ಅಕಾಲದಲ್ಲಿ ಪತಿಯನ್ನು ಕಳೆದುಕೊಂಡು ನಿರಂತರ ದುಃಖಕ್ಕೀಡಾಗಿದ್ದ ಸವಿತಾಳಿಗೆ ಸುರೇಶ್‌ರ ಸಾಂಗತ್ಯ ಬಹಳ ಪ್ರಿಯವಾಗತೊಡಗಿತು. ಇಲ್ಲದ್ದಕ್ಕಾಗಿ ತುಡಿಯುವುದೇ ಜೀವನವಲ್ಲ…. ಆದರೆ ಸವಿತಾಳ ಪಾಲಿಗೆ ಅದು ಅಷ್ಟು  ಸುಲಭವಾಗಿರಲಿಲ್ಲ……

ಸವಿತಾ ಮತ್ತೆ ಮತ್ತೆ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಇಣುಕುತ್ತಿದ್ದಳು. ಪಾರ್ವತಿ ಇದುವರೆಗೂ ಇನ್ನೂ ಬಂದಿರಲಿಲ್ಲ. ಅನಗತ್ಯವಾಗಿ ಸಾಮಾನು ತರಿಸಿದೀನಲ್ಲ, ಇದ್ದುದರಲ್ಲಿ ಅಡ್ಜಸ್ಟಟ್ ಮಾಡಿಕೊಳ್ಳಬೇಕಿತ್ತು ಎಂದು 10ನೇ ಸಲ ಅಂದುಕೊಂಡಳು. ಸ್ವಲ್ಪ ಕಡಿಮೆ ಆಗುತ್ತಿತ್ತೇನೋ…. ಅದೇನೂ ದೊಡ್ಡ ವಿಷಯವಲ್ಲ, ಅನ್ಯಾಯವಾಗಿ ಆ ಪಾಪದವಳನ್ನು ಹೊರಗಟ್ಟಿದೆನಲ್ಲ ಎಂದು ಮತ್ತೆ ಮತ್ತೆ ಪೇಚಾಡಿಕೊಂಡಳು. ಅಷ್ಟರಲ್ಲಿ ಪಾರ್ವತಿ ಇವರ ಅಪಾರ್ಟ್‌ಮೆಂಟ್‌ ಮೇಯ್ನ್ ಗೇಟ್ ಬಳಿ ಬರುತ್ತಿರುವುದು ಕಾಣಿಸಿ, ಸಮಾಧಾನದ ನಿಟ್ಟುಸಿರಿಟ್ಟಳು. ಅವಳು ಬೆಲ್‌ ಮಾಡುವ ಮೊದಲೇ ಓಡಿ ಹೋಗಿ ಬಾಗಿಲು ತೆರೆದಳು. ಏದುಸಿರು ಬಿಡುತ್ತಾ ಒಳಬಂದ ಪಾರ್ವತಿ ನೇರವಾಗಿ ಎರಡು ಚೀಲದ ಸಾಮಗ್ರಿ ಹೊರಗಿನ ಬಾಲ್ಕನಿಯ ಬಿಸಿಲಿಗಿಟ್ಟು, ಉಸ್ಸಪ್ಪ ಎಂದು ಮಾಸ್ಕ್ ತೆಗಿದಿರಿಸಿ. ಬಾತ್‌ರೂಮಿಗೆ ಹೋಗಿ ಲಿಕ್ವಿಡ್‌ ಸೋಪ್‌ನಿಂದ ಮುಖ, ಕೈ ತೊಳೆದು ಒರೆಸುತ್ತಾ ಹೊರಬಂದು ನೆಲದಲ್ಲಿ ಕುಳಿತಳು.

“ಅಯ್ಯೋ ಸಾಕಾಯ್ತಕ್ಕಾ…. 2-3 ಅಂಗಡಿ ಅಲೆದು ಇಷ್ಟನ್ನೂ ತಗೊಂಡು ಬಂದೆ. ಎಲ್ಲಾ ಕಡೆ ಉದ್ದುದ್ದ ಕ್ಯೂ….. ನಮ್ಮ ಅಪಾರ್ಟ್‌ಮೆಂಟ್‌ದೇ ದೊಡ್ಡ ಸೂಪರ್‌ ಮಾರ್ಕೆಟ್‌ ಇದೆಯಲ್ಲ…… ಅಲ್ಲಿ ಕ್ಯೂನಲ್ಲಿ 15 ನಿಮಿಷ ನಿಂತು ಸಾಕಾಯ್ತು…. ನಂತರ ನಾನು ಪಕ್ಕದ ರೋಡು, ಅದರ ನಂತರದ ರೋಡಿಗೆ ಹೋಗಿ ಇಷ್ಟು ತರಬೇಕಾಯ್ತು….” ಎಂದು ಎದ್ದು ಫ್ಯಾನ್‌ ಸ್ವಿಚ್‌ ಒತ್ತಿ ಅದರಡಿ ಕುಳಿತಳು.

“ಓಹ್‌…. ಇಷ್ಟು ಕಷ್ಟ ಯಾಕೆ ಪಡಬೇಕಾಯ್ತು? ಸಿಗದಿದ್ದರೆ ಬೇಡ…. ಸಿಗಲಿಲ್ಲ ಅಂತ ವಾಪಸ್‌ ಮನೆಗೆ ಬರಬಾರದೇ?”

“ಹಾಗಲ್ಲಕ್ಕಾ…. ಈ ಹಾಳು ಲಾಕ್‌ಡೌನ್‌ ಇನ್ನೂ ಎಷ್ಟು ದಿನ ಹೀಗೇ ಇರುತ್ತೋ ಏನೋ…. ದಿನೇದಿನೇ ನಮ್ಮ ಪರಿಸ್ಥಿತಿ ಕಂಗೆಡುವಂತಾಗಿದೆ. ಹೊರಗೆ ಓಡಾಡಿದಂತೆಲ್ಲ ಅಪಾಯಕ್ಕೆ ಬಲಿ ಆದಂತೆಯೇ…. ನಿಮಗೆ ಆಮೇಲೆ ಏನೂ ತೊಂದರೆ ಆಗಬಾರದು ಅಂತ ನನ್ನ ಉದ್ದೇಶ.”

“ಯಾಕೆ ನನ್ನ ಇಷ್ಟೊಂದು ಹಚ್ಚಿಕೊಂಡು ಸಾಯ್ತೀಯಾ? ನೀನು ಸುಧಾರಿಸ್ಕೋ, ನಾನು ಒಂದಿಷ್ಟು ಟೀ ಮಾಡಿ ತರ್ತೀನಿ….. ಅಷ್ಟರಲ್ಲಿ ಬಿಸಿಲಿಗಿಟ್ಟ ಆ ಸಾಮಾನು ಸ್ಯಾನಿಟೈಸ್‌ ಮಾಡಿ ಒಳಗೆ ತಂದಿಟ್ಟುಕೊಳ್ಳೋಣ,” ಎನ್ನುತ್ತಾ ಸವಿತಾ ಟೀ ಮಾಡಲು ಹೊರಟಳು.

ಅಂದು ರಾತ್ರಿ ಮಲಗಿದ ಸವಿತಾಳಿಗೆ ನಿದ್ದೆ ಮಾರು ದೂರ ಹೋಗಿತ್ತು. ನಿಜಕ್ಕೂ ಈ ಪಾರ್ವತಿಯಂಥ ನಿಷ್ಠಾವಂಥ ಆಳು ತನಗೆ ಜೊತೆಯಾಗಿ ಸಿಕ್ಕಿರದಿದ್ದರೆ ತನ್ನ ಗತಿ ಏನಾಗುತ್ತಿತ್ತೋ? ಪತಿಯ ಮರಣದ ನಂತರ ಅನಿವಾರ್ಯವಾಗಿ ಕೆಲಸಕ್ಕೆ ಸೇರಬೇಕಾದ ಸವಿತಾ, ಬೆಂಗಳೂರಿನ ಯಾವುದೋ ಖಾಸಗಿ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್‌ ಆಗಿದ್ದಳು. ಅಲ್ಲಿ ಈ ಪಾರ್ವತಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಗಂಡನ ಸತತ ಶೋಷಣೆಯಿಂದ ಕಂಗೆಟ್ಟಿದ್ದ ಪಾರ್ವತಿ ಅವನ ಕುಡಿತ, ಹೊಡೆತ ಬಡಿತಗಳಿಗೆ ದಿನದಿನ ನಲುಗಿಹೋಗಿದ್ದಳು. ಅತಿ ಸೂಕ್ಷ್ಮಮತಿಯಾದ ಸವಿತಾ ಇವಳ ಬಾಡಿಹೋದ ಮುಖ ಕಂಡಾಗಲೆಲ್ಲ ಅವಳು ಜೀವನದಲ್ಲಿ ಬಹಳ ನೋವು ಉಂಡಿದ್ದಾಳೆ ಎಂಬುದನ್ನು ಗಮನಿಸಿ ಆದಷ್ಟೂ ಸಾಂತ್ವನಪೂರ್ವಕವಾಗಿ ವಾತ್ಸಲ್ಯದಿಂದ ನಡೆದುಕೊಳ್ಳುತ್ತಿದ್ದಳು. ಪಾರ್ವತಿಯ ಸಂಬಳದಿಂದ ಬದುಕು ನಡೆಸುತ್ತಿದ್ದ ಅವಳ ಕುಡುಕ ಗಂಡ, ಅವಳನ್ನು ಹೊಡೆದು ಸಾಯಿಸುವುದೇ ಘನಕಾರ್ಯ ಎಂದು ಭಾವಿಸಿದ್ದ. ಅವರಿಗಿದ್ದ ಒಬ್ಬಳೇ ಮಗಳು ರತ್ನಾಳ ಮದುವೆಯಾಗಿ ಸುಖವಾಗಿದ್ದಳು. ಆ ಸಂದರ್ಭದಲ್ಲಿ ಪಾರ್ವತಿಯ ಕಷ್ಟ ಅರಿತ ಸವಿತಾ ತಾನೇ ಮುಂದೆ ಬಂದು ಪಾರ್ವತಿಗೆ ಬೆಂಬಲವಾಗಿ ನಿಂತದ್ದಲ್ಲದೆ, ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಅವಳ ಗಂಡನನ್ನು ಜೈಲಿಗೆ ಹಾಕಿಸಿದಳು. ಎಲ್ಲವನ್ನೂ ಕಳೆದುಕೊಂಡು ಒಬ್ಬಂಟಿಯಾಗಿದ್ದ ಪಾರ್ವತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಳ್ಳುವ ಸಂದರ್ಭದಲ್ಲಿ, ಮುಂದೆ ಅವಳು ತನಗೆಂಥ ಆಧಾರ ಆಗಬಲ್ಲಳು ಎಂದು ಸವಿತಾಳಿಗೆ ಅಂದಾಜಿರಲಿಲ್ಲ. ಈ ರೀತಿ ಮಾನವೀಯತೆಯ ಸಂಬಂಧ ಅವರಿಬ್ಬರನ್ನೂ ಬಂಧಿಸಿತ್ತು.

ಸವಿತಾಳ ಪತಿ ಮದುವೆಯಾದ ವರ್ಷಾಂತ್ಯದಲ್ಲೇ ಒಂದು ಆ್ಯಕ್ಸಿಡೆಂಟ್‌ನಲ್ಲಿ ತೀರಿಕೊಂಡಿದ್ದ. ಪತಿಯ ನೆನಪಾಗಿ ಇದ್ದದ್ದು ಒಬ್ಬನೇ ಮಗ. ಅವನನ್ನು ಬೆಳೆಸಿ, ಓದಿಸಿ ಆರೋಗ್ಯಕರ ನಾಗರಿಕನನ್ನಾಗಿಸುವುದೇ ಅವಳ ಗುರಿಯಾಗಿತ್ತು. ಮಗ ಮುಂದೆ ಮದುವೆಯಾಗಿ ಹೆಂಡತಿ ಜೊತೆ ಕೆನಡಾದಲ್ಲೇ ಸೆಟಲ್ ಆಗಿಬಿಟ್ಟ. ಕೆಲಸದ ನಿಮಿತ್ತ ಅವರಿಬ್ಬರೂ ಆತ್ಮೀಯವಾಗಿ ಕರೆದರೂ ಸವಿತಾ ಮಾತ್ರ ಬೆಂಗಳೂರು ಬಿಟ್ಟು ಅಲ್ಲಿಗೆ ಹೋಗಲು ಸಿದ್ಧಳಿರಲಿಲ್ಲ. ತಾನು ಅಲ್ಲಿಗೆ ಹೋಗಿ ಅವರಿಗೆ ಹೊರೆಯಾಗಬಾರದೆಂಬುದೇ ಅವಳ ಕಾಳಜಿಯಾಗಿತ್ತು. ಅವಳಿಗೆ ಇನ್ನೂ 10 ವರ್ಷಗಳ ಸರ್ವೀಸ್‌ ಬಾಕಿ ಇತ್ತು. ಸ್ವಾವಲಂಬಿ ಸವಿತಾ ತನ್ನ ಸಂಪಾದನೆಯ ಆಧಾರದಿಂದ ಬದುಕು ಮುಂದುವರಿಸಿದ್ದಳು.

ಮಗ ಕೆನಡಾಗೆ ಹೋದಾಗಿನಿಂದ ಒಂಟಿತನ ಸವಿತಾಳ ಬದುಕಿನ ಹೊಸ ಅಧ್ಯಾಯವಾಯ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಬಹಳ ವ್ಯಸ್ತಳಾಗಿರುತ್ತಿದ್ದಳು. ಆದರೆ ರಜೆ ಬಂದಾಗಲೆಲ್ಲ ಮತ್ತದೇ ಏಕಾಂಗಿತನದ ಬೇಸರ. ಆದರೆ ಇದೇ ಸಂದರ್ಭದಲ್ಲಿ ಪಾರ್ವತಿ ಅವಳೊಂದಿಗೆ ಜೊತೆಯಾದಳು. ಇದರಿಂದ ಮರಳುಗಾಡಿನ ಮಧ್ಯೆ ಓಯಸಿಸ್‌ ಸಿಕ್ಕಂತೆ ಸವಿತಾ ನೆಮ್ಮದಿ ಕಂಡುಕೊಂಡಳು. ಪಾರ್ವತಿ ಅವಳ ಪಾಲಿಗೆ ಕೇವಲ ಆಳು ಮಾತ್ರ ಆಗಿರಲಿಲ್ಲ. ಒಬ್ಬ ಸಖಿ, ಸಹಾಯಕಿ, ಹಿತೈಷಿ, ಶ್ರೇಯೋಭಿಲಾಷಿ ಆಗಿದ್ದಳು. ಪಾರ್ವತಿ ಸವಿತಾಳ ಪಾಲಿಗೆ ತಾಯಿಯಾಗಿ ಮನೆ ನಡೆಸುತ್ತಿದ್ದಳು. ಈ ರೀತಿ ಇಬ್ಬರೂ ಪರಸ್ಪರರಿಗೆ ಪೂರಕವಾಗಿ, ಅನಿವಾರ್ಯವಾಗಿದ್ದರು. ಆದರೆ ಮಗ, ಸೊಸೆ ಸವಿತಾಳಿಗೆ ಒಬ್ಬ ಹೊರಗಿನ ವ್ಯಕ್ತಿಯನ್ನು ಅಷ್ಟೆಲ್ಲ ನಂಬಬಾರದೆಂದೇ ಆಗಾಗ ಹೇಳುತ್ತಿದ್ದರು. ಅವಳು ಎಷ್ಟೇ ಆತ್ಮೀಯಳಾಗಿದ್ದರೂ ಹೊರಗಿನವರೆಂದೂ ಮನೆಯವರಾಗುವುದಿಲ್ಲ ಎಂದೇ ವಾದಿಸುತ್ತಿದ್ದರು. ಈ ಕಲಿಗಾಲದಲ್ಲಿ ನಾವು ಸದಾ ಎಚ್ಚರವಾಗಿರಬೇಕೆಂದು ಹೇಳುವ ದೃಷ್ಟಿಯಲ್ಲಿ ಅವರ ವಾದ ಸರಿಯಾಗೇ ಇತ್ತು. ಪಾರ್ವತಿಯನ್ನು ಹತ್ತಿರದಿಂದ ಅವರು ನೋಡಿರದ ಕಾರಣ ಹಾಗೆ ಹೇಳಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ. ಬಹುತೇಕ ಅಪರಿಚಿತರು ಮೋಸಗಾರರಿಬಹುದು. ಆದರೆ…… ಎಲ್ಲರೂ ಹಾಗೇ ಇರಬೇಕೆಂದೇನಿಲ್ಲವಲ್ಲ? ಯಾವ ಸಂಬಂಧ ಇರದಿದ್ದರೂ ತನಗೂ ಪಾರ್ವತಿಗೂ ಇರುವ ಬಿಡಿಸಲಾಗದ ಬಾಂಧವ್ಯವನ್ನು ಸವಿತಾ ಮಾತ್ರ ಬಲ್ಲವಳಾಗಿದ್ದಳು. ಇದನ್ನೆಲ್ಲ ಯೋಚಿಸುತ್ತ ಯಾವಾಗ ಸವಿತಾಳಿಗೆ ನಿದ್ದೆ ಬಂತೋ ತಿಳಿಯಲೇ ಇಲ್ಲ. ಬೆಳಗ್ಗೆ ಸವಿತಾ ಏಳುವಷ್ಟರಲ್ಲಿ ತಡವಾಗಿ 8 ಗಂಟೆ ಆಗಿಹೋಗಿತ್ತು. ಪಾರ್ವತಿ ಆಗಲೇ ಮನೆ ಗುಡಿಸಿ, ಸಾರಿಸಿ, ಸ್ನಾನ ಸಹ ಮುಗಿಸಿದ್ದಳು. ಸವಿತಾ ಎದ್ದಿರುವುದನ್ನು ಗಮನಿಸಿದ ಪಾರ್ವತಿ ಅವಳಿಗಿಷ್ಟವಾಗುವಂತೆ ಜಿಂಜರ್‌ ಟೀ ಮಾಡತೊಡಗಿದಳು. ಹಲ್ಲುಜ್ಜಿ, ಮುಖ ತೊಳೆದು ಬಂದ ಸವಿತಾ, ಪೇಪರ್‌ ಹಿಡಿದು ಕುಳಿತಾಗ, ಸೊಗಸಾದ ಹಬೆಯಾಡುವ ಬಿಸಿ ಬಿಸಿ ಟೀ ಕಾದಿತ್ತು. ಪಾರ್ವತಿ ಒಂದಿಷ್ಟು ಬಿಸ್ಕತ್ತು ತಿಂದು, ನಂತರ ಇಬ್ಬರೂ ನಿಧಾನವಾಗಿ ಟೀ ಹೀರತೊಡಗಿದರು. ಅಷ್ಟರಲ್ಲಿ ಬಾಗಿಲ ಬಳಿ ಕರೆಗಂಟೆ ಸದ್ದಾಯಿತು. ಈ ಲಾಕ್‌ಡೌನ್‌ನಲ್ಲಿ ಈ ಮನೆಗೆ ಬರುವಂತಹವರು ಯಾರಪ್ಪ….? ಇಬ್ಬರೂ ಮುಖ ಮುಖ ನೋಡಿಕೊಂಡರು.

“ಇರಕ್ಕಾ  ನೋಡ್ತೀನಿ,” ಎಂದು ಪಾರ್ವತಿ ಹೊರಗೆ ಹೊರಟಳು. ಮುಖಕ್ಕೆ ಮಾಸ್ಕ್ ಧರಿಸಿಯೇ ಅವಳು ಬಾಗಿಲು ತೆರೆದಳು.

“ಕ್ಷಮಿಸಿ….. ನಾನು ಎದುರು ಫ್ಲಾಟ್‌ಗೆ ಹೊಸದಾಗಿ ಬಾಡಿಗೆಗೆ ಬಂದಿರುವೆ. 1 ಕಪ್‌ ಸಕ್ಕರೆ ಸಾಲ ಸಿಗಬಹುದಾ?”

“ಒಂದು ನಿಮಿಷ ಇರಿ, ಅಕ್ಕನ್ನ ಕೇಳಿಕೊಂಡು ಬರ್ತೀನಿ,“ ಎಂದು ಮುಲಾಜಿಲ್ಲದೆ ಅವಳು ಕದ ಹಾಕಿ ಬಂದಳು.

“ಅಕ್ಕಾ, ಎದುರಿನ ಫ್ಲಾಟ್‌ಗೆ ಹೊಸದಾಗಿ ಬಾಡಿಗೆಗೆ ಬಂದವರು ಸಕ್ಕರೆ ಸಾಲ ಕೇಳಿಕೊಂಡು ಬಂದಿದ್ದಾರೆ……” ಪಾರ್ವತಿ ಸವಿತಾಳತ್ತ ಪ್ರಶ್ನಾರ್ಥಕ ನೋಟ ಹರಿಸುತ್ತಾ ಕೇಳಿದಳು. “ಇಲ್ಲ ಅಂದುಬಿಡಲೇ…. ಟಿ.ವಿಯಲ್ಲಿ ನಿನ್ನೆ ತಾನೇ ಲಾಕ್‌ಡೌನ್‌ ಘೋಷಣೆ ಆಗಿದೆ, ನಮ್ಮಂತೆ ಅವರೂ ತಂದಿಟ್ಟುಕೊಳ್ಳಬೇಕು ತಾನೇ…. ಇಂಥವರಿಗೆ ಒಂದು ಸಲ ಕೊಟ್ಟರೆ ಇದನ್ನೇ ನೆಪ ಮಾಡಿಕೊಂಡು ಮತ್ತೆ ಮತ್ತೆ ಬರುತ್ತಲೇ ಇರುತ್ತಾರೆ.”

“ಇರಲಿ ಬಿಡು ಪಾರು…. ಏನೋ ಅವರು ಆಪತ್ತು ಅಂತ ಬಂದಾಗ ನಾವು ಇಲ್ಲ ಅನ್ನಬಾರದು, ನಮಗೆ ನಾಳೆ ಏನಾದರೂ ಕಷ್ಟ ಅಂತ ಬಂದಾಗ ಅಕ್ಕಪಕ್ಕದವರ ಬಳಿ ತಾನೇ ಸಹಾಯ ಕೇಳಬೇಕು? 1 ಕಪ್‌ ಸಕ್ಕರೆ ತಾನೇ, ಕೊಟ್ಟು ಕಳುಹಿಸು,” ಎನ್ನುತ್ತಾ ತನ್ನ ಖಾಲಿ ಕಪ್‌ನ್ನು ಅವಳಿಗೆ ಕೊಟ್ಟಳು.

“ಅಯ್ಯೋ ಅಕ್ಕಾ….. ”

“ಅರೆ, ಹೇಳಿದಷ್ಟು ಮಾಡಬಾರದೇ…..” ಸವಿತಾ ಬೇಕೆಂದೇ ಹುಸಿಕೋಪ ನಟಿಸಿದಳು.

“ಹ್ಞೂಂ…. ತಗೊಳ್ಳಿ ಸಕ್ಕರೆ,” ಎನ್ನುತ್ತಾ ಪಾರ್ವತಿ ಎದುರಿಗೆ ನಿಂತಿದ್ದ ಆಗಂತುಕನನ್ನು ಗುರಾಯಿಸಿದಳು.

“ಎಲ್ಲಿ ನಿಮ್ಮ ಮೇಡಂ ಕಾಣಿಸ್ತಾ ಇಲ್ಲ….”

“ನಿಮಗೀಗ ಮೇಡಂ ಬೇಕೋ…. ಸಕ್ಕರೆನೋ…..” ಪಾರ್ವತಿ ಹಾಗೆಲ್ಲ ಸುಮ್ಮನೆ ಬಿಡುವಳಲ್ಲ. ಕೈಗೆ ಸಕ್ಕರೆ ಕಪ್‌ ತೆಗೆದುಕೊಂಡವರಿಗೆ, “ಹ್ಞಾಂ….. ನಾಳೆ ವಾಪಸ್‌ ಕೊಟ್ಟು ಬಿಡಿ, ಇಲ್ಲೇ ಹತ್ತಿರದಲ್ಲಿ ಅಂಗಡಿಗಳಿವೆ,” ಎಂದು ಹೇಳಲು ಪಾರ್ವತಿ ಹಿಂಜರಿಯಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆತ ಮೌನವಾಗಿ ಹೊರಟರು.

“ಇದೆಂಥ ವಿಚಿತ್ರ ಅಂತೀನಕ್ಕಾ…. ನೀವೆಲ್ಲಿ ಕಾಣಿಸ್ತಿಲ್ಲ ಅಂತ ಕೇಳ್ತಿದ್ದಾರೆ, ಇದೆಂಥ ವರಸೆ ಅಂತೀನಿ. ಇಂಥ ಜನರನ್ನು ತುಸು ದೂರ ಇಡುವುದೇ ಸರಿ,” ಪಾರ್ವತಿಯ ಸ್ವರ ತುಸು ತೀಕ್ಷ್ಣವಾಗಿತ್ತು.

“ಹೋಗಲಿ ಬಿಡು ಪಾರ್ವತಿ, ಮೊನ್ನೆ ತಾನೇ ನಮ್ಮ ಅಪಾರ್ಟ್‌ಮೆಂಟ್‌ಗೆ ಹೊಸದಾಗಿ ಬಂದಿದ್ದಾರೆ. ಇಲ್ಲಿ ಅವರಿಗೆ ಎಲ್ಲರೂ ಹೊಸಬರೇ…. ನಾವು ಎದುರಿಗೆ ಇದ್ದೀವಲ್ಲ ಅಂತ ಕೇಳಿದ್ದಾರೆ,” ಎನ್ನುತ್ತಾ ಸವಿತಾ ಆ ಮಾತನ್ನು ಅಲ್ಲಿಗೇ  ಮುಗಿಸಿದಳು.

“ಅಕ್ಕಾ…. ಗೊಜ್ಜವಲಕ್ಕಿಗೆ ನೆನೆಸಲೇ?” ಪಾರ್ವತಿ ಕೇಳಿದಾಗ ಹ್ಞೂಂ ಎನ್ನುತ್ತಾ ಸವಿತಾ ಸ್ನಾನಕ್ಕೆ ನಡೆದಳು.

ಸರ್ಕಾರ ಲಾಕ್‌ಡೌನ್‌ 2ನೇ ಹಂತವನ್ನು ಇನ್ನಷ್ಟು ಶಿಸ್ತುಬದ್ಧವಾಗಿ ನಿಭಾಯಿಸಿತು. ಕೆಲ ದಿನಗಳ ನಂತರ ಇವರಿಬ್ಬರೂ ಸಂಜೆ ಟಿವಿ ಮುಂದೆ ಕುಳಿತು ಕೊರೋನಾ ಕುರಿತು ನ್ಯೂಸ್‌ ನೋಡುತ್ತಿದ್ದರು. ಆಗ ಮತ್ತೆ ಕರೆಗಂಟೆ ಸದ್ದಾಯಿತು. ಪಾರ್ವತಿ ಬಾಗಿಲು ತೆರೆದಾಗ ಅದೇ ಪ್ರೌಢ ವ್ಯಕ್ತಿ ನಿಂತಿದ್ದರು.

“ಓಹೋ… ಟೀ ಸಮಾರಾಧನೆ ನಡೆಯುತ್ತಿದೆ,” ಅನುಮತಿ ಕೇಳದೆಯೇ ನೇರ ಒಳಗೆ ಬಂದ ಅವರು ಎದುರಿನ ಸೋಫಾದಲ್ಲಿ ಕುಳಿತೇಬಿಟ್ಟರು.

“ಹ್ಞೂಂ, ಈಗಷ್ಟೇ ನ್ಯೂಸ್‌ ನೋಡುತ್ತಾ ಟೀ ಕುಡಿಯುತ್ತಿದ್ದೇವೆ. ನೀವು ಏಕೆ ಒಂದು ಕಪ್‌ ತಗೋಬಾರದು?” ಸವಿತಾ ಔಪಚಾರಿಕವಾಗಿ ಹೇಳಿದಾಗ, ಆತ ಹಾರ್ದಿಕವಾಗಿ ನಗುತ್ತಾ, “ಓಹೋ, ಧಾರಾಳವಾಗಿ…. ಟೀ ಕೊಟ್ಟರೆ ಯಾರಾದರೂ ಬೇಡ ಅಂತಾರೆಯೇ?” ಎಂದು ಹೇಳಿದರು.

`ಕರೆಸಿಕೊಳ್ಳದೆ ಬಂದಿರುವ ಅತಿಥಿ ಮೂತಿ ನೋಡು,’ ಎನ್ನುತ್ತಾ ಮನದಲ್ಲೇ ಸಿಡಿಗುಟ್ಟುತ್ತಾ ಪಾರ್ವತಿ ಟೀ ತಯಾರಿಸಲು ಎದ್ದಳು.

“ಅವರಿಗೆ ಶುಂಠಿ ತುಸು ಜಾಸ್ತಿ ಹಾಕಲು ಹೇಳಿ…. ನನಗೆ ಚಹಾದಲ್ಲಿ ಸದಾ ಶುಂಠಿ ಮುಂದೆ, ಸಕ್ಕರೆ ಹಿಂದೆ….” ಸಂಕೋಚವಿಲ್ಲದೆ ಹೇಳಿದರಾತ.

“ ಪಾರ್ವತಿ, ಬರುವಾಗ ಟೀ ಜೊತೆ 1 ತುಂಡು ಶುಂಠಿ ತಗೊಂಬಾ. ಬಹುಶಃ ನಿಮ್ಮಲ್ಲಿ ಶುಂಠಿ ಖಾಲಿ ಆಗಿರಬೇಕಲ್ಲವೇ?” ಸವಿತಾ ಕೇಳಿದಳು.

“ಹೌದು, ಸರಿಯಾಗಿ ಗೆಸ್‌ ಮಾಡಿದಿರಿ. ಅಂದಹಾಗೆ ನನ್ನ ಹೆಸರು ಸುರೇಶ್‌. ನಾನು ರಿಟೈರ್ಡ್‌ ಆರ್ಮಿ ಆಫೀಸರ್‌. ಇದಿಷ್ಟು ನನ್ನ ಕಿರು ಪರಿಚಯ,” ದೇಶಾವರಿ ನಗೆ ಬೀರುತ್ತಾ ಹೇಳಿದರು.

ಪಾರ್ವತಿ ಪ್ರವೇಶವಾದ್ದರಿಂದ ಸವಿತಾ ಪರಿಚಯ ನೀಡುವುದು ತಡವಾಯಿತು. ಟೀ ಕಪ್‌ ಜೊತೆ ಶುಂಠಿಯನ್ನು ಅವಳು ಟೀಪಾಯಿ ಮೇಲೆ ಕುಕ್ಕಿದಳೆಂದೇ ಸವಿತಾಳಿಗೆ ಅನಿಸಿತು.

“ಇದೇನು ಪಾರ್ವತಿ….. ಇಷ್ಟೇನಾ ಇದ್ದಿದ್ದು….” ಸವಿತಾ ಕೇಳಿದ್ದಕ್ಕೆ ಪಾರ್ವತಿ, “ಹೌದಕ್ಕಾ, ನಮ್ಮ ಹತ್ತಿರಾನೂ ಶುಂಠಿ ಖಾಲಿ ಆಗ್ತಾ ಬಂತು,” ಎಂದಳು.

“ಇದು ನನಗೆ ಬೇಕಾದಷ್ಟಾಯಿತು ಬಿಡಿ. ಇದರಲ್ಲಿ 3-4 ದಿನ ಗಾಡಿ ಓಡಿಸಬಹುದು. ಅಂದಹಾಗೆ ಟೀ ಬಹಳ ಚೆನ್ನಾಗಿದೆ ಕಣ್ರಿ,” ಮೊದಲ ಗುಟುಕು ಹೀರುತ್ತಾ ಸುರೇಶ್‌ ಹೇಳಿದರು.

ಆತ ಹೊರಟ ನಂತರ ಆ ಜಾಗವನ್ನೆಲ್ಲ ಸ್ಯಾನಿಟೈಸ್‌ಗೊಳಿಸಿದ ಪಾರ್ವತಿ, ಏನೋ ಗೊಣಗುತ್ತಾ ರಾತ್ರಿಗೆ ಚಪಾತಿಗಾಗಿ ಹಿಟ್ಟು ಕಲಸತೊಡಗಿದಳು. ಅವಳ ಸಿಟ್ಟು ಕಂಡು ಸವಿತಾಳಿಗೆ ನಗು ಬಂತು.

ಅದರ ಮಾರನೇ ದಿನ ಸವಿತಾಳ ಬರ್ತ್‌ಡೇ ಇತ್ತು. ಸವಿತಾ ಬೇಡ ಎಂದರೂ ಕೇಳದೆ, ಪಾರ್ವತಿ ಅವಳಿಗೆ ಬಹಳ ಇಷ್ಟ ಎಂದು ಪೂರಿಸಾಗು ಮಾಡಿದಳು. ಪಾರ್ವತಿಯ ಕೈ ರುಚಿ ಅಂಥದು, ಸವಿತಾ 2 ಪೂರಿ ಹೆಚ್ಚಾಗಿಯೇ ತಿಂದುಬಿಟ್ಟಳು. ಸಂಜೆ ಹೊತ್ತಿಗೆ ಅದೇಕೋ ಏನೋ ಹೊಟ್ಟೆ ತಳಮಳಿಸಿ ಅವಳಿಗೆ ವಾಂತಿ ಆಯಿತು. ಪಾರ್ವತಿ ತಕ್ಷಣ ಗ್ಲೂಕೋಸ್‌ ನೀರು ಕದಡಿಕೊಟ್ಟಳು. 10 ನಿಮಿಷಗಳಲ್ಲಿ ಅದೂ ವಾಂತಿ ಆಯಿತು. ಮತ್ತೆ ಮುಕ್ಕಾಲು ಗಂಟೆಯಲ್ಲಿ 3-4 ಸಲ ನೀರಾಗಿ ವಾಂತಿ ಆದ್ದರಿಂದ, ಸವಿತಾಳಿಗೆ ದೇಹದಲ್ಲಿ ತೇವಾಂಶದ ಕೊರತೆ ಕಾಡಲು, ಅತಿ ಸುಸ್ತು ಬಂದು ಆಯಾಸದಿಂದ ಒರಗಿಬಿಟ್ಟಳು. ನಿಧಾನಾಗಿ ಹೊಟ್ಟೆ ಕಿವುಚುವುದು ಜಾಸ್ತಿ ಆದಾಗ, ಅವಳು ಸಂಕಟಪಡತೊಡಗಿದಳು. ಬರೀ ನೀರು ಮಜ್ಜಿಗೆಗೆ ನಿಂಬೆರಸ, ಉಪ್ಪು ಹಾಕಿ ಕುಡಿದು ಹಾಗೇ ಮಲಗಿಬಿಟ್ಟಳು. ರಾತ್ರಿ 1 ಗಂಟೆ ಆಗಿತ್ತು. ಸವಿತಾಳಿಗೆ ಮತ್ತೆ ವಾಂತಿ ಶುರುವಾಯಿತು. ಡಯೇರಿಯಾ ಆಗಿಬಿಟ್ಟರೆ ಏನು ಮಾಡುವುದು? ಏಕಾದರೂ ಪೂರಿ ಮಾಡಿದೆನೋ ಎಂದು ಪಾರ್ವತಿ ಪೇಚಾಡಿದಳು. ಮನೆಯಲ್ಲಿ ವಾಂತಿ ನಿಲ್ಲಿಸುವ ಮಾತ್ರೆ ಯಾವುದೂ ಇರಲಿಲ್ಲ. ತಿಳಿದ ಮನೆ ಮದ್ದನ್ನೆಲ್ಲ ಮಾಡಿದ್ದಾಗಿತ್ತು, ಏನೂ ಲಾಭ ಆಗಲಿಲ್ಲ. ಬೇರೆ ದಾರಿ ಕಾಣದೆ ಅವಳು ಹೋಗಿ ಎದುರಿನ ಸುರೇಶ್‌ ಕುಮಾರ್‌ ಫ್ಲಾಟ್‌ನ ಗಂಟೆ ಬಾರಿಸಿದಳು.

“ಸಾರ್‌…. ಸ್ವಲ್ಪ ಸಹಾಯ ಮಾಡ್ತೀರಾ…. ಮೇಡಂಗೆ ಯಾಕೋ ವಾಂತಿ ಜಾಸ್ತಿ ಆಗಿ ಬಹಳ ಸುಸ್ತಾಗಿ ಹೋಗಿದ್ದಾರೆ. ಮನೆಮದ್ದು ಏನೂ ಲಾಭ ಆಗಲಿಲ್ಲ….” ಎಂದು ಹೇಳುವಷ್ಟರಲ್ಲಿ ಪಾರ್ವತಿಯ ಕಂಗಳು ತುಂಬಿ ಬಂದಿತ್ತು.

“ಬಹುಶಃ ಫುಡ್‌ಪಾಯಿಸನಿಂಗ್‌ ಆಗಿರಬೇಕು. ಇರು, ನಮ್ಮ ಮನೇಲಿ ಇದಕ್ಕೆ ಮಾತ್ರೆ ಇರಬೇಕು,” ಎಂದು ಹುಡುಕುತ್ತಾ, “ನಾನು ಈಗೀ ತರ್ತೀನಿ. ಅಲ್ಲಿಯವರೆಗೆ ಅವರಿಗೆ ತುಸು ಬಿಸಿ ನೀರು ಕುಡಿಸುತ್ತಿರು ಬಂದೆ,” ಎಂದರು.

2-3 ನಿಮಿಷಗಳಲ್ಲಿ ಅವರು ಮಾತ್ರೆಯ ಬಾಕ್ಸ್ ಹಿಡಿದು ಇವರ ಮನೆಗೆ ಹಾಜರಾದರು.

“ತಗೊಳ್ಳಿ…. ಈ ಅವೋಮಿನ್‌ ಮಾತ್ರೆ ಈಗಲೇ ಬಾಯಿಗೆ ಹಾಕಿಕೊಳ್ಳಿ. ಇದು ಬೇಗ ವಾಂತಿ ನಿಲ್ಲಿಸುತ್ತೆ. ಸ್ವಲ್ಪ ಹೊತ್ತಿಗೆ ಆರಾಮ ಆಗುತ್ತೆ,” ಎಂದರು.

“ಥ್ಯಾಂಕ್ಯು, ಯಾಕೆ ತೊಂದರೆ ತಗೊಂಡ್ರಿ…. ಪಾರ್ವತಿ ಕೈಲಿ ಕಳಿಸಿದ್ದರೆ ಆಗ್ತಿತ್ತು. ನನ್ನಿಂದ ನಿಮ್ಮ ನಿದ್ದೆಗೆ ತೊಂದರೆ ಆಯ್ತು,” ಆ ನೋವಿನಲ್ಲೂ ಸವಿತಾ ಶಿಷ್ಟಾಚಾರದ ಮಾತುಗಳನ್ನಾಡಲು ಮರೆಯಲಿಲ್ಲ.

“ಇದರಲ್ಲಿ ತೊಂದರೆ ಏನು ಬಂತು? ನಾನಂತೂ ಒಬ್ಬಂಟಿ. ಟಿವಿಯಲ್ಲಿ ಸಿನಿಮಾ ನೋಡಿ ಈಗ ತಾನೇ ಆಫ್‌ ಮಾಡಿ ಮಲಗುವ ತಯಾರಿ ನಡೆಸಿದ್ದೆ, ಪಾರ್ವತಿ ಬೆಲ್‌ ಮಾಡಿದ್ದು ಗೊತ್ತಾಯ್ತು,” ಎನ್ನುತ್ತಾ ಸುರೇಶ್‌ ನಗು ಬೀರಿದರು.

ಮಾತ್ರೆ ನುಂಗಿದ ಸವಿತಾ ಬದಲಿಗೆ ಮುಗುಳ್ನಗಲು ಯತ್ನಿಸುತ್ತಾ ಎದ್ದು ಕೂರಲು ಪ್ರಯತ್ನಿಸಿದಳು. ಇಂದು ಮೊದಲ ಸಲ ಅವಳು ಸುರೇಶ್‌ ಮುಖವನ್ನು ಸರಿಯಾಗಿ ಗಮನಿಸಿದ್ದು. ಒಳ್ಳೆಯ ಎತ್ತರದ, ಕಟ್ಟುಮಸ್ತಾದ ಮನುಷ್ಯ. ಮುಖದಲ್ಲಿ ಒತ್ತಾದ ಮೀಸೆ, ಆತ್ಮವಿಶ್ವಾಸದ ನಗು. ಮುಖದಿಂದ ಅವರ ವಯಸ್ಸು ಇಂತಿಷ್ಟೇ ಎಂದು ಹೇಳುವಂತಿರಲಿಲ್ಲ. ಅವರ ಸದೃಢ ಮೈಕಟ್ಟು ಅವರ ಶಿಸ್ತುಬದ್ಧ ಜೀವನಕ್ಕೆ ಸಾಕ್ಷಿಯಾಗಿತ್ತು. ಒಟ್ಟಾರೆ ಅವರದು ಆಕರ್ಷಕ, ಪ್ರಭಾವಿ ವ್ಯಕ್ತಿತ್ವ. ಹೊಸ ಪರಿಚಯ ಎಂದು ಇಷ್ಟು ದಿನ ಸರಿಯಾಗಿ ಮಾತನಾಡಿಸಿರಲಿಲ್ಲ. ತನ್ನ ಬಳಿ ನಿಂತಿದ್ದವರನ್ನು ಎದುರಿನ ಕುರ್ಚಿ ತೋರಿಸುತ್ತಾ, “ದಯವಿಟ್ಟು ಕೂತ್ಕೊಳ್ಳಿ,” ಎಂದಳು ಸವಿತಾ.

“ನೀವು ಮಲಗಿ, ಸಂಕೋಚ ಬೇಡ. ಹುಷಾರಿಲ್ಲ ಅಂತ ಇರುವಾಗ ಶಿಷ್ಟಾಚಾರ ನೋಡಬಾರದು,” ಸುರೇಶ್‌ ಹೇಳಿದರು.

ಮಾತ್ರೆ ತಿಂದ ಸವಿತಾಳ ಮುಖದಲ್ಲಿ ತುಸು ನೆಮ್ಮದಿ ಕಾಣಿಸಿತು. ಅದರಿಂದ ಗೆಲುವಾದ ಪಾರ್ವತಿ ಸುರೇಶ್‌ ಕಡೆ ತಿರುಗಿ, “ನಿಮಗೆ ಮಜ್ಜಿಗೆ ಅಥವಾ ಟೀ ಕೊಡಲೇ?” ಎಂದು ತುಂಬು ಮನಸ್ಸಿನಿಂದ ಕೇಳಿದಳು. ಈ ಬಾರಿ ಸಿಡುಕು ಇರಲಿಲ್ಲ.

“ಸದ್ಯಕ್ಕೆ ಏನೂ ಬೇಡ. ಇನ್ನೊಮ್ಮೆ ನಿಮ್ಮೊಂದಿಗೆ ಟೀ ಕುಡೀತೀನಿ,” ಮುಗ್ಧವಾಗಿ ನಕ್ಕರು.

ಅವರ ನಿಷ್ಕಲ್ಮಶ ನಗು ಸವಿತಾಳಿಗೆ ಯಾಕೋ ಇಷ್ಟವಾಯಿತು. ಅವರಿಬ್ಬರೂ ಅದೂ ಇದೂ ಮಾತನಾಡುತ್ತಿದ್ದಾಗ, ಸವಿತಾಳಿಗೆ ಮಾತ್ರೆ ಕೆಲಸ ಮಾಡಿದೆ ಎನಿಸಿತು. ಈಗ ಅವಳಿಗೆ ಹೊಟ್ಟೆ ತೊಳೆಸುವುದು ನಿಂತಿತ್ತು. ಹಾಗೇ ಅವರ ಜೊತೆ ಮಾತನಾಡುತ್ತಾ ನಿದ್ದೆಗೆ ಜಾರಿದಳು.

“ಸಾರ್‌, ನೀವು ಹೋಗಿ ಮಲಗಿ. ಆಗಲೇ 2 ಗಂಟೆ ಆಯ್ತು,” ಪಾರ್ವತಿ ಅವರೆಡೆಗೆ ಕೃತಜ್ಞತಾಪೂರ್ವಕ ನೋಟ ಬೀರುತ್ತಾ ಹೇಳಿದಳು.

“ಇರಲಿ, ಇನ್ನೊಂದು ಗಂಟೆ ಕಾಲ ನಾನು ಇಲ್ಲೇ ಕುಳಿತಿರುತ್ತೇನೆ. ನೀನು ಮಲಗಿಬಿಡು. ಇನ್ನೇನೂ ಎಮರ್ಜೆನ್ಸಿ ಇಲ್ಲ ಅಂತಾದರೆ ಆಮೇಲೆ ನಾನು ಮಲಗುತ್ತೀನಿ. ಈ ರೀತಿ ಜಾಗರಣೆ ನಮಗೆ ಚೆನ್ನಾಗಿ ಅಭ್ಯಾಸವಿದೆ,” ಎಂದರು.

ಬೆಳಗ್ಗೆ 5 ಗಂಟೆ ಹೊತ್ತಿಗೆ ಎಚ್ಚರಗೊಂಡ ಪಾರ್ವತಿ ನೋಡುತ್ತಾಳೆ, ಸವಿತಾ ಆಳವಾದ ನಿದ್ದೆಯಲ್ಲಿದ್ದಳು. ಸುರೇಶ್‌ ಕುರ್ಚಿಯಲ್ಲೇ ನಿದ್ರಿಸಿದ್ದರು. ಪಾರ್ವತಿ ಅವರನ್ನು ಎಬ್ಬಿಸುತ್ತಾ, “ನಿಮಗೆ ಬಹಳ ತೊಂದರೆ ಆಯ್ತು. ಇನ್ನಾದರೂ ಆರಾಮಾಗಿ ಮಲಗಿ,” ಎಂದಳು. ಸುರೇಶ್‌ ಅವಳ ಕೈಗೆ ಇನ್ನೊಂದು ಮಾತ್ರೆ ಕೊಡುತ್ತಾ, “ಇವರು ಎದ್ದ ಮೇಲೆ ತುಸು ಹಾಲು, ಬಿಸ್ಕತ್ತು ಕೊಡಿ. ಮತ್ತೆ ವಾಂತಿ ಅನಿಸಿದರೆ ಮಾತ್ರ ಈ ಮಾತ್ರೆ ತೆಗೆದುಕೊಳ್ಳಲಿ,” ಎಂದು ಹೇಳಿ ಹೊರಟರು.

ಸುಮಾರು 11 ಗಂಟೆ ಹೊತ್ತಿಗೆ ಮತ್ತೆ ಬೆಲ್‌ ಆಯಿತು. ಪಾರ್ವತಿ ಬಾಗಿಲು ತೆರೆದಾಗ ಸುರೇಶ್‌ ಒಳಗೆ ಬಂದರು.

“ಹೇಗಿದ್ದೀರಿ? ಈಗ ಪರವಾಗಿಲ್ಲ ತಾನೇ?” ಹಾಲ್ನಲ್ಲಿ ಕುಳಿತಿದ್ದ ಸವಿತಾಳನ್ನು ಕಂಡು ಮುಗುಳ್ನಗುತ್ತಾ ಕೇಳಿದರು.

“ಹೌದು, ಆರಾಮ ಆಯ್ತು. ಈಗ ತುಸು ಹಸಿವಾಗುತ್ತಿದೆ,” ಎಂದು ಸವಿತಾ ನಕ್ಕಳು.

“ನನಗೆ ಗೊತ್ತಿತ್ತು…. ಅದಕ್ಕೆ ನೋಡಿ, ಏನೂ ಖಾರ ಇಲ್ಲದೆ ಲೈಟಾಗಿ ಹೆಸರುಬೇಳೆ ಖಿಚಡಿ ಮಾಡಿ ತಂದಿದ್ದೀನಿ. ಇದು ನಿಮಗೆ ಹಿತಕರವಾಗಿರುತ್ತದೆ,” ಎಂದು ಸಹಜವಾಗಿ ಮಂದಹಾಸ ಬೀರಿದರು.

“ಆದರೆ ನೀವೇಕೆ ತೊಂದರೆ ತಗೊಂಡ್ರಿ….. ಪಾರ್ವತಿ ಈಗ ತಾನೇ ಇಡ್ಲಿ ಮಾಡಿ ಮುಗಿಸಿದಳು. ನಾನೇ ಬೇಕೂಂತ ಸ್ವಲ್ಪ ತಡವಾಗಿ ತಿಂಡಿ ತಿನ್ನೋಣ ಅಂದುಕೊಂಡೆ,” ಸವಿತಾ ಹೇಳಿದಾಗ ಪಾರ್ವತಿ ತಾನೂ ದನಿಗೂಡಿಸಿದಳು, “ಇಬ್ಬರು ಹೆಂಗಸರಿದ್ದೀವಿ. ನೀವೇಕೆ ಶ್ರಮ ತೆಗೆದುಕೊಂಡಿರಿ?”

“ದಿನಾ ನೀನು ಇವರಿಗೆ ಮಾಡ್ತಾನೇ ಇರ್ತೀಯಾ ಪಾರ್ವತಿ, ಇವತ್ತು ನನ್ನ ಕೈ ರುಚಿ ನೋಡಲಿ ಅನ್ನಿಸಿತು. ತಗೋ, ಇದನ್ನು 3 ಪ್ಲೇಟಿಗೆ ಹಾಕಿಕೊಂಡು ಬಾ. ನೀನೂ ರುಚಿ ನೋಡಿ ಹೇಳಬೇಕು,” ಎಂದು ಪಾರ್ವತಿ ಕೈಗೆ ತಮ್ಮ ಕ್ಯಾಸ್‌ರೋಲ್‌ ಕೊಡುತ್ತಾ ಹೇಳಿದರು. ಇಂಗು, ಕರಿಬೇವಿನ ಒಗ್ಗರಣೆ ಢಾಳಾಗಿತ್ತು. ಆ ಖಿಚಡಿ ನಿಜಕ್ಕೂ ರುಚಿಯಾಗಿತ್ತು. ಅದಕ್ಕೆ 1-2 ಹೋಳು ನಿಂಬೆ ಉಪ್ಪಿನಕಾಯಿ, ಸುಟ್ಟ ಹಪ್ಪಳ ತಂದಿತ್ತ ಪಾರ್ವತಿ ಕಡೆ ಮೆಚ್ಚುಗೆಯಿಂದ ನೋಡುತ್ತಾ ಸುರೇಶ್‌ ಸಂಭ್ರಮಿಸಿ ತಿಂದರು. ಸವಿತಾಳಿಗೆ ಇನ್ನಷ್ಟು ಬೇಕೆನಿಸಿ ತನ್ನ ಖಾಲಿ ಪ್ಲೇಟ್‌ನ್ನು ಅವಳು ಪಾರ್ವತಿ ಕಡೆ ಚಾಚಿದಾಗ, “ಸಾಕು…. ಸಾಕು…. ಹೊಟ್ಟೆ ಕೆಟ್ಟಾಗ ಧಾರಾಳ ತಿನ್ನಬಾರದಂತೆ. ಮಧ್ಯಾಹ್ನ 2 ಗಂಟೆ ಮೇಲೆ ನಿಮ್ಮ ಇಡ್ಲಿ ಜೊತೆ ಇನ್ನಷ್ಟು ತಿಂತೀರಂತೆ ಬಿಡಿ,” ಎನ್ನುತ್ತಾ ಸಲುಗೆಯಿಂದ ಅವಳ ಕೈಲಿದ್ದ ಪ್ಲೇಟ್‌ ಸೆಳೆದುಕೊಂಡು, ಎರಡನ್ನೂ ಸಿಂಕ್‌ಗೆ ಹಾಕಿ ಕೈ ತೊಳೆದು ಬಂದರು.

ಸವಿತಾ ಚಕಿತಳಾಗಿ ಅವರನ್ನೇ ನೋಡುತ್ತಾ ನಿಂತುಬಿಟ್ಟಳು. ಟಿವಿ ಹಾಕಿಕೊಂಡು ಇಬ್ಬರೂ ಆರಾಮಾಗಿ ಹರಟಿದರು. ಸುರೇಶ್‌ರ ನೇರ ಮಾತು, ಸದ್ವರ್ತನೆ, ಕಪಟವಿಲ್ಲದ ವ್ಯವಹಾರ ಪಾರ್ವತಿ, ಸವಿತಾ ಇಬ್ಬರಿಗೂ ಮೋಡಿ ಹಾಕಿತು. ಹಳೆಯ ಕನ್ನಡ ಚಿತ್ರಗೀತೆಗಳು ಎಂದರೆ ಸುರೇಶ್‌ಗೆ ಬಹಳ ಇಷ್ಟ. ಸವಿತಾ ಸಹ ಆಗಾಗ ಭಾವಗೀತೆ ಹಾಡುತ್ತಿದ್ದುದುಂಟು. ಆದರೆ ಜೀವನದ ಗಾಂಭೀರ್ಯ ಅವಳ ಹವ್ಯಾಸಕ್ಕೆ ಇಂಬು ಕೊಡಲಿಲ್ಲ. ಇಂದು ಆ ವಿಷಯ ಸುರೇಶ್‌ ಮುಂದೆ ಪ್ರಸ್ತಾಪವಾಯಿತು. ಇನ್ನೊಂದಿಷ್ಟು ಹರಟಿ ಅವರು ಹೊರಟುಬಿಟ್ಟರು. ಮತ್ತೊಮ್ಮೆ ಹೀಗೆ ಮಾತುಕಥೆ ಶುರುವಾದಾಗ, ಈ ಬಾರಿ ಸವಿತಾ, ಸಿನಿಮಾದಲ್ಲಿ ಬಳಕೆಯಾಗಿರುವ ಭಾವಗೀತೆಗಳನ್ನು ಹಾಡಲೇಬೇಕು ಎಂದು ಒತ್ತಾಯಿಸಿದರು. `ಮೂಡಲ ಮನೆಯಾ…., ದೋಣಿ ಸಾಗಲಿ ಮುಂದೆ ಹೋಗಲಿ…..’ ಮುಂತಾದ ಹಾಡುಗಳನ್ನು ಸವಿತಾ ಸುಶ್ರಾವ್ಯವಾಗಿ ಹಾಡಿದಾಗ ಚಿಕ್ಕ ಮಕ್ಕಳಂತೆ ಚಪ್ಪಾಳೆ ತಟ್ಟಿ ಹಾರ್ದಿಕವಾಗಿ ಆನಂದಿಸಿದರು.

ಎರಡನೇ ಹಾಡಿಗೆ ಸವಿತಾ ಜೊತೆ ಸುರೇಶ್‌ ಸಹ ಯುಗಳ ಗಾನದಲ್ಲಿ ಹಾಡಿದಾಗ ಇಬ್ಬರಿಗೂ ಸಂತೋಷವಾಯಿತು. ಅಲ್ಲಿಂದ ಮತ್ತೊಂದು, ಇನ್ನೊಂದು ಹಾಡು ಮುಂದುವರಿದು ಇಬ್ಬರಿಗೂ ಸಮಯ ಹೋದದ್ದೇ ಗೊತ್ತಾಗಲಿಲ್ಲ.

“ಆಹಾ ಅಕ್ಕಾ…. ಇಷ್ಟು ದಿನಗಳಲ್ಲಿ ಒಂದು ದಿನವಾದರೂ ನೀವು ಇಷ್ಟು ಚೆನ್ನಾಗಿ ಹಾಡ್ತೀರಿ ಅಂತ ಹೇಳಿರಲೇ ಇಲ್ಲ. ಇವತ್ತು ನನಗೆ ಎಷ್ಟು ಖುಷಿ ಆಗ್ತಿದೆ ಗೊತ್ತಾ? ಸಾರ್‌, ನಿಮ್ಮ ಕಂಠ ಅಷ್ಟೇ ಸ್ಟ್ರಾಂಗ್‌ ಆಗಿದೆ,” ಎಂದು ಅಭಿನಂದಿಸುತ್ತಾ ಪಾರ್ವತಿ ಓಡಿಬಂದು ಕುರ್ಚಿ ಹಿಂದಿನಿಂದ ಸವಿತಾಳನ್ನು ಬಳಸಿ ಹಿಡಿದುಕೊಂಡಳು. ಎಲ್ಲರ ಮುಖದಲ್ಲೂ  ನಗು ಹರಡಿತ್ತು. ಸವಿತಾ ಸಹ ಪಾರ್ವತಿ ಕೈ ಹಿಡಿದುಕೊಳ್ಳುತ್ತಾ ಸಂತಸ ಹಂಚಿಕೊಂಡಳು.

“ನಿಜಕ್ಕೂ ನಿಮ್ಮ ಕಂಠ ಬಹಳ ಇಂಪಾಗಿದೆ,” ಎಂದು ಸುರೇಶ್‌ ಹೊಗಳಿದರು.

“ನಾನೇನೂ ದೊಡ್ಡ ಗಾಯಕಿಯಲ್ಲ…. ಎಂದಾದರೂ ಲಹರಿ ಬಂದಾಗ ಗುನುಗಿಕೊಳ್ಳುವ ಹವ್ಯಾಸ….” ಎನ್ನುತ್ತಾ ಸುರೇಶ್‌ ಕಡೆ ನಗು ಬೀರಿದಳು.

ಸವಿತಾಳ ಮುಖದಲ್ಲಿ ತುಂಬಿಕೊಳ್ಳುತ್ತಿದ್ದ ನಾಚಿಕೆಯ ಕೆಂಪು ಪಾರ್ವತಿಯ ಅನುಭವೀ ಕಣ್ಣುಗಳಿಗೆ ಸ್ಪಷ್ಟವಾಗಿ ಗುರುತಿಗೆ ಸಿಕ್ಕಿತು. ಲಾಕ್‌ಡೌನ್‌ ಬೋರಿಂಗ್‌ ಅನಿಸಬಾರದೆಂದು ಇಬ್ಬರೂ ಪರಸ್ಪರರ ಮನೆಗೆ ಬಂದು ಹೋಗಿ ಕಾಫಿ, ಟೀ ಸಮಯದಲ್ಲಿ ಹರಟುತ್ತಿದ್ದರು. ಸುರೇಶ್‌ ಇವರ ಮನೆಗೆ ಬರುತ್ತಿದ್ದುದೇ ಹೆಚ್ಚು. ಸಂಜೆ ಹೊತ್ತು ಟೀ ಸವಿಯುತ್ತಾ ಮೂವರೂ ಚೆಸ್‌, ಲುಡೋ, ಕೇರಂ, ಕಾರ್ಡ್‌ ಆಡುತ್ತಾ ಹಾಯಾಗಿ 2-3 ತಾಸು ಕಳೆಯುತ್ತಿದ್ದರು.

ಪಾರ್ವತಿ ಮಧ್ಯೆ ಮಧ್ಯೆ ಪಕೋಡ, ಬಜ್ಜಿ ಮಾಡಿದಾಗ ಆಟ ಇನ್ನೂ ರಂಗೇರುತ್ತಿತ್ತು. ಆಟ ಬೇಡವೆನಿಸಿದಾಗ ಭಾವಗೀತೆಗಳ ಗಾಯನ ಶುರುವಾಗುತ್ತಿತ್ತು. ಒಟ್ಟಾರೆ ಮೂವರಿಗೂ ಒಳ್ಳೆಯ ಟೈಂ ಪಾಸ್‌ಗೆ ದಾರಿ ಆಯಿತು. ಹೀಗೆ ಸವಿತಾ ಸುರೇಶ್‌ರ ಸ್ನೇಹ ಪಳಗಿ ಗಟ್ಟಿಯಾಗುತ್ತಾ ಪ್ರೀತಿ, ಪ್ರೇಮಕ್ಕೆ ತಿರುಗಿತು. ಪತ್ನಿಯನ್ನು ಕಳೆದುಕೊಂಡಿದ್ದ ವಿಧುರ ಸುರೇಶ್‌ ಒಬ್ಬಳೇ ಮಗಳನ್ನು ಮದುವೆ ಮಾಡಿ ಆರ್ಮಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಳಿಯನಿಗೆ ಒಪ್ಪಿಸಿದ್ದರು. ದೇಶವಿಡೀ ವರ್ಗಾವಣೆಯ ನೌಕರಿ, ಹೀಗಾಗಿ ಮಗಳು ವರ್ಷಕ್ಕೆ 1-2 ಸಲ ಬಂದು ಹೋಗುತ್ತಿದ್ದಳು. ಸುರೇಶ್‌ರ ಸ್ನೇಹಮಯ ವ್ಯವಹಾರ ಸವಿತಾಳನ್ನು ಸೆಳೆದಿದ್ದರೆ, ಸವಿತಾಳ ಸರಳತೆ ಸುರೇಶ್‌ಗೆ ಇಷ್ಟಾಗಿತ್ತು. ಇಬ್ಬರೂ ತಮ್ಮ ಏಕಾಂಗಿತನದ ಕಾರಣ ಜೀವನದ ಮುಸ್ಸಂಜೆಯಲ್ಲಿ ಒಂದಾಗ ಬಯಸಿದರು. ಪಾರ್ವತಿಗೂ ಸಹ ಒಂದಾಗುತ್ತಿರುವ ಇವರ ಹೃದಯಗಳ ನಿಕಟತೆಯ ಬಗ್ಗೆ ಅರಿವಾಗತೊಡಗಿತು. ದಿನೇ ದಿನೇ ಬದಲಾಗುತ್ತಿದ್ದ ಸವಿತಾಳ ಜೀವನಾಸಕ್ತಿ, ಸಕಾರಾತ್ಮಕ ಜೀವನೋತ್ಸಾಹ ಪಾರ್ವತಿಗೂ ಇಮ್ಮಡಿ ಸಂತಸ ತಂದಿತ್ತು. ಸ್ವಭಾವತಃ ಅತಿ ಗಂಭೀರಳಾದ ಸವಿತಾ, ಈಗ ಮಾತು ಮಾತಿಗೂ ನಕ್ಕು ನಲಿಯುತ್ತಾ ಆನಂದವಾಗಿ ಇರುತ್ತಿದ್ದಳು. 53ರ ಸವಿತಾಳ ವ್ಯಕ್ತಿತ್ವದ ಇನ್ನೊಂದು ಮುಖ ಇದೀಗ ಹೊರಗೆ ಬರಲು ಸಾಧ್ಯವಾಗಿತ್ತು. ಇದೀಗ ತರುಣಿಯರ ತರಹ ಡ್ರೆಸ್‌, ಮೇಕಪ್‌ನಲ್ಲಿ ಆಸಕ್ತಿ ಮೂಡತೊಡಗಿತು. ಇದೀಗ ಅವಳ ಬದುಕಲ್ಲಿ ಹೊಸ ಬೆಳಕು ಮೂಡುವುದರಲ್ಲಿತ್ತು.

“ಅಕ್ಕಾ, ನೀವು ತಪ್ಪು ತಿಳಿಯದಿದ್ದರೆ ನಾನೊಂದು ಮಾತು ಹೇಳಲೇ?” ಪಾರ್ವತಿ ಅಕ್ಕರೆಯಿಂದ ಹೇಳಿದಳು.

ಹಾಡು ಗುನುಗುತ್ತಾ ಮನೆಯ ಕಿಟಕಿಗಳ ಡಸ್ಟಿಂಗ್‌ ಮಾಡುತ್ತಿದ್ದ ಸವಿತಾಳ ಕೈಗಳು ನಿಂತವು.

“ಅಂದ್ರೆ….. ನಾನು ಯೋಚಿಸುತ್ತಿರುವುದು ಸರಿ ತಾನೇ?” ಅದೇನೆಂದು ಪಾರ್ವತಿ ಬಾಯಿಬಿಟ್ಟು ಹೇಳುವ ಅಗತ್ಯವಿರಲಿಲ್ಲ.

“ಹೌದು ಪಾರ್ವತಿ, ನೀನು ನನಗೆ ಆಪ್ತ ಸಖಿ ಮಾತ್ರವಲ್ಲ, ನನಗೆ ಎಲ್ಲವೂ ಆಗಿದ್ದಿ. ನನ್ನ ಜೀವನದಲ್ಲಿ ಮುಂದೆ ಏನಾಗಲಿದೆ ಎಂದು ನಾನು ನಿನಗಲ್ಲದೆ ಬೇರಾರಿಗೆ ಹೇಳಿಕೊಳ್ಳಲಿ?” ಎನ್ನುತ್ತಾ ಬಂದು ಅವಳ ಕೈ ಹಿಡಿದು ತನ್ನೊಂದಿಗೆ ಸೋಫಾದಲ್ಲಿ ಕೂರಿಸಿಕೊಂಡಳು ಸವಿತಾ.

“ಪ್ರದೀಪ್‌ ತೀರಿಕೊಂಡ ನಂತರ ನನ್ನ ಜೀವನ ಪೂರ್ತಿ ಶೂನ್ಯವಾಗಿತ್ತು. ಅವರ ಕುರುಹಾಗಿ ಚಂದ್ರುವಿನ ಭವಿಷ್ಯವೊಂದೇ ನನ್ನ ಬದುಕಿನ ಗುರಿಯಾಗಿತ್ತು. ನನ್ನ ಆ ಕರ್ತವ್ಯ ಯಶಸ್ವಿಯಾಗಿ ಚಂದ್ರು ತನ್ನ ಕೆರಿಯರ್‌, ಸಂಸಾರದಲ್ಲಿ ಸುಖಿಯಾಗಿದ್ದಾನೆ. ಆಗೆಲ್ಲ ನನ್ನ ಜೀವನ ಸೂತ್ರ ಹರಿದ ಗಾಳಿಪಟವಾಗಿತ್ತು. ನನ್ನ ಜೀವನದಲ್ಲಿ ಬೇರಾವುದೇ ಯೋಚನೆಗೂ ಅವಕಾಶವೇ ಇರಲಿಲ್ಲ.

“ಚಂದ್ರು ಅಲ್ಲೇ ಸೆಟಲ್ ಆದ ಮೇಲೆ ನನ್ನ ಜೀವನ ಮತ್ತೆ ಒಂಟಿ ಆಗಿಹೋಯ್ತು. ಪುಣ್ಯವಶಾತ್‌ ನೀನು ನನ್ನ ಜೀವನದಲ್ಲಿ ಬಂದೆ. ಇಲ್ಲದಿದ್ದರೆ ನಾನು ಬೇಗ ಮುದುಕಿ ಆಗುತ್ತಿದ್ದೆ. 50ರ ಗಡಿ ಸಮೀಪಿಸುತ್ತಿದ್ದ ನನಗೆ ಆಗಲೂ ಬೇರೆ ಯೋಚನೆ ಬರಲು ಸಾಧ್ಯವಾಗಲಿಲ್ಲ. ಆದರೆ ಈ ಲಾಕ್‌ಡೌನ್‌ ಬರದಿದ್ದರೆ ನನ್ನ ಜೀವನ ಹೀಗೆ ಹೊಸ ದಿಕ್ಕು ಪಡೆಯುತ್ತಿರಲಿಲ್ಲ ಅನಿಸುತ್ತೆ.

“ಕಾಲ ಎಂಥ ಬದಲಾಣೆ ತರುತ್ತದೆ ಹೇಳಲಾಗದು. ಒಮ್ಮೆ ನಮ್ಮ ಬಳಿ ಇದ್ದುದನ್ನೆಲ್ಲ ಕಿತ್ತುಕೊಂಡರೆ ಮತ್ತೊಮ್ಮೆ ಖುಷಿಯಿಂದ ಅದನ್ನು ನಮ್ಮ ಮಡಿಲು ತುಂಬುತ್ತದೆ. ಇಷ್ಟು ವರ್ಷಗಳ ನನ್ನ ಜೀವನದಲ್ಲಿ ಯಾರೂ ಪ್ರದೀಪ್‌ ಜಾಗ ತುಂಬಬಲ್ಲಂಥವರು ಇರಲೇ ಇಲ್ಲ. ಪ್ರದೀಪ್‌ ನಂತರ ನನ್ನ ಹೃದಯದಲ್ಲಿ ಹೊಸ ರಾಗ ಹಾಡಿದ್ದು ಎಂದರೆ ಅದು ಸುರೇಶ್‌ ಕುಮಾರ್‌ ಮಾತ್ರ. ಅವರ ಹಸನ್ಮುಖಿ ವ್ಯಕ್ತಿತ್ವಕ್ಕೆ ನಾನು ಮಾರುಹೋಗಿದ್ದೇನೆ. ಅವರ ಕಣ್ಣಲ್ಲೂ ನನ್ನ ಕುರಿತು ಅಷ್ಟೇ ಕಾಳಜಿ ಇದೆ.

“ಹಿಂದೆಯೂ ನಾನು ಹೇಗೋ ಬದುಕಿದ್ದೆ. ಆದರೆ ಬದುಕಿನಲ್ಲಿ ಇದೀಗ ಒಂದು ಸ್ವಾರಸ್ಯ, ಒಂದು ಆಶಾಕಿರಣ ಮೂಡಿದೆ. ನಿನಗೆ ಇನ್ನೊಂದು ವಿಷಯ ಹೇಳಬೇಕು. ಸುರೇಶ್‌ ಸಹ ನನ್ನಂತೆಯೇ ಏಕಾಂಗಿಯಾಗಿ ಜೀವನದ ಹೋರಾಟದಲ್ಲಿ ಸೋತಿದ್ದಾರೆ. ಮಗಳಿಗೆ ಮಲತಾಯಿ ತರಬಾರದೆಂದು 35ರ ಹರೆಯದಲ್ಲೇ ವಿಧುರರಾಗಿ ಬೇರೆ ಮದುವೆ ಬಗ್ಗೆ ಯೋಚಿಸಲೇ ಇಲ್ಲ. ಅವರ ಮಗಳು ಮೈತ್ರಿ ಈಗ ಸುಖೀ ಗೃಹಿಣಿ. ನನ್ನಂತೆಯೇ ಒಬ್ಬಂಟಿಯಾದ ಅವರು ನಮ್ಮಿಬ್ಬರ ಹೊಸಬಾಳಿನ ಬಗ್ಗೆ ಹೇಳಿದಾಗ ನನಗೂ ಸರಿ ಎನಿಸಿತು. ನಮ್ಮಿಬ್ಬರಿಗೂ ಪರಸ್ಪರರ ಸಾಂಗತ್ಯ ಇಷ್ಟವಾಗಿದೆ. ಇನ್ನಾದರೂ ನಮ್ಮ ಜೀವನದ ಶುಷ್ಕತೆ ಕಳೆದು, ಹಸಿರಸಿರಿ ಕಾಣಲು ನಮ್ಮ ಮದುವೆ ಒಂದೇ ದಾರಿ ಎನಿಸಿದೆ,” ಎಂದು ಸುಮ್ಮನಾದಳು.

“ಅದು ಸರಿ ಅಕ್ಕಾ…. ಆದರೆ ನಮ್ಮ ಚಂದ್ರಣ್ಣಂಗೆ ವಿಷಯ ತಿಳಿದರೆ….. ಅವರ ಮಗಳಿಗೆ ವಿಷಯ ಗೊತ್ತಾದರೆ…. ಅವರುಗಳು ಹೇಗೆ ಭಾವಿಸುತ್ತಾರೋ ಅಂತ…..” ಪಾರ್ವತಿಯ ಮಾತಲ್ಲಿ ಕಳಕಳಿ ಇತ್ತು.

“ಇದರಲ್ಲಿ ತಪ್ಪೇನಿದೆ ಪಾರ್ವತಿ? ಅವರಿಬ್ಬರಿಗೂ ತಮ್ಮದೇ ಆದ ಸಂಸಾರಗಳಿವೆ, ಭವಿಷ್ಯ ಇದೆ, ನೆಮ್ಮದಿ ಇದೆ. ಆದರೆ ನಮ್ಮಿಬ್ಬರ ಬದುಕಲ್ಲಿ ಒಂಟಿತನ ಬಿಟ್ಟು ಬೇರೇನಿದೆ? ಅವರುಗಳೆಂದೂ ನಮ್ಮ ಬಳಿ ಬರುವುದಿಲ್ಲ ಅಥವಾ ನಾವು ಅವರ ಸಂಸಾರದಲ್ಲಿ ಇಣುಕಿ ಅವರಿಗೆ ಹೊರೆಯಾಗಲು ಬಯಸುವುದಿಲ್ಲ. ನಮಗಾಗಿ ನಾವು ಬದುಕಬೇಕು ಎಂದು ಈ ಇಳಿವಯಸ್ಸಿನಲ್ಲಿ ಬಯಸುವುದು ತಪ್ಪೇ? “ಅಷ್ಟಕ್ಕೂ ಆ ಮಕ್ಕಳು ಆಕ್ಷೇಪಿಸುತ್ತಾರೆ, ಸಮಾಜ ಏನು ಹೇಳುತ್ತದೋ ಅಂತ ನಾವು ಹೀಗೆ ನಿರಂತರವಾಗಿ ಒಂಟಿಯಾಗಿದ್ದುಬಿಟ್ಟರೆ ಅದರಿಂದೇನಾದರೂ ಲಾಭವಿದೆಯೇ? ವಿಷಯ ತಿಳಿಯುತ್ತಲೇ ವಿರೋಧಿಸುವ ಮನೋಭಾವವಿದ್ದರೆ ತಕ್ಷಣ ಅಲ್ಲಿಂದ ಓಡಿಬರುತ್ತಾರೆ. ಎಲ್ಲಿ ತಮ್ಮ ತಾಯಿ ತಂದೆ ಬೇರೆಯವರನ್ನು ಮದುವೆಯಾಗಿ ಕುಲಕ್ಕೆ ಕಳಂಕ ಬಳಿಯುತ್ತಾರೋ ಅಂತ….. ಆಮೇಲೆ? ಇವರಿಗಾಗಿ ತಪ್ಪಿತಸ್ಥರಂತೆ ನಾವು ತಲೆತಗ್ಗಿಸಿ ಹೀಗೆ ಹಲ್ಲು ಕಚ್ಚಿಕೊಂಡು ಸುಮ್ಮನಿದ್ದರೆ ತಾವೇ ಗೆದ್ದೆವೆಂದು ಬೀಗುತ್ತಾ ಕೆಲ ದಿನಗಳಾದ ಮೇಲೆ ತಮ್ಮ ಊರಿಗೆ ಹೋಗಿ, ಅಲ್ಲಿಂದ ಒಂದಿಷ್ಟು ಡಾಲರ್‌ ಬಿಸಾಡುತ್ತಾರೆ. ಸತ್ತರೆಂದು ತಿಳಿದರೆ ಸುಡುಗಾಡಿಗೆ ಸಾಗಿಸಲು ವ್ಯವಸ್ಥೆ ಮಾಡಿ, ಮತ್ತೆ ತಮ್ಮ ಲೋಕದಲ್ಲಿ ತಾವಿರುತ್ತಾರೆ.

“ಒಂದು ಪಕ್ಷ ಒಪ್ಪಿಕೊಂಡರೆಂದೇ ಇಟ್ಟುಕೋ, ಬಿಡುವಾದರೆ ಬರುತ್ತಾರೆ. ಒಂದು ಪಾರ್ಟಿ ನಂತರ ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ. ಆಮೇಲಾದರೂ ನನಗೆ ನೀನು ನಿನಗೆ ನಾನು ಅಂತ ಪರಸ್ಪರ ನಾವು ತಾನೇ ಒಬ್ಬರನ್ನೊಬ್ಬರು ಅವರು ಹೊರಟ ನಂತರ ಉಳಿದ ಜೀವನ ನಾವು ತಾನೇ ನಡೆಸಬೇಕು? ಅಂದ ಮೇಲೆ ಮಕ್ಕಳಿಗೂ ಇದಕ್ಕೂ ಸಂಬಂಧವೇ ಇಲ್ಲ ಅಂತಾಯ್ತಲ್ಲ, ಅವರ ಜೀವನ ಅವರದು, ಬದುಕಿರುವವರೆಗೂ ನಮ್ಮ ಜೀವನ ನಮ್ಮ ನೆಮ್ಮದಿ ನಮ್ಮದು!

“ಒಂಟಿ ಜೀವನದ ಕಾಟ ಸಹಿಸಿ ಸಾಕಾಗಿಯೇ ಅವರು ಒಮ್ಮೊಮ್ಮೆ ನಮ್ಮ ಮನೆಗೆ ಸಕ್ಕರೆ, ಶುಂಠಿ ಅಂತ ನೆಪ ಹೇಳಿಕೊಂಡು ಬಂದು ಜನರ ಸ್ನೇಹ ಗಳಿಸಿಕೊಂಡರು. ಮಾನವರಿಗೆ ಬದುಕಲು ತಿಂದುಣ್ಣಲು ಇದ್ದರಷ್ಟೇ ಸಾಲದು, ನೆಮ್ಮದಿಯ ಜೀವನಕ್ಕೆ ಮನಶ್ಶಾಂತಿಯೂ ಅಷ್ಟೇ ಮುಖ್ಯ. ಅದೇ ನಾಳೆಯ ಬದುಕಿಗೆ ನಮಗೆ ಮಾನಸಿಕ ಶಕ್ತಿ ತುಂಬುವುದು.

“ನನಗೇನೋ ನೀನಿದ್ದಿ, ನಿನಗೆ ನಾನಿದ್ದೇನೆ. ಆದರೆ ಸುರೇಶ್‌ ತಮ್ಮ ಕಷ್ಟಸುಖ ಯಾರ ಬಳಿ ಹಂಚಿಕೊಳ್ಳಬೇಕು? ಎಲ್ಲಕ್ಕೂ ಹೆಚ್ಚಿಗೆ ಹೇಳಬೇಕೆಂದರೆ…. ನಮ್ಮಿಬ್ಬರಿಗೂ ಪರಸ್ಪರ ಸಾಂಗತ್ಯ ಬಹಳ ಇಷ್ಟಾಗಿದೆ. ಈ ವಯಸ್ಸಿನಲ್ಲಿ ದೈಹಿಕ ಸುಖ ಯಾರಿಗೆ ಬೇಕು? ಪರಸ್ಪರ ಮಾನಸಿಕ ಆಸರೆ ಸಿಕ್ಕರೆ ಅಷ್ಟೇ ಸಾಕು,” ಎಂದು ತನ್ನ ದೀರ್ಘ ವಿವರಣೆ ನಿಲ್ಲಿಸಿದಳು ಸವಿತಾ.

ಪಾರ್ವತಿ ಏನೂ ಹೇಳದೆ, ಸವಿತಾಳನ್ನು ತನ್ನ ಹೆಗಲ ಮೇಲೆ ಒರಗಿಸಿಕೊಂಡು, ನಿನ್ನ ಮಾತುಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂಬಂತೆ ಅವಳ ಬೆನ್ನು ಸವರಿದಳು. ಇಬ್ಬರ ಕಣ್ಣಲ್ಲೂ ಆನಂದಭಾಷ್ಪ ತುಂಬಿಕೊಂಡಿತು.

ಮಾರನೇ ದಿನ ಸುರೇಶ್‌ ಬಳಿ ಸವಿತಾ ಸೀರಿಯಸ್‌ ಆಗಿ ಕೇಳಿದಳು, “ಸುರೇಶ್‌, ಮುಂದೆ ನಮ್ಮ ಜೀವನ ಹೇಗಿರಬೇಕು ಅಂತೀರಿ?”

“ನೀನು ಈ ಮಾತು ಕೇಳಬಾರದೇ ಅಂತ ಇಷ್ಟು ದಿನಗಳಿಂದ ಕಾಯುತ್ತಿದ್ದೆ. ಲಾಕ್‌ಡೌನ್‌ ಹೇಗೂ ಈಗ ತುಸು ಸಡಿಲಗೊಂಡಿದೆ. ಸಿಂಪಲ್ ಆಗಿ ದೇವಾಲಯದಲ್ಲಿ ಮದುವೆ ಆಗಿ, ನಮ್ಮ ಹಿತೈಷಿಗಳನ್ನು ಕರೆದು ಪಾರ್ಟಿ ಕೊಡೋಣ.”

“ಮತ್ತೆ ನಿಮ್ಮ ಮಗಳಿಗೆ ಹೇಳಬೇಕಲ್ಲವೇ? ನಾನು ನನ್ನ ಮಗನಿಗೆ ತಿಳಿಸುತ್ತೇನೆ.”

“ಹೌದು, ಆ ಕೆಲಸ ಬೇಗ ಆಗಲಿ,” ಎಂದಾಗ ಇಬ್ಬರೂ ತಂತಮ್ಮ ಮಕ್ಕಳಿಗೆ ವಿಷಯ ತಿಳಿಸಿದರು. ಎರಡೂ ಕಡೆ ಸಂತೋಷದ, ಸಂತೃಪ್ತಿಯ ಉತ್ತರ ದೊರಕಿ, ಇವರನ್ನು ಈ ನಿರ್ಧಾರಕ್ಕೆ ಮನಸಾರೆ ಅಭಿನಂದಿಸಿದರು. ಫ್ಲೈಟ್‌ ಸಿಕ್ಕಿದ ನಂತರ ನಿಧಾನವಾಗಿ ಬಂದು ಭೇಟಿಯಾಗುತ್ತೇವೆ ಎಂದು ವಿಡಿಯೋ ಕಾಲ್‌ನಲ್ಲಿ ಪರಸ್ಪರ ಪರಿಚಯ ಮಾಡಿಕೊಂಡು ಅಭಿನಂದಿಸಿದರು. ಸರಳವಾಗಿ ಇವರಿಬ್ಬರ ಮದುವೆ ನೆರವೇರಿ, ಕೆಲವೇ ಹಿತೈಷಿಗಳ, ಅಪಾರ್ಟ್‌ಮೆಂಟ್‌ ಜನರ ನಡುವೆ ಎರಡೂ ಮನೆಗಳ ಅಲಂಕಾರದೊಂದಿಗೆ ಪಾರ್ಟಿ ನಡೆಯಿತು. ಸವಿತಾಳದು 3 ಬೆಡ್‌ ರೂಂ ಮನೆಯಾದ್ದರಿಂದ ಸುರೇಶ್‌ ತಮ್ಮೆಲ್ಲ ಅಗತ್ಯ ಸಾಮಗ್ರಿ ಇಲ್ಲೇ ಸಾಗಿಸಿ ಹೊಸ ಸಂಸಾರ ಶುರು ಮಾಡಿದರು. ಪಾರ್ವತಿ ಎಂದಿನಂತೆ ಅವರ ಬೆಂಗಾವಲಾಗಿ ನಿಂತಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ