ಕಥೆ – ದೇವಿಕಾ ಕುಮಾರ್
ಅವಳು… ವಿಚ್ಛೇದಿತೆ! ಅವಳು ಡಿವೋರ್ಸಿ ಅಂತೆ ಎಂದು ಆಫೀಸ್‌ನ ಸಿಬ್ಬಂದಿಯೆಲ್ಲ ಮಾತನಾಡಿಕೊಳ್ಳುವವರೇ! ನನಗೆ ಈ ಕೆಲಸಕ್ಕಾಗಿ ಇಂಟರ್‌ವ್ಯೂಗೆ ಬಂದಿದ್ದಾಗಲೇ ಈ ವಿಷಯ ಗೊತ್ತಾಗಿತ್ತು. ಬೆಂಗಳೂರಿನ ಒಂದು ದೊಡ್ಡ ಖಾಸಗಿ ಕಾಲೇಜಿನಲ್ಲಿ ಉನ್ನತ ಹುದ್ದೆಗಾಗಿ ಸಂದರ್ಶನಕ್ಕೆ ಕರೆಬಂದಿತ್ತು.
ನನ್ನದು ಲೈಬ್ರೆರಿಸೈನ್ಸ್ ನಲ್ಲಿ ಡಿಗ್ರಿ ಆಗಿತ್ತು. ಅವಳ ಬಳಿ ಅದರ ಸ್ನಾತಕೋತ್ತರ ಪದವಿಯ ಹಿರಿಮೆ ಇತ್ತು. ಆ ಕಾಲೇಜಿನ ಸೆಲೆಕ್ಟಿಂಗ್ ಕಮಿಟಿಯಲ್ಲಿ ಪ್ರಿನ್ಸಿಪಾಲ್ ಆಗಿದ್ದ ಪ್ರೌಢ ಮಹಿಳೆಯೇ ಕಾಲೇಜಿನ ಮಾಲೀಕರು, ಅಧ್ಯಕ್ಷರು ಎಲ್ಲಾ ಅವರೇ ಆಗಿದ್ದರು. ಕಮಿಟಿ ನಮ್ಮನ್ನು ಇಂಟರ್‌ವ್ಯೂ ಮಾಡಲಿದೆ ಎಂದು ಹೇಳಿದ್ದರು.
ಸರಿ ಎಂದು ನಾವು ಸಂದರ್ಶನ ನಡೆಯುವ ಕ್ಯಾಬಿನ್ ಗೆ ಹೋಗಿ ನೋಡಿದರೆ ಈ ಪ್ರಿನ್ಸಿಪಾಲ್ ಸ್ನೇಹಲತಾ ಮೇಡಂ ಮಾತ್ರ ಇದ್ದರು. ಅವರು ನಮ್ಮಿಬ್ಬರ ಸಿವಿಲ್, ಡಿಗ್ರಿ ಸರ್ಟಿಫಿಕೇಟ್ಸ್ ಎಲ್ಲಾ ಪರಿಶೀಲಿಸಿದರು.
ನಂತರ ನನ್ನತ್ತ ತಿರುಗಿ ಕೇಳಿದರು, “ನಿಮಗೆ ಮದುವೆ ಆಗಿದೆಯೇ?”
“ಹೌದು.”
“ಬಿ.ಲಿಬ್ ಆಗಿದೆ ಅಲ್ಲವೇ?”
“ಹೌದು.”
ನಂತರ ನನಗಿಂತ ಎಷ್ಟೋ ಪಾಲು ಸುಂದರಿಯಾಗಿದ್ದ ಇನ್ನೊಬ್ಬ ಯಂಗ್ ಹುಡುಗಿ ಕಡೆ ತಿರುಗಿ, “ನೀವು ಮುಕ್ತಿ ಅಲ್ಲವೇ?” ಎಂದರು.
“ಹ್ಞೂಂ.”
“ನಿಮ್ಮದು ಮಾಸ್ಟರ್ ಡಿಗ್ರಿ ಅಲ್ಲವೇ…. ಎಂ.ಬಿ.ಎ.”
“ಹ್ಞೂಂ,” ಅದೆಲ್ಲ ಸರ್ಟಿಫಿಕೇಟ್‌ಗಳಲ್ಲೇ ಇದೆಯಲ್ಲ ಎಂಬ ಆಕ್ಷೇಪಣೆ ಆ ದನಿಯಲ್ಲಿ ಅಡಗಿತ್ತು.
“ಮತ್ತೆ… ನೀವು ಡಿವೋರ್ಸೀನಾ?”
“ಹ್ಞೂಂ,” ಯಾವುದೇ ಅಳುಕಿಲ್ಲದ ಉತ್ತರ.
“ಏಕೆ ಅಂತ ಕೇಳಬಹುದೇ?”
“ಇಲ್ಲ, ಅದು ನನ್ನ ಪರ್ಸನಲ್.”
“ಓ.ಕೆ…. ನೀವಿಬ್ಬರೂ ಅಪಾಯಿಂಟೆಡ್,” ಎಂದರು ಆಕೆ.
“ಮುಕ್ತಿ, ನಾಳೆಯಿಂದ ನೀವು ಲೈಬ್ರೇರಿಯನ್ ಹುದ್ದೆ ನಿರ್ವಹಿಸುತ್ತೀರಿ ಹಾಗೂ ಕಾರ್ತಿಕ್, ನೀವು ಅಸಿಸ್ಟೆಂಟ್ ಲೈಬ್ರೇರಿಯನ್. ಈ ವರ್ಷ ಅಟೆಂಡೆಂಟ್ ಪೋಸ್ಟ್ ಗೆ ಯಾರನ್ನೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ನೀವಿಬ್ಬರೇ ಎಲ್ಲವನ್ನೂ ಮ್ಯಾನೇಜ್ ಮಾಡಿಕೊಳ್ಳಬೇಕು.”
“ಆಯ್ತು ಮೇಡಂ,” ಇಬ್ಬರೂ ಒಟ್ಟಿಗೆ ಹೇಳಿದೆವು.
ಆ ಕಾಲೇಜಿನಲ್ಲಿ ನನಗೆ ಸಂಬಳ 15 ಸಾವಿರ ಹಾಗೂ ಮುಕ್ತಿಗೆ 20 ಸಾವಿರ ಎಂದು ನಿಗದಿಯಾಗಿತ್ತು. ಮುಕ್ತಿ ಅಂದಿನಿಂದ ನನ್ನ ಪಾಲಿಗೆ ಮುಕ್ತಿ ಮೇಡಂ ಆದರು, ಏಕೆಂದರೆ ನನಗಿಂತ ಆಕೆಯದು ಹಿರಿಯ ಹುದ್ದೆ, ನಾನು ಅವರ ಬಳಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ಮುಕ್ತಿ ಆ ಕ್ಯಾಬಿನ್‌ನಿಂದ ಹೊರಗೆ ಹೊರಟ ತಕ್ಷಣ ನಾನೂ ಹೊರಡಲು ಅನುವಾದೆ. ಸ್ನೇಹಾ ಮೇಡಂ ನನ್ನನ್ನು ತಡೆಯುತ್ತಾ ಹೇಳಿದರು, “ಕಾರ್ತಿಕ್, ಆಕೆ ಡಿವೋರ್ಸಿ…. ನೀವು ಸ್ವಲ್ಪ ಎಚ್ಚರಿಕೆಯಿಂದ ಸಂಭಾಳಿಸಬೇಕು. ಹಸಿದ ಹೆಣ್ಣು ಹುಲಿ ಯಾವಾಗ ಬೇಕಾದರೂ ಮೈ ಮೇಲೆ ಎರಗಬಹುದು, ನಿಮ್ಮ ಹುಷಾರಿನಲ್ಲಿ ನೀವಿರಿ,” ಜೋರಾಗಿ ನಗುತ್ತಾ ಹೇಳಿದರು,
“ತಮಾಷೆಗೆ ಹೇಳಿದೆ ಕಣ್ರೀ….. ಕಂಪ್ಲೇಂಟ್ ಬರದಂತೆ ಟ್ಯಾಕಲ್ ಮಾಡಿ.”
ಮಾರನೇ ದಿನದಿಂದ ಇಬ್ಬರೂ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡೆವು. ಆ ಕಾಲೇಜಿನ ಲೈಬ್ರೆರಿ ವಿಶಾಲವಾಗಿತ್ತು. ಇನ್ನೂ ಹೊಸ ಕಾಲೇಜ್ ಆದುದರಿಂದ ವಿದ್ಯಾರ್ಥಿಗಳ ಸಂಖ್ಯೆ ಬಹಳ ಜಾಸ್ತಿ ಏನಿರಲಿಲ್ಲ. ಈಗಿನ ಕಾಲದ ವಿದ್ಯಾರ್ಥಿಗಳ ಚಂದಕ್ಕೆ ಲೈಬ್ರೆರಿಗೆ ಬಂದು ಮುಖ ತೋರಿಸುವುದೂ ಕಡಿಮೆಯೇ….. ಹೀಗಾಗಿ ನಮಗೆ ಕೆಲಸ ಬಹಳ ಜಾಸ್ತಿ ಏನಿರಲಿಲ್ಲ.
ಮುಕ್ತಿಯ ಕೈಕೆಳಗೆ ನಾನು ಕೆಲಸ ಮಾಡಬೇಕಾಗಿತ್ತು, ಆಕೆಗೆ ಸಹಾಯಕನಾಗಿ. ಪಾಪ, ಆಕೆ ಡಿವೋರ್ಸಿ ಎಂದು ನನಗೆ ಸಹಾನುಭೂತಿ ಇತ್ತು. ಜೊತೆಗೆ ದುಃಖ ಆಯ್ತು, ಇಂಥ ಸುಂದರ ಹುಡುಗಿಯನ್ನು ಬಿಟ್ಟುಹೋಗಲಿಕ್ಕೆ ಅವಳ ಗಂಡನಿಗೆ ಮನಸ್ಸಾದರೂ ಹೇಗೆ ಬಂತೋ…? ಆದರೆ ಮುಕ್ತಿಯ ಮುಖದಲ್ಲಿ ಯಾವುದೇ ನೋವು, ವಿಷಾದಗಳ ಸುಳಿವಿರಲಿಲ್ಲ. ಆಕೆ ಸದಾ ಖುಷಿಯಾಗಿರುತ್ತಿದ್ದಳು. ಸದಾ ಏನಾದರೊಂದು ಹಾಸ್ಯಚಟಾಕಿ, ಕೀಟಲೆ ಮಾತು ಇದ್ದೇ ಇರುತ್ತಿತ್ತು.
ನಾನು ಪ್ರತಿ ಸಲ ಆಕೆಯನ್ನು ಮಾತನಾಡಿಸುವಾಗ `ಮುಕ್ತಿ ಮೇಡಂ….’ ಎಂದೇ ಹೇಳುತ್ತಿದ್ದೆ.
“ನೀವು ನನಗಿಂತಲೂ ವಯಸ್ಸಿನಲ್ಲಿ ಹಿರಿಯರು, 30 ವರ್ಷ ನಿಮಗೆ. ನಾನೀಗ 28 ವರ್ಷದವಳು. ಈ ಅತಿ ಮರ್ಯಾದೆಯ ಮಾತು ಬೇಡ, ಮುಕ್ತಿ ಅಂತ್ಲೇ ಕರೆಯಿರಿ.”
“ಆದರೆ…. ನೀವು ನನ್ನ ಸೀನಿಯರ್.”
“ಇದು ಯಾವ ಮಹಾ ಪೊಲೀಸ್ ಡಿಪಾರ್ಟ್‌ಮೆಂಟ್ ಅಥವಾ ಮಿಲಿಟರಿ ಪಡೆಯೇ? ಇಷ್ಟು ಬಿಗಿಯಾದ ಶಿಸ್ತಿನ ಕೋಣೆಯಲ್ಲಿರಲು…. ನಾವಿಬ್ಬರೂ ಒಟ್ಟೊಟ್ಟಿಗೆ ಕೆಲಸ ಮಾಡುವ ಸಹೋದ್ಯೋಗಿಗಳು. ಫ್ರೆಂಡ್ಸ್ ತರಹ ಇದ್ದುಬಿಡೋಣ, ಆಗ ಸಹಜವಾಗಿರುತ್ತದೆ, ಕೆಲಸ ಸಲೀಸು.
”ನಾನು ಆಗಲಿ ಎಂದು ಒಪ್ಪಿದೆ. ಹೀಗೆ ಸ್ನೇಹಮಯವಾಗಿ ದಿನಗಳು ಸುಲಲಿತವಾಗಿ ಉರುಳಿ 8 ತಿಂಗಳೇ ಆಗಿತ್ತು. ಈ 8 ತಿಂಗಳಲ್ಲಿ ನಾವು ಪರಸ್ಪರ ಬಹಳ ಹತ್ತಿರದ ಫ್ರೆಂಡ್ಸ್ ಆಗಿದ್ದೆವು. ಕೆಲಸದ ಪ್ರಶ್ನೆ ಬಂದಾಗ ಇಬ್ಬರೂ ಹಾರ್ದಿಕವಾಗಿ ಪರಸ್ಪರ ಸಹಕರಿಸುತ್ತಿದ್ದೆವು. ನಮ್ಮ ಎಲ್ಲಾ ಅಭಿಪ್ರಾಯಗಳನ್ನೂ ಪರಸ್ಪರ ಶೇರ್ ಮಾಡಿಕೊಳ್ಳುತ್ತಿದ್ದೆವು. ತನ್ನ ಜೀವನ ಅಥವಾ ಕುಟುಂಬದ ಕುರಿತಾಗಿ ಆಕೆ ಎಂದೂ ಯಾವ ದೂರನ್ನೂ ನೀಡಿದವಳಲ್ಲ. ಹಾಗೆಯೇ ನನ್ನ ಕೌಟುಂಬಿಕ ವಿಷಯಗಳನ್ನೂ ಎಂದೂ ಕೆದಕಿ ಕೇಳಿದವಳಲ್ಲ.
“ಮತ್ತೆ…. ಮನೆ ಕಡೆ ಎಲ್ಲಾ ಚೆನ್ನಾಗಿದ್ದಾರೆ ಅಲ್ವೇ?” ಔಪಚಾರಿಕಾಗಿ ಇಷ್ಟೇ ಕೇಳುತ್ತಿದ್ದಳು.
ಆಕೆ ಇಷ್ಟೆಲ್ಲ ಖುಷಿಯಾಗಿ ನಸುನಗುತ್ತಾ ಜೋಕ್ಸ್ ಮಾಡುವುದನ್ನು ಕಂಡಾಗ, ತನ್ನೊಳಗಿನ ನೋವನ್ನೆಲ್ಲ ಮುಚ್ಚಿಡಬೇಕೆಂದೇ ಹೀಗೆ ನಗುವಿನ ಮುಖವಾಡ ಧರಿಸಿದ್ದಾಳೇನೋ ಎನಿಸುತ್ತಿತ್ತು. ಆದರೆ ಎಷ್ಟೋ ದಿನ ಕಳೆದರೂ ಆಕೆಯ ಒಳಗೆ ನೋವು ಅಡಗಿದೆ ಎಂದು ನನಗೆ ಗುರುತಿಸಲು ಆಗಲೇ ಇಲ್ಲ.
ಯಾವ ನೋವು, ನಿರಾಸೆ ಇಲ್ಲದೆ ಹೀಗೆ ಇರಲು ಸಾಧ್ಯವೇ ಎನಿಸಿತು. ನನ್ನ ಮಿತಿ ದಾಟಿ ನಿನಗೆ ಡಿವೋರ್ಸ್ ಆಗಿದ್ದಾದರೂ ಏಕೆ ಎಂದು ಹೇಗೆ ತಾನೇ ಕೇಳಬಲ್ಲೇ? ನಾವಿಬ್ಬರೂ ಮನೆಯಿಂದ ತಂದಿದ್ದ ಡಬ್ಬಿ ತೆರೆದು ಒಟ್ಟಿಗೆ ಊಟ ಮಾಡುತ್ತಿದ್ದೆವು. ಅಲ್ಲಿ ಇಲ್ಲಿನ ವಿಚಾರ, ಟಿವಿ, ಸಿನಿಮಾ, ರಾಜಕೀಯ ಎಲ್ಲದರ ಚರ್ಚೆ ಆಗುತ್ತಿತ್ತು. ಕೆಲಸದ ಸಲುವಾಗಿ ಎಷ್ಟೋ ಸಲ ಒಟ್ಟೊಟ್ಟಿಗೆ ಹೊರಗೆ ಹೋಗಿ ಬುಕ್ಸ್ ತರುವುದು, ಓಡಾಟ ಇದ್ದೇ ಇತ್ತು.
ಹೀಗೆ ಒಂದು ಸಲ ಊಟದ ಮಧ್ಯೆ ಕೇಳಿದೆ, “ಮುಕ್ತಿ ನಿಮ್ಮನ್ನು ಒಂದು ಮಾತು ಕೇಳಬೇಕಿತ್ತು,” ನಗುನಗುತ್ತಾ ಅವಳು ಕೇಳಿದಳು, “ನನ್ನ ಡಿವೋರ್ಸ್ ಬಗ್ಗೆ ಅಲ್ಲವೇ?” ಗಾಬರಿಯಿಂದ ನಾನು ಬಿಳಚಿಕೊಂಡೆ.
ಆಮೇಲೆ ನಗುತ್ತಾ ಅವಳೇ ಹೇಳಿದಳು, “ಒಬ್ಬ ಗಂಡಸಿಗೆ ಒಬ್ಬ ಹೆಂಗಸು ಏಕೆ ಒಂಟಿಯಾಗಿದ್ದಾಳೆ ಎಂದು ತಿಳಿಯುವುದರಲ್ಲಿ ಬಹಳ ಕುತೂಹಲ ಇರುತ್ತದೆ, ಕೇಳಿ.”
“ನೀವು ನೋಡಿದರೆ ಇಷ್ಟು ಸುಂದರವಾಗಿದ್ದೀರಿ. ಈ 8 ತಿಂಗಳಲ್ಲಿ ನಾನು ನಿಮ್ಮನ್ನು ನೋಡಿರುವಂತೆ ನಿಮಗೆ ಯಾವುದೇ ಲೋಪದೋಷಗಳಿಲ್ಲ. ಇಷ್ಟೆಲ್ಲ ವಿದ್ಯೆ ಇದೆ. ವ್ಯವಹಾರಜ್ಞಾನ ಇದೆ. ಆರ್ಥಿಕವಾಗಿ ಕಷ್ಟಗಳಿಲ್ಲ. ಮತ್ತೇಕೆ ನಿಮ್ಮ ಪತಿ ನಿಮಗೆ ವಿಚ್ಛೇದನ ಕೊಟ್ಟರು?”
ಆಕೆ ಸಹಜ ಭಾವದಲ್ಲಿ ಮಾತು ಮುಂದುವರಿಸಿದಳು, “ಸೌಂದರ್ಯಕ್ಕೂ ವಿಚ್ಛೇದನಕ್ಕೂ ಯಾವ ಸಂಬಂಧ ಇಲ್ಲ. ಇನ್ನೊಂದು ವಿಷಯ ನೆನಪಿಡಿ, ಈ ಡೈವೋರ್ಸ್ ಕೊಟ್ಟವರು ನನ್ನ ಪತಿಯಲ್ಲ…. ನಾನೇ!”
ಈಗ ವಿಸ್ಮಯಗೊಳ್ಳುವ ಸರದಿ ನನ್ನದಾಗಿತ್ತು.
“ಓ…. ನೀವಾ ಕೊಟ್ಟಿದ್ದು? ಅಂದ್ರೆ ನಿಮ್ಮ ಪತಿ ಕುಡುಕ, ಜೂಜುಕೋರ…. ಈ ತರಹ….”
“ಆತ ಈಗ ನನ್ನ ಗಂಡನೇ ಅಲ್ಲ ಅಂದ ಮೇಲೆ ಅವರ ಗುಣಗಳನ್ನು ಕಟ್ಟಿಕೊಂಡು ನನಗೇನು?”
“ಓ…. ಅಂಥಹವರಲ್ಲ ಅಂತ ಆಯ್ತು.”
“ಹ್ಞೂಂ…. ಹಾಗೇ ಅಂದುಕೊಳ್ಳಿ.”
“ಮತ್ತೆ ಬೇರೆ ಹುಡುಗಿ ಅಫೇರ್ ಏನಾದ್ರೂ….”
“ಇಲ್ಲ… ಇಲ್ಲ….”
“ಬಹಳ ವರದಕ್ಷಿಣೆ ಕೇಳಿದರೇನು?”
“ಅದೇನಿಲ್ಲ ಬಿಡಿ.”
“ಅಂದ್ರೆ….. ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಮನೆಯವರು ಬಲವಂತದ ಮದುವೆ ಮಾಡಿಸಿರಬೇಕು.”
“ಹಾಗೇನಿಲ್ಲ….. ನಮ್ಮದು ಪ್ರೇಮ ವಿವಾಹ,” ಎಳ್ಳಷ್ಟೂ ಬೇಸರವಿಲ್ಲದೆ ಮುಕ್ತಿ ಉತ್ತರಿಸುತ್ತಿದ್ದಳು. ಈಗ ಅವಳನ್ನು ಬೇರೇನು ತಾನೇ ಪ್ರಶ್ನಿಸಲಿ? ನನಗೆ ಬೇರೆ ಕಾರಣ ಹೊಳೆಯಲಿಲ್ಲ. ನಾನು ಬೇಕೆಂದೇ ಮಾತನ್ನು ಬೇರೆ ಕಡೆ ತಿರುಗಿಸಿದೆ.
“ನಿಮ್ಮ ತಾಯಿ ತಂದೆಗೆ ಬಹಳ ಚಿಂತೆ ಆಗಿರಬೇಕಲ್ಲವೇ?”
“ಇಲ್ಲದೆ ಇರುತ್ತದೆಯೇ….?” ಮುಕ್ತಿ ನಿರ್ಲಕ್ಷ್ಯವಾಗಿ ಹೇಳಿದಳು, “ಈ ರೀತಿ ಎಲ್ಲ ತಾಯಿ ತಂದೆಯರೂ ಚಿಂತಿಸುವುದು ಸಹಜ. ಆದರೆ ನನ್ನ ಕೇಸ್‌ನಲ್ಲಿ….. ಬಹಳ ಚಿಂತೆ ಇರಲಾರದು. ನೀನಾಗಿ ಓಡಿಹೋಗಿ ಮಾಡಿಕೊಂಡದ್ದು…. ಈಗ ಅನುಭವಿಸು ಅಂತ. ತಮ್ಮ ಮಾತು ಕೇಳದೆ ಮಗಳು ಓಡಿಹೋಗಿ ಜೀವನದಲ್ಲಿ ಸೋತು ಬಂದಿದ್ದಾಳೆ, ಅನುಭವಿಸಲಿ ಬಿಡು ಎಂದು ಅವರೂ ತಮ್ಮ ಪಾಡಿಗೆ ಇದ್ದುಬಿಟ್ಟಿದ್ದಾರೆ. ಮಗಳು ತವರು ಸೇರಿದಳು, ಆದರೆ ತನ್ನ ಪಾಡಿಗೆ ಸಂಪಾದಿಸಿಕೊಂಡು ತನ್ನ ಕಾಲ ಮೇಲೆ ತಾನು ನಿಂತಿದ್ದಾಳೆ. ಇರಲು ಒಂದು ಮನೆ ಇದೆ, ಹೇಗೋ ಇದ್ದುಕೊಳ್ಳಲಿ ಅಂತ. ನನಗೆ ಒಬ್ಬ ಅಣ್ಣ ಇದ್ದಾನೆ. ಅವನು ಮಿಲಿಟರಿಯಲ್ಲಿ ಇರುವುದರಿಂದ ತನ್ನ ಸಂಸಾರದ ಜೊತೆ ವರ್ಗಾವಣೆ ಆದ ಕಡೆ ಹೋಗುತ್ತಿರುತ್ತಾನೆ, ಸದ್ಯಕ್ಕೆ ಅಸ್ಸಾಮ್ ನಲ್ಲಿದ್ದಾನೆ,” ಎಂದು ಹೇಳಿದಳು.
ಈಗಲೂ ನನ್ನ ಮುಖ್ಯ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ, “ಮತ್ತೆ ಡಿವೋರ್ಸಿಗೆ ಕಾರಣ….?”
“ಸ್ವಾಭಿಮಾನ.”
“ಅಂದ್ರೆ…..”
“ಗಂಡಸರೇಕೆ ಹೆಂಡತಿಯರಿಗೆ ಡಿವೋರ್ಸ್ ಕೊಡ್ತಾರೆ ಹೇಳಿ…..”
ನಾನು ಸ್ವಲ್ಪ ಹೊತ್ತು ಸುಮ್ಮನಿದ್ದು, “ಗಂಡನಿಗೆ ಬೇರೆ ಕಡೆ ಮನಸ್ಸಾದಾಗ ಹೆಂಡತಿ ಹಳತೆನಿಸಿ ಬಿಟ್ಟುಬಿಡ್ತಾನೆ…. ಇದನು ಬಿಟ್ಟರೆ ನನಗೆ ಬೇರೆ ದೊಡ್ಡ ಕಾರಣ ಹೊಳೆಯುತ್ತಿಲ್ಲ.”
ಮತ್ತೆ ನನಗೆ ಹೊಸ ಸಂದೇಹ ಮೂಡಿತು. ಬಹುಶಃ ಮುಕ್ತಿಗೆ ಪರಪುರುಷನ ಮೇಲೆ ವ್ಯಾಮೋಹ ಹುಟ್ಟಿರಬಹುದು. ಗಂಡ ಶ್ರೀಮಂತ ಇರಬೇಕು, ಅವನಿಂದ ದೊಡ್ಡ ಮೊತ್ತದ ಹಣ ದಕ್ಕಿಸಿಕೊಂಡು, ತನ್ನ ಹೊಸ ಪ್ರೇಮಿಯ ಜೊತೆ ಸಂಸಾರ ಹೂಡುವ ಹುನ್ನಾರ ನಡೆಸಿರಬಹುದು….. ಆದರೆ ಈ 8 ತಿಂಗಳ ಅಧಿಯಲ್ಲಿ ಇವಳನ್ನು ಭೇಟಿಯಾಗಲು, ಫೋನ್ ಮೂಲಕ ವಿಚಾರಿಸಲು ಅಂಥ ಯಾವ ವ್ಯಕ್ತಿಯೂ ಬಂದಿರಲಿಲ್ಲ.
ನಾನು ಚಿಂತಿಸುತ್ತಿರುವುದನ್ನು ಕಂಡು ನನ್ನ ಮುಖಭಾವ ಓದಿದವಳಂತೆ ಮುಕ್ತಿ, “ಹಾಗೆಲ್ಲ ಏನೂ ಇಲ್ಲ ಕಾರ್ತಿಕ್. ನೀವು ಅಂದುಕೊಂಡಂತಲ್ಲ……”
“ಅರೆ…. ನಾನೇನು ಅಂದುಕೊಂಡೆ?” ನನ್ನ ಮನಸ್ಸು ಇವಳಿಗೆ ಹೇಗಪ್ಪ ತಿಳಿಯಿತು ಅಂದುಕೊಂಡೆ.
“ನನಗೆ ಬೇರೆ ಯಾವ ಗಂಡಸಿನ ಜೊತೆಗೂ ಪ್ರೇಮ ಪ್ರೀತಿ ಬೆಳೆಯಲಿಲ್ಲ. ಮದುವೆಯಾದ ಬಹಳ ಹೆಂಗಸರು ಇತ್ತೀಚೆಗೆ ಹೀಗೆ ಮಾಡಿ ಜೀವನಾಂಶಕ್ಕೆ ದಾರಿ ಕಂಡುಕೊಂಡಿದ್ದಾರೆ. ನನಗೆ ಅದರ ಅಗತ್ಯವಿಲ್ಲ. ನನ್ನ ಮಾಜಿ ಪತಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಗುಮಾಸ್ತ. ಈಗಲೂ ಬದುಕಿದ್ದಾರೆ, ತಮ್ಮ ಪಾಡಿಗೆ ತಾವಿದ್ದಾರೆ. ಈಗ ನನ್ನ ಗಂಡ ಅಲ್ಲ ಅಷ್ಟೆ,” ಎಂದು ನಿರ್ಲಿಪ್ತಳಾಗಿ ನುಡಿದಳು.
ಇನ್ನೂ ನನಗೆ ಇವರ ವಿಚ್ಛೇದನಕ್ಕೆ ಕಾರಣವೇನು ಎಂದು ತಿಳಿಯಲಿಲ್ಲ. “ಈ ಸಮಾಜ ಒಬ್ಬ ವಿಚ್ಛೇದಿತೆಯನ್ನು ಕಂಡು ಹೇಗೆ ನಡೆದುಕೊಳ್ಳುತ್ತದೆ ಗೊತ್ತಾ?”
“ಯಾರಿಗೆ ಬೇಕು ಈ ಸಮಾಜ? ಈ ಸಮಾಜವನ್ನು ಕಟ್ಟಿಕೊಂಡು ನನಗೇನಾಗಬೇಕು? ಸಮಾಜಕ್ಕೆ ಕಂಡವರ ಬಗ್ಗೆ ಆಡಿಕೊಳ್ಳುವುದೊಂದೇ ಗೊತ್ತು. ಸಮಾಜ ತನ್ನ ಕೆಲಸ ಮಾಡಿಕೊಳ್ಳಲಿ, ನಾನು ನನ್ನ ಕೆಲಸ ಮಾಡಿಕೊಳ್ಳುತ್ತೀನಿ ಅಷ್ಟೆ.”
ಸಮಾಜಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತ್ತಿತ್ತು ಅವಳ ವಾದ.
“ಆದರೆ ಡಿವೋರ್ಸಿಗೆ ಏನೋ ಒಂದು ಕಾರಣವಂತೂ ಇರಲೇಬೇಕಲ್ಲ…. ಇಷ್ಟು ದೊಡ್ಡ ನಿರ್ಧಾರ…. ಮದುವೆ ಅಂದ್ರೆ ಶಾಶ್ವತ ಬಂಧನ ಎನ್ನುತ್ತಾರೆ….. ”
“ಬಂಧನ…. ಬಿಡಿಸಲಾಗದ ಬಂಧನ…. ಇದೆಲ್ಲ ಯಾರೋ ಗಂಡಸರು ಬೇಕೆಂದೇ ಹೆಂಗಸರನ್ನು ಭಯಪಡಿಸಲು ಬರೆದಿಟ್ಟ ಸಾಲುಗಳು ಅನಿಸುತ್ತೆ. ಹೆಂಗಸರನ್ನು ಮೂರ್ಖರನ್ನಾಗಿಸುವ ಅಸ್ತ್ರಗಳು ಇವು….” ಮುಕ್ತಿ ವ್ಯಂಗ್ಯವಾಗಿ ನಕ್ಕಳು.
“ನೀವೇಕೆ ಮಹಿಳಾವಾದಿಗಳ ಡೈಲಾಗ್ ಹೇಳ್ತಿದ್ದೀರಿ?”
“ಇಲ್ಲ…… ನಾನಂತೂ ಖಂಡಿತಾ ಪುರುಷ ವಿರೋಧಿ ಅಲ್ಲ.”
ಹೀಗೆ ಮಾತುಕಥೆ ಮಧ್ಯೆ ಊಟ ಮುಗಿಯಿತು.“ಮುಕ್ತಿ ನೀವು ಈಗಾಗಲೇ ಮದುವೆ ಆದವರು. ಬಾಳಿನುದ್ದಕ್ಕೂ ಹೀಗೆ ಒಂಟಿ ಆಗಿರುವ ಬದಲು ಸಂಗಾತಿ ಬೇಕು ಅನಿಸುವುದಿಲ್ಲವೇ?” ಇದಕ್ಕಿಂತ ಹೆಚ್ಚಿಗೆ ಸಲುಗೆ ವಹಿಸುವ ಧೈರ್ಯ ಸಾಲದೆ ನಾನು ಅಲ್ಲಿಗೆ ಮಾತು ನಿಲ್ಲಿಸಿದೆ.
ಆಕೆ ಏನೂ ಹೇಳದೆ ನನ್ನ ಕಡೆ ನೋಡಿ ಮಂದಹಾಸ ಬೀರಿದಳಷ್ಟೆ. ಅದರರ್ಥ….? ನನಗಂತೂ ಸ್ಪಷ್ಟವಾಗಿ ಏನೂ ತಿಳಿಯಲಿಲ್ಲ.
ಸಂಜೆ ನಾವು ಒಟ್ಟಿಗೆ ಕಾಲೇಜಿನ ವತಿಯ ಬಸ್ಸಿನಿಂದ ಹೊರಡುತ್ತಿದ್ದೆವು. ಅರ್ಧ ಗಂಟೆಯ ಪ್ರಯಾಣದ ನಂತರ ಮುಕ್ತಿ ಮೊದಲು ಇಳಿಯುತ್ತಿದ್ದಳು, 15 ನಿಮಿಷಗಳ ನಂತರ ನಾನು ಇಳಿಯುತ್ತಿದ್ದೆ. ಆಕೆ ಎಂದೂ ನನ್ನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿರಲಿಲ್ಲ. ಒಂದು ವಿಧದಲ್ಲಿ ನಾನು ಹೋಗದೆ ಇರುವುದೂ ಒಳ್ಳೆಯದೇ! ಇಂಥ ಡಿವೋರ್ಸಿ ಹೆಂಗಸಿನ ಜೊತೆ ಹೊಸ ಗಂಡಸು ಮನೆಗೆ ಬಂದರೆ ಅಕ್ಕಪಕ್ಕದ ಜನ, ಅವಳ ತಾಯಿ ತಂದೆ ಯಾವ ಅರ್ಥದಲ್ಲಿ ತಿಳಿದುಕೊಳ್ಳುತ್ತಾರೋ ಏನೋ? ನಾನು ಆಕೆಯ ಹೊಸ ಪ್ರೇಮಿ ಅಂದುಕೊಳ್ಳದಿದ್ದರೆ ಸರಿ. ಹಿಂದೆ ಸ್ನೇಹಾ ಮೇಡಂ ಇಂಥ ವಿಷಯದಲ್ಲಿ ಹುಷಾರಾಗಿರಬೇಕು ಎಂದು ಎಚ್ಚರಿಸಿದ್ದು ನೆನಪಾಗಿ ನಗು ಬಂತು. ಅದೇ ರೀತಿ ನಾನೂ ಆಕೆಯನ್ನು ನಮ್ಮ ಮನೆಗೆ ಆಹ್ವಾನಿಸುವ ಯಾವ ಸಂದರ್ಭ ಬರಲಿಲ್ಲ. ಮಗಳ ಬರ್ತ್‌ಡೇ ಬಂದಿತು. ಅದನ್ನೇ ನೆಪವಾಗಿರಿಸಿಕೊಂಡು ಆಕೆಯನ್ನು ಮನೆಗೆ ಆಹ್ವಾನಿಸಿದೆ.
“ನಾಡಿದ್ದು ಮಗಳ ಬರ್ತ್‌ಡೇ. ಸರಳವಾಗಿ ಮನೆಯಲ್ಲೇ ಆಚರಿಸುತ್ತೀವಿ. ಭಾನುವಾರ…. ಬಿಡುವಿನ ದಿನ. ಖಂಡಿತಾ ನೀವು ನಮ್ಮ ಮನೆಗೆ ಬರಬೇಕು!”
“ಇಂಥ ಯಾವ ಫಾರ್ಮಾಲಿಟೀಸ್ ಇಟ್ಟುಕೊಳ್ಳಬೇಡಿ. ಸಾಮಾನ್ಯವಾಗಿ ನಾನು ಯಾರ ಮನೆಗಳಿಗೂ ಹೋಗುವುದೇ ಇಲ್ಲ. ಫಂಕ್ಷನ್ಸ್ ಗೂ ನನಗೂ ಬಹಳ ದೂರ. ನಿಮ್ಮನ್ನಂತೂ ದಿನಾ ಇಲ್ಲಿ ನೋಡ್ತಾನೇ ಇರ್ತೀನಿ, ಮತ್ತೆ ಮನೆಗೆ ಬಂದು ಹೊಸದಾಗಿ ಮಾತನಾಡುವುದು ಏನಿರುತ್ತದೆ?
“ನಿಮ್ಮ ಮನೆಯವರು ಯಾರೂ ನನಗೆ ಪರಿಚಯವಿಲ್ಲ. ಅವರನ್ನು ಹೊಸದಾಗಿ ಭೇಟಿಯಾಗಿ ಏನು ಮಾಡಲಿ? ನಾನು ಡಿವೋರ್ಸಿ ಅಂತ ನಿಮ್ಮ ಪತ್ನಿಗೆ ಗೊತ್ತಾದ ತಕ್ಷಣ, ಗಂಡನ ಸಹೋದ್ಯೋಗಿಯಾದ ಈಕೆ ಯಾವಾಗ ಗಂಡನ್ನ ಬುಟ್ಟಿಗೆ ಹಾಕಿಕೊಳ್ಳುವಳೋ ಎಂಬ ಅನುಮಾನ ಬೇಡ ಅಂದ್ರೂ ಬಂದುಬಿಡುತ್ತದೆ….” ಮುಕ್ತಿ ಮಾತು ನಿಲ್ಲಿಸಿದಳು.
ಆಗ ನಾನು ತಕ್ಷಣ ಹೇಳಿದೆ, “ಆದರೆ ಅವಳೇಕೆ ಹಾಗೆ ಯೋಚಿಸಬೇಕು?”
“ಇದು ಬಹಳ ಸಹಜ ವಿಚಾರ ಅಲ್ಲವೇ? ನೀವು ತಪ್ಪು ತಿಳಿಯಬೇಡಿ. ನಾನು ಖಂಡಿತಾದಿ, ಹಾಗಾಗಿ ನನ್ನ ಮಾತು ನೇರ, ಖಡಕ್ ಅನಿಸುತ್ತೆ. ಪಾಪ, ತಮ್ಮ ಮುದ್ದಾದ ಸಂಸಾರದಲ್ಲಿ ತಾವು ಹಾಯಾಗಿದ್ದಾರೆ. ಆಕೆಯ ಮನದಲ್ಲಿ ಇಲ್ಲದ ಸಂಶಯದ ಬೀಜ ಬಿತ್ತುವುದೇಕೆ? ನಾನು ನೀವು ಇಲ್ಲಿ ಶಾಶ್ವತವಾಗಿ ಕೆಲಸ ಮಾಡುವವರೇನೂ ಅಲ್ಲ. ಖಾಸಗಿ ಕಾಲೇಜ್ ಆದ್ದರಿಂದ ಬೇಡ ಅನ್ನಿಸಿದಾಗ ಅವರು ಯಾವಾಗ ಬೇಕಾದರೂ ನಮ್ಮನ್ನು ತೆಗೆಯಬಹುದು.
“ಬೇರೆ ಇನ್ನೊಂದು ಉತ್ತಮ ನೌಕರಿ ಸಿಕ್ಕರೆ ನಾನಂತೂ ಖಂಡಿತಾ ಇಲ್ಲಿಂದ ಹೊರಡುವವಳೇ! ನಿಮ್ಮದೂ ಕುಟುಂಬ ಜವಾಬ್ದಾರಿ ಇದೆ. ಇಲ್ಲಿ ಮುಂದೆ ನಿಮಗೆ ಸೀನಿಯರ್ ಪೊಸಿಷನ್ ಕೊಡದಿದ್ದರೆ ಬೇರೆ ಕಡೆ ನೋಡಿ. ಇಲ್ಲಿ ಕೆಲಸ ಮಾಡುವವರೆಗೂ ಹೀಗೆ ಉತ್ತಮ ಸ್ನೇಹಿತರಾಗಿರೋಣ…..”
“ಅದೇನೋ ನಿಜ. ಯಾವುದು ಹೇಗೇ ಇರಲಿ, ನಮ್ಮ ಸ್ನೇಹ ನಿರಂತರಾಗಿರಲಿ.”
“ಅದು ನಿಜ. ನಮ್ಮ ಸ್ನೇಹಕ್ಕೆ ಎಂದೂ ಚ್ಯುತಿ ಬರಬಾರದು.”
“ಹಾಗಿದ್ದ ಮೇಲೆ…. ವಿಚ್ಛೇದನ ಏಕಾಯಿತು ಎಂದು ಈಗಲಾದರೂ ಹೇಳಬಹುದಲ್ಲ….?”
“ಅದೂ ನಿಜ…. ನಾನು ವಿನಯ್ ಕಾಲೇಜಿನ ದಿನಗಳಿಂದಲೇ ಪ್ರೇಮಿಗಳು. ಅವನು ನನ್ನನ್ನು ಬಹಳ ಹೆಚ್ಚೇ ಪ್ರೀತಿಸುತ್ತಿದ್ದ ಎನ್ನಬೇಕು. ಅವನಿಗೆ ಕೆಲಸ ಸಿಕ್ಕಿ ಸೆಟಲ್ ಆದ ಮೇಲೆ ಮನೆಯವರ ಮರ್ಜಿಗೆ ಕಾಯದೆ ನಾವು ಓಡಿ ಹೋಗಿ ಮದುವೆ ಆದೆವು. ಆಗ ನನಗಿನ್ನೂ ಕೆಲಸ ಇರಲಿಲ್ಲ.
“ಎರಡೂ ಮನೆಯವರೂ ನಮ್ಮನ್ನು ಅಳಿಯ-ಸೊಸೆ ಅಂತ ಒಪ್ಪಿಕೊಳ್ಳಲೇ ಇಲ್ಲ. ಅವನಿಗೆ ಉತ್ತಮ ಕೆಲಸ, ಕಂಪನಿ ಕಡೆಯಿಂದ ಮನೆ ಸಿಕ್ಕಿದ್ದರಿಂದ ಹೊಸ ಜೀವನ ತೀರಾ ಕಷ್ಟಕರವೇನೂ ಆಗಲಿಲ್ಲ. ಅಂತೂ ಹೊಸ ಮನೆಗೆ ಹೋಗಿದ್ದಾಯ್ತು.
“ಮೊದಲ ರಾತ್ರಿಯೇ ನನ್ನ ಗಂಡನಿಗೆ ವಿಚಿತ್ರ ಉಪಾಯ ಹೊಳೆಯಿತು. ಅನಗತ್ಯ ಪ್ರಶ್ನಯೊಂದಿಗೆ ನಮ್ಮ ಸಂಭಾಷಣೆ ಶುರುವಾಯಿತು. ಮುಕ್ತಿ, ಈಗ ನಾವು ಹೊಸ ಜೀವನ ಶುರು ಮಾಡುತ್ತಿದ್ದೇವೆ. ಹೀಗಾಗಿ ನಮ್ಮ ಮದುವೆಗೆ ಮುಂಚಿನ ಯಾವುದೇ ಸಂಬಂಧ ಇದ್ದರೂ ಅದರ ಬಗ್ಗೆ ಮುಕ್ತವಾಗಿ ಮಾತನಾಡಿ ವಿಷಯ ತಿಳಿದುಕೊಳ್ಳೋಣ. ಇದರಿಂದ ಮುಂದೆ ನಮ್ಮಿಬ್ಬರ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ.
“ಹೀಗೆ ಹೇಳುತ್ತಾ ಅವನು ಮದುವೆಗೆ ಮುಂಚೆ ತಾನು ದೈಹಿಕವಾಗಿ ಯಾರು ಯಾರನ್ನು ಕೂಡಿದ್ದೆ ಎಂಬುದನ್ನು ಯಾವ ಸಂಕೋಚ ಇಲ್ಲದೆ, ಬದಲಿಗೆ ಹೆಮ್ಮೆಯಿಂದ ಹೇಳಿಕೊಂಡ. ಅವನ ನೆಂಟರ ದೂರದ ಸೋದರ ಮಾವನ ಮಗಳೊಂದಿಗೆ ಮೊದಲ ಕ್ರಶ್ ಆಗಿದ್ದು, ಅದು ಒನ್ ನೈಟ್ ಸ್ಟೇನಲ್ಲಿ ಮುಗಿಯಿತಂತೆ. ಅವನು ನನ್ನನ್ನು ಪ್ರೇಮಿಸುವಾಗಲೂ ಮನೆ ಹತ್ತಿರದ ಒಬ್ಬ ವಿವಾಹಿತ ಮಹಿಳೆಗೆ ಬಾಯ್‌ಫ್ರೆಂಡ್ ಆಗಿದ್ದನಂತೆ. ಜೊತೆಗೆ ಥ್ರಿಲ್‌ಗಾಗಿ ಫ್ರೆಂಡ್ಸ್ ಜೊತೆ ವೇಶ್ಯಾಗೃಹಕ್ಕೂ ಹೋಗಿದ್ದು ಉಂಟಂತೆ…. ಹಾಗೆ ಹೇಳಿಕೊಳ್ಳುವುದರಲ್ಲಿ ಅವನಿಗೆ ನಾಚಿಕೆ, ಸಂಕೋಚ ಏನೂ ಬಾಧಿಸಲಿಲ್ಲ. ಇಷ್ಟೆಲ್ಲ ಸಾಹಸ ಕೊಚ್ಚಿಕೊಂಡ ಮೇಲೆ ನೀನು ಹೇಳು ಎಂದ.
“ನಾನು ಬಹಳ ಹೊತ್ತು ನೆನಪಿಸಿಕೊಂಡು, 10ನೇ ತರಗತಿಯಲ್ಲಿ ಏನೂ ಅರಿಯದ ಹುಚ್ಚು ಆವೇಶದಲ್ಲಿ ನಡೆದುದನ್ನು ಹಾಗೇ ಹೇಳಿದೆ. ನನಗಾಗ 16 ವರ್ಷ ಇರಬೇಕು. ಮನೆ ಹತ್ತಿರವೇ ಪಿಯುಸಿ ಓದುತ್ತಿದ್ದ ಹುಡುಗನೊಬ್ಬ 18ರವನು ನನಗೆ ಗಣಿತ ಹೇಳಿಕೊಡಲು ಬರುತ್ತಿದ್ದ. ಒಂದು ಸಂಜೆ ನಮ್ಮ ತಾಯಿ ತಂದೆ ಮದುವೆ ಆರತಕ್ಷತೆಗೆ ಹೊರಟಿದ್ದರು. ಆಗ ಮಳೆ ಬೇರೆ ಬರುತ್ತಿತ್ತು.
“ಪಾಠ ಮುಗಿದ ಮೇಲೆ ನಾನು ಅವನಿಗೆ ಕಾಫಿ ಮಾಡಿ ಕೊಟ್ಟೆ. ಅದು ಇದೂ ಮಾತನಾಡುತ್ತಾ ನನ್ನನ್ನು ಚುಂಬಿಸಿದ. ಮುಂದೆ…. ಯಾವುದನ್ನೂ ವಿರೋಧಿಸಲಾರದೆ, ಆಕರ್ಷಣೆಯ ಸೆಳೆತಕ್ಕೆ ಬಿದ್ದು ನಾವು ಒಂದಾದೆವು. ಮಾರನೇ ದಿನ ನನಗೆ ಬಹಳ ಗಾಬರಿ ಎನಿಸಿತು. ಅವನು ಬಿ.ಇ ಕಲಿಯುವ ಸಲುವಾಗಿ ಬೇರೆ ಊರಿಗೆ ಹೋದವನು ಮತ್ತೆ ಭೇಟಿ ಆಗಲೇ ಇಲ್ಲ…. ಅದೊಂದು ಅನುಭವ…. ಎಂದು ಅವನಿಗೆ ಹೇಳಿದೆ.
“ಇದನ್ನು ಕೇಳಿಸಿಕೊಂಡ ನನ್ನ ಪತಿಯ ಮುಖದ ರಂಗು ಪೂರ್ತಿ ಇಳಿದುಹೋಯಿತು. ಅವನ ಮುಖದಲ್ಲಿ ಹಲವಾರು ಭಾವನೆಗಳ ಏರಿಳಿತ ಕಂಡುಬಂತು. ನನ್ನ ಬಗ್ಗೆ ಬೇಸರ, ಧಿಕ್ಕಾರದ ಭಾವಗಳೇ ತುಂಬಿದ್ದವು. ಇದನ್ನು ನೀನು ನನಗೆ ಹೇಳದಿದ್ದರೆ ಚೆನ್ನಾಗಿತ್ತು ಎಂದು. `ಛೇ…ಛೇ! ಈಗಾಗಲೇ ತನ್ನ ಕನ್ಯತ್ವ ಕಳೆದುಕೊಂಡ ಹೆಣ್ಣನ್ನೇ ನಾನು ಮದುವೆ ಆಗಿರುವುದು….? ಅದೂ ನಿನಗೆ ಗೊತ್ತಿತ್ತು ಅಂತೀಯಾ… ನಿನ್ನಂಥ ಹೆಣ್ಣಿಗಾಗಿ ನಾನು ನನ್ನ ಮನೆ, ಕುಲ, ಬಾಂಧವ್ಯ ಎಲ್ಲಾ ಬಿಟ್ಟು ಬಂದಿರುವೆ….?’ ಎಂದು ಬೇಸರಪಟ್ಟುಕೊಂಡ.
“ಇದನ್ನು ಕೇಳಿ ನನಗೂ ಕೆಟ್ಟ ಕೋಪ ಬಂತು. ಏನು ಬಾಯಿಗೆ ಬಂದಂತೆ ಮಾತನಾಡುತ್ತಿರುವೆ? ಇಂಥ ಕುಕೃತ್ಯ ಮಾಡಿರುವ ನೀನು ಮಾತ್ರ ಮಹಾ ಶೀಲವಂತನೋ? ಇದರಿಂದ ನಿನ್ನ ನಡತೆಗೆ ಕಳಂಕ ತಗುಲಲಿಲ್ಲವೇ, ನಾನು ಮಾತ್ರ ನಡತೆಗೆಟ್ಟಳೋ? ನಿನ್ನ ಹಾಗೆಯೇ ನಾನೂ ಮನೆ, ಕುಲ, ಬಾಂಧವ್ಯ ಎಲ್ಲವನ್ನೂ ಬಿಟ್ಟು ಬರಲಿಲ್ಲವೇ? ನಾನಾಗಿ ನಿನ್ನ ಪೂರ್ವಚರಿತ್ರೆ ಕೇಳಲಿಲ್ಲ. ನೀನಾಗಿ ಕೆಣಕಿ ಕೇಳಿದ್ದಲ್ಲದೆ, ಪ್ರಾಮಾಣಿಕವಾಗಿ ನಾನು ಉತ್ತರಿಸಿದ್ದಕ್ಕೆ ಈಗ ನನ್ನ ಮೇಲೆ ಗೂಬೆ ಕೂರಿಸುವುದಾ? ನೀನು ಸಾಚಾ ನಾನು ಪಾಪಿ ಅಂದ್ರೆ ಹೇಗೆ?
“ನನ್ನ ಗತಕಾಲದ ಚರಿತ್ರೆಗೂ ನಿನಗೂ ಸಂಬಂಧವೇ ಇಲ್ಲ. ಆಗ ನೀನಾರೆಂದು ಸಹ ನನಗೆ ಗೊತ್ತಿರಲಿಲ್ಲ. ಆದರೆ ನನ್ನ ಸ್ನೇಹ, ಪ್ರೇಮ ಎಲ್ಲಾ ಪಡೆದಿದ್ದರೂ ನೀನು ಪರರ ಸಂಗ ಬಿಡಲಿಲ್ಲ….“
ನನ್ನ ಮಾತು ಕೇಳಿ ಅವನು, ನಿನ್ನ ಕಥೆ ಬೇರೆ, ನನ್ನದೇ ಬೇರೆ. ನಾನು ಗಂಡಸು…. ಏನು ಬೇಕಾದರೂ ಮಾಡಬಹುದು, ಎಂದ.
“ಓಹೋ….. ನಿನಗೊಂದು ನೀತಿ ನನಗೊಂದು ನೀತಿಯೇ? ಗಂಡಸಿನ ಹಲವು ತಪ್ಪುಗಳೂ ಸರಿ, ಹೆಣ್ಣಿನ ಒಂದು ತಪ್ಪು ಅಕ್ಷಮ್ಯವೇ?
“ಅದನ್ನು ನೀನು ಮದುವೆಗೆ ಮೊದಲೇ ಹೇಳಬೇಕಿತ್ತು ಎಂದು ರೇಗಾಡಿದ. ನೀನು ಆಗಲೇ ಕೇಳಿದ್ದರೂ ಇದನ್ನೇ ಹೇಳುತ್ತಿದ್ದೆ, ಜೊತೆಗೆ ನೀನೂ ಸಹ ನಿನ್ನ ಸಾಹಸದ ಬಗ್ಗೆ ನನಗೆ ಆಗ ಹೇಳಲಿಲ್ಲವಲ್ಲ….? ಗೊತ್ತಿದ್ದರೆ ನಿನ್ನನ್ನು ನಾನ್ಯಾಕೆ ಮದುವೆ ಆಗುತ್ತಿದ್ದೆ ಎಂದಾಗ ನನ್ನೊಂದಿಗೆ 2 ದಿನ ಮಾತನಾಡುವುದನ್ನೇ ಬಿಟ್ಟುಬಿಟ್ಟ.
“ಹೀಗೆ ಹ್ಞೂಂ…..ಉಹ್ಞೂಂ….. ಎಂಬ ಮಾತುಗಳಲ್ಲೇ 2-3 ವಾರ ಕಳೆಯಿತು. ಸದಾ ಮುಖವನ್ನು ಊದಿಸಿ ಇರಿಸಿಕೊಳ್ಳುತ್ತಿದ್ದ. ಅವನ ಮೂಡ್ ಸದಾ ಕೆಟ್ಟಿರುತ್ತಿತ್ತು.
“ಹೀಗೆ ತಿಂಗಳು ಕಳೆದಾಗ ನನಗೂ ಸಾಕಾಗಿ ಹೋಯ್ತು. ನಾನೇ ಕೊನೆಗೆ ತಾಳಲಾರದೆ ಹೇಳಿದೆ, ಎಷ್ಟು ದಿನ ಹೀಗೆ ಹೊಂದಾಣಿಕೆ ಇಲ್ಲದೆ ತೋರಿಕೆಗೆ ಬಾಳಬೇಕು? ಇಬ್ಬರಿಗೂ ಈ ಸಂಬಂಧ ಹಳಸಿದೆ, ನಾವು ಕೂಡಲೇ ಬೇರೆ ಆಗೋಣ ಎಂದೆ.
“ಮದುವೆ ಆದ ಒಂದೇ ತಿಂಗಳಿಗೆ ವಿಚ್ಛೇದನವೇ? ಜನ ಏನು ಅಂದುಕೊಳ್ತಾರೆ? ಇದೆಲ್ಲ ಸಾಧ್ಯವೇ….. ಎಂದು ಎಗರಾಡಿದ…..
“ಯಾವ ಜನ….. ಯಾವ ಸಮಾಜ? ಯಾರನ್ನು ಹೇಳಿಕೇಳಿ ನಾವು ಮದುವೆ ಆದ್ವಿ? ಆದ್ದರಿಂದ ಈಗಿಂದೀಗಲೇ ನಾವು ಬೇರೆ ಆಗೋಣ, 1 ವರ್ಷ ಕಳೆದ ತಕ್ಷಣ ಮ್ಯೂಚುಯೆಲ್ಸ್ ಆಧಾರದಿಂದ ವಿಚ್ಛೇದನ ಪಡೆಯೋಣ ಎಂದು ಒಪ್ಪಿಸಿ, ಅಂದೇ ಲಾಯರ್ ಬಳಿ ಹೋಗಿ ವಿಚ್ಛೇದನಕ್ಕೆ ಅರ್ಜಿ ನೀಡಿ, ಇಬ್ಬರೂ ಸಹಿ ಹಾಕಿ ಬಂದೆವು. ತಕ್ಷಣ ನಾನು ತವರಿಗೆ ಹೋದೆ, ಅವನು ತನ್ನ ಮನೆಗೆ ಹೋದ. ಅದಾದ 1 ವರ್ಷದಲ್ಲಿ ಡಿವೋರ್ಸ್ ಆಯ್ತು.”
“ಇನ್ನೂ ಕೆಲವು ದಿನಗಳ ಅವಕಾಶ ಕೊಟ್ಟು ನೋಡಬೇಕಿತ್ತೇನೋ…..?” ನಾನು ನೊಂದು ನುಡಿದೆ.
“ಎಷ್ಟು ದಿನಗಳ ಕಾಲಾವಕಾಶ ಕೊಟ್ಟರೂ ಅಷ್ಟೇ ಕಾರ್ತಿಕ್. ಇಂಥ ಗಂಡಸರಿಗೆ ಅಂಥ ಪ್ರಶ್ನೆ ಕೇಳಿದ ಮೇಲೆ ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತು ಸಹ ಇರಬೇಕು. ತನ್ನದೆಲ್ಲ ಸರಿ, ನಾನು ಮಾಡಿದ್ದು ಅಕ್ಷಮ್ಯ ಅಪರಾಧ ಎನ್ನುವ ಅಂಥ ಗಂಡಸಿನ ಜೊತೆ ನಾನೇಕೆ ಬಾಳಬೇಕು? ಅವನು ಹಾಕುವ 1 ಹಿಡಿ ಅನ್ನ, ಬಟ್ಟೆಗಾಗಿ ಇಡೀ ಜೀವನ ದಾಸಿಯಾಗಿ ಅವನ ಕಾಲಡಿ ಬಿದ್ದಿರಲೆ?
“ಅಂಥ ಜೀವನ ನನಗೆಂದೂ ಬೇಕಿಲ್ಲ! ತಾನೆಂಥ ಹಲ್ಕ ಕೆಲಸ ಮಾಡಿದ್ದರೂ ತನ್ನ ಹೆಂಡತಿ ಆದವಳು ಭಾರಿ ಅಪರಾಧ ಮಾಡಿ ಪತಿತೆ ಆಗಿದ್ದಾಳೆ ಎಂದು ಸಮಾಜಕ್ಕೆ ಅವಳನ್ನು ಧರ್ಮಪತ್ನಿ ಎಂದು ತೋರಿಸಿಕೊಳ್ಳದಿರುವ ಗಂಡಸು ಅದೆಂಥ ಗಂಡ?”
“ಗಂಡಸಾದವನು ವಿಚ್ಛೇದಿತನಾದರೂ ಹಾಯಾಗಿ ಬದುಕಿರಬಲ್ಲ. ಆದರೆ ಡಿವೋರ್ಸಿ ಹೆಂಗಸು ನೆಮ್ಮದಿಯಾಗಿರಲು ಸಾಧ್ಯವೇ?” ನಾನು ಕೇಳಿದೆ.
“ಯಾಕೆ ಸಾಧ್ಯವಿಲ್ಲ? ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಕೇಳುತ್ತಿಲ್ಲ ಎಂದ ಮೇಲೆ ನಾನೇಕೆ ಈ ಸಮಾಜಕ್ಕೆ ಹೆದರಿ ಬಾಳಲಿ? ನನ್ನ ಬದುಕು… ನನ್ನ ದಾರಿ….. ಧೈರ್ಯವಾಗಿ ಮುಂದುವರಿಯುವೆ. ಜನ ವಿಚ್ಛೇದಿತ ಹೆಣ್ಣಿನ ಬಗ್ಗೆ ಮಾತ್ರ ಯಾಕೆ ಕೆಟ್ಟದಾಗಿ ನೋಡಬೇಕು? ವಿಚ್ಛೇದನ ಪಡೆದ ಗಂಡಸು ಕೂಡ ಅಷ್ಟೇ ತಪ್ಪಿತಸ್ಥನಲ್ಲವೇ? ಆದರೆ ಈ ಸಮಾಜ ಅದನ್ನು ನಿರ್ಲಕ್ಷಿಸುತ್ತದೆ. ಹಾಗೆ ಮಾಡುವವರಾರು? ಇಂಥ ವಿಚ್ಛೇದಿತ ಗಂಡಸಿಗೆ ಮತ್ತೆ ತಮ್ಮ ಮನೆಯ ಹೆಣ್ಣನ್ನು ಮದುವೆಗೆ ಕೊಟ್ಟು ಅವನನ್ನು ಅಳಿಯನೆಂದು ಒಪ್ಪಿಕೊಂಡು ಸುಖೀ ಗೃಹಸ್ಥನನ್ನಾಗಿ ಅವನನ್ನು ಮಾಡಿದವರು ನಮ್ಮ ಸಮಾಜದವರೇ ಅಲ್ಲವೇ?
“ಮೊದಲು ನಮ್ಮ ಸಮಾಜ ತನ್ನ ದೃಷ್ಟಿಕೋನ ಬದಲಿಸಲಿ, ಇಲ್ಲದಿದ್ದರೆ ಅದಕ್ಕೆ ಸಡ್ಡು ಹೊಡೆದು ನಮ್ಮಂಥ ಯುವಜನತೆ ಮುಂದುವರಿಯಬೇಕಷ್ಟೆ. ಅದು ಆಗಲಿಲ್ಲವೋ ಡೋಂಟ್ ಕೇರ್ ಎಂದು ನನ್ನ ಪಾಡಿಗೆ ನಾನು ಇರ್ತೀನಿ, ಆದರೆ ಸ್ವಂತ ವ್ಯಕ್ತಿತ್ವವೇ ಇಲ್ಲದ ಇಂಥ ನಾಮರ್ದ ಗಂಡನ ಜೊತೆ ನಾನೆಂದೂ ಬಾಳಲಾರೆ. ಡಿವೋರ್ಸ್ ಆದ ಮಾತ್ರಕ್ಕೆ ನನ್ನ ಜೀವನವೇ ಹಾಳಾಗಿಹೋಯಿತು ಎಂದು ನಾನೇಕೆ ಭಾವಿಸಲಿ? ಇಂಥದ್ದಕ್ಕೆ ಹೆದರಿ ನಾನೇಕೆ ಹೇಡಿಯಂತೆ ಆತ್ಮಹತ್ಯೆಗೆ ಯತ್ನಿಸಲಿ? ಬಾಳುವೆ…. ಬಾಳಿಯೇ ಎಲ್ಲವನ್ನೂ ಎದುರಿಸುವೆ. ಹೌದು, ನಾನು ಡಿವೋರ್ಸಿ! ಏನೀಗ? ಎನಿ ಪ್ರಾಬ್ಲಮ್?”
ಅವಳ ನಿರರ್ಗಳ, ನಿಚ್ಚಳ ವಾಗ್ಝರಿಗೆ ನಾನು ಮೂಕನಾದೆ. ಏನು ತಾನೇ ಹೇಳಲು ಸಾಧ್ಯ? ಅವಳ ಸತ್ಯಸಂಧ ಗುಣ, ಪ್ರಾಮಾಣಿಕ ವ್ಯವಹಾರ, ನೇರ ನುಡಿ, ಸ್ವಾಭಿಮಾನಿ ನಡೆ ಮೆಚ್ಚಿಕೊಳ್ಳುವಂತೆ ಮಾಡಿತು. ಎಷ್ಟೇ ಪ್ರಭಾವಿತನಾಗಿದ್ದರೂ ಅವಳ ಹಿತಕ್ಕಾಗಿ, “ಮುಕ್ತಿ, ಹೆಣ್ಣಿಗೆ ಕೆಲವೊಂದು ವಿಷಯಗಳನ್ನು ತನ್ನಲ್ಲೇ ಅಡಗಿಸಿಕೊಳ್ಳುವ ಗುಣ ಬೇಕು. ಅದನ್ನು ತೋರ್ಪಡಿಸಿಕೊಳ್ಳದಿರುವುದೇ ಉತ್ತಮ.”
ಅವಳು ಕೋಪಗೊಂಡು ನನ್ನತ್ತ ನೋಡುತ್ತಾ, “ಅದು ಹೇಗೆ ಸರಿ ಕಾರ್ತಿಕ್? ಪಾಪ ಮಾಡಿದ್ದರೆ, ಮೋಸ, ವಂಚನೆ, ಅಪರಾಧ ಮಾಡಿದ್ದರೆ ಸ್ವಾರ್ಥಕ್ಕಾಗಿ ಅದನ್ನು ಮುಚ್ಚಿಟ್ಟುಕೊಳ್ಳಬೇಕೇ ವಿನಾ ಖಂಡಿತವಾದಿಯಾಗಿ ಇದ್ದುದನ್ನು ಇದ್ದಂತೆ ಹೇಳಿದರೆ ತಪ್ಪೇನಿದೆ? ಅವನು ಅದನ್ನು ಮುಚ್ಚಿಟ್ಟುಕೊಳ್ಳದೆ ಹೇಳಿದರೆ ನಾನೇಕೆ ಹಿಂಜರಿಯಲಿ? ನಾನು ಹೆಣ್ಣು ಎಂದು ಚುಚ್ಚಿ ಹೇಳುವ ಇಂಥ ಸಂಬಂಧಗಳೇ ನನಗೆ ಬೇಡ! ಗಂಡಿಗೊಂದು, ಹೆಣ್ಣಿಗೊಂದು ಮಾನದಂಡವೇಕೆ?
“ನಾನು ಸ್ವಾಭಿಮಾನಿ. ಸುಶಿಕ್ಷಿತೆ… ನಾನು ಬದುಕಿ ಬಾಳಬಲ್ಲೇ ಎಂಬ ಆತ್ಮಸ್ಥೈರ್ಯವಿದೆ, ವಿಶ್ವಾಸವಿದೆ. ಮುಂದೆಯೂ ಇಂಥ ದುಷ್ಟ ಸ್ವಾರ್ಥ ಮನೋಭಾವ ತೋರುವ ಗಂಡು ಸಿಗಬಹುದು. ಈಗ ಒಳ್ಳೆಯವನಾಗಿದ್ದು ನಂತರ ಬದಲಾಗಬಹುದು. ಹೀಗಾಗಿ ನನಗೆ ಈ ಮದುವೆ ಎಂಬ ವ್ಯವಸ್ಥೆಯೇ ಬೇಡ ಎನಿಸಿದೆ. ಜೀವನವಿಡೀ ಹೀಗೆಯೇ ಇದ್ದು ನೆಮ್ಮದಿಯಾಗಿ ಇರುತ್ತೇನೆ….” ಎಂದು ಮಾತು ಮುಗಿಸಿದಳು. ಇಂಥವರು ಮುಂದೆ ಎಲ್ಲೇ ಅರ್ಜಿ ಕೊಡಬೇಕಾಗಿ ಬಂದರೂ ಅದರಲ್ಲಿ ಒಂಟಿ, ವಿವಾಹಿತೆ, ಡಿವೋರ್ಸಿ ಎಂದು ವೈಯಕ್ತಿಕ ವಿವರಗಳನ್ನು ಏಕೆ ಕೆದಕಿ ಕೇಳುತ್ತಾರೋ? ಅವರ ಕೆಲಸ ಸರಿ ಇದ್ದ ಮೇಲೆ ವ್ಯಕ್ತಿಗತ ವಿವರದ ಅಗತ್ಯವಾದರೂ ಏಕೆ ಬೇಕು? ನಮ್ಮ ಸಮಾಜವನ್ನು ಅಷ್ಟು ಬೇಗ ಬದಲಿಸಲು ಸಾಧ್ಯವೇ?
ನಮ್ಮ ಕಾಲೇಜಿನಲ್ಲೇ ಬೇರೆ ಬೇರೆ ವಿಭಾಗದವರು ಮುಕ್ತಿ ವಿಚ್ಛೇದಿತೆ ಎಂದು ಬಹಳ ಸಡಿಲವಾಗಿ ಮಾತನಾಡಿದರು. ಒಂದು ಕೈ ಟ್ರೈ ಮಾಡಬಾರದೇಕೆ ಎಂಬ ದುಷ್ಟ ಗಂಡಸರಿಗೇನೂ ಕೊರತೆ ಇರಲಿಲ್ಲ. ಅವರೆಲ್ಲರನ್ನೂ ಮೆಟ್ಟಿ ನಿಂತು ತನ್ನಷ್ಟಕ್ಕೇ ತಾನು ಬದುಕು ಕಟ್ಟಿಕೊಳ್ಳ ಬಯಸುವ ಇಂಥ ಮುಕ್ತಿಯರ ಚಿಂತೆಗಳಿಗೆ ಎಲ್ಲಿದೆ ಮುಕ್ತಿ?