ಅನಾರೋಗ್ಯದ ಆಸ್ಪತ್ರೆಗೆ ಹೋಗಿದ್ದ ಕಾವೇರಿಗೆ ತಪ್ಪು ರಿಪೋರ್ಟ್ ಕೈಗೆ ಬಂದು ಅವಳ ಜೀವನವೇ ಅಲ್ಲೋಲ ಕಲ್ಲೋಲವಾಗಿ ಹೋಯಿತು. ಅತ್ತೆ ಮನೆಯಲ್ಲಿ ಪ್ರೀತಿ ಹಾಗೂ ಆತ್ಮೀಯತೆಗಾಗಿ ಕಾತರಿಸುತ್ತಿದ್ದ ಕಾವೇರಿಗೆ ಒಂದು ದಿನ.........
``ಇದೇ ಮನೆ ಮುಂದೆ ನಿಲ್ಲಿಸಪ್ಪ.''
ಕಾವೇರಿಯ ಸೂಚನೆಯ ಮೇರೆಗೆ ಡ್ರೈವರ್ ಕ್ಯಾಬ್ ನಿಲ್ಲಿಸಿದ. ಕ್ಯಾಬಿನಿಂದ ಇಳಿಯುತ್ತಿದ್ದಂತೆ ಕಾವೇರಿ ಬ್ಯಾಗ್‌ನ್ನು ಹೆಗಲಿಗೇರಿಸಿ ಭಾರವಾದ ಹೆಜ್ಜೆಗಳನ್ನಿಡುತ್ತಾ ಗೇಟ್ ತೆರೆದು ಬಾಗಿಲ ಮುಂದೆ ನಿಂತಳು. `ಕೆಲವು ದಿನ ಅಪ್ಪನ ಜೊತೆ ಕಳೆದು, ನೋವನ್ನೆಲ್ಲ ಮರೆತು, ಹೊಸ ಉತ್ಸಾಹದೊಂದಿಗೆ ವಾಪಸ್ ಹೋಗ್ತೀನಿ,' ಎಂದು ಯೋಚಿಸುತ್ತಾ, ಮುಖದಲ್ಲಿ ಕೃತಕ ನಗು ತಂದುಕೊಂಡು ಡೋರ್ ಬೆಲ್ ಒತ್ತಿದಳು.
``ಅರೇ ಕಾವೇರಿ, ಬಾ....ಬಾ,'' ಆಕಸ್ಮಿಕವಾಗಿ ಮಗಳು ಬಂದಿರುವುದನ್ನು ಕಂಡು ಸುಭಾಷ್‌ರ ಮುಖ ಅರಳಿತು.
``ಅಪ್ಪಾ, ನನ್ನ ಈ ಸರ್‌ಪ್ರೈಸ್ ಹೇಗನಿಸಿತು?'' ಎಂದು ಕೇಳುತ್ತಾ ಕೃತಕ ನಗು ಜೋರಾದ ನಗುವಿನಲ್ಲಿ ಪರಿವರ್ತನೆಗೊಂಡಿತು. ಕೋಣೆಯಲ್ಲಿ ಕಾಲಿಟ್ಟು ಸೋಫಾಗೆ ಬೆನ್ನು ಆನಿಸಿ ಅವಳು ನಿರಾಳವಾಗಿ ಕುಳಿತಳು.
``ನಿನಗೆ ಬಹಳ ದಣಿವಾಗಿರಬೇಕು. ಈಗಲೇ ಶುಂಠಿ ಚಹಾ ಮಾಡಿಕೊಂಡು ಬರ್ತೀನಿ,'' ಎಂದು ಹೇಳುತ್ತಾ ಸುಭಾಷ್ ಅಡುಗೆ ಮನೆ ಕಡೆ ಹೋದರು.
``ಅಪ್ಪಾ, ನೀವೇಕೆ ಅಡುಗೆ ಮನೆಗೆ ಹೋಗ್ತಿದ್ದೀರಿ, ನಿರ್ಮಲಾ ಆಂಟಿ ಇವತ್ತು ಕೆಲಸಕ್ಕೆ ಬಂದಿಲ್ಲವೇ.....?''
``ಕಾವೇರಿ, ನಾನು ತುರ್ತು ಕೆಲಸದ ನಿಮಿತ್ತ ಮುಂಬೈಗೆ ಹೋಗಬೇಕಿದೆ. ಹಾಗಾಗಿ ನಿರ್ಮಲಾ ಇವತ್ತು ಬೇಗನೇ ಕೆಲಸ ಮುಗಿಸಿಹೋದಳು. ನಾನೀಗ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡ್ತೀನಿ.....''
``ಬೇಡ ಅಪ್ಪಾ, ನೀವು ಹೋಗಿ ಬೇಗ ಬರ್ತೀರಿ ಅಲ್ವಾ.....? ನಾನು ಕೆಲವು ದಿನ ಇಲ್ಲೇ ಇರ್ತೀನಿ,'' ಕಾವೇರಿ ಖುಷಿಯಿಂದ ಇರುವ ಎಲ್ಲ ಪ್ರಯತ್ನ ನಡೆಸಿದಳು.
``ನಾನು 2 ದಿನದಲ್ಲಿ ವಾಪಸ್ ಬರ್ತೀನಿ. ನೀನು ಕೆಲವು ದಿನ ಇಲ್ಲಿರೋದು ಮೋಹನ್‌ಗೆ ಬೇಸರ ಆಗೋದಿಲ್ವಾ....? ನೀನು ಬೆಂಗಳೂರಿನಲ್ಲೇ ಇದ್ದೂ ಕೂಡ ಕೆಲವೊಮ್ಮೆ ಬೆಳಗ್ಗೆ ಬಂದು ಸಂಜೆ ಹೋಗ್ತಿದ್ದೆ. ಒಂದು ದಿನ ಹೆಚ್ಚಿಗೆ ಇರಲು ಎಲ್ಲಿ ಅವಕಾಶ ಕೊಡ್ತಾನೆ ಮೋಹನ್.....?'' ಸುಭಾಷ್ ರ ಮನಸ್ಸಿನಲ್ಲಿ ಅಳಿಯನ ಬಗೆಗಿದ್ದ ತಕರಾರು ಮಾತಿನ ಮೂಲಕ ಹೊರಹೊಮ್ಮಿತು.
``ಆಫೀಸ್ ಕೆಲಸದ ನಿಮಿತ್ತ ಇತ್ತಷ್ಟೇ ಮೋಹನ್ ಸಿಡ್ನಿಗೆ ಹೋದರು. ಹೀಗಾಗಿ ನಾನು ಕೆಲವು ದಿನ ನಿಮ್ಮೊಂದಿಗೆ ಇರುವ ಪ್ರೋಗ್ರಾಂ ಹಾಕಿಕೊಂಡಿರುವೆ ಅಪ್ಪಾ.....'' ಎಂದಳು ಕಾವೇರಿ.
``ಗುಡ್,'' ಸುಭಾಷ್‌ರ ಮುಖದಲ್ಲಿ ಖುಷಿಯ ಮಿಂಚು ಕಾಣಿಸಿತು.
ಕಾವೇರಿ ಕೂಡ ಮುಗುಳ್ನಕ್ಕು ನಂತರ ಡ್ರಾಯಿಂಗ್ ರೂಮಿನಲ್ಲಿಟ್ಟಿದ್ದ ತನ್ನ ಬ್ಯಾಗನ್ನು ಕೋಣೆಗೆ ತೆಗೆದುಕೊಂಡು ಹೋಗಿ ಅದರಲ್ಲಿನ ತನ್ನ ಬಟ್ಟೆಗಳನ್ನು ತೆಗೆದು ಇಡತೊಡಗಿದಳು.
ಅಪ್ಪನ ಜೊತೆ ಮಾತಾಡಿ ಕಾವೇರಿಯ ಮನಸ್ಸು ಸಾಕಷ್ಟು ಹಗುರವಾಯಿತು. ಆದರೆ ಅಪ್ಪ ಹೊರಗೆ ಹೋಗುತ್ತಿದ್ದಂತೆ ಅವಳ ಮನಸ್ಸಿನಲ್ಲಿ ಉದಾಸತನ ಮತ್ತೆ ಆವರಿಸಿಕೊಂಡಿತು. ಮೆದುಳಿನಲ್ಲಿ ವಿಚಾರಗಳ ಚಕ್ರ ತಿರುಗತೊಡಗಿತು. ಶೂನ್ಯದತ್ತ ನಿರೀಕ್ಷಿಸುತ್ತಾ ತನಗೆ ತಾನೇ ಮಾತಾಡಿಕೊಳ್ಳತೊಡಗಿದಳು, `ಇಲ್ಲಿ ಎಷ್ಟೊಂದು ಆತ್ಮೀಯತೆ ಇದೆ. ಗೋಡೆಗಳು ಕೂಡ ಪ್ರೀತಿಯ ಹೊನಲನ್ನು ಹರಿಸುತ್ತವೆ. ಮನೆಯ ಏಕೈಕ ಸದಸ್ಯ ಅಪ್ಪ ಸ್ನೇಹದ ಮೂರ್ತಿಯೇ ಆಗಿದ್ದಾರೆ. ಅಮ್ಮ ಈ ಲೋಕದಿಂದ ಹೊರಟು ಹೋದನಂತರ ಅಪ್ಪನೇ ಅಮ್ಮನ ಪಾತ್ರ ನಿಭಾಯಿಸುತ್ತಾ ಮಮತೆಯ ನೆರಳಾಗಿ ತನ್ನನ್ನು ಚಿಂತೆಯಿಂದ ಮುಕ್ತರಾಗಿಸುತ್ತಿದ್ದಾರೆ. ತಾನು ಮನೆಯ ಏಕಮಾತ್ರ ಸಂತವಾನಾಗಿದ್ದರೂ ಅಪ್ಪ ಮಾತ್ರ ಯಾರೂ ಕೊಡದಷ್ಟು ಪ್ರೀತಿಯನ್ನು ನನ್ನ ಮೇಲೆ ಹರಿಸುತ್ತಿದ್ದಾರೆ.