ಸತ್ವಿಂದರ್ ಬೇಗ ಬೇಗ ಎಲ್ಲ ಕೆಲಸ ಮುಗಿಸಿ ಇನ್ನೇನು ಹೊರಡಲಿದ್ದ. ಅಷ್ಟರಲ್ಲಿ ಕೇಟ್ ಕೇಳಿಯೇ ಬಿಟ್ಟಳು, “ಇಷ್ಟು ಬೇಗ?”
“ಹೌದು ಮತ್ತೇನು? ಏರ್ ಪೋರ್ಟ್ ತಲುಪಲು 2 ಗಂಟೆ ಬೇಕು.” ಸತ್ವಿಂದರ್ ಉತ್ಸಾಹದಿಂದ ಉಬ್ಬಿ ಹೋಗಿದ್ದ. ಆದರೆ ಹತ್ತಿರವೇ ಕುಳಿತಿದ್ದ ಅನೀಟಾ ಹಾಗೂ ಸುನಿಯ್ ಸುಸ್ತಾದವರಂತೆ ಕಣ್ಸನ್ನೆಯಲ್ಲೇ ಆ ಬಗ್ಗೆ ಕೇಳಲು ಯತ್ನಿಸಿದರು. ಆದರೆ ಅವಳ ಕಣ್ಣ ಭಾಷೆಯಲ್ಲಿಯೇ ಶಾಂತವಾಗಿರಲು ಮತ್ತು ಹೊರಟು ಹೋಗಲು ಸೂಚಿಸಿದಳು.
“ನೀವು ಅಲ್ಲಿಗೆ ಹೋಗಿ ಬೀಜಿ ಮತ್ತು ದಾರ್ಜಿ ಅವರನ್ನು ಕರೆದುಕೊಂಡು ಬನ್ನಿ. ನಾವು ಅಲ್ಲಿಯವರೆಗೆ ಸ್ನಾನ ಮಾಡಿ ರೆಡಿ ಆಗ್ತೀವಿ,” ಎಂದಳು.
21 ವರ್ಷಗಳ ಬಳಿಕ ಬೀಜಿ ಮತ್ತು ದಾರ್ಜಿ ತಮ್ಮ ಏಕೈಕ ಪುತ್ರ ಸತ್ವಿಂದರ್ ಹಾಗೂ ಅವನ ಕುಟುಂಬವನ್ನು ನೋಡಲು ಬರುತ್ತಿದ್ದರು. ಐಟಿ ಕ್ಷೇತ್ರದಲ್ಲಿ ಎಂಜಿನಿಯರ್ ಆಗಿ ಐಟಿ ಕ್ಷೇತ್ರದಲ್ಲಿ ಆಗುತ್ತಿದ್ದ ಭಾರಿ ಬದಲಾವಣೆಯ ದಿನಗಳಲ್ಲಿ ಇಂಗ್ಲೆಂಡಿಗೆ ಬಂದು ನೆಲೆಸಿದ್ದ. ತನ್ನ ನಿರ್ಧಾರದ ಬಗ್ಗೆ ಅವನಿಗೆ ಹೆಮ್ಮೆ ಇತ್ತು. `ಬೀಯಿಂಗ್ ಆಫ್ ದಿ ರೈಟ್ ಪ್ಲೇಸ್, ಆಲ್ ದಿ ರೈಟ್ ಟೈಮ್’ ಅನ್ನುವುದು ಅವನ ಪ್ರಸಿದ್ಧ ಹೇಳಿಕೆಯಾಗಿತ್ತು.
ನೌಕರಿ ದೊರೆತಾಗ ಸತ್ವಿಂದರ್ ರಿಚ್ಮಂಡ್ ಏರಿಯಾದಲ್ಲಿ ಒಂದು ಕೋಣೆ ಬಾಡಿಗೆ ಪಡೆದು ವಾಸಿಸುತ್ತಿದ್ದ. ಮನೆಯ ಕೆಳಭಾಗದಲ್ಲಿ ಮನೆ ಮಾಲೀಕರು ವಾಸಿಸುತ್ತಿದ್ದರು. ಕೋಣೆ ಚಿಕ್ಕದಾಗಿತ್ತು. ಆದರೆ ಕಿಟಕಿಯಿಂದ ಥೇಮ್ಸ್ ನದಿ ಹರಿಯುವುದು ಕಾಣಿಸುತ್ತಿತ್ತು.
ಅದು ಅವನಿಗೆ ವಿಶೇಷ ಅನುಭವವಾಗಿತ್ತು. ಬಾಡಿಗೆ ಬೇರೆ ಕಡಿಮೆಯಿತ್ತು. ಹೀಗಾಗಿ ಸತ್ವಿಂದರ್ ಅಲ್ಲಿ ಖುಷಿಯಿಂದ ಇರುತ್ತಿದ್ದ.
ಮನೆ ಮಾಲೀಕನ ಒಬ್ಬಳೇ ಮಗಳು ಸತ್ವಿಂದರ್ ಹೊರಗೆ ಹೋದಾಗ ಬಾಗಿಲು ತೆಗೆಯುತ್ತಿದ್ದಳು. ಅವಳು ಅವನನ್ನು ಲಂಡನ್ ಸುತ್ತಾಡಲು ಕೂಡ ಕರೆದುಕೊಂಡು ಹೋಗುತ್ತಿದ್ದಳು. ಅವಳು ಬಹಳ ತಿಳಿವಳಿಕೆಯುಳ್ಳ ಹುಡುಗಿ ಎನ್ನುವುದು ಸತ್ವಿಂದರ್ ಅರಿವಿಗೆ ಬಂದಿತ್ತು. ಕೆಲವೇ ದಿನಗಳಲ್ಲಿ ಅವರ ನಡುವೆ ಸ್ನೇಹ ಬೆಳೆದು ಪ್ರೀತಿಯ ಬಳ್ಳಿ ಚಿಗುರೊಡೆಯತೊಡಗಿತ್ತು. ಇಬ್ಬರೂ ಕಣ್ಣ ಭಾಷೆಯಲ್ಲಿ ತಮ್ಮ ಪ್ರೀತಿಯ ಅನುಭವ ಮಾಡಿಕೊಳ್ಳುತ್ತಿದ್ದರು.
ಧರ್ಮದ ಅಡ್ಡಗೋಡೆಯ ಕಾರಣದಿಂದ ಇಬ್ಬರೂ ಮೌನದಿಂದಿದ್ದರು. ಸತ್ವಿಂದರ್ ಕೇಟ್ ಳ ಪ್ರೀತಿಯ ಸೆಳೆತದಲ್ಲಿ ಅದೆಷ್ಟು ಮೋಹಿತನಾಗಿದ್ದನೆಂದರೆ, ಅವನು ಭಾರತದಲ್ಲಿದ್ದ ತನ್ನ ತಾಯಿ ತಂದೆಯರಿಂದ ಅನುಮತಿ ಕೇಳಿದ. ಆದರೆ ಅವರ ಕರಾರು ಏನಾಗಿತ್ತೆಂದರೆ, ನಮ್ಮ ರೀತಿ ರಿವಾಜಿನ ಪ್ರಕಾರ ಮದುವೆ ಆಗಬೇಕು ಎನ್ನುವುದು. ಕೊನೆಗೊಮ್ಮೆ ಸತ್ವಿಂದರ್ ತನ್ನ ಹುಟ್ಟೂರಿಗೆ ಬಂದು ವೈಭವದಿಂದ ಮದುವೆಯಾದ.
ಕೆಲವೇ ವರ್ಷಗಳಲ್ಲಿ ಸತ್ವಿಂದರ್ ಮತ್ತು ಕೇಟ್ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. ಬೀಜಿ ಬಹಳ ಖುಷಿಗೊಂಡಿದ್ದಳು. ಪರದೇಶದಲ್ಲೂ ತನ್ನ ಕರುಳಿನ ಕುಡಿಯ ಬಗ್ಗಿ ಗಮನಿಸುವವರು ಇದ್ದಾರೆ ಎನ್ನುವುದು ಅವಳಿಗೆ ಹೆಮ್ಮೆಯ ವಿಷಯವಾಗಿತ್ತು. ಕೆಲವೇ ವರ್ಷಗಳಲ್ಲಿ ತನ್ನ ನೂತನ ವಹಿವಾಟನ್ನು ಅವನೇ ಮುಂದುವರಿಸುವಂತಾದ. ಇವತ್ತು ಅವನು ಇಂಗ್ಲೆಂಡಿನ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬನಾಗಿದ್ದಾನೆ. ಮಕ್ಕಳು ಚಿಕ್ಕವರಿದ್ದಾಗ ಅವನು ಆಗಾಗ ಅವರನ್ನು ಕರೆದುಕೊಂಡು ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದ. ಆದರೆ ಮಕ್ಕಳು ಬೆಳೆದು ದೊಡ್ಡವರಾದಾಗ ಅವನು ಭಾರತಕ್ಕೆ ಬರುವುದನ್ನು ಕಡಿಮೆ ಮಾಡಿದ್ದ.
ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಕೇಟ್ ಹಾಗೂ ಸತ್ವಿಂದರ್ ಭಾರತಕ್ಕೆ ಬರಬೇಕೆಂದಾಗ ಕೆಲಸದ ಕಾರಣದಿಂದ ಬರಲು ಆಗಲಿಲ್ಲ. ಆಗ ಕೇಟ್, ಬೀಜಿಗೆ ಫೋನ್ ಮಾಡಿ, “ಮಕ್ಕಳ ಶಿಕ್ಷಣದ ಕಾರಣದಿಂದ ನಮಗೆ ಬರಲಾಗುತ್ತಿಲ್ಲ. ನೀವೇ ಏಕೆ ಲಂಡನಿಗೆ ಬರಬಾರದು?” ಎಂದು ಅವಳು ಕೇಳಿದ್ದಳು.
ಪಾರ್ಸ್ ಪೋರ್ಟ್, ವೀಸಾ ಮುಂತಾದ ದಾಖಲೆಗಳನ್ನೆಲ್ಲ ಪೂರೈಸಿ ಬೀಜಿ ದಾರ್ಜಿ ಇವತ್ತು ಲಂಡನ್ ಬರುವವರಿದ್ದರು. ಅವರಿಗೆ ಇದು ಮೊದಲ ವಿಮಾನ ಪ್ರಯಾಣ ಹಾಗೂ ಬೇರೆ ದೇಶವೊಂದಕ್ಕೆ ಮೊದಲ ಪ್ರಯಾಣವಾಗಿತ್ತು. ಇಳಿ ವಯಸ್ಸಿನಲ್ಲಿ ಅಷ್ಟು ದೂರ ಪ್ರಯಾಣ ಮಾಡುವುದು ಸ್ವಲ್ಪ ಚಿಂತೆಗೂ ಕಾರಣವಾಗಿತ್ತು. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಕೊನೆಗೊಮ್ಮೆ ಲಂಡನ್ ತಲುಪಿದರು.
ಸತ್ವಿಂದರ್ ಮೊದಲೇ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ. ಅಮ್ಮ ಅಪ್ಪ ಹೊರಗೆ ಬರುತ್ತಿದ್ದಂತೆ ಅವರನ್ನು ಬಾಚಿ ತಬ್ಬಿಕೊಂಡ. ಆಗ ಅವನ ಕಣ್ಣಿಂದ ಗೊತ್ತಿಲ್ಲದೆ ಅಶ್ರುಗಳು ಉದುರಿದವು. ಅಮ್ಮ ಕೂಡ ಜೋರಾಗಿ ಅಳತೊಡಗಿದರು.
“ಅಮ್ಮಾ, ಈಗ ತಾನೇ ಬರ್ತಿದೀರಾ…. ನೀವು ಹೋಗ್ತಿಲ್ಲ. ಯಾಕೆ ಅಳುವುದು? ನಿಮ್ಮ ಮಗನ ದೊಡ್ಡ ಗಾಡಿಯಲ್ಲಿ ಸವಾರರಾಗಿ.”
ಗಾಡಿಯಲ್ಲಿ ಹೋಗುವಾಗ ರಸ್ತೆ ಪಕ್ಕದ ಹಸಿರು ದೃಶ್ಯಗಳು ಹಾಗೂ ಅಲ್ಲಿನ ಹವಾಮಾನ, ರಸ್ತೆ ನಿಯಮಗಳು ಹಾರ್ನ್ ಹೊಡೆಯದಿರುವುದು, ದನಕರು, ನಾಯಿ ಯಾವುದೂ ರಸ್ತೆಯ ಮೇಲೆ ಬರದ ನಿಯಮಗಳು ಅವರನ್ನು ಬಹಳ ಅಚ್ಚರಿಗೆ ಕೆಡವಿದ್ದವು.
“ನೀವಿವತ್ತು ಬರುತ್ತಿದ್ದೀರಿ ಎಂದು ಸೂರ್ಯ ಅಷ್ಟಿಷ್ಟು ದರ್ಶನ ಕೊಡ್ತಿದ್ದಾನೆ. ಇಲ್ಲದಿದ್ದರೆ ಇಲ್ಲಿ ಆಗಾಗ ಮಳೆ ಬರ್ತಾನೇ ಇರುತ್ತೆ,” ಎಂದು ಸತ್ವಿಂದರ್ ಹೇಳಿದ.
ಮನೆ ಬಾಗಿಲಲ್ಲಿ ಕೇಟ್ ಇವರಿಗಾಗಿಯೇ ಕಾಯುತ್ತಿದ್ದಳು. ಅವಳು ಖುಷಿಯಿಂದ ಅವರನ್ನು ಮನೆಯೊಳಗೆ ಬರ ಮಾಡಿಕೊಂಡಳು. ಸೊಸೆಯ ಸ್ವಾಗತದಿಂದ ಅತ್ತೆ ಮಾವ ಬಹಳ ಖುಷಿಗೊಂಡಿದ್ದರು. ಅವರನ್ನು ರೂಮಿನಲ್ಲಿ ವಿಶ್ರಾಂತಿ ಪಡೆಯಲು ಹೇಳಿ ಕೇಟ್ ಅವರಿಗೆ ತಿಂಡಿಯ ವ್ಯವಸ್ಥೆ ಮಾಡಲು ಹೋದಳು.
“ಮೊಮ್ಮಕ್ಕಳು ಎಲ್ಲಿದ್ದಾರೆ? ಅವರನ್ನು ನೋಡಲು ಮನಸ್ಸು ಕಾತರಿಸುತ್ತಿದೆ,” ಎಂದು ಬೀಜಿ ಮನಸ್ಸು ತಡೆಯಲಾರದೆ ಕೇಳಿಯೇಬಿಟ್ಟಳು. ತಾತ ಕೂಡ ಅವರೆಲ್ಲಿದ್ದಾರೆ ಎಂದು ಅತ್ತಿತ್ತ ನೋಡುತ್ತಿದ್ದ. ಸತ್ವಿಂದರ್ ಇಬ್ಬರನ್ನೂ ಕೂಗಿ ಕರೆದಾಗ ಅವರಿಬ್ಬರೂ ಅಲ್ಲಿಗೆ ಬಂದು ಹಾಜರಾದರು. ಅವರನ್ನು ನೋಡುತ್ತಿದ್ದಂತೆ ಅಜ್ಜಿ ತಾತ ಬಾಚಿ ತಬ್ಬಿಕೊಂಡು, “ನಮ್ಮ ಮೊಮ್ಮಕ್ಕಳು ಎಷ್ಟು ಬೆಳೆದುಬಿಟ್ಟಿದ್ದಾರೆ!” ಎಂದು ಉದ್ಗಾರ ತೆಗೆದರು.
ಅಜ್ಜಿ ತಾತಾ ಪಂಜಾಬಿ ಭಾಷೆಯಲ್ಲಿ ಮಾತನಾಡಿದ್ದನ್ನು ಕೇಳಿ, “ಇವರು ಯಾವ ಭಾಷೆಯಲ್ಲಿ ಮಾತಾಡ್ತಿದ್ದಾರೆ ಡ್ಯಾಡ್? ನಮಗೇನೂ ಅರ್ಥ ಆಗ್ತಿಲ್ಲ,” ಎಂದು ಮಕ್ಕಳಿಬ್ಬರೂ ಹೇಳಿದರು.
“ಅಂದಹಾಗೆ ನಮ್ಮ ಹೆಸರು ಅನೀಟಾ ಮತ್ತು ಸುನಿಯಲ್. ಅನಿತಾ ಮತ್ತು ಸುನಿಲ್ ಅಲ್ಲ.”
ಸುನಿಯಲ್ ನ ಈ ದುರ್ವರ್ತನೆಯ ಬಗ್ಗೆ ಸತ್ವಿಂದರ್ ಕೆಂಡಾಮಂಡಲನಾದ. ಅಷ್ಟರಲ್ಲಿಯೇ ಅಲ್ಲಿಗೆ ಕೇಟ್ ಬಂದಳು. ಈಗಷ್ಟೇ ಬಂದ ಅತ್ತೆ ಮಾವ ಮುಂದೆ ದೊಡ್ಡ ರಾದ್ಧಾಂತ ಆಗುವುದು ಬೇಗ ಎಂದ ಕೇಟ್ ಅವರಿಬ್ಬರನ್ನು ರೂಮಿಗೆ ಹೋಗಲು ಹೇಳಿ, ಅತ್ತೆ ಮಾನಿಗೆ ತಿಂಡಿ, ಚಹಾ ತಂದುಕೊಟ್ಟಳು.
ಕೇಟ್ ಬಹಳ ತಿಳಿವಳಿಕೆಯುಳ್ಳವಳು. ಕುಟುಂಬವನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಅವಳಿಗೆ ಗೊತ್ತಿತ್ತು. ಆದರೆ ವಿದೇಶದಲ್ಲಿ, ಪರಕೀಯ ಸಂಸ್ಕೃತಿಯಲ್ಲಿ ಬೆಳೆದ ಮಕ್ಕಳದ್ದೇನು ತಪ್ಪು? ಅನೀಟಾಗೆ 15 ವರ್ಷ ಹಾಗೂ ಸುನಿಯಲ್ ಗೆ 18. ಅವರು ಯಾವ ದೇಶದಲ್ಲಿದ್ದರೊ, ಅಲ್ಲಿನ ಸಂಸ್ಕೃತಿಯೇ ಅವರಲ್ಲಿ ಮನೆ ಮಾಡಿಬಿಟ್ಟಿತ್ತು. ಅಜ್ಜಿ ತಾತನೊಂದಿಗೆ ಮಾತನಾಡುವುದು ಕೂಡ ಅವರಿಗೆ ಬೇಸರ ತರಿಸುತ್ತಿತ್ತು.
ಮರುವಾರ ಸತ್ವಿಂದರ್ ಮತ್ತು ಕೇಟ್ ಇಬ್ಬರನ್ನೂ ಲಂಡನ್ನಿನ ಪ್ರಸಿದ್ಧ ಮ್ಯೂಸಿಯಂ ನೋಡಲು ಕರೆದೊಯ್ದರು. ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಂನಲ್ಲಿ ಡೈನೋಸಾರ್ ಮೂಳೆಗಳ ಮಾದರಿ, ಬೇರೆ ವಿಶಾಲ ದೇಹದ ಪ್ರಾಣಿಗಳ ದೇಹವನ್ನು ಅಲ್ಲಿ ಸಂರಕ್ಷಿಸಿ ಇಡಲಾಗಿತ್ತು. ಕೊಹಿನೂರ್ ವಜ್ರ, ಟಿಪ್ಪು ಸುಲ್ತಾನನ ಬಟ್ಟೆ ಅವನ ಹೆಸರಾಂತ ಖಡ್ಗ, ಜಗತ್ತಿನಾದ್ಯಂತದಿಂದ ಸಂಗ್ರಹಿಸಿ ತಂದ ಅದ್ಭುತ ಮೂರ್ತಿಗಳು, ಗಾಜು, ಕಂಚು, ಹಿತ್ತಾಳೆ, ಬೆಳ್ಳಿಯ ಪಾತ್ರೆಗಳನ್ನು ನೋಡಿ ಅವರು ಚಕಿತರಾದರು.
“ಬ್ರಿಟಿಷರು ಕೇವಲ ಭಾರತವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ಲೂಟಿ ಮಾಡಿದ್ದಾರೆ,” ಎಂಬ ಮಾತು ಅವರ ಬಾಯಿಂದ ಹೊರಬಂತು.
ಬೀಜಿ ಹಾಗೂ ದಾರ್ಜಿಗೆ ತಮ್ಮೂರಿಗಿಂತ ಲಂಡನ್ ಬಹಳ ಭಿನ್ನ ಸಂಸ್ಕೃತಿಯ ನಗರ ಎಂದು ಗೊತ್ತಾಯಿತು. ಇಲ್ಲಿ ಎಲ್ಲರೂ ಸ್ವತಂತ್ರರು, ಯಾರಿಗೆ ಯಾರೂ ನಿಯಂತ್ರಣ ಹೇರುವ ಹಾಗಿಲ್ಲ. ನೈತಿಕತೆಯ ಪೊಲೀಸಿಂಗ್ ಅಂತೂ ಇಲ್ಲವೇ ಇಲ್ಲ. ಎಲ್ಲರಿಗೂ ತಮ್ಮ ತಮ್ಮ ಜೀವನದ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ, ಮದುವೆಗೂ ಮುನ್ನ ಜೊತೆ ಜೊತೆಗಿರುವ ಸ್ವಾತಂತ್ರ್ಯ, ಮದುವೆಯ ಬಳಿಕ ಖುಷಿಯಾಗಿಲ್ಲವೆದರೆ ವಿಚ್ಛೇದನ ಪಡೆದು ಪ್ರತ್ಯೇಕವಾಗಿರಲು ಸ್ವಾತಂತ್ರ್ಯ.
ಬೆಳಕು ಮೂಡುತ್ತಿದ್ದಂತೆ ಸತ್ವಿಂದರ್ ಹಾಗೂ ಕೇಟ್ ತಮ್ಮ ತಮ್ಮ ಆಫೀಸಿಗೆ ಏನೂ ತಿನ್ನದೆಯೇ ಹೊರಟು ಹೋಗುತ್ತಿದ್ದರು. ಮಧ್ಯಾಹ್ನಕ್ಕೂ ಏನೂ ತೆಗೆದುಕೊಂಡು ಹೋಗುತ್ತಿರಲಿಲ್ಲ. ಬೀಜಿಗೆ ಅದನ್ನು ನೋಡಲಾಗಲಿಲ್ಲ. ಅವಳು ಕೇಳಿಯೇಬಿಟ್ಟಳು, “ಸತ್ವಿಂದರ್, ನೀವಿಬ್ಬರೂ ಇಡೀ ದಿನ ಹಸಿವಿಟ್ಟುಕೊಂಡು ಹೇಗೆ ಕೆಲಸ ಮಾಡುತ್ತೀರಿ? ನೀವು ಹೇಳಿದರೆ ನಾನು ನಿಮಗೆ ಪರೋಟಾ ಪಲ್ಯ ಮಾಡಿಕೊಡುವೆ. ಅದಕ್ಕೆ ಹೆಚ್ಚೇನೂ ಸಮಯ ಬೇಕಾಗುವುದಿಲ್ಲ.”
ಅಮ್ಮನ ಮಾತಿಗೆ ಸತ್ವಿಂದರ್ ನಗುತ್ತಲೇ, “ನಾವು ದಾರಿಯಲ್ಲೇ ಒಂದೊಂದು ಸ್ಯಾಂಡ್ವಿಚ್ ಹಾಗೂ ಕಾಫಿ ಗ್ಲಾಸ್ ತೆಗೆದುಕೊಂಡು ಹೋಗುತ್ತೇವೆ. ಹಾಗೂ ಟ್ಯೂಬ್ ಸ್ಟೇಶನ್ (ಮೆಟ್ರೊ ರೈಲು)ನಲ್ಲಿ ಗಾಡಿ ಪಾರ್ಕ್ ಮಾಡಿ, ನಮ್ಮ ನಮ್ಮ ದಾರಿ ಕಂಡುಕೊಳ್ಳುತ್ತೇವೆ. ಮಧ್ಯಾಹ್ನ ಆಫೀಸಿಗೆ ಹತ್ತಿರದ ರೆಸ್ಟೊರೆಂಟಿಗೆ ಹೋಗಿ ಏನಾದರೂ ತೆಗೆದುಕೊಂಡು ಬರುತ್ತೇವೆ. ಇಲ್ಲಿ ಎಲ್ಲರೂ `ಆನ್ ದಿ ಗೋ’ ತಿಂದು ಹೋಗು ರೂಢಿ. ಹೋಗ್ತಾ ಇರು ತಿಂತಾ ಇರು. ಕೊನೆಗೊಮ್ಮೆ ಟೈಮ್ ಈಸ್ ಮನಿ ಅಲ್ವಾ?” ಎಂದ.
ಬೀಜಿಗೆ ಲಂಡನ್ ಎಷ್ಟೊಂದು ದುಬಾರಿ ನಗರ ಎನ್ನುವುದು ಸ್ಯಾಂಡ್ ವಿಚ್ನ ರೇಟ್ ಕೇಳಿಯೇ ಗೊತ್ತಾಯಿತು. ಅಲ್ಲಿ ಸ್ಯಾಂಡ್ ವಿಚ್ಗೆ 250 ರೂ. ಎಂದು ತಿಳಿದು ಅವಳು ಚಕಿತಳಾದಳು. ಮತ್ತೊಂದು ಸಲ ಎಲ್ಲರೂ ಸೇರಿ ಒಂದು ಹೋಟೆಲಿಗೆ ಹೋದಾಗ ಅಲ್ಲಿನ ಬಿಲ್ ನೋಡಿ ದಂಗಾಗಿ ಹೋದರು. `ಇದು ಅತ್ಯಂತ ದುಬಾರಿ ಹೋಟೆಲ್,’ ಎನ್ನುವುದು ಅವರ ಉದ್ಗಾರವಾಗಿತ್ತು.
ಮರು ದಿನದಿಂದ ಮನೆ ಯಥಾ ರೀತಿ ನಡೆಯತೊಡಗಿತು. ಮಕ್ಕಳು ಓದುವುದರಲ್ಲಿ, ಸತ್ವಿಂದರ್ ಹಾಗೂ ಕೇಟ್ ತಮ್ಮ ಬಿಸ್ ನೆಸ್ ಸಂಭಾಳಿಸುವುದರಲ್ಲಿ ನಿರತರಾದರು. ಅನೀಟಾಳನ್ನು ಬಿಡಲು ಒಬ್ಬ ಕಪ್ಪು ವರ್ಣೀಯ ಹುಡುಗ ಮನೆಯ ಕಡೆ ಬಂದು ಹೋದುದನ್ನು ಅಜ್ಜಿ ತಾತ ಗಮನಿಸಿದರು. ಒಂದು ದಿನ ಅನೀತಾ ಆ ಕಪ್ಪು ಹುಡುಗನನ್ನು ಚುಂಬಿಸಿದನ್ನು ಅವರ ತೀಕ್ಷ್ಣ ಕಣ್ಣುಗಳು ಕಂಡುಕೊಂಡವು. ಪುಟ್ಟ ಹುಡುಗಿಯಿಂದ ಇಂತಹ ಕೃತ್ಯ ಎಂದು ಅವರಿಗೆ ರೋಷ ಉಕ್ಕಿ ಬಂತು. ಬ್ರಿಟನ್ ನಂತಹ ದೇಶದಲ್ಲಿ ಸಾಮಾನ್ಯವಾಗಿರಬಹುದು ಎಂದುಕೊಂಡ ಬೀಜಿ ಸುಮ್ಮನಾಗಿಬಿಟ್ಟರು.
ಬೆಳಗ್ಗೆ ಬೀಜಿ ಚಹಾದ ಕಪ್ ಹಿಡಿದು ಬಾಲ್ಕನಿಯಲ್ಲಿ ರಿಚ್ಮಂಡ್ ಹಿಲ್ ಹಾಗೂ ಆಸುಪಾಸಿನ ಥೇಮ್ಸ್ ನದಿಯ ಹರಿವಿನ ದೃಶ್ಯವನ್ನು ನೋಡುತ್ತಿದ್ದರು. ಸೇಂಟ್ ಪೀಟರ್ ಚರ್ಚ್ ಮತ್ತು ಆಸುಪಾಸಿನ ದೃಶ್ಯವನ್ನು ನೋಡಿ ಎಂತಹ ಸುಂದರ ಸ್ಥಳ ಎಂದು ಅವರ ಬಾಯಿಂದ ಉದ್ಗಾರ ಹೊರಹೊಮ್ಮಿತಾದರೂ ಅವರ ಹೃದಯದಲ್ಲಿ ಮಾತ್ರ ಎಂಥದೊ ಕಸಿವಿಸಿ. ರಾತ್ರಿಯ ಘಟನೆ ಅವರ ಮನಸ್ಸಿನಲ್ಲಿ ಕಹಿ ಬೆರೆಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಚಹಾದ ಕಪ್ ಹಿಡಿದುಕೊಂಡು ಕೇಟ್ ಕೂಡ ಅಲ್ಲಿಗೆ ಬಂದಳು. ಸಂದರ್ಭದ ಲಾಭ ಪಡೆದುಕೊಂಡು ರಾತ್ರಿಯ ಘಟನೆಯ ಬಗ್ಗೆ ಬೀಜಿ ಕೇಳಿಯೇಬಿಟ್ಟಳು.
ಆ ಮಾತಿಗೆ ಕೇಟ್, “ನಿಮ್ಮ ಮಾತು ನನಗೆ ಅರ್ಥವಾಗುತ್ತದೆ. ಆದರೆ ನಾವು ಮಕ್ಕಳಿಗೆ ಸ್ವಲ್ಪ ಗದರಿಸುವ ಹಾಗಿಲ್ಲ, ಹೊಡೆಯುವ ಹಾಗಿಲ್ಲ. ಇಲ್ಲಿನ ಸಂಸ್ಕೃತಿ ಭಾರತಕ್ಕಿಂತ ಬಹಳ ಭಿನ್ನ. ಬಾಲ್ಯದಿಂದಲೇ ಮಕ್ಕಳು ಸ್ನೇಹಿತರಾಗಿ ನಂತರ ಅವರು ಜೀವನ ಸಂಗಾತಿಗಳಾಗಬಹುದು. ಎಷ್ಟೋ ಸಲ ಅವರು ಬೇರೆ ಬೇರೆ ಕೂಡ ಆಗಬಹುದು. ಇದು ಅವರ ಖಾಸಗಿ ನಿರ್ಧಾರ,” ಎಂದು ಕೇಟ್ ಸಂಕ್ಷಿಪ್ತವಾಗಿ ಹೇಳಿದಳು. ಅತ್ತೆಗೆ ಈ ಮಾತು ಇಷ್ಟ ಆಗಲಿಲ್ಲ. ಆದರೆ ಅವರು ಸುಮ್ಮನಾಗಿ ಬಿಟ್ಟರು.
ಶಾಲೆಗೆ ಹೋಗುವ ಆತುರಾತುರದಲ್ಲಿಯೂ ಸಹ ಅನೀಟಾ ಅವರ ಮಾತನ್ನು ಕೇಳಿಸಿಕೊಂಡಳು. ಅವರ ಎದುರು ಮುಖ ಕಿವುಚಿ ಹೊರಕ್ಕೆ ಹೆಜ್ಜೆ ಹಾಕಿದಳು. ಹೊರಗೆ ಹೋಗುತ್ತ ಜೋರಾಗಿ, “ಮಾಮ್, ಇವತ್ತು ನಾನು ಬಾಯ್ ಫ್ರೆಂಡ್ ಜೊತೆ ಪಾರ್ಕಿಗೆ ಹೋಗ್ತೀನಿ. ಸಂಜೆ ಬರೋಕೆ ತಡ ಆಗುತ್ತೆ. ನನ್ನ ದಾರಿ ಕಾಯುತ್ತ ಕೂರಬೇಡಿ,” ಎಂದು ಹೇಳಿ ಹೊರಟುಹೋದಳು.
ಲಂಡನ್ನಿನ ವರ್ತಮಾನ ಪತ್ರಿಕೆಯಲ್ಲಿ ಬಂದ ಸುದ್ದಿಗಳನ್ನು ಗಮನಿಸಿ ದಾರ್ಜಿ ಬೀಜಿಗೆ ಅನುವಾದ ಮಾಡಿ ಹೇಳುತ್ತಿದ್ದರು.
ಅದರಿಂದ ಅವರಿಗೆ ಗೊತ್ತಾದ ವಿಷಯವೆಂದರೆ, ಮಕ್ಕಳಲ್ಲಿ ಖಿನ್ನತೆಯ ಸಮಸ್ಯೆ, ಹದಿವಯಸ್ಸಿನಲ್ಲಿ ಗರ್ಭಧಾರಣೆ, ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿ, ಬೇಕಾಬಿಟ್ಟಿ ವರ್ತನೆ ಹಾಗೂ ಹದಿವಯಸ್ಸಿನಲ್ಲಿ ಮದ್ಯದ ಚಟ ಇವೆಲ್ಲ ಅಲ್ಲಿನ ಮಕ್ಕಳಲ್ಲಿ ಸಹಜವಾಗಿದ್ದ. ಅದಕ್ಕೆ ಕಾರಣ ಎದುರುಗಡೆಯೇ ಇತ್ತು. ಪೋಷಕರ ತಿಳಿವಳಿಕೆಯ ಕೊರತೆ. ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿಮಾತು ಹೇಳುವುದನ್ನು ಮರೆತುಬಿಟ್ಟಂತೆ ಕಾಣುತ್ತಿತ್ತು.
ಅದೊಂದು ಬೆಳಗ್ಗೆ ಅಮ್ಮ ಅಪ್ಪ ಮಾತನಾಡುತ್ತಿದ್ದುದನ್ನು ಸತ್ವಿಂದರ್ ಗಮನಿಸಿದ.
“ಅಪ್ಪಾಜಿ, ನಾವು ಮಕ್ಕಳ ಮಾತನ್ನು ಕೇಳಿಸಿಕೊಳ್ಳಬಹುದು. ಅವರಿಗೆ ನಾವು ಎದುರು ಏನೂ ಮಾತನಾಡುವ ಹಾಗಿಲ್ಲ. ಅವರ ಮೇಲೆ ದರ್ಪ ತೋರಿಸುವ ಹಾಗಿಲ್ಲ. ಅವರ ಮೇಲೆ ಕೈ ಎತ್ತುವುದು ಅಪರಾಧ. ನಾನು ನಿಮಗೊಂದು ಘಟನೆಯ ಬಗ್ಗೆ ಹೇಳ್ತೀನಿ. ನನ್ನ ಸ್ನೇಹಿತರ ಮಗ ರಸ್ತೆಯಲ್ಲಿ ಹಾಗೆಯೇ ಓಡಿಬಿಟ್ಟ. ಕಾರೊಂದು ಬಂದು ಅವನಿಗೆ ಗುದ್ದಿತು. ಗಾಬರಿಗೊಂಡ ಆ ಚಾಲಕ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಹೆಚ್ಚೇನೂ ಪೆಟ್ಟಾಗಿರದ್ದರಿಂದ ಅವನು ಬಹುಬೇಗ ಮನೆಗೆ ಬಂದ. ಕೆಲವು ದಿನಗಳ ಬಳಿಕ ಮತ್ತೆ ಆ ಹುಡುಗ ಹಾಗೆಯೇ ರಸ್ತೆ ಮೇಲೆ ಅಡ್ಡಾದಿಡ್ಡಿ ಓಡಿದ. ಈ ಸಲ ಮಾತ್ರ ಅವನ ತಂದೆಗೆ ವಿಪರೀತ ಕೋಪ ಬಂದು ಮಗನಿಗೆ ನಾಲ್ಕು ಏಟು ಕೊಟ್ಟು ಬುದ್ಧಿಮಾತು ಹೇಳಿದರು. ಈ ಘಟನೆ ಎಲ್ಲೋ ಬಹಿರಂಗವಾಗಿ ಆ ಹುಡುಗ ತಂದೆಗೆ ಎಲ್ಲರೂ ಛೀಮಾರಿ ಹಾಕಿದರು.”
“ಆದರೆ ಇದು ತಪ್ಪಲ್ವ ಮಗನೇ, ತಂದೆ ತಾಯಿ, ಶಿಕ್ಷಕರು, ದೊಡ್ಡವರು ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಅಲ್ವೆ ಅವರನ್ನು ಗದರುವುದು. ಒಂದೆರಡು ಹೊಡೆಯುವುದು. ಮಕ್ಕಳು ಮಕ್ಕಳೇ ಅಲ್ವೇ? ದೊಡ್ಡವರ ಹಾಗೆ ಅವರಿಗೆ ತಿಳಿವಳಿಕೆ ಇರುತ್ತಾ?” ಎನ್ನುವುದು ಅಮ್ಮನ ಮಾತಾಗಿತ್ತು.
“ನಿಮ್ಮ ಮಾತು ಸರಿಯಾಗಿದೆ ಅಮ್ಮ. ಇಲ್ಲೂ ಕೂಡ ನಿಮ್ಮ ಹಾಗೆ ಮಾತನಾಡುವ ಸಂಶೋಧಕರು, ಬುದ್ಧಿವಂತರು ಇದ್ದಾರೆ. ಆದರೆ ಇಲ್ಲಿನ ಕಾನೂನು…..” ಸತ್ವಿಂದರ್ ಮಾತು ಇನ್ನೂ ಪೂರ್ತಿಯಾಗಿರಲಿಲ್ಲ. ಅನೀಟಾ ಕೋಣೆಯೊಳಗೆ ಕಾಲಿಡುತ್ತಾ, “ಓಹ್ ಕಮ್ ಆನ್ ಡ್ಯಾಡ್, ನೀವು ಯಾರಿಗೆ ಏನು ತಿಳಿವಳಿಕೆ ಹೇಳಲು ಪ್ರಯತ್ನಿಸುತ್ತಿದ್ದೀರಿ. ಇಲ್ಲಿ ಕೇವಲ ಪೀಳಿಗೆಯ ಅಂತರವಿಲ್ಲ, ಸಂಸ್ಕೃತಿಯ ದೊಡ್ಡ ಕಂದಕ ಇದೆ,” ಎಂದು ಹೇಳಿದಳು.
ಅಜ್ಜಿ ತಾತನ ಮಾತು ಕೇಳಿಸಿಕೊಂಡಾಗಿನಿಂದ ಅವರು ಅವರ ಬಗ್ಗೆ ಬಹಳ ಮುನಿಸಿಕೊಂಡಿದ್ದಳು. ಅವಳು ಅವರೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಳು. ಅವರ ಕಡೆ ನೋಡಿದರೆ ಸಾಕು, ಅವರ ಬಗ್ಗೆ ಒಂದು ದೂರು ಹುಟ್ಟಿಕೊಳ್ಳುತ್ತಿತ್ತು. ಅವರು ಹೇಳಿದ ಪ್ರತಿಯೊಂದು ಮಾತನ್ನು ಅವಳು ಅಪಹಾಸ್ಯ ಮಾಡುತ್ತ ಕೋಣೆಯತ್ತ ಹೋಗುತ್ತಿದ್ದಳು.
“ಸ್ಯಾಟ್, ಸುನಿಯಲ್ ಗೆ ಉನ್ನತ ಶಿಕ್ಷಣಕ್ಕಾಗಿ ಅನುಮತಿ ಸಿಕ್ಕಿದೆ. ತನ್ನ ಕಾಲೇಜಿನಲ್ಲಿ ನಡೆದ ಒಂದು ಸ್ಪರ್ಧೆಯಲ್ಲಿ ಅವನ ಹೆಸರು ಅಂತಿಮಗೊಂಡಿದೆ. ಅವನೇ ಇಂದು ನನಗೆ ತಿಳಿಸಿದ,” ಎಂದು ಕೇಟ್ ತನ್ನ ಪತಿಯನ್ನು `ಸ್ಯಾಟ್’ ಎಂದು ಸಂಬೋಧಿಸುತ್ತಾ ಹೇಳಿದಳು.
“2 ವರ್ಷದ ಕೋರ್ಸ್ ಅದು. ಓದು ಮುಂದುವರಿಸಲು ಆತ ಪಾಕಿಸ್ತಾನಕ್ಕೆ ಹೋಗಲಿದ್ದಾನೆ,” ಎಂದಳು.
“ಪಾಕಿಸ್ತಾನ? ಪಾಕಿಸ್ತಾನ ಏಕೆ?” ದಾರ್ಜಿಗೆ ಅಚ್ಚರಿಯಾಗವುದು ಸಹಜವೇ ಆಗಿತ್ತು.
“ದಾರ್ಜಿ, ಆ ಕಾಲೇಜು ಪಾಕಿಸ್ತಾನದಲ್ಲಿದೆ ಹಾಗೂ ಆ ಕೋರ್ಸ್ ಮಾಡಲು ಅವನು ಆ ದೇಶಕ್ಕೆ ಹೋಗಲಿದ್ದಾನೆ,” ಎಂದು ಕೇಟ್ ಹೇಳಿದಳು.
ಮಕ್ಕಳು ಮನಸ್ಸು ಮಾಡಿದಾಗ, ಅವರ ತಾಯಿತಂದೆ ಕೂಡ ಅವರಿಗೆ ಜೊತೆ ಕೊಡಲು ತಯಾರಾದಾಗ ಇನ್ನೇನು ಮಾಡಲು ಸಾಧ್ಯ? ದಾರ್ಜಿ ಸುಮ್ಮನೇ ಗದರಿಸಿ ಮೌನಕ್ಕೆ ಶರಣಾದರು. ಲಂಡನ್ನಲ್ಲಿ ಓದಿ, ಬೆಳೆದ ಹುಡುಗನೊಬ್ಬ ತನ್ನ ಮುಂದಿನ ಶಿಕ್ಷಣವನ್ನು ಪಾಕಿಸ್ತಾನದಲ್ಲಿ ಮುಂದುವರಿಸುತ್ತಾನೆಂದರೆ ಅವರಿಗೆ ನಂಬಲು ಆಗಲೇ ಇಲ್ಲ.
“ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತಕ್ಕೆ ಹೋಗಬಹುದಿತ್ತಲ್ಲ. ಹೇಗೂ ಅದು ನಮ್ಮ ದೇಶ,” ಬೀಜಿ ಹಾಗೂ ದಾರ್ಜಿ ಉದಾಸ ಮನಸ್ಸಿನಿಂದ ಹೇಳಿದರು.
“ನಾವು ಬೇಗ ನಮ್ಮೂರಿಗೆ ಹೊರಡಬೇಕು. ಮಗನ ಕುಟುಂಬವನ್ನು 3 ತಿಂಗಳ ಕಾಲ ಹತ್ತಿರದಿಂದ ನೋಡಿದೆ,” ಅದೊಂದು ಸಂಜೆ ಬೀಜಿ ದಾರ್ಜಿಗೆ ಹೇಳಿದಳು. ಈಗ ಅವರಿಗೆ ತಮ್ಮ ಊರಿನ ನೆನಪಾಗುತ್ತಿತ್ತು. ಅಲ್ಲಿಯವರು ದಾರ್ಜಿಗೆ ಅಪಾರ ಮಹತ್ವ ಕೊಡುತ್ತಿದ್ದರು. ಅವರ ಸಲಹೆ ಕೇಳಿಯೇ ಮುಂದುವರಿಯುತ್ತಿದ್ದರು. ಸತ್ವಿಂದನನ್ನು ಒಪ್ಪಿಸಿ ಟಿಕೆಟ್ ತೆಗೆಸಬೇಕೆಂದು ಅವನಿಗೆ ಹೇಳಲು ಅವನ ರೂಮಿಗೆ ಹೋಗುತ್ತಿರುವಾಗ ಸುನಿಯಲ್ ನ ರೂಮಿನಿಂದ ಅವರಿಗೆ ಧ್ವನಿ ಕೇಳಿಸಿತು, “ನಾನು ಖಲೀದ್ ಹಸನ್ಮಾತಾಡ್ತಿರೋದು.”
`ಸುನೀಯಲ್ ಖಲೀದ್ ಹಸನ್’ ದಾರ್ಜಿಗೆ ಅಚ್ಚರಿ!
ಅವರು ಸದ್ದು ಮಾಡದೆ ಬಾಗಿಲ ಬಳಿಯೇ ನಿಂತು ಮುಂದಿನ ಸಂಭಾಷಣೆ ಕೇಳಿಸಿಕೊಳ್ಳಲು ಕಾತುರರಾದರು.
“ನಾನು ಓಮರಾ ಶರೀಫ್ ಬಗ್ಗೆ ಕೇಳಿರುವೆ. ಅವರು ಇಲ್ಲಿಯೇ ಲಂಡನ್ನಲ್ಲಿ ಓದಿರುವ ಬಗ್ಗೆ, ಮೂರು ಬ್ರಿಟನ್ ನಾಗರಿಕರು ಹಾಗೂ ಒಬ್ಬ ಅಮೆರಿಕನ್ ನಾಗರಿಕನನ್ನು ಅಪಹರಿಸಿದ ಅಪರಾಧದಲ್ಲಿ ಭಾರತದಲ್ಲಿ ಸಿಕ್ಕಿಬಿದ್ದು. ಬಳಿಕ ಏರ್ ಇಂಡಿಯಾ ವಿಮಾನವೊಂದನ್ನು ಹೈಜಾಕ್ ಮಾಡಿ, ಅದರಲ್ಲಿನ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಓಮರ್ ಶರೀಫರನ್ನು ಮುಕ್ತಗೊಳಿಸಲಾಯಿತು.
ಓಮರ್ ಕೋಲ್ಕತ್ತಾದಲ್ಲಿ ಅಮೆರಿಕದ ಸಾಂಸ್ಕೃತಿಕ ಕೇಂದ್ರವೊಂದನ್ನು ಬಾಂಬ್ ಹಾಕಿ ಉಡಾಯಿಸಿದ `ವಾಲ್ ಸ್ಟ್ರೀಟ್’ ಪತ್ರಕರ್ತ ಡ್ಯಾನಿಯೆಲ್ ಪರ್ಲ್ರನ್ನು ಅಪಹರಿಸಿ ಕೊಲೆ ಮಾಡುವ ಗುತ್ತಿಗೆ ಪಡೆದಿದ್ದ. ಇದು 14 ವರ್ಷಗಳ ಹಿಂದಿನ ಮಾತು. ನಾನು ಈಗಲೂ ಓಮರ್ಶರೀಪರನ್ನು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುತ್ತೇನೆ. ಸಿರಿಯಾ ಸಾವಿರಾರು ಬ್ರಿಟನ್ ನಾಗರಿಕರು ಜಿಹಾದ್ ಗಾಗಿ ಹೋರಾಡುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ.”
ಸ್ವಲ್ಪ ಹೊತ್ತು ಸುನಿಯಲ್ ನಿಂದ ಏನೂ ಮಾತು ಕೇಳಿಸಲಿಲ್ಲ. ಅವನು ಅತ್ತ ಕಡೆಯ ಸಂಭಾಷಣೆ ಆಲಿಸುತ್ತಿದ್ದ ಅನಿಸುತ್ತೆ. ನಂತರ ಮಾತು ಮುಂದುವರಿಸಿದ, “ನೀವು ಅದರ ಬಗ್ಗೆ ಯೋಚಿಸಬೇಡಿ. ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ಮೇಲೆ ನಮ್ಮದು ಪರಿಪೂರ್ಣ ವ್ಯವಸ್ಥೆ ಇದೆ. ಎಲ್ಲಿಯವರೆಗೆ ಅಂದರೆ ಬ್ರೆಡ್ ಜೊತೆಗೆ ಸೇವಿಸಲು ನ್ಯೂಟ್ರಿಯಲ್ ಕೂಡ ಸಿಗುತ್ತದೆಂದು ನಾವು ತಿಳಿಸುತ್ತೇವೆ. ನೀವು ನಮ್ಮ ಸೌಲಭ್ಯಗಳ ಬಗ್ಗೆ ಗಮನಕೊಟ್ಟರೆ ನಾವು ಕೂಡ ಹಿಂದೇಟು ಹಾಕುವುದಿಲ್ಲ. ಯಾವ ಗುರಿಗಾಗಿ ನಾವು ಹೆಜ್ಜೆ ಹಾಕುತ್ತಿದ್ದೇವೆ, ಅದನ್ನು ಈಡೇರಿಸಿಯೇ ಬಿಡುತ್ತೇವೆ.
“ನಾನು ಖಲೀದ್ ಹಸನ್ ಪ್ರಮಾಣ ಮಾಡುವುದೇನೆಂದರೆ, ನಾನು ನನ್ನ ಕೊನೆಯ ಉಸಿರಿರುತನಕ ಜಿಹಾದ್ ಗಾಗಿ ಹೋರಾಡುತ್ತೇನೆ. ಯಾರೂ ಇದರಲ್ಲಿ ಅಡ್ಡಿಯನ್ನುಂಟು ಮಾಡುತ್ತಾರೊ? ಅವರನ್ನು ಸದೆಬಡಿಯುತ್ತೇನೆ. ಜಗತ್ತು ಅದನ್ನು ಸದಾ ನೆನಪಲ್ಲಿ ಇಟ್ಟುಕೊಂಡಿರುತ್ತದೆ.”
`ನನ್ನ ಕಿವಿಗಳು ಇದೇನು ಕೇಳಿಸಿಕೊಳ್ಳುತ್ತಿವೆ,’ ಎಂದು ದಾರ್ಜಿಗೆ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಅವರ ಮನಸ್ಸಿನಲ್ಲಿ ಕೋಲಾಹಲ ಶುರುವಾಯಿತು. ತಲೆ ಸಿಡಿದಂತೆ ಭಾಸವಾಗತೊಡಗಿತು. ನಿಧಾನವಾಗಿ ಹೆಜ್ಜೆ ಇಡುತ್ತ ಅವರ ರೂಮಿನತ್ತ ಹೋದರು. ಹಾಗೆಯೇ ಹಾಸಿಗೆಯ ಮೇಲೆ ಬಿದ್ದುಕೊಂಡರು. ತಮ್ಮೆಲ್ಲ ಇಂದ್ರಿಯಗಳು ಪ್ರಜ್ಞೆ ಕಳೆದುಕೊಂಡಂತೆ ಭಾಸವಾಗತೊಡಗಿತು.
ದಾರ್ಜಿ ಶೂನ್ಯದತ್ತ ನಿರೀಕ್ಷಿಸುತ್ತ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದರು. 15 ನಿಮಿಷಗಳ ಬಳಿಕ ಅವರು ಹೇಗೊ ತಮ್ಮನ್ನು ಸಂಭಾಳಿಸುತ್ತ ಎದ್ದು ಕುಳಿತುಕೊಂಡರು. ತಾವೇನು ಕೇಳಿಸಿಕೊಂಡಿದ್ದರೋ ಅದರ ಬಗ್ಗೆ ವಿಶ್ಲೇಷಣೆ ಮಾಡತೊಡಗಿದರು. ಅವನು ಯಾವುದಾದರೂ ಭಯೋತ್ಪಾದಕರ ಸಂಘದ ಸದಸ್ಯನಾಗಿದ್ದಾನೆಯೇ? ಧರ್ಮ ಪರಿವರ್ತನೆ ಮಾಡಿಕೊಂಡಿದ್ದಾನೆಯೇ? ಇದೇ ನೆಪದಲ್ಲಿ ಅವನು ಪಾಕಿಸ್ತಾನಕ್ಕೆ ಹೋಗುತ್ತಿದ್ದಾನೆಯೇ? ಅವನ ಕುಟುಂಬದ ಸ್ಥಿತಿ ಏನಾಗಬಹುದು? ಇದನ್ನು ಯೋಚಿಸಿ ಯೋಚಿಸಿ ಅವರು ದಣಿದು ಹೋಗಿದ್ದರು. ಕಳೆಯಿಲ್ಲದ ಮುಖ, ನಿಶ್ಶಬ್ದ ವೇದನೆ, ಶೋಕದಲ್ಲಿ ಅವರ ಹೃದಯ ಕಸಿವಿಸಿಗೊಂಡಿತ್ತು. ವಾದ ಪ್ರತಿವಾದದಿಂದ ಏನಾದರೂ ಲಾಭವಾದೀತೇ? ಅವನಿಗೆ ಪ್ರೀತಿಯಿಂದ ತಿಳಿಸಿ ಹೇಳಿದರೆ ಏನಾದರೂ ಪ್ರಯೋಜನ ಆಗಬಹುದೆ? ಇದೆಲ್ಲ ಯೋಚಿಸಿ ಅವರ ತಲೆ ಸಿಡಿಯುತ್ತಿತ್ತು.
ಜಿಹಾದ್ನ ಕಪ್ಪು ಧ್ವಜವನ್ನು ಮುಕ್ತವಾಗಿ ಲಂಡನ್ನಿನ ಬೀದಿಗಳಲ್ಲೂ ಹಾರಿಸುವಂತಾಯಿತೆ ಅಥವಾ ಆಕ್ಸ್ ಫರ್ಡ್ ಸ್ಟ್ರೀಟ್ ಅಥವಾ ಇತರೆ ಸ್ಥಳಗಳ ಮೇಲೂ ಐಇಎಸ್ನ ಕಪ್ಪು ಛಾಯೆ ಆರಿಸಿಕೊಂಡುಬಿಟ್ಟಿತೆ? ಎಂದು ಯೋಚಿಸುತ್ತಿರುವಾಗಲೇ ಅದು ಈಗ ತಮ್ಮಂಥ ಮನೆಗಳನ್ನು ತಲುಪಿಬಿಟ್ಟಿತೆ ಎಂದು ಯೋಚಿಸತೊಡಗಿದರು. ಸುಶಿಕ್ಷಿತ, ಶ್ರೀಮಂತ ಮನೆತನದ ಮಕ್ಕಳು ಕೂಡ ಅವರ ಕಪಿಮುಷ್ಟಿಗೆ ಸಿಲುಕಿ ತಮ್ಮ ಉಜ್ವಲ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳುತ್ತಿರುವುದೇಕೆ ಎಂದು ಅವರ ಮನಸ್ಸು ಮಮ್ಮಲ ಮರುಗುತ್ತಿತ್ತು.
ಆದರೆ ದಾರ್ಜಿ ಸೋಲು ಒಪ್ಪುವ ವ್ಯಕ್ತಿಯಾಗಿರಲಿಲ್ಲ. ಅವರಿಗೆ ಆಘಾತವಾಗಿತ್ತು ನಿಜ. ಅವರು ಕೆಲವು ಹೊತ್ತು ದಿಗ್ಮೂಢರಾಗಿದ್ದರು ನಿಜ. ಆದರೆ ಅವರು ಈ ವ್ಯಥೆಯ ಮುಂದೆ ಮಂಡಿಯೂರುವ ಪ್ರವೃತ್ತಿಯರಾಗಿರಲಿಲ್ಲ. ವಿಷಯವನ್ನು ಹೇಗೆ ಹಿಡಿತಕ್ಕೆ ತಂದುಕೊಳ್ಳಬೇಕೆಂದು ಅವರು ವಿಚಾರ ಮಾಡಲಾರಂಭಿಸಿದರು.
ಬೆಳಗ್ಗೆ ಕೇಟ್ಳ ದುಸ್ಥಿತಿಯನ್ನು ಕಂಡು ಅತ್ತೆ ಬೀಜಿ ಕೇಳಿಯಬಿಟ್ಟರು, “ಏನಾಯ್ತು? ನೀನೇಕೆ ಇಷ್ಟು ಆತಂಕದಲ್ಲಿರುವೆ?”
ಕೇಟ್ ಹೇಳಿದ್ದನ್ನು ಕೇಳಿ ಅವರ ಕಾಲ ಕೆಳಗಿನ ನೆಲ ಕುಸಿದಂತೆ ಭಾಸವಾಯಿತು. ಅನೀಟಾ ಗರ್ಭಿಣಿಯಾಗಿದ್ದಳು. ಆಕೆಯ ಬಾಯ್ ಫ್ರೆಂಡ್ ಕಪ್ಪು ಹುಡುಗ ಬೇರೊಂದು ಕಾಲೇಜಿಗೆ ಅಡ್ಮಿಷನ್ ಪಡೆದು ಬೇರೊಂದು ನಗರಕ್ಕೆ ಹೊರಟು ಹೋಗಿದ್ದಾನೆ. ಅನೀಟಾ ಗಾಬರಿಗೊಂಡು ಈ ವಿಷಯವನ್ನು ತನ್ನ ತಾಯಿಯ ಮುಂದೆ ಹೇಳಿದ್ದಳು. ಬೀಜಿಗೆ ಮೊಮ್ಮಗಳ ಕೆನ್ನೆಗೆ ಒಂದು ಬಾರಿಸಿ ಬುದ್ಧಿ ಹೇಳಬೇಕು ಎನಿಸಿತು. ಆದರೆ ಮರುಕ್ಷಣವೇ ಮೊಮ್ಮಗಳ ಬಗ್ಗೆ ಪ್ರೀತಿ ಮಮತೆ ಉಕ್ಕಿ ಹರಿಯಿತು. ಕೇಟ್ ಜೊತೆಗೆ ಅಜ್ಜಿ ಕೂಡ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಹೋದರು.
ಅಜ್ಜಿ ಅನೀಟಾ ಹೆಸರಿನ ಬದಲಿಗೆ ಅಭ್ಯಾಸದ ಪ್ರಕಾರ “ಅನೀತಾ,” ಎಂದು ಕರೆಯುತ್ತಿದ್ದರೆ ಅವಳೀಗ ಮುಖ ಸಿಂಡರಿಸುತ್ತಿರಲಿಲ್ಲ. ಕೇಟ್ಗೂ ಈ ಬದಲಾವಣೆ ಗಮನಕ್ಕೆ ಬಂದಿತ್ತು. ಅದರಿಂದಾಗಿ ಅವಳಿಗೆ ಬಹಳ ಖುಷಿಯಾಗಿತ್ತು. ಅಜ್ಜಿ ಮೊಮ್ಮಗಳ ಕೈಹಿಡಿದು ಅವಳಿಗೆ ತಮ್ಮ ತಾಯ್ನಾಡಿನ ಹಳ್ಳಿಗಳ ಕಥೆಗಳನ್ನು ಹೇಳುತ್ತಿದ್ದಳು. ಇದೇ ನೆಪದಲ್ಲಿ ಅಜ್ಜಿ ಮೊಮ್ಮಗಳಿಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿದ್ದರು. ಅಜ್ಜಿಯ ಕಥೆಗಳು ಸುಮ್ಮನೆ ಜನಪ್ರಿಯವಾಗಿಲ್ಲ. ಅವು ಮಕ್ಕಳಿಗೆ ಒಳ್ಳೆಯ ನೀತಿ ಬೋಧಿಸುತ್ತಿದ್ದವು. ಉತ್ತಮ ಸಂಸ್ಕಾರನ್ನು ಬಿಂಬಿಸುತ್ತಿದ್ದವು. ಈಗ ಅನೀಟಾಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪರಿಚಯ ಆಗುತ್ತಿತ್ತು. ದೊಡ್ಡವರ ಬಗ್ಗೆ ಗೌರವ ಭಾವನೆ ಮೂಡುತ್ತಿತ್ತು.
ಅನೀಟಾಳ ಬಗ್ಗೆ ಬೀಜಿ ಹಾಗೂ ದಾರ್ಜಿಗೆ ಈಗ ನಿಶ್ಚಿಂತ ಭಾವನೆಯಿತ್ತು. ಆದರೆ ತಾತನ ಚಿಂತೆ ಮಾತ್ರ ಯಥಾಸ್ಥಿತಿ ಮುಂದುವರಿದಿತ್ತು.
ಸಂಜೆ ಕೇಟ್ ಆಫೀಸಿನಿಂದ ವಾಪಸ್ಸಾದ ಬಳಿಕ ಎಲ್ಲರಿಗೂ ಸೂಪ್ ಮಾಡಿಕೊಟ್ಟಳು. ಅನೀಟಾ ಮಹಡಿಯಲ್ಲಿ ಸೂಪ್ ಸ್ಟಿಕ್ನ ಆನಂದ ಪಡೆಯುವುದರಲ್ಲಿ ಮಗ್ನಳಾಗದ್ದಳು. ಸತ್ವಿಂದರ್ ಇನ್ನೂ ಮನೆಗೆ ವಾಪಸ್ಸಾಗಿರಲಿಲ್ಲ.
“ಮಗು ಸುನಿಯಲ್, ಫ್ರಾನ್ಸ್ ನ ವೆನೀಸ್ ನಗರದಲ್ಲಿ ನಡೆದ ಉಗ್ರರ ಹಲ್ಲೆಯ ಬಗ್ಗೆ ಓದಿದೆಯಾ? ಆ ಉಗ್ರರಿಗೆ ಎಂದೂ ಖುಷಿ ಸಿಗುವುದಿಲ್ಲ. ಅವರು ಶಾಂತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ನಿರಪರಾಧಿಗಳನ್ನು ಸಾಯಿಸುತ್ತಿರುತ್ತಾರೆ. ಅವರನ್ನು ಈ ಮಾನವ ಜಗತ್ತು ಎಂದೂ ಕ್ಷಮಿಸುವುದಿಲ್ಲ.”
ತಾತ ಹೇಳಿದ ಈ ಮಾತುಗಳು ಸ್ವಲ್ಪ ಮನಸ್ಸಿಗೆ ತಟ್ಟಿದಂತೆ ಕಾಣಿಸತೊಡಗಿತ್ತು. ಸುನಿಯಲ್ ಉಗ್ರರ ಪರ ವಹಿಸುತ್ತ, “ಇವರು ಯಾರು ಎಂಬುದು ನಿಮಗೆ ಏನಾದರೂ ಗೊತ್ತೆ? ಇವರ ಉದ್ದೇಶ, ವಿಚಾರಧಾರೆ ಏನು ಎಂಬುದು ನಿಮಗೆ ತಿಳಿದಿದೆಯೇ?” ಯಾವಾಗ ನೋಡಿದರೂ ತಮ್ಮದೇ ಪ್ರತಿಪಾದನೆ ಮಾಡುತ್ತಾರೆ. ಅವರು ಉಗ್ರರಲ್ಲ ಜಿಹಾದಿಗಳು. ಜಿಹಾದ್ ಹೆಸರು ನೀವು ಕೇಳಿದ್ದೀರಾ?”
“ನಾನು ಭಾರತದಲ್ಲಿ ಇರ್ತೀನಿ ಅನ್ನೋದು ನಿನಗೆ ಮರೆತುಹೋಯ್ತಾ? ಉಗ್ರರು ತಮ್ಮ ಜಾಲವನ್ನು ಅದೆಷ್ಟೋ ವರ್ಷಗಳಿಂದ ಭಾರತದಲ್ಲೂ ಹೆಣೆದಿದ್ದಾರೆ. ನಾನೂ ಅದೇ ಯೋಚನೆಯ ಮೇಲೆ ಪ್ರಹಾರ ಮಾಡುತ್ತಿರುವೆ. ಜಿಹಾದ್ನಿಂದ ಸಮಸ್ಯೆ ಬಗೆಹರಿಯುತ್ತದೆಯೇ? ವಿದೇಶದಲ್ಲಿರುವವರ ಮಕ್ಕಳು ಇದರಲ್ಲಿ ಸಿಲುಕುತ್ತಿರುವುದೇಕೆ? ಅವರು ಮುಕ್ತವಾಗಿ ಬಂದೂಕು ತೆಗೆದುಕೊಂಡು ಹೊರಗೆ ಬರುವುದಿಲ್ಲವೇಕೆ? ಫೋನ್ ಮತ್ತು ಸೋಶಿಯಲ್ ಮೀಡಿಯಾದ ಹಿಂದೆ ಕುಳಿತು ಬೇರೆಯವರಿಗೆ ಏಕೆ ನಿರ್ದೇಶನ ಕೊಡುತ್ತಿದ್ದಾರೆ? ಬೇರೊಬ್ಬರ ಮಕ್ಕಳನ್ನು ಏಕೆ ಮೂರ್ಖರಾಗಿಸುತ್ತಿದ್ದಾರೆ?
“ನಿಮ್ಮ ಪೀಳಿಗೆ ಇಂಟರ್ ನೆಟ್ನಲ್ಲಿ ನಿಪುಣರಾಗಿದ್ದೀರಿ. ನೀವೊಮ್ಮೆ ಪರಿಶೀಲಿಸಿ ನೋಡಬೇಕು, ಉಗ್ರರಾಗಿ ಹತರಾದವರ ಸ್ಥಿತಿ ಏನಾಗುತ್ತದೆ? ಬಡವರು ಹಣದ ಆಮಿಷಕ್ಕೆ ಮರುಳಾಗಿ ಅವರು ಹೇಳಿದಂತೆ ಕೇಳುತ್ತಾರೆ. ಇನ್ನೊಂದೆಡೆ ಉಗ್ರರು ಶ್ರೀಮಂತರ ಮಕ್ಕಳ ಬ್ರೇನ್ ವಾಶ್ ಮಾಡುತ್ತಾರೆ. ಅವರು ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಅವರ ಇಡೀ ಕುಟುಂಬವೇ ಇದರಿಂದ ನಾಶವಾಗಿ ಹೋಗುತ್ತದೆ. ಬೇರೆಯವರ ಮನೆಯ ದೀಪವನ್ನು ಆರಿಸುವ ಹಕ್ಕು ಅವರಿಗೆ ಕೊಟ್ಟವರಾರು?”
ದಾರ್ಜಿ ಈ ಮಾತುಗಳನ್ನು ನೇರವಾಗಿ ಹೇಳಿರಲಿಲ್ಲ. ವಾಸ್ತವ ಸ್ಥಿತಿಯನ್ನು ನೋಡಿ ಹೇಳಿದ್ದರು. ಆದರೂ ಅವರು ತಮ್ಮ ಮಾತುಗಳ ಮುಖಾಂತರ ಸುನಿಯಲ್ ಚಂಚಲ ವಿಚಾರಗಳಿಗೆ ಒಂದಿಷ್ಟು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಸುನಿಯಲ್ ಶೀತ ಗಾಳಿಯಲ್ಲೂ ತನ್ನ ಹಣೆಯಲ್ಲಿ ಬರುತ್ತಿದ್ದ ಬೆವರನ್ನು ಒರೆಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ. ತನ್ನ ವಿಚಾರಗಳಿಗೆ ಕಡಿವಾಣ ಬಿದ್ದಿದ್ದರಿಂದಾಗಿ ಅವನು ಸ್ವಲ್ಪ ವ್ಯಥೆಗೊಂಡವನಂತೆ ಕಾಣುತ್ತಿದ್ದ. ತಾತನ ಮಾತುಗಳು ಅವನಿಗೆ ಮುಳ್ಳಿನಂತೆ ಚುಚ್ಚುತ್ತಿದ್ದವು.
ಮುಂದಿನ 3 ದಿನಗಳ ಕಾಲ ಸುನಿಯಲ್ ಕೋಣೆಯಿಂದ ಹೊರಗೆ ಬರಲೇ ಇಲ್ಲ. ಅವನ ಕೋಣೆಯಲ್ಲಿ ಬೆಳಕು ಮೂಡುತ್ತಿತ್ತು. ಆಗಾಗ ಧ್ವನಿ ಕೂಡ ಕೇಳಿಬರುತ್ತಿದ್ದವು. ಕುಟುಂಬದ ಇತರೆ ಸದಸ್ಯರು ಈ ಬಗ್ಗೆ ಏನೂ ತಿಳಿದಿರಲಿಲ್ಲ. ಹೀಗಾಗಿ ಅವರು ನಿಶ್ಚಿಂತರಾಗಿದ್ದರು. ದಾರ್ಜಿಯ ಹೆಜ್ಜೆಗಳು ಮಾತ್ರ ಸುನಿಯಲ್ನ ಕೋಣೆಯ ಕಡೆಗೆ ಹೆಚ್ಚು ಸುತ್ತಾಡುತ್ತಿದ್ದವು. ಮಾರನೇ ದಿನ ಸುನಿಯಲ್ ಕೋಣೆಯ ಬಾಗಿಲು ತೆಗೆದಾಗ, ಎದುರು ತಾತನನ್ನು ಕಂಡು ಅವನ ಮನಸ್ಸಿಗೆ ಕಸಿವಿಸಿಯಾಯಿತು. ಅವನು ತಕ್ಷಣವೇ ಅಮ್ಮ ಕೇಟ್ ಬಳಿ ಹೋಗಿ ಹೇಳಿದ, “ಮಾಮ್, ನಾನು ಪಾಕಿಸ್ತಾನಕ್ಕೆ ಹೋಗ್ತಿಲ್ಲ. ಅವು ಅಷ್ಟೊಂದು ಒಳ್ಳೆಯ ಕೋರ್ಸ್ಗಳಲ್ಲ ಎನ್ನುವುದು ನನಗೆ ಗೊತ್ತಾಯಿತು.” ಅಲ್ಲಿಯೇ ನಿಂತಿದ್ದ ದಾರ್ಜಿ ಅವನನ್ನು ಬಾಚಿ ತಬ್ಬಿಕೊಂಡರು. ವಾರಾಂತ್ಯದಲ್ಲಿ ಸತ್ವಿಂದರ್ ಬೀಜಿ ಹಾಗೂ ದಾರ್ಜಿ ಭಾರತಕ್ಕೆ ವಾಪಸ್ಸಾಗಲು ಟಿಕೆಟ್ ಮಾಡಿಸಲು ಕಂಪ್ಯೂಟರ್ ಮುಂದೆ ಕುಳಿತಾಗ ದಿನಾಂಕ ಹಾಗೂ ವೇಳೆ ಬಗ್ಗೆ ತಿಳಿದು ಅನೀಟಾ,“ತಾತಾ, ನಾನು ನಿಮ್ಮ ಜೊತೆ ಭಾರತಕ್ಕೆ ಬರಬಹುದೆ?” ಎಂದು ಕೇಳಿದಾಗ ಅಜ್ಜಿ ಅವಳನ್ನು ತಬ್ಬಿಕೊಂಡು, “ಅದು ನಿನ್ನದೇ ಮನೆ ಅನಿತಾ, ನಿನಗೆ ಎಷ್ಟು ದಿನ ಇರಬೇಕು ಅನ್ನಿಸುತ್ತದೋ ಅಷ್ಟು ದಿನ ನೀನು ಅಲ್ಲಿರಬಹುದು,” ಎಂದು ಅವಳಿಗೆ ಹೇಳಿದರು.
“ನನ್ನನ್ನು ಕೂಡ ಇಲ್ಲಿಯೇ ಬಿಟ್ಟು ಹೋಗತ್ತೀರಾ ತಾತಾ?” ಎಂದು ಸುನಿಯಲ್ ಬಿಕ್ಕುತ್ತಾ ಕೇಳಿದ.
ಹೋಗುವ ದಿನ ಬಂದೇಬಿಟ್ಟಿತು. ವಿಮಾನದಲ್ಲಿ ಕುಳಿತ ಬೀಜಿ ಮತ್ತು ದಾರ್ಜಿ ಮೋಡಗಳತ್ತ ದೃಷ್ಟಿಹಾಕುತ್ತ ಅಲ್ಲಿ ಕುಟುಂಬದವರೆಲ್ಲ ಸೇರಿ ಸೆಲ್ಛೀ ತೆಗೆದುಕೊಳ್ಳುತ್ತಿರುವಂತೆ ಕಂಡಿತು.