮೋಹನ್‌ಗೆ ಕೊಡುತ್ತಾ, “ಇದನ್ನು ತಗೋ ನಾನು ಹೇಳಿದ್ದು ಸ್ವಲ್ಪ ಯೋಚನೆ ಮಾಡು. ನಿನಗೆ ಯಾವುದಾದರೂ ಶಾಶ್ವತ ಪರಿಹಾರ ಸಿಗಬೇಕು,” ಎಂದಳು.

“ಅಂದರೆ?” ಮೋಹನ್‌ ಚೆಕ್‌ ಪಡೆಯುತ್ತಾ ಕೇಳಿದ.

ಮೀರಾ ಇದ್ದಕ್ಕಿದ್ದಂತೆ ಗಂಭೀರಳಾದಳು. ಅವಳಿಗೆ ಒಂದು ಆಲೋಚನೆ ಬಂದಿತ್ತು. ಅದನ್ನು ಮೋಹನ್‌ಗೆ ಹೇಳಲು ಬಯಸುತ್ತಿದ್ದಳು.

ಮೋಹನನ ಕಣ್ಣುಗಳಲ್ಲಿ ಕಣ್ಣಿಟ್ಟು ಮುಖವನ್ನು ಹತ್ತಿರ ಒಯ್ದು ಮೀರಾ ಕೇಳಿದಳು, “ನಿನ್ನ ಕಣ್ಣಿಗೆ ನಾನು ಹೇಗೆ ಕಾಣುತ್ತೇನೆ?”

“ನೀನು…. ನೀನು ಬಹಳ ಸುಂದರವಾಗಿದ್ದೀಯ….” ಅವನು ತೊದಲುತ್ತಾ ಹೇಳಿದ.

“ಆಮೇಲೆ?”

“ಆಮೇಲೆ…. ನೀನು ಬಹಳ ಒಳ್ಳೆಯವಳು… ನನಗಂತೂ ಯಾವಾಗಲೂ ಒಳ್ಳೆಯವಳಂತೆ ಕಾಣ್ತೀಯ.”

“ಮತ್ತೆ ನಾನು ಸಂಗಾತಿಗಳನ್ನು ಬದಲಿಸ್ತಾ ಇದ್ದಾಗ ನಿನಗೆ ಹೇಗನ್ನಿಸುತ್ತಿತ್ತು?”

“ಬೇಜಾರಾಗುತ್ತಿತ್ತು. ಆದರೆ ನಿನ್ನ ಮುಂದೆ ನನ್ನನ್ನು ಬಹಳ ತುಚ್ಛನೆಂದುಕೊಳ್ಳುತ್ತಿದ್ದೆ. ನಾವಿಬ್ಬರೂ ಭೇಟಿಯಾಗುತ್ತಿದ್ದದ್ದೂ ಕಡಿಮೆ.”

“ಹೌದು,” ಮೀರಾ ಗಂಭೀರಳಾಗಿ ಹೇಳಿದಳು, “ಒಂದುವೇಳೆ ಈಗ ನನ್ನ ನಿನ್ನ ಸಂಬಂಧ ಗಾಢವಾದರೆ…. ಅಂದರೆ ಸಂಬಂಧ ಬೆಳೆಸಿದ್ರೆ ನಿನಗೆ ನನ್ನ ಸ್ವಚ್ಛಂದ ವರ್ತನೆ ಏನನ್ನಿಸುತ್ತೆ?”

ಮೋಹನ ಎದ್ದು ನಿಂತ. ಅವನು ಮಂದಾಗಿ ನಗುತ್ತಾ, “ಮೀರಾ ನೀನು ನನ್ನ ಒಳ್ಳೆಯ ಫ್ರೆಂಡ್‌. ನಾನು ಮೊದಲಿನಿಂದಲೂ ನಿನ್ನನ್ನು ಇಷ್ಟಪಡುತ್ತಾ ಇದ್ದೀನಿ. ಆದರೆ ನೀನು ನನ್ನ ಪಾಲಿಗೆ ಚಂದ್ರನಂತೆ ಇದ್ದೀಯ. ನನ್ನ ಜೊತೆ ಆಟ ಆಡಬೇಡ. ಬೇಕಾದ್ರೆ ಈ ಚೆಕ್‌ ವಾಪಸ್‌ ತಗೊಂಡುಬಿಡು. ನಾನು ಬಡವ, ಅಸಹಾಯಕ. ಆದ್ರೆ……”

ಮೀರಾ ಮೋಹನ್‌ ಬಳಿ ಹೋಗಿ ಅವನ ತುಟಿಗಳ ಮೇಲೆ ಬೆರಳಿಟ್ಟು, “ನೀನೇನು ತುಚ್ಛನಲ್ಲ. ನಾನು ನಿನ್ನ ಜೊತೆ ಆಟಾನೂ ಆಡ್ತಿಲ್ಲ. ಬೇಕಾದ್ರೆ ಈ ಚೆಕ್‌ನ್ನು ಹರಿದು ಹಾಕು. ಏಕೆಂದರೆ ನೀನು ನನ್ನ ಪ್ರಸ್ತಾಪ ಒಪ್ಪಿಕೊಂಡರೆ ನೀನು ಇಂತಹ ಅನೇಕ ಚೆಕ್‌ಗಳನ್ನು ಕೊಡಬಹುದು,” ಎಂದಳು.

ಮೋಹನ್‌ ಗೊಂದಲಕ್ಕೊಳಗಾದ, “ಮೀರಾ, ಏನು ಹೇಳಬೇಕೂಂತಿದ್ದೀಯೋ ಸ್ಪಷ್ಟವಾಗಿ ಹೇಳು. ನನಗೆ ಒಗಟುಗಳು ಅರ್ಥ ಆಗಲ್ಲ.”

“ಏನಿಲ್ಲ. ನಾನು ನಿನ್ನ ಜೊತೆ ಮದುವೆಯಾಗೋ ಪ್ರಸ್ತಾಪ ಇಡ್ತಿದ್ದೀನಿ. ಬೇಕಾದ್ರೆ ಇದನ್ನು ವ್ಯಾಪಾರ ಅನ್ನು, ಒಪ್ಪಂದ ಅನ್ನು.  ನನಗೆ ಒಬ್ಬ ಸೌಮ್ಯ, ತಿಳಿವಳಿಕೆಯುಳ್ಳ, ಹೊಂದಿಕೊಂಡು ಹೋಗಬಲ್ಲ ಗಂಡ ಬೇಕು. ನಿನ್ನಲ್ಲಿ ಅವೆಲ್ಲ ಗುಣಗಳಿವೆ. ನೀನು ಓದಿದ್ದೀಯ, ತುಂಬಾ ಸಿಂಪಲ್, ಒಳ್ಳೆಯ ವ್ಯಕ್ತಿತ್ವ ಇದೆ, ಒಳ್ಳೆಯ ಮನೆತನ ಕೂಡ. ನಿನ್ನ ವೀಕ್‌ನೆಸ್‌ ಅಂದ್ರೆ ಬಡತನ, ಪರಿಸ್ಥಿತಿಗಳು.

“ಅದಕ್ಕೆ ನೀನು ಕಾರಣ ಅಲ್ಲ. ನಿನ್ನ ಬಡತನ ನಾನು ಅಳಿಸ್ತೀನಿ. ನಿನಗೆ ಹಾಗೂ ನಿನ್ನ ಮನೆಯವರಿಗೆ ಬರೀ ಸೌಕರ್ಯ ಅಷ್ಟೇ ಅಲ್ಲ. ಅಪಾರ ಸಂಪತ್ತು ಹಾಗೂ ಸುಖ ಜೀವನ ಕೊಡ್ತೀನಿ. ಏನು ಹೇಳ್ತೀಯಾ? ಒಂದು ವಿಷಯ ಸ್ಪಷ್ಟಪಡಿಸ್ತೀನಿ, ನಾನು ಬದಲಾಗೋಕೆ ಪ್ರಯತ್ನಪಡ್ತೀನಿ.

“ಆದರೆ ಪ್ರಾಮಿಸ್‌ ಮಾಡಕ್ಕಾಗಲ್ಲ. ಇನ್ನೊಂದು ವಿಷಯ, ನಮ್ಮ ಪತಿ ಪತ್ನಿಯರ ಸಂಬಂಧ ಕೇವಲ ಸಾಮಾಜಿಕವಾಗಿರುತ್ತದೆ. ಯಾವಾಗಲಾದರೂ ಖಾಸಗಿ ಹಾಗೂ ವೈಯಕ್ತಿಕ ಆಗಬಹುದು. ಅದನ್ನೂ ನಾನು ನಿನಗೆ ಭರವಸೆ ಕೊಡಕ್ಕಾಗಲ್ಲ. ಇಷ್ಟೆಲ್ಲಾ ಕೊರತೆಗಳಿದ್ದರೂ ನೀನು ಒಪ್ಕೋತೀಯಾ? ನೀನು ಯಾವಾಗ ಬೇಕಾದರೂ ಉತ್ತರಿಸಬಹುದು. ಒಂದು ವೇಳೆ ನಿನಗೆ ಒಪ್ಪಿಗೆ ಇಲ್ಲದಿದ್ದರೆ ನೇರವಾಗಿ ಹೇಳಿಬಿಡು. ಎಲ್ಲ ದೋಷ ನನ್ನಲ್ಲೇ ಇದೆ. ನನಗೆ ಚೆನ್ನಾಗಿ ಗೊತ್ತು.”

ಮೋಹನ್‌ ಮಾತಾಡಲಿಲ್ಲ. ಸ್ವಲ್ಪ ಹೊತ್ತು ಸುಮ್ಮನಿದ್ದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದ, “ಮೀರಾ, ನೀನು ಇಷ್ಟೆಲ್ಲಾ ಹೇಳಿದೆ. ಆದರೆ ನಾನು ಹೇಳೋದಿಷ್ಟೆ. ನಾನೆಂದೂ ನನ್ನನ್ನು ನಿನ್ನ ಶ್ರೇಣಿಯಲ್ಲಿ ಹೋಲಿಸಿಕೊಂಡಿಲ್ಲ.

“ನೀನು ಆಕಾಶದ ಚಂದ್ರನಂತೆ ಬಹಳ ಎತ್ತರದಲ್ಲಿದ್ದೀಯ. ಆದರೆ ಮನಸ್ಸಿನಲ್ಲೇ ಚಂದ್ರನನ್ನು ಹೊಗಳುವುದರಿಂದ ಅವನು ಯಾರಿಗೂ ವಶನಾಗುವುದಿಲ್ಲ. ನಾನು….. ನಿನ್ನ ಗಂಡ ಅಂದ್ರೆ ನನಗೆ ನಂಬೋಕಾಗ್ತಿಲ್ಲ?”

ಮೀರಾ ಮೋಹನನ ಬಳಿ ಬಂದು ತನ್ನ ಕೈಗಳಲ್ಲಿ ಅವನ ಕೈ ಹಿಡಿದುಕೊಂಡು ಹೇಳಿದಳು, “ನಡಿ, ನಮ್ಮ ಮದುವೆಗೆ ಪ್ಲ್ಯಾನ್ ಮಾಡಿಕೊಳ್ಳೋಣ.”

ಒಂದೇ ತಿಂಗಳಲ್ಲಿ ಮೀರಾ ಹಾಗೂ ಮೋಹನ್‌ ಆರ್ಯ ಸಮಾಜದಲ್ಲಿ ಮದುವೆಯಾದರು. ಮೀರಾಳ ತಾಯಿಗೆ ಮಗಳು ಮದುವೆಯಾಗಿದ್ದು ಬಹಳ ಖುಷಿಯಾಗಿತ್ತು. ಮದುವೆ ಬಹಳ ವೈಭವವಾಗಿ, ವಿಧಿವತ್ತಾಗಿ ನಡೆಯದಿದ್ದರೂ ಬೇಸರವಿರಲಿಲ್ಲ.

ಮೋಹನನ ಅಮ್ಮನಿಗೆ ಬಹಳ ವಯಸ್ಸಾಗಿತ್ತು. ತಮ್ಮ ಅಂಗವಿಕಲನಾಗಿದ್ದರಿಂದ ಅವರ್ಯಾರೂ ಮದುವೆಗೆ ಬಾರದಿದ್ದರೂ ಯಾರೂ ಏನೂ ಹೇಳಲಿಲ್ಲ. ಮೀರಾಳ ಸಾಮಾಜಿಕ ಹಾಗೂ ಉದ್ಯಮಕ್ಕೆ ಸಂಬಂಧಪಟ್ಟ ಬಹಳಷ್ಟು ಜನ ಕಿಕ್ಕಿರಿದು ತುಂಬಿದ್ದರು. ಮದುವೆಯ ನಂತರ ಯಾವುದೇ ಔಪಚಾರಿಕ ಶಾಸ್ತ್ರವಿಲ್ಲದೆ ಇಬ್ಬರೂ ಮೀರಾಳ ಬಂಗಲೆಗೆ ಹೋದರು. ಮೋಹನ್‌ಗೆ ಮೋದಲೇ ಒಂದು ಕೋಣೆಯನ್ನು ಸಿದ್ಧಪಡಿಸಲಾಗಿತ್ತು. ಹಳ್ಳಿಯಲ್ಲಿ ಅವನ ತಾಯಿ ಮತ್ತು ತಮ್ಮ ಜಯತೀರ್ಥನ ಸೌಕರ್ಯಗಳು ಮತ್ತು ಉಪಚಾರಗಳಲ್ಲಿ ಯಾವುದೇ ಕೊರತೆ ಇರದಂತೆ ಮೀರಾ ತಾನು ಹಳ್ಳಿಗೆ ಹೋಗದೇನೇ ವ್ಯವಸ್ಥೆ ಮಾಡಿದಳು. ನೋಹನ್‌ ಹಳ್ಳಿಯಲ್ಲಿ ಹಾಗೂ ತನ್ನ ಮನೆಯವರೊಡನೆ ತಮ್ಮ ಮದುವೆಯನ್ನು ಗುಟ್ಟಾಗಿಡುವುದೇ ಒಳ್ಳೆಯದು ಎಂದುಕೊಂಡಿದ್ದೇನೆ ಎಂದು ಮೀರಾಗೆ ಹೇಳಿದಾಗ ಅವಳು, “ಒಳ್ಳೇದಾಯ್ತು ಬಿಡು,” ಎಂದಳು.

ಸಮಯ ಕಳೆಯುತ್ತಿತ್ತು. ಮೀರಾ ಮೋಹನ್‌ನನ್ನು ಎಲ್ಲ ಕಡೆ ಕರೆದುಕೊಂಡು ಹೋಗುತ್ತಿದ್ದಳು. ಪತ್ನಿಯ ಕರ್ತವ್ಯವನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಳು. ಅವಳು ಮೋಹನ್‌ನನ್ನು ಒತ್ತಾಯಿಸಿ ಕ್ರೆಡಿಟ್‌ ಕಾರ್ಡ್‌ ಮಾಡಿಸಿದಳು. ಅದರಿಂದ ಹೋಟೆಲ್‌‌ಗಳು, ಅಂಗಡಿಗಳ ಬಿಲ್‌‌ನ್ನು ಕಟ್ಟುತ್ತಿದ್ದ. ಅವನನ್ನು ಅನೇಕ ಕ್ಲಬ್‌ಗಳಿಗೆ ಮೆಂಬರ್‌ ಮಾಡಿಸಿದಳು. ಕಾರು ಓಡಿಸುವುದನ್ನು ಕಲಿಸಿದಳು. ಒಟ್ಟಿನಲ್ಲಿ ಮೋಹನನ ಗೆಟಪ್‌ ಬದಲಾಯಿಸಿದಳು. ಆದರೆ ಆಶ್ಚರ್ಯವೆಂದರೆ ಮೋಹನನ ಸಹಜತೆ, ಸರಳತೆ ಮತ್ತು ಸಹೃದಯತೆಯಲ್ಲಿ ಚೂರೂ ಬದಲಾವಣೆ ಆಗಲಿಲ್ಲ. ವೈಯಕ್ತಿಕ ಸಂಬಂಧಗಳಲ್ಲಿಯೂ ಅವನು ಎಂದೂ ಗಂಡನಾಗಿ ತನ್ನ ಬೇಡಿಕೆಗಳ ಬಗ್ಗೆ ಮೀರಾಳಿಗೆ ಏನೂ ಹೇಳಲಿಲ್ಲ.

ಕೊನೆಗೆ ಮೀರಾಳೇ ಒಂದು ದಿನ ರೇಗಿದಳು, “ನಮ್ಮ ಮದುವೆ ಆಗಿ 3 ತಿಂಗಳಾಯಿತು. ನಾವಿನ್ನೂ ಹನಿಮೂನ್‌ಗೆ ಹೋಗಿಲ್ಲ.”

ನಂತರ ಇಬ್ಬರೂ ಹನಿಮೂನ್‌ಗೆ ಹೋದರು ಮತ್ತು ಪ್ರಾಕೃತಿಕ ನಿಯಮಗಳಂತೆ ಮೀರಾ ಗರ್ಭಿಣಿಯಾದಳು. ಮೀರಾಳ ತಾಯಿಗೆ ಮೊಮ್ಮಗಳು ಹುಟ್ಟಿದಾಗ ಬಹಳ ಸಂತೋಷವಾಗಿತ್ತು. ಆದರೆ ಅವರು ಹೆಚ್ಚು ದಿನ ಬದುಕಲಿಲ್ಲ. ನಂತರ ಮೀರಾ 3 ಆಳುಗಳನ್ನು ಇಟ್ಟುಕೊಂಡಳು. ಅವರು ಮಗುವನ್ನು ನೋಡಿಕೊಳ್ಳುತ್ತಿದ್ದರು. ಮೋಹನ್‌ ಮೀರಾಳ ಸಹಾಯದಿಂದ ಅಂಗವಿಕಲ ತಮ್ಮನ ಮದುವೆ ಮಾಡಿಸಿದ. 1 ವರ್ಷದ ನಂತರ ಅವನಿಗೂ ಒಂದು ಗಂಡು ಮಗು ಹುಟ್ಟಿತು. ಅದಕ್ಕೆ ರಾಜೀವ್ ಎಂದು ಹೆಸರಿಡಲಾಯಿತು. ಮೋಹನ್‌ ವಾರಕ್ಕೊಮ್ಮೆ ಅಥವಾ 15 ದಿನಗಳಲ್ಲಿ 2-3 ದಿನವಂತೂ ಹಳ್ಳಿಗೆ ಅಗತ್ಯವಾಗಿ ಹೋಗುತ್ತಿದ್ದ. ಅವನ ತಾಯಿಯೂ ತೀರಿಕೊಂಡರು. ಆದರೂ ಅವನು ತಮ್ಮನ ಬಳಿ ಪ್ರತಿಬಾರಿ ಹೋಗುತ್ತಿದ್ದ. ಮೋಹನನ ಮದುವೆಯ ಬಗ್ಗೆ ಅವನ ಹಳ್ಳಿಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಮೋಹನ್‌ ಹಾಗೂ ಮೀರಾ ಆ ವಿಷಯವನ್ನು ಗುಟ್ಟಾಗಿಡುವುದೇ ಒಳ್ಳೆಯದೆಂದುಕೊಂಡರು.

ಮೀರಾ ನಿಧಾನವಾಗಿ ಬದಲಾಗುತ್ತಿದ್ದಳು. ಹೆಂಡತಿ ಹಾಗೂ ತಾಯಿಯಾದ ನಂತರ ಅವಳಿಗೆ ತನ್ನ ಸ್ವಚ್ಛಂದ ಬದುಕಿಗಿಂತ ಬೇರೊಂದು ಉತ್ತಮ ಪಾತ್ರವಿದೆ ಅನ್ನಿಸಿತ್ತು. ಈಗ ಅವಳು ಯಾರಿಗೂ ಆಟದ ಬೊಂಬೆಯಾಗಿರಲಿಲ್ಲ. ಅವಳ ಗಂಡ ಬಹಳ ಹೊತ್ತು ಜೊತೆಯಲ್ಲಿ ಇರುತ್ತಿದ್ದ. ಮೋಹನನ ಸಹಜ ಹಾಗೂ ಗಂಭೀರ ವ್ಯಕ್ತಿತ್ವ ಹೇಗಿತ್ತೆಂದರೆ, ಹಿರಿಯರೂ ಸಹ ಅವನೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು.

ಮೀರಾಗೆ ಇದರಿಂದ ಬಹಳ ಖುಷಿಯಾಗುತ್ತಿತ್ತು. ಅವಳಿಗೆ ಒಮ್ಮೊಮ್ಮೆ ತಾನು ಮೋಹನನ ತಾಯಿಗೆ ಅವರ ಮಗನ ಮದುವೆಯ ಖುಷಿ ಕೊಡುವ ವಿಷಯದಿಂದ ವಂಚಿತರನ್ನಾಗಿ ಮಾಡಿದೆನೇನೋ ಎಂದು ಖೇದವಾಗುತ್ತಿತ್ತು. ಮೋಹನನ ತಾಯಿ ಸತ್ತಾಗಲೂ ಅವಳು ನೋಡಲು ಹೋಗಲಿಲ್ಲ. ಮೋಹನನ ಅಂಗವಿಕಲ ತಮ್ಮ ಹಾಗೂ ಅವನ ಕುಟುಂಬದವರಿಗೂ ಅವಳು ಅಪರಿಚಿತಳಾಗಿದ್ದಳು. ಆಗ ವಾಸ್ತವದಲ್ಲಿ ಅವಳಲ್ಲಿ ಮೋಹನನ ಬಗ್ಗೆ ಸ್ನೇಹ ಹಾಗೂ ಆದರದ ಭಾವನೆಗಳು ಜಾಗೃತವಾಗಿದ್ದವು.

ಜಯತೀರ್ಥನ ಹೆಂಡತಿ ಲಕ್ಷಿಯೂ ಕಾಯಿಲೆಯಿಂದ ನರಳುತ್ತಿದ್ದಳು. ತಮ್ಮನಿಗೆ ಸಹಾಯ ಮಾಡಲು ಮೋಹನ್‌ ಹೆಚ್ಚು ದಿನ ಹಳ್ಳಿಯಲ್ಲೇ ಇರುತ್ತಿದ್ದ. ಮೀರಾ ಈಗ ರಹಸ್ಯ ಬಿಚ್ಚಿಡುವ ಸಮಯ ಬಂದಿತೆಂದುಕೊಂಡಳು. ಅವಳು ಹಳ್ಳಿಗೆ ಹೋಗಿ ಜಯತೀರ್ಥ ಮತ್ತು ಅವನ ಮನೆಯವರನ್ನು ಭೇಟಿಯಾಗಬೇಕೆಂದುಕೊಂಡಳು. ಅವರೆಲ್ಲರನ್ನೂ ನಗರಕ್ಕೆ ಕರೆತರಲು ಬಯಸಿದ್ದಳು. ಆದರೆ ಮೋಹನನೇ ಏನೋ ನೆಪ ಹೇಳಿ ತಳ್ಳಿಹಾಕುತ್ತಿದ್ದ.

ಆ ದಿನಗಳಲ್ಲೇ ಒಮ್ಮೆ ಮೋಹನ 1 ವಾರದವರೆಗೆ ಹಳ್ಳಿಯಿಂದ ವಾಪಸ್‌ ಬರಲಿಲ್ಲ. ಅವನು ಮೀರಾಗೆ ಫೋನ್‌ ಮಾಡಿ ಲಕ್ಷ್ಮಿ ದೇಹಸ್ಥಿತಿ ತೀರಾ ಹದಗೆಟ್ಟಿದೆ. ಅವಳನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ನಾನು ಒಂದೆರಡು ದಿನಗಳಲ್ಲಿ ಮನೆಗೆ ಬರುತ್ತೇನೆ ಎಂದು ಹೇಳಿದ. ಆದರೆ 1 ವಾರವಾದರೂ ಮೋಹನ ಬರಲಿಲ್ಲ ಹಾಗೂ ಫೋನ್‌ ಮಾಡಲಿಲ್ಲ. ಮೋಹನ ಬೇಕೆಂದೇ ಹಳ್ಳಿಯ ಮನೆಗೆ ಫೋನ್‌ ಹಾಕಿಸಿರಲಿಲ್ಲ. ಈಗ ಮೀರಾಗೆ ಮೋಹನನಿಂದ ಇಷ್ಟು ದಿನ ದೂರವಿರುವುದು ಅಸಹನೀಯವಾಯಿತು. ಹೀಗಾಗಿ ಅವಳು ತಾನೇ ಹಳ್ಳಿಗೆ ಹೋಗಿ ಎಲ್ಲರಿಗೂ ಸರ್‌ಪ್ರೈಸ್‌ ಕೊಡಬೇಕು, ಎಲ್ಲ ರಹಸ್ಯಗಳನ್ನೂ ಹೇಳುವ ಸಮಯ ಬಂದಿದೆ ಎಂದುಕೊಂಡಳು.

ಮರುದಿನ ಬೆಳಗ್ಗೆ ಹಳ್ಳಿಗೆ ಹೊರಟಳು. ಅವಳು 3 ಗಂಟೆಯ ಪ್ರಯಾಣವನ್ನು ಎಲ್ಲಿಯೂ ನಿಲ್ಲಿಸದೆ 2 ಗಂಟೆಯಲ್ಲೇ ಮುಗಿಸಿದಳು. ಮೋಹನನ ಮನೆ ಹಳ್ಳಿಯ ಒಂದು ಗುಡಿಯ ಬಳಿ ಇತ್ತು. ಅದರಿಂದ ಹುಡುಕಲು ತೊಂದರೆ ಆಗಲಿಲ್ಲ. ಮೀರಾ ಗಾಡಿ ನಿಲ್ಲಿಸಿ ಮನೆಯೊಳಗೆ ಹೋದಳು. ಅಂಗಳದಲ್ಲಿ ಒಬ್ಬ ವ್ಯಕ್ತಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ. ಅವನೇ ಜಯತೀರ್ಥ ಇರಬೇಕೆಂದುಕೊಂಡಳು. ಆಗಲೇ ಮೀರಾಗೆ ಅಗರಬತ್ತಿಯ ಸುವಾಸನೆ ಬಂದಿತು. ಅಂತಹುದೇ ಸುವಾಸನೆ ತನ್ನ ತಾಯಿಯ ಸಾವಿನ ನಂತರ ಹಲವು ದಿನಗಳು ಮನೆಯಲ್ಲಿತ್ತು. ಅವಳು ಜಯತೀರ್ಥನನ್ನು ನೋಡಿದಾಗ ಅವನ ಕಣ್ಣು ತುಂಬಿ ಬಂತು.

“ಅವರ ಕಡೆ ಸಮಯ ಬಂತೂಂತ ಯಾರೂ ಯೋಚಿಸಿರಲಿಲ್ಲ,” ಅವನು ಹೇಳಿದ.

“ಅಂದರೆ….. ಲಕ್ಷ್ಮಿ…..?” ಮೀರಾ ಕೇಳಿದಳು.

ಜಯತೀರ್ಥ ಹೌದೆಂದು ತಲೆ ಆಡಿಸಿದ.

“ಯಾವಾಗ?”

“ನಿನ್ನೆ ರಾತ್ರಿ. ಅಣ್ಣ ಆಸ್ಪತ್ರೆ ಬಿಲ್ ‌ಕಟ್ಟೋಕೆ ಹೋಗಿದ್ದಾನೆ. ಮಗನನ್ನೂ ಜೊತೆಲೇ ಕರ್ಕೊಂಡು ಹೋಗಿದ್ದಾನೆ.”

ಮೀರಾ ಮನೆಯೊಳಗೆ ಹೋದಳು. ಒಂದು ಕೋಣೆಯಲ್ಲಿ ಲಕ್ಷ್ಮಿ ಫೋಟೋ ಇತ್ತು. ಅದಕ್ಕೆ ಹಾರ ಹಾಕಿ ಊದುಕಡ್ಡಿ ಅಂಟಿಸಲಾಗಿತ್ತು. ಮೀರಾ ಒಮ್ಮೆ ಮೋಹನನ ಪರ್ಸ್‌ನಲ್ಲಿ ಅವನ ಮನೆಯವರ ಫೋಟೋದಲ್ಲಿ ಲಕ್ಷ್ಮಿಯನ್ನು ನೋಡಿದ್ದಳು. ಆದ್ದರಿಂದ ಅವಳನ್ನು ಗುರುತಿಸಿದಳು. ಫೋಟೋದಲ್ಲಿ ಲಕ್ಷ್ಮಿ ಸುಂದರವಾಗಿದ್ದು ಕೊಂಚ ನಿಶ್ಶಕ್ತಿಯಿಂದ ಕೂಡಿದ್ದಳು. ಮೀರಾ ಲಕ್ಷ್ಮಿಯ ಫೋಟೋ ನೋಡುತ್ತಿದ್ದಾಗ ಹೊರಗಿನಿಂದ ಒಂದು ಮಗುವಿನ ಧ್ವನಿ ಕೇಳಿಸಿತು, “ಚಿಕ್ಕಪ್ಪಾ, ಚಿಕ್ಕಪ್ಪಾ, ನೋಡಿಲ್ಲಿ ಅಪ್ಪ ನನಗೆ ಏನು ಕೊಡಿಸಿದ್ರೂಂತ.”

ಮೀರಾ ಹೊರಗೆ ಬಂದು ನೋಡಿದಾಗ ಮೋಹನನ ಜೊತೆ ಇದ್ದ ಒಂದು ಚಿಕ್ಕ ಮಗು ಒಂದು ಪುಟ್ಟ ಹಡಗನ್ನು ಜಯತೀರ್ಥನಿಗೆ ತೋರಿಸುತ್ತಿತ್ತು. ಇದು ಜಯತೀರ್ಥನದಾದರೂ ಅವನನ್ನು ಚಿಕ್ಕಪ್ಪನೆಂದು ಕರೆಯುತ್ತಿದೆ, ಮೋಹನನನ್ನು ಅಪ್ಪ ಎಂದು ಕರೀತಿದೆ. ಇದರ ಅರ್ಥ, ಈ ಮಗು ಮೋಹನನದು. ಲಕ್ಷ್ಮಿ ಅವನ ಹೆಂಡತಿ. ಅವಳು ಒಮ್ಮೆ ಜಯತೀರ್ಥನನ್ನು ನೋಡಿ ಅವನು ಮದುವೆಯಾಗಲೂ ಸಾಧ್ಯವಿಲ್ಲ, ತಂದೆ ಯಾವಗಲೂ ಸಾಧ್ಯವಿಲ್ಲ ಎಂದು ತಿಳಿದುಕೊಂಡಳು.

“ಆಂಟಿ, ನೀವ್ ಯಾರು? ಎಲ್ಲಿಂದ ಬಂದ್ರಿ?” ಮಗು ಕೇಳುತ್ತಿತ್ತು.

ಜಯತೀರ್ಥ ಮಾತಾಡದೆ ಮಗುವಿನ ಕೈ ಹಿಡಿದು ವೀಲ್‌ಚೇರ್‌ ತಳ್ಳಿಕೊಂಡು ಆಚೆ ಹೋದ.

ಮೀರಾ ಮೋಹನನನ್ನು ನೋಡಿದಳು. ಇಷ್ಟು ದೊಡ್ಡ ಮೋಸ. ಮೋಹನ ಅವಳತ್ತ ದೃಷ್ಟಿ ಹಾಯಿಸದೆ ಹೇಳಿದ, “ಲಕ್ಷ್ಮಿ ನನ್ನ ಚಿಕ್ಕಂದಿನ ಗೆಳತಿ. ಇಬ್ಬರೂ ಜೊತೆ ಜೊತೆಗೇ ದೊಡ್ಡವರಾದೆವು. ನಂತರ ಯಾವಾಗ ಪ್ರೀತಿ ಶುರುವಾಯಿತು, ಯಾವಾಗ ಮತ್ತು ಹೇಗೆ ನಾವು ಒಂದಾದೆವೋ ತಿಳಿಯಲೇ ಇಲ್ಲ.

“ಆಮೇಲೆ ಅವಳಿಗೆ ಗರ್ಭ ನಿಂತಿತು ಎಂದು ತಿಳಿಯುವಷ್ಟರಲ್ಲಿ ತಡವಾಗಿ ಹೋಗಿತ್ತು. ನಾನು ಅವಳನ್ನು ಮದುವೆಯಾಗಲು ನಿರ್ಧರಿಸಿದ್ದೆ. ಏಕೆಂದರೆ ಹಳ್ಳಿಯಲ್ಲಿ ಅವಿವಾಹಿತ ತಾಯಿಗೆ ಮರ್ಯಾದೆ ಇರುವುದಿಲ್ಲ.

“ಆಗಲೇ ಅವಳ ಒಂದು ಸ್ತನದಲ್ಲಿ ಕ್ಯಾನ್ಸರ್‌ ಗಡ್ಡೆ ಇದ್ದು ಅದನ್ನು ತೆಗೆಸುವುದು ಬಹಳ ಅಗತ್ಯವಾಗಿತ್ತು. ಇಷ್ಟೇ ಅಲ್ಲ, ಮುಂದೆ ಅವಳ ಹಾಗೂ ಅವಳ ಗರ್ಭದ ರಕ್ಷಣೆಗಾಗಿ ಬಹಳಷ್ಟು ದುಬಾರಿ ಔಷಧಿಗಳನ್ನು ಕೊಡಿಸಬೇಕಿತ್ತು. ಇವೆಲ್ಲ ಚಿಕಿತ್ಸೆಗಳಿಗೆ ನನಗೆ ಹಣ ಬೇಕಾಗಿತ್ತು.

“ತಮ್ಮನಿಗೆ ಎಂದು ಸುಳ್ಳು ಹೇಳಿದೆ. ಆಗಲೇ ನೀನು ನಮ್ಮ ಮದುವೆ ಪ್ರಸ್ತಾಪ ಇಟ್ಟೆ. ನಾನು ಬೆಚ್ಚಿಬಿದ್ದೆ. ಆಗಲೇ ಒಂದು ಉಪಾಯ ಹೊಳೆಯಿತು. ನಾನು ಇಲ್ಲಿ ನಿನ್ನೊಂದಿಗೆ ಮದುವೆ ಆದೆ. ಅಲ್ಲಿ ಹಳ್ಳಿಯಲ್ಲಿ ಲಕ್ಷ್ಮಿಯನ್ನು ಮದುವೆ ಆದೆ. ನಿಮ್ಮಿಬ್ಬರ ದೃಷ್ಟಿಯಲ್ಲಿ ಹಾಗೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಆಗಿದ್ದೇನೆ. ಈಗ ನಿನಗೆ ಇಷ್ಟ ಬಂದ ಶಿಕ್ಷೆ ಕೊಡು.”

“ಆದರೆ ಜಯತೀರ್ಥನಿಗೆ ನಿಜ ಗೊತ್ತಿದೆ ಅನ್ನಿಸುತ್ತೆ,” ಮೀರಾ ಕೇಳಿದಳು.

“ಅವನಿಗೆ ಮತ್ತು ಲಕ್ಷ್ಮಿಗೆ ಎಲ್ಲ ಗೊತ್ತಿತ್ತು. ಏಕೆಂದರೆ ನಾನು ಅವರಿಂದ ಬಚ್ಚಿಡಲಾಗಲಿಲ್ಲ. ಅಮ್ಮನಿಗೆ ಮಾತ್ರ ಏನೂ ಹೇಳಿರಲಿಲ್ಲ.”

ಮೀರಾ ಸ್ತಬ್ಧಳಾದಳು. ಅವಳ ಕಣ್ಣುಗಳ ಮುಂದೆ ಲಕ್ಷ್ಮಿಯ ರೂಪ ಬಂದಿತು. ಅವಳೆಷ್ಟು ಸಹಿಸಿಕೊಂಡಿರಬೇಕು.“ಲಕ್ಷ್ಮಿ ಎಂದೂ ವಿರೋಧಿಸಿರಲಿಲ್ವಾ? ಅವಳಿಗೆ ಬಹಳ ದುಃಖ ಆಗಿರಬೇಕು.”

“ಅವಳು ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ನನ್ನ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ನಾನು ಅಸಹಾಯಕತೆಯಿಂದ ಹೀಗೆ ಮಾಡಿದೆನೆಂದು ಅವಳಿಗೆ ತಿಳಿದಿತ್ತು. ನಿನ್ನ ಹಾಗೆ ಅವಳಿಗೂ ನನ್ನಲ್ಲಿ ಸಹಾನುಭೂತಿ ಇತ್ತು. ಅವಳು ನಿನ್ನನ್ನು ಭೇಟಿಯಾಗಲು ಇಚ್ಛಿಸಿದಳು. ಆದರೆ ಅವಳಿಗೆ ಹಾಗೂ ನನಗೆ ನೀನು ಕೋಪಿಸಿಕೊಳ್ಳುತ್ತೀಯೆಂದು ಭಯವಿತ್ತು,” ಎಂದು ಹೇಳಿ ಮೋಹನ್ ಸುಮ್ಮನಾದ. ಮೀರಾ ನಿಧಾನವಾಗಿ ಹೆಜ್ಜೆ ಹಾಕುತ್ತಾ ಗಂಭೀರವಾಗಿ ಯೋಚಿಸತೊಡಗಿದಳು. ಅವಳ ಮುಂದೆ 2 ಆಯ್ಕೆ ಇತ್ತು. ಮೊದಲನೆಯದು ಈಗಲೇ ಮೋಹನ್‌ ಹಾಗೂ ಅವನ ಮನೆಯವರನ್ನು ಶಾಶ್ವತವಾಗಿ ತೊರೆದು ಹೋಗುವುದು. ಇನ್ನೊಂದು ಆಯ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು. ಮೊದಲ ಆಯ್ಕೆಯಲ್ಲಿ ಅವಳು ತನ್ನನ್ನು ಮಗಳು ಆಶಾಳೊಂದಿಗೆ ಆ ಬಂಗಲೆಯಲ್ಲಿ, ಬಿಸ್‌ನೆಸ್‌ ಮತ್ತು ಸಮಾಜದಲ್ಲಿ ಏಕಾಂಗಿಯಾಗಿರುವುದನ್ನು ಕಲ್ಪಿಸಿಕೊಂಡಳು. ಎರಡನೇ ಆಯ್ಕೆಯಲ್ಲಿ ಮೋಹನ್‌. ಆಶಾ, ರಾಜೀವ್ ‌ಮತ್ತು ಜಯತೀರ್ಥ ತನ್ನೊಂದಿಗಿರುವುದು ಮನೆ ಸಂತಸದಿಂದ ಕೂಡಿರುವುದನ್ನು ಕಲ್ಪಿಸಿಕೊಂಡಳು. ಅವಳು ಹಾಗೂ ಅವಳ ಅಮ್ಮ ಅಷ್ಟು ವರ್ಷ ಯಾರ ಜೊತೆಯೂ ಇಲ್ಲದೆ ಇದ್ದರು. ಅದೆಲ್ಲ ಈಗ ಮಾಯವಾಗಿದೆ. ಮೀರಾ ಮನಸ್ಸನ್ನು ಗಟ್ಟಿ ಮಾಡಿಕೊಂಡಳು. ಈಗ ಅವಳ ನಿರ್ಧಾರ ಸಂಧಾನವಲ್ಲ, ತಿಳಿವಳಿಕೆಯಾಗಿತ್ತು.

ಅವಳು ಬಾಗಿಲತ್ತ ನೋಡಿ, “ರಾಜೀವ್‌, ರಾಜೀವ್‌…. ಬಾ ಇಲ್ಲಿ,” ಎಂದು ಕೂಗಿದಳು.

ರಾಜೀವ್ ಕುಣಿಯುತ್ತಾ, ಎಗರುತ್ತಾ ಒಳಗೆ ಬಂದ. ಮೀರಾ ಅವನನ್ನು ಎತ್ತಿಕೊಂಡಳು. ಹಿಂದೆಯೇ ಜಯತೀರ್ಥನೂ ವೀಲ್ ‌ಚೇರ್‌ನಡೆಸಿಕೊಂಡು ಒಳಗೆ ಬಂದ.

“ನೀವು ಯಾರು? ಆ ಕಾರು ನಿಮ್ಮದೇನಾ?” ರಾಜೀವ್ ಕೇಳಿದ.

ಮೀರಾ ಅವನನ್ನು ಮುದ್ದಿಸುತ್ತಾ, “ಹೌದು, ಆ ಕಾರು ನನ್ನದು. ಅದರಲ್ಲಿ ಓಡಾಡೋಣ್ವಾ?” ರಾಜೀವ್ ಚಪ್ಪಾಳೆ ತಟ್ಟಿ ಆಗಲಿ ಎಂದು ಉತ್ತರಿಸಿದ.

“ನಾನು ನಿನ್ನ ಚಿಕ್ಕಮ್ಮ. ನಿನ್ನನ್ನು ನಗರಕ್ಕೆ ಕರೆದುಕೊಂಡು ಹೋಗಲು ಬಂದಿದ್ದೀನಿ ಬರ್ತೀಯಾ?”

“ನಗರ…. ಅಂದ್ರೆ ಅಪ್ಪ ಇರ್ತಾರಲ್ಲ?”

“ಹೌದು ಅಲ್ಲಿಗೆ.”

“ಮತ್ತೆ ನಮ್ಮಮ್ಮ ಎಲ್ಲಿ?”

“ನಿಮ್ಮ ಅಮ್ಮ ಎಲ್ಲಿಗೋ ಹೋಗಿದ್ದಾರೆ. ನಿನ್ನನ್ನು ನಗರಕ್ಕೆ ಕರೆದುಕೊಂಡು ಹೋಗೋಕೆ ನನ್ನನ್ನು ಕಳಿಸಿದ್ದಾರೆ. ಅಲ್ಲಿ ಬಹಳಷ್ಟು ಆಟದ ಸಾಮಾನುಗಳಿವೆ. ನಿನಗೊಬ್ಬಳು ತಂಗಿ ಇದ್ದಾಳೆ. ಅವಳೂ ನಿನ್ನ ಜೊತೆ ಆಡುತ್ತಾಳೆ. ಬರ್ತೀಯಾ?”

“ಅಪ್ಪ, ಚಿಕ್ಕಪ್ಪ ಬರ್ತಾರಾ?”

“ಎಲ್ಲರೂ ಬರ್ತಾರೆ,” ಮೀರಾ ರಾಜೀವನನ್ನು ಕೆಳಗೆ ಇಳಿಸಿ ಜಯತೀರ್ಥನಿಗೆ ಹೇಳಿದಳು, “ಜಯತೀರ್ಥ, ಬಹಳ ಅಗತ್ಯವಾಗಿರೋ ವಸ್ತುಗಳನ್ನು ಈಗ ತಗೋ. ಮಿಕ್ಕಿದ್ದನ್ನು ಕೆಲಸದವರು ಬಂದು ತರ್ತಾರೆ. ನಾವು ಈಗಲೇ ಸಿಟಿಗೆ ಹೋಗೋಣ.”

“ಅತ್ತಿಗೆ….” ಜಯತೀರ್ಥನ ಕಂಠ ತುಂಬಿಬಂದಿತ್ತು.

ಮೀರಾ ಅವನ ತಲೆ ಸವರಿ, “ಇನ್ನು ಮೇಲೆ ಸಿಟಿಯಲ್ಲಿ ನಮ್ಮ ಮನೇಲೇ ಇರಬೇಕು.”

ಮೋಹನ ಅವಳನ್ನು ನೋಡುತ್ತಾ ನಿಂತುಬಿಟ್ಟಿದ್ದ. ಏನೂ ಮಾತಾಡಲಿಲ್ಲ. ಅವನ ಕಣ್ಣುಗಳು ಒದ್ದೆಯಾಗಿದ್ದವು.

“ಮತ್ತೆ ನೀನು,” ಮೀರಾ ಮೋಹನನನ್ನು ವಾರೆಗಣ್ಣಿನಿಂದ ನೋಡಿ ಹೇಳಿದಳು, “ನಿನ್ನ ಜೊತೆ ಸ್ವಲ್ಪ ಬಿಡುವಾಗಿ ಮಾತಾಡಬೇಕು,” ಅವಳ ಸ್ವರದಲ್ಲಿ ಹುಸಿ ಆಕ್ರೋಶವಿತ್ತು. ಆದರೆ ತುಟಿಗಳ ಮೇಲೆ ಮಂದಹಾಸವಿತ್ತು. ಅವಳು ನಿಧಾನವಾಗಿ ಮೋಹನ ಹಾಗೂ ರಾಜೀವರ ಕೈಗಳನ್ನು ಒತ್ತಿದಳು ಮತ್ತು ಜಯತೀರ್ಥನೊಂದಿಗೆ ಆಚೆ ಹೊರಟಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ