ಸಿನಿಮಾ ಕ್ಷೇತ್ರದಲ್ಲಿ ಏನಾದರೊಂದು ಹೊಸದನ್ನು ಕೊಡಬೇಕೆಂಬ ತುಡಿತದಲ್ಲಿ ಕೆಲವು ಉತ್ಸಾಹೀ ನಿರ್ದೇಶಕರು ಹೊಸ ಪ್ರಯತ್ನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಕಿರಣ್ ಹೆಗಡೆ ಕೂಡಾ ಒಬ್ಬರು. ಪತ್ರಿಕೋದ್ಯಮದ ಬ್ಯಾಕ್‌ಗ್ರೌಂಡ್ ಇದ್ದರೂ ಸಿನಿಮಾವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಹೊಸದೊಂದು ಚಿತ್ರ ಸಿದ್ಧ ಮಾಡಿದ್ದಾರೆ.
ಮಾಸ್ಕ್ ಫೋಬಿಯಾ ಪರಿಕಲ್ಪನೆ ಇಟ್ಟುಕೊಂಡು `ಮನರೂಪ’ ಎನ್ನುವ ಸಿನಿಮಾ ರೆಡಿ ಮಾಡಿದ್ದಾರೆ ಕಿರಣ್. ಯುವ ಮನಸ್ಸುಗಳ ಭೌತಿಕವಾದ ಮತ್ತು ಅಸ್ತಿತ್ವವಾದದ ಮಾಯಾ ಕನ್ನಡಿಯಲ್ಲಿ ತಮ್ಮನ್ನು ತಾವು ಹುಡುಕುತ್ತಾ, ಕಳೆದುಕೊಳ್ಳುತ್ತಾ ಕೊನೆಯರಿಯದ ದಾರಿಯಲ್ಲಿ ಯಾರದೋ ಸಮ್ಮೋಹನಕ್ಕೆ ಸಿಕ್ಕವರಂತೆ ಸಾಗುತ್ತಿದ್ದಾರೆ ಎಂಬ ಒಂದು ಎಳೆ ಇಟ್ಟುಕೊಂಡು ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ.
`ಮನರೂಪ’ದ ಮೂಲಕ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಅನೂಷಾ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅನೂಷಾರನ್ನು ಮಾತನಾಡಿಸಿದಾಗ ಈ ಸಿನಿಮಾ ಬಗ್ಗೆ ಹಾಗೂ ಅವರ ನಟನಾವೃತ್ತಿ ಎಲ್ಲದರ ಬಗ್ಗೆ ಹೇಳಿದರು.
ಸಿನಿಮಾ ರಂಗಕ್ಕೆ ಆಸೆ ಪಟ್ಟು ಬಂದದ್ದಾ ಅಥವಾ ಆಕಸ್ಮಿಕವಾ….?
ನಾನು ಎಂ.ಎ. ಸೈಕಾಲಜಿ ಮುಗಿಸಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮದುವೆಯಾದದ್ದು ಮನೋಹರ್ ಜೋಷಿಯನ್ನು. ಅವರು ಕ್ಯಾಮೆರಾಮೆನ್, ಅವರು `ಸಿಂಪಲ್ಲಾಗೊಂದು ಲವ್ ಸ್ಟೋರಿ’ ಮಾಡುತ್ತಿರುವಾಗ ಸುನೀ ಸಣ್ಣ ಪಾತ್ರವಿದೆ ಮಾಡ್ತೀರಾ ಅಂತ ಕೇಳಿದ್ರು. ಕ್ಯಾಮೆರಾ ಮುಂದೆ ಅಷ್ಟು ಕಂಫರ್ಟೆಬಲ್ ಆಗಿರುವುದಿಲ್ಲ ಬೇಕಾದರೆ ಟ್ರೈ ಮಾಡ್ತೀನಿ ನೋಡಿ ಎಂದೆ, ಹೀಗೆ ಶುರವಾಯ್ತು ನನ್ನ ಸಿನಿಮಾ ಜರ್ನಿ. ಅದಾದ ಮೇಲೆ ಜಾಬ್ ಕ್ವಿಟ್ ಮಾಡಿದೆ. ನನ್ನ ನೃತ್ಯಾಭ್ಯಾಸವನ್ನೇ ಮುಂದುವರಿಸಿದೆ. ಆಗ ಚಾನೆಲ್ಲೊಂದರಲ್ಲಿ ಆಡೀಶನ್‌ಗೆ ಕರೆ ಬಂತು ಕೊಟ್ಟೆ, ಆದರೆ ಮುಂದುವರಿಯಲಿಲ್ಲ. ಅದಾದ ಆರು ತಿಂಗಳ ನಂತರ `ದುರ್ಗಾ’ ಎನ್ನುವ ಸೀರಿಯಲ್‌ಗೆ ಕರೆ ಬಂತು, ಮಾಡಿದೆ. ಹಾಗೆ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ರೇವತಿ ಪಾತ್ರ ಮಾಡಿದೆ.
`ಮನರೂಪ’ ಬಗ್ಗೆ ಹೇಳಿ.
`ಉಜ್ವಲಾ’ ಎನ್ನುವ ಪಾತ್ರ ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಆಗಿರೋದ್ರಿಂದ ಕಾಡಲ್ಲಿ ನಡೆಯೋ ಕಥೆ. ನನ್ನ ಪಾತ್ರ ಕೂಡಾ ತುಂಬಾ ಚೆನ್ನಾಗಿದೆ, ಒಳ್ಳೆ ಸ್ಕೋಪ್ ಇದೆ. ಐದು ಜನ ಕಾಡಿಗೆ ಹೋಗುವ ಕಥೆ, ಆರಂಭದಿಂದ ಕಡೆಯವರೆಗೂ ತುಂಬಾನೇ ಥ್ರಿಲ್ಲಾಗಿರುತ್ತೆ. ಎಲ್ಲ ಪಾತ್ರಗಳಿಗೂ ಸಮಾನವಾದ ಅವಕಾಶಗಳು ಇರೋದ್ರಿಂದ ಇಲ್ಲಿ ಎಲ್ಲ ಕಲಾವಿದರಿಗೂ ಪ್ರಾಮುಖ್ಯತೆ ನೀಡಲಾಗಿದೆ.
ಸೋ ಹಾಗಾದ್ರೆ ನಟನೆ ಬಗ್ಗೆ ಫುಲ್ ಇಂಟ್ರೆಸ್ಟ್ ಬಂದಿರೊ ಹಾಗಿದೆ?
ಹೌದು ಸುಮಾರು ಸೀರಿಯಲ್‌ಗಳಲ್ಲಿ ನಟಿಸಿದೆ. ದುರ್ಗಾ ಆದ್ಮೇಲೆ `ಸುಬ್ಬುಲಕ್ಷ್ಮಿ ಸಂಸಾರ’ ರೇವತಿ ಅನ್ನೋ ಕ್ಯಾರೆಕ್ಟರ್ ಮಾಡಿದೆ. ಆಮೇಲೆ ಬಿಟ್ಟುಬಿಟ್ಟೆ. `ದೊಡ್ಮನೆ ಸೊಸೆ’ ಮಾಡಿದೆ. ಈಗ `ಅಗ್ನಿಸಾಕ್ಷಿ’ ರಾಧಿಕಾ ಕ್ಯಾರೆಕ್ಟರ್ ಮಾಡ್ತಿದ್ದೀನಿ.
ಮನೆಯಲ್ಲಿ ಪ್ರೋತ್ಸಾಹವಿದೆಯಾ?
ಓಹೋ ಖಂಡಿತಾ. ಅಪ್ಪ ಅಮ್ಮ ಇಬ್ಬರಿಗೂ ಇಷ್ಟವಾಗಿದೆ. ನನ್ನ ತಂದೆ ಭಾಸ್ಕರ್ ಹಿರಿಯ ಪತ್ರಕರ್ತರು. ಅವರನ್ನು ಈಗ ಎಲ್ಲರೂ ನೀವು ರಾಧಿಕಾ ತಂದೆಯಲ್ವಾ ಅಂತ ಮಾತನಾಡಿಸುವಾಗ ನಂಗೆ ನಗು ಬರುತ್ತೆ. ಮನೆಯಲ್ಲಿ ನನ್ನ ಪತಿ ಜೋಶಿಯವರ ಪ್ರೋತ್ಸಾಹ ಇದೆ. ಅಗ್ನಿಸಾಕ್ಷಿಯಲ್ಲಿ ನನ್ನ ಪಾತ್ರದ ಹೆಸರು ರಾಧಿಕಾ ಆಗಿರೋದ್ರಿಂದ ಜನ ನನ್ನನ್ನು ಆ ಹೆಸರಿನಿಂದಲೇ ಗುರುತಿಸುತ್ತಾರೆ.
`ಸುಬ್ಬಲಕ್ಷ್ಮಿ ಸಂಸಾರ’ದಲ್ಲಿ ನಿಮ್ಮ ಪಾತ್ರವನ್ನು ಈಗ ಬೇರೆ ನಟಿ ಮಾಡ್ತಿದ್ದಾರಾ?
ಹೌದು ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ಸೀರಿಯಲ್ ಬಿಡಬೇಕಾಯ್ತು.
ಸಿನಿಮಾ ಮತ್ತು ಸೀರಿಯಲ್ ಯಾವುದು ಹೆಚ್ಚು ಇಂಟ್ರೆಸ್ಟಿಂಗ್ ಅನ್ಸುತ್ತೆ?
ಎಲ್ಲಿ ಒಳ್ಳೆ ಅವಕಾಶಗಳು ಸಿಗುತ್ತೋ ಅದು ಹೆಚ್ಚು ಇಷ್ಟವಾಗುತ್ತೆ. ನನಗೆ ಎಲ್ಲಾ ಡಿಪಾರ್ಟ್‌ಮೆಂಟ್‌ಗಳಲ್ಲಿ ಅನುಭವ ಪಡೆಯಲು ಆಸೆ ಇದೆ. ಸಿನಿಮಾ ಅಂದಾಗ ಅದರ ಅನುಭವ ಬೇರೆ…. `ಮನರೂಪ’ ಚಿತ್ರೀಕರಣ ಶಿರಸಿಯಲ್ಲಿ ನಡೆದಾಗ ಅದು ನಮ್ಮ ಊರೇ ಆಗಿದ್ರಿಂದ ತುಂಬಾ ಇಷ್ಟವಾಗಿತ್ತು. ಕಾಡು, ಹಸಿರು, ಇದೆಲ್ಲ ತುಂಬಾನೇ ಇಷ್ಟವಾಗುತ್ತೆ. ಇಡೀ ತಂಡ ಚಿತ್ರೀಕರಣದಲ್ಲಿ ಒಟ್ಟಿಗೆ ಕಳೆದದ್ದು ಮರೆಯಲಾಗದ ಅನುಭವ.
`ಮನರೂಪ’ ನಿರ್ದೇಶಕರಾದ ಕಿರಣ್ ಅವರ ಬಗ್ಗೆ ಹೇಳಿ.
ಕಿರಣ್ ಅವರಿಗಿದು ಕನಸಿನ ಪ್ರಾಜೆಕ್ಟ್. ಬಹಳ ಇಷ್ಟಪಟ್ಟು ಕಾನ್ಸೆಪ್ಟ್ ನ್ನು ತೆರೆ ಮೇಲೆ ತರುತ್ತಿದ್ದಾರೆ. ತುಂಬಾನೇ ಉತ್ಸಾಹದಿಂದ ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆಯೇ ನಮ್ಮಲ್ಲೂ ಆ ಜೋಶ್ ತುಂಬುತ್ತಿದ್ದರು. ಟೋಟಲ್ಲಾಗಿ ಹೇಳಬೇಕೆಂದರೆ ಕಿರಣ್ ಅವರ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇ ಒಂದು ಮರೆಯಲಾರದಂಥ ಅನುಭವ. ತುಂಬಾ ಕಲಿತಿದ್ದೀವಿ.
ಬೇರೆ ಇನ್ನೇನು ಹವ್ಯಾಸವಿದೆ….?
ಕಾಸ್ಟ್ಯೂಮ್ ಡಿಸೈನ್ ಮಾಡೋದಂದ್ರೆ ನನಗಿಷ್ಟ. `ಬಹುಪರಾಕ್’ ಚಿತ್ರಕ್ಕೆ ಮಾಡಿದ್ದೆ, ಶ್ರೀನಗರ್ ಕಿಟ್ಟಿಯವರಿಗೆ. ಅದಾದ ಮೇಲೆ `ಟ್ಯೂಬ್‌ಲೈಟ್’ ಅನ್ನೋ ಚಿತ್ರಕ್ಕೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೀನಿ. ಇತ್ತಿಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದಂಥ `ರಾಜಕುಮಾರ’ ಚಿತ್ರಕ್ಕಾಗಿ ಪುನೀತ್ ರಾಜ್‌ಕುಮಾರ್ ಮತ್ತು ನಾಯಕಿಯರಿಗೆ ನಾನೇ ಕಾಸ್ಟ್ಯೂಮ್ ಡಿಸೈನ್ ಮಾಡಿರೋದು. ಇದು ಕೂಡಾ ಒಳ್ಳೆ ಎಕ್ಸ್ ಪೀರಿಯನ್ಸ್.
ನಾನು ಕಥಕ್ ಡ್ಯಾನ್ಸರ್ ಆಗಿರೋದ್ರಿಂದ ಆಗಾಗ ಪ್ರೋಗ್ರಾಮ್ ಕೊಡ್ತಿರ್ತೀನಿ. ನಮ್ಮದೇ ಒಂದು ಟ್ರೂಪ್ ಇದೆ.
ಯಾವ ತರಹದ ಪಾತ್ರ ಮಾಡುವಾಸೆ?
ಎಲ್ಲಾ ತರಹದ ಪಾತ್ರ ಇಷ್ಟವಾಗುತ್ತೆ. ಕೆಲವು ಆಫರ್‌ಗಳು ಬಂದವು. ಆದರೆ ಯಾಕೋ ಅಂಥ ಪಾತ್ರ ಮಾಡಲು ಇಷ್ಟವಾಗಲಿಲ್ಲ. ನನಗೆ ಟ್ರಾವೆಲಿಂಗ್ ಇಷ್ಟವಾಗಿರೋದ್ರಿಂದ ಅಂಥದ್ದೇ ಸಬ್ಜೆಕ್ಟ್ ಇರೋ ಚಿತ್ರದಲ್ಲಿ ನಟಿಸುವಾಸೆ.
ನಿಮ್ಮ ಮೆಚ್ಚಿನ ಹೀರೋ ಯಾರು?
ಎಲ್ಲರಿಗೂ ಅವರವರದೇ ಆದ ಸ್ಟೈಲಿರುತ್ತೆ. ಅಪ್ಪು ಸರ್ ಡ್ಯಾನ್ ಇಷ್ಟ, ದರ್ಶನ್ ಸಾರ್ ಫೈಟ್ ಇಷ್ಟ. ಸುದೀಪ್ ಸರ್ ಡೈಲಾಗ್ ಡೆಲಿವರಿ, ಅವರ ವಾಯ್ಸ್, ಆ್ಯಟಿಟ್ಯೂಡ್…. ಹೀಗೆ ಎಲ್ಲರೂ ಒಂದೊಂದು ರೀತಿ ಮೆಚ್ಚುಗೆಯಾಗುತ್ತಾರೆ.
ಹೀಗೆ ಪಟಪಟನೆ ಮಾತನಾಡುವ ಅನೂಷಾರನ್ನು ಆಲ್‌ರೌಂಡರ್ ಅಂತಾನೇ ಕರೆಯಬಹುದು. ಈ ಪ್ರತಿಭೆಗೆ ಇನ್ನಷ್ಟು ಒಳ್ಳೆ ಅವಕಾಶಗಳು ಸಿಗಲಿ….!
– ಸರಸ್ವತಿ