ಕಲ್ಲಂಗಡಿ ಶರಬತ್ತು : ಈ ಹಣ್ಣಿನಲ್ಲಿ ವಿಟಮಿನ್, ಮೆಗ್ನಿಶಿಯಂ, ಪೊಟಾಶಿಯಂ ಮುಂತಾದ ಲಾಭಕಾರಿ ಪೋಷಕಾಂಶಗಳಿವೆ. ದೇಹದಲ್ಲಿನ ನೀರಿನಂಶದ ಕೊರತೆಯನ್ನು ಇದು ನೀಗಿಸುತ್ತದೆ. ಇದರಿಂದ ಜೂಸ್ ತಯಾರಿಸಲು ಸುಲಭ ವಿಧಾನ ಎಂದರೆ, ಕಲ್ಲಂಗಡಿ ಹಣ್ಣನ್ನು ಹೆಚ್ಚಿ ಹೋಳು ಮಾಡಿ. ಇದನ್ನು ಜೂಸರ್ ಜಾರ್ಗೆ ಹಾಕಿ ಲಘುವಾಗಿ ವಿಪ್ ಮಾಡುತ್ತಾ ಚಲಾಯಿಸಿ. ನಂತರ ಶೋಧಿಸಿದಾಗ ಅದರ ಬೀಜ ಬೇರ್ಪಡುತ್ತದೆ. ನಿಮ್ಮ ರುಚಿಗೆ ತಕ್ಕಂತೆ ಇದಕ್ಕೆ ಶುಗರ್ ಸಿರಪ್, ರಾಕ್ಸಾಲ್ಟ್, ಮೆಣಸು, ನಿಂಬೆರಸ, ಹೆಚ್ಚಿದ ಪುದೀನಾ ಎಲೆ ಸೇರಿಸಿ ಕ್ರಶ್ಡ್ ಲೆಮನ್ ಐಸ್ ಜೊತೆ ಇದನ್ನು ಸರ್ವ್ ಮಾಡಿ.
ಮತ್ತೊಂದು ವಿಧಾನ ಎಂದರೆ, ಹುರಿದ ಚಕ್ಕೆಯನ್ನು ಪುಡಿ ಮಾಡಿ. ಅರ್ಧ ಸಣ್ಣ ಚಮಚದ ಈ ಪುಡಿಗೆ ಬೀಜ ರಹಿತ ವಾಟರ್ಮೆಲನ್ ಜೂಸ್ ಬೆರೆಸಿರಿ. ನಂತರ ರುಚಿಗೆ ತಕ್ಕಷ್ಟು ಶುಗರ್ ಸಿರಪ್, ನಿಂಬೆರಸ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಕ್ರಶ್ಡ್ ಐಸ್, ಪುದೀನಾ ಸೇರಿಸಿ ಸವಿಯಲು ಕೊಡಿ.
ಕುಕುಂಬರ್ ಮಿಂಟ್ ಜೂಸ್ : ಇದನ್ನು ತಯಾರಿಸುವುದಕ್ಕಾಗಿ 2 ಮಧ್ಯಮ ಗಾತ್ರದ ಎಳೇ ಸೌತೇಕಾಯಿ ಸಿಪ್ಪೆ ಹೆರೆದು, ಸಣ್ಣ ಹೋಳುಗಳಾಗಿಸಿ. ಒಂದು ಮಿಕ್ಸಿ ಜಾರ್ಗೆ ಸೌತೆ ಹೋಳು, 1 ನಿಂಬೆಯ ರಸ, ತುಸು ಪುದೀನಾ, ರಾಕ್ಸಾಲ್ಟ್, 2 ಚಮಚ ಶುಗರ್ ಸಿರಪ್, ಚಿಟಕಿ ಮೆಣಸು ಬೆರೆಸಿ ಮಿಕ್ಸಿ ಚಲಾಯಿಸಿ. ಇದಕ್ಕೆ 1 ಕಪ್ ತಣ್ಣೀರು ಬೆರೆಸಿ ಮತ್ತೆ ಚಲಾಯಿಸಿ. ಇದನ್ನು ಸೋಸಿಕೊಂಡು ಕ್ರಶ್ಡ್ ಐಸ್, ಪುದೀನಾ ಬೆರೆಸಿ ಗ್ಲಾಸ್ಗೆ ನಿಂಬೆ ಸ್ಲೈಸ್ ಸಿಗಿಸಿ ಇದನ್ನು ಸವಿಯಲು ಕೊಡಿ.
ಕೋಕೋನಟ್ ಕೂಲರ್ : ಎಳನೀರು ತರಿಸಿ ಸೇವಿಸಿ. ಅನಿವಾರ್ಯ ಕಾರಣಗಳಿಗೆ ಅದು ತಾಜಾ ಸಿಗದಿದ್ದರೆ, ಟೆಂಡರ್ ಕೋಕೋನಟ್ ವಾಟರ್ ಕ್ಯಾನ್ ಸಹ ರೆಡಿಮೇಡ್ ಪಡೆದು ಬಳಸಬಹುದು. ಇದಕ್ಕೆ ಹೆಚ್ಚಿದ ಪುದೀನಾ, 1 ಸಣ್ಣ ಹಸಿಮೆಣಸು, ನಿಂಬೆರಸ, ತುಸು ಶುಗರ್ ಸಿರಪ್, ಚಾಟ್ಮಸಾಲ ಸಹ ಸೇರಿಸಿ ಮಿಕ್ಸಿಯಲ್ಲಿ ವಿಪ್ ಮಾಡಿ ಸೇವಿಸಬಹುದು. ಅದೇ ರೀತಿ ಫ್ಲಾಕ್ಸ್ ಸೀಡ್ಸ್ ನ್ನು ಕೂಡ ಇದಕ್ಕಾಗಿ ಬಳಸಬಹುದು. ಕೋಕೋನಟ್ ಫ್ಲಾಕ್ಸ್ ಸೀಡ್ ಕೂಲರ್ ತಯಾರಿಸಲು, 1 ಕಪ್ ಎಳನೀರಿಗೆ 1 ಚಮಚ ಫ್ಲಾಕ್ಸ್ ಸೀಡ್ಸ್ ಬೆರೆಸಿ ಮಿಕ್ಸಿ ಚಲಾಯಿಸಿ. ನಂತರ ಇದನ್ನು ಸೋಸಿಕೊಂಡು ನಿಂಬೆರಸ, 2 ಕಪ್ ಎಳನೀರು, ಜಲಜೀರಾ ಪೌಡರ್ ಬೆರೆಸಿಕೊಳ್ಳಿ. ಇದಕ್ಕೆ ಲೆಮನ್ ಕ್ಯೂಬ್ಸ್ ನ್ನು ಕ್ರಶ್ ಮಾಡಿ ಹಾಕಬೇಕು. ಕೂಲ್ ಕೂಲ್ ಆಗಿ ಸರ್ವ್ ಮಾಡಿ.
ಮಾವಿನ ಪಾನಕ : ಮಾಗಿದ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ? ಅದೇ ತರಹ ಹುಳಿಯಾದ ಮಾವಿನಕಾಯಿ ಸಹ ಅಷ್ಟೇ ರುಚಿಕರ. ಇದು ಕೇವಲ ಉಪ್ಪಿನಕಾಯಿ ಅಥವಾ ವ್ಯಂಜನಗಳಿಗೆ ಮಾತ್ರ ಸೀಮಿತವಲ್ಲ. ಇದು ಬೇಸಿಗೆಯ ದಿನಗಳ ದಾಹ ತಣಿಸುವ ಉತ್ತಮ ಪಾನಕಕ್ಕೂ ಮೂಲ! ಇದರ ಸಿಪ್ಪೆ ಹೆರೆದು, ಹೋಳು ಮಾಡಿ ಬೇಯಿಸಿ. ನಂತರ ಅದನ್ನು ಮಿಕ್ಸಿಗೆ ಹಾಕಿ, ಸಕ್ಕರೆ ಸಹಿತ ಮಿಕ್ಸಿಯಲ್ಲಿ ನೀಟಾಗಿ ತಿರುವಿಕೊಳ್ಳಿ. ನಂತರ ಸೋಸಿಕೊಂಡು, ತಂಪಾದ ಫ್ರಿಜ್ ನೀರು ಬೆರೆಸಿ, ಪುದೀನಾ ಸೇರಿಸಿ ಪಾನಕ ಸವಿಯಲು ಕೊಡಿ.
ಅದೇ ರೀತಿ ಮಾವಿನ ಜಲಜೀರಾ ಸಹ ತಯಾರಿಸಬಹುದು. ಮೇಲಿನಂತೆಯೇ ಬೆಂದ/ ಬೇಯದ ಹಸಿ ಹೋಳುಗಳನ್ನು ಮಿಕ್ಸಿಗೆ ಹಾಕಿ. ನಂತರ ಇದಕ್ಕೆ ಪುದೀನಾ, ಶುಂಠಿ, ರಾಕ್ಸಾಲ್ಟ್, ಶುಗರ್ ಸಿರಪ್, ಜಲಜೀರಾ (ರೆಡಿಮೇಡ್ ಲಭ್ಯ) ಪೌಡರ್ ಬೆರೆಸಿ ಮಿಕ್ಸಿ ಚಲಾಯಿಸಿ. ಇದನ್ನು ಸೋಸಿಕೊಂಡು ಕ್ರಶ್ಡ್ ಐಸ್ ಕ್ಯೂಬ್ಸ್, ಖಾರಾಬೂಂದಿ ಸೇರಿಸಿ ಸವಿಯಲು ಕೊಡಿ.
ಖರ್ಬೂಜಾ ಶರಬತ್ತು : ಇದರಲ್ಲಿ 95% ನೀರಿನಂಶ ಹಾಗೂ ಧಾರಾಳ ನಾರಿನಂಶ ಇರುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದಾಗ ಖರ್ಬೂಜಾ ಸೇವನೆ ಬಹಳ ಒಳ್ಳೆಯದು. ಇದಕ್ಕೆ ಫ್ರಿಜ್ ಕೋಲ್ಡ್ ಹಾಲು ಬೆರೆಸಿ, ತುಸು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಮಿಲ್ಕ್ ಶೇಕ್ ತಯಾರಿಸಿ. ಇದು ದೇಹಕ್ಕೆ ಬಹಳ ತಂಪು ನೀಡುತ್ತದೆ.
ಖರ್ಬೂಜಾ ಹೋಳಿಗೆ ತುಸು ಗಸಗಸೆ (ಇದನ್ನು ಡ್ರೈ ಮಿಕ್ಸಿಯಲ್ಲಿ ಪುಡಿ ಮಾಡಿ ನಂತರ ಬೆರೆಸಿ), ತಣ್ಣನೆ ಹಾಲು, ಅಗತ್ಯವಿದ್ದಷ್ಟು ಸಕ್ಕರೆ, ಏಲಕ್ಕಿಪುಡಿ, ಪಚ್ಚಕರ್ಪೂರ ಸೇರಿಸಿ ಮಿಲ್ಕ್ ಶೇಕ್ ತಯಾರಿಸಿ. ನಿದ್ದೆ ಇಲ್ಲದವರಿಗೆ ಇದು ಹಿತಕರ ನಿದ್ದೆ ತಂದುಕೊಡುತ್ತದೆ, ತಂಪು ಕೂಡ ಹೌದು.
ಸೌತೆ ಮಜ್ಜಿಗೆ : ಮೊಸರಿಗೆ ತುಸು ನೀರು, ಸಕ್ಕರೆ ಬೆರೆಸಿ ಮಿಕ್ಸಿ ಚಲಾಯಿಸಿದರೆ ಲಸ್ಸಿ ರೆಡಿ! ಅಗತ್ಯವೆನಿಸಿದರೆ ಇದಕ್ಕೆ ನೀವು ಯಾವುದೇ ಬಗೆಯ ಹಣ್ಣು ಬೆರೆಸಬಹುದು. ಉದಾ : ಸೀಡ್ಲೆಸ್ ದ್ರಾಕ್ಷಿ ಲಸ್ಸಿ, ಮಾವಿನ ಲಸ್ಸಿ, ಆರೆಂಜ್ ಲಸ್ಸಿ, ಅನಾನಸ್, ಸಪೋಟ ಇತ್ಯಾದಿ ಲಸ್ಸಿ ಕೂಡ! ಇದಕ್ಕೆ ತುಸು ಜೀರಿಗೆ, ರಾಕ್ಸಾಲ್ಟ್, ಚಿಟಕಿ ಮೆಣಸು ಅಥವಾ ಚಾಟ್ಮಸಾಲ ಸೇರಿಸಿದರೆ ಮಸಾಲ ಲಸ್ಸಿ ರೆಡಿ.
ಪುದೀನಾ ಮಜ್ಜಿಗೆ, ಸೌತೆ ಮಜ್ಜಿಗೆ, ಮಸಾಲಾ ಮಜ್ಜಿಗೆ ಇತ್ಯಾದಿ ಟ್ರೈ ಮಾಡಿ ನೋಡಿ. ಲಸ್ಸಿ ಮತ್ತು ನೀರು ಮಜ್ಜಿಗೆ ಎರಡೂ ದೇಹಕ್ಕೆ ಬಲು ತಂಪು. ಹೊಟ್ಟೆಯಲ್ಲಿನ ಉರಿ, ಅಸಿಡಿಟಿ ಇತ್ಯಾದಿ ದೂರ ಮಾಡಲು ಸಹಕಾರಿ. ಇದರಿಂದ ತೂಕ ಹೆಚ್ಚುವ ಚಿಂತೆ ಇಲ್ಲ.
ಬೇಲದ ಪಾನಕ : ಬೇಲದ ಹಣ್ಣು ನಿಜಕ್ಕೂ ಎನರ್ಜಿ ಬೂಸ್ಟರ್ ಎನಿಸಿದೆ. ಸುಲಭವಾಗಿ ಇದರ ಶರಬತ್ತು ತಯಾರಿಸಿಟ್ಟು, ಬೇಕಾದಾಗ ಅದರಿಂದ ಪಾನಕ ಮಾಡಿಕೊಳ್ಳಬಹುದು. ಈ ಹಣ್ಣನ್ನು ಒಡೆದು, ಇದರ ತಿರುಳಿನಿಂದ ಬೀಜ ಬೇರ್ಪಡಿಸಿ. ಆ ತಿರುಳಿಗೆ ಪುಡಿ ಮಾಡಿದ ಬೆಲ್ಲ, ಚಿಟಕಿ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತಿರುವಿಕೊಂಡು ಶರಬತ್ತು ಮಾಡಿ ಫ್ರಿಜ್ನಲ್ಲಿ ಇಡಿ. 1 ವಾರದವರೆಗೂ ಬಳಸಬಹುದು. ಬೇಕೆನಿಸಿದಾಗ ದೊಡ್ಡ ಗ್ಲಾಸಿಗೆ ಸ್ವಲ್ಪ ಶರಬತ್ತು ಬಗ್ಗಿಸಿ, ಪೂರ್ತಿ ತಣ್ಣೀರು ಹಾಕಿ (ಬೇಕೆನಿಸಿದರೆ ತುಸು ಸಕ್ಕರೆ ಕೂಡ) ಚೆನ್ನಾಗಿ ಕದಡಿ ಸವಿಯಲು ಕೊಡಿ.
ಸುಮಾರು 250 ಗ್ರಾಂ ಬೇಲದ ಹಣ್ಣಿನ ತಿರುಳಿಗೆ (5-6 ಹಣ್ಣು) 500 ಗ್ರಾಂ ಬೆಲ್ಲದ ಪುಡಿ, ತುಸು ನಿಂಬೆರಸ, ಉಪ್ಪು ಬೆರೆಸಿ ಗಟ್ಟಿ ಶರಬತ್ತು ಮಾಡಿಟ್ಟುಕೊಳ್ಳಿ. ಪಾನಕ ಬೇಕೆನಿಸಿದಾಗೆಲ್ಲ ದೊಡ್ಡ ಗ್ಲಾಸಿಗೆ ತುಸು ಶರಬತ್ತು ಬಗ್ಗಿಸಿ (ರುಚಿ ಅನುಸಾರ ಹೆಚ್ಚು, ಕಡಿಮೆ) ತಣ್ಣೀರು ಬೆರೆಸಿ ಕದಡಿ ಕುಡಿಯಬಹುದು. ಪುದೀನಾ ಸೇರಿಸಿದರೆ ರುಚಿ ಹೆಚ್ಚು.
– ನೀರಜಾ ಕುಮಾರ್
ಮೊದಲು ಮಾಡಿಕೊಳ್ಳಬೇಕಾದ ತಯಾರಿ : ಈ ರೀತಿ ಪಾನಕ, ಪೇಯ ತಯಾರಿಸಲುವ ಮೊದಲೇ ಪೂರ್ವ ತಯಾರಿ ಮಾಡಿಟ್ಟುಕೊಂಡಿದ್ದರೆ ಒಳ್ಳೆಯದು. ಅದಕ್ಕಾಗಿ ಶುಗರ್ ಸಿರಪ್ ಹೀಗೆ ತಯಾರಿಸಿ. ಇದನ್ನು 2 ವಿಧದಲ್ಲಿ ಮಾಡಿ. ಒಂದು ನಾರ್ಮಲ್, ಇನ್ನೊಂದು ಬ್ರೌನ್ಶುಗರ್ನದು. 2 ಕಪ್ ಸಕ್ಕರೆಗೆ 3/4 ಕಪ್ ನೀರು ಬೆರೆಸಿ, ಸ್ಟೀಲ್ ಪಾತ್ರೆಯಲ್ಲಿ (ಮಂದ ಉರಿ ಇರಲಿ), ಸತತ ಚಮಚದಿಂದ ಕೈ ಆಡಿಸುತ್ತಾ ಕುದಿಸಬೇಕು. ಸಕ್ಕರೆ ಚೆನ್ನಾಗಿ ಕರಗಿ ಕುದಿ ಬರತೊಡಗಿದಾಗ, 3-4 ನಿಮಿಷ ಮತ್ತಷ್ಟು ಕುದಿಸಿರಿ. ಇದಕ್ಕೆ 1 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕದಡಿ, ಮುಚ್ಚಳ ಮುಚ್ಚಿರಿಸಿ, ಒಲೆ ಆರಿಸಿಬಿಡಿ. ಇದರಿಂದ ಸಕ್ಕರೆ ಪಾಕದ ಕಲ್ಮಶವೆಲ್ಲ ತೊಲಗುತ್ತದೆ. ಪಾಕದಲ್ಲಿ ಗಂಟುಗಳೂ ಆಗುವುದಿಲ್ಲ. ಇದನ್ನು ಚೆನ್ನಾಗಿ ಆರಲು ಬಿಡಿ. ನಂತರ ಸೋಸಿಕೊಂಡು, ಬಾಟಲಿಗೆ ತುಂಬಿಸಿ ಫ್ರಿಜ್ನಲ್ಲಿರಿಸಿ. ಇದೇ ತರಹ ಬ್ರೌನ್ ಶುಗರ್ ಸಿರಪ್ ಸಹ ತಯಾರಿಸಿ. ಆರೆಂಜ್ ಜೂಸ್, ಮ್ಯಾಂಗೋ ಪ್ಯೂರಿ, ಲೆಮನ್ ಜೂಸ್ ಇತ್ಯಾದಿಗಳಿಗೆ ತುಸು ಶುಗರ್ ಸಿರಪ್, ನಿಂಬೆರಸ, ಪುದೀನಾ ಸೇರಿಸಿ ಐಸ್ಕ್ಯೂಬ್ ಟ್ರೇನಲ್ಲಿ ಮಿಶ್ರಣ ಸೆಟ್ ಆಗಲು ಬಿಡಿ. ನಿಮ್ಮ ಯಾವುದೇ ಪೇಯಕ್ಕೆ ಈ ಕ್ಯೂಬ್ಸ್ ಹಾಕಿ ಸವಿಯಲು ಕೊಡಿ. ಆಗ ಆ ಪೇಯದ ರುಚಿ ಹೆಚ್ಚುತ್ತದೆ. ಇದೇ ತರಹದ ಜೀರಿಗೆ ಪುಡಿ, ಬ್ಲ್ಯಾಕ್/ವೈಟ್ ಪೆಪ್ಪರ್ ಪುಡಿ, ಚಾಟ್ ಮಸಾಲ, ರಾಕ್ಸಾಲ್ಟ್ ಇತ್ಯಾದಿ ಬೆರೆಸಿ ಕ್ಯೂಬ್ಸ್ ಮಾಡಿಟ್ಟುಕೊಂಡು, ಉಪ್ಪು ಹಾಕಿರುವ ಪೇಯಕ್ಕೆ, ಮಜ್ಜಿಗೆ ಇತ್ಯಾದಿಗೆ ಸೇರಿಸಿ ಕೊಡಿ. ಬೇಸಿಗೆಯಲ್ಲಿ ಮನೆಗೆ ಧಾರಾಳವಾಗಿ ಮೊಸರು, ಸೌತೆ, ಕಲ್ಲಂಗಡಿ, ಖರ್ಬೂಜಾ, ಬೇಲ, ಕಿತ್ತಳೆ, ನಿಂಬೆ ಇತ್ಯಾದಿ ತಂದು ಬೇಕಾದ ಪಾನೀಯ ತಯಾರಿಸಿ ಬೇಸಿಗೆಯ ಮಜಾ ಪಡೆಯಿರಿ.
– ಸಿ. ಅಮೃತಾ