ಪ್ರತಿಯೊಬ್ಬ ತಂದೆತಾಯಿ ತಮ್ಮ ಮಗು ಎಲ್ಲ ಕ್ಷೇತ್ರದಲ್ಲೂ ನಂಬರ್‌ ಒನ್‌ ಆಗಿರಬೇಕೆಂದು ಭಾರಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಅದೇ ಕಾರಣಕ್ಕಾಗಿ ಅವರು ಮಕ್ಕಳ ಮೇಲೆ ಭಾರಿ ಒತ್ತಡ ಹೇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾಡು, ನಾಟಕ ಈ ತೆರನಾದ ರಿಯಾಲಿಟಿ ಶೋಗಳ ಹಾವಳಿ ಟಿವಿಗಳಲ್ಲಿ ಅತಿಯಾಗಿಬಿಟ್ಟಿವೆ. ತಮ್ಮ ಮಕ್ಕಳು ಕೂಡ ಅಂತಹ ಶೋನಲ್ಲಿ  ಪಾಲ್ಗೊಳ್ಳಬೇಕು, ಹೆಸರು ಮಾಡಬೇಕು ಎನ್ನುವುದು ಪೋಷಕರ ಮನದಾಳದ ಇಚ್ಛೆಯಾಗಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಮಗು `ಸೂಪರ್‌ ಕಿಡ್‌’ ಆಗಬೇಕಿದೆ. ಮಗುವೊಂದು ಪರಿಸರದಿಂದ, ತನ್ನ ಕುಟುಂಬದಿಂದ ಮೊದಲು ಕಲಿಯುತ್ತದೆ. ನಂತರ ಗೆಳೆಯರಿಂದ ಆ ಬಳಿಕ ಟಿವಿಯಿಂದ ಏನೆಲ್ಲವನ್ನೂ ಕರಗತ ಮಾಡಿಕೊಳ್ಳುತ್ತದೆ.

ಸೃಷ್ಟಿಯ ವಯಸ್ಸು ಇನ್ನು ಎಂಟು. ಅವಳು ಶಾಲೆಗೆ ಹೋಗುತ್ತಾಳೆ. ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಸಂಗೀತ ಶಿಕ್ಷಕಿ ಮನೆಗೆ ಬಂದಿರುತ್ತಾರೆ. ಅದು ಮುಗಿಯುತ್ತಿದ್ದಂತೆ ಟ್ಯೂಶನ್‌ಗೆ ಹೋಗಬೇಕು. ಅಲ್ಲಿಂದ ಮರಳುತ್ತಿದ್ದಂತೆ ಈಜು ತರಬೇತಿಗೆ ಹೋಗುವ ಸಮಯ ಆಗಿಬಿಟ್ಟಿರುತ್ತದೆ. ಸಂಜೆ ಡ್ಯಾನ್ಸ್ ಕ್ಲಾಸ್‌ ಕೂಡ ಇದ್ದೇ ಇರುತ್ತದೆ. ಅದು ಮುಗಿಯುತ್ತಿದ್ದಂತೆ ಹೋಂವರ್ಕ್‌ನ್ನು ಪೂರೈಸಬೇಕಿರುತ್ತದೆ. ಅಷ್ಟೊತ್ತಿಗೆ ಅವಳಿಗೆ ಆಕಳಿಕೆ, ತೂಕಡಿಕೆ ಶುರು ಆಗಿಬಿಟ್ಟಿರುತ್ತದೆ. ಅದಕ್ಕೆ ಮೇಲಾಗಿ ಅಮ್ಮನ ಬೈಗುಳ ಕೇಳಬೇಕಾಗಿಬರುತ್ತದೆ.

ಈಗ ನೀವೇ ಯೋಚಿಸಿ, ಪುಟ್ಟ ಮಗುವಿಗೆ ಇಷ್ಟೊಂದು ಹೊರೆ ಸರಿಯೆ? ಈ ಧಾವಂತದ ನಡುವೆ ಅದಕ್ಕೆ ನೆಮ್ಮದಿಯಿಂದ ಒಂದೆಡೆ ಕುಳಿತುಕೊಳ್ಳುವ ಪುರಸತ್ತು ಇಲ್ಲ, ದಣಿವಾದಾಗ ನಿದ್ದೆಗೆ ಜಾರುವ ಅವಕಾಶ ಇಲ್ಲ.

ಈ ತೆರನಾದ ದಿನಚರಿ ಇತ್ತೀಚೆಗೆ ಪ್ರತಿಯೊಬ್ಬ ಮಕ್ಕಳದ್ದೂ ಆಗಿದೆ. ಪೋಷಕರು ತಮ್ಮ ಅಪೂರ್ಣ ಕನಸನ್ನು ಮಕ್ಕಳ ಮೇಲೆ ಹೇರುವ ಮುಖಾಂತರ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮಗು ಆಲ್‌ರೌಂಡರ್ ಆಗಬೇಕೆನ್ನುವುದು ಪ್ರತಿಯೊಬ್ಬರ ಆಕಾಂಕ್ಷೆ. ಸೂಪರ್‌ ಹೀರೋನ ರೀತಿಯಲ್ಲಿ ಸೂಪರ್‌ ಕಿಡ್‌ ಆಗಬೇಕು ಎನ್ನುವುದು ಅವರ ಮನದಾಳದ ಅಪೇಕ್ಷೆ ಆಗಿರುತ್ತದೆ.

ಹಿರಿಯ ವಕೀಲರಾದ ರಾಜಶೇಖರ್‌ ಮೂರ್ತಿ ಹೀಗೆ ಹೇಳುತ್ತಾರೆ, “ಪೋಷಕರ ಈ ರೀತಿಯ ಮಹತ್ವಾಕಾಂಕ್ಷೆ ಮಕ್ಕಳನ್ನು ಖಿನ್ನತೆಗೆ ದೂಡುತ್ತಿದೆ. ಅಂಕಿಗಳ ಆಟದಲ್ಲಿ ಮುಂದಿರಬೇಕು ಎನ್ನುವುದು ಅವರ ವಿವಶತೆಯಾಗಿದೆ. ಇದೇ ಕಾರಣದಿಂದ ಪ್ರತಿ ವರ್ಷ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅದೆಷ್ಟೋ ವಿದ್ಯಾರ್ಥಿಗಳು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಪೋಷಕರು ಮಕ್ಕಳನ್ನು ಈ ಸ್ಥಿತಿಗೆ ಖಂಡಿತಾ ದೂಡಬಾರದು! ಪ್ರತಿಯೊಂದು ಮಗು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ ಎಂಬುದನ್ನು ಪೋಷಕರು ಮನಗಾಣಬೇಕು.

”ತಂದೆತಾಯಿ ಮಕ್ಕಳನ್ನು ಸಾಕಷ್ಟು ಪೋಷಿಸುತ್ತಾರೆ. ಆದರೆ ಪರಿಣಾಮ ಏನೂ ದಕ್ಕದೆ ಇದ್ದರೆ ಏನು ಕೊರತೆ ಇದೆ? ಎಂದು ಅನಿಸತೊಡಗುತ್ತದೆ. ವಾಸ್ತವ ಸಂಗತಿ ಏನೆಂದರೆ, ಟಿ.ವಿ.ಯಲ್ಲಿ ಬರುತ್ತಿರುವ ರಿಯಾಲಿಟಿ ಶೋಗಳು ಮುಗ್ಧ ಮನಸ್ಸುಗಳಲ್ಲಿ ಕ್ರಾಂತಿ ತಂದಿವೆ.

ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿ ತೋರಿಸಬೇಕು, ತಮ್ಮ ಹೆಸರನ್ನು ಬೆಳಗಿಸಬೇಕು ಎಂಬ ಒತ್ತಡದ ತೂಗುಗತ್ತಿ ಅವರ ಮೇಲೆ ಸದಾ ತೂಗುತ್ತಿರುತ್ತದೆ. ಈ ಕಾರಣದಿಂದ ಅವರ ಸರಳತೆ ಮತ್ತು ಸಹಜ ಗುಣವೇ ಅದೃಶ್ಯವಾಗುತ್ತದೆ.

ವಾಸ್ತವದಲ್ಲಿ ಮಕ್ಕಳು ಕಲ್ಪನಾಶೀಲರಾಗಿ ಇರುತ್ತಾರೆ. ಏನನ್ನಾದರೂ ಮಾಡಬೇಕೆಂಬ ತುಡಿತವಿರುತ್ತದೆ. ಹಾಗೆಂದೇ ಅವರು ಯಾವುದೇ ಕೆಲಸವನ್ನು ಮನಸಾರೆ ಮಾಡುತ್ತಿರುತ್ತಾರೆ. ಆಗ ಫಲಿತಾಂಶ ಉತ್ತಮವಾಗಿರುತ್ತದೆ.

ಸಮಾಜಶಾಸ್ತ್ರಜ್ಞರಾದ ಡಾ. ರಾಜೇಶ್‌ ಹೀಗೆ ಹೇಳುತ್ತಾರೆ, “ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೊ, ಅವರನ್ನು ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು. ಅರ್ಹತೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಭೆ ಹೊರಹೊಮ್ಮಲು ಅವಕಾಶ ಮಾಡಿಕೊಡಬೇಕು. ಅವರ ಮನಸ್ಸನ್ನು ಅರಿತು, ಅವರಿಗೆ ಮಾರ್ಗದರ್ಶನ ನೀಡಬೇಕು. ಅವರು ಯಾವುದೇ ಒಂದು ಕಲೆಯಲ್ಲಿ ಪ್ರಾವೀಣ್ಯತೆ ಸಾಧಿಸುವ ಯಂತ್ರಗಳಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು.”

ಮಕ್ಕಳ ವಿಶೇಷತೆ ಗಮನಿಸಿ ಖ್ಯಾತ ನಟ ಅಮೀರ್‌ಖಾನ್‌ ಒಂದೆಡೆ ಹೀಗೆ ಹೇಳುತ್ತಾರೆ, “ಪ್ರತಿಯೊಂದು ಮಗು ಕೂಡ ವಿಶೇಷ ಗುಣ ಹೊಂದಿದೆ. ಹಲವು ವರ್ಷಗಳ ಸಂಶೋಧನೆಯಿಂದ ನನಗಿದು ಗೊತ್ತಾಗಿದೆ. ಪ್ರತಿಯೊಂದು ಮಗುವಿನಲ್ಲಿರುವ ವಿಶೇಷತೆ ಗಮನಿಸಿ, ಅದರ ಪ್ರತಿಭೆ ಹೊರಹೊಮ್ಮಿಸಲು ಪೂರಕ ವಾತಾವರಣ ನಿರ್ಮಿಸಬೇಕು. ಮಗುವಿಗೆ ಯಾವುದು ಇಷ್ಟವಾಗುತ್ತದೆ, ಅದರ ಮನಸ್ಸು ಏನನ್ನು ಹೇಳಲು ಬಯಸುತ್ತದೆ, ಅದರ ದೌರ್ಬಲ್ಯಗಳೇನು ಎಂಬುದನ್ನು ಕಂಡುಕೊಂಡು ನಾವು ಕಾರ್ಯ ಪ್ರವೃತ್ತರಾಗಬೇಕು.“

ನಮ್ಮ ಶಿಕ್ಷಣ ವ್ಯವಸ್ಥೆಯೇ ಹಾಗಿದೆ. ನಾವು ಮಗುವಿನ ಮೇಲೆ ಫಸ್ಟ್ ರಾಂಕ್‌ ಬರಬೇಕೆಂದು ಒತ್ತಡ ಹಾಕುತ್ತೇವೆ. ಪ್ರತಿಯೊಂದು ಮಗು ಫಸ್ಟ್ ಬರಲು ಹೇಗೆ ಸಾಧ್ಯ? ಆ ಒತ್ತಡ ಮಗುವಿನ ಮನಸ್ಸು ಮೆದುಳಿನ ಮೇಲೆ ಏನು ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಪೋಷಕರು ಯೋಚಿಸಬೇಕು.

“ಎಷ್ಟೋ ಸಲ ಫಸ್ಟ್ ರಾಂಕ್‌ ಬರಬೇಕೆಂಬ ಒತ್ತಡ ಮಗುವನ್ನು ಸ್ವಾರ್ಥಿಯಾಗಿಸುತ್ತದೆ. ಅದು ಕೇವಲ ತನ್ನ ಬಗೆಗಷ್ಟೇ ಯೋಚಿಸುತ್ತದೆ. ವಾಸ್ತವದಲ್ಲಿ ಬೇರೆ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ನಾವು ತಿಳಿಹೇಳಬೇಕು. ಆಗಲೇ ಅವರ ದೃಷ್ಟಿಕೋನ ಬದಲಾಗುತ್ತದೆ.”

ಮಕ್ಕಳಿಗೆ ಬೇಡ ಟೆನ್ಶನ್

ದೊಡ್ಡವರ ಹಾಗೆ ಮಕ್ಕಳಲ್ಲೂ ಒತ್ತಡದ ಸ್ಥಿತಿ ಇರುತ್ತದೆ. ಆದರೆ ಅವರ ಒತ್ತಡಕ್ಕೆ ಬೇರೆಯದೇ ಕಾರಣಗಳಿರುತ್ತವೆ. ಮಕ್ಕಳ ಆಸುಪಾಸಿನಲ್ಲಿ ಬೇರೆ ಬೇರೆಯ ವಾತಾವರಣವಿರುತ್ತದೆ. ಅದು ಅವರ ಮೇಲೆ ಒಳ್ಳೆಯ ಹಾಗೂ ಕೆಟ್ಟ ರೀತಿಯ ಪ್ರಭಾವ ಬೀರಬಹುದು. ಶಾಲೆ, ಟ್ಯೂಶನ್‌, ಆಟದ ಮೈದಾನ ಎಲ್ಲೋ ಒಂದು ಕಡೆ ಅವರನ್ನು ಟೆನ್ಶನ್‌ ಕಾಡಬಹುದು. ಯಾವ ಮಾತು, ಯಾವ ಸಂಗತಿ, ಯಾವಾಗ ಟೆನ್ಶನ್‌ಗೆ ಕಾರಣವಾಗುತ್ತದೆಂದು ಹೇಳುವುದು ಕಷ್ಟ. ಈ ಅವಧಿಯಲ್ಲಿ ಅವರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಘಟಿಸುತ್ತಿರುತ್ತವೆ. ಇಂತಹದರಲ್ಲಿ ಯಾವ ಮಾತು ಟೆನ್ಶನ್‌ಗೆ ನೆಪವಾಗುತ್ತೊ ಹೇಳುವುದು ಕಷ್ಟ. ಆದರೆ ಇದರಿಂದ ಅವರ ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಂತೂ ಸತ್ಯ.

ಈಗ ಮಕ್ಕಳ ಬ್ಯಾಗುಗಳು ಮೊದಲಿಗಿಂತ ಹೆಚ್ಚು ಭಾರವಾಗಿವೆ. ಅವರು ಓದುವ ವಿಷಯಗಳ ಸಂಖ್ಯೆ ಕೂಡ ಹೆಚ್ಚಿಗೆ ಇದೆ. ಪ್ರತಿ ತಿಂಗಳೂ ಟೆಸ್ಟ್, ಯೂನಿಟ್‌ ಟೆಸ್ಟ್, ಟ್ಯೂಶನ್‌ ಟೆಸ್ಟ್ ಮುಂತಾದ ಟೆನ್ಶನ್‌ ಬೇರೆ ಇರುತ್ತದೆ. ಯಾವುದೊ ಒಂದು ವಿಷಯದಲ್ಲಿ ಒಳ್ಳೆಯ ಹಿಡಿತ ಸಿಗದೇ ಇರುವ ಕಾರಣದಿಂದ ಅವರು ನಿರಂತರವಾಗಿ ಅದರಲ್ಲಿ ಹಿನ್ನಡೆ ಹೊಂದುತ್ತಾ ಹೋಗುತ್ತಾರೆ. ಪರೀಕ್ಷೆಯ ಸಂದರ್ಭದಲ್ಲಂತೂ ಅವರು ಹೆಚ್ಚಿನ ಟೆನ್ಶನ್‌ನಲ್ಲಿ ಇರುತ್ತಾರೆ. ಫಸ್ಟ್ ರಾಂಕ್‌ ಬರಬೇಕೆಂಬ ಒತ್ತಡ, ಅತಿಯಾದ ಓದು ಹಾಗೂ ಸರಿಯಾಗಿ ನಿದ್ರೆ ಮಾಡದೇ ಇರುವ ಕಾರಣದಿಂದಲೂ ಅವರು ಟೆನ್ಶನ್‌ನಲ್ಲಿ  ಬಳಲುತ್ತಾರೆ. ಪೋಷಕರು ಹೀಗಾಗದಂತೆ ಎಚ್ಚರಿಕೆ ವಹಿಸಬೇಕು.

– ದೀಪ್ತಿ ಸತೀಶ್‌

और कहानियां पढ़ने के लिए क्लिक करें...