ಡ್ರೈ ಫ್ರೂಟ್ಸ್ ಬರ್ಫಿ

ಸಾಮಗ್ರಿ : 30 ಹೈಡ್‌ ಅಂಡ್ ಸೀಕ್‌ ಬಿಸ್ಕತ್ತು, ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 1 ಕಪ್‌), ಅರ್ಧ ಕಪ್‌ ಜರಡಿಯಾಡದ ಗೋಧಿಹಿಟ್ಟು, 4 ಚಮಚ ಕೋಕೋ ಪುಡಿ, 200 ಗ್ರಾಂ ಕಂಡೆನ್ಸ್ಡ್ ಮಿಲ್ಕ್, ಅರ್ಧ ಕಪ್‌ ತುಪ್ಪ.

ವಿಧಾನ : ಮೊದಲು ಬಾಣಲೆಯಲ್ಲಿ  ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ-ಗೋಡಂಬಿಗಳನ್ನು ಹುರಿದು ತೆಗೆಯಿರಿ. ಇದರಲ್ಲಿಯೇ ಗೋಧಿಹಿಟ್ಟನ್ನೂ ಲಘುವಾಗಿ ಹುರಿಯಿರಿ. ಒಂದು ಬೇಸನ್ನಿಗೆ ಬಿಸ್ಕತ್ತನ್ನು ಪುಡಿ ಮಾಡಿ ಹಾಕಿ, ಅದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ಉದ್ದನೆಯ ಸುರುಳಿ ಮಾಡಿ. ಇದನ್ನು ಸಿಲ್ವರ್‌ ಫಾಯಿಲ್‌ನಲ್ಲಿ ಸುತ್ತಿ ಫ್ರಿಜ್‌ನಲ್ಲಿ 2-3 ಗಂಟೆ ಕಾಲ ಇರಿಸಬೇಕು. ನಂತರ ಫಾಯಿಲ್‌ ತೆಗೆದು, ಚಿತ್ರದಲ್ಲಿರುವಂತೆ ಬರ್ಫಿಗಳಾಗಿ ಕತ್ತರಿಸಿ ಸವಿಯಲು ಕೊಡಿ.

ಅಂಜೂರದ ಡ್ರೈಫ್ರೂಟ್‌ ಬರ್ಫಿ

ಸಾಮಗ್ರಿ : 100 ಗ್ರಾಂ ಒಣ ಅಂಜೂರ, 50 ಗ್ರಾಂ ಸಕ್ಕರೆ, 2-3 ಚಿಟಕಿ ಏಲಕ್ಕಿ ಪುಡಿ, ಪಚ್ಚ ಕರ್ಪೂರ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್‌), ಅರ್ಧ ಸೌಟು ತುಪ್ಪ.

ವಿಧಾನ : ಅಂಜೂರವನ್ನು 3-4 ತಾಸು ಬೆಚ್ಚಗಿನ ಹಾಲಿನಲ್ಲಿ ನೆನೆಹಾಕಿಡಿ. ನಡುನಡುವೆ ಅದನ್ನು ತಿರುಗಿಸುತ್ತಾ ಎಲ್ಲಾ ಬದಿಯಿಂದಲೂ ಹಿಗ್ಗುವಂತೆ ಮಾಡಿ. ನಂತರ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ ಇದನ್ನು ಅದಕ್ಕೆ ಹಾಕಿ ಬಾಡಿಸಿ. ಆಮೇಲೆ ಸಕ್ಕರೆ ಹಾಕಿ ಕೆದಕಿರಿ. ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ-ಗೋಡಂಬಿ, ಏಲಕ್ಕಿ, ಪ.ಕರ್ಪೂರ ಇತ್ಯಾದಿ ಬೆರೆಸಿ. ನಡುನಡುವೆ ತುಪ್ಪ ಹಾಕುತ್ತಾ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಒಂದು ಅಗಲವಾದ ಟ್ರೇಗೆ ತುಪ್ಪ ಸವರಿ ಇದನ್ನು ಅದಕ್ಕೆ ಹರಡಿ ಆರಲು ಬಿಡಿ. ಚೆನ್ನಾಗಿ ಆರಿದ ಮೇಲೆ ಬರ್ಫಿ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.

ವಾಲ್‌‌ನಟ್‌ ಬಾಲ್ಸ್

ಸಾಮಗ್ರಿ : 150 ಗ್ರಾಂ ಅಖರೋಟ್‌, 100 ಗ್ರಾಂ ಖೋವಾ, ಅಲಂಕರಿಸಲು 8-10 ಅಖರೋಟ್‌, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್‌), 2-3 ಚಿಟಕಿ ಏಲಕ್ಕಿ ಪುಡಿ, ಅರ್ಧ ಸೌಟು ತುಪ್ಪ, 100 ಗ್ರಾಂ ಬೂರಾ ಸಕ್ಕರೆ, ಅರ್ಧ ಸಣ್ಣ ಚಮಚ ಒಣಶುಂಠಿ ಪುಡಿ, ಸೋಂಪು.

ವಿಧಾನ : ಅಖರೋಟ್‌ನ್ನು ತುಪ್ಪದಲ್ಲಿ ಲಘುವಾಗಿ ಹುರಿದು ತರಿತರಿಯಾಗಿ ಪುಡಿ ಮಾಡಿಡಿ. ಅದೇ ಬಾಣಲೆಯಲ್ಲಿ ತುಪ್ಪದೊಂದಿಗೆ ದ್ರಾಕ್ಷಿ-ಗೋಡಂಬಿ ಹುರಿದು ಬೇರೆ ಇಡಿ. ನಂತರ ಅದರಲ್ಲಿ ಮಸೆದ ಖೋವಾ ಹಾಕಿ ಬಾಡಿಸಬೇಕು. ಇದಕ್ಕೆ ಸೋಂಪು, ಒಣಶುಂಠಿ ಪುಡಿ ಹಾಕಿ ಕೆದಕಿರಿ. ಇದನ್ನು ಕೆಳಗಿಳಿಸಿ ತುಸು ಆರಲು ಬಿಡಿ. ನಂತರ ಅಖರೋಟ್‌ ತರಿ, ಏಲಕ್ಕಿ, ಬೂರಾ ಸಕ್ಕರೆ, ಗೋಡಂಬಿ-ದ್ರಾಕ್ಷಿ ಇತ್ಯಾದಿ ಎಲ್ಲಾ ಸೇರಿಸಿ. ತುಪ್ಪದ ಕೈ ಮಾಡಿಕೊಂಡು ಚಿತ್ರದಲ್ಲಿರುವಂತೆ ಉಂಡೆ ಕಟ್ಟಿ. ಮೇಲೆ 1-1 ಅಖರೋಟ್‌ ಸಿಗಿಸಿ ಸವಿಯಲು ಕೊಡಿ.

ಪಿಸ್ತಾ-ಕಾಜೂ ಚಾಕೋ ಬಾರ್‌

ಸಾಮಗ್ರಿ : 1 ಕಪ್‌ ಖೋವಾ, ಅರ್ಧರ್ಧ ಕಪ್‌ ಪಿಸ್ತಾ ಚೂರು, ಪುಡಿಸಕ್ಕರೆ, 2 ಚಮಚ ಕೋಕೋ ಪುಡಿ, ದ್ರಾಕ್ಷಿ-ಗೋಡಂಬಿ ಬಾದಾಮಿಯ ತರಿ (ಒಟ್ಟಾಗಿ ಅರ್ಧ ಕಪ್‌), 2 ಹನಿ ಕೇದಗೆ ಎಸೆನ್ಸ್, ಒಂದಿಷ್ಟು ಬಿಳಿ-ಕಂದು ಬಣ್ಣದ ಚಾಕೋ ಚಿಪ್ಸ್.

ವಿಧಾನ : ಖೋವಾ ಮ್ಯಾಶ್‌ ಮಾಡಿ. ಸಕ್ಕರೆ ಜೊತೆ ಇದನ್ನು ತುಪ್ಪ ಬಿಸಿ ಮಾಡಿದ ನಾನ್‌ಸ್ಟಿಕ್‌ ಪ್ಯಾನಿನಲ್ಲಿ 6-7 ನಿಮಿಷ ಬಾಡಿಸಬೇಕು. ಈ ಮಿಶ್ರಣವನ್ನು ಕೂಲ್‌ ಮಾಡಿ, ಅದಕ್ಕೆ ಕೇದಗೆ ಎಸೆನ್ಸ್ ಬೆರೆಸಿ. ಈ ಮಿಶ್ರಣವನ್ನು 2 ಭಾಗ ಮಾಡಿ. ಡ್ರೈ ಮಿಕ್ಸಿಗೆ ಪಿಸ್ತಾ ಹಾಕಿ ಪುಡಿ ಮಾಡಿ. ಒಂದು ಭಾಗದ ಖೋವಾಗೆ ಇದನ್ನು ಬೆರೆಸಿ. ಉಳಿದ ಭಾಗಕ್ಕೆ ಕೋಕೋ ಪುಡಿ ಗೋಡಂಬಿ ತರಿ ಮಿಶ್ರಣ ಬೆರೆಸಿಡಿ. ಪಿಸ್ತಾ ಬೆರೆತ ಭಾಗವನ್ನು ಉದ್ದಕ್ಕೆ ಲಟ್ಟಿಸಿ. ಇದರ ಮಧ್ಯೆ ಲಟ್ಟಿಸಿದ ಕೋಕೋ ಭಾಗ ಇರಿಸಿ. ಇವನ್ನು ಈಗ ಒಟ್ಟಾಗಿ ಲಟ್ಟಿಸಿ. ಇದನ್ನು ಫ್ರಿಜ್‌ನಲ್ಲಿ 1 ಗಂಟೆ ಕಾಲವಿರಿಸಿ ಕೂಲ್‌ ಮಾಡಿ. ನಂತರ ಚಿತ್ರದಲ್ಲಿರುವಂತೆ ಸುರುಳಿ ಸುತ್ತಿ, ಚಕ್ರಾಕಾರವಾಗಿ ಕತ್ತರಿಸಿ. ಇದಕ್ಕೆ ಬಿಳಿಯ, ಕಂದು ಬಣ್ಣದ ಚಾಕೋ ಚಿಪ್ಸ್ ಅಂಟಿಸಿ. ಇದೀಗ ಪಿಸ್ತಾ ಕಾಜೂ ಚಾಕೋಬಾರ್‌ ರೆಡಿ!

ಡ್ರೈಫ್ರೂಟ್‌ ಸ್ಪೆಷಲ್

ಸಾಮಗ್ರಿ : ಅಡುಗೆ ಗೋಂದು, ಬಾದಾಮಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ ಚೂರು (ತಲಾ 50 ಗ್ರಾಂ), 100 ಗ್ರಾಂ ತಾವರೆ ಬೀಜ, ರುಚಿಗೆ ತಕ್ಕಷ್ಟು ತುರಿದ ಕೊಬ್ಬರಿ, ಬೂರಾ ಸಕ್ಕರೆ, 2-3 ಚಿಟಕಿ ಏಲಕ್ಕಿ ಪುಡಿ, ಹುರಿದ ಜೀರಿಗೆ, ಸೋಂಪು, ಓಮ, ಅರ್ಧ ಸೌಟು ತುಪ್ಪ.

ವಿಧಾನ : ಮೊದಲು ಬಾಣಲೆಯಲ್ಲಿ 100 ಗ್ರಾಂ ತುಪ್ಪ ಬಿಸಿ ಮಾಡಿ ಗೋಂದು ಹಾಕಿ ಹುರಿಯಿರಿ. ಇದು ಆರಿದ ನಂತರ ತರಿ ಮಾಡಿಡಿ. ಉಳಿದ ತುಪ್ಪದಲ್ಲಿ ತಾವರೆ ಬೀಜ ಹುರಿದಿಡಿ. ಇದನ್ನು ತರಿ ಮಾಡಿ. ಇನ್ನಷ್ಟು ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ಇವೆರಡರ ಮಿಶ್ರಣಕ್ಕೆ ಸೇರಿಸಿ. ಕೊನೆಯಲ್ಲಿ ಜೀರಿಗೆ, ಸೋಂಪು, ಓಮ, ತುರಿದ ಕೊಬ್ಬರಿ ಎಲ್ಲಾ ಸೇರಿಸಿ. ತುಸು ಆರಿದ ನಂತರ ಬೂರಾ ಸಕ್ಕರೆ, ಏಲಕ್ಕಿ ಸೇರಿಸಿ. ಇದೀಗ ಡ್ರೈಫ್ರೂಟ್‌ ಸ್ಪೆಷಲ್ ಸವಿಯಲು ರೆಡಿ!

ಸಿಹಿ ತಾವರೆ ಬೀಜ

ಸಾಮಗ್ರಿ : 100 ಗ್ರಾಂ ತಾವರೆ ಬೀಜ (ಸೂಪರ್‌ ಮಾರ್ಕೆಟ್‌ನಲ್ಲಿ ಲಭ್ಯ), 100 ಗ್ರಾಂ ಬೆಲ್ಲ, 4-5 ಚಮಚ ತುಪ್ಪ.

ವಿಧಾನ : ಮೊದಲು ತಾವರೆ ಬೀಜಗಳನ್ನು ತುಪ್ಪದಲ್ಲಿ ಘಮ್ಮೆಂದು ಹುರಿಯಿರಿ. ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ಪುಡಿ ಮಾಡಿದ ಬೆಲ್ಲ ಹಾಕಿ ಕರಗಿಸಿ. ಇದಕ್ಕೆ ತಾವರೆಬೀಜ ಹಾಕಿ ಬಾಡಿಸಿ. ಆಗ ಬೆಲ್ಲ ಚೆನ್ನಾಗಿ ಮೆತ್ತಿಕೊಳ್ಳುತ್ತದೆ. ಇದನ್ನು ಸರ್ವಿಂಗ್‌ ಪ್ಲೇಟ್‌ನಲ್ಲಿ ಹರಡಿ ಕೂಲ್ ಮಾಡಿ, ಸವಿಯಲು ಕೊಡಿ.

ಡ್ರೈಫ್ರೂಟ್‌ ಕೊಬ್ಬರಿ ಮಿಠಾಯಿ

ಸಾಮಗ್ರಿ : 250 ಗ್ರಾಂ ಕೊಬ್ಬರಿ ತುರಿ, 2-3 ಚಿಟಕಿ ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಅರ್ಧ ಸೌಟು ತುಪ್ಪ, 250 ಮಿ.ಲೀ. ಕಂಡೆನ್ಸ್ಡ್ ಮಿಲ್ಕ್, 2-3 ಚಮಚ ಗುಲ್ಕಂದ್‌, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಖರ್ಜೂರ, ಅಖ್ರೋಟ್‌ ಚೂರು, (ಒಟ್ಟಾರೆ 1 ಕಪ್‌), ಅಲಂಕರಿಸಲು ತುಸು ಗುಲಾಬಿ ದಳ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಕೊಬ್ಬರಿ ತುರಿ ಹಾಕಿ ಲಘುವಾಗಿ ಹುರಿಯಿರಿ. ನಂತರ ಕಂಡೆನ್ಸ್ಡ್ ಮಿಲ್ಕ್ ಬೆರೆಸಿ ಕೆದಕಿ ಕೆಳಗಿಳಿಸಿ, ಉಂಡೆ ಕಟ್ಟುವ ಹದಕ್ಕೆ ಚೆನ್ನಾಗಿ ಆರಲು ಬಿಡಿ. ಡ್ರೈಫ್ರೂಟ್ಸ್ ನ್ನು ತುಪ್ಪದಲ್ಲಿ ಹುರಿದು ತರಿ ಮಾಡಿ. ಇದಕ್ಕೆ ಗುಲ್ಕಂದ್‌, ಏಲಕ್ಕಿ ಬೆರೆಸಿ ಸಣ್ಣ ನಿಂಬೆ ಗಾತ್ರದ ಉಂಡೆ ಕಟ್ಟಿ. ಇದನ್ನು ಕೊಬ್ಬರಿ ಮಿಶ್ರಣದಲ್ಲಿ ಚೆನ್ನಾಗಿ ಹೊರಳಿಸಿ ರವೆ ಉಂಡೆ ಗಾತ್ರ ಮಾಡಿ. ಚಿತ್ರದಲ್ಲಿರುವಂತೆ ಗುಲಾಬಿ ದಳದಿಂದ ಅಲಂಕರಿಸಿ ಸವಿಯಲು ಕೊಡಿ.

ಹಸಿ ಖರ್ಜೂರದ ಮಿಲ್ಕ್ ಶೇಕ್

ಸಾಮಗ್ರಿ : 10-12 ಹಸಿ ಖರ್ಜೂರ, 7-8 ಬಾದಾಮಿ, 5-6 ಗೋಡಂಬಿ, 4-5 ಪಿಸ್ತಾ, 8-10 ಒಣದ್ರಾಕ್ಷಿ, 5-6 ಎಸಳು ಕೇಸರಿ, ರುಚಿಗೆ ತಕ್ಕಷ್ಟು ಸಕ್ಕರೆ, ಏಲಕ್ಕಿಪುಡಿ, 250 ಮಿ.ಲೀ. ಗಟ್ಟಿ ಹಾಲು.

ವಿಧಾನ : ಹಿಂದಿನ ರಾತ್ರಿಯೇ ಬಿಸಿ ಬಿಸಿ ಹಾಲಿಗೆ ಎಲ್ಲಾ ಡ್ರೈಫ್ರೂಟ್ಸ್ ನೆನೆಹಾಕಿಡಿ. ಮಾರನೇ ದಿನ ಆ ಹಾಲಿನ ಸಮೇತ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಈಗ 250 ಮಿ.ಲೀ. ಗಟ್ಟಿ ಹಾಲನ್ನು ಮಂದ ಉರಿಯಲ್ಲಿ ಕಾಯಿಸಿ, ಕುದಿಸಿ ತುಸು ಹಿಂಗಿಸಿ. ಇದಕ್ಕೆ ತಿರುವಿದ ಪೇಸ್ಟ್, ಸಕ್ಕರೆ ಹಾಕಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಇದಕ್ಕೆ ಹಾಲಲ್ಲಿ ನೆನೆದ ಕೇಸರಿ, ಏಲಕ್ಕಿ ಬೆರೆಸಿ ಸವಿಯಲು ಕೊಡಿ.

ಬಾದಾಮಿ ಬರ್ಫಿ

ಸಾಮಗ್ರಿ : 100 ಗ್ರಾಂ ಬಾದಾಮಿ, 50 ಗ್ರಾಂ ಸಕ್ಕರೆ, ಅರ್ಧ ಕಪ್‌ ಹಾಲಿನಪುಡಿ, ಅಲಂಕರಿಸಲು ಒಂದಿಷ್ಟು ಇಡೀ ಬಾದಾಮಿ.

ವಿಧಾನ : ಬಾದಾಮಿಯನ್ನು 2 ತಾಸು ಬಿಸಿ ಹಾಲಲ್ಲಿ ನೆನೆಹಾಕಿಡಿ. ನಂತರ ಮಿಕ್ಸಿಯಲ್ಲಿ ಗಟ್ಟಿಯಾಗಿ ತಿರುವಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ, ಒಂದೆಳೆಯ ಗಟ್ಟಿ ಪಾಕ ತಯಾರಿಸಿ. ಅದಕ್ಕೆ ರುಬ್ಬಿದ ಬಾದಾಮಿ, ಹಾಲಿನ ಪುಡಿ ಹಾಕಿ ಮಂದ ಉರಿಯಲ್ಲಿ ಮೈಸೂರುಪಾಕ್‌ ಹದಕ್ಕೆ ತುಪ್ಪ ಬೆರೆಸುತ್ತಾ ಕೆದುಕುತ್ತಿರಬೇಕು. ನಂತರ ತುಪ್ಪ ಸವರಿದ ಟ್ರೇಗೆ ಇದನ್ನು ಹರಡಿ, ಆರಿದ ನಂತರ ಬರ್ಫಿ ಕತ್ತರಿಸಿ, ನಡುವೆ ಬಾದಾಮಿ ಸಿಗಿಸಿ ಸವಿಯಲು ಕೊಡಿ.

ಡ್ರೈಫ್ರೂಟ್ಸ್ ಚಿಕ್ಕಿ

ಸಾಮಗ್ರಿ : 1 ಕಪ್‌ ಸಣ್ಣದಾಗಿ ಕತ್ತರಿಸಿದ ಬಾದಾಮಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಖರ್ಜೂರ, ಅಖ್ರೋಟ್‌ ಚೂರು, 2-2 ಚಮಚ ಕಲ್ಲಂಗಡಿ-ಕರ್ಬೂಜದ ಬೀಜ, 200 ಗ್ರಾಂ ಪುಡಿ ಮಾಡಿದ ಉಂಡೆ ಬೆಲ್ಲ, 1 ಸಣ್ಣ ಚಮಚ ಒಣಶುಂಠಿ ಪುಡಿ, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, 2 ಸಣ್ಣ ಚಮಚ ಸೋಂಪು (ತರಿ ಮಾಡಿ), ಅರ್ಧ ಸೌಟು ತುಪ್ಪ ಒಂದಿಷ್ಟು ಕೊಬ್ಬರಿ ತುರಿ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ ಹುರಿದು ತೆಗೆಯಿರಿ. ನಂತರ ಅದರಲ್ಲಿ ಬೆಲ್ಲ ಹಾಕಿ ಮಂದ ಉರಿಯಲ್ಲಿ ಕರಗಿಸಿ. ಇದಕ್ಕೆ ಏಲಕ್ಕಿ, ಸೋಂಪು, ಶುಂಠಿಪುಡಿ ಹಾಕಿ ಕೆದಕಬೇಕು. ಇದಕ್ಕೆ ಡ್ರೈಫ್ರೂಟ್ಸ್ ಸೇರಿಸಿ ಕೆದಕಿ ಕೆಳಗಿಳಿಸಿ, ಆರಲು ಬಿಡಿ. ನಂತರ ತುಪ್ಪ ಸವರಿದ ಕೈನಿಂದ ಸಣ್ಣ ಗೋಲಿ ಗಾತ್ರದ ಉಂಡೆ ಕಟ್ಟಿ ಕೊಬ್ಬರಿಯಲ್ಲಿ ಹೊರಳಿಸಿ, ಮತ್ತಷ್ಟು ಹೊತ್ತು ಗಾಳಿಗಿಡಿ. ಇದೀಗ ಡ್ರೈಫ್ರೂಟ್ಸ್ ಚಿಕ್ಕಿ ಸವಿಯಲು ರೆಡಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ