ಇತ್ತೀಚೆಗೆ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಇದು ಅಗತ್ಯ ಹೌದು. ನಮ್ಮ ದೇಶದಲ್ಲೂ ಸ್ಥೂಲಕಾಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಅನಿಯಮಿತ ದಿನಚರ್ಯೆ ಹಾಗೂ ಫಾಸ್ಟ್ ಫುಡ್ ಸೇವನೆ. ಹಿಂದೆಲ್ಲ ಅನೇಕ ಕಾಯಿಲೆಗಳು ವ್ಯಕ್ತಿಗೆ ವಯಸ್ಸಾದ ನಂತರವೇ ಬರುತ್ತಿತ್ತು, ಆದರೆ ಈಗ ಸಣ್ಣಪುಟ್ಟ ವಯಸ್ಸಿನವರಿಗೇ ಬರುತ್ತಿದೆ. ಅಂದರೆ ಮಧುಮೇಹ, ಬಿ.ಪಿ., ಹೃದ್ರೋಗ, ಆರ್ಥರೈಟಿಸ್ ಇತ್ಯಾದಿ. ಹೀಗಾದಾಗ ವೈದ್ಯರು ಇಂಥವರಿಗೆ ಸತತ, ತೂಕ ಕಡಿಮೆ ಮಾಡಿ ಎಂದು ಹೇಳುತ್ತಲೇ ಇರುತ್ತಾರೆ. ಸಮಯಕ್ಕೆ ಸರಿಯಾಗಿ ಲೋ ಕ್ಯಾಲೋರಿಯ ಆಹಾರವನ್ನೇ ಸೇವಿಸಬೇಕೆಂದು ಹೇಳುತ್ತಾರೆ. ಹುರಿದ ಕರಿದ ಪದಾರ್ಥ ಸ್ಥೂಲಕಾಯ ಹೆಚ್ಚಿಸುತ್ತವೆ. ಆದರೆ ಜನ ತಮ್ಮ ಆಹಾರದ ಬಗ್ಗೆ, ಹುರಿದಕರಿದ ಪದಾರ್ಥ ಗಳಿಲ್ಲದೆ ಕೇವಲ ಬೆಂದ ಆಹಾರ ಊಟ ಮಾಡಿದರೆ ಮನಸ್ಸಿಗೆ ತೃಪ್ತಿ ಇಲ್ಲ ಎನ್ನುತ್ತಾರೆ. ಯಾವುದೋ ರೀತಿಯಲ್ಲಿ ಬಲವಂತವಾಗಿ ಇಂಥ ಆಹಾರ ತಿನ್ನುತ್ತಾರೆ, ಬೇಸರಿಸುತ್ತಾರೆ. ಇನ್ನು ಚಿಂತೆ ಬಿಡಿ, ಇಂಥ ತಿನಿಸನ್ನು ರುಚಿಕರಗೊಳಿಸುವ ವಿಧಾನ ಇದೋ ಇಲ್ಲಿದೆ :
ಸುವಾಸನಾಭರಿತ ಮಸಾಲೆ ಒಗ್ಗರಣೆ
ಸುವಾಸನಾಭರಿತ ಮಸಾಲೆ ಲವಂಗ, ಏಲಕ್ಕಿ, ದಾಲ್ಚಿನ್ನಿ, ಜೀರಿಗೆ, ಇಂಗು ಇತ್ಯಾದಿ ಬಳಸಿ ದಾಲ್, ಪಲ್ಯ ತಯಾರಿಸಿದರೆ ಬಲು ರುಚಿಕರ ಎನಿಸುತ್ತದೆ. ಬಿಸಿಯಾದ ದಾಲ್, ತೊವ್ವೆ ಸರ್ವ್ ಮಾಡುವ ಮೊದಲು ಸಣ್ಣ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಇಂಗು, ಲವಂಗ, ಇಡಿಯಾದ ಒಣ ಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಟ್ಟು ನೋಡಿ. ಅದು ಸುವಾಸನೆಯಿಂದ ಘಂ ಎಂದಾಗ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ದಾಲ್ ಮಖನಿ, ರಾಜ್ಮಾ ಗ್ರೇವಿ ತಯಾರಿಸುವ ಸಮಯದಲ್ಲಿ ಅದು ಕುದಿಯುವ ಸ್ಥಿತಿ ಬಂದಾಗ, ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಇತರ ಮಸಾಲೆ ಜೊತೆ ಕುದಿಸಿದರೆ (ತುಸು ಉಪ್ಪು ಸೇರಿಸಿ) ಅದರ ರುಚಿ ಹೆಚ್ಚುತ್ತದೆ, ಸುವಾಸನೆಯೂ ಕೂಡಿಕೊಳ್ಳುತ್ತದೆ. ಇದಾದ ಮೇಲೆ ಜೀರಿಗೆ, ಕಸೂರಿಮೇಥಿ, ಇಂಗು ಇತ್ಯಾದಿ ಜಿಡ್ಡಿಲ್ಲದೆ ಲಘು ಹುರಿದು ಒಗ್ಗರಣೆ ಕೊಡಿ. ಇಂಥ ದಾಲ್, ರಾಜ್ಮಾ ರುಚಿ ಸವಿದ ಮೇಲೆ ನೀವೇ ಹೇಳಿ!
ಅಕ್ಕಿ ತೊಳೆದ ನೀರನ್ನು ಚೆಲ್ಲದೆ ಒಂದು ಬೇಸ್‌ನ್ನಿಗೆ ಹಾಕಿಡಿ. ಇದಕ್ಕೆ ಲವಂಗದ ಎಲೆ, ಮೊಗ್ಗು, ಪಲಾವ್ ಎಲೆ, ಲವಂಗ, ಚಕ್ಕೆ, ಏಲಕ್ಕಿ ಇತ್ಯಾದಿ ಸೇರಿಸಿ ಕುದಿಸಿರಿ. ಈ ಕುದಿವ ನೀರಿಗೆ ತೊಳೆದ ಅಕ್ಕಿ ಹಾಕಿ ಅನ್ನ ತಯಾರಿಸಿ. ಅನ್ನ ಬಲು ರುಚಿಕರ ಎನಿಸುತ್ತದೆ.
ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಬಳಸುತ್ತಿರಿ
ಈರುಳ್ಳಿ, ಬೆಳ್ಳುಳ್ಳಿ, ಶುಂಠಿಗಳನ್ನು ಸಣ್ಣಗೆ ಹೆಚ್ಚಿ ತುಪ್ಪ, ಎಣ್ಣೆ ಜಿಡ್ಡಿಲ್ಲದೆ ಹುರಿದು ಪೇಸ್ಟ್ ಮಾಡಿದಾಗಲೂ ಸಹ ಗ್ರೇವಿ ಸಾಕಷ್ಟು ರುಚಿಕರ ಎನಿಸುತ್ತದೆ. ಆಹಾರ ತಜ್ಞರ ಸಲಹೆ ಪ್ರಕಾರ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 3 ಚಮಚ ಎಣ್ಣೆ/ತುಪ್ಪ ಬಳಸಬಹುದು, ಅದಕ್ಕಿಂತ ಹೆಚ್ಚಲ್ಲ ಎನ್ನುತ್ತಾರೆ. ಆದರೆ ತುಂಬಾ ಹೆಲ್ತ್ ಕಾನ್ಶಿಯಸ್ ಆಗಿದ್ದು ಇಷ್ಟು ಮಾತ್ರದ ಎಣ್ಣೆಯೂ ಬೇಡ ಎನ್ನುವವರಿಗೆ ಇವರ ಸಲಹೆ ಎಂದರೆ, ಇಂಥ ಹುರಿಯಬೇಕಾದ ಪದಾರ್ಥಗಳನ್ನು ದಪ್ಪಗೆ ಹೆಚ್ಚಿ, ತುಸು ಬಿಸಿ ನೀರಲ್ಲಿ ಬೇಯಿಸಿ, ಆರಿದ ನಂತರ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಗ್ರೇವಿಗೆ ಬೆರೆಸಿಕೊಳ್ಳಿ. ಒಣ ಮಸಾಲೆಗಳನ್ನು ಹಾಗೇ ಜಿಡ್ಡಿಲ್ಲದೆ ಹುರಿದು, ಪುಡಿ ಮಾಡಿ ಗ್ರೇವಿಗೆ ಬೆರೆಸಿ. ಎಣ್ಣೆ/ ತುಪ್ಪ ಇಲ್ಲದ ಗ್ರೇವಿ ರೆಡಿ!
– ಈರುಳ್ಳಿ ಬೆಳ್ಳುಳ್ಳಿಗಳನ್ನು ಒಲೆ ಮೇಲೆ ಪ್ಯಾನ್‌ನಲ್ಲಿ ಹಾಗೇ ಹುರಿದು ಅಥವಾ ಮೈಕ್ರೊವೇವ್ ಮಾಡಿ ರುಬ್ಬಿಕೊಳ್ಳಿ. ಇದಕ್ಕೆ ಮಸಾಲೆ ಪೇಸ್ಟ್ ಸೇರಿಸಿ ಹುರಿದು ನಂತರ ಗ್ರೇವಿಗೆ ಬೆರೆಸಿರಿ. ಇದು ಇನ್ನೊಂದು ತರಹ ಹೊಸ ರುಚಿ ಕೊಡುತ್ತದೆ.
– ಗ್ರೇವಿಯ ವ್ಯಂಜನಗಳಿಗೆ ಅಚ್ಚ ಖಾರದ ಪುಡಿ ಬೆರೆಸದ್ದಿದರೆ ಅದಕ್ಕೆ ಸೂಕ್ತ ಬಣ್ಣ ಬರುವುದಿಲ್ಲ ಎಂಬ ಸಮಸ್ಯೆ ಇದೆ. ಇದಕ್ಕಾಗಿ ನೀವು ಕಾಶ್ಮೀರಿ ಒಣ ಮೆಣಸಿನಕಾಯನ್ನು (ಅಚ್ಚ ಕೆಂಪಗೆ, ಬ್ಲ್ಯಾಕ್/ಬ್ರೌನ್ ಅಲ್ಲ) ತುಸು ಹೊತ್ತು ಬಿಸಿ ನೀರಲ್ಲಿ ನೆನೆಸಿ ನಂತರ ರುಬ್ಬಿಕೊಳ್ಳಿ, ಆಮೇಲೆ ಇದನ್ನು ಗ್ರೇವಿಗೆ ಬೆರೆಸಿಡಿ. ಇದೂ ಬೇಡ ಎನಿಸಿದರೆ, ಗ್ರೇವಿ ಕುದಿಯುವಾಗ ಬೀಟ್‌ರೂಟ್‌ನ ಎರಡು ತುಂಡುಗಳನ್ನು ಹಾಕಿ. ಗ್ರೇವಿ ಕೆಳಗಿಳಿಸುವಾಗ ಅದನ್ನು ತೆಗೆದುಬಿಡಿ, ಒಳ್ಳೆ ಕಲರ್ ಕೂಡಿರುತ್ತದೆ.
ಹೀಗೆ ರುಚಿ ಹೆಚ್ಚಿಸಿ
ಖಿಚಡಿ ಎಂದಾಕ್ಷಣ ಮಸಾಲೆ ರಹಿತ (ನಮ್ಮ ಪೊಂಗಲ್‌ಗೆ ಹತ್ತಿರದ್ದು, ಉ.ಭಾರತದ ಅಕ್ಕಿ-ಹೆಸರುಬೇಳೆ, ಉಪ್ಪು ಮಿಶ್ರಿತ ಅನ್ನ) ಎಂದು ಮೂಗು ಮುರಿಯುವವರೇ ಹೆಚ್ಚು. ಅಂಥವರಿಗೆ ಅದರ ಜೊತೆ ತುಪ್ಪ ಹಾಕಿ, ಹಪ್ಪಳ, ಚಟ್ನಿ, ಉಪ್ಪಿನಕಾಯಿ, ರಾಯ್ತಾ, ಮೊಸರುಬಜ್ಜಿ ಇತ್ಯಾದಿ ಕೊಟ್ಟರೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದೇ ತರಹ ಲೋ ಕ್ಯಾಲೋರಿ ವ್ಯಂಜನಗಳ ಜೊತೆ ಅದನ್ನು ಹೆಚ್ಚು ಸ್ವಾದಿಷ್ಟಗೊಳಿಸಲು ಈರುಳ್ಳಿ, ಟೊಮೇಟೊ, ಪುದೀನಾ, ಹುಣಿಸೆ, ಮೊಸರು ಇವನ್ನು ಬೆರೆಸಬೇಕು.
ಈ ಪದಾರ್ಥಗಳು ಎಂಥ ಲೋ ಕ್ಯಾಲೋರಿ ಸ್ವಾದರಹಿತ ವ್ಯಂಜನವನ್ನೂ ಸ್ವಾದಿಷ್ಟಗೊಳಿಸಬಲ್ಲವು. ಅಂದರೆ ಪುದೀನಾ, ಹುಣಿಸೆಗೆ ಇತರ ಸಾಮಗ್ರಿ ಬೆರೆಸಿ ಹುಳಿಸಿಹಿ ಚಟ್ನಿ ಮಾಡಬಹುದು. ಈರುಳ್ಳಿ, ಟೊಮೇಟೊ ಹೆಚ್ಚಿ ಸಲಾಡ್ ಮಾಡಿ ಮೊಸರು ಬೆರೆಸಬಹುದು. ಮೊಸರಿನ ಈ ರಾಯ್ತಾಗೆ ಜೀರಿಗೆ ಒಗ್ಗರಣೆ ಸೊಗಸಾಗಿ ಹೊಂದುತ್ತದೆ. ಇಷ್ಟು ಮಾತ್ರವಲ್ಲ ನಿಂಬೆ, ಮೂಸಂಬಿ, ಕಿತ್ತಳೆ, ನೆಲ್ಲಿಕಾಯಿ ಇತ್ಯಾದಿಗಳ ಸೇವನೆಯಿಂದ ವಿಟಮಿನ್ `ಸಿ’ ಹೆಚ್ಚಾಗಿ ದೊರಕುವುದಲ್ಲದೆ, ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಪರ್ಫೆಕ್ಟ್ ಪಾತ್ರೆಗಳ ಆಯ್ಕೆ
ಕಡಿಮೆ ಎಣ್ಣೆ/ತುಪ್ಪ ಬಳಸಿ ಮಾಡುವ ಅಡುಗೆಗೆ ಸಮರ್ಪಕ ಪಾತ್ರೆಗಳ ಆಯ್ಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ನಾನ್‌ಸ್ಟಿಕ್ ಸೆರಾಮಿಕ್ ಪಾತ್ರೆಗಳು ಆಹಾರ ತಯಾರಿಸಲು ಉಪಯುಕ್ತ. ಇವುಗಳಲ್ಲಿ ಆಹಾರ ಅಂಟಿಕೊಳ್ಳುವುದಿಲ್ಲ ಅಥವಾ ಸೀದು ಹೋಗುವುದಿಲ್ಲ. ಜೊತೆಗೆ ಮೈಕ್ರೋವೇವ್, ಏರ್‌ಫ್ರೈಯರ್‌ನಲ್ಲೂ ಚೆನ್ನಾಗಿ ಹುರಿದು, ಬಾಡಿಸಬಹುದು. ಸ್ಟಫ್ಡ್ ಕ್ಯಾಪ್ಸಿಕಂ, ಬೆಂಡೆ ಫ್ರೈ, ಟಿಂಡಾ, ಟೊಮೇಟೊ ಮಸಾಲೆ ಇತ್ಯಾದಿ ಜೊತೆ ಕಬಾಬ್, ಕಟ್ಲೆಟ್‌ಗಳಿಗೂ ಈ ಎರಡು ವಸ್ತುಗಳೂ ಉಪಯುಕ್ತ.
ಹೆಲ್ದಿ ಕುಕಿಂಗ್ ಟಿಪ್ಸ್
ಕೋಫ್ತಾ, ಕಬಾಬ್ ಇತ್ಯಾದಿ ಸವಿಯುವ ಮನಸ್ಸಾದರೆ ಅಥವಾ ಹೆಸರುಬೇಳೆ ಪಕೋಡ, ಚಿಂತಿಸುವ ಅಗತ್ಯವಿಲ್ಲ. ನಿರ್ಲೆಪ್ ನಾನ್‌ಸ್ಟಿಕ್ ತವಾ, ಕಡಾಯಿಗಳಲ್ಲಿ ತೀರಾ ಕಡಿಮೆ ಪ್ರಮಾಣದ ಎಣ್ಣೆ ಅಂದರೆ ಅರ್ಧ ಸೌಟು ಎಣ್ಣೆಯಲ್ಲೇ 10-12 ಕೋಫ್ತಾ ಮಾಡಬಹುದು. ಈ ಬಗೆಯ ಬಾಣಲೆಗಳಲ್ಲಿ ಕುಳಿಗಳಿರುವ ಭಾಗಕ್ಕೆ ತುಸುವೇ ಎಣ್ಣೆ ಸವರಿ ಪಡ್ಡು (ಗುಳಿಯಪ್ಪ) ಮಾಡಬಹುದು. ಇದರ ನೆರವಿನಿಂದ ಉತ್ತಮ ಕೋಫ್ತಾ, ಪಕೋಡ ತಯಾರಿಸಬಹುದು. ಇಷ್ಟು ಮಾತ್ರವಲ್ಲದೆ ಆವಿಯಲ್ಲಿ ಬೇಯಿಸುವ, ಓವನ್‌ನಲ್ಲಿ ತಯಾರಿಸುವ ಆಯ್ಕೆಗಳಿವೆ. ಇದೇ ತರಹ ಮೊಸರುವಡೆ ಸಹ ತಯಾರಿಸಿಕೊಳ್ಳಬಹುದು.
– ಈರುಳ್ಳಿ ಬೆಳ್ಳುಳ್ಳಿ ಪೇಸ್ಟ್ ನೆರವಿಲ್ಲದೆ ಗಾಢ ಗ್ರೇವಿ ತಯಾರಿಸಬೇಕೇ? ಹಾಗಿದ್ದರೆ ಡ್ರೈ ಮಿಕ್ಸಿಗೆ ಹುರಿಗಡಲೆ ಹಾಕಿ ಪೌಡರ್ ಮಾಡಿಡಿ. ಹುರಿದ ಕಡಲೆಬೀಜ ಸಹ ಹೀಗೆ ಪುಡಿ ಮಾಡಿಡಿ. ಇವೆರಡನ್ನೂ ಬೆರೆಸಿ, ಕುದಿವ ಗ್ರೇವಿಗೆ ಬಳಸಿಕೊಳ್ಳಿ. ಆಗ ಗ್ರೇವಿ ಸಾಕಷ್ಟು ಗಾಢವಾಗುತ್ತದೆ.
– ಕಡಿಮೆ ಕ್ಯಾಲೋರಿಯ ಡ್ರೈ ಪಲ್ಯ ತಯಾರಿಸಬೇಕೇ? ಆದಷ್ಟೂ ಕಡಿಮೆ ಪ್ರಮಾಣದ ನೀರಿನಲ್ಲಿ ಕುಕ್ಕರ್‌ನಲ್ಲಿ ಇದನ್ನು ಬೇಯಿಸಿ ಪಲ್ಯ ಮಾಡಿ.
– ಗಂಜಿ ಬಸಿದ ಅನ್ನದಲ್ಲಿ ಕ್ಯಾಲೋರಿ ಕಡಿಮೆ. ಆದ್ದರಿಂದ ಇದನ್ನು ಸುವಾಸನಾಯುಕ್ತಗೊಳಿಸಲು, ಒಂದು ನಾನ್‌ಸ್ಟಿಕ್ ಪ್ಯಾನ್‌ಗೆ ಜಿಡ್ಡು ಸವರಿ ಅದಕ್ಕೆ ಜೀರಿಗೆ, ಲವಂಗ, ಏಲಕ್ಕಿ, ಚಕ್ಕೆ, ಉಳಿದ ಮಸಾಲೆ ಹಾಕಿ ಚೆನ್ನಾಗಿ ಹುರಿದು, ನಂತರ ಅಕ್ಕಿ ಹಾಕಿ ಅನ್ನ ತಯಾರಿಸಿ. ಆಗಾಗ ಅದನ್ನು ಕೆದಕುತ್ತಾ ಇರಿ. ಬಲು ಸುವಾಸನಾಯುಕ್ತ ಅನ್ನ ತಯಾರಾಗುತ್ತದೆ.
– ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ ಇತರ ಮಸಾಲೆಗಳು ಎಷ್ಟು ತಾಜಾ ಆಗಿರುತ್ತವೋ, ಹೆಚ್ಚಿದ ಬಳಿಕ ಎಷ್ಟು ಬೇಗ ಬಳಸುತ್ತೀರೋ ವ್ಯಂಜನದ ಸ್ವಾದ ಅಷ್ಟೇ ಸೊಗಸಾಗಿರುತ್ತದೆ.
– ನೀರಜಾ