ಕಥೆ – ಸುಧಾ ಪ್ರಮೋದ್ 

ತಿಂಗಳ ಅವಧಿ ಕಳೆದ ನಂತರ ಗೀತಾ ತಾನು ಕೆಲಸ ಮಾಡುತ್ತಿದ್ದ ಶಾಲೆಗೆ ಹೋದಳು. ಮೊದಲಿದ್ದ ಪ್ರಿನ್ಸಿಪಾಲ್ ವರ್ಗವಾಗಿ 2 ದಿನಗಳ ಹಿಂದೆಯಷ್ಟೇ ಹೊಸ ಪ್ರಿನ್ಸಿಪಾಲರು ಬಂದಿರುವರೆಂದು ಸ್ಕೂಲ್‌ ಗೇಟ್‌ನ ಹತ್ತಿರವೇ ಸಿಕ್ಕಿದ ಮೀರಾ ಹೇಳಿದಳು. ಸ್ಟಾಫ್‌ ರೂಮ್ ಪ್ರವೇಶಿಸುತ್ತಿದ್ದಂತೆಯೇ ಸಹೋದ್ಯೋಗಿಗಳೆಲ್ಲ ಹತ್ತಿರ ಬಂದು ಸಂತಾಪ ಸೂಚಿಸಿದರು.

“ಗೀತಾ, ನೀನು ಮತ್ತೆ ಜಾಯಿನ್‌ ಆಗಿದ್ದು ಒಳ್ಳೆಯದಾಯಿತು. ಆ ದುಃಖದ ವಾತಾವರಣದಿಂದ ಸ್ವಲ್ಪ ಹೊರಗೆ ಬಂದರೆ ನಿನ್ನ ಮನಸ್ಸು ಹಗುರವಾಗುತ್ತದೆ. ಹೊಸ ಪ್ರಿನ್ಸಿಪಾಲ್‌ ಸರ್‌ ಇಂದು ಎಲ್ಲ ಸ್ಟಾಫ್‌ನ್ನು ಭೇಟಿ ಮಾಡಲೆಂದು ಒಂದು ಮೀಟಿಂಗ್‌ ಇಟ್ಟಿದ್ದಾರೆ. ನೀನೂ ಒಟ್ಟಿಗೆ ಭೇಟಿ ಮಾಡಬಹುದು. ಇಲ್ಲ ಅಂದರೆ ಆಮೇಲೆ ನೀನೊಬ್ಬಳೇ ಹೋಗಿ ಭೇಟಿ ಮಾಡಬೇಕಾಗುತ್ತಿತ್ತು.”

ಪ್ರೇಯರ್‌ ಮುಗಿಸಿ ಪ್ರಿನ್ಸಿಪಾಲ್ ಚೇಂಬರ್‌ ಮುಂದೆ ಹಾದುಹೋಗುವಾಗ ಗೀತಾಳಿಗೆ ಅವರ ನೇಮ್ ಪ್ಲೇಟ್‌ ಕಾಣಿಸಿತು. ಅದರಲ್ಲಿ `ಪ್ರಿನ್ಸಿಪಾಲ್ ವಿನಯ್‌ ಕುಮಾರ್‌’ ಎಂದು ಬರೆದಿತ್ತು.

ಸಂಜೆ ಮೀಟಿಂಗ್‌ ಮುಗಿಸಿ ಮನೆಗೆ ಹೋಗುವಾಗ ಗೀತಾಳಿಗೆ ಕೊಂಚ ಹಾಯಾದ ಅನುಭವವಾಯಿತು. ಇಲ್ಲವಾದರೆ ಅದೇ ಮಾತುಗಳು….. ಕೇಳಿ ಕೇಳಿ ಅವಳಿಗೆ ಬದುಕುವ ಇಚ್ಛೆಯೇ ಇಲ್ಲವಾದಂತಿತ್ತು. ಹೊಸ ಪ್ರಿನ್ಸಿಪಾಲರ ಸೌಮ್ಯ ಸ್ವಭಾವದ ಬಗ್ಗೆ ಯೋಚಿಸುತ್ತಾ ನಡೆದವಳಿಗೆ ಮನೆ ತಲುಪಿದ್ದೇ ತಿಳಿಯಲಿಲ್ಲ.

ರವೀಂದ್ರನ ಆಕಸ್ಮಿಕ ಮರಣದಿಂದ ಅವಳಿಗೆ ದಿಕ್ಕು ತೋಚದಂತಾಗಿತ್ತು. ಅವನೊಡನೆ ಕಳೆದ ಹತ್ತು ವರ್ಷಗಳ ವೈವಾಹಿಕ ಜೀವನದಿಂದ ಅವಳು ರೋಸಿಹೋಗಿದ್ದಳು. ಮದುವೆಯಾಗುವಾಗ ಅವಳೂ ಎಲ್ಲ ಹುಡುಗಿಯರಂತೆ ಭಾವೀ ಜೀವನದ ಬಗ್ಗೆ ಕನಸು ಕಂಡಿದ್ದಳು. ಆದರೆ ನಾಲ್ಕೇ ದಿನಗಳಲ್ಲಿ ರವೀಂದ್ರನ ಮದ್ಯವ್ಯಸನ ಮತ್ತು ಕಟು ಸ್ವಭಾವ ಅವಳನ್ನು ಕಂಗೆಡಿಸಿದ್ದವು.

ತಂದೆ-ತಾಯಿಯರ ಏಕಮಾತ್ರ ಪುತ್ರನಾಗಿದ್ದ ರವೀಂದ್ರ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ. ಆದರೆ ಮದ್ಯಪಾನದ ಚಟ ಅವನ ತಲೆಗೇರಿತ್ತು. ಮದ್ಯಪಾನವಿಲ್ಲದೆ ಅವನು ಒಂದು ದಿನ ಇರಲಾಗುತ್ತಿರಲಿಲ್ಲ. ಗೀತಾ ಪ್ರಾರಂಭದಲ್ಲಿ ಅವನ ಚಟ ತಪ್ಪಿಸಲು ಬಹಳ ಪ್ರಯತ್ನಪಟ್ಟಳು. ಆದರೆ ವರ್ಷಗಳ ಅಭ್ಯಾಸ ಅವನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು.

ಅಂಗಡಿ ಮುಚ್ಚಿದ ಮೇಲೆ ರವೀಂದ್ರ ಗೆಳೆಯರೊಡನೆ ಸರಿರಾತ್ರಿಯವರೆಗೆ ಮಜಾ ಮಾಡಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು. ಆ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಪತ್ನಿಯನ್ನು ಎಳೆದುಕೊಂಡು ಕಾಮಕೇಳಿ ನಡೆಸುವುದು ಅವನ ಮತ್ತೊಂದು ಚಟವಾಗಿತ್ತು. ಅದನ್ನು ಗೀತಾ ವಿರೋಧಿಸಿದರೆ ಹೊಡೆತ ತಿನ್ನಬೇಕಾಗುತ್ತಿತ್ತು.

ಹೀಗೆ 1 ತಿಂಗಳ ಹಿಂದೆ ಮದ್ಯಪಾನ ಮಾಡಿ ಬೈಕ್‌ ನಡೆಸಿಕೊಂಡು ಬರುತ್ತಿದ್ದ ರವೀಂದ್ರ ಕಾರೊಂದಕ್ಕೆ ಡಿಕ್ಕಿ ಹೊಡೆದು ಅಸುನೀಗಿದ. ಅವನ ಸಾವಿನಿಂದ ಗೀತಾ ಮತ್ತು ಅವಳ ಅತ್ತೆ ಮಾವಂದಿರು ಕಂಗಾಲಾದರು. ಬಂದಿದ್ದ ನೆಂಟರಿಷ್ಟರೆಲ್ಲ ಶೋಕ ಸಂತಾಪ ಸೂಚಿಸುತ್ತಾ 13ನೇ ದಿನಗಳ ಕಾರ್ಯದ ನಂತರ ಒಬ್ಬೊಬ್ಬರಾಗಿ ಹೊರಟುಹೋದರು.

ರವೀಂದ್ರ ಹೆಸರಿಗೆ ಮಾತ್ರ ಗೀತಾಳ ಪತಿಯಾಗಿದ್ದ. ಆದರೆ ಅವನ ದುರ್ನಡತೆಯಿಂದಾಗಿ ಅವಳಿಗೆ ಎಂದೂ ಪತಿಯ ಬಗ್ಗೆ ಪ್ರೀತಿಯ ಭಾವನೆ ಮೂಡಲಿಲ್ಲ. ಬದಲಾಗಿ ಅವಳಿಗೆ ಅತ್ತೆ ಮಾಂದಿರ ಬಗೆಗೇ ಹೆಚ್ಚಿನ ಪ್ರೀತಿ ಇತ್ತು.

ಮಗ ರವೀಂದ್ರನ ದುರಭ್ಯಾಸವನ್ನು ಕಂಡಿದ್ದರೂ ಅವನ ತಂದೆ ತಾಯಿಯರು ಅದನ್ನು ನೇರವಾಗಿ ವಿರೋಧಿಸಲು ಸಾಧ್ಯವಿರಲಿಲ್ಲ. ಈ ಬಗ್ಗೆ ಅವರನ್ನು ಅಪರಾಧೀ ಪ್ರಜ್ಞೆ ಕಾಡುತ್ತಿದ್ದುದರಿಂದ ಅವರು ಸೊಸೆಗೆ ಹೆಚ್ಚಿನ ಪ್ರೀತಿ ತೋರಿಸಿ ಅವಳಿಗೆ ಯಾವುದೇ ವಸ್ತುವಿನ ಕೊರತೆಯಾಗದಂತೆ ನಿಗಾವಹಿಸುತ್ತಿದ್ದರು. ಅವಳನ್ನು ಸೊಸೆಯಂತಲ್ಲ, ಮಗಳಂತೆ ಕಾಣುತ್ತಿದ್ದರು.

ಮಗನ ಆಕಸ್ಮಿಕ ಸಾವಿನಿಂದ ತಂದೆ ತಾಯಿಯರು ಕುಗ್ಗಿಹೋದರು, ಊಟ ತಿಂಡಿ ಬಿಟ್ಟು ರೋಧಿಸಿದರು. ಕೆಲವು ದಿನಗಳು ಕಳೆದಂತೆ ವಿಶ್ವನಾಥ್‌ ಸ್ವಲ್ಪ ಸುಧಾರಿಸಿಕೊಂಡು ಪತ್ನಿಗೂ ಸಮಾಧಾನ ಹೇಳಿದರು. ತಾವು ಹೀಗೆ ಕೊರಗುತ್ತಾ ಕುಳಿತರೆ ಸೊಸೆಯ ಗತಿಯೇನು? ಅವಳ ಜೀವನದ ಪಾಡೇನು ಎಂದು ಯೋಚಿಸಿದರು. ಸೊಸೆಯನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡು, “ಗೀತಾ, ಹೋದವನು ಹೋಗಿಯಾಯಿತು. ಅಳುತ್ತಾ ಕೂರುವುದರಿಂದ ಅವನು ವಾಪಸ್‌ ಬರುವುದಿಲ್ಲ. ಇನ್ನೂ ಮುಂದೆ ನಮಗೆ ಮಗ, ಮಗಳು, ಸೊಸೆ ಎಲ್ಲ ನೀನೇ. ನಿನ್ನ ಕೆಲಸಕ್ಕೆ ಮತ್ತೆ ಜಾಯಿನ್‌ ಆಗು. ಮಗುವಿನ ಭವಿಷ್ಯದ ಕಡೆಗೂ ಗಮನ ಕೊಡಬೇಕು. ನಾವು ಅಂಗಡಿ ನೋಡಿಕೊಳ್ಳುತ್ತೇವೆ,” ಎಂದರು.

ಗೀತಾ ಮದುವೆಗೆ ಮೊದಲು ಒಂದು ಸ್ಕೂಲ್‌ನಲ್ಲಿ ಟೀಚರ್‌ ಆಗಿದ್ದಳು. ಮದುವೆಯಾದ ಮೇಲೆ ರವೀಂದ್ರನಿಂದ ಕೆಲಸದ ಬಗ್ಗೆ  ಯಾವುದೇ ಆಕ್ಷೇಪವಿರಲಿಲ್ಲ. ಹೀಗಾಗಿ ಅವನ ಸಾವಿನ ದಿನದವರೆಗೂ ಅವಳು ಕೆಲಸಕ್ಕೆ ಹೋಗುತ್ತಿದ್ದಳು. ಈಗ ತಿಂಗಳ ನಂತರ ಮತ್ತೆ ಹೋಗತೊಡಗಿದಳು.

ರಾತ್ರಿ ಅಡುಗೆಮನೆಯ ಕೆಲಸವನ್ನೆಲ್ಲ ಮುಗಿಸಿ ಮಗ ಕಾರ್ತಿಕ್‌ನ ಪಕ್ಕ ಮಲಗಿದ ಗೀತಾಳಿಗೆ ಅಂದು ಶಾಲೆಯಲ್ಲಿ ನಡೆದ ಮೀಟಿಂಗ್‌ ಮತ್ತೆ ಮತ್ತೆ ನೆನಪಾಗುತ್ತಿತ್ತು. ಹೊಸ ಪ್ರಿನ್ಸಿಪಾಲರ ವ್ಯಕ್ತಿತ್ವದಿಂದ ಅವಳು ಬಹಳ ಪ್ರಭಾವಿತಳಾಗಿದ್ದಳು.

ಒಂದು ದಿನ ಶಾಲೆಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು. ಮರವೊಂದರ ಕೆಳಗೆ ನಿಂತು ಗೀತಾ ರಿಕ್ಷಾಗಾಗಿ ಕಾಯುತ್ತಿದ್ದಳು. ಆಗ ಪ್ರಿನ್ಸಿಪಾಲ್‌ ವಿನಯ್‌ ಸರ್‌ರವರ ಕಾರು ಅವಳ ಬಳಿ ಬಂದು ನಿಂತಿತು.

“ಮೇಡಂ, ಬನ್ನಿ. ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ,” ಕಾರಿನ ಬಾಗಿಲು ತೆರೆಯುತ್ತಾ ವಿನಯ್‌ ಸರ್‌ ಹೇಳಿದರು.

“ಬೇಡ ಸರ್‌, ನಾನು ರಿಕ್ಷಾದಲ್ಲಿ ಹೋಗುತ್ತೇನೆ. ನೀವು ತೊಂದರೆ ತೆಗೆದುಕೊಳ್ಳಬೇಡಿ,” ಗೀತಾ ಸಂಕೋಚದಿಂದ ಹೇಳಿದಳು.

“ಮಳೆ ಜೋರಾಗಿದೆ. ನೀವು ಮಳೆಯಲ್ಲಿ ನೆನೆದು ಕಾಯಿಲೆ ಬಿದ್ದರೆ ನಾಳೆ ಲೀವ್‌ ಅಪ್ಲಿಕ್ಲೇಶನ್‌ ಕೊಡಬೇಕಾಗುತ್ತೆ, ಬನ್ನಿ…..”

ಗೀತಾ ಮತ್ತೆ ಮಾತನಾಡದೆ ಕಾರಿನಲ್ಲಿ ಕುಳಿತಳು.

ಕಾರ್‌ ಸ್ಮಾರ್ಟ್‌ ಮಾಡುತ್ತಾ ವಿನಯ್‌ ಸರ್‌ ಕೇಳಿದರು, “ಮೇಡಂ, ನಿಮ್ಮ ಮನೆ ಎಲ್ಲಿ? ಮನೆಯಲ್ಲಿ ಯಾರು ಯಾರು ಇದ್ದೀರಿ?”

“ನಾವು ರಾಘವೇಂದ್ರ ಕಾಲೋನಿಯಲ್ಲಿದ್ದೇವೆ. ಮನೆಯಲ್ಲಿ ನನ್ನ ಅತ್ತೆ, ಮಾವ ಮತ್ತು ನನ್ನ 10 ವರ್ಷದ ಮಗ ಇದ್ದಾರೆ.”

“ನಿಮ್ಮ ಪತಿ….?”

“ಸರ್‌, ಈಗ್ಗೆ 1 ತಿಂಗಳ ಹಿಂದೆ ಅವರು ತೀರಿಕೊಂಡರು,” ಗೀತಾ ತಗ್ಗಿದ ಸ್ವರದಲ್ಲಿ ಹೇಳಿದಳು.

ಇದನ್ನು ಕೇಳಿ ವಿನಯ್‌ ಸರ್‌ ಸಹ ಪೆಚ್ಚಾದರು, “ಸಾರಿ…… ಐ ಆ್ಯಮ್ ವೆರಿ ಸಾರಿ…..”

“ಪರವಾಗಿಲ್ಲ ಸರ್‌….. ನಿಮಗೆ ವಿಷಯ ತಿಳಿದಿರಲಿಲ್ಲ. ಆದ್ದರಿಂದ ಕೇಳಿದಿರಿ….. ಮತ್ತೆ ನಿಮ್ಮ ಮನೆಯಲ್ಲಿ…..?”

“ಮೇಡಂ, ನಾನೊಬ್ಬ ಒಂಟಿ ಮನುಷ್ಯ. ತಂದೆ, ತಾಯಿ ಅಪಘಾತದಲ್ಲಿ ಹೋಗಿಬಿಟ್ಟರು. ನನಗೆ ಮದುವೆಯಾಗಿಲ್ಲ. ಹೀಗಾಗಿ ನಾನೊಬ್ಬನೇ ಮನೆಯಲ್ಲಿ ಇದ್ದೇನೆ.”

ಅಷ್ಟರಲ್ಲಿ ಗೀತಾಳ ಮನೆ ಕಾಣಿಸಿತು, “ಸರ್‌, ಇಲ್ಲೇ ನಿಲ್ಲಿಸಿ. ಎದುರುಗಡೆ ಇರುವುದೇ ನಮ್ಮ ಮನೆ,” ಮನೆಯತ್ತ ಕೈ ತೋರಿಸುತ್ತಾ ಗೀತಾ ಹೇಳಿದಳು. ಕಾರಿನಲ್ಲಿ ಬಂದಿದ್ದರೂ ಗೀತಾಳ ಸೀರೆ ಒದ್ದೆಯಾಗಿತ್ತು. ಬಟ್ಟೆ ಬದಲಾಯಿಸುತ್ತಾ ವಿನಯ್‌ ಸರ್‌ ಬಗ್ಗೆಯೇ ಯೋಚಿಸುತ್ತಿದ್ದಳು. ಎಂತಹ ಸುಸಂಸ್ಕೃತ ನಡವಳಿಕೆಯುಳ್ಳ ವ್ಯಕ್ತಿ….. ರವೀಂದ್ರ ಹೇಗಿದ್ದರು? ಪತಿಯ ನೆನಪಾದೊಡನೆ ಮನಸ್ಸಿಗೆ ಬೇಸರವಾಯಿತು.

ಅದೇಕೋ ವಿನಯ್‌ ಸರ್‌ ಜೊತೆ ಮಾತನಾಡಿದರೆ ಮನಸ್ಸಿಗೆ ಹಿತವಾಗಿರುತ್ತದೆ ಎಂದುಕೊಂಡಳು.

ಒಂದು ದಿನ ಗೀತಾ ಸ್ಕೂಲ್‌ ತಲುಪಿದಂತೆಯೇ ಜವಾನ ಬಂದು ಹೇಳಿದ, “ಮೇಡಂ, ಪ್ರಿನ್ಸಿಪಾಲ್‌ ಸರ್‌ ನಿಮ್ಮನ್ನು ಕರೆಯುತ್ತಿದ್ದಾರೆ.”

ಗೀತಾ ಪ್ರಿನ್ಸಿಪಾಲರ ಛೇಂಬರ್‌ಗೆ ಹೋದಾಗ ವಿನಯ್‌ ಸರ್‌ ಹೇಳಿದರು.

“ಮೇಡಂ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಾಳೆ ಒಂದು ಸೆಮಿನಾರ್‌ ಇದೆ. ನೀವು ಅಟೆಂಡ್‌ ಮಾಡಬೇಕು.”

“ಆಗಲಿ ಸರ್‌,” ಗೀತಾ ಹಿಂಜರಿಕೆಯಿಂದ ಹೇಳಿದಳು.

“ಹೋಗುವ ಬಗ್ಗೆ ಯೋಚಿಸಬೇಡಿ. ನಾನು ಬರುತ್ತೇನೆ. ನಾಳೆ 10 ಗಂಟೆಗೆ ಇಲ್ಲಿಂದಲೇ ಹೊರಡೋಣ.”

“ಸರಿ ಸರ್‌,” ಎಂದು ಹೇಳಿ ಗೀತಾ ಹೊರ ನಡೆದಳು.

ಸ್ಟಾಫ್‌ರೂಮ್ ಗೆ ಬಂದು ಕುಳಿತ ಗೀತಾಳ ಎದೆಬಡಿತ ಜೋರಾಗಿತ್ತು. ವಿನಯ್‌ ಸರ್‌ ಜೊತೆಯಲ್ಲಿ ಹೋಗುವ ಕಲ್ಪನೆಯೇ ಅವಳನ್ನು ರೋಮಾಂಚಿತಗೊಳಿಸಿತ್ತು. ತನ್ನ ಮೆದುಳು ಮತ್ತು ಹೃದಯದಲ್ಲಿ ಒಟ್ಟಿಗೆ ಅನೇಕ ಗಂಟೆಗಳು ಬಾರಿಸುತ್ತಿರುವಂತೆ ಅವಳಿಗೆ ಭಾಸವಾಯಿತು. ಮುಂದಿನ ಕ್ಷಣದಲ್ಲಿ ಅವಳು ವಾಸ್ತವ ಲೋಕಕ್ಕೆ ಬಂದಳು, ಇದೇಕೆ ನಾನು ನವಯುವತಿಯಂತೆ ಯೋಚಿಸುತ್ತಿರುವೆ ಎಂದು ಆಶ್ಚರ್ಯಗೊಂಡಳು. ಶಾಲೆಯ ಗಂಟೆ ಹೊಡೆದಾಗ ತಲೆ ಕೊಡವಿಕೊಂಡು ತನ್ನ ತರಗತಿಯ ಕಡೆ ನಡೆದಳು.

ಮರುದಿನ ಬೆಳಗ್ಗೆ ಅವಳು ಕೂದಲಿಗೆ ಸಡಿಲವಾಗಿ ಕ್ಲಿಪ್ ಹಾಕಿ ಹಣೆಗೆ ಪುಟ್ಟದೊಂದು ಬಿಂದಿ ಅಂಟಿಸಿ ಕೇಸರಿ ಬಣ್ಣದ ಸೀರೆಯುಟ್ಟು ಶಾಲೆಗೆ ಹೋದಳು. ಅವಳನ್ನು ನೋಡಿ ವಿನಯ್‌ ಸರ್‌, “ನೀವು ಬಹಳ ಸ್ಮಾರ್ಟ್‌ ಆಗಿ ಕಾಣುತ್ತಿರುವಿರಿ,” ಎಂದರು. ಅವಳು ನಾಚಿ ತಲೆ ತಗ್ಗಿಸಿದಳು.

ಸೆಮಿನಾರ್‌ ಮುಗಿಸಿ ಮನೆಗೆ ಬಂದ ಮೇಲೆ ಅವಳು ಮತ್ತೆ ಮತ್ತೆ  ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಳು. ಸರ್‌ ಹೇಳಿದ ಒಂದು ವಾಕ್ಯ ಅವಳಲ್ಲಿ ಅನುರಾಗದ ಅಲೆಯನ್ನು ಎಬ್ಬಿಸಿತ್ತು.

ಮಾರನೆಯ ಬೆಳಗ್ಗೆ ಮಗ ಕಾರ್ತಿಕ್‌ನ ಶಾಲೆಯಲ್ಲಿ ಪಿಟಿಎಂ ಇತ್ತು. ಅದಕ್ಕಾಗಿ ಸಿದ್ಧಳಾಗಿ ಗೀತಾ ಕೋಣೆಯಿಂದ ಹೊರಗೆ ಬಂದಾಗ ಅವಳನ್ನು ನೋಡಿ ಕಾರ್ತಿಕ್‌, “ಅಮ್ಮಾ, ಎಷ್ಟೊಂದು ದಿನಗಳಾದ ಮೇಲೆ ನೀವು ಇಷ್ಟು ಚೆನ್ನಾಗಿರುವ ಸೀರೆ ಉಟ್ಟಿದ್ದೀರಿ. ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ,” ಎಂದ.

“ಹೌದು ಗೀತಾ, ನೀನು ನಿಜವಾಗಲು ಸುಂದರವಾಗಿ ಕಾಣುತ್ತಿದ್ದೀಯಾ,” ಅವಳ ಅತ್ತೆಯೂ ದನಿಗೂಡಿಸಿದಾಗ ಅವಳಿಗೆ ತನ್ನ ಕಿವಿಯನ್ನು ನಂಬಲಾಗಲಿಲ್ಲ. ವಿನಯ್‌ ಸರ್‌ರ ಗಾಳಿಯೇ ಬೀಸಿ, ತಾನು ಎಲ್ಲರ ಕಣ್ಣಿಗೂ ಸುಂದರವಾಗಿ ಕಾಣುತ್ತಿರುವೆನೇ ಎಂದು ಯೋಚಿಸಿದಳು. ಮತ್ತೊಮ್ಮೆ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಳು. ಅದೇಕೋ ಇತ್ತೀಚೆಗೆ ಅವಳಿಗೆ ಶಾಲೆಗೆ ಹೋಗುವಾಗ ಚೆನ್ನಾಗಿ ಅಲಂಕರಿಸಿಕೊಂಡು ಹೋಗಲು ಇಷ್ಟವಾಗುತ್ತಿತ್ತು.

ವಿವಾಹವಾದ ನಂತರ ರವೀಂದ್ರನ ಶುಷ್ಕ ವ್ಯವಹಾರದಿಂದಾಗಿ ಅವಳಿಗೆ ತನ್ನ ಅಲಂಕಾರದ ಕಡೆ ಗಮನವೇ ಇರುತ್ತಿರಲಿಲ್ಲ. ಪ್ರೀತಿಪ್ರೇಮದ ಭಾವನೆಗಳೆಲ್ಲ ಮುದುಡಿ ಮಲಗಿದ್ದವು. ಈಗ ವಿನಯ್‌ ಸರ್‌ ಮತ್ತು ಅವರ ಮಾತುಗಳು ಅವಳ ಸುಪ್ತ ಮನಸ್ಸಿನಲ್ಲಿ ಮುದುಡಿ ಹೋಗಿದ್ದ ಭಾವನೆಗಳು ಚಿಗುರಿ ಮೇಲೇಳುವಂತೆ ಮಾಡಿದವು.

ವಿನಯ್‌ ಸರ್‌ ಈಚೆಗೆ ದಿನ ಒಂದಲ್ಲ ಒಂದು ಕಾರಣದಿಂದ ತನ್ನನ್ನು ತಮ್ಮ ಕ್ಯಾಬಿನ್‌ಗೆ ಕರೆಸುತ್ತಿದ್ದಾರೆ ಎಂಬುದನ್ನು ಗೀತಾ ಗಮನಿಸಿದ್ದಳು. ಹೀಗೆ ಒಂದು ದಿನ ಒಬ್ಬ ವಿದ್ಯಾರ್ಥಿಯ ಗೈರು ಹಾಜರಿಯ ಬಗ್ಗೆ ವಿಚಾರಿಸಲು ಕರೆದಿದ್ದಾಗ, ಆ ಹುಡುಗ ಕಳೆದ ಒಂದು ತಿಂಗಳಿನಿಂದ ಶಾಲೆಗೆ ಬಂದಿಲ್ಲವೆಂದು ಗೀತಾ ತಿಳಿಸಿದಳು.

“ಹೌದಾ…? ಇರಲಿ ಬಿಡಿ…. ನಾನು ಫೋನ್‌ ಮಾಡಿ ಅವನ ಬಗ್ಗೆ ತಿಳಿದುಕೊಳ್ಳುತ್ತೇನೆ. ಅದು ಹಾಗಿರಲಿ, ನೀವು ಏಕೆ ಯಾವಾಗಲೂ ಸಪ್ಪಗಿರುತ್ತೀರಿ? ಬದುಕು ಸಿಕ್ಕಿರುವಾಗ ಸಂತೋಷವಾಗಿರಬೇಕು. ಆದದ್ದು ಆಗಿಹೋಗಿದೆ. ಇದನ್ನು ಮರೆತು ಮುಂದೆ ನಡೆಯಿರಿ. ಸರಿ, ಸಾಯಂಕಾಲ ನನ್ನ ಜೊತೆ ಕಾಫಿಗೆ ಬನ್ನಿ.”

“ನಾನು…..! ಇಲ್ಲ ಸರ್‌, ಅದು ಚೆನ್ನಾಗಿರುವುದಿಲ್ಲ. ನಾನು ಹೇಗೆ ಬರುವುದಕ್ಕಾಗುತ್ತದೆ…..?” ಗೀತಾ ತಡವರಿಸಿದಳು.

ಅವಳು ಮೆಲ್ಲನೆದ್ದು ತಲೆ ಬಾಗಿಸಿ ಕ್ಯಾಬಿನ್‌ನ ಬಾಗಿಲಿನತ್ತ ನಡೆಯುತ್ತಿರುವಾಗ ವಿನಯ್‌ ಸರ್‌ ಧ್ವನಿ ಕೇಳಿಸಿತು, “ಸಾಯಂಕಾಲ 7 ಗಂಟೆಗೆ ಇಲ್ಲೇ ಸರ್ಕಲ್‌ನಲ್ಲಿರುವ ಕಾಫಿ ಡೇನಲ್ಲಿ ನಿಮಗಾಗಿ ಕಾಯುತ್ತೇನೆ. ಬರುವುದು ಬಿಡುವುದು ನಿಮ್ಮಿಷ್ಟ.”

ಈ ಅನಿರೀಕ್ಷಿತ ಆಹ್ವಾನದಿಂದ ಅವಳ ಉಸಿರಾಟ ವೇಗವಾಯಿತು. ಅವಳ ಕ್ಲಾಸ್‌ಗೆ ಆಗ ಗೇಮ್ಸ್ ಪೀರಿಯಡ್‌ ಇದ್ದುದರಿಂದ ಕೆಂಪಾದ ಮುಖ ಹೊತ್ತು ಮಕ್ಕಳ ಎದುರಿಗೆ ಹೋಗಿ ನಿಲ್ಲುವ ಪ್ರಮೇಯ ತಪ್ಪಿತು. ಮತ್ತೆ ಮತ್ತೆ ವಿನಯ್‌ ಸರ್‌ ಹೇಳಿದ ಮಾತು ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ಅವಳು ದ್ವಂದ್ವದಲ್ಲಿ ಸಿಲುಕಿ ತನಗೇನಾಗಿದೆ ಎಂದು ತೊಳಲಿದಳು. ಪತಿ ರವೀಂದ್ರನಿಗೆ ಎಂದೂ ಎಚ್ಚರಗೊಳ್ಳದಿದ್ದ ಭಾವನೆಗಳು ಇಂದು ವಿನಯ್‌ ಸರ್‌ಗೆ…..  ವಿನಯ್‌ ಸರ್‌ ಸಾಯಂಕಾಲ ತನ್ನನ್ನು ನಿರೀಕ್ಷಿಸುತ್ತಿರುತ್ತಾರೆ. ಹೋಗುವುದೋ ಅಥವಾ ಬೇಡವೋ…. ಆ ದಿನ ಅವಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗಲಿಲ್ಲ.

ಮನೆಗೆ ಬಂದು ತಿಂಡಿ, ಕಾಫಿ ತಯಾರಿಸಿ ಎಲ್ಲರಿಗೂ ಕೊಟ್ಟಳು. 6 ಗಂಟೆಯಾಯಿತು. ಹೇಗೆ ಹೋಗವುದು….. ಅತ್ತೆ, ಮಾವನಿಗೆ ಏನು ಹೇಳುವುದು….. ಅಲ್ಲಿ ಸರ್‌….. ಗೀತಾ ಅನ್ಯಮನಸ್ಕಳಾಗಿದ್ದುದನ್ನು ಗಮನಿಸಿ ಮಾವ ಕೇಳಿದರು, “ಏನು ಯೋಚಿಸುತ್ತಿದ್ದೀಯಮ್ಮ?”

ಕದ್ದು ಸಿಕ್ಕಿಕೊಂಡವಳಂತೆ ಅವಳು ಪೆಚ್ಚಾದಳು. ಕೊಂಚ ಸಾವರಿಸಿಕೊಂಡು ಹೇಳಿದಳು, “ಏನಿಲ್ಲ ಮಾವ, ನನ್ನ ಗೆಳತಿಯ ಮಗುವಿನ ಬರ್ತ್‌ಡೇ ಪಾರ್ಟಿ ಇದೆ. ಹೋಗಲೋ ಬೇಡವೋ ಅಂತ ಯೋಚಿಸುತ್ತಿದ್ದೆ. ಏಕೆಂದರೆ ವಾಪಸ್‌ ಬರಲು ತಡವಾಗಿಬಿಡುತ್ತದೆ.”

“ಹೋಗಿಬಿಟ್ಟ ಬಾಮ್ಮ, ನಿನಗೂ ಸ್ವಲ್ಪ ಬದಲಾವಣೆ ಆಗುತ್ತೆ…. ಆದರೆ ಬೇಗ ಬರುವುದಕ್ಕೆ ಪ್ರಯತ್ನ ಮಾಡು,” ಅತ್ತೆ ಹೇಳಿದರು.

“ಆಗಲಿ ಅಮ್ಮ, ಬೇಗನೆ ಬರುತ್ತೇನೆ,” ಎಂದು ಹೇಳಿ ಗೀತಾ ಪರ್ಸ್‌ ತೆಗೆದುಕೊಂಡು ಹೊರಟಳು. ದಾರಿಯಲ್ಲಿ ಹೋಗುತ್ತಾ ಅವಳಿಗೆ ತಾನು ಕಾಲೇಜು ಹುಡುಗಿಯಂತೆ ನಡೆದುಕೊಂಡಿದ್ದನ್ನು ನೆನೆದು ನಗು ಬಂದಿತು. ವಿನಯ್‌ ಸರ್‌ ಪ್ರಭಾವ ಅವಳ ಮೇಲೆ ಎಷ್ಟಾಗಿತ್ತೆಂದರೆ, ಅವಳು ಮೊದಲ ಬಾರಿಗೆ ಅತ್ತೆ ಮಾವನೊಂದಿಗೆ ಸುಳ್ಳು ಹೇಳಲು ಮುಂದಾಗಿದ್ದಳು.

ಕಾಫಿ ಡೇನಲ್ಲಿ ವಿನಯ್‌ ಸರ್‌ ಟೇಬಲ್ ಒಂದರ ಮುಂದೆ ಕುಳಿತು ಅವಳಿಗಾಗಿ ಕಾಯುತ್ತಿದ್ದರು, “ನೀವು ಬರುವಿರಿ ಎಂದು ನನಗೆ ಗೊತ್ತಿತ್ತು,” ಅವಳನ್ನು ನೋಡುತ್ತಿದ್ದಂತೆಯೇ ವಿನಯ್‌ ಹೇಳಿದರು.

“ಹೇಗೆ ಗೊತ್ತಾಯಿತು?”

“ನನಗೆ ಅನ್ನಿಸುತ್ತಿತ್ತು,” ರೊಮ್ಯಾಂಟಿಕ್‌ ರೀತಿಯಲ್ಲಿ ಹೇಳಿದರು.

“ಏನು ತೆಗೆದುಕೊಳ್ಳುತ್ತೀರಿ, ಹಾಟ್‌ ಆರ್‌ ಕೋಲ್ಡ್?”

“ಕಾಫಿ ಆಗಬಹುದು,” ಗೀತಾ ಸಂಕೋಚದಿಂದ ಹೇಳಿದಳು.

“ಆರಾಮವಾಗಿ ಕುಳಿತುಕೊಳ್ಳಿ. ನಾನು ನಿಮ್ಮ ಬಾಸ್‌ ಅನ್ನುವುದನ್ನು ಮರೆತುಬಿಡಿ. ಇಲ್ಲಿ ನಾವು ಸ್ನೇಹಿತರು ಅಷ್ಟೇ.”

“……”

“ನಾನು ಒಂದು ಮಾತು ಹೇಳಲೇ? ನೀವು ಈವತ್ತೂ ಸಹ ಬಹಳ ಸುಂದರವಾಗಿ ಕಾಣುತ್ತಿದ್ದೀರಿ. ನೀವು ಇಷ್ಟು ರೂಪವಂತರು, ಯೋಗ್ಯರು, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಅತ್ತೆ ಮಾವಂದಿರನ್ನು ತಂದೆ ತಾಯಿಯರ ಹಾಗೆ ನೋಡಿಕೊಳ್ಳುತ್ತಿದ್ದೀರಿ. ಹಳೆಯದನ್ನೆಲ್ಲ ಮರೆತು ಸುಖವಾಗಿ ಬದುಕುವುದನ್ನು ಕಲಿತುಕೊಳ್ಳಿ.”

“ಸರ್‌, ನಿಮಗೆ ನನ್ನ ಬಗ್ಗೆ ಗೊತ್ತಿಲ್ಲ. ನನ್ನ ಪತಿ…..”

“ಗೀತಾ, ಮೊದಲನೆಯದಾಗಿ ನನಗೆ ನಿಮ್ಮ ವಿಷಯ ಗೊತ್ತು. ಬೇರೆ ಟೀಚರ್ಸ್ ಅದನ್ನೆಲ್ಲ ಹೇಳಿದ್ದಾರೆ. ಎರಡನೆಯದಾಗಿ ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ. ಹಿಂದಿನ ಕಹಿ ನೆನಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ವರ್ತಮಾನ ಏಕೆ ಹಾಳು ಮಾಡಿಕೊಳ್ಳುತ್ತೀರಿ? ವರ್ತಮಾನದಲ್ಲಿ ನೆಮ್ಮದಿ ಇದ್ದರೆ ಭವಿಷ್ಯ ಉತ್ತಮಗೊಳ್ಳುತ್ತದೆ…. ನಾನು ಹೇಳಿದ ವಿಷಯವನ್ನು ಯೋಚನೆ ಮಾಡಿ ಮತ್ತು ನೀವು ಬದುಕುವ ರೀತಿಯನ್ನು ಕೊಂಚ ಬದಲಾಯಿಸಿಕೊಳ್ಳಿ.”

ವಿನಯ್‌ ಸರ್‌ ಮೊದಲ ಬಾರಿಗೆ ಅವಳ ಹೆಸರು ಹೇಳಿ ಮಾತನಾಡಿದ್ದರು. ಅವರೇನನ್ನು ಹೇಳಲು ಬಯಸುತ್ತಿದ್ದಾರೆಂದು ಗೀತಾಳಿಗೆ ಅರ್ಥವಾಗಲಿಲ್ಲ.

ಗೀತಾ ಗಡಿಯಾರ ನೋಡಿದಳು. 8 ಗಂಟೆಯಾಗುತ್ತಿದ್ದುದನ್ನು ಕಂಡು ಕೂಡಲೇ ಎದ್ದು ನಿಂತಳು, “ಸರ್‌, ತಡವಾಗುತ್ತಿದೆ. ಮನೆಯಲ್ಲಿ ಕಾಯುತ್ತಿರುತ್ತಾರೆ, ನಾನು ಹೊರಡುತ್ತೇನೆ,” ಎಂದು ಹೇಳಿ ಹೊರಗೆ ನಡೆದಳು.

ಮನೆ ತಲುಪಿದ ಗೀತಾ ಬಟ್ಟೆ ಬದಲಾಯಿಸುತ್ತಾ ಯೋಚಿಸತೊಡಗಿದಳು, `ಇದೇನಾಗಿದೆ ನನಗೆ? ಪ್ರೀತಿ ಹುಟ್ಟುತ್ತಿದೆಯೇ? ನಾನೊಬ್ಬಳು ವಿಧವೆ….. ಅತ್ತೆ ಮಾವ ಮತ್ತು ಮಗನ ಜವಾಬ್ದಾರಿ ನನ್ನ ಮೇಲಿದೆ…. ಇದನ್ನೆಲ್ಲ ಮರೆಯುತ್ತಿದ್ದೇನೆಯೇ?’ ಮಲಗುವ ಹೊತ್ತಿಗೆ ಅವಳಿಗೆ ತಲೆನೋವು ಬಂದಿತ್ತು.

ಮಾರನೆಯ ದಿನ ಸ್ಕೂಲ್‌‌ಗೆ ಹೋದಾಗ ವಿನಯ್‌ ಸರ್‌ ಎದುರಿಗೇ ಸಿಕ್ಕಿದರು. ಅವಳನ್ನು ನೋಡುತ್ತಲೇ, “ಮ್ಯಾಮ್, ಫ್ರೀ ಮಾಡಿಕೊಂಡು ನನ್ನ ಕ್ಯಾಬಿನ್‌ಗೆ ಬನ್ನಿ, ನಿಮಗೊಂದು ಕೆಲಸ ಇದೆ,” ಎಂದರು.

“ಆಗಲಿ ಸರ್‌,” ಎಂದು ಹೇಳಿ ಅವಳು ಸ್ಟಾಫ್‌ರೂಮ್ ಗೆ ಹೋದಳು. ಅವಳು ತಮ್ಮ ಕ್ಯಾಬಿನ್‌ಗೆ ಬಂದಾಗ ವಿನಯ್‌ ಸರ್‌ ಹೇಳಿದರು.

“ಮೇಡಂ,  ನಾಳೆ ಶಿಕ್ಷಣ ವಿಭಾಗದ ಒಂದು ಮೀಟಿಂಗ್‌ ಇದೆ. ನೀವು ನನ್ನ ಜೊತೆ ಬರಬೇಕು.”

“ಸರ್‌, ನಾನು ಜೂನಿಯರ್‌….. ಬೇರೆ ಟೀಚರ್‌ನ್ನು…..” ಸರ್‌ ಜೊತೆ ಹೋಗುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು.

“ಯಾರನ್ನು ಕರೆದುಕೊಂಡು ಹೋಗಬೇಕು ಅನ್ನುವುದು ನನಗೆ ಸೇರಿದ್ದು….. ನೀವು ನನ್ನ ಜೊತೆ ಹೊರಡಬೇಕು ಅಷ್ಟೇ.”

“ಸರಿ ಸರ್‌,” ಎಂದು ಹೇಳಿ ಅವಳು ಸ್ಟಾಫ್‌ರೂಮ್ ಗೆ ಬಂದಳು. `ಇದೆಲ್ಲ ಏನಾಗುತ್ತಿದೆ….? ವಿನಯ್‌ ಸರ್‌ಗೆ ನನ್ನ ಮೇಲೆ….  ನನಗೆ ವಿನಯ್‌ ಸರ್‌ ಮೇಲೆ….’ ಎಂದು ಅವಳು ಯೋಚಿಸುತ್ತಿರುವಂತೆ ಗಂಟೆ ಹೊಡೆಯಿತು. ಅವಳು ಕ್ಲಾಸ್‌ಗೆ ಬಂದಳು. ಆದರೆ ಸರಿಯಾಗಿ ಪಾಠ ಮಾಡಲು ಅವಳಿಂದಾಗಲಿಲ್ಲ. ವಿನಯ್‌ ಸರ್‌ ಮೋಡಿ ಅವಳ ಮೈ ಮನಸ್ಸುಗಳನ್ನು ಆವರಿಸಿತ್ತು.

ಮೀಟಿಂಗ್‌ ಮುಗಿಸಿ ಬರುವಾಗ ವಿನಯ್‌ ಸರ್‌ ಹೋಟೆಲಿನ ಮುಂದೆ ಕಾರ್‌ ನಿಲ್ಲಿಸಿದರು, “ಬನ್ನಿ, ಕಾಫಿ ಕುಡಿದು ಹೋಗೋಣ.”

ಗೀತಾಳಿಗೆ ಅಳುಕಿದ್ದರೂ ಬೇಡವೆನ್ನಲು ಆಗಲಿಲ್ಲ.

ಕಾಫಿ ಕುಡಿಯುತ್ತಾ ವಿನಯ್‌ ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು, “ಗೀತಾ, ನಿಮ್ಮ ಭವಿಷ್ಯದ ಬಗ್ಗೆ ಏನಾದರೂ ಯೋಚಿಸಿದ್ದೀರಾ?”

“ಹಾಗೆಂದರೆ…. ನನಗೆ ಅರ್ಥವಾಗಲಿಲ್ಲ,” ಅರ್ಥವಾಗದವಳಂತೆ ನಟಿಸುತ್ತಾ ಅವಳು ಹೇಳಿದಳು.

“ಹಿಂದೆ ನಡೆದದ್ದನ್ನು ಮರೆತು ಹೊಸ ಉತ್ಸಾಹದಿಂದ ಜೀವನ ಪ್ರಾರಂಭಿಸುವುದರ ಬಗ್ಗೆ ಯೋಚಿಸಿ…. ನಿಮ್ಮ ಹೆಜ್ಜೆ ಹೆಜ್ಜೆಗೂ ಜೊತೆ ನೀಡಲು ನಾನು ಸಿದ್ಧನಿದ್ದೇನೆ. ನಿಮಗೆ ನಾನು ಮೆಚ್ಚುಗೆಯಾಗಿದ್ದರೆ…..” ವಿನಯ್‌ ಸ್ಪಷ್ಟವಾಗಿ ತಮ್ಮ ಇಚ್ಛೆಯನ್ನು ಮಂಡಿಸಿದರು.

ಕೊಂಚ ಹೊತ್ತು ಸುಮ್ಮನೆ ಕುಳಿತಿದ್ದ ಗೀತಾ ಹೇಳಿದಳು, “ಸರ್‌, ತಪ್ಪು ತಿಳಿಯದ್ದಿದರೆ ಒಂದು ಮಾತು ಕೇಳಲೇ…..? ನೀವೇಕೆ ಇನ್ನೂ ವಿವಾಹವಾಗಿಲ್ಲ……?”

“ನೀವು ಸರಿಯಾಗಿ ಕೇಳುತ್ತಿದ್ದೀರಿ. ಮೊದಲು ನಾನು ಕೆರಿಯರ್‌ ರೂಪಿಸಿಕೊಳ್ಳುವುದರ ಕಡೆಗೆ ಹೆಚ್ಚು ಗಮನ ಕೊಟ್ಟೆ. ಆಮೇಲೆ ನನಗೆ ಸರಿ ಎನಿಸುವ ಹುಡುಗಿ ಸಿಗಲೇ ಇಲ್ಲ. ನಮ್ಮ ಜಾತಿಯಲ್ಲಿ ವಿದ್ಯಾವಂತ ಹುಡುಗಿಯರು ಸಿಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ವಿವಾಹ ಮಾಡಿಬಿಡುತ್ತಾರೆ. ನನಗೆ ಚೆನ್ನಾಗಿ ಓದಿಕೊಂಡಿರುವ ಹುಡುಗಿ ಬೇಕಾಗಿತ್ತು. ಹೀಗಾಗಿ ನಾನು ಅವಿವಾಹಿತನಾಗಿಯೇ ಇದ್ದೇನೆ. ಇದೇ ನನ್ನ ಕಥೆ.”

ಅವರ ಮಾತನ್ನು ಕೇಳಿ ಗೀತಾ ಯೋಚನೆಗೊಳಗಾದಳು, `ಅವರ ಜಾತಿಯ ಬಗ್ಗೆ ಯೋಚಿಸಲೇ ಇಲ್ಲ. ಅತ್ತೆ ಮಾವ ಅಂತೂ ಸಂಪ್ರದಾಯಸ್ಥರು. ಆದರೆ ಏನು ಮಾಡಲಾದೀತು…. ಜಾತಿ ನೋಡಿ ಪ್ರೀತಿ ಹುಟ್ಟುವುದಿಲ್ಲ. ಅದು ಹಾಗೇ ಆಗುತ್ತದೆ. ಪ್ರೀತಿಯಲ್ಲಿ ಬುದ್ಧಿಯಲ್ಲ, ಹೃದಯ ಕೆಲಸ ಮಾಡುತ್ತದೆ.’

ಗೀತಾ ತನ್ನದೇ ಯೋಚನೆಯನಲ್ಲಿ ಮುಳುಗಿದ್ದಾಗ ವಿನಯ್‌ ಹೇಳಿದರು, “ಮೇಡಂ, ಯಾವ ಲೋಕದಲ್ಲಿದ್ದೀರಿ?”

“ಸರ್‌, ನಿಮ್ಮ ಮಾತು ಅರ್ಥವಾಯಿತು. ನೀವು ನನ್ನಲ್ಲಿ ಬದುಕುವ ಆಸೆಯನ್ನು ಜಾಗೃತಗೊಳಿಸಿರುವಿರಿ ಮತ್ತು ನಾನು ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಮತ್ತೆ ಪಡೆಯುವಂತೆ ಮಾಡಿರುವಿರಿ. ನಾನು ನಿಮ್ಮ ಜೊತೆಯಲ್ಲಿರುವಾಗ ಈ ಪ್ರಪಂಚ ಅತಿ ಸುಂದರವಾಗಿ ಕಾಣುತ್ತದೆ….. ನನಗೆ ನಿಮ್ಮ ಸಾಂಗತ್ಯ ಇಷ್ಟವಾಗಿದೆ….. ಆದರೆ ನನಗೆ ಕೆಲವು ಅನಿವಾರ್ಯತೆಗಳಿವೆ….. ನಾನು ಒಬ್ಬಳೇ ಅಲ್ಲ, ನನ್ನ ಜೊತೆ ನನ್ನ ಮಗ, ಅತ್ತೆ ಮಾವಂದಿರಿದ್ದಾರೆ.  ಅವರೆಲ್ಲ ನನ್ನನ್ನೇ ಆಶ್ರಯಿಸಿದ್ದಾರೆ.”

“ಸರಿ, ಅವರ ಆಸರೆಯನ್ನು ಯಾರು ಕಸಿಯುತ್ತಿದ್ದಾರೆ? ಅವರಿಂದ ಬೇರೆಯಾಗಲು ಯಾರು ಹೇಳುತ್ತಿದ್ದಾರೆ ಮ್ಯಾಮ್? ನಾನು ಇರುವುದೇ ಒಬ್ಬಂಟಿಗ. ನನಗೆ ಹಿಂದೆ ಮುಂದೆ ಯಾರೂ ಇಲ್ಲ. ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ. ಆದರೆ, ನಿಮ್ಮ ಕುಟುಂಬದವರಿಂದ ನಿಮ್ಮನ್ನು ದೂರ ಮಾಡುವುದಿಲ್ಲ ಎಂದು ನಾನು ಮಾತುಕೊಡುತ್ತೇನೆ.”

“ಆಗಲಿ ಸರ್‌, ಈ ಬಗ್ಗೆ ಯೋಚಿಸುತ್ತೇನೆ,” ಎಂದು ಹೇಳಿ ಅವಳು ಎದ್ದು ನಿಂತಳು.

ಅಂದು ಭಾನುವಾರ. ಗೀತಾ ಅಡುಗೆ ಮನೆಯಲ್ಲಿದ್ದಳು. ಆಗ ವಿಶ್ವನಾಥ್‌ ಕರೆದ ಧ್ವನಿ ಕೇಳಿಸಿತು, “ಗೀತಾ ನೋಡಮ್ಮ, ಯಾರೋ ಬಂದಿದ್ದಾರೆ,” ಕೈ ಒರೆಸಿಕೊಳ್ಳುತ್ತಾ ಹೊರಗೆ ಬಂದಳು. ಅಲ್ಲಿ ವಿನಯ್‌ ಸರ್‌ ಕುಳಿತಿರುವುದನ್ನು ಕಂಡು ಗಡಬಡಿಸಿದಳು. ಸ್ವಲ್ಪ ಸುಧಾರಿಸಿಕೊಂಡು, “ಮಾವ, ಇವರು ನಮ್ಮ ಪ್ರಿನ್ಸಿಪಾಲ್‌ ವಿನಯ್‌ ಸರ್‌….. ಸರ್‌, ಇವರು ನನ್ನ ಅತ್ತೆ ಮಾವ.”

ವಿನಯ್‌ ಎದ್ದು ನಿಂತು ಹಿರಿಯರಿಗೆ ನಮಸ್ಕರಿಸಿದರು.

ವಿಶ್ವನಾಥ್‌ ಪ್ರತಿ ವಂದಿಸುತ್ತಾ ಹೇಳಿದರು, “ನಿಮ್ಮ ಬಗ್ಗೆ ಗೀತಾ ಆಗಾಗ್ಗೆ ಹೇಳುತ್ತಿರುತ್ತಾಳೆ. ಬಹಳ  ಹೊಗಳುತ್ತಿರುತ್ತಾಳೆ.”

ವಿನಯ್‌ ಏನೂ ಹೇಳದೆ ನಸುನಗುತ್ತಿದ್ದರು.

“ಇಂದು ರಜೆ ಇದೆ ಅಂತ ಗೀತಾ ಪೂರಿ ಸಾಗು ಮಾಡಿದ್ದಾಳೆ. ಬನ್ನಿ, ನೀವು ನಮ್ಮ ಜೊತೆ ತಿಂಡಿ ತಿನ್ನಿ,” ವಿಶ್ವನಾಥ್‌ ಹೇಳಿದರು.

“ಓಹೋ! ಬರುವಾಗಲೇ ನನಗೆ ಅದರ ಪರಿಮಳ ಬಂತು. ಅದಕ್ಕೇ ನಾನು ತಿಂಡಿ ತಿನ್ನಲೆಂದು ಬಂದೆ,” ಎಂದು ವಿನಯ್‌ ನಗುತ್ತಾ ಹೇಳಿದಾಗ ಎಲ್ಲರೂ ನಕ್ಕರು.

ತಿಂಡಿ ತಿನ್ನುತ್ತಾ ವಿನಯ್‌, “ಮ್ಯಾಮ್, 2 ದಿನಗಳಿಂದ ನೀವು ಶಾಲೆಗೆ ಬಂದಿರಲಿಲ್ಲ. ನಿಮ್ಮ ಆರೋಗ್ಯ ವಿಚಾರಿಸೋಣ ಅಂತ ಬಂದೆ. ಅಲ್ಲದೆ, ನಾಳೆ ಒಂದು ಮುಖ್ಯವಾದ ಮೀಟಿಂಗ್‌ ಇದೆ. ನೀವು ಬರಬೇಕು,” ಎಂದು ಹೇಳಿ ಹೊರಟರು.

ಅವರು ಹೋದ ನಂತರ ಅತ್ತೆ ಹೇಳಿದರು, “ನಿಮ್ಮ ಸರ್‌ ಬಹಳ ಸೌಮ್ಯ ಮತ್ತು ವಿನಮ್ರ ಸ್ವಭಾವದವರು.”

“ಹೌದು ಅತ್ತೆ, ಅವರು ಒಳ್ಳೆಯವರು ಮತ್ತು ಸರಳ ಸ್ವಭಾದವರು. ಅವರು ಬಂದಂದಿನಿಂದ  ನಮ್ಮ ಶಾಲೆಯ ವಾತಾವರಣವೇ ಬದಲಾಗಿದೆ.”

ಈ ಭೇಟಿಯ ನಂತರ ವಿನಯ್‌  ರಜೆ ಇರುವಾಗ ಒಮ್ಮೊಮ್ಮೆ ಅವಳ ಮನೆಗೆ ಬರತೊಡಗಿದರು. ಕಾರ್ತಿಕ್‌ ಕೂಡ ಅವರಿಗೆ ಚೆನ್ನಾಗಿ ಹೊಂದಿಕೊಂಡು ಅಂಕಲ್ ಅಂಕಲ್ ಎನ್ನುತ್ತಾ ಅವರ ಜೊತೆಗೇ ಇರುತ್ತಿದ್ದ. ಕೆಲವು ಸಲ ಅವರು ಮನೆಯವರನ್ನೆಲ್ಲ ತಮ್ಮ ಕಾರ್‌ನಲ್ಲಿ ಸುತ್ತಾಡಿಸಿ ಕರೆತರುತ್ತಿದ್ದರು. ಸುಮಾರು 6 ತಿಂಗಳ ನಂತರ, ಒಂದು ದಿನ ವಿನಯ್‌ ಮನೆಗೆ ಬಂದಾಗ, ವಿಶ್ವನಾಥರೊಂದಿಗೆ ಕೆಲವು ಮಾತುಗಳನ್ನಾಡಿದ ಮೇಲೆ, “ಅಂಕಲ್, ಗೀತಾಳ ಕೈಹಿಡಿಯಲು ನಾನು ನಿಮ್ಮ ಒಪ್ಪಿಗೆ ಕೇಳುತ್ತಿದ್ದೇನೆ,” ಎಂದರು.

ಈ ಮಾತು ಕೇಳಿ ವಿಶ್ವನಾಥ್‌ ಗರಬಡಿದವರಂತೆ  ಕುಳಿತುಬಿಟ್ಟರು. ಎಷ್ಟು ಹೊತ್ತಾದರೂ ಅವರಿಂದ ಒಂದು ಮಾತು ಹೊರಬಾರದಿದ್ದುದರಿಂದ ವಿನಯ್‌ ಸುಮ್ಮನೆ ಹೊರಟುಹೋದರು.

ಇದಾದ ನಂತರ ಮನೆಯ ವಾತಾವರಣ ವಿಚಿತ್ರವಾಯಿತು. ಅತ್ತೆ ಮಾವಂದಿರು ಗೀತಾಳೊಡನೆ ಮಾತನಾಡುವುದನ್ನೇ ಕಡಿಮೆ ಮಾಡಿಬಿಟ್ಟರು.

ಆ ದಿನ ಗೀತಾ ಒಂದು ಪೀರಿಯಡ್‌ ಮೊದಲೇ ಮನೆಗೆ ಬಂದಳು. ಆಗ ಅತ್ತೆ ಮಾವನ ಸಂಭಾಷಣೆ ಕಿವಿಗೆ ಬಿತ್ತು, “ನೋಡಿ, ನಾವು ಇವಳನ್ನು ನಮ್ಮ ಮಗಳು ಅಂತ ತಿಳಿದುಕೊಂಡೆವು. ಆದರೆ ಇವಳು ನಮ್ಮನ್ನು ಬಿಟ್ಟು ಹೊರಡುವುದಕ್ಕೆ ನೋಡುತ್ತಿದ್ದಾಳೆ. ನಮ್ಮ ಮಗ ಹೋದ ಮೇಲೆ ಇವಳು ಬಣ್ಣದ ಬೀಸಣಿಗೆ ತರಹ ಆಡುತ್ತಿದ್ದಾಳೆ. ಅಲ್ಲದೆ, ಆ ಹುಡುಗ ಬೇರೆ ಕೆಳಜಾತಿಯವನು. ನಮ್ಮ ಬ್ರಾಹ್ಮಣ ಸಮಾಜದಲ್ಲಿ ನಮ್ಮ ಮರ್ಯಾದೆ ಏನಾಗುತ್ತದೆ? ಹೇಗೆ ಎಲ್ಲರಿಗೂ ಮುಖ ತೋರಿಸುವುದು? ಅದಕ್ಕೇ ಹೇಳುವುದು ಸೊಸೆ ಎಂದಿಗೂ ನಮ್ಮವಳಾಗುವುದಿಲ್ಲ ಅಂತ,” ಎಂದು ಹೇಳುತ್ತಾ ಅತ್ತೆ ಅಳತೊಡಗಿದರು.

ಅತ್ತೆ ಮಾವಂದಿರ ಮನಃಸ್ಥಿತಿಯನ್ನು ಕಂಡು ಗೀತಾ ಅಧೀರಳಾದಳು. ಅವರು ಅಸುರಕ್ಷತಾ ಭಾವನೆಯಿಂದ ಚಿಂತಿತರಾಗಿರುವರೆಂದು ಅರಿತಳು. ವಿನಯ್‌ ಸರ್‌ ಬಂದು ತನ್ನ ಜೀವನದಲ್ಲಿ ಇದೆಂತಹ ಬಿರುಗಾಳಿಯನ್ನು ಎಬ್ಬಿಸಿದರು ಎಂದು ಯೋಚಿಸತೊಡಗಿದಳು.

ಅಂದಿನ ರಾತ್ರಿಯನ್ನು ಹೇಗೋ ಕಳೆದು ಬೆಳಗ್ಗೆ ಮನೆಗೆಲಸವನ್ನೆಲ್ಲ ಮುಗಿಸಿ ಗೀತಾ ಶಾಲೆಗೆ ಹೋದಳು. ನೇರವಾಗಿ ವಿನಯ್‌ ಸರ್‌ ಹತ್ತಿರ ಹೋಗಿ ಹೇಳಿದಳು, “ಕೆಲವು ಸಲ ಒಳ್ಳೆಯದನ್ನು ಮಾಡಲು ಹೋದರೆ ಅದರ ಪರಿಣಾಮ ಕೆಟ್ಟದ್ದಾಗುತ್ತದೆ. ನೀವು ಮಾಡಿದುದೂ ಅದೇ ರೀತಿ ಆಗಿದೆ.”

“ಏನಾಯಿತು?”

ನಡೆದುದನ್ನೆಲ್ಲ ಗೀತಾ ವಿವರವಾಗಿ ತಿಳಿಸಿದಳು.

ಕೊಂಚ ಕಾಲ ಗಂಭೀರವಾಗಿ ಯೋಚಿಸಿದ ವಿನಯ್‌, “ಈಗ ನೀವು ಅಸೆಂಬ್ಲಿಗೆ ಹೋಗಿ. ನಾನು ಸಾಯಂಕಾಲ ಮನೆಗೆ ಬರುತ್ತೇನೆ,” ಎಂದರು.

“ಬೇಡ ಸರ್‌, ನೀವು ಬಂದರೆ ಅವರಿಗೆ ಮತ್ತಷ್ಟು ಕೋಪ ಬರುತ್ತದೆ…. ನಿಮ್ಮ ಜಾತಿಯ ಬಗ್ಗೆಯೂ ಅವರಿಗೆ ಸಮಾಧಾನವಿಲ್ಲ.”

“ಏನೂ ಆಗದ ಹಾಗೆ ನಾನು ನೋಡಿಕೊಳ್ಳುತ್ತೇನೆ. ನೀವು ಯೋಚಿಸಬೇಡಿ.”

ಸಾಯಂಕಾಲ 7 ಗಂಟೆಯ ಹೊತ್ತಿಗೆ ವಿನಯ್‌ ಮನೆಗೆ ಬಂದರು. ಸದಾ ಹಸನ್ಮುಖರಾಗಿ ಸ್ವಾಗತಿಸುತ್ತಿದ್ದ ವಿಶ್ವನಾಥ್‌ ಅಂದು ಅಪರಿಚಿತ ಅಪರಾಧಿಯನ್ನು ಕಂಡಂತೆ ವ್ಯವಹರಿಸಿದರು. ಆದರೆ ವಿನಯ್‌ ಅದನ್ನು ಗಮನಿಸದಂತೆ, ವಿಶ್ವನಾಥರಿಗೆ ವಂದಿಸಿ ಕುಶಲ ಪ್ರಶ್ನೆ ಕೇಳಿದರು. ಅವರ ಕೈ ಹಿಡಿದು, “ನಾನು ನಿಮಗೆ ಒಬ್ಬ ಮಗ ಆಗಲಾರೆನೇನು? ನಿಮ್ಮ ಸೊಸೆ ತನ್ನ ಬದುಕಿಗಿಂತ ಹೆಚ್ಚಾಗಿ ನಿಮ್ಮ ಬಗ್ಗೆ ಯೋಚಿಸುತ್ತಾಳೆ. ಅಂತಹವಳಿಗೆ ಬಾಳಿನಲ್ಲಿ ನಾನು ಬೆಂಬಲವಾಗಿ ನಿಲ್ಲಲು ಅವಕಾಶ ಕೊಡುವಿರಾ….? ಮತ್ತೆ ನನ್ನದು ಬೇರೆ ಜಾತಿ ನಿಜ. ಆದರೆ ಜಾತಿಯೇ ಮುಖ್ಯವೇ? ನಾನು ಮತ್ತು ನಿಮ್ಮ ಸೊಸೆ ಸೇರಿ ಈ ಮನೆಯ ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ,” ಎಂದು ನಮ್ರವಾಗಿ ವಿನಂತಿಸಿಕೊಂಡರು.

“ಅದು ಅವಳ ಇಷ್ಟ. ಅದನ್ನು ನಾವೆಲ್ಲಿ ತಡೆದಿದ್ದೇವೆ? ಅವಳ ಬದುಕಿನ ಬಗ್ಗೆ ತೀರ್ಮಾನಿಸುವುದಕ್ಕೆ ಅವಳಿಗೆ ಸ್ವಾತಂತ್ರ್ಯ ಇದೆ,” ಎಂದು ವಿಶ್ವನಾಥರು ಕಟುಸ್ವರದಲ್ಲಿ ನುಡಿದು ಕೋಣೆಗೆ ಹೊರಟುಹೋದರು.

“ಸೊಸೆ ಮತ್ತು ಕಾರ್ತಿಕ್‌ ಹೊರಟುಹೋದರೆ ನಾವು ಒಂಟಿಯಾಗಿಬಿಡುತ್ತೇವೆ. ಈ ವೃದ್ಧಾಪ್ಯದಲ್ಲಿ ನಮ್ಮ ಗತಿ ಏನು? ಮಗ ಅಂತೂ ಮೊದಲೇ ಹೊರಟುಹೋದ. ಈಗ ಸೊಸೆ ಸಹಾ……” ಎಂದು ಅತ್ತೆ ಜೋರಾಗಿ ಅಳತೊಡಗಿದರು.

ವಿನಯ್‌ ಅವರ ಬಳಿಗೆ ಹೋಗಿ ಹೇಳಿದರು, “ಅಮ್ಮಾ, ನಾನು ನಿಮ್ಮ ಸೊಸೆ ಮತ್ತು ಮೊಮ್ಮಗನನ್ನು ಇಲ್ಲಿಂದ ಕರೆದುಕೊಂಡು ಹೋಗಿಬಿಡುತ್ತೇನೆ ಅಂತ ನೀವು ಹೇಗೆ ಯೋಚಿಸಿದಿರಿ? ನಾನು ನಿಮ್ಮೆಲ್ಲರೊಂದಿಗೆ ಇದೇ ಮನೆಯಲ್ಲಿ ವಾಸಿಸುತ್ತೇನೆ. ನಿಮ್ಮ ಸೊಸೆಯ ಮೊದಲ ಷರತ್ತೆಂದರೆ ಅವಳು ತನ್ನ ಅತ್ತೆ ಮಾವಂದಿರನ್ನು ಒಂಟಿಯಾಗಿ ಬಿಟ್ಟು ಬರುವುದಿಲ್ಲವೆಂಬುದು. ನಾನು ನಿಮ್ಮೆಲ್ಲರ ಬಾಳಿನ ಭಾಗವಾಗಲು ಬಯಸುತ್ತೇನೆ.

“ಗೀತಾಳ ಜೀವನದ ಜವಾಬ್ದಾರಿಗಳಲ್ಲಿ ಪಾಲುದಾರನಾಗಬೇಕೆಂಬುದೇ ನನ್ನ ಇಚ್ಛೆ. ನನ್ನಲ್ಲಿ ವಿಶ್ವಾಸವಿರಿಸಿ. ನಾನು ಜೀವನವಿಡೀ ನಿಮ್ಮ ಜೊತೆಗಿರುತ್ತೇನೆ. ನೀವು ನನ್ನನ್ನು ಒಪ್ಪಿಕೊಂಡರೆ ನನಗೂ ಒಂದು ತುಂಬು ಸಂಸಾರ ಜೊತೆಯಾಗುತ್ತದೆ. ನನಗೆ ನನ್ನವರೆಂಬುವರು ಯಾರೂ ಇಲ್ಲ. ಒಮ್ಮೊಮ್ಮೆ ಈ ಒಂಟಿತನ ನನ್ನನ್ನು ಕೊರೆಯುತ್ತದೆ. ನಾನು ನಿಮ್ಮ ಮಗನಾಗಿರಲು ಬಯಸುತ್ತೇನೆ. ನಿಮ್ಮ ಜೀವನದ ಎಲ್ಲ ತೊಂದರೆಗಳನ್ನು ನಿವಾರಿಸಿ ಜೀವನದಲ್ಲಿ ಸಂತಸ ತುಂಬಲು ಪ್ರಯತ್ನಿಸುತ್ತೇನೆ. ಆದರೆ ನೀವು ಮತ್ತು ಅಪ್ಪಾಜಿ ಅನುಮತಿ ನೀಡಿದಾಗ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ,” ಹೀಗೆ ಹೇಳಿ ವಿನಯ್‌ ಹೊರಟುಹೋದರು.

ಬಹಳ ಹೊತ್ತು ಆಲೋಚಿಸಿ ವಿಶ್ವನಾಥರು ತಮ್ಮ ಪತ್ನಿಗೆ ಹೇಳಿದರು, “ಇವರಿಬ್ಬರ ಮದುವೆ ಮಾಡಬೇಕು ಎಂದು ನನಗನ್ನಿಸುತ್ತಿದೆ.”

“ಏನು ಹೇಳುತ್ತಿದ್ದೀರಿ? ನಾವು ಬ್ರಾಹ್ಮಣರು ಮತ್ತು ಅವರು ಕೆಳಜಾತಿಯವರು…… ಇಲ್ಲ…. ಇದು ಸರಿಯಾಗುವುದಿಲ್ಲ,” ಆಕೆ ಕೋಪದಿಂದ ನುಡಿದರು.

“ಜಾತಿಗೆ ಅಂಟಿಕೊಂಡು ಕುಳಿತಿದ್ದರೆ ನಮಗೇನು ಸಿಗುತ್ತದೆ? ವೃದ್ಧಾಪ್ಯದಲ್ಲಿ ನಮ್ಮ ಜೀವನ ಸಾಗಬೇಕು. ಪಾಪ, ಗೀತಾ ನಮಗಾಗಿ ಎಷ್ಟು ಮಾಡಲು ಸಾಧ್ಯ? ಅವರಿಬ್ಬರೂ ಜೊತೆಯಾಗಿ ದುಡಿದರೆ ನಾವು ನೆಮ್ಮದಿಯಾಗಿರಬಹುದು.”

“ನೀವು ಹೇಳುವುದು ಒಂದು ರೀತಿಯಲ್ಲಿ ಸರಿಯಾಗಿಯೇ ಇದೆ. ಒಳ್ಳೆಯ ಮನುಷ್ಯ. ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ,” ಪತಿಯ ಮಾತಿಗೆ ದನಿಗೂಡಿಸುತ್ತಾ ಹೇಳಿದರು.

ಭಾನುವಾರದ ದಿನ ವಿಶ್ವನಾಥರು ಬೆಳಗ್ಗೆಯೇ ವಿನಯ್‌ಗೆ ಫೋನ್‌ ಮಾಡಿ ಬರುವಂತೆ ತಿಳಿಸಿದರು. ವಿನಯ್‌ ಬಂದ ಮೇಲೆ ಒಂದೆರಡು ಮಾತನಾಡಿದ ನಂತರ ವಿಶ್ವನಾಥರು, “ನಾವು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡೆವು, ಬಹುಶಃ ಅದು ನಮ್ಮ ಸ್ವಾರ್ಥದಿಂದ….. ಏನು ಮಾಡೋಣಪ್ಪ. ವೃದ್ಧಾಪ್ಯವೆನ್ನುವುದು ಮನುಷ್ಯನನ್ನು ಸ್ವಾರ್ಥಿಯನ್ನಾಗಿ ಮಾಡುತ್ತದೆ. ನಾವು ನಮ್ಮ ಸೊಸೆ, ಮೊಮ್ಮಗನ ಬಗೆಗೆ ಯೋಚಿಸದೆ ಕೇವಲ ನಮ್ಮ ಬಗ್ಗೆಯೇ ಯೋಚಿಸಿದೆವು. ಆದರೆ ಅವಳು ಯಾವಾಗಲೂ ನಮ್ಮ ವಿಷಯಕ್ಕೇ ಪ್ರಾಮುಖ್ಯತೆ ಕೊಡುತ್ತಿದ್ದಳು.

“ಗೀತಾ, ಈ ಮನೆಯ ಸೊಸೆಯಾದರೂ ಸದಾ ಒಬ್ಬ ಮಗಳಂತೆ ಎಲ್ಲ ಕರ್ತವ್ಯಗಳನ್ನು ನೆರವೇರಿಸಿದಳು. ಇದುವರೆಗೆ ಅವಳು ಕೇವಲ ದುಃಖವನ್ನೇ ಉಂಡಿದ್ದಾಳೆ. ನೀವು ಅವಳ ಉಡಿಯಲ್ಲಿ ಸುಖವನ್ನು ಸುರಿಯಲು ಬಂದಿರುವಿರಿ. ಬಹಳ ಒಳ್ಳೆಯದು. ಅವಳು ಯಾವಾಗಲೂ ಸಂತೋಷದಿಂದಿರುವಂತೆ ನೋಡಿಕೊಳ್ಳಿ,” ಎಂದು ವಿನಯ್‌ಗೆ ಕೈ ಮುಗಿದರು.

ಬಾಗಿಲ ಮರೆಯಲ್ಲಿ ನಿಂತದ್ದ ಗೀತಾ ಅತ್ತೆ ಮಾವಂದಿರ ಈ ಬದಲಾದ ವ್ಯವಹಾರವನ್ನು ಕಂಡು ಅವಾಕ್ಕಾದಳು. ಕಡೆಗೂ ಸುಖಾಂತವಾದುದಕ್ಕೆ ಸಂತಸಗೊಂಡು ಓಡಿ ಬಂದಳು.

“ನಾವು ಕಡೆಯವರೆಗೂ ನಿಮಗೆ ಆಸರೆಯಾಗಿರುತ್ತೇವೆ,” ಎನ್ನುತ್ತಾ ವಿನಯ್‌ ಮತ್ತು ಗೀತಾ ಬಾಗಿ ಹಿರಿಯರಿಬ್ಬರಿಗೂ ನಮಸ್ಕರಿಸಿದರು. ವಿಶ್ವನಾಥ್‌ ಮತ್ತು ಅವರ ಪತ್ನಿ ಸಂತೋಷದಿಂದ ಅವರ ತಲೆ ಸವರಿ ಆಶೀರ್ವದಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ