ಕಥೆ -ಪ್ರತಿಭಾ ಪ್ರಕಾಶ್
ಅರುಣ್ ಬೆಂಗಳೂರು ನಿವಾಸಿ. ಖ್ಯಾತ ಖಾಸಗಿ ಐ.ಟಿ. ಉದ್ಯೋಗಿ. ಆಫೀಸ್ ಕೆಲಸದ ನಿಮಿತ್ತ ಲಂಡನ್‌ಗೆ ಹೋಗಬೇಕಾಯ್ತು. ಅಲ್ಲಿನ ವಿಶ್ವವಿಖ್ಯಾತ ಮೇಡಂ ಟುಸಾಡ್ ಮ್ಯೂಸಿಯಂ ನೋಡಲು ಹೋಗಿದ್ದ. ಅಲ್ಲಿ ವಿಶ್ವದೆಲ್ಲೆಡೆಯ ಖ್ಯಾತಿವೆತ್ತ ಸೆಲೆಬ್ರೆಟಿಗಳ ಮೇಣದ ಮೂರ್ತಿಗಳನ್ನು ತಯಾರಿಸಿಟ್ಟಿದ್ದಾರೆ. ನಮ್ಮ ದೇಶದ ಮಹಾತ್ಮ ಗಾಂಧೀಜಿ, ಅಮಿತಾಭ್, ಐಶ್ವರ್ಯಾ ರೈ ಮುಂತಾದವರ ಮೂರ್ತಿಗಳಿವೆ. ಅರುಣ್ ಗಾಂಧೀಜಿಯರ ಮೂರ್ತಿಗೆ ಕೈ ಮುಗಿದ. ನಂತರ ಅಮಿತಾಭ್, ಐಶ್ವರ್ಯಾ ಮೂರ್ತಿಗಳತ್ತ ನಡೆದ. ಅವನು ಆ ಮೂರ್ತಿಗಳ ನಡುವೆ ನಿಂತು ಸೆಲ್ಛಿ ಕ್ಲಿಕ್ಕಿಸಿಕೊಂಡ.
ಅರುಣ್ ಗಮನಿಸಿದಂತೆ ಒಬ್ಬ ಸುಂದರ ಹುಡುಗಿ ಸಹ ಅವನ ಹಾಗೆಯೇ ನೋಡಿಕೊಂಡು ಬರುತ್ತಿದ್ದಳು. ಆಕೆ ಭಾರತೀಯ ಮೂಲದವಳಲ್ಲವಾದರೂ ಏಷ್ಯಾ ಖಂಡದವಳಂತೆಯೇ ಇದ್ದಳು. ಅರುಣ್ ತುಸು ಧೈರ್ಯವಹಿಸಿ ಆಕೆಯನ್ನು ಆಂಗ್ಲದಲ್ಲಿ ಪ್ರಶ್ನಿಸಿದ, “ನಾನು ಸೆಲ್ಛಿ ಎಕ್ಸ್ ಪರ್ಟ್ ಅಲ್ಲ. ದಯವಿಟ್ಟು ಈ 2 ಮೂರ್ತಿಗಳ ನಡುವೆ ನನ್ನ ಫೋಟೋ ತೆಗೆದುಕೊಡ್ತೀರಾ….ಪ್ಲೀಸ್….” “ಖಂಡಿತಾ….”
“ನೀವು ಭಾರತದವರಲ್ಲ ಅನ್ಸುತ್ತೆ…..”
“ಹಾಗಾದ ಮಾತ್ರಕ್ಕೆ ಫೋಟೋ ಕ್ಲಿಕ್ಕಿಸಬಾರದೇನು? ನಾನು ದುಬೈ ಮೂಲದವಳು. ನನ್ನ ಹೆಸರು ಜುಬೇದಾ,” ಎಂದಳು.
“ನಾನು ಅರುಣ್…. ಬೆಂಗಳೂರಿನವನು,” ಎನ್ನುತ್ತಾ ತನ್ನ ಮೊಬೈಲ್‌ನಿಂದ ಫೋಟೋ ತೆಗೆಯುವಂತೆ ಅವಳಿಗೆ ನೀಡಿದ.
ಅವಳು ಅರುಣನ ಫೋಟೋ ತೆಗೆದ ನಂತರ ತನ್ನದನ್ನೂ ತೆಗೆಯುವಂತೆ ಅರುಣನಿಗೆ ಹೇಳಿದಳು. ಐಶ್ವರ್ಯಾ, ಅಮಿತಾಭ್ ಮಧ್ಯೆ ಅವಳು ನಿಂತಿರುವಂತೆ ಅರುಣ್ ಫೋಟೋ ಕ್ಲಿಕ್ಕಿಸಿ ನೀಡಿದ.
ಆಗ ಜುಬೇದಾ ಹೇಳಿದಳು, “ವಾಟ್ ಎ ಸರ್‌ಪ್ರೈಸ್! ನಾನು ಕೂಡ ಬೆಂಗಳೂರಿನಲ್ಲೇ ಹುಟ್ಟಿದ್ದು. ಆ ದಿನಗಳಲ್ಲಿ ದುಬೈನಲ್ಲಿ ಅಂಥ ಉತ್ತಮ ಆಸ್ಪತ್ರೆ ಇರಲಿಲ್ಲ. ಹೀಗಾಗಿ ನನ್ನ ಡ್ಯಾಡಿ ಮಮ್ಮಿಗೆ ಬೆಂಗಳೂರಿನಲ್ಲೇ ಹೆರಿಗೆ ಆಗಲಿ ಎಂದು ಬಯಸಿದರು. ಒಂದು ಕಾಲದಲ್ಲಿ ನಮ್ಮಮ್ಮ, ನಂತರ ನಾನೂ ಅಲ್ಲೇ ಕಲಿತವರು ಅಷ್ಟು ಮಾತ್ರವಲ್ಲ, ಬಾಲ್ಯದಲ್ಲಿ ನಾನೊಮ್ಮೆ ಬಹಳ ಹುಷಾರು ತಪ್ಪಿದಾಗ ನಾವು ಹುಟ್ಟಿದ ಆಸ್ಪತ್ರೆಯಲ್ಲೇ 2 ವಾರ ಅಡ್ಮಿಟ್ ಆಗಿದ್ದೆ…..”
“ವಾಟ್ ಎ ಪ್ಲೆಸೆಂಟ್ ಸರ್‌ಪ್ರೈಸ್!” ಅರುಣ್ ಉದ್ಗರಿಸಿದ.
ಅದಾದ ಮೇಲೆ ಇಬ್ಬರಲ್ಲೂ ತುಸು ಸ್ನೇಹ ಸಹಜವಾಗಿ ಬೆಳೆಯಿತು. ಅಮೇಲೆ ಇಬ್ಬರೂ ಮರ್ಲಿನ್ ಮನ್ರೋ ಮೂರ್ತಿ ಬಳಿ ಹೋದರು. ಅರುಣ್ ಮತ್ತೆ ಮರ್ಲಿನ್ ಜೊತೆ ಫೋಟೋ ತೆಗೆಯುಂತೆ ಹೇಳಿದ.
“ಆದರೆ ಈಕೆ ಇಂಡಿಯನ್ ಅಲ್ಲವಲ್ಲ…. ಮತ್ತೇಕೆ ಇವಳ ಜೊತೆ ನಿನಗೆ ಫೋಟೋ?”
ಅದಕ್ಕೆ ಅವರಿಬ್ಬರೂ ಜೋರಾಗಿ ನಕ್ಕರು.
“ಇರು, ನಾವಿಬ್ಬರೂ ಇವಳ ಜೊತೆ ಒಳ್ಳೆ ಸೆಲ್ಛಿ ತೆಗೆದುಕೊಳ್ಳೋಣ,” ಎಂದು ಅರುಣ್ ಪಕ್ಕ ನಿಂತು, ನೀಟಾಗಿ ಸೆಲ್ಛಿ ತೆಗೆದುಕೊಂಡು ಆ ಫೋಟೋವನ್ನು ಅವನಿಗೆ ಫಾರ್ವರ್ಡ್ ಮಾಡಿದಳು.
ಆ ಮ್ಯೂಸಿಯಂನಿಂದ ಹೊರಬರುತ್ತಾ ಅರುಣ್ ಕೇಳಿದ, “ಮುಂದೆ…. ಏನು ಮಾಡೋಣ?”
“ನಡಿ, ಲಂಡನ್ ವೀಲ್ ಮೇಲೆ ಕುಳಿತು ಇಡೀ ಲಂಡನ್ ಸಿಟಿ ನೋಡೋಣ,” ಎಂದವಳ ಮಾತಿಗೆ ಒಪ್ಪಿ ಅರುಣ್ ಅವಳ ಜೊತೆ ಮುನ್ನಡೆದ. ಅಸಲಿಗೆ ಆ ಲಂಡನ್ ವೀಲ್ ಎಂಬುದು ಥೇಮ್ಸ್ ನದಿಯ ಮೇಲೆ ಕಟ್ಟಲಾಗಿದ್ದ ಬೃಹದಾಕಾರದ ಜೈಂಟ್ ವೀಲ್ ಆಗಿತ್ತು. ಇಡೀ ನಗರದ ಸೌಂದರ್ಯವನ್ನು ಅದರಿಂದ ನೋಡಬಹುದಿತ್ತು. ಅದೆಷ್ಟು ದೈತ್ಯಾಕಾರ ಹಾಗೂ ಎಷ್ಟು ಮೆಲ್ಲಗೆ ತಿರುಗುತ್ತದೆಂದರೆ, ಅದು ತಿರುಗುತ್ತಿದೆ ಎಂದೇ ಅನಿಸುತ್ತಿರಲಿಲ್ಲ. ಕೆಳಗೆ ಥೇಮ್ಸ್ ನದಿ ಮೇಲೆ ನೂರಾರು ಕ್ರೂಸ್ ಚಲಿಸುತ್ತಿರುತ್ತವೆ. ನಂತರ ಇವರಿಬ್ಬರೂ ಟಿಕೆಟ್ ಕೊಂಡು ವೀಲ್ ಮೇಲೆ ಕುಳಿತು, ಇಡೀ ಲಂಡನ್ ಸಿಟಿಯ ವಿಹಂಗಮ ನೋಟ ವೀಕ್ಷಿಸಿದರು.
ವೀಲ್‌ನಿಂದ ಕೆಳಗಿಳಿದ ಮೇಲೆ ಜುಬೇದಾ ಹೇಳಿದಳು, “ಅಬ್ಬಾ…. ಈಗಂತೂ ಬಹಳ ಹಸಿವಾಗುತ್ತಿದೆ. ಮೊದಲು ಹೊಟ್ಟೆಗೆ ಏನಾದರೂ ಆಹಾರ ಹುಡುಕೋಣ,” ಎಂದಳು.
ಆಗ ಅರುಣ್ ಅವಳಿಗೆ ಎಂಥ ಊಟ ಇಷ್ಟ ಎಂದು ಕೇಳಿದಾಗ ಅವಳು, “ಖಂಡಿತಾ ಇಂಡಿಯನ್ ಓನ್ಲಿ!” ಎಂದಳು. ಇಬ್ಬರೂ ಮನಃಪೂರ್ತಿ ನಕ್ಕರು.
ಅರುಣ್ ತಕ್ಷಣ ತನ್ನ ಫೋನಿನ ಇಂಟರ್‌ನೆಟ್ ಮೂಲಕ ಅತಿ ಸಮೀಪದ ಇಂಡಿಯನ್ ಹೋಟೆಲ್ ವಿಳಾಸ ಪತ್ತೆಹಚ್ಚಿದ. ಇಬ್ಬರೂ ಕ್ಯಾಬ್ ಹಿಡಿದು ತಕ್ಷಣ ಅಲ್ಲಿಗೆ ಹೊರಟರು. ಅಲ್ಲಿ ಹೊಟ್ಟೆ ತುಂಬಾ ಉಂಡು ತೃಪ್ತರಾದರು. ಅಷ್ಟು ಹೊತ್ತಿಗೆ ಸಂಜೆ 5 ಗಂಟೆ ಆಗಿತ್ತು. ಇಬ್ಬರಿಗೂ ಬಹಳ ಸುಸ್ತಾಗಿತ್ತು. ಅಂದು ಅದಕ್ಕಿಂತ ಹೆಚ್ಚು ಓಡಾಡುವುದು ಸಾಧ್ಯವಿಲ್ಲ ಅನಿಸಿತು. ಹೀಗಾಗಿ ಇಬ್ಬರೂ ತಂತಮ್ಮ ಹೋಟೆಲ್‌ಗೆ ಹೊರಡುವುದು ಎಂದು ನಿಶ್ಚಯಿಸಿದರು.
ಆಗ ಅರುಣ್ ಅವಳಿಗೆ, “ನೀನು ಎಲ್ಲಿ ತಂಗಿದ್ದಿ?” ಎಂದು ಪ್ರಶ್ನಿಸಿದ.
“ನಾನು ಹೈಡ್ ಪಾರ್ಕಿನ ವೆಸ್ಟ್ ಮಿನಿಸ್ಟರ್ ಹೋಟೆಲ್‌ನಲ್ಲಿ ತಂಗಿದ್ದೇನೆ,” ಎಂದಳು ಜುಬೇದಾ.
“ಓಹೋ…. ಇಂದು ಬರೀ ಸರ್‌ಪ್ರೈಸ್‌ಗಳೇ ಆಗಿಹೋಯ್ತು.”
“ಹಾಗೆಂದರೆ….?”
“ನೀನು ಯಾವ ಹೋಟೆಲ್‌ನಲ್ಲಿ ತಂಗಿದ್ದೀಯೋ ನಾನೂ ಅಲ್ಲೇ ಇದ್ದೇನೆ!”
“ಅರುಣ್…. ವಂಡರ್‌ಫುಲ್! ಇದೆಲ್ಲ ಕೇವಲ ಕೋಇನ್ಸಿಡೆನ್ಸ್ ಅಂತೀಯಾ…. ಅಥವಾ?” ಎಂದು ನಕ್ಕಳು.
“ಇದು ಯೋಗಾಯೋಗ ಇರಬಹುದು ಅಥವಾ ಇನ್ನೇನಾದರೂ…..”
“ಅಂದ್ರೆ…. ನಿನ್ನ ಮಾತಿನ ಅರ್ಥ?”
“ಅಂಥ ವಿಶೇಷ ಏನಿಲ್ಲ ಬಿಡು. ಸುಮ್ಮನೆ ಹಾಗಂದೆ. ನಡಿ, ಕ್ಯಾಬ್ ಬುಕ್ ಮಾಡಿ ಹೊರಡೋಣ,” ಎಂದು ಅರುಣ್ ತಾನೇ ಬಲವಂತವಾಗಿ ಊಟದ ಬಿಲ್ ಪೇ ಮಾಡಿದ.
ಅವಳ ಮಾತಿಗೆ ಅವನು ಅದಕ್ಕಿಂತಲೂ ಹೆಚ್ಚಿಗೆ ಏನು ಹೇಳದಾದ. ಅವಳಿದ್ದ ದೇಶದಲ್ಲಿ ಅತಿ ಸಲಿಗೆ ಮಾನ್ಯವಲ್ಲ ಎಂದು ಗೊತ್ತಿತ್ತು.
ಅಂತೂ ಹಗುರ ಮನದಿಂದ, ಸಂತಸದಿಂದ ನಗುನುಗುತ್ತಾ ಇಬ್ಬರೂ ತಂತಮ್ಮ ಕೋಣೆ ಸೇರಿದರು. ಸ್ವಲ್ಪ ಹೊತ್ತಿನ ವಿಶ್ರಾಂತಿ ನಂತರ ಅರುಣ್ ಸ್ನಾನ ಮಾಡಿ ಫ್ರೆಶ್ ಆದ. ನಂತರ ಸ್ವಲ್ಪ ಹೊತ್ತು ಟಿವಿ ನೋಡಿ, ರಾತ್ರಿಗೆ ಏನಾದರೂ ಲೈಟ್ ಆಗಿ ಡಿನ್ನರ್ ಸೇವಿಸೋಣ ಎಂದು ಕೆಳಗಿನ ರೆಸ್ಟೋರೆಂಟ್ ಹಾಲ್‌ಗೆ ಬಂದ. ಅಲ್ಲಿ ನೋಡಿದರೆ ಮೂಲೆ ಟೇಬಲ್‌ನಲ್ಲಿ ಜುಬೇದಾ ಒಬ್ಬಳೇ ಕುಳಿತಿದ್ದಳು. ಅರುಣನನ್ನು ಕಂಡು ತನ್ನ ಕಡೆ ಬರುವಂತೆ ಕೈ ಬೀಸಿ ಕರೆದಳು. ಅವಳ ಕಂಪನಿ ಮತ್ತೆ ಸಿಕ್ಕಿದ್ದು ಅವನಿಗೆ ಖುಷಿ ಎನಿಸಿತು. ಡಿನ್ನರ್ ಮುಗಿಸಿ ಅವರು ಹೊರಟಾಗ, ತನ್ನ ಕೋಣೆಗೆ ಬರುವಂತೆ ಅವಳು ಆಹ್ವಾನಿಸಿದಳು.
ಅವಳ ಕೋಣೆಗೆ ಹೋದ ಮೇಲೆ, ಜುಬೇದಾ ರಿಸೆಪ್ಶನ್‌ಗೆ ಹೇಳಿ 2 ಕಾಫಿ ತರಿಸಿದಳು. ಇಬ್ಬರೂ ಹರಟುತ್ತಿದ್ದಂತೆ ಬಿಸಿ ಬಿಸಿ ಕಾಫಿ ಬಂತು. ಕಾಫಿ ಗುಟುಕರಿಸುತ್ತಾ ಹೇಳಿದಳು, “ಯೂ ನೋ, ನಾನು 4 ವರ್ಷಗಳಿಂದ ಐರ್ಲೆಂಡ್‌ನಲ್ಲಿ ಕಲಿಯುತ್ತಿದ್ದೇನೆ. ಎಂದೂ ಲಂಡನ್ ಪ್ರವಾಸಕ್ಕೆ ಹೊರಟಿರಲಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ವಾಪಸ್ ದುಬೈಗೆ ಹೊರಟಿದ್ದೇನೆ. ಅದಕ್ಕೆ ಮೊದಲು ಲಂಡನ್ ಸಿಟಿ ಸುತ್ತಾಡೋಣ ಅನ್ನಿಸಿತು.”
“ಅದು ಸರಿ, ನೀನು ಐರ್ಲೆಂಡ್‌ಗೆ ಹೇಗೆ?”
ಜುಬೇದಾ ಹೇಳತೊಡಗಿದಳು, “ನನ್ನ ತಂದೆ ಮ್ಯಾಕ್ ಒಬ್ಬ ಐರಿಶ್ ವ್ಯಕ್ತಿ. ನನ್ನ ತಾತನ ಒಂದು ಆಯಿಲ್ ವೆಲ್ ದುಬೈನಲ್ಲಿದೆ. ಅಲ್ಲಿಯೇ ನನ್ನ ತಂದೆ ಕೆಲಸಕ್ಕೆ ಸೇರಿದ್ದು. ತಾತನಿಗೆ ಆ ಎಣ್ಣೆ ಬಾವಿಯಿಂದ ಹೆಚ್ಚಿನ ಲಾಭ ಇರಲಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ತೈಲ ಸಿಗುತ್ತಿತ್ತು. ಅದರ ಕಾರಣ ತಿಳಿಯಲೆಂದೇ ಕೆಮಿಕಲ್ ಎಂಜಿನಿಯರ್ ಆದ ನನ್ನ ತಂದೆಯನ್ನು ವಿಶೇಷ ತಂಡದೊಂದಿಗೆ ಅಧ್ಯಯನ ನಡೆಸಲು ನಿಯುಕ್ತಿಗೊಳಿಸಲಾಯಿತು.
“ನನ್ನ ತಂದೆ ಸಂಶೋಧನೆ ನಡೆಸಿದಾಗ, ಇನ್ನೊಬ್ಬ ಶೇಖ್ ನನ್ನ ತಾತನ ತೈಲ ಬಾವಿಯಿಂದ ಕಚ್ಚಾ ತೈಲವನ್ನು ಪಂಪ್ ಮಾಡಿ ಪಕ್ಕದ ತನ್ನ ಬಾವಿಗೆ ಸೆಳೆದುಕೊಳ್ಳುತ್ತಿದ್ದ ಅಂತ ಗೊತ್ತಾಯ್ತು. ಆಗ ಮ್ಯಾಕ್ ಆ ಕಳ್ಳತನ ತಪ್ಪಿಸಿ ನಮ್ಮ ತಾತನಿಗಾದ ನಷ್ಟ ಪೂರ್ತಿ ತುಂಬಿಸಿಕೊಟ್ಟರು. ಜೊತೆಗೆ ಅದನ್ನು ಕೋರ್ಟಿಗೆ ಹಾಕಿ, ಹಿಂದಿನ ದಿನಗಳ ನಷ್ಟ ಪೂರ್ತಿ ವಸೂಲಿ ಮಾಡಿದಾಗ, ಕೋಟ್ಯಂತರ ರೂ. ಹಣ ಕೈವಶವಾಯಿತು. ಆಗ ನಮ್ಮ ತಾತಾ ಮ್ಯಾಕ್‌ರಿಗೆ ಉನ್ನತ ಹುದ್ದೆ ನೀಡಿ, ತಮ್ಮ ಕಂಪನಿಯ ಸಿಇಓ ಮಾಡಿಕೊಂಡರು. ಜೊತೆಗೆ ಲಾಭಾಂಶದ ಶೇ.10ರಷ್ಟು ಬೋನಸ್ ಕೂಡ ನೀಡತೊಡಗಿದರು.
“ಹೀಗೆ ಮ್ಯಾಕ್ ಮತ್ತು ತಾತಾ ಖಾಸಾ ದೋಸ್ತಿ ಬೆಳೆಸಿಕೊಂಡರು. ಆಗಾಗ ಮ್ಯಾಕ್ ತಾತನ ಮನೆಗೂ ಬಂದು ಹೋಗುತ್ತಿದ್ದರು. ಆ ರೀತಿ ಜುಬೇದಾಳ ತಾಯಿ ಅಸ್ಮತ್‌ಬಾನು ಹಾಗೂ ಮ್ಯಾಕ್ ಪರಸ್ಪರ ಪ್ರೇಮಿಸಿ ವಿವಾಹವಾದರು. ಆ ಮದುವೆಗಾಗಿ ಮ್ಯಾಕ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕಾಯಿತು. ಅದಾದ ಮೇಲೆ ಮ್ಯಾಕ್ ಶಾಶ್ವತವಾಗಿ ದುಬೈನಲ್ಲೇ ಉಳಿದುಬಿಟ್ಟರು. ಐರ್ಲೆಂಡ್‌ನಲ್ಲಿ ದೊಡ್ಡ ವಜ್ರಾಭರಣಗಳ ಮಳಿಗೆ ಹೊಂದಿದ್ದ ಅಸ್ಮತ್‌ಬಾನು, ಬಿಸ್‌ನೆಸ್ ಸಲುವಾಗಿ ಇಲ್ಲೇ ಉಳಿದು, ಆಗಾಗ ದುಬೈಗೆ ಹೋಗುತ್ತಿದ್ದರು. ಹೀಗೆ ನಾನು ಐರ್ಲೆಂಡಿನಲ್ಲಿ ಕಲಿಯುವಂತಾಯಿತು,” ಎಂದು ವಿವರಿಸಿದಳು ಜುಬೇದಾ.
ತನ್ನ ಸುದೀರ್ಘ ವಿವರಣೆಯ ನಂತರ ಆಕೆ ಕೇಳಿದಳು, “ನಾನು ನಾಳೆ ಸಂಜೆ ಎಮಿರೇಟ್ಸ್ ಫ್ಲೈಟ್ ಮೂಲಕ ದುಬೈಗೆ ಹೊರಟಿದ್ದೇನೆ. ಮತ್ತೆ….. ನಿನ್ನದೇನು ಪ್ರೋಗ್ರಾಮ್?”
“ನಾನೂ ಎಮಿರೇಟ್ಸ್ ಫ್ಲೈಟ್‌ನಿಂದ ಬೆಂಗಳೂರಿಗೆ ಹೊರಟಿದ್ದೇನೆ, ಆದರೆ ನಾಳೆ ಅಲ್ಲ, ನಾಡಿದ್ದು. ಇದಕ್ಕೆ ಮೊದಲೆಲ್ಲ ನಾವು ಸುಯೋಗವಶಾತ್ ಒಟ್ಟೊಟ್ಟಿಗೆ ಸಂಧಿಸುತ್ತಿದ್ದೆವು, ಆದರೆ ಅನಿವಾರ್ಯವಾಗಿ ಈಗ ಅಗಲಬೇಕಿದೆ. ಎನಿ ಹೌ, ಇಷ್ಟು ಸಮಯದ ನಿನ್ನ ಕಂಪನಿ ಬಹಳ ಹಿತಕರವಾಗಿತ್ತು,” ಎಂದ ಅರುಣ್.
ಜುಬೇದಾ ಹೇಳಿದಳು, “ಸೇಮ್ ಹಿಯರ್. ಮುಂದೆಯೂ ಸಹ ಹೀಗೆ ಎಂದಾದರೂ ಸುಯೋಗದಿಂದ ಮೀಟ್ ಆಗೋಣ. ಅಂದಹಾಗೆ…. ನೀನು ಎಂದಾದರೂ ದುಬೈಗೆ ಬಂದದ್ದುಂಟೇ?”
ಅರುಣ್ ಉತ್ತರಿಸಿದ, “ಹ್ಞೂಂ, ಆಫೀಸ್ ಕೆಲಸದ ಸಲುವಾಗಿ 2 ದಿನಗಳ ಮಟ್ಟಿಗೆ ಬಂದಿದ್ದೆ. ನಮ್ಮ ಕಂಪನಿ ಜನ ದುಬೈಗೆ ಆಗಾಗ ಬರುತ್ತಿರುತ್ತಾರೆ. ಬಹುಶಃ ಮುಂದಿನ ದಿನಗಳಲ್ಲಿ ನಾನು ಮತ್ತೆ ಅಲ್ಲಿಗೆ ಬಂದರೂ ಬರಬಹುದು.”
“ಓ…. ದಟ್ಸ್ ಗುಡ್! ನೀನು ಅಲ್ಲಿಗೆ ಬಂದಾಗ ಖಂಡಿತಾ ಬಂದು ನನ್ನನ್ನು ಭೇಟಿಯಾಗಬೇಕು,” ಎನ್ನುತ್ತಾ ಅವಳು ಇವನ ಕೈಗೆ ತನ್ನ ವಿಳಾಸದ ಕಾರ್ಡ್ ನೀಡುತ್ತಾ ಅರುಣನ ಕೈ ಚುಂಬಿಸಿ, “ಯೂ ಆರ್ ಎ ವೆರಿ ನೈಸ್ ಬಾಯ್!” ಎಂದಳು.
“ತಪ್ಪು ತಿಳಿಯುವುದಿಲ್ಲ ಅಂದ್ರೆ ಒಂದು ಪ್ರಶ್ನೆ ಕೇಳಲೇ?”
“ಕೇಳು…. ಅದಕ್ಕೇಕೆ ಸಂಕೋಚ? ನನ್ನ ಮನಸ್ಸಿಗೆ ನೋವಾಗುವಂಥ ಯಾವ ಪ್ರಶ್ನೆಯನ್ನೂ ನೀನು ಕೇಳುವುದಿಲ್ಲ ಎಂಬ ಭರವಸೆ ನನಗಿದೆ,” ಎಂದಳು.
“ಅಲ್ಲ….ಅಲ್ಲ…. ಅಂಥದ್ದೇನಿಲ್ಲ. ನಿಮ್ಮ ದೇಶದ ಜನ ಸದಾ ಬುರ್ಖಾಧಾರಿಗಳಾಗಿ ಬಲು ಕನ್‌ಸರ್ವೇಟಿವ್ ಆಗಿರುತ್ತಾರೆ. ಆದರೆ ನೀನು ಬಹಳ ಮಾಡ್….”
“ನೀನು ಸರಿಯಾಗೇ ಹೇಳಿದೆ. ದುಬೈಗೆ ಹೋದ ಮೇಲೆ ಆ ಬುರ್ಖಾ ಪದ್ಧತಿ ಇದ್ದದ್ದೇ. ಆದರೂ ನನ್ನ ಕುಟುಂಬದವರು ಎಷ್ಟೋ ಆಧುನಿಕರಾಗಿದ್ದಾರೆ. ಅಷ್ಟಲ್ಲದೆ ನಮ್ಮ ತಾತಾ ನಮ್ಮಮ್ಮನನ್ನು ಆಂಗ್ಲ ವ್ಯಕ್ತಿಗೆ ಕೊಡುತ್ತಿರಲಿಲ್ಲ. ಅವರ ಮಗಳಾಗಿ ನಾನು ಇಷ್ಟು ಮಾತ್ರ ಮಾಡ್ ಆಗದಿದ್ದರೆ ಹೇಗೆ?” ಎಂದು ಬಾಯಿ ತುಂಬಾ ನಕ್ಕಳು.
“ಓ.ಕೆ., ಗುಡ್‌ನೈಟ್….. ನಾಳೆ ಬೆಳಗ್ಗೆ ಬ್ರೇಕ್‌ಫಾಸ್ಟ್ ಗೆ ಸಿಗೋಣ,” ಎಂದು ಅರುಣ್ ಅವಳಿಂದ ಬೀಳ್ಕೊಂಡ.
ಮಾರನೇ ದಿನ ಬ್ರೇಕ್‌ಫಾಸ್ಟ್ ಒಟ್ಟಿಗೆ ಮುಗಿಸಿದರು. ನಂತರ ಜುಬೇದಾ ಇವನ ಕೋಣೆಗೇ ಬಂದಳು. ಅಲ್ಲಿ ಪರಸ್ಪರರ ಇಷ್ಟಾನಿಷ್ಟಗಳು, ಅಭಿರುಚಿ, ಕುಟುಂಬದ ಬಗ್ಗೆ ಸಾಕಷ್ಟು ಮಾತನಾಡಿದರು. ನಂತರ ಸಂಜೆ ಆಗುತ್ತಿದ್ದಂತೆ ಅವಳಿಗೆ ವಿದಾಯ ಕೋರಲು ಅರುಣ್ ತಾನೂ ಹೀಥ್ರೋ ಏರ್‌ಪೋರ್ಟ್‌ವರೆಗೂ ಹೋದ. ಬೀಳ್ಕೊಡುವಾಗ ಇಬ್ಬರೂ ಹಾರ್ದಿಕಾಗಿ ಕೈ ಕುಲುಕಿದರು. ಅವಳು ಮತ್ತೊಮ್ಮೆ ಅವನ ಕೈಗೆ ಮುತ್ತಿಟ್ಟು, “ದುಬೈಗೆ ಬಂದಾಗ ನನ್ನನ್ನು ಭೇಟಿಯಾಗಲು ಮರೆಯಬೇಡ….” ಎಂದಳು.
ಅರುಣ್ ಸಹ ಅವಳಿಗೆ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು `ಬೈ’ ಎನ್ನುತ್ತಾ ಕೈ ಬೀಸಿದ. ಅವಳು ಏರ್‌ಪೋರ್ಟ್ ಒಳಗೆ ನಡೆದು ಹೊರಟುಹೋದಳು.
ಮಾರನೇ ದಿನವೇ ಅರುಣ್ ಮುಂಬೈ ಮೂಲಕ ಬೆಂಗಳೂರು ತಲುಪಿದ. ಜುಬೇದಾಳ ಜೊತೆ ಅರುಣ್ ಆಗಾಗ ಫೇಸ್‌ಬುಕ್, ಸ್ಕೈಪ್‌ಗಳ ಮೂಲಕ ಭೇಟಿಯಾಗುತ್ತಾ ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸುತ್ತಿದ್ದ. ಹೀಗೆ ಒಂದು ತಿಂಗಳು ಕಳೆಯುವಷ್ಟರಲ್ಲಿ ಅವರು ಬಹಳ ಆತ್ಮೀಯರಾದರು. ನಂತರ ಒಮ್ಮೆ ಅವಳು ತನ್ನ ತಾಯಿ ತಂದೆಯರನ್ನೂ ಅವನ ಜೊತೆ ಸ್ಕೈಪ್ ಮೂಲಕ ಪರಿಚಯಿಸಿದಳು. ಅರುಣನನ್ನು ತಮ್ಮ ಮಗಳು ಆಗಾಗ ಹೊಗಳುತ್ತಿರುತ್ತಾಳೆ ಎಂದು ಅವರು ಹಾರ್ದಿಕವಾಗಿ ಮಾತನಾಡಿದರು. ಅದನ್ನು ಕೇಳಿ ಅರುಣನಿಗೆ ಒಳಗೊಳಗೇ ಖುಷಿಯೋ ಖುಷಿ! ಅವಳ ಅಂದಕ್ಕೆ ಹೋಲಿಸಿದರೆ ಅವನು ಸ್ವಲ್ಪ ಸುಮಾರು ಎನ್ನಬಹುದು. ಆದರೆ ಅವನ ಒಮ್ಮುಖ ಪ್ರೇಮ ಹೇಗೆ ಸಾಗಲಿದೆಯೋ ಎಂದು ಆ ನಿಟ್ಟಿನಲ್ಲಿ ಅವನು ಇನ್ನೂ ಮುಂದುವರಿದಿರಲಿಲ್ಲ.
ಹೀಗೆ ನೋಡನೋಡುತ್ತಾ 1 ವರ್ಷ ಕಳೆಯಿತು. ಆಗ ಅರುಣ್ ದುಬೈಗೆ ಹೋಗಬೇಕಾದ ಸಂದರ್ಭ ಬಂದಿತು. ಅರುಣನ ಕಂಪನಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಪ್ರಾಡಕ್ಟ್ ಲಾಂಚ್ ಮಾಡಲಿತ್ತು. ಅದೇ ಸಲುವಾಗಿ ಅರುಣ್ 1 ವಾರದ ಮಟ್ಟಿಗೆ ದುಬೈಗೆ ಹೋಗಬೇಕಾದ ಪ್ರಸಂಗ ಬಂತು. ಅದರ ಮುಂದಿನ ಶನಿವಾರ ಅವನು ದುಬೈ ತಲುಪಿದ. ಇವನನ್ನು ಎದುರುಗೊಳ್ಳಲು ಜುಬೇದಾ ಸಂಭ್ರಮದಿಂದ ಏರ್‌ಪೋರ್ಟ್‌ಗೇ ಬಂದಿದ್ದಳು. ಆರಂಭದಲ್ಲಿ ಅವಳನ್ನು ಗುರುತಿಸುವುದೇ ಕಷ್ಟವಾಯ್ತು, ಏಕೆಂದರೆ ಅವಳು ಬುರ್ಖಾದಲ್ಲಿದ್ದಳು. ಅವಳೇ ಇವನನ್ನು ಗುರುತಿಸಿ ಕೈ ಬೀಸಿದಳು. ತನ್ನ ತಾತನ ಒಂದು ಭಾರಿ ಹೋಟೆಲ್ ಅಲ್ಲಿ ವಿಖ್ಯಾತ ಎಂದಿದ್ದಳು. ಆ ಹೋಟೆಲ್‌ನ ರೂಮಿನಲ್ಲೇ ಇವನು ಅತಿಥಿಯಾಗಿ ಉಳಿಯಬೇಕೆಂದು ಆಗ್ರಹಿಸಿದಳು. ಅಲ್ಲಿಂದ ಒಂದು ಕ್ಯಾಬ್ ಬುಕ್ ಮಾಡಿ ಆ ಹೋಟೆಲ್‌ಗೆ ಹೋಗುವಂತೆ ಆದೇಶಿಸಿದಳು. ಅವಳು ತನ್ನದೇ ಕಾರು ತಂದಿದ್ದಳು, ಹೋಟೆಲ್‌ನಲ್ಲಿ ಭೇಟಿಯಾಗುವುದಾಗಿ ತಿಳಿಸಿ ಹೊರಟಳು.
ಅರುಣ್ ಆ ಹೋಟೆಲ್ ತಲುಪುವ ಮುಂಚೆ ಇವಳು ತಲುಪಿ ಸ್ವಾಗತ ಕೋರಿದಳು. ಅರುಣ್ ಕೇಳಿದ, “ನಾನು…. ನಿನ್ನ ಕಾರಿನಲ್ಲೇ ಬರಬಹುದಿತ್ತಲ್ಲವೇ?”
“ಇಲ್ಲ….. ಇಲ್ಲ…. ನಿನ್ನ ಜೊತೆ ಒಬ್ಬ ಹೆಂಗಸು ಇದ್ದಿದ್ದರೆ ಹಾಗೆ ಮಾಡಬಹುದಿತ್ತು. ಓನ್ಲಿ ಜೆಂಟ್ಸ್, ನಾಟ್ ಪಾಸಿಬಲ್ ಹಿಯರ್. ಮತ್ತೊಂದು ವಿಷಯ ಗೊತ್ತೇ? ನಿಮ್ಮ ಆಫೀಸ್‌ನ ಪ್ರಾಡಕ್ಟ್ ಲಾಂಚ್ ಇರುವ ಹೋಟೆಲ್‌ಗೆ ಇಲ್ಲಿಂದ 5 ನಿಮಿಷದ ನಡಿಗೆಯ ದಾರಿ ಅಷ್ಟೆ. ನಿನಗೆ ಅಗತ್ಯ ಅನಿಸಿದರೆ ನಮ್ಮ ಡ್ರೈವರ್‌ನ ಕಳುಹಿಸಿಕೊಡ್ತೀನಿ.”
“ನೋ ಥ್ಯಾಂಕ್ಸ್. ವಾಕಿಂಗ್ ಅಂದ್ರೆ ನನಗೆ ಮೊದಲಿನಿಂದಲೂ ಇಷ್ಟ,” ಎಂದ ಅರುಣ್.
ಜುಬೇದಾ ತನ್ನ ಮನೆಗೆ ಹೊರಟಳು. ಅರುಣ್ ಕೋಣೆಗೆ ಹೋಗಿ ವಿಶ್ರಾಂತಿ ಪಡೆದ. ಮಾರನೇ ಬೆಳಗ್ಗೆ ಭಾನುವಾರ, ಬಿಡುವು ಎಂದು ಭಾವಿಸುವಂತಿಲ್ಲ. ಅಫಿಶಿಯಲ್ ಟೂರ್ ಆದ್ದರಿಂದ ಬೆಳಗ್ಗೆ 9 ಗಂಟೆಯಿಂದಲೇ ಆ ಇನ್ನೊಂದು ಹೋಟೆಲ್‌ಗೆ ಹೋಗಿ ಅವನು ಪ್ರಾಡಕ್ಟ್ ಲಾಂಚ್‌ಗೆ ಬೇಕಾದ ಸಿದ್ಧತೆಗಳ ಕೆಲಸ ಗಮನಿಸಬೇಕಿತ್ತು. ಜುಬೇದಾ ಮಧ್ಯೆ ಮಧ್ಯೆ ಫೋನ್‌ನಲ್ಲಿ ಮಾತನಾಡುತ್ತಾ ಏನಾದರೂ ಸಹಾಯ ಬೇಕಿತ್ತೇ ಎಂದು ವಿಚಾರಿಸುತ್ತಿದ್ದಳು. ಅಂತೂ ಶುಕ್ರವಾರದ ಹೊತ್ತಿಗೆ ಅವನ ಕೆಲಸ ಮುಗಿದಿತ್ತು. ಅಂದು ರಾತ್ರಿ ಡಿನ್ನರ್‌ಗೆ ತಮ್ಮ ಮನೆಗೆ ಊಟಕ್ಕೆ ಬರಬೇಕೆಂದು ಅವಳು ಆದರದಿಂದ ಆಹ್ವಾನಿಸಿದಳು. ಅವನಿಗೆ ಆ ಬಗ್ಗೆ ನಿರೀಕ್ಷೆ ಇತ್ತು.
ಭಾರತದಿಂದ ಬರುವಾಗ ಅವಳ ಇಡೀ ಕುಟುಂಬಕ್ಕೆ ಅವನು ಉಡುಗೊರೆ ತಂದಿದ್ದ. ಅಮೃತಶಿಲೆಯ ದೊಡ್ಡ ತಾಜ್‌ಮಹಲ್, ಅಜ್ಮೇರ್ ಶರೀಫ್‌ರ ಫೋಟೋ, ಡ್ರೆಸೆಸ್, ಬೆಂಗಳೂರಿನ ಸಿಹಿ, ಸ್ನ್ಯಾಕ್ಸ್, ಸೆಂಟ್ ಇತ್ಯಾದಿ.
ಅವರ ಮನೆಯಲ್ಲಿ ಎಲ್ಲರೂ ಇವನನ್ನು ಬಲು ಹಾರ್ದಿಕವಾಗಿ ಸ್ವಾಗತಿಸಿ, ಸಂಭ್ರಮಿಸಿದರು. ಶುದ್ಧ ಸಸ್ಯಾಹಾರದ ಊಟ ಸರ್ವ್ ಮಾಡಿದಾಗ ಅವನಿಗೆ ನಿಜಕ್ಕೂ ಆಶ್ಚರ್ಯವಾಯಿತು. ಎಲ್ಲರೂ ಸಂತಸದಿಂದ ಹರಟುತ್ತಾ ಊಟ ಮುಗಿಸಿದರು. ಅವನು ಅಲ್ಲಿಂದ ಹೊರಟಾಗ, ಜುಬೇದಾಳ ತಾಯಿ ಅವನಿಗೊಂದು ಪುಟ್ಟ ಪ್ಯಾಕೆಟ್ ಉಡುಗೊರೆ ನೀಡಿದರು. ಅವನು ಖುಷಿಯಾಗಿ ಸ್ವೀಕರಿಸಿ ಹೋಟೆಲ್‌ಗೆ ನಡೆದ. ಅವರ ಮನೆ ಡ್ರೈವರ್ ಕಾರಿನಲ್ಲಿ ಇವನನ್ನು ಹೋಟೆಲ್ ತಲುಪಿಸಿದ.
ಅರುಣ್ ರೂಮಿನ ಕದ ತೆರೆಯುತ್ತಿದ್ದಂತೆಯೇ ಜುಬೇದಾಳ ಕಾಲ್ ಬಂತು. “ಅರುಣ್, ಗಿಫ್ಟ್ ಇಷ್ಟ ಆಯ್ತಾ?”
“ಓ…. ಅದಾ? ಇನ್ನೂ ತೆರೆದು ನೋಡಿಲ್ಲ ನಾನು.”
“ಛೇ….ಛೇ! ಇದು ನಮ್ಮ ಉಡುಗೊರೆಗೆ ನೀವು ಕೊಡುವ ಗೌರವವೇ?”
“ಸಾರಿ…. ಸಾರಿ…. ಈಗಲೇ ನೋಡ್ತೀನಿ. ಈಗಿನ್ನೂ ರೂಮಿಗೆ ಬರ್ತಿದ್ದೀನಿ. ಒಂದೇ ನಿಮಿಷದಲ್ಲಿ ಕಾಲ್ ಮಾಡ್ತೀನಿ ಇರು….” ಎಂದು ಹೇಳಿದ.
ಅರುಣ್ ಆ ಬಾಕ್ಸ್ ತೆರೆದು ನೋಡಿ ಅವಾಕ್ಕಾದ. ಹೊಳೆ ಹೊಳೆಯುವ ಅತಿ ದುಬಾರಿ ವಜ್ರದುಂಗುರ! ಅವನಿಗೆ ಮಾತೇ ಹೊರಡಲಿಲ್ಲ.
ಆಗ ಜುಬೇದಾ ತಾನೇ ಫೋನ್ ಮಾಡಿದಳು, “ಏನಾಯ್ತು…. ಯಾಕೆ ಏನೂ ಹೇಳ್ತಿಲ್ಲ?”
“ಇದೇನು ಕೊಟ್ಟಿರುವೆ ನೀನು? ನನಗಂತೂ ಏನು ಹೇಳಲಿಕ್ಕೂ ತೋಚುತ್ತಿಲ್ಲ.”
“ಅಂದ್ರೆ…. ನಿನಗೆ ಗಿಫ್ಟ್ ಇಷ್ಟವಾಗಲಿಲ್ಲವೇ?”
“ನನ್ನನ್ನು ಏಕೆ ನಾಚಿಕೊಳ್ಳುವಂತೆ ಮಾಡುತ್ತಿರುವೆ….. ಇಂಥ ದುಬಾರಿ ಗಿಫ್ಟ್ ಕೊಳ್ಳಲು ನನಗೆ ಬಹಳ ಸಂಕೋಚವಾಗುತ್ತಿದೆ….. ಇದು ನನ್ನ ಯೋಗ್ಯತೆಗೆ ಮೀರಿದ್ದು!”
“ಹಾಗೆಲ್ಲ ಏನೂ ಇಲ್ಲ…. ಇದು ಪರ್ಸ್‌ನಲಿ ನಾನು ನಿನಗಾಗಿ ಆರಿಸಿದ್ದು. ನೀನು ಹೊರಡುವ ಮೊದಲು ನಿನ್ನ ತಮ್ಮ, ತಂಗಿಗೂ ಗಿಫ್ಟ್ ಕೊಡಬೇಕು ಅಂತ ಅಮ್ಮ ನೆನಪಿಸಿದ್ದಾರೆ. ಈಗ ಹೇಳು…. ನಿನಗೆ ಗಿಫ್ಟ್ ಇಷ್ಟ ಆಯ್ತಾ?”
“ಇಷ್ಟ ಆಗಲಿಲ್ಲ ಅಂತ ಯಾವ ಬಾಯಲ್ಲಿ ಹೇಳಲಿ? ಇಂಥ ಸುಂದರ, ದುಬಾರಿ ಗಿಫ್ಟ್ ಸಿಗಬಹುದೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ.”
“ಇರಲಿ ಬಿಡು…. ಸುಮ್ಮನೆ ಹೊಗಳಬೇಡ. ನಾಳೆ ಅಮ್ಮ ನಿನ್ನನ್ನು ದುಬೈ ಮಾಲ್‌ನಲ್ಲಿ ಮೀಟ್ ಮಾಡಬೇಕು ಅಂದ್ರು. ನಾನೂ ಬರ್ತೀನಿ. ಡ್ರೈವರ್ ಬಂದು ನಿನ್ನ ಪಿಕ್ ಮಾಡ್ತಾನೆ. ಬೇಗ ಬಂದು ಬಿಡು.”
ಮಾರನೇ ದಿನ ಶನಿವಾರದಂದು ಜುಬೇದಾ ತನ್ನ ಕಾರು ಕಳುಹಿಸಿದ್ದಳು. ಅರುಣ್ ಸಮಯಕ್ಕೆ ಸರಿಯಾಗಿ ಮಾಲ್ ಗೆ ಬಂದು ತಲುಪಿ, ಜುಬೇದಾ ಹಾಗೂ ಅವಳ ತಾಯಿಗೆ ವಿಷ್ ಮಾಡಿದ. ಅವಳ ತಾಯಿ ಇವನ ಕುಟುಂಬದ ಬಗ್ಗೆ ಆಮೂಲಾಗ್ರವಾಗಿ ವಿಚಾರಿಸಿದರು. ಅಲ್ಲೇ ಇವನ ಮನೆಯವರಿಗೆಲ್ಲ ನಾನಾ ಉಡುಗೊರೆ ಕೊಡಿಸಿದರು.
“ನೀನು ಬಹಳ ಒಳ್ಳೆಯ ಹುಡುಗ ಕಣಪ್ಪ. ಇಂದಿನ ಯುವಜನರಲ್ಲಿ ಇಂಥ ಆದರ್ಶಗಳಿರುವುದು ಅಪರೂಪ. ನನ್ನ ಮಗಳಿಗಂತೂ ನಿನ್ನನ್ನು ಎಷ್ಟು ಹೊಗಳಿದರೂ ಸಾಲದು. ಇನ್ನೂ ಮದುವೆ ಆಗಿಲ್ಲ ಅಂತೀಯ…. ದುಬೈನಲ್ಲೇ ಉತ್ತಮ ಕೆಲಸ ದೊರಕಿದರೆ ಇಲ್ಲೇ ಸೆಟಲ್ ಆಗುವ ಮನಸ್ಸಿದೆಯೇ?”
ಆಕೆಯ ಕೊನೆಯ ಮಾತು ಸ್ವಲ್ಪ ವಿಚಿತ್ರ ಅನಿಸಿತು. ಅರುಣ್ ಹೇಳಿದ, “ದುಬೈ ಬ್ಯೂಟಿಫುಲ್ ರಿಚ್ ಸಿಟಿ ಎಂಬುದರಲ್ಲಿ 2 ಮಾತಿಲ್ಲ. ಆದರೆ ನನ್ನ ಮನೆಯವರೆಲ್ಲ ಭಾರತದಲ್ಲೇ ಸೆಟಲ್ ಆಗಿರುವುದರಿಂದ….. ಇರಲಿ, ಈ ಬಗ್ಗೆ ನಿಧಾನವಾಗಿ ಯೋಚಿಸಿ ಹೇಳುತ್ತೇನೆ.”
ಜುಬೇದಾ ಅರುಣನನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಅವಳೇನೋ ಹೇಳಬೇಕೆಂದಿದ್ದಳು….. ಆದರೆ ಹೇಳಲಾಗದೆ ಚಡಪಡಿಸಿದಳು. ಮಾಲ್‌ನಿಂದ ಹೊರಡುವ ಘಳಿಗೆಯಲ್ಲಿ ಅವಳು, “ಅರುಣ್, ನೀನು ದುಬೈನಲ್ಲೇ ಸೆಟಲ್ ಆಗುವ ಕುರಿತು ಸೀರಿಯಸ್ ಆಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬಾ,” ಎಂದಳು.
ಅಂತೂ ಮಾರನೇ ದಿನ ಅರುಣ್ ಬೆಂಗಳೂರಿಗೆ ಹೊರಟ. ಅವನು ಬೆಂಗಳೂರು ತಲುಪಿದ 12 ಗಂಟೆಗಳಲ್ಲೇ ಜುಬೇದಾ ಅರುಣ್ ಕ್ಷೇಮವಾಗಿ ತಲುಪಿದ ತಾನೇ ಎಂದು ವಿಚಾರಿಸಿದಳು. 2-3 ದಿನಗಳ ನಂತರ ಮತ್ತೆ ಅವಳ ಫೋನ್, “ಅರುಣ್, ಏನೆಂದು ಡಿಸೈಡ್ ಮಾಡಿದೆ? ದುಬೈನಲ್ಲಿ ಸೆಟಲ್ ಆಗುವುದೋ ಬೇಡವೋ?”
“ಇಷ್ಟು ಬೇಗ ಅವಸರದಲ್ಲಿ ನಿರ್ಧರಿಸುವ ವಿಷಯವಲ್ಲ ಅದು, ಇನ್ನೂ ಹೆಚ್ಚು ಕಾಲಾವಕಾಶ ಬೇಕು.”
“ಅರುಣ್, ಇಷ್ಟು ಹೊತ್ತಿಗೆ ನೀನು ಅರ್ಥ ಮಾಡಿಕೊಂಡಿರುವೆ. ನಾನು ನಿನ್ನನ್ನು ಎಷ್ಟು ಪ್ರೇಮಿಸುತ್ತೇನೆ ಅಂತ. ನನ್ನ ತಾಯಿ ತಂದೆ ಸಹ ಅದನ್ನು ಅರ್ಥ ಮಾಡಿಕೊಂಡು ಒಪ್ಪಿಕೊಂಡರು. ಇರಲಿ, ಈಗ ಸ್ಪಷ್ಟವಾಗಿ ಹೇಳಿಬಿಡು. ನಿನಗೆ ನಾನು ಒಪ್ಪಿಗೆಯೋ…. ಇಲ್ಲವೋ?”
“ಹೌದು, ನಾನೂ ನಿನ್ನನ್ನು ಇಷ್ಟಪಡ್ತೀನಿ. ಆದರೆ ನಾವು ಅಂದುಕೊಂಡ ಆಸೆಗಳೆಲ್ಲ ಈಡೇರಿಯೇ ತೀರುತ್ತದೆ ಅಂತ ಯಾವ ಗ್ಯಾರಂಟಿಯೂ ಇಲ್ಲ ಅಲ್ಲವೇ?”
“ಆದರೆ ಅದಕ್ಕಾಗಿ ಪ್ರಯತ್ನಪಟ್ಟು ಸಾಧಿಸಿಕೊಂಡರೆ ಏನು ತಪ್ಪು? ನಮ್ಮ ಗುರಿ ಸೇರುವುದು ನಮಗೆ ಮುಖ್ಯ ಅಲ್ಲವೇ?” “ಹಾಗಾದರೆ ಈಗ ನಾನು ಏನು ಮಾಡಬೇಕು ಹೇಳು.”
“ಕೂಡಲೇ ನೀನು ಶಾಶ್ವತವಾಗಿ ದುಬೈಗೆ ಹೊರಟು ಬಾ. ಕೆಲಸ, ಕಂಪನಿ ಎಂದು ಯೋಚಿಸಬೇಡ. ನಮ್ಮ ತಾತನ ಇಷ್ಟೊಂದು ಬಿಸ್‌ನೆಸ್‌ನಲ್ಲಿ ನೀನು ಯಾವ ಕಂಪನಿಯ ಯಾವ ಹುದ್ದೆ, ಎಷ್ಟು ಸಂಬಳ ಬಯಸುತ್ತೀಯೋ ಅದು ನಿನಗೆ ಸಿಗಲಿದೆ. ನೀನು ನಿನ್ನ ಧರ್ಮ ಬದಲಾಯಿಸಿಕೊಳ್ಳಲು ಸಿದ್ಧನಾಗಬೇಕು. ನಮ್ಮ ಧರ್ಮಕ್ಕೆ ನೀನು ಮತಾಂತರಗೊಂಡರೆ ಮಾತ್ರ ಈ ಮದುವೆ ಸಾಧ್ಯ. ನನ್ನ ಮೇಲಿನ ಪ್ರೇಮಕ್ಕಾಗಿ ನೀನು ಇದನ್ನು ಮಾಡುತ್ತೀಯಾ ತಾನೇ? ನಿನ್ನ ಮನೆಯವರ ಚಿಂತೆ ಬೇಡ. ನಿನ್ನ ತಮ್ಮ ಬಂದು ಇಲ್ಲಿ ಸೆಟಲ್ ಆಗುವ ಹಾಗಿದ್ದರೆ ಧಾರಾಳವಾಗಿ ಅವರಿಗೂ ಬೇಕಾದ ವ್ಯವಸ್ಥೆ ಮಾಡೋಣ. ಬೇಕೆಂದಾಗ ನೀನು ಅಲ್ಲಿಗೆ ಹೋಗಬಹುದು, ಒಪ್ಪಿದರೆ ನಿನ್ನ ತಾಯಿತಂದೆಯರನ್ನೂ ಇಲ್ಲಿಗೇ ಕರೆದುಕೊಂಡು ಬಂದುಬಿಡು…..”
“ನಾನು ನಿನ್ನ ಧರ್ಮಕ್ಕೆ ಮತಾಂತರಗೊಳ್ಳುವುದು ಅಷ್ಟು ಮುಖ್ಯವೇ? ಅದು ನಮ್ಮ ಪ್ರೇಮಕ್ಕಿಂತ ಮಿಗಿಲಾದುದೇ? ಅದಿಲ್ಲದೆ ನಮ್ಮ ಮದುವೆ ಆಗದೇ?”
“ಇಲ್ಲ…. ಇಲ್ಲ…. ಇಸ್ಲಾಂ ಧರ್ಮಕ್ಕೆ ನೀನು ಮತಾಂತರಗೊಳ್ಳದೆ ಇದು ಸಾಧ್ಯವೇ ಇಲ್ಲ. ಇಲ್ಲಿನ ಕಾನೂನು ಅದಕ್ಕೆ ಅನುಮತಿ ಕೊಡುವುದಿಲ್ಲ. ನಿನಗೇ ಗೊತ್ತಲ್ಲ…. ನನ್ನ ತಾಯಿಗಾಗಿ ನನ್ನ ತಂದೆ ಸಹ ಹೀಗೆ ಮಾಡಿದ್ದರು. ನಂತರ ಅವರು ಎಷ್ಟು ಸುಖವಾಗಿದ್ದಾರೆ ಗೊತ್ತಾ? ಇಲ್ಲಿಗೆ ಬಂದ ಮೇಲೆ ಅವರಿಗೆ ಬಹಳ ಲಾಭ ಆಯ್ತು. ಪ್ರೀತಿ ಪ್ರೇಮದಲ್ಲಿ ಇಂಥ ಕಾಂಪ್ರಮೈಸಸ್ ಅನಿವಾರ್ಯ. ಇದನ್ನು ಯಾರೂ ತಪ್ಪು ಎನ್ನುವುದಿಲ್ಲ. ಎವೆರಿಥಿಂಗ್ ಈಸ್ ಫೇರ್ ಇನ್ ಲವ್ ಅಂಡ್ ವಾರ್!”
“ಕೇವಲ ಲಾಭದ ದೃಷ್ಟಿಯಿಂದ ಎಲ್ಲಾ ಕೆಲಸಗಳನ್ನೂ ತೂಗಿ ನೋಡಲಾಗದು. ಪ್ರೀತಿ ಪ್ರೇಮದಲ್ಲಿ ಕಾಂಪ್ರಮೈಸ್‌ಗಿಂತ ಸ್ಯಾಕ್ರಿಫೈಸ್‌ಗೇ ಉನ್ನತ ಸ್ಥಾನ! ನಾನು ದುಬೈಗೆ ಬಂದು ನೆಲೆಸುತ್ತೇನೆ, ನಿನ್ನ ತಾತನ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ಆದರೆ ನಾನು ನಾನಾಗಿ, ನೀನು ನೀನಾಗಿ ಇರೋಣ. ಯಾರೂ ಧರ್ಮ ಬದಲಾಯಿಸುವ ಪ್ರಶ್ನೆ ಬೇಡ. ನಾನು ಎಂದೂ ನನ್ನ ಧರ್ಮ ಬದಲಾಯಿಸಲಾರೆ!
“ಅದು ನನ್ನ ಹೆತ್ತವರನ್ನು ಹೆತ್ತವರಲ್ಲ ಎಂದು ಹೇಳುವುದಕ್ಕೆ ಸಮ. ಬೇರೆಯವರು ನನ್ನ ಹೆತ್ತವರಾಗಿರಲು ಸಾಧ್ಯವೇ ಇಲ್ಲ. ಅದರ ಬದಲು ನಾನೊಂದು ಮಾತು ಹೇಳುತ್ತೇನೆ. ಅಗತ್ಯವಾಗಿ ನಾವು ಮದುವೆ ಆಗೋಣ. ನೀನು ನಮ್ಮ ದೇಶಕ್ಕೆ ಬಂದುಬಿಡು. ಬೆಂಗಳೂರು ನೀನು ಕಂಡರಿಯದ ಊರೇನಲ್ಲ. ಮದುವೆ ಆಗಿ ನಾವು ಇಲ್ಲೇ ಸೆಟಲ್ ಆಗೋಣ. ನೀನು ನಿನ್ನ ಧರ್ಮ ಬದಲಾಯಿಸಬೇಕೆಂದು ನಾನೆಂದೂ ಒತ್ತಾಯಿಸುವುದಿಲ್ಲ. ಧರ್ಮದ ಅಡ್ಡಗೋಡೆ ನಮ್ಮ ಮಧ್ಯೆ ಬರುವುದೇ ಬೇಡ.”
“ಇಲ್ಲ….ಇಲ್ಲ….. ನನ್ನ ತಾಯಿ ತಂದೆ, ತಾತಾ ಯಾರೂ ಇದಕ್ಕೆ ಒಪ್ಪುವುದಿಲ್ಲ. ನನ್ನ ತಾಯಿ ತರಹ ನಾನೂ ಹೆತ್ತವರಿಗೆ ಒಬ್ಬಳೇ ಮಗಳು. ದುಬೈನಲ್ಲಿ ತಾತನದು ಹಲವು ಲಕ್ಷ ಕೋಟಿಗಳ ಬಿಸ್‌ನೆಸ್ ಇದೆ. ಬೇರೆ ಧರ್ಮದ ಹುಡುಗನನ್ನು ಮದುವೆಯಾಗಲು ಇದನ್ನೆಲ್ಲ ಬಿಟ್ಟು ಬರಬೇಕಾಗುತ್ತದೆ, ಇದು ಖಂಡಿತ ಸಾಧ್ಯವಿಲ್ಲ. ಅದಕ್ಕೆ ನಮ್ಮ ಮನೆಯವರ ಬಳಿ ಒಪ್ಪಿಗೆ ಸಿಗುವುದೂ ಇಲ್ಲ…. ನನಗೆ ಅಷ್ಟು ಧೈರ್ಯ ಇಲ್ಲ….”
“ನನ್ನ ಮಾತು ಕೇಳಿದರೆ ಯಾರೂ ತಮ್ಮ ಧರ್ಮ ಬದಲಾಯಿಸಬೇಕಾದ ಅಗತ್ಯವಿಲ್ಲ. ಇರಬಹುದು, ನಿನ್ನಷ್ಟು ಕೋಟ್ಯಂತರ ರೂ. ಆಸ್ತಿ ನನಗೆ ಇಲ್ಲದಿರಬಹುದು. ಆದರೆ ನಮ್ಮಿಬ್ಬರ ಬಾಳು ಬದುಕಿಗೆ ನೆಮ್ಮದಿ ತರುವ ಕೆಲಸ ನನಗಿದೆ. ನಿನ್ನನ್ನು ಕಡೆತನಕ ಕಾಪಾಡಿಕೊಳ್ಳಬಲ್ಲೇ. ನಿನಗೆ ಬೇಕಾದ ಸುಖ, ಶಾಂತಿ, ನೆಮ್ಮದಿ ಎಲ್ಲ ಇಲ್ಲಿ ಸಿಗುತ್ತದೆ. ನಮ್ಮ ದೇಶ ಬಲು ಉದಾರವಾದುದು. ಇಲ್ಲಿ ಎಲ್ಲ ಧರ್ಮಗಳೂ ಮಾನ್ಯ, ಸರ್ವಸಮ. ಎಲ್ಲಾ ಧರ್ಮದವರೂ ನೆಮ್ಮದಿಯಾಗಿದ್ದಾರೆ. ನೀನೂ ಸ್ವಲ್ಪ ತ್ಯಾಗ ಮಾಡಿದರೆ, ನಾನೂ ಸ್ವಲ್ಪ ತ್ಯಾಗ ಮಾಡುತ್ತೇನೆ….. ನಮ್ಮದು ಆದರ್ಶ ಸಂಸಾರ ಆಗಲಿದೆ. ಆದರೆ ನಾನೆಂದೂ ನನ್ನ ಧರ್ಮ ಬಿಡಲಾರೆ!”
“ಹಾಗಾದರೆ…. ಇದುವೇ ನಿನ್ನ ಕೊನೆಯ ನಿರ್ಧಾರವೇ?”
“ಸಾರಿ….. ನಾನು ಧರ್ಮ ಬಿಡಲಾರೆ. ನಾನು ಅಂದುಕೊಳ್ಳುವುದೆಂದರೆ….. ಮುಂದಿನ ಸಲ ದುಬೈಗೆ ಬಂದಾಗ ನಿನ್ನ ದುಬಾರಿ ವಜ್ರದುಂಗುರನ್ನು ನಿನಗೆ ವಾಪಸ್ಸು ಕೊಟ್ಟುಬಿಡ್ತೀನಿ. ಅಂಥ ಲಕ್ಷಾಂತರ ಬೆಲೆಬಾಳುವ ಉಂಗುರವನ್ನು ನಾನು ಸುಮ್ಮನೇ ಹಾಗೇ ಇಟ್ಟುಕೊಳ್ಳುವುದು ಖಂಡಿತಾ ಸರಿಯಲ್ಲ.”
“ಅರುಣ್…. ದಯವಿಟ್ಟು ತಪ್ಪು ತಿಳಿಯಬೇಡ. ಪ್ಲೀಸ್ ಆ ಉಂಗುರದ ಪ್ರಸ್ತಾಪ ಈಗ ಬೇಡ. ನಮ್ಮ ಮದುವೆಗೂ ಇದಕ್ಕೂ ಏನೂ ಸಂಬಂಧವಿಲ್ಲ. ಡೈಮಂಡ್ಸ್ ಆರ್ ಫಾರ್ ಎವರ್….. ಅದು ನಮ್ಮ ಸ್ನೇಹದ ಶಾಶ್ವತ ಗುರುತಾಗಿ ನಿನ್ನ ಬಳಿಯೇ ಉಳಿದಿರಲಿ. ಅದನ್ನೂ ಕೊನೆಯತನಕ ನೀನು ನಿನ್ನ ಬಳಿ ಇಟ್ಟುಕೋ. ಇದನ್ನು ನಮ್ಮ ಈ ಅಪೂರ್ಣ ಪ್ರೇಮದ ಸಂಕೇತ ಎಂದೇ ಭಾವಿಸಿಕೋ. ಆದರೆ ಶಾಶ್ವತವಾಗಿ ಅದು ನಿನ್ನ ಬಳಿ ಇರಲಿ. ಗುಡ್ ಬೈ ಫಾರ್ ಎವರ್….. ಟೇಕ್ ಗುಡ್ ಕೇರ್ ಆಫ್ ಯುವರ್‌ಸೆಲ್ಫ್…..”
“ಜುಬೇದಾ…. ನಿನಗೆ ತಕ್ಕಂಥ ಕೋಟ್ಯಧಿಪತಿಯನ್ನೇ ಮದುವೆಯಾಗಿ ನೀನೂ ಸದಾ ಸುಖವಾಗಿ ಬಾಳು. ಯೂ ಟೂ ಟೇಕ್ ಕೇರ್ ಆಫ್ ಯುರ್‌ಸೆಲ್ಫ್…..”
“ಥ್ಯಾಂಕ್ಸ್…..” ಆ ಕಡೆ ಬಿಕ್ಕಳಿಸಿದ ಸದ್ದು ಅವನಿಗೆ ಸ್ಪಷ್ಟ ಕೇಳಿಸಿತು. ಅದು ಅವರಿಬ್ಬರೂ ಆಡಿದ ಕೊನೆಯ ಮಾತಾಗಿತ್ತು. ಅವಳು ನೀಡಿದ ಉಂಗುರ ಶಾಶ್ವತವಾಗಿ ಅವನ ಬಳಿ ಉಳಿಯಿತು. ಅವಳ ಅಪೂರ್ಣ ಪ್ರೇಮದ ಆ ಕಾಣಿಕೆ ಅವನ ಹೃದಯದ ಮೂಲೆಯಲ್ಲಿ ಒತ್ತರಿಸುತ್ತಿತ್ತು .