ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ವ್ಯಾಯಾಮದಿಂದ ಹಲವು ಲಾಭಗಳಿವೆ. ಆದರೆ ನಾವೀಗ ನಡೆಸುತ್ತಿರುವ ಧಾವಂತದ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯವೇ ದೊರೆಯುವುದಿಲ್ಲ. ಹಲವು ವರ್ಷಗಳಿಂದ ಏಕತಾನತೆಯ ಜೀವನ ನಡೆಸುವುದು ಹಲವು ಬಗೆಯ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲಿ ದೈಹಿಕ ಸ್ಥಿತಿಗಳ ಜೊತೆ ಜೊತೆಗೆ ಮಾನಸಿಕ ಸ್ಥಿತಿಗಳು ಕೂಡ ಸೇರಿವೆ.
ನಮ್ಮ ದೇಹಕ್ಕೆ ದಿನ ಸ್ವಲ್ಪ ಮಟ್ಟಿನ ಕ್ರಿಯಾಶೀಲತೆ ಅತ್ಯಗತ್ಯ. ಅದು ಯಾವುದೇ ರೂಪದಲ್ಲಾಗಿರಬಹುದು. ಅದರಿಂದಾಗಿ ನಮ್ಮ ದೈಹಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ವ್ಯಾಯಾಮದಿಂದ ಹಲವು ಸಕಾರಾತ್ಮಕ ಲಾಭಗಳಿವೆ. ಅದೇ ರೀತಿ ಹಲವು ನಕಾರಾತ್ಮಕ ಪರಿಣಾಮಗಳೂ ಸಹ ಆಗಬಹುದು. ಇದರ ಕಡೆ ಯಾರ ಗಮನ ಅಷ್ಟಾಗಿ ಹೋಗುವುದಿಲ್ಲ. ಅತಿಯಾದ ವ್ಯಾಯಾಮದಿಂದ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.
ವ್ಯಾಯಾಮದ ಸಕಾರಾತ್ಮಕ ರೂಪ
ಹೃದಯದ ಸ್ಥಿತಿಗತಿಯಲ್ಲಿ ಸುಧಾರಣೆ : ನಮ್ಮ ಹೃದಯದ ಸ್ಥಿತಿ ನಾವು ದೈಹಿಕವಾಗಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತೇವೆ ಎನ್ನುವುದನ್ನು ಅಲಂಬಿಸಿರುತ್ತದೆ. ಯಾರು ದೈಹಿಕವಾಗಿ ಹೆಚ್ಚು ಸಕ್ರಿಯವಾಗಿರುವುದಿಲ್ಲವೋ ಅವರಿಗೆ ಹೃದಯ ಸಂಬಂಧೀ ಕಾಯಿಲೆಗಳು ಹೆಚ್ಚಾಗಿ ಕಾಡಿಸುತ್ತವೆ.
ಉತ್ತಮ ನಿದ್ರೆ : ಹಲವು ಅಧ್ಯಯನಗಳಿಂದ ದೃಢಪಟ್ಟ ಒಂದು ಸಂಗತಿಯೆಂದರೆ, ಯಾರು ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುತ್ತಾರೊ, ಅವರಿಗೆ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಇದಕ್ಕೆ ಕಾರಣವೇನೆಂದರೆ., ವ್ಯಾಯಾಮ ಮಾಡುವುದರಿಂದಾಗಿ ನಮ್ಮ ದೇಹದ ಸರ್ಕೇಡಿಯನ್ ರಿದಮ್ ಬಲಗೊಳ್ಳುತ್ತದೆ. ಅದು ಹಗಲು ಹೊತ್ತಿನಲ್ಲಿ ನಿಮ್ಮನ್ನು ಸಕ್ರಿಯವಾಗಿಡಲು ನೆರವಾಗುತ್ತದೆ. ಈ ಕಾರಣದಿಂದ ನಮಗೆ ರಾತ್ರಿ ಹೊತ್ತು ಉತ್ತಮ ನಿದ್ರೆ ಬರುತ್ತದೆ.
ದೈಹಿಕ ಶಕ್ತಿಯಲ್ಲಿ ಹೆಚ್ಚಳ : ನಮ್ಮಲ್ಲಿ ಬಹಳಷ್ಟು ಜನರಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದ ಶಕ್ತಿ ಹೀರಲ್ಪಡುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಹಾಗಾಗಿ ಬಹಳಷ್ಟು ಜನರು ಹಾಗೆಯೇ ಕುಳಿತುಬಿಟ್ಟಿರುತ್ತಾರೆ. ಆದರೆ ವಾಸ್ತವದಲ್ಲಿ ಇದರ ತದ್ವಿರುದ್ಧ ಘಟಿಸುತ್ತದೆ. ವ್ಯಾಯಾಮದಿಂದಾಗಿ ನೀವು ದಿನವಿಡೀ ಸಕ್ರಿಯರಾಗಿರುವಿರಿ. ಏಕೆಂದರೆ ವ್ಯಾಯಾಮ ಮಾಡುವಾಗ ನಮ್ಮ ದೇಹದಲ್ಲಿ ಹಲವು ಬಗೆಯ ಹಾರ್ಮೋನುಗಳು ಬಿಡುಗಡೆಗೊಳ್ಳುತ್ತವೆ. ಅವು ನಮ್ಮನ್ನು ದಿನವಿಡೀ ಸಕ್ರಿಯವಾಗಿಡಲು ನೆರವಾಗುತ್ತವೆ.
ಆತ್ಮವಿಶ್ವಾಸದಲ್ಲಿ ಹೆಚ್ಚಳ : ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ನಿಮಗೆ ಬೇಕಾದ ರೀತಿಯಲ್ಲಿ ದೇಹಕ್ಕೆ ಶೇಪ್ ಕೊಡಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ದೇಹದ ಉತ್ತಮ ರಚನೆ ಹಾಗೂ ಸಕಾರಾತ್ಮಕ ಯೋಚನೆಯ ಕಾರಣದಿಂದ, ನೀವು ನಿಮ್ಮ ಮನೆ ಹಾಗೂ ಆಫೀಸಿನಲ್ಲಿ ಮೊದಲಿಗಿಂತ ಹೆಚ್ಚು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಅತಿ ವ್ಯಾಯಾಮದ ದುಷ್ಪರಿಣಾಮ
ನಿಯಮಿತ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಲವು ಲಾಭಗಳಿವೆ. ಹೀಗಾಗಿ ದೈಹಿಕ ಕ್ರೀಯಾಶೀಲತೆಯ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಯಾವುದೇ ಅರ್ಥ ಇಲ್ಲ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ವಾಸ್ತವ ಅಂಶಗಳು ಹೇಗಿವೆಯೆಂದರೆ, ಅತಿಯಾಗಿ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
– ಕೆಲವು ಮಹಿಳೆಯರಲ್ಲಿ ಒಂದು ವಿಶಿಷ್ಟ ಬಗೆಯ ಸ್ಥಿತಿ, ಉತ್ಪನ್ನವಾಗುತ್ತದೆ. ಅದನ್ನು `ಋತುರೋಧ’ ಎಂದು ಕರೆಯುತ್ತಾರೆ. ಇದರರ್ಥ ಆಕೆಗೆ 3 ತಿಂಗಳ ಕಾಲ ಋತುಸ್ರಾವ ಉಂಟಾಗುವುದಿಲ್ಲ. ಈ ಸ್ಥಿತಿ ಯಾವಾಗ ಉತ್ಪನ್ನವಾಗುತ್ತದೆ ಎಂದರೆ, ಮಹಿಳೆ ಸೂಕ್ತ ಪೋಷಕಾಂಶಗಳನ್ನು ಸೇವಿಸದೆಯೇ, ಅಂದರೆ ಕ್ಯಾಲೋರಿ ದೊರಕಿಸಿಕೊಡುವ ಆಹಾರ ಪದಾರ್ಥಗಳನ್ನು ಸೇವಿಸದೆಯೇ 3 ತಿಂಗಳ ಕಾಲ ನಿಯಮಿತ ವ್ಯಾಯಾಮ ಮಾಡಿದ್ದರಿಂದ ಹೀಗಾಗುತ್ತದೆ.
– ದೇಹದಲ್ಲಿ ಕ್ಯಾಲೋರಿಯ ಕೊರತೆಯ ಪರಿಣಾಮ ಕೇವಲ ದೈಹಿಕ ಶಕ್ತಿಯ ಮೇಲಷ್ಟೇ ಉಂಟಾಗುವುದಿಲ್ಲ. ಅದು ಅವಳ ಲೈಂಗಿಕ ಇಚ್ಛೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ಬೊಜ್ಜು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಹೆಚ್ಚಿನ ಸ್ಥೂಲದೇಹಿ ಮಹಿಳೆಯರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಇದರಿಂದ ಅವರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ.
– ಬೊಜ್ಜಿನ ಕಾರಣದಿಂದ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಉತ್ಪಾದನೆ ಹೆಚ್ಚುತ್ತದೆ. ಅದು ಅಂಡ ಬಿಡುಗಡೆ ಹಾಗೂ ಮುಟ್ಟನ್ನು ಏರುಪೇರುಗೊಳಿಸುತ್ತದೆ. ಅದರಿಂದಾಗಿ ಬಂಜೆತನದ ಸಮಸ್ಯೆ ಕೂಡ ಎದುರಿಸಬೇಕಾಗಿ ಬರುತ್ತದೆ. ಕೆಲವು ಉತ್ಸಾಹಿ ಯುವತಿಯರು ಯಾವ ಮಟ್ಟಿಗೆ ವ್ಯಾಯಾಮ ಮಾಡುತ್ತಾರೆಂದರೆ, ಅದು ಅವರ ಮುಟ್ಟಿನ ಏರುಪೇರಿಗೆ ಕಾರಣವಾಗುವ ಈಸ್ಟ್ರೋಜೆನ್ ಹಾರ್ಮೋನು ಹೆಚ್ಚಳವನ್ನುಂಟು ಮಾಡುತ್ತದೆ. ಒಂದು ವೇಳೆ ಈಸ್ಟ್ರೋಜೆನ್ ಹಾರ್ಮೋನಿನಲ್ಲಿ ಭಾರಿ ಬದಲಾವಣೆ ಉಂಟಾದರೆ, ಅವರು ಗರ್ಭಧಾರಣೆಗೆ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.
– ನಮಗೆಲ್ಲ ಗೊತ್ತಿರುವಂತೆ ಮಹಿಳೆಯರು ಸೇವಿಸುವ ಗರ್ಭನಿರೋಧಕಗಳಲ್ಲಿ ಈಸ್ಟ್ರೋಜೆನ್‌ನ ಪ್ರಮಾಣ ಹೇರಳವಾಗಿರುತ್ತದೆ. ಈ ಕಾರಣದಿಂದಾಗಿಯೇ ಅವರು ಗರ್ಭ ಧರಿಸುವುದಿಲ್ಲ. ಅತಿಯಾಗಿ ವ್ಯಾಯಾಮ ಮಾಡುವ ಸಂದರ್ಭದಲ್ಲೂ ಸಹ ಈಸ್ಟ್ರೋಜೆನ್ ಹಾರ್ಮೋನಿನ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಮಹಿಳೆಯರು ಅತಿಯಾಗಿ ವ್ಯಾಯಾಮ ಮಾಡಬಾರದು.
– ಪುರುಷರಲ್ಲಿ ಹೆವಿ ಟ್ರೇನಿಂಗ್ ಸೆಶನ್‌ನ ಸಂದರ್ಭದಲ್ಲಿ ದೇಹದಲ್ಲಿ ವೀರ್ಯಾಣುಗಳ ಸಂಖ್ಯೆ ಇಳಿಮುಖಗೊಳ್ಳುತ್ತದೆ. ಅದು ನೇರವಾಗಿ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಸಂಬಂಧಪಟ್ಟಿದೆ. ಹಲವು ಜನರು ತಮ್ಮ ದೇಹವನ್ನು ದಷ್ಟಪುಷ್ಟವಾಗಿ ಇಡಲು ದೀರ್ಘಾವಧಿಯ ತನಕ ಕ್ಲಿಷ್ಟಕರ ಟ್ರೇನಿಂಗ್ ಸೆಶನ್ ಫಾಲೋ ಮಾಡುತ್ತಾರೆ.
– ಒಂದು ವೇಳೆ ನೀವು ಅತ್ಯಂತ ದಣಿವು ಉಂಟು ಮಾಡುವ ಹಾಗೂ ಕ್ಲಿಷ್ಟಕರ ಟ್ರೇನಿಂಗ್ ಸೆಶನ್ ಮುಖಾಂತರ ಸಾಗುತ್ತಿದ್ದರೆ, ಸಾಮಾನ್ಯ ಟ್ರೇನಿಂಗ್ ಸೆಶನ್ ಅನುಸರಿಸುವವರಿಗಿಂತ ನಿಮ್ಮ ದೇಹದಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬರಬಹುದು.
– ದೀರ್ಘಾವಧಿತನಕ ದಣಿವನ್ನುಂಟು ಮಾಡುವ ಕಠಿಣ ವ್ಯಾಯಾಮ ಮಾಡುವುದರಿಂದ ಕೇವಲ ವೀರ್ಯಾಣುಗಳ ಸಂಖ್ಯೆಯಲ್ಲಷ್ಟೇ ಕಡಿಮೆಯಾಗುವುದಿಲ್ಲ. ಸಂತಾನೋತ್ಪತ್ತಿ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಇದರ ಜೊತೆಗೆ ಹೆವಿ ರೆಜಿಸ್ಟ್ರೇನ್ಸ್ ಟ್ರೇನಿಂಗ್ ನಿಮಗೆ ಉಪಯೋಗದ ಬದಲು ಹಾನಿಯನ್ನುಂಟು ಮಾಡಬಹುದು. ಏಕೆಂದರೆ ಇದರಿಂದ ದೇಹದಲ್ಲಿ ಟೆಸ್ಟೊಸ್ಟೆರಾನ್ ಹಾರ್ಮೋನಿನ ಉತ್ಪಾದನೆ ಹೆಚ್ಚುತ್ತದೆ. ಅದು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವಲ್ಲಿ ನೆರವಾಗುವ ಇತರೆ ಹಾರ್ಮೋನುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರನ್ವಯ ನಿಮ್ಮ ಸಂಗಾತಿಗೆ ಗರ್ಭಧಾರಣೆ ಮಾಡುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡುವುದರ ಜೊತೆಗೆ ಸಾಕಷ್ಟು ಪೂರಕ ಆಹಾರ ಸೇವಿಸುವುದು ಅತ್ಯವಶ್ಯ. ಏಕೆಂದರೆ ನಿಮ್ಮ ದೇಹಕ್ಕೆ ನಿಯಮಿತವಾಗಿ ಕ್ಯಾಲೋರಿ ಮತ್ತು ಪೋಷಕಾಂಶಗಳ ಅಗತ್ಯ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ವ್ಯಾಯಾಮದ ಸಂದರ್ಭದಲ್ಲಿ ನೀವು ಸಾಕಷ್ಟು ಎನರ್ಜಿಯನ್ನು ಕಳೆದುಕೊಳ್ಳುವಿರಿ. ಪುರುಷರು ಕಾಲಕಾಲಕ್ಕೆ ತಮ್ಮ ಸ್ಪರ್ಮ್ ಕೌಂಟ್‌ನ್ನು ಪರಿಶೀಲನೆ ಮಾಡಿಸುತ್ತ ಇರಬೇಕು. ಅದರ ಜೊತೆಗೆ ಮಹಿಳೆಯರು ಸಹ ಗರ್ಭಧಾರಣೆಯ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇದರಿಂದ ನಿಮಗೆ ಸಮಸ್ಯೆಯಿಂದ ಹೊರಬರಲು ಹಾಗೂ ಸಾಮಾನ್ಯ ಜೀವನ ನಡೆಸಲು ನೆರವಾಗುತ್ತದೆ.
– ಡಾ. ಸರಿತಾ ಭಟ್