ಚೆನ್ನೈನ 29ರ ಹರೆಯದ ಅಲೀಶಾ ಅಬ್ದುಲ್ಲಾ ಭಾರತದ ಮೊದಲ ಹಾಗೂ ಏಕಮಾತ್ರ ಮಹಿಳಾ ಸೂಪರ್ ಬೈಕ್ ರೇಸರ್ ಎನಿಸಿದ್ದಾರೆ. ಜೊತೆಗೆ ಆಕೆ ಫಾಸ್ಟೆಸ್ಟ್ ವುಮೆನ್ ಕಾರ್ ರೇಸರ್ ಕೂಡ. ಪ್ರಸಿದ್ಧ ಬೈಕ್ ರೇಸರ್ ಅಬ್ದುಲ್ಲಾರ ಮಗಳು ಅಲೀಶಾ ಬಾಲ್ಯದಿಂದಲೇ ರೇಸಿಂಗ್ ಕಡೆ ಆಕರ್ಷಿತಳು. 9ರ ವಯಸ್ಸಿನಲ್ಲೇ ಅಲೀಶಾ ಗೋವಾ ಕಾರ್ಟಿಂಗ್‌ಗಾಗಿ ಸಿದ್ಧಳಾಗಿದ್ದಳು. 11 ವರ್ಷದವಳಾಗುವವರೆಗೂ ಅವಳು ಗೋವಾ ಕಾರ್ಟಿಂಗ್‌ನ ಹಲವು ರೇಸ್ ಗೆದ್ದಿದ್ದಳು. 13ರ ಹರೆಯದಲ್ಲಿ ಆಕೆ ರಾಷ್ಟ್ರೀಯ ಗೋವಾ ಕಾರ್ಟಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದಳು.
2004ರಲ್ಲಿ ಅಲೀಶಾ `ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್`ನಲ್ಲಿ 5ನೇ ಸ್ಥಾನ ತಲುಪುವಲ್ಲಿ ಯಶಸ್ವಿಯಾಗಿದ್ದಳು. ನಂತರ ಅವಳ ತಂದೆ ಅವಳನ್ನು ಸೂಪರ್‌ಬೈಕ್ ರೇಸಿಂಗ್ ಸೇರುವಂತೆ ಪ್ರೋತ್ಸಾಹಿಸಿದರು. ಈ ರೀತಿ ಆಕೆಯ ಕನಸುಗಳಿಗೆ ಹೊಸ ಗರಿ ಮೂಡಿತು. ಇಂದು ಆಕೆ ಬೈಕ್, ಕಾರ್ ರೇಸಿಂಗ್ ಟೀಂ ಹೊಂದಿರುವ ಭಾರತದ ಅತಿ ಚಿಕ್ಕ ವಯಸ್ಸಿನ ರೇಸರ್ ಎನಿಸಿದ್ದಾಳೆ. ಆಕೆ ಜೊತೆಗಿನ ಸಂವಾದ :
ನಿಮ್ಮ ಯಶಸ್ಸಿನ ರಹಸ್ಯವೇನು?
ಹಾರ್ಡ್‌ವರ್ಕ್! ನಾನು ಎಲ್ಲರಿಗೂ ಇದನ್ನೇ ಹೇಳುತ್ತೇನೆ, ನಿಮ್ಮ ಫೋಕಸ್ ಸದಾ ನಿಮ್ಮ ಗುರಿ ಮೇಲಿರಲಿ. ತುಸು ತಡವಾದರೂ ಪರವಾಗಿಲ್ಲ, ಆಗ ಮಾತ್ರ ಯಶಸ್ಸು ಸಿಗಲು ಸಾಧ್ಯ.
ನಿಮ್ಮಲ್ಲಿನ ಯಾವ ಆಂತರಿಕ ಶಕ್ತಿ ನಿಮ್ಮ ಈ ಎಲ್ಲಾ ಕೆಲಸಗಳಿಗೂ ಪ್ರೇರಣೆ ನೀಡುತ್ತಿದೆ?
ನನ್ನ ಮೇಲಿನ ನಂಬಿಕೆಯೇ ನನ್ನ ಆಂತರಿಕ ಶಕ್ತಿಗೆ ಮೂಲ ಎನ್ನಬಹುದು, ಅದುವೇ ನನಗೆ ಈ ಮಟ್ಟದ ಪ್ರೇರಣೆ ನೀಡುತ್ತಿದೆ.
ಒಬ್ಬ ಉತ್ತಮ ಮಹಿಳಾ ಸೂಪರ್ ಬೈಕ್ ರೇಸರ್ ಆಗಲು ಏನೆಲ್ಲ ಗುಣಗಳು ಇರಬೇಕು?
ಎಲ್ಲಕ್ಕೂ ಮೊದಲು ಆರ್ಥಿಕ ಶಕ್ತಿ. ನಿಮ್ಮ ಬಳಿ ಉತ್ತಮ ಫಂಡ್ಸ್ ಬ್ಯಾಕ್‌ಅಪ್ ಇರಬೇಕು, ಏಕೆಂದರೆ ಈ ಪ್ರೊಫೆಶನ್‌ಗೆ ಅತಿ ಹೆಚ್ಚಿನ ದುಡ್ಡು ಖರ್ಚಾಗುತ್ತದೆ. ಒಂದು ನಾರ್ಮಲ್ ರೇಸ್‌ನಲ್ಲೇ ಕನಿಷ್ಠ ಎಂದರೂ 8-10 ಲಕ್ಷ ರೂ. ಖರ್ಚಾಗುತ್ತದೆ. ಹೀಗಾಗಿ ಸಹಜವಾಗಿಯೇ ಒಬ್ಬ ಮಧ್ಯಮ ವರ್ಗದ ವ್ಯಕ್ತಿಗೆ ಇದನ್ನು ಸಂಭಾಳಿಸುವುದು ಕಷ್ಟ. ಇದರ ಜೊತೆ ಫಿಟ್‌ನೆಸ್ ಕೂಡ ಅತಿ ಮುಖ್ಯ. ನಾನು ನಿಯಮಿತವಾಗಿ 3 ಗಂಟೆ ಕಾಲ ವರ್ಕ್‌ಔಟ್ ಮಾಡ್ತೀನಿ.
ಈ ಫೀಲ್ಡ್ ನಲ್ಲೂ ಸಹ ಮಹಿಳೆಯರ ಜೊತೆ ಭೇದಭಾವ ನಡೆಯುತ್ತದೆಯೇ?
ಹೌದು, ಖಂಡಿತಾ ನಡೆಯುತ್ತದೆ. ಎಷ್ಟೋ ಜನರ ಮೇಲ್ ಈಗೋ ಇದರಿಂದ ಹರ್ಟ್ ಆಗುತ್ತದೆ.
ನಿಮ್ಮ ಯಶಸ್ಸಿನ ಶ್ರೇಯಸ್ಸು ಯಾರಿಗೆ ಸಲ್ಲುತ್ತದೆ?
ಇಂದು ನಾನು ಈ ಸ್ಥಿತಿಗೇರಲು ಕಾರಣ ನನ್ನ ತಂದೆ. ನಾನು 8 ವರ್ಷದವಳಾಗಿದ್ದಾಗಲೇ ಅವರು ನನ್ನನ್ನು ಮೋಟರ್ ಸ್ಪೋರ್ಟ್ಸ್ ಗೆ ಸೇರಿಸಿದರು. ಮುಂದೆ ಹಾರ್ಡ್‌ಕೋರ್ ಟ್ರೇನಿಂಗ್ ನೀಡಿ ಅಲೀಶಾ ಅಬ್ದುಲ್ಲಾ ಎಂಬ ಐಡೆಂಟಿಟಿ ಕೊಡಿಸಿದ್ದಾರೆ.
ನಿಮ್ಮ ಜೀವನದ ಮೋಸ್ಟ್ ಬ್ಯೂಟಿಫುಲ್ ಕ್ಷಣಗಳು ಎಂದರೆ……
ನನ್ನ ಜೀವನದ ಮೋಸ್ಟ್ ಬ್ಯೂಟಿಫುಲ್ ಕ್ಷಣಗಳು ಎಂದರೆ, ಮೋಟರ್ ಸ್ಪೋರ್ಟ್ಸ್ ನ ಮೊದಲ ಮಹಿಳೆ ಎಂದು ರಾಷ್ಟ್ರಪತಿಯವರಿಂದ ಪ್ರಶಸ್ತಿ ಪಡೆದ ಕ್ಷಣಗಳು…..
ಸಮಾಜದಲ್ಲಿ ಸತತ ನಡೆಯುತ್ತಿರುವ ಅಪರಾಧಗಳ ಕುರಿತು ಏನು ಹೇಳುತ್ತೀರಿ?
ಇತ್ತೀಚೆಗೆ ಎಲ್ಲೆಲ್ಲೂ ಮಾನವೀಯತೆ ಮರೆಯಾಗುತ್ತಿದೆ. ಮುಂದಿನ ಪೀಳಿಗೆಯ ಮೇಲೆ ಇದು ಎಂಥ ಪ್ರಭಾವ ಬೀರಲಿದೆಯೋ ಎಂದು ಭಯವಾಗುತ್ತದೆ.
ಒಬ್ಬ ಮಹಿಳೆಯಾಗಿ ಪ್ರಗತಿ ಪಥದಲ್ಲಿ ಮುನ್ನೇರಲು ನಿಮ್ಮನ್ನು ಎಂದಾದರೂ ಅಸುರಕ್ಷತೆ ಕಾಡಿದೆಯೇ?
ಇಲ್ಲ, ನನ್ನನ್ನು ಅಸುರಕ್ಷತೆ ಎಂದೂ ಕಾಡಿದ್ದಿಲ್ಲ…. ಏಕೆಂದರೆ ನನ್ನ ತಂದೆ, ಮೆಂಟರ್ ಸದಾ ನನ್ನ ಜೊತೆಗೆ ಇರುತ್ತಿದ್ದರು.
ನೀವು ಬಿಡುವಿನಲ್ಲಿ ಏನು ಮಾಡುತ್ತೀರಿ?
ಬಿಡುವಾಗಿದ್ದಾಗೆಲ್ಲ ನಾನು ಕುಕಿಂಗ್ ಮಾಡಲು ಬಯಸುತ್ತೇನೆ, ಅದು ನನಗೆ ತುಂಬಾ ಇಷ್ಟ.
ನಿಮ್ಮ ಕುಟುಂಬದವರ ಸಪೋರ್ಟ್ ಇದೆಯೇ?
ನನ್ನ ಕನಸುಗಳನ್ನು ನನಸು ಮಾಡಿದವರೇ ನನ್ನ ತಾಯಿ ತಂದೆ! ಅವರಿಂದಲೇ ನನಗೆ ಈಗಿನ ಐಡೆಂಟಿಟಿ ಸಿಕ್ಕಿರುವುದು.
ನಿಮ್ಮ ಪ್ರಕಾರ ಫ್ಯಾಷನ್ ಅಂದ್ರೆ…..?
ಫ್ಯಾಷನ್ ಎಂದರೆ ನೀವು ಜೀವಿಸುವ ಪರಿ.
ಇಂದಿನ ಹುಡುಗಿಯರಿಗೆ ನಿಮ್ಮ ಸಂದೇಶ….
ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ, ಧೈರ್ಯವಾಗಿ ಮುನ್ನಡೆಯಿರಿ. ನಿಮ್ಮ ಕನಸು ನನಸಾಗುತ್ತದೆ.
ನಿಮ್ಮ ಆಸೆ ಏನಾದರೂ ಅಪೂರ್ಣ ಉಳಿದಿದೆಯೆ?
ನಾನು ಭಾರತ ದೇಶದ ಮಾದರಿ ಹೆಣ್ಣಾಗಿ ಉಳಿಯ ಬಯಸುತ್ತೇನೆ. ನನ್ನ `ಅಲೀಶಾ ಅಬ್ದುಲ್ಲಾ ಅಕ್ಯಾಡೆಮಿ’ಯಲ್ಲಿ ಹೆಂಗಸರಿಗೆ ಅತಿ ಕನಿಷ್ಠ ಫೀಸ್ ಕಟ್ಟಿ ರೇಸಿಂಗ್ ಟ್ರೇನಿಂಗ್ ಪಡೆಯುವಂತಾಗಬೇಕು.
– ಪಿ.ಗಿರಿಜಾ