ಆದರೆ ಯಾವುದೊ ಕಾರಣಗಳಿಂದ ಸಂಬಂಧದಲ್ಲಿ ಬಿರುಕು ಉಂಟಾಗಿಬಿಟ್ಟರೆ ಅದೇ ಮುಂದೆ ದೊಡ್ಡ ಕೊರಕಲಾಗಿ ಪರಿಣಮಿಸಿ ಮಕ್ಕಳ ಸಂಸ್ಕಾರಕ್ಕೆ ಪೆಟ್ಟು ನೀಡುತ್ತದೆ……..!

ನಿನ್ನೆ ಮೊನ್ನೆಯವರೆಗೆ ಲವ್ ಬರ್ಡ್‌ ಆಗಿ ತಿರುಗುತ್ತಿದ್ದರು, ಬಳಿಕ ಪರಸ್ಪರರನ್ನು ದ್ವೇಷಿಸತೊಡಗಿದರೆ ಆಗ ವಿಷಯ ಕೈ ಕೈ ಮಿಲಾಯಿಸುವ ಮಟ್ಟಿಗೆ ಕೂಡ ತಲುಪಬಹುದು.

ಗಂಡ-ಹೆಂಡತಿ ಪರಸ್ಪರರ ಮನಸ್ತಾಪವನ್ನು ಮಕ್ಕಳಾಗುವ ಮುಂಚೆಯೇ ಬಗೆಹರಿಸಿಕೊಳ್ಳಬೇಕು. ಹಾಗೊಮ್ಮೆ ವೈಚಾರಿಕ ಮತಭೇದ ಉಂಟಾದರೆ ಮಕ್ಕಳ ಅನುಪಸ್ಥಿತಿಯಲ್ಲಿಯೇ ಅದನ್ನು ದೂರಗೊಳಿಸಿಕೊಳ್ಳಬೇಕು. ಏಕೆಂದರೆ ಯಾವುದೇ ತೊಂದರೆಯಿಲ್ಲದೆ ಮಕ್ಕಳ ಬೆಳವಣಿಗೆ ಆಗಬೇಕು. ಚಿಕ್ಕಪುಟ್ಟ ಮಾತುಗಳಿಂದಲೇ ಜಗಳ ಶುರುವಾಗಿ ಬಳಿಕ ದೊಡ್ಡ ರೂಪ ಪಡೆದು ಕೊಳ್ಳುತ್ತದೆ. ಹೆಚ್ಚಿನ ಜಗಳಗಳು ಅಂತಸ್ತನ್ನು ಹೀಯಾಳಿಸುವ, ತಮ್ಮವರ ಬಗೆಗೆ ಬಳಸಿದ ಕೆಟ್ಟ ಶಬ್ದ, ಶೈಕ್ಷಣಿಕ ಅಸಮಾನತೆ, ಮಕ್ಕಳ ಪಾಲನೆಪೋಷಣೆಗೆ ಸಂಬಂಧಪಟ್ಟಂತೆ, ವೈಯಕ್ತಿಕ ವಸ್ತುಗಳನ್ನು ಕಿತ್ತುಕೊಳ್ಳುವ ಕುರಿತಂತೆ ಜಗಳಗಳಾಗುತ್ತವೆ. ಕೆಲವು ಮನೆಗಳಲ್ಲಿ ಸಂಬಂಧಿಕರು ಆಗಾಗ ಮನೆಗೆ ಬಂದುಹೋಗುವ ಕುರಿತಂತೆ ಜಗಳ ಆಗುತ್ತದೆ. ಅಂದರೆ ದಂಪತಿಗಳಲ್ಲಿ ಯಾರಿಗಾದರೂ ಒಬ್ಬರ ಮನಸ್ಸಿಗೆ ನೋವಾದರೆ ಸಾಕು, ಅವರ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ.

ಕಡೆಗಣಿಸಿ ಮಾತನಾಡುವುದು

ಗಂಡನೇ ಆಗಿರಬಹುದು ಅಥವಾ ಹೆಂಡತಿ, ಕಡೆಗಣಿಸಿ ಮಾತನಾಡುವುದು ಯಾರಿಗಾದರೂ ನೋವನ್ನುಂಟು ಮಾಡಬಹುದು. ನೀಲಾ ಹೀಗೆ ಹೇಳುತ್ತಾರೆ, ಗಂಡ ನಾನು ಮಧ್ಯಮ ವರ್ಗದ ಕುಟುಂಬದವಳಾಗಿರುವುದನ್ನೇ ಹೀಯಾಳಿಸಿ ಮಾತನಾಡುತ್ತಾರೆ. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವಳು ಕೂಡ ಅವನನ್ನುದ್ದೇಶಿಸಿ ಮಾತುಗಳನ್ನಾಡುತ್ತಾಳೆ. ಅವಳ ಮಾತು ಕೇಳಿ ಅವನಿಗೆ ಉರಿ ಉರಿ ಅನಿಸುತ್ತದೆ. ನನ್ನ ಕುಟುಂಬದವರ ಬಗ್ಗೆ ಏನಾದರೂ ಮಾತನಾಡಿದರೆ ಎಚ್ಚರ ಎಂದು ಅವಳಿಗೆ ಪ್ರತಿಯಾಗಿ ಹೇಳಿದ.

ಆ ಮಾತಿಗೆ ನೀಲಾ ಕೂಡ, “ಮಾತಾಡ್ತೀನ್ರಿ, ಅದಕ್ಕೆ ಅಂಜಬೇಕೇನ್ರಿ? ನನ್ನ ಬಡತನವನ್ನು ಹಂಗಿಸುವ ಮುಂಚೆ ನಿಮ್ಮ ಬಡತನವನ್ನು ನೋಡ್ರಿ,” ಎಂದು ಅವನನ್ನು ಕೆಣಕುತ್ತಾಳೆ.

ಅವಳ ಮಾತಿನಿಂದ ಕೆಂಡಾಮಂಡಲನಾದ ಪತಿ ಅವಳ ಕೆನ್ನೆಗೊಂದು ಬಾರಿಸುತ್ತಾನೆ. ಕೆನ್ನೆಗೆ ಏಟು ಬೀಳುತ್ತಿದ್ದಂತೆ ಅವಳ ಕೋಪ ನೆತ್ತಿಗೇರಿ ಪಾತ್ರೆಗಳನ್ನು ಬಿಸಾಡಲು ಶುರು ಮಾಡುತ್ತಾಳೆ. ಈ ದೃಶ್ಯವನ್ನು ಅವಳ 5 ವರ್ಷದ ಮಗು ಬಾಗಿಲ ಸಂದಿನಿಂದ ಕದ್ದುಮುಚ್ಚಿ ನೋಡುತ್ತಿರುತ್ತದೆ. ಈ ರೀತಿಯಾಗಿ ಅದರ ಬಾಲಮನಸ್ಸಿನಲ್ಲಿ ಕೆಟ್ಟ ಸಂಸ್ಕಾರಗಳು ತುಂಬುತ್ತ ಹೋದವು. ಇನ್ನೊಬ್ಬರ ಅವಹೇಳನ, ಕಪಾಳಮೋಕ್ಷ ಮಾಡುವುದು, ಪಾತ್ರೆಗಳ ಎಸೆದಾಟ, ಕೂಗಾಟ ಕೋಪ ಇವೆಲ್ಲ ಮಕ್ಕಳ ಮನಸ್ಸನ್ನು ಗಲಿಬಿಲಿಗೊಳಿಸುತ್ತವೆ.

ಮಾತು ತುಂಡರಿಸುವಿಕೆಯ ನಿರ್ಲಕ್ಷ್ಯ

ಬ್ಯಾಂಕ್‌ ಉದ್ಯೋಗಿ ನಿರ್ಮಲಾ ತನ್ನ ವಿಮೆ ಉದ್ಯೋಗಿ ಪತಿ ವೀರೇಶ್‌ ಮಾತನ್ನು ಮಧ್ಯದಲ್ಲಿ ತುಂಡರಿಸಿ ಮಾತಾಡುತ್ತಾಳೆ. ಗಂಡ ಏನಾದರೂ ಹೇಳುತ್ತಿದ್ದಂತೆ ಆಕೆ ಅದರ ಬಗ್ಗೆ ಯೋಚನೆ ಕೂಡ ಮಾಡದೆ ಒಮ್ಮೆಲೆ, “ಅದೆಲ್ಲ ಆಗೋಲ್ಲ. ನನಗೆ ಅದು ಸಾಧ್ಯವಿಲ್ಲ!” ಎಂದು ಹೇಳಿಬಿಡುತ್ತಾಳೆ. ಅವಳ ಪತಿ ಅಪಮಾನ ಸಹಿಸಿಕೊಂಡು ಒಮ್ಮೆ ಸುಮ್ಮನಿದ್ದುಬಿಡುತ್ತಾನೆ. ಮತ್ತೊಮ್ಮೆ ಕೋಪಗೊಂಡು ಅವಳ ಮೇಲೆ ಕೈ ಎತ್ತುತ್ತಾನೆ. ಅವನ ಮಾತಿನ ಪೆಟ್ಟಿನಿಂದ ಅವಳು ತವರಿಗೆ ಹೋಗಿ ಕುಳಿತುಬಿಡುತ್ತಾಳೆ. ಇದರಿಂದಾಗಿ ಅವಳ ಪುಟ್ಟ ಮಗುವಿಗೆ ಶಾಲೆ ತಪ್ಪುತ್ತದೆ. ಇದರ ಬಗ್ಗೆ ಅವರಾರಿಗೂ ಕಾಳಜಿ ಇಲ್ಲ. ಗೃಹಿಣಿ ಛಾಯಾಳ ಸ್ಥಿತಿ ಇದಕ್ಕೆ  ತದ್ವಿರುದ್ಧ. ತನ್ನನ್ನು ತಾನು ಬುದ್ಧಿವಂತ ಎಂದು ಹೇಳಿಕೊಳ್ಳುವ ಅವಳ ಪತಿ ಸುರೇಶ್‌ ಸಾಧ್ಯವಿದ್ದಾಗೆಲ್ಲ ಪತ್ನಿಯ ಅವಮಾನ ಮಾಡುತ್ತಿರುತ್ತಾನೆ. ಅವಳ ಬುದ್ಧಿವಂತಿಕೆಯ ತಮಾಷೆ ಮಾಡಿ ಮಾತನಾಡುತ್ತಾನೆ. ಅವಳು ಎಷ್ಟೇ ಸರಿಯಾಗಿ ಮಾತನಾಡಿದರೂ ಅದನ್ನು ಅಲ್ಲಗಳೆಯುತ್ತಾನೆ. ಅವನ ವರ್ತನೆಯನ್ನು ಅಲ್ಲಗಳೆದರೆ ಕೈ ಎತ್ತುತ್ತಾನೆ. ಅದೊಂದು ದಿನ ಅವರ ನಡುವಿನ ಜಗಳ ವಿಕೋಪಕ್ಕೆ ಹೋಯಿತು. ಕೋಪಿಷ್ಠ ಗಂಡ ಅವಳ ಕೂದಲು ಜಗ್ಗುತ್ತಾ ಅಡುಗೆಮನೆಗೆ ಎಳೆದುಕೊಂಡು ಬಂದ. ಆಗ ಅವಳ ಗಮನ ಅಲ್ಲಿದ್ದ ಚಾಕುವಿನ ಮೇಲೆ ಹೋಯಿತು. ಅವಳು ಅದನ್ನು ಎತ್ತಿಕೊಂಡು, `ನನ್ನನ್ನು ಬಿಟ್ಟುಬಿಡಿ, ಇಲ್ಲದಿದ್ದರೆ ಚಾಕುವಿನಿಂದ ತಿವಿಯುತ್ತೇನೆ,’ ಎಂದು ಕೂಗಿದಳು.

“ನೀನು ನನಗೆ ಚಾಕುವಿನಿಂದ ಇರೀತೀಯಾ? ಹಾಕು ನೋಡೋಣ, ನಿನ್ನಲ್ಲಿ ಅದೆಷ್ಟು ಶಕ್ತಿ ಇದೆ ನೋಡ್ತೀನಿ,” ಎಂದು ಹೇಳಿ ಅವಳ ಮೇಲೆ ಕಾಲು ಎತ್ತಿದ. ಆ ರಭಸಕ್ಕೆ ಚಾಕು ಅವನ ಕಾಲಲ್ಲಿ ಹೊಕ್ಕಿತು. ಕಾಲಿನಿಂದ ರಕ್ತ ಸುರಿಯುತ್ತಿರುವುದನ್ನು ನೋಡಿ ಛಾಯಾ ಗಾಬರಿಗೊಂಡಳು. ಅಪ್ಪ ಅಮ್ಮನ ಜೋರು ಜೋರಾದ ಧ್ವನಿ ಕೇಳಿ ತನ್ನ ಕೋಣೆಯಲ್ಲಿ ಓದುತ್ತಿದ್ದ ಮಗಳು ತನುಜಾ ಓಡೋಡಿ ಬಂದಳು. ಅಪ್ಪನ ಕಾಲಿನಿಂದ ರಕ್ತ ಸುರಿಯುತ್ತಿರುವುದನ್ನು ಕಂಡು ಅವಳು ತಕ್ಷಣವೇ ಫಸ್ಟ್ ಏಡ್‌ ಬಾಕ್ಸ್ ತೆಗೆದುಕೊಂಡು ಬಂದಳು. ನಂತರ ಅಪ್ಪ-ಅಮ್ಮನ ಜಗಳ ಬಗೆಹರಿಸಲು ಪಕ್ಕದ ಮನೆಯ ಸುಶೀಲಾ ಆಂಟಿಯನ್ನು ಕರೆಯಲು ಹೋದಳು. ಆಗ ಸುಶೀಲಾರ ಮಗಳು ಹೇಳಿದಳು, “ನಿನ್ನ ಅಮ್ಮ-ಅಪ್ಪ ಎಷ್ಟು ಕೆಟ್ಟದಾಗಿ ಜಗಳವಾಡುತ್ತಾರೆ. ನಿಮ್ಮ ಮನೆಯಲ್ಲಿ  ಮಾತನಾಡೋದೆಲ್ಲ ನಮ್ಮ ಮನೆಗೆ ಕೇಳಿಸುತ್ತಿರುತ್ತದೆ. ಜಗಳ ಬಗೆಹರಿಸಲು ಮೇಲಿಂದ ಮೇಲೆ ನನ್ನ ಮಮ್ಮಿಯನ್ನು ಕರೆಯೋಕೆ ಬರ್ತೀಯಲ್ಲ. ಇವತ್ತು ಮಮ್ಮಿ ಮನೆಯಲ್ಲಿ ಇಲ್ಲವೇ ಇಲ್ಲ. ಆಗ ಇನ್ಯಾರನ್ನು ಕರೆಯಲು ಹೋಗ್ತೀಯಾ?”

ತನುಜಾ ಅಳುತ್ತಲೇ ಮನೆಗೆ ವಾಪಸ್ಸಾದಳು. ಅಪ್ಪ-ಅಮ್ಮನ ಜಗಳ ಬೇರೆ ವಿದ್ಯಾರ್ಥಿಗಳ ಕಿವಿಗೆ ಬಿದ್ದಿತ್ತು. ಅವರೆಲ್ಲ “ನಿಮ್ಮ ಮನೆಯಲ್ಲಿ ದಿನ ಜಗಳ ಆಗುತ್ತಂತಲ್ಲ, ಏಕೋ?” ಎಂದು ಅವಳನ್ನು ಕೊಂಕು ಕೇಳುತ್ತಿರುತ್ತಾರೆ. ಅವರ ಮಾತಿನಿಂದ ಬೇಜಾರುಗೊಂಡ ಅವಳು ಗೆಳತಿಯರ ಜೊತೆ ಬರದೇ ಒಬ್ಬಳೇ ಬರುತ್ತಿದ್ದಳು. ಮನೆಯಲ್ಲೂ ಕೂಡ ಒಬ್ಬಳೇ ಕೋಣೆಯಲ್ಲಿ ಕೂರುತ್ತಾಳೆ.

ಹಠ, ಬಲವಂತ

ಗಂಡ-ಹೆಂಡತಿಯ ಮನಸ್ಸಿನಲ್ಲಿ ಪರಸ್ಪರರ ಆಸಕ್ತಿಗಳ ಬಗ್ಗೆ ಗೌರವ ಇರಬೇಕು. ಇಲ್ಲದಿದ್ದರೆ ಬಲವಂತ ಮಾಡುವುದು, ಹಠ ಜಗಳಕ್ಕೆ ಕಾರಣವಾಗಬಹುದು. ಅದೇ ಜಗಳ ಹಿಂಸೆಗೂ ತಿರುಗಬಹುದು. ಅದರ ದುಷ್ಪರಿಣಾಮ ಮಕ್ಕಳ ಮೇಲೆ ಉಂಟಾಗುತ್ತದೆ. ತಂದೆ-ತಾಯಿಗಳ ಹಠಮಾರಿ ಧೋರಣೆ ಮಕ್ಕಳಲ್ಲೂ ಮನೆ ಮಾಡುತ್ತದೆ. ಅವರೂ ಕೂಡ ಹಠ ಮಾಡಿದರೆ ನಮಗೆ ಬೇಕಾದ್ದು ಸಿಗುತ್ತದೆ ಎಂದು ಅದನ್ನೇ ಶುರು ಮಾಡಿಕೊಂಡು ತಮಗೆ ಬೇಕಾದ್ದನ್ನು ಪಡೆಯುತ್ತಾರೆ. ಇಲ್ಲವೇ ಹಿಂಸೆಯ ದಾರಿ ತುಳಿಯುತ್ತಾರೆ.

ಸಂದೇಹ ಅಥವಾ ಪತ್ತೆದಾರಿಕೆ

ಗಂಡ-ಹೆಂಡತಿಯರಲ್ಲಿ ಪರಸ್ಪರರ ಮೇಲೆ ವಿಶ್ವಾಸ ಅತ್ಯಂತ ಮಹತ್ವದ್ದು. ಮಾತು ಮಾತಿಗೂ ಸಂದೇಹ, ಪತ್ತೆದಾರಿಕೆ ಮಾಡುವುದು ಅವರಲ್ಲಿ ಮನಸ್ತಾಪಕ್ಕೆ ಕಾರಣವಾಗಬಹುದು. ಮಕ್ಕಳ ಎದುರಿನಲ್ಲಿಯೇ ಅವರು ಕೌಟುಂಬಿಕ ದೌರ್ಜನ್ಯಕ್ಕೆ ಶುರು ಮಾಡಿಕೊಳ್ಳುತ್ತಾರೆ. ಗಂಡಹೆಂಡತಿಯರಲ್ಲಿ ಒಬ್ಬರ ಅಪ್ರಾಮಾಣಿಕತನ ಒಮ್ಮೊಮ್ಮೆ ದೌರ್ಜನ್ಯಕ್ಕೆ ಈಡು ಮಾಡಿಕೊಡುತ್ತದೆ. ಅಷ್ಟಿಷ್ಟು ಸಂದೇಹ ಉಂಟಾದರೂ ಪರಸ್ಪರರು ಮನಬಿಚ್ಚಿ ಮಾತನಾಡಿ, ಹಿಂಸೆಗಿಳಿಯದೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಣಯ ಕೈಗೊಳ್ಳಿ.

ಹಣ ಮತ್ತು ಆಸ್ತಿ

ಮಾನಸಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ಅವಳ ಸಂಬಳ ಚೆನ್ನಾಗಿಯೇ ಇದೆ. ಅವಳು ಗಂಡನಿಗೆ ಗೊತ್ತಿಲ್ಲದ ಹಾಗೆ ಎಫ್‌.ಡಿ. ಮಾಡಿದ್ದಾಳೆ. ಗಂಡ ಶೈಲೇಶನ ಆದಾಯ ಕೂಡ ಚೆನ್ನಾಗಿದೆ. ಈಚೆಗಷ್ಟೇ ಅವನು ಒಂದಿಷ್ಟು ಆಸ್ತಿಯನ್ನು ಖರೀದಿಸಿ ಅದನ್ನು ಹೆಂಡತಿ ಮಾನಸಾ ಹಾಗೂ ಮಗನ ಹೆಸರಿನಲ್ಲಿ ರಿಜಿಸ್ಟರ್ಡ್‌ ಮಾಡಿಸಿದ. ಆಕಸ್ಮಿಕವಾಗಿ ಶೈಲೇಶನ ತಂದೆಗೆ ಹೃದಯಾಘಾತಾಯಿತು. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಲಾಯಿತು. ಶೈಲೇಶ್‌ ಬಳಿ ಅಷ್ಟಿಷ್ಟು ಹಣ ಇತ್ತು. ಆದರೆ ಅದು ಕಡಿಮೆ ಬೀಳುತ್ತಲಿತ್ತು. ಆಗ ಅವನು ಪತ್ನಿಯ ಬಳಿ ಹಣಕ್ಕಾಗಿ  ಕೇಳಿದ.  ಆದರೆ ಆಕೆ ತನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದು ಹೇಳಿದಳು. ಮಗನ ಹೆಸರಿನಲ್ಲಿ ನೀವು ಒಂದು ಅಂಗಡಿ ಖರೀದಿಸಿದ್ದೀರಲ್ಲ, ಅದನ್ನೇಕೆ ಮಾರಬಾರದು ಎಂದು ಹೆಂಡತಿ ಕೇಳಿದಳು.

4-5 ಲಕ್ಷ ರೂ. ಗಳಿಗೆ 25 ಲಕ್ಷ ಬೆಲೆ ಬಾಳುವ ಅಂಗಡಿಯನ್ನು ಮಾರಾಟ ಮಾಡುವುದೆ? ಮನೆಯ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ. ನೀನು ಹಣವನ್ನು ಎಲ್ಲಿ ಖರ್ಚು ಮಾಡ್ತೀಯಾ ಎಂದು ಹೆಂಡತಿಗೆ ಪ್ರಶ್ನೆ ಮಾಡಿದ. ಶೈಲೇಶ್‌ ಹೆಂಡತಿಯ ಖಂಡತುಂಡ ಉತ್ತರದಿಂದ ಅವಳ ಬೇಜವಾಬ್ದಾರಿತನಕ್ಕೆ ನೊಂದುಕೊಂಡ. ಅವನು ಅಂಗಡಿಯನ್ನು ಮಾರಲಿಲ್ಲ. ಅವನು ಹೇಗೋ ಹಣವನ್ನು ಸಾಲಕ್ಕೆ ತಂದು ತಂದೆಯ ಆಸ್ಪತ್ರೆ ಚಾರ್ಜ್‌ಗೆ ಹೊಂದಿಸಿಕೊಂಡ, ಹೆಂಡತಿಯ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುವುದಾಗಿ ಹೇಳಿದಾಗ ಹೆಂಡತಿ ಸಾಕಷ್ಟು ಕೂಗಾಡಿದಳು. ಜಗಳ  ಹಿಂಸಾರೂಪಕ್ಕೂ ತಿರುಗಿತ್ತು.

ಕೌಟುಂಬಿಕ ಜಗಳಗಳಿಂದಾಗಿ ಮಕ್ಕಳಲ್ಲಿ ಅಸುರಕ್ಷತೆಯ ಭಾವನೆ ಉಂಟಾಗುತ್ತದೆ. ಆ ಬಳಿಕ ಅವರೂ ಕೂಡ ಜಗಳದ ತಂತ್ರಗಳನ್ನು ತಮ್ಮ ಹಠ ಸಾಧಿಸಲು ಬಳಸಿಕೊಳ್ಳುತ್ತಾರೆ. ತೀರಾ ಕೆಟ್ಟು ಹೋಗುತ್ತಾರೆ. ಅವರಲ್ಲಿ ಸಂಸ್ಕಾರವೆನ್ನುವುದೇ ಬರುವುದಿಲ್ಲ.

ದೊಡ್ಡವರಾದ ಬಳಿಕ ಅವರಿಗೆ ಕುಟುಂಬ ಹಾಗೂ ಸಮಾಜದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅವರು ಅಂತರ್ಮುಖಿ, ಹಠಮಾರಿ, ಜಗಳಗಂಟಿ ಸ್ವಭಾವದವರಾಗುತ್ತಾರೆ. ಯಾವುದೇ ತಪ್ಪು ಹೆಜ್ಜೆ ಇಡಲು ಹಿಂದೇಟು ಹಾಕುವುದಿಲ್ಲ.

ಮಾತು ವಿಕೋಪಕ್ಕೆ ಹೋಗದಂತೆ ಗಂಡಹೆಂಡತಿ ತಾಳ್ಮೆಯಿಂದಿರಬೇಕು. ತಮ್ಮ ಸಮಸ್ಯೆ, ಮನಸ್ತಾಪಗಳನ್ನು ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ನಾವು ಮದುವೆಯನ್ನಷ್ಟೇ ಆಗಿಲ್ಲ, ಕುಟುಂಬ ಕಟ್ಟಿಕೊಂಡಿದ್ದೇವೆ. ಮಗು ಕೂಡ ಆಗಿದೆ ಎನ್ನುವುದು ದಂಪತಿಗಳಿಗೆ ನೆನಪಿರಬೇಕು. ಮಾತು-ನಡಳಿಕೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಮಕ್ಕಳ ಸಮಗ್ರ ವಿಕಾಸ ಹಾಗೂ ಉನ್ನತ ಭವಿಷ್ಯಕ್ಕಾಗಿ ಅವರು ಇಷ್ಟು ತ್ಯಾಗ ಮಾಡಲೇಬೇಕು.

– ವೈದೇಹಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ