ನನ್ನ ಮಗಳು ನೇಹಾ ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಲಾಸ್ ನಗರದಲ್ಲಿ ವಾಸಿಸುತ್ತಾಳೆ. ನಾವು ಅಲ್ಲಿಗೆ ಹೋಗಲು ಹೈದರಾಬಾದ್‌ನಿಂದ ಲಂಡನ್‌ಗೆ ಬೆಳಗಿನ 6 ಗಂಟೆ ಫ್ಲೈಟ್ ಹಿಡಿದೆವು. ಅದು 9 ಗಂಟೆಗಳ ಸುದೀರ್ಘ ಯಾತ್ರೆ. ಅಲ್ಲಿ 3 ಗಂಟೆ ಕಾದ ನಂತರ ಡಲಾಸ್ ತಲುಪಲು ಬೇರೊಂದು ಫ್ಲೈಟ್ ಹಿಡಿದೆವು. ಆದರೆ ಲಂಡನ್ನಿನ ಹೀಥ್ರೋ ಏರ್‌ಪೋರ್ಟ್ ಎಷ್ಟು ಭಾರಿ ಇದೆ ಅಂದ್ರೆ, ಅಲ್ಲಿನ ನಮ್ಮ ಗಮ್ಯ ತಲುಪಲು ಹೊರಗಿನಿಂದ ಬಸ್ ಹಿಡಿದು, ಒಳಗೂ ದೂರ ನಡೆಯಬೇಕಾಗುತ್ತದೆ. ಅಲ್ಲಿನ ದಾರಿ ಎಷ್ಟು ನೀಟ್ ಅಂದ್ರೆ, ನಡೆಯುವವರಿಗೆ ಲೇಶ ಮಾತ್ರ ಕಷ್ಟ ಎನಿಸದು ಅಥವಾ ಸುಸ್ತು ಕಾಣದು. ಮನಸ್ಸಿಗೆ ಎಷ್ಟೋ ಉಲ್ಲಾಸ ದೊರಕುತ್ತದೆ.
ಇಡೀ ದಾರಿ ಪೂರ್ತಿ ನೆಟ್ ಸಿಗದ ಕಾರಣ, ಫೇಸ್‌ಬುಕ್, ವಾಟ್ಸ್ಆ್ಯಪ್ ನಿದ್ರಿಸಿತ್ತು. ಡಲಾಸ್ ತಲುಪಿದಾಕ್ಷಣ ರಾಶಿ ರಾಶಿ ಮೆಸೇಜ್‌ಗಳು ಇಳಿದವು. ಭಾರತದಿಂದ ಮಗ ಹಲವು ಸಂದೇಶ ಕಳುಹಿಸಿದ್ದ. ನಮ್ಮನ್ನು ಕರೆದೊಯ್ಯಲು ಮಗಳು ನೇಹಾ ಏರ್‌ಪೋರ್ಟಿಗೇ ಬಂದಿದ್ದಳು. ಅಂತೂ ಅಮೆರಿಕಾದ ಏರ್‌ಪೋರ್ಟ್‌ನಿಂದ ಹೊರಬರುವ ಔಪಚಾರಿಕತೆಗಳನ್ನು ಪೂರೈಸಿದೆವು. ಅಂತೂ ಅಲ್ಲಿಂದ ಹೊರಬರಲು ನಮಗೆ 2 ಗಂಟೆ ಆಯಿತು. ನಮ್ಮ ಲಗೇಜ್ ಬಿಡಿಸಿಕೊಳ್ಳಲು ಹರಸಾಹಸ ಪಡಬೇಕಾಯ್ತು. ಅವರ ಪ್ರಶ್ನಾವಳಿಗೆ ಉತ್ತರಿಸಿ ಬರುಷ್ಟವರಲ್ಲಿ ಸಾಕು ಸಾಕಾಯಿತು.
ಪ್ರಭಾವಿತಗೊಳಿಸುವ ಶಿಸ್ತು ಕ್ರಮ
ಅಂತೂ ಸೆಕ್ಯೂರಿಟಿ ಚೆಕಿಂಗ್ ಮುಗಿಸಿ ಅಮೆರಿಕಾ ಪ್ರವೇಶಿಸಿದ್ದಾಯಿತು. ಅಲ್ಲಿ ಅಷ್ಟು ಜನರ ದೊಂಬಿ ಇದ್ದರೂ ಪರಿಪೂರ್ಣ ಶಾಂತ ವಾತಾರಣವಿತ್ತು. ಪ್ರತಿಯೊಂದನ್ನೂ ಯಂತ್ರಗಳೇ ಪರೀಕ್ಷಿಸುತ್ತಿದ್ದವು. ಅಲ್ಲಿನ ಶಿಸ್ತು ಕ್ರಮ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ಹೊರಗೆ ಮಗಳು ನೇಹಾ, ಅಳಿಯ, ಮೊಮ್ಮಗಳ ಚೀನೂ ಕೈ ಬೀಸುತ್ತಾ ನಿಂತಿದ್ದರು. ಅವರ ಮನೆಗೆ ಹೋದಾಗ ಮೊಮ್ಮಗಳು ರಿಬ್ಬನ್ ಕಟ್ ಮಾಡಿಸಿ, ಬೊಕೆ ನೀಡಿ ಬರಮಾಡಿಕೊಂಡಳು. ಫ್ರೆಶ್ ಆಗಿ ಬಂದು ಡಿನ್ನರ್ ಮುಗಿಸುಷ್ಟವರಲ್ಲಿ ಸುಸ್ತೆಲ್ಲ ಮಂಗಮಾಯ! ಬೆಳಗ್ಗೆ ತಡವಾಗಿ ಎದ್ದು ದೈನಂದಿನ ಕೆಲಸ ಆರಂಭಿಸಿದೆವು.
ಮೊಮ್ಮಗಳಿಗೆ ಶಾಲೆ ಇದ್ದುದರಿಂದ, ಇವರ ಮನೆಯಿಂದ ಕಾರ್‌ನಲ್ಲಿ ಒಂದಷ್ಟು ದೂರ ಹೋಗಿ, ಮಗಳು ಚೀನೂಳನ್ನು ಶಾಲಾ ಬಸ್ಸಿನಲ್ಲಿ ಹತ್ತಿಸಿ ಬಂದಳು. ಅಲ್ಲಿ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಆಗಿ ಬಸ್ಸು ಜನಪ್ರಿಯವಲ್ಲ. ಶಿಸ್ತಾಗಿ ಗಾಡಿಗಳು ಟ್ರಾಫಿಕ್ ಫಾಲೋ ಮಾಡುತ್ತಾ ಹೊರಡುತ್ತವೆ. ಆದಷ್ಟೂ ಮನೆಗೆ ಹತ್ತಿರವಿರುವ ಶಾಲೆಗಳಿಗೇ ಮಕ್ಕಳನ್ನು ಸೇರಿಸುತ್ತಾರಂತೆ.
ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ
ಇಡೀ ಅಮೆರಿಕಾದಲ್ಲಿ ಮಕ್ಕಳ ಕುರಿತು ವಿಶೇಷ ಗಮನ ನೀಡಲಾಗುತ್ತದೆ. ಮಕ್ಕಳ ಶಾಲೆಗೆ ಫೀಸ್ ಕಟ್ಟುವ ಬಾಬತ್ತು ಇಲ್ಲ! ಪ್ರೈಮರಿ ಶಾಲೆ ಮಕ್ಕಳ ಬಳಿ ಪುಸ್ತಕಗಳೇ ಇರುವುದಿಲ್ಲ. ವಾರಕ್ಕೆ 5 ದಿನಗಳು ಮಾತ್ರ ಶಾಲೆ. ಸಣ್ಣ ಮಕ್ಕಳಿಗಂತೂ ಹೋಂವರ್ಕ್ ಗೋಜಿಲ್ಲ. ಕ್ರಾಫ್ಟ್, ಆರ್ಟ್ ವರ್ಕ್ ಹಾಗೂ ನೈತಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ.
ಈ ರೀತಿ ಮಕ್ಕಳ ಪೂರ್ಣ ವಿಕಾಸ ಆಗುತ್ತದೆ. ಮಕ್ಕಳು ಸ್ವಾವಲಂಬಿ, ಆತ್ಮವಿಶ್ವಾಸ ಹೊಂದಲು ತರಬೇತಿ ಇರುತ್ತದೆ. ಬುಕ್‌ವರ್ಮ್ ಗೆ ಹೆಚ್ಚಿನ ಮಹತ್ವವಿಲ್ಲ. ಮಕ್ಕಳಂತೂ ಮನೆಯಲ್ಲಿ ಟೆನ್ಶನ್ ಇಲ್ಲದೆ ಆರಾಮವಾಗಿರುತ್ತಾರೆ. ಬ್ಯಾಗಿನ ಹೊರೆಯಿಲ್ಲ, ಹೀಗಾಗಿ ಮನೆಗೆ ಬಂದು ತಮ್ಮ ಹವ್ಯಾಸಕ್ಕೆ ತಕ್ಕಂತೆ ಪ್ರಿಪೇರ್ ಆಗುತ್ತಾರೆ. ಪಾಲಕರು ಮೊದಲೇ ಅನುಮತಿ ಪಡೆದು ಮಾರನೇ ದಿನ ಮಕ್ಕಳಿಗೆ ಲಂಚ್ ಕೊಂಡುಹೋಗಿ, ಅವರು ತಿಂದು ಮುಗಿಸುವವರೆಗೂ ಕಾಯಬಹುದು.
ನಾನೂ ಮಗಳೊಂದಿಗೆ ಮೊಮ್ಮಗಳಿಗೆ ಊಟ ಕೊಂಡುಹೋಗಿದ್ದೆ. ಅಲ್ಲಿ ಎಲ್ಲಾ ಮಕ್ಕಳೂ ಹೊರಗಿನ ಅಂಗಳದಲ್ಲಿ ಮೇಜು-ಕುರ್ಚಿ ಬಳಿ ಆರಾಮವಾಗಿ ಊಟ ಮಾಡುತ್ತಿದ್ದರು. ಅಲ್ಲಿ ಕ್ಯಾಂಟೀನ್ ಸೌಲಭ್ಯವಿದ್ದು, ಪಾಲಕರು ಮೊದಲು ಹಣ ತುಂಬಿಸಿದರೆ, ತಿಂಗಳ ಕೊನೆಗೆ ಬಿಲ್ ವಿವರ ಬರುತ್ತಿತ್ತು. ಊಟ ಮುಗಿದಿದ್ದೇ, ಟೀಚರ್ ಬಂದು ಕೈ ಮೇಲೆತ್ತಿದಾಗ ಶಾಂತವಾಗಿ ಎಲ್ಲಾ ಮಕ್ಕಳೂ ತಂತಮ್ಮ ತರಗತಿಗೆ ಸಾಲಾಗಿ ಹೋಗತೊಡಗಿದರು.
ಶಾಲೆಯಲ್ಲಿ ತಿಂಗಳಿಗೊಮ್ಮೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ಇದ್ದೇ ಇರುತ್ತದೆ. ಅಲ್ಲಿನ ಶಿಸ್ತು ಸಂಯಮ ಗಮನಿಸಿದರೆ ಮನಸ್ಸು ತುಂಬಿ ಬರುತ್ತದೆ. ವರ್ಷಾಂತ್ಯದಲ್ಲಿ ಮಕ್ಕಳು ತಾವು ಪಡೆದ ಪುರಸ್ಕಾರ, ಮಾರ್ಕ್ಸ್ ಕಾರ್ಡ್ ಎಲ್ಲವನ್ನೂ ತಂತಮ್ಮ ಮೇಜಿನ ಬಳಿ ಇರಿಸಿಕೊಂಡು ಪಾಲಕರಿಗಾಗಿ ಕಾಯುತ್ತಾರೆ. ಟೀಚರ್ ಅವರ ಮಧ್ಯೆ ಓಡಾಡುತ್ತಾ ಪಾಲಕರಿಗೆ ಮಕ್ಕಳ ಪ್ರಗತಿ ಕುರಿತು ವಿರಿಸುತ್ತಾರೆ. ಎಲ್ಲ ಬಲು ರೋಮಾಂಚಕ!
ನಿಮಯಗಳ ಶಿಸ್ತುಬದ್ಧ ಪಾಲನೆ
ಶಾಲೆಯಿಂದ ಮರಳಿದ ಚೀನೂ ತೈಕ್ವಾಂಡೋ (ಕರಾಟೆ) ಮತ್ತು ಸಂಗೀತ ಕಲಿಯಲು ಹೋಗುತ್ತಿದ್ದಳು. ಪ್ರತಿ ಜಾಗದಲ್ಲೂ ಶಿಸ್ತುಬದ್ಧ ವರ್ತನೆ ಬಲು ಪ್ರಭಾವಶಾಲಿಯಾಗಿತ್ತು. ಅಲ್ಲಿ ಪ್ರತಿಯೊಬ್ಬ ಹೆಂಗಸೂ ಡ್ರೈವಿಂಗ್ ಕಲಿತಿರುತ್ತಿದ್ದಳು. ಏಕೆಂದರೆ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಲು ಅಪರೂಪ. ಟ್ಯಾಕ್ಸಿ ಬಲು ದುಬಾರಿ. ಮನೆಯಲ್ಲೇ ಹೆಚ್ಚು ವರ್ಕ್ ಫ್ರಂ ಹೋಮ್ ಬಯಸುವ ಗೃಹಿಣಿಯರು, ಮಕ್ಕಳ ಲಾಲನೆ ಪಾಲನೆ, ಹೊರಗಿನ ಎಲ್ಲಾ ಕೆಲಸಕ್ಕೂ ತಾವೇ ಕಾರ್ ಡ್ರೈವ್ ಮಾಡುತ್ತಾ ಓಡಾಡುತ್ತಾರೆ. ಎಲ್ಲಕ್ಕೂ ಗಂಡನ ಮೇಲೆ ಅವಲಂಬನೆ ಎಂಬುದು ಇಲ್ಲವೇ ಇಲ್ಲ. ಉದ್ಯೋಗಸ್ಥ ವನಿತೆಯರಂತೂ ಇನ್ನೂ ಡ್ಯಾಶಿಂಗ್!
ಅಲ್ಲಿ ಮನೆಗೆಲಸದವರು ಬಹುತೇಕ ಇಲ್ಲ, ಎಲ್ಲೋ ಒಂದಿಬ್ಬರು ಸಿಕ್ಕರೂ ಬಲು ದುಬಾರಿ! ಹೀಗಾಗಿ ಸರ್ವೆಂಟ್ ಮೆಯ್ಡ್ ಅಪರೂಪ. ಅಮೆರಿಕಾದಲ್ಲಿ ಎಲ್ಲೆಲ್ಲೂ ವಿಭಕ್ತ ಕುಟುಂಬಗಳೇ ಕಂಡುಬರುತ್ತವೆ. ಹೀಗಾಗಿ ಬಹಳಷ್ಟು ಪಾಲಕರು ಸಣ್ಣ ಮಕ್ಕಳನ್ನು ಕ್ರೆಶ್‌ನಲ್ಲಿ ಬಿಡುತ್ತಾರೆ. ಹೀಗಾಗಿ ಉದ್ಯೋಗಸ್ಥ ಪತಿ-ಪತ್ನಿ ಮನೆಗೆಲಸ ಹಂಚಿಕೊಂಡು ಮಾಡಬೇಕಾದುದು ಅನಿವಾರ್ಯ. ಸರ್ವೆಂಟ್ ಇಲ್ಲದೆ ಗೃಹಿಣಿ ಮನೆನೌಕರಿ ಎರಡೂ ಸಂಭಾಳಿಸುವುದು ತುಂಬಾ ಕಷ್ಟ. ಭಾರತಕ್ಕೆ ಹೋಲಿಸಿದಾಗ ಅಲ್ಲಿ ಟ್ರಾಫಿಕ್‌ಜಾಮ್ ಇಲ್ಲವೇ ಇಲ್ಲ. ಎಲ್ಲೆಡೆ ಏಸಿ/ಹೀಟರ್ ಅನುಕೂಲ ಇರುವುದರಿಂದ ಮನೆ ಹೊರಗಿನ ಕೆಲಸಗಳು ಸುಸ್ತಿಲ್ಲದೆ ಸಲೀಸಾಗಿ ನಡೆಯುತ್ತವೆ.
ಅಲ್ಲಿ ವಿಕಲಚೇತನ ಪಾರ್ಕಿಂಗ್‌ಗೆಂದೇ ವಿಶೇಷ ವ್ಯಯಸ್ಥೆ ಇರುತ್ತದೆ. ಅವರಿಗಾಗಿ ಎಲ್ಲೆಡೆ ಅನುಕೂಲಕರ ವ್ಯವಸ್ಥೆಗಳಿವೆ. ಶಾಪಿಂಗ್‌ನಿಂದ, ಆಸ್ಪತ್ರೆಗೆ ಹೋಗಿಬರುವುದೂ ಕಷ್ಟವಲ್ಲ. ವೃದ್ಧರು ಸಹ ಯಾರ ನೆರವಿಲ್ಲದೆ ಇರುತ್ತಾರೆ. ಎಲ್ಲರ ಮನೆಗಳ ಹತ್ತಿರವೇ ಈಜುಕೊಳ ಇರುತ್ತದೆ. ಹೀಗಾಗಿ ಕುಟುಂಬದ ಎಲ್ಲರೂ ಒಟ್ಟಾಗಿ ಸ್ವಿಮಿಂಗ್‌ಗೆ ಹೊರಡುವುದು ಮಾಮೂಲಿ. ಹತ್ತಿರವೇ ಮಕ್ಕಳಿಗಾಗಿ ಫ್ರೀ ಏರಿಯಾ, ಹಿರಿಯರಿಗೆ ಪಾರ್ಕ್, ಲೈಬ್ರೆರಿ ಉಂಟು.
ಮನಮೋಹಕ ದೃಶ್ಯ
ನಾವು ಸಹ ಹತ್ತಿರದ ಒಂದು ಪಾರ್ಕಿಗೆ ಹೋದೆವು. ಅದಂತೂ 200 ಎಕರೆ ವಿಶಾಲವಾಗಿತ್ತು. ನಮ್ಮ ಲಾಲ್‌ಬಾಗ್, ಕಬ್ಬನ್ ಪಾರ್ಕಿನಲ್ಲಿ ಅರ್ಧದಷ್ಟಿತ್ತು ಎನ್ನಬಹುದು. ಅಲ್ಲಿ ಒಂದು ವಿಶಾಲ ಕೊಳ, ಅದರ ಸುತ್ತಾ ವಾಕಿಂಗ್ ಮಾಡಲು ಜಾಗ, ಉಯ್ಯಾಲೆ ಆಟೋಟಗಳಿಗೆ ಮೈದಾನ ಎಲ್ಲವೂ ಇತ್ತು. ಮುಖ್ಯವಾಗಿ ನಮ್ಮ ಭಾರತೀಯ ವಯೋವೃದ್ಧರು ಮಕ್ಕಳನ್ನು ಕಾಣಲೆಂದು ಅಮೆರಿಕಕ್ಕೆ ಬಂದವರು, ಪ್ರತಿ ಸಂಜೆ ಪಾರ್ಕ್‌ಗಳಲ್ಲಿ ತಂತಮ್ಮ ಅನುಭವ ಹಂಚಿಕೊಂಡು ಸಮಯಸ್ಕರೊಡನೆ ನಲಿಯುತ್ತಾರೆ. ಅವರ ಜೊತೆ ಕುಳಿತು ನಾವು ಹರಿಟಿದೆವು. ಪ್ರತಿದಿನ ಸಂಜೆ ಅಲ್ಲಿಗೆ ಹೋಗುತ್ತಿದ್ದೆವು.
ಡಲಾಸ್ ಲೈಬ್ರೆರಿಗಳ ಕುರಿತು ಒಂದು ಮಾತು ಹೇಳಲೇಬೇಕು. ಇದಂತೂ ನಾವು ಬೇರೊಂದು ವಿಶ್ವಕ್ಕೇ ಬಂದಂತಿರುತ್ತದೆ. ಶಾಲೆಯಿಂದಲೇ ನಿಯಮಿತವಾಗಿ ಓದುವ ಹವ್ಯಾಸ ಬೆಳೆಸಿರುತ್ತಾರೆ. ಹೀಗಾಗಿ ಬಹಳ ಮಕ್ಕಳು, ಕಿಶೋರರು ಇಲ್ಲಿಗೆ ಬರುತ್ತಿರುತ್ತಾರೆ. ಸರ್ಕಾರವೇ ನಿರ್ವಹಿಸುವ ಇವಕ್ಕೆ ಯಾವುದೇ ಎಂಟ್ರಿ ಫೀ ಇಲ್ಲ. ಪುಸ್ತಕಗಳ ಜೊತೆ ಸಿಡಿ, ಸಂಗೀತ ವಾದ್ಯಗಳನ್ನು ಇಲ್ಲಿಂದ ಪಡೆಯಬಹುದು. ಇಲ್ಲಿ ಆಂಗ್ಲ ಪುಸ್ತಕಗಳಷ್ಟೇ ಅಲ್ಲ, ಭಾರತೀಯ ಭಾಷೆಗಳ ಪುಸ್ತಕ ಇರುವುದನ್ನು ಕಂಡು ನಿಜಕ್ಕೂ ಬೆರಗಾದೆ! 15 ದಿನಗಳ ಕಾಲಾವಧಿಗೆ ಹಲವು ಪುಸ್ತಕಗಳನ್ನು ಒಮ್ಮೆಲೇ ಪಡೆಯಬಹುದು.
ಚೀನೂ ಸಹ ಈ ರೀತಿ ಅನೇಕ ಪುಸ್ತಕಗಳನ್ನು ಕೊಂಡು ತಂದು ಓದಿ, ಅಜ್ಜಿ ತಾತಾ ಬಳಿ ಆ ಬಗ್ಗೆ ಚರ್ಚೆ ಮಾಡುತ್ತಾಳೆ. ಲೈಬ್ರೆರಿಯಲ್ಲಿ ಕಂಪ್ಯೂಟರ್ ಸೌಲಭ್ಯ ಇನ್ನೊಂದು ಪ್ಲಸ್ ಪಾಯಿಂಟ್. ಮತ್ತೊಂದು ವಿಷಯ, ಮಕ್ಕಳಿಗೆ ಇಷ್ಟವಾಗುವ ಇನ್‌ಡೋರ್ ಗೇಮ್ಸ್ ಸಹ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರದ ಮುಖ್ಯ ಗ್ರಂಥಾಲಯದ ಬಳಿ ಮಕ್ಕಳಿಗಾಗಿ ಮಿನಿ ಮೃಗಾಲಯ ಸಹ ಏರ್ಪಡಿಸಿದ್ದರು. ಅಲ್ಲಿನ ಪ್ರಾಣಿಪಕ್ಷಿಗಳನ್ನು ಕಂಡು ನಿಜಕ್ಕೂ ನಾವು ಬೆರಗಾದೆವು. ಎಲ್ಲಿ ನೋಡಿದರೂ ಪ್ರಶಾಂತ ವಾತಾವರಣವಿತ್ತು. ಎಲ್ಲಿಯೂ ಗಲಭೆ, ಗೊಂದಲಗಳಿರಲಿಲ್ಲ.
ಉತ್ತಮ ಸೌಲಭ್ಯಗಳು
ಅಲ್ಲಿ ಬೇರೆ ಮಕ್ಕಳನ್ನು ಅನಗತ್ಯ ಸ್ಪರ್ಶಿಸುವುದು, ಕೆಕ್ಕರಿಸಿಕೊಂಡು ನೋಡುವುದು ಸಹ ಅಪರಾಧ. ಎಷ್ಟೇ ರಶ್ ಇದ್ದರೂ ಭುಜಕ್ಕೆ ಭುಜ ತಗುಲಿಸಿ ನಿಲ್ಲುವಂತಿಲ್ಲ. ಆಕಸ್ಮಿಕ ಟಚ್ ಆದರೆ ಸಾರಿ ಹೇಳಲೇಬೇಕು. ಪ್ರತಿಯೊಬ್ಬರೂ ಉದ್ದುದ್ದ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಸಹನೆಯಿಂದ ಕಾಯುತ್ತಾರೆ. ಅಪರಿಚಿತ ವ್ಯಕ್ತಿಗೂ ಮುಗುಳ್ನಕ್ಕು ಹಲೋ ಹೇಳುವ ಸಭ್ಯ ನಡವಳಿಕೆ ಇಲ್ಲಿದೆ. ಪ್ರತಿಯೊಬ್ಬರೂ ಒಂದಿಷ್ಟೂ ಟೆನ್ಶನ್ ಇಲ್ಲದೆ ಹಾಯಾಗಿರುತ್ತಾರೆ, ಫನ್‌ಗೆ ಮಹತ್ವ ಕೊಡುತ್ತಾರೆ.
ಅಲ್ಲಿ ಇಂಡಿಯನ್’ ಸ್ಟೋರ್‌ಗೇನೂ ಕಡಿಮೆ ಇಲ್ಲ. ಅಲ್ಲಿಗೆ ಹೋಗಿ ನೋಡಿದರೆ ನಾವು ಭಾರತ ಬಿಟ್ಟು ಇಷ್ಟು ಲಕ್ಷಾಂತರ ಮೈಲಿ ದೂರ ಅಮೆರಿಕಾಗೆ ಬಂದಿದ್ದೇವೆ ಅನಿಸುವುದಿಲ್ಲ. ಇಲ್ಲಿ ಭಾರತದ ಪ್ರತಿಯೊಂದು ಹಣ್ಣು, ತರಕಾರಿ, ಪ್ರಾವಿಷನ್, ಮಸಾಲೆ ಎಲ್ಲ ಲಭ್ಯ. ಉತ್ತಮ ರೆಸ್ಟೋರೆಂಟ್ ಸಹ ಉಂಟು. `ಪಟೇಲ್ ಇಂಡಿಯನ್ ಸ್ಟೋರ್’ನಲ್ಲಂತೂ ನಮ್ಮ ಮನೆಯಲ್ಲೇ ತಯಾರಿಸಿದಂಥ ಪಲ್ಯ, ಗ್ರೇವಿ ಲಭ್ಯ. ಮೆಶೀನ್ ಮೇಡ್ ಚಪಾತಿಯಂತೂ ಕೃತಕ ವಿಧಾನದ್ದು ಎಂದೆನಿಸುವುದೇ ಇಲ್ಲ. ಅಲ್ಲಿನ ಸದಾ ಬಿಝಿ ಲೈಫ್‌ನಲ್ಲಿ ಜನರಿಗೆ ಚಪಾತಿ ಒತ್ತಲು ಬಿಡುವೆಲ್ಲಿ? ಹೀಗಾಗಿ ಎಲ್ಲರೂ ಇದನ್ನೇ ಅವಲಂಬಿಸುತ್ತಾರೆ. ಇಂಥ ಕಡೆ ಓಡಾಡಿ ಮನೆಗೆ ಹೋದರೆ ಸುಸ್ತು ಅನಿಸುವುದಿಲ್ಲ.
ಸವಿ ಸವಿ ನೆನಪು
ಜುಲೈ 4ರಂದು ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆ ಇತ್ತು. ಈ ಸಮಾರಂಭ ವೀಕ್ಷಿಸಲು ಸಂಜೆ 6 ಗಂಟೆಗೆ ಅಲ್ಲಿನ `ಫೇರ್ ಪಾರ್ಕ್’ ಮೈದಾನಕ್ಕೆ ಹೋದೆವು. ರಾಷ್ಟ್ರಗೀತೆ ಶುರುವಾದಂತೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಆಬಾಲವೃದ್ಧರಾದಿಯಾಗಿ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ, ಬಣ್ಣ ಬಣ್ಣದ ಪಟಾಕಿ ಹಚ್ಚಲಾಯಿತು.
ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳ ಮೇಲಿನಿಂದ ಜನ ಕಿಕ್ಕಿರಿದು ತುಂಬಿಕೊಂಡು ವೀಕ್ಷಿಸಿದರು. ಊಟತಿಂಡಿಯ ವ್ಯವಸ್ಥೆಯಂತೂ ಜೋರಾಗಿತ್ತು, ಎಲ್ಲಾ ಫ್ರೀ. ಹಲವರು ಮನೆಗಳಿಂದ ಬುತ್ತಿ ತಂದು ಪಿಕ್‌ನಿಕ್ ತರಹ ಸಂಭ್ರಮಿಸಿದರು. ಅಲ್ಲಿಂದ ಹೊರಟಾಗಲೂ ದಾರಿಯುದ್ದಕ್ಕೂ ಪಟಾಕಿಯ ಸಂಭ್ರಮ ಕಣ್ಣು ಕಟ್ಟುವಂತಿತ್ತು. ಅತಿ ಹೆಚ್ಚು ಜನದಟ್ಟಣೆ ಇದ್ದರೂ ಸಹ, ಅತಿ ಸುವ್ಯವಸ್ಥೆ ಕಾರಣ, ಜನ ನೀಟಾಗಿ ಅಲ್ಲಿಂದ ಕದಲುತ್ತಿದ್ದರು. ಪಾರ್ಕಿಂಗ್‌ಗೆ ಸಹ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮರೆಯಲಾಗದ ದೃಶ್ಯ
ಒಂದು ದಿನ ನಾವು ಡಲಾಸ್‌ನ ಉಪನಗರ ಪ್ಲೇನೋದಲ್ಲಿರುವ ಪ್ರಸಿದ್ಧ ಅಕ್ವೇರಿಯಂ ವೀಕ್ಷಿಸಲು ಹೊರಟೆವು. ಆ ನಗರದ ಜೀವನಶೈಲಿ ಡಲಾಸ್‌ಗಿಂತ ವಿಭಿನ್ನವಾಗಿತ್ತು. ಜನ ಹಾಯಾಗಿ ರಸ್ತೆಯಲ್ಲೇ ಓಡಾಡುತ್ತಿದ್ದರು. ಅವರುಗಳಿಗೆ ಮೆಟ್ರೋ ರೈಲಿನ ವ್ಯವಸ್ಥೆ ಇದ್ದರೂ ಇದನ್ನೇ ಬಯಸುತ್ತಿದ್ದರು. ಆ ಜನರ ವೇಷಭೂಷಣ ನೋಡಿದರೆ ಅವರು ಬಡವರು ಎಂದು ಅರಿವಾಯಿತು. ಅವರಲ್ಲಿ ಮೆಕ್ಸಿಕನ್, ಆಫ್ರಿಕನ್ ಮಂದಿ ಹೆಚ್ಚಿದ್ದರು.
ಅಮೆರಿಕಾದಲ್ಲಿ ಲೇಬರ್ (ಕೂಲಿಯಾಳು) ಕ್ಲಾಸ್ ಈ ಜನರೇ ಆಗಿರುತ್ತಾರೆ. ಅಂತೂ ಅಕ್ವೇರಿಯಂ ತಲುಪಿದೆವು. ಏಸಿಯಿಂದ ಹಿತಕರ ವಾತಾವರಣ, ಸ್ವಪ್ನ ಲೋಕದಂತಿತ್ತು. ಅಲ್ಲಿನ ವೈವಿಧ್ಯಮಯ ಜಲಚರಗಳು ನಮ್ಮ ಕಲ್ಪನೆಗೂ ಮೀರಿದ್ದು. ಅವು ನೀಡುತ್ತಿದ್ದ ಮನರಂಜನೆ ವರ್ಣನಾತೀತ! ಕೆಲವಂತೂ ಜಲಪಂಜರಗಳು ನಮ್ಮ ತಲೆಯ ಮೇಲೆಯೇ ಹಾದುಹೋಗಿದ್ದವು. ಒಂದೆಡೆ ಕಿತ್ತಳೆ ಬಣ್ಣದ ಹಂಸ ಕಂಡು ದಂಗಾದೆವು. ನಾವು ಹಿಂದೆಂದೂ ಕಂಡಿರದ ಜೀವಜಂತುಗಳ ಅಪಾರ ರಾಶಿ ಅಲ್ಲಿತ್ತು. ಈ ದೃಶ್ಯಗಳಂತೂ ಮರೆಯಲಾಗದ್ದು.
ಅನುಪಮ ಶಿಸ್ತಿನ ಆಡಳಿತ
ಅಲ್ಲಿಂದ ಮುಂದೆ ಹೊರಟಾಗ ಬಿಲ್‌ಕುಲ್ ಭಿಕಾರಿಯಂತೆ ಕಾಣದ ಒಬ್ಬ ವ್ಯಕ್ತಿ ಮುಂದೆ ಬಂದು, “ಹಸಿವಾಗಿದೆ…. ಏನಾದರೂ ಕೊಡಿಸಿ….” ಎಂದು ಕೈ ಚಾಚಿದ.ತಕ್ಷಣ ನೇಹಾ ಆತನಿಗೆ ಹಣ ಕೊಡುವ ಬದಲು ಹತ್ತಿರದ ರೆಸ್ಟೋರೆಂಟ್‌ನಿಂದ ಆಹಾರ ತರಿಸಿಕೊಟ್ಟಳು. ಅಲ್ಲಿನ ರೆಸ್ಟೋರೆಂಟ್‌ಗಳು ಇಂಥ ಬಡವರಿಗಾಗಿಯೇ ಅತಿ ಅಗ್ಗದ ತಿಂಡಿ ಒದಗಿಸುತ್ತವೆ ಎಂದಳು. ಅಮೆರಿಕಾದ ಎಲ್ಲಾ ರಾಜ್ಯಗಳಲ್ಲೂ ವಿಭಿನ್ನತೆ ಇದ್ದರೂ ಐಕ್ಯತೆಯೂ ಇತ್ತು. ಅಲ್ಲಿನ ಸೀಸನ್, ಜೀನಶೈಲಿ, ಗಡಿಯಾರಗಳೂ ಸಹ ವಿಭಿನ್ನ ಸಮಯ ತೋರಿಸುತ್ತಿದ್ದವು. ಒಂದೇ ಸಮಾನತೆ ಎಂದರೆ ಏಕೈಕ ರಾಷ್ಟ್ರಪತಿ, ಸರ್ಕಾರದ ಶಿಸ್ತುಬದ್ಧ ಆಡಳಿತ, ಏಕರೀತಿಯ ಕಾನೂನು ಸ್ತುತ್ಯಾರ್ಹವಾಗಿತ್ತು. ನಿಜ ಅರ್ಥದಲ್ಲಿ ಅಲ್ಲಿ ಎಲ್ಲರೂ ಸಮಾನರು. ಹೀಗೆ ಡಲಾಸ್‌ನಲ್ಲಿ 4 ತಿಂಗಳು ಕಳೆದಾಗ ನಮ್ಮ ದೇಶ ನೆನಪಾಯಿತು. ಜನ ಏಕೆ ಇಲ್ಲಿಗೆ ನೌಕರಿ ಹುಡುಕಿಕೊಂಡು ಬರುತ್ತಾರೆ, ಭಾರತದಿಂದ ಪಲಾಯನ ಹೊರಡುತ್ತಾರೆ ಎಂಬುದು ಕ್ರಮೇಣ ತಿಳಿಯಿತು.
ಜನರ ಮೊದಲ ಆಯ್ಕೆ
ಭಾರತದಲ್ಲಿನ ಯುವಜನತೆ ಅಮೆರಿಕನ್ ನೌಕರಿ ಬಯಸಿ ಬರುವುದೇಕೆ? ಅಲ್ಲಿ ಸಿಗದ ಸುವ್ಯವಸ್ಥೆ ಇಲ್ಲಿದೆ! ಅದು ನೌಕರಿ ನೀಡುವ ಸುಭದ್ರತೆ, ಸಂಬಳ, ಸುಂದರ ಭವಿಷ್ಯ, ಮಕ್ಕಳ ವಿದ್ಯಾಭ್ಯಾಸ, ಬೆಳವಣಿಗೆ, ಮುಂದಿನ ಅವರ ಭವಿಷ್ಯ, ಆರೋಗ್ಯ, ಆರ್ಥಿಕ ಸುಭದ್ರತೆ…. ಇತ್ಯಾದಿ ಎಲ್ಲ ಭಾರತಕ್ಕಿಂತ ಅತಿ ಉನ್ನತ ಮಟ್ಟದಲ್ಲಿರುವಾಗ ಅದನ್ನೇಕೆ ಬಿಟ್ಟಾರು?
ಭಾರತದಲ್ಲಿ ಅವರು ಸದಾ ಸಮಾಜಕ್ಕೆ ಅಂಜುತ್ತಾ ಬಾಳಬೇಕು. ಆದರೆ ಅಮೆರಿಕಾಗೆ ಬಂದ ಮೇಲೆ ಹಾಗಲ್ಲ, ಎಲ್ಲಾ ನಿರ್ಧಾರಗಳನ್ನೂ ಅವರು ಸ್ವತಂತ್ರವಾಗಿ ಕೈಗೊಳ್ಳಬಹುದು. ಹೆತ್ತವರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಜನ ಅಮೆರಿಕಾಗೆ ಹಾರುತ್ತಾರೆ ಎಂಬುದು ಆಧಾರಹೀನ ಮಾತು. ಭಾರತದಲ್ಲಿರುವ ಅಂಥ ಮನಸ್ಸಿನವರು ಅಲ್ಲೂ ಹಾಗೆ ಮಾಡುತ್ತಾರಲ್ಲವೇ? ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಹೆತ್ತವರು ಅವರನ್ನು ಅಷ್ಟು ದೂರದ ಅಮೆರಿಕಾಗೆ ಮನಸ್ಸನ್ನು ಕಲ್ಲು ಮಾಡಿಕೊಂಡು ಕಳುಹಿಸಿ ಕೊಡುತ್ತಾರೆ.
ಎಲ್ಲಕ್ಕೂ ದೊಡ್ಡ ವಿಷಯವೆಂದರೆ, ಅಲ್ಲಿನ ವಯೋವೃದ್ಧರು ಆರೋಗ್ಯಕರ, ಸಕ್ರಿಯವಾಗಿ, ಸ್ವಾಲಂಬಿಗಳಾಗಿರವುದನ್ನು ಕಂಡು ಹಿರಿಯರಾದ ನಾವು ಏಕೆ ಸದಾ ನಮ್ಮ ಮಕ್ಕಳ ಮೇಲೆ ಅವಲಂಬಿತರಾಗಿರಬೇಕೆಂದು ಚಿಂತಿಸುವಂತಾಗಿದೆ. ನಾವು ಇಡೀ ಜೀವನ ಹೋರಾಡುತ್ತಾ ನಮಗೆ ಬೇಕಾದಂತೆ ಜೀವನಶೈಲಿ ರೂಪಿಸಿಕೊಳ್ಳಲಿಲ್ಲವಲ್ಲ, ಅದನ್ನು ಈ ಇಳಿ ವಯಸ್ಸಿನಲ್ಲಾದರೂ ಏಕೆ ಮಾಡಬಾರದು ಎಂದು ಯೋಚಿಸುತ್ತಾ ಬದಲಾದ ಮನೋಭಾವದೊಂದಿಗೆ ಭಾರತಕ್ಕೆ ಬಂದೆವು.
– ಸುಧಾ ಕೆ. ಕುಮಾರ್