ಮೊದಲು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಈಗಲೂ ನಮ್ಮಲ್ಲಿ ಅಲ್ಲಲ್ಲಿ ತಾಯಂದಿರು ತಮ್ಮ ಗಂಡು ಮಕ್ಕಳಿಗೆ ಮನೆಗೆಲಸ ಮಾಡಲು ಹೇಳುವುದೇ ಇಲ್ಲ. ಇದು ಆ ತಾಯಂದಿರ ಹೆಚ್ಚುವರಿ ಸ್ನೇಹವಾಗಿದ್ದು, ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಅವರ ಮೇಲೆ ತಮ್ಮ ಪಕ್ಷಪಾತದ ಪ್ರೀತಿಯನ್ನು ಹರಿಸುತ್ತಾರೆ.
ಒಂದು ವಾಸ್ತವ ಸಂಗತಿಯೇನೆಂದರೆ, ಈ ರೀತಿಯ ಅವರ ಮಾನಸಿಕತೆ ಗಂಡು ಮಕ್ಕಳನ್ನು ತಮ್ಮ ಅತಿ ದೊಡ್ಡ ವೈರಿಯನ್ನಾಗಿಸುತ್ತದೆ. ಒಂದೆಡೆ ಈ ತಾಯಂದಿರು ಹುಡುಗಿಯರಿಗೆ ಸ್ವಾವಲಂಬಿತನದ ಪಾಠ ಬೋಧಿಸಿ ಅವರಿಗೆ ಎಂಥದೇ ಸ್ಥಿತಿಯಲ್ಲೂ ಬದುಕಿಬಾಳುವ ಛಲ ಮೂಡಿಸುತ್ತಾರೆ. ಇನ್ನೊಂದೆಡೆ, ಹುಡುಗರಿಗೆ ಯಾವುದೇ ಕೆಲಸ ಮಾಡಲು ಹೇಳದೆ ಅವರನ್ನು ಪರಾವಲಂಬಿ ಆಗಿಸಿಬಿಡುತ್ತಾರೆ.
ಹೆಚ್ಚುವರಿ ಹೊರೆ ಅಲ್ಲ
ಸೌಮ್ಯಾ ಮತ್ತು ಅರುಣ್ ಇಬ್ಬರೂ ಉದ್ಯೋಗಸ್ಥರು. ಮನೆಯಲ್ಲಿ ಅರುಣ್‌ನ ವೃದ್ಧ ತಂದೆ ಹಾಗೂ ಒಬ್ಬ ಮಗ ಕೂಡ ಇದ್ದಾನೆ. ಆದರೆ ಅವರ ಮನೆಗೆಲಸಗಳು ಸುಲಭವಾಗಿ ನೆರವೇರುತ್ತವೆ. ಏಕೆಂದರೆ ಇಬ್ಬರೂ ಸೇರಿ ಮನೆಗೆಲಸಗಳನ್ನು ನಿಭಾಯಿಸುತ್ತಾರೆ. ಸೌಮ್ಯಾ ಯಾವಾಗಲಾದರೂ ಟೂರ್‌ಗೆ ಹೋದರೆ ಅರುಣ್‌ಗೆ ಸಮಸ್ಯೆ ಅನಿಸುವುದೇ ಇಲ್ಲ. ಅವರು ತಮ್ಮ ಆಫೀಸ್ ಕೆಲಸ ಕಾರ್ಯಗಳ ಜೊತೆಗೆ ಮನೆಗೆಲಸಗಳನ್ನು ಸುಸೂತ್ರವಾಗಿ ಮಾಡಿ ಮುಗಿಸುತ್ತಾರೆ. ಮಹಿಳೆಯಾಗಿರುವ ಕಾರಣದಿಂದ ಸೌಮ್ಯಾಳ ಮೇಲೆ ಯಾವುದೇ ಹೆಚ್ಚಿನ ಹೊರೆಯೂ ಇಲ್ಲ.
ಸೌಮ್ಯಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನಾವು ಅಡುಗೆಮನೆಯಲ್ಲಿ ಇಬ್ಬರೂ ಜೊತೆ ಜೊತೆಗೆ ಕಾಲಕಳೆಯುತ್ತ ಎಲ್ಲ ಕೆಲಸಗಳನ್ನು ಮುಗಿಸುತ್ತೇವೆ.''
ಅರುಣ್ ಈ ಕುರಿತಂತೆ ಸ್ವಲ್ಪ ವಿಭಿನ್ನವಾಗಿ ಹೇಳುತ್ತಾರೆ, ``ಅಮ್ಮ ಮೊದಲಿನಿಂದಲೂ ಒಬ್ಬರೇ ಎಲ್ಲ ಕೆಲಸಗಳನ್ನು ಮಾಡುತ್ತಾ ಹೆಣಗಾಡುತ್ತಿದ್ದುದನ್ನು ನಾನು ಕಂಡಿದ್ದೆ. ಹೀಗಾಗಿ ನನ್ನ ಪತ್ನಿ ಕೂಡ ಹಾಗೆಯೇ ಕೆಲಸ ಮಾಡುತ್ತಾ ಇರಬೇಕು ಎಂದು ನಾನು ಖಂಡಿತ ಬಯಸುತ್ತಿರಲಿಲ್ಲ. ಅದಕ್ಕಾಗಿ ಅಡುಗೆ ಮನೆಯಲ್ಲಿ ನನ್ನದೂ ಜವಾಬ್ದಾರಿಯಿದೆ ಎಂದುಕೊಂಡು ಪತ್ನಿಗೆ ನೆರವಾಗುತ್ತಿರುವೆ.'' ಹೆಂಡತಿಯ ಮೇಲೆ ಅವಲಂಬನೆ
ಹರ್ಷ ಅಮ್ಮನ ಮುದ್ದಿನ ಮಗನಾಗಿದ್ದ. ಅವನ ತಂಗಿಯೇ ಅವನ ಚಿಕ್ಕಪುಟ್ಟ ಕೆಲಸಗಳನ್ನೆಲ್ಲ ಓಡೋಡಿ ಮಾಡಿಕೊಡುತ್ತಿದ್ದಳು. ಮಾಡಿದ ಅಡುಗೆಯನ್ನು ತಟ್ಟೆಗೆ ಹಾಕಿಕೊಂಡು ತಿನ್ನುವ ಕಷ್ಟ ಕೂಡ ಕೊಡಬಾರದೆಂದು ಅಮ್ಮ ತಾನೇ ತಟ್ಟೆಗೆ ಹಾಕಿಕೊಟ್ಟು ಉಣಿಸುತ್ತಿದ್ದಳು. ಇದರ ಫಲಿತಾಂಶ ಏನಾಯಿತೆಂದರೆ, ಅವನು ಪ್ರಥಮ ಬಾರಿ ಹಾಸ್ಟೆಲ್‌ಗೆ ಹೋದಾಗ ಸಾಕಷ್ಟು ತೊಂದರೆ ಅನುಭವಿಸಬೇಕಾಗಿ ಬಂತು. ಅವನು ಅಮ್ಮನ ಮೇಲೆ ಅದೆಷ್ಟು ಅವಲಂಬಿಸಿದ್ದನೆಂದರೆ, ತನ್ನ ಚಿಕ್ಕಪುಟ್ಟ ಕೆಲಸಗಳನ್ನು ಸರಿಯಾಗಿ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಬಟ್ಟೆ ಒಗೆಯುವುದು, ಕೋಣೆ ಸ್ವಚ್ಛಗೊಳಿಸುವಂತಹ ಕೆಲಸ ಮಾಡುವುದೂ ಅವನಿಗೆ ಗೊತ್ತಿರಲಿಲ್ಲ.
ಮದುವೆಯ ಬಳಿಕ ಕೂಡ ಅವನು ಹೆಂಡತಿಯನ್ನೇ ಅವಲಂಬಿಸತೊಡಗಿದ. ಅವನ ಹೆಂಡತಿ ಎಲ್ಲಿಯಾದರೂ ಹೊರಟರೆ ಅವನ ಸ್ಥಿತಿ ಅಯೋಮಯವಾಗುತ್ತಿತ್ತು.
ಕಾಲಕ್ಕೆ ತಕ್ಕಂತೆ ಸಾಮಾಜಿಕ ವ್ಯವಸ್ಥೆಗಳು ಕೂಡ ಬದಲಾಗುತ್ತವೆ. ಅದೇ ರೀತಿ ನಮ್ಮ ಯೋಚನೆಯ ಧಾಟಿ ಕೂಡ ಬದಲಾಗಬೇಕು. ಅಮ್ಮ ಉದ್ಯೋಗಸ್ಥೆಯಾಗಿದ್ದರೆ, ಹುಡುಗನೇ ಆಗಿರಬಹುದು, ಹುಡುಗಿಯೇ ಇರಬಹುದು ಸ್ವಾವಲಂಬಿ ಆಗಲೇಬೇಕಾಗುತ್ತದೆ. ತಾಯಂದಿರು ಈಗ ಮಗುವನ್ನು ಹಾಸ್ಟೆಲ್‌ಗೆ ಕಳಿಸುವ ಮುನ್ನ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ತಾನೇ ಮಾಡಿಕೊಳ್ಳುವಷ್ಟು ಮಟ್ಟಿಗೆ ಅವನನ್ನು ಸಮರ್ಥಳಾಗಿಸುತ್ತಾಳೆ. ತನ್ನ ಗಂಡುಮಗನಿಗೂ ಕೂಡ ಅಡುಗೆ ಮನೆಯ ಕೆಲಸ ಕಾರ್ಯಗಳನ್ನು ಪರಿಚಯ ಮಾಡಿಕೊಡುತ್ತಾಳೆ.