ದೃಶ್ಯ1 : ಒಂದು ನಗರದ ಹಳೆಯ ದೇಗುಲದಲ್ಲಿ ಭಾಗವತ ಕಥಾ ಶ್ರವಣ ನಡೆಯುತ್ತಿತ್ತು. ಪ್ರವೇಶದ್ವಾರಕ್ಕೆ ನೇರವಾಗಿ ಸ್ವಾಮಿಗಳು ಹಾಗೂ ಅವರ ಸಹಚರರು ಸಂಗೀತಮಯ ಭಾಗವತ ಹೇಳುವಿಕೆಯಲ್ಲಿ ತಲ್ಲೀನರಾಗಿದ್ದರು. ಕಥಾವಾಚನ ಮಾಡುವ ಸ್ವಾಮಿಗಳ ಬಗ್ಗೆ ಮೊದಲೇ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಅವರು ಬಹಳ ಉನ್ನತಮಟ್ಟದ ಸ್ವಾಮಿಗಳು ಹಾಗೂ ಅವರಿಗೆ ಅನೇಕ ಸಲ ದೇವರು ಪ್ರತ್ಯಕ್ಷ ದರ್ಶನವಾಗಿದೆ ಎಂದೂ ಪ್ರಚಾರ ಮಾಡಲಾಗಿತ್ತು. ಸ್ವಾಮಿಗಳಿಗೆ ಯಾವುದರ ಅಗತ್ಯವಿಲ್ಲ. ಅವರಲ್ಲಿ ಜನರ ಕಲ್ಯಾಣಕ್ಕೆ ಧರ್ಮದ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಬಗ್ಗೆ ಪ್ರಚಾರ ಕೈಗೊಳ್ಳಲಾಗಿತ್ತು.

ಹಾಲ್‌ನ ತುಂಬೆಲ್ಲ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಹಾಲ್‌ನ್ನು ತುಂಬಾ ಚೆನ್ನಾಗಿ ಅಲಂಕರಿಸಲಾಗಿತ್ತು.

ಸಿಂಹಾಸನದಂತಹ ಪೀಠದಲ್ಲಿ ಸ್ವಾಮಿಗಳು ಮೈಕ್‌ನಲ್ಲಿ ಸುಧಾಮ ಪ್ರಸಂಗವನ್ನು ವಿವರಿಸುತ್ತಿದ್ದರು. ಹಾಲ್‌ನಲ್ಲಿ  ಕುಳಿತಿದ್ದ ಸಾವಿರಾರು ಭಕ್ತಾದಿಗಳು ಭಕ್ತಿರಸದಲ್ಲಿ ಮುಳುಗಿ ಹೋಗಿದ್ದರು. ಅದು ಸ್ವಾಮಿಗಳ ಭಾಗವತ ಕಥಾ ಪ್ರಸಂಗದ 4ನೇ ದಿನವಾಗಿತ್ತು. ಮೋಹಮಾಯೆ ತ್ಯಜಿಸಿ ಎಂದು ಹೇಳುತ್ತಿದ್ದ ಸ್ವಾಮಿಗಳ ಮುಂದೆ ನೋಟುಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಅವನ್ನು ನೋಡಿ ಅವರ ಮುಖಕಳೆ ಇನ್ನು ಹೊಳೆಯುತ್ತಲಿತ್ತು.

ಸ್ವಾಮಿಗಳು ಕೃಷ್ಣ ಸುಧಾಮನ ಪ್ರಸಂಗದ ವರ್ಣನೆಯನ್ನು ರಸವತ್ತಾಗಿ ಮಾಡುತ್ತಲಿದ್ದರು. ಅಷ್ಟರಲ್ಲಿ ವೇದಿಕೆಯ ಹಿಂಭಾಗದಿಂದ ಕೈಯಲ್ಲಿ ದಾನಪಾತ್ರೆ ಹಿಡಿದುಕೊಂಡು ಹರಕಲು ಬಟ್ಟೆಯಲ್ಲಿದ್ದ ಒಬ್ಬ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ. ಅವನು ಸ್ವಾಮಿಗಳ ಕಾಲಿಗೆ ಎರಗುತ್ತಾನೆ. ಸ್ವಾಮಿಗಳು ಆ ವ್ಯಕ್ತಿಯ ಕಡೆ ಬೆರಳು ಮಾಡಿ ತೋರಿಸುತ್ತ, ಇವನೇ ಸುಧಾಮ ಎಂದು ಹೇಳಿ ಪುನಃ ತಮ್ಮ ಕಥಾಪ್ರಸಂಗಕ್ಕೆ ಮರಳುತ್ತಾರೆ.

ಆ ಸುಧಾಮ ಪ್ರೇಕ್ಷಕರ ಮಧ್ಯೆ ಪ್ರವೇಶಿಸುತ್ತಾನೆ. ಜನರು ನಾ ಮುಂದೆ ತಾ ಮುಂದೆ ಎನ್ನುವ ರೀತಿಯಲ್ಲಿ ಆ ವ್ಯಕ್ತಿಯ ಪಾದ ಸ್ಪರ್ಶಿಸಿ ನಮಸ್ಕರಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಶಕ್ತ್ಯಾನುಸಾರ ಅವನ ಕೈಗೆ ಹಣ ನೀಡುತ್ತಾರೆ. ಭಕ್ತರಲ್ಲಿ ಸಹಾನುಭೂತಿ ಉಂಟು ಮಾಡಲು ಆ ಸುಧಾಮ ಸ್ವಲ್ಪ ಕುಂಟುತ್ತ ನಡೆಯುತ್ತಿದ್ದ. ನೋಡು ನೋಡುತ್ತಿದ್ದಂತೆ ಅವನ ಕೈಯಲ್ಲಿದ್ದ ದಾನಪಾತ್ರೆ ನೋಟುಗಳಿಂದ  ತುಂಬಿ ಹೋಯಿತು. ಅವನು ಆ ನೋಟುಗಳನ್ನು ತನ್ನ ಹೆಗಲಿಗೇರಿಸಿದ ಬ್ಯಾಗಿಗೆ ತುರುಕುತ್ತಿದ್ದ.

ಸುಧಾಮ ಜನರು ಕುಳಿತುಕೊಂಡಿದ್ದ ಪ್ರತಿಯೊಂದು ಸಾಲಿಗೂ ಹೋಗಿ ದಾನದ ಮೊತ್ತವನ್ನು ನಗುಮೊಗದಿಂದ ಸ್ವೀಕರಿಸುತ್ತಲಿದ್ದ. ದಾನ ಕೊಡುವವರಲ್ಲಿ ಅನಕ್ಷರಸ್ಥರು, ಸಾಕ್ಷರರು, ಶ್ರೀಮಂತರು, ಬಡವರು ಹೀಗೆ ಎಲ್ಲರೂ ಇದ್ದರು. ಕಳೆದ 4 ದಿನಗಳಿಂದ ಭಕ್ತರು ದೇವಸ್ಥಾನಕ್ಕೆ ಹಾಗೂ ಸ್ವಾಮಿಗಳಿಗೆ ಸಾಕಷ್ಟು ದಾನ ದಕ್ಷಿಣೆ ಕೊಟ್ಟಿದ್ದರು. ಈಗ ಒಮ್ಮೆಲೆ ಸುಧಾಮನ ಪ್ರವೇಶ ಅವರಿಂದ ಮತ್ತಷ್ಟು ದಕ್ಷಿಣೆಯನ್ನು ಕಕ್ಕಿಸುವುದಾಗಿತ್ತು.

ಭಾಗವತ ಕಥೆಗಳ ಆಯೋಜನೆಯಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗುತ್ತ ಹೊರಟಿದೆ. ಅಲ್ಲಿ ಸುಧಾಮನಂತಹ ಪಾತ್ರ ನಾಟಕೀಯ ರೀತಿಯಲ್ಲಿ ವೇದಿಕೆಯಿಂದ ಕೆಳಗಿಳಿದು ಬರುತ್ತದೆ ಹಾಗೂ ಹಣ ಸಂಗ್ರಹ ಮಾಡುತ್ತದೆ. ಇದು ಹಣ ವಸೂಲಿಗೆ ಹೊಸ ತಂತ್ರ. ಭಕ್ತಿಯಲ್ಲಿ ಮುಳುಗಿರುವವರಿಗೆ ಇದು ಅರ್ಥವಾಗುವುದಿಲ್ಲ.

ದೃಶ್ಯ 2 : ನಗರದ ಒಂದು ಪ್ರತಿಷ್ಠಿತ ಭಾಗದಲ್ಲಿ ಅಂಗಡಿ ನಡೆಸುವ ಅನಿಲ್ ‌ಕುಮಾರ್‌ರ ಕೌಂಟರ್‌ನಲ್ಲಿ ಅಮೃತಶಿಲೆಯ ಒಂದು ಪುಟ್ಟ ಗೋವನ್ನು ನಿಲ್ಲಿಸಲಾಗಿದೆ. ಬಹಳ ಆಕರ್ಷಕವಾಗಿ ಕಾಣುವ ಆ ಹಸು ವಾಸ್ತವದಲ್ಲಿ ಹಣ ಹಾಕುವ ಹುಂಡಿ. ಅದರ ಹೊಟ್ಟೆಯ ಮೇಲೆ ಸಂಬಂಧಪಟ್ಟ ಗೋಸೇವಾ ಸಂಸ್ಥೆಯೊಂದರ ಹೆಸರು ಹಾಗೂ ವಿಳಾಸವನ್ನು ನಮೂದಿಸಲಾಗಿದೆ. ಆ ಹುಂಡಿಯಲ್ಲಿ ಪ್ರತಿದಿನ ಸುಮಾರು 200 ರೂ.ಗಳಷ್ಟು ಸಂಗ್ರಹವಾಗುತ್ತದೆ. ಗೋಸೇವಾ ಸಂಸ್ಥೆಯವರು ಅನಿಲ್ ‌ಕುಮಾರ್‌ ಅವರನ್ನು ವಿನಂತಿಸಿಕೊಂಡು ಆ ಹುಂಡಿಯನ್ನು ಅಲ್ಲಿ ಇಟ್ಟು ಹೋಗಿದ್ದರು. ಹಸುವಿನ ಆಕರ್ಷಣೆಗೆ ಮರುಳಾಗಿ ಅದರ ಬೆನ್ನ ಮೇಲಿದ್ದ ರಂಧ್ರದಿಂದ ನೋಟುಗಳನ್ನು ಒಳಗೆ ಹಾಕುತ್ತಿದ್ದರು. ಸಂಸ್ಥೆಯವರು ನೋಟಿನಿಂದ ತುಂಬಿಕೊಂಡ ಹಸುವನ್ನು ಎತ್ತಿಕೊಂಡು ಹೋಗಿ ಅದರ ಸ್ಥಾನದಲ್ಲಿ ಅದೇ ತೆರನಾದ ಬೇರೊಂದು ಹಸುವಿನ ಪ್ರತಿಕೃತಿಯನ್ನು ಇಟ್ಟು ಹೋಗುತ್ತಿದ್ದರು.

ಒಂದೆಡೆ ಜೀವಂತ ಹಸುಗಳು ಸರಿಯಾಗಿ ಆಹಾರ ಸಿಗದೆ ಸಣಕಲು ಕಡ್ಡಿಯಂತಾಗಿಬಿಟ್ಟಿವೆ. ಇಲ್ಲಿ ನೋಡಿದರೆ ಕಲ್ಲು ಹಸುವಿನ ಹೊಟ್ಟೆಗೆ ನೋಟುಗಳನ್ನು ಹಾಕುತ್ತಿದ್ದಾರೆ. ಇದು ನಿಜಕ್ಕೂ ವಿಡಂಬನೆಯ ಸಂಗತಿ.

200-300 ರೂ. ಬೆಲೆಬಾಳುವ ಒಂದು ಅಮೃತಶಿಲೆಯ ಹಸುವಿನಿಂದ ಸಾವಿರಾರು ರೂ.ಗಳನ್ನು ಭಕ್ತರಿಂದ ಹೇಗೆ ಕಕ್ಕಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ.

ಅಂಗಡಿಕಾರರು ಆ ಹಸುವಿನ ಪ್ರತಿಕೃತಿಯನ್ನು ತಮ್ಮ ಬಳಿ ಏಕೆ ಇಟ್ಟುಕೊಂಡಿದ್ದೇವೆ ಎಂಬುದು ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಅವರು ಇದನ್ನು `ಗೋಸೇವೆ’ ಎಂದು ನಂಬಿರುತ್ತಾರೆ. ಗೋಸೇವೆಗೆ ಈ ಹಣ ಖರ್ಚಾಗುತ್ತದೆ ಎಂದು ಅವರು ಭಾವಿಸಿರುತ್ತಾರೆ. ಈ ರೀತಿಯಲ್ಲಿ ಅವರು ಧರ್ಮದ ಗುತ್ತಿಗೆದಾರರ ದಾಳವಾಗುತ್ತಾರೆ.

ಅಮೃತಶಿಲೆಯ ಹೊಳೆಯುವ ಹಸುವನ್ನು ಕೌಂಟರ್‌ ಮೇಲೆ ಇಡುವುದರಿಂದ ಹೊಸ ಗ್ರಾಹಕರು ಅಂಗಡಿಯತ್ತ ಆಕರ್ಷಿತರಾಗುತ್ತಾರೆ. ಇದು ಅವರ ಶ್ರದ್ಧೆಯಲ್ಲ, ಸ್ವಾರ್ಥ.

ದೃಶ್ಯ 3 : ಅದೊಂದು ಸಾಯಿ ದೇಗುಲ. ಫೆಬ್ರವರಿಯ ಮೂರನೇ ವಾರ ದೇಗುಲದಲ್ಲಿ ಕೆಲವು ನಾಣ್ಯಗಳನ್ನು ನೋಡಲು ಸಾಯಿ ಭಕ್ತರು ಅಲ್ಲಿಗೆ ಬಂದರು ಹಾಗೂ ತಮ್ಮ ಜೇಬಿನಿಂದ ಹಣ ತೆಗೆದು ಬಾಬಾರ ಸನ್ನಿಧಿಗೆ ಇರಿಸಿದರು. ಆ ನಾಣ್ಯಗಳ ಬಗ್ಗೆ ಹೇಗೆ ಪ್ರಚಾರ ಮಾಡಲಾಗಿತ್ತೆಂದರೆ, ಆ ನಾಣ್ಯಗಳನ್ನು ಸಾಯಿಬಾಬಾ 100 ವರ್ಷಗಳ ಹಿಂದೆ ಭಕ್ತರೊಬ್ಬರಿಗೆ ಕೊಟ್ಟಿದ್ದರಂತೆ.

ಅದರಲ್ಲಿ ಹೊಸದೇನಿದೆ, ಈಗಲೂ ಅಂತಹ ಹಲವು ನಾಣ್ಯಗಳು ಕೆಲವರ ಮನೆಯಲ್ಲಿ ಸಿಗುತ್ತವೆ. ಈ ಮನೆಗಳ ಹಿರಿಯರು ತಮ್ಮ ಕೈಯಾರೆ ತಮ್ಮ ಮುಂದಿನ ಪೀಳಿಗೆಯವರಿಗೆ ಹಸ್ತಾಂತರಿಸಿದರು. ಸಾಯಿಬಾಬಾ ಅವರು ತಮ್ಮ ಕೈಯಾರೆ ಕೊಡದೇ ಇದ್ದುದರಿಂದ ಈ ನಾಣ್ಯಗಳು ಚಮತ್ಕಾರಿ ಎನಿಸಲಿಲ್ಲ. ಇದೇ ಇಲ್ಲಿನ ವ್ಯತ್ಯಾಸ.

ಧರ್ಮದ ಗುತ್ತಿಗೆದಾರರು ದಾನ ದಕ್ಷಿಣೆಯನ್ನು ಹೆಚ್ಚಿಸಿಕೊಳ್ಳಲು ಈ ರೀತಿಯ ಉಪಾಯ ಕಂಡುಕೊಳ್ಳುತ್ತಾರೆ. ದಾನ ದಕ್ಷಿಣೆಯ ಬಾಬತ್ತಿನಲ್ಲಿ ಭಕ್ತರು ರಾಮ, ಕೃಷ್ಣ, ಹನುಮಂತ, ಸಾಯಿಬಾಬಾ ಹೀಗೆ ಯಾವುದೇ ಭೇದಭಾವ ಮಾಡುವುದಿಲ್ಲ. ಬಹಳಷ್ಟು ಭಕ್ತರು ತಮ್ಮ ಬಚ್ಚಿಟ್ಟ ಹಣವನ್ನು ದೇವರ ಸನ್ನಿಧಿಗೆ ಅರ್ಪಿಸುತ್ತಾರೆ.

ಇವರ ಉಪಾಯಗಳಿಗೆ ಕೊನೆಯಿಲ್ಲ

ಧರ್ಮದ ಗುತ್ತಿಗೆದಾರರು ದಾನದಕ್ಷಿಣೆ ಕಕ್ಕಿಸಲು ಕಾಲಕ್ಕೆ ತಕ್ಕಂತೆ ಹೊಸ ಹೊಸ ಉಪಾಯ ಹುಡುಕುತ್ತಿರುತ್ತಾರೆ. ದೇಶಾದ್ಯಂತ  ಇಂತಹ ಎಷ್ಟು ಉಪಾಯಗಳಲ್ಲಿ ಹಣವನ್ನು ಕಕ್ಕಿಸಲಾಗುತ್ತಿದೆಯೋ ಹೇಳುವುದು ಕಷ್ಟ.

ದೇಸ್ಥಾನಗಳಲ್ಲಿ ಮೂರ್ತಿಯ ಮುಂದಷ್ಟೇ ಹಣವನ್ನು ಇಡುವುದಿಲ್ಲ. ಚಿತ್ರಕೂಟ ಎಂಬಲ್ಲಿ ಸೀತಾ ರಸೋಯಿ ಇದೆ. ಅಲ್ಲಷ್ಟೇ ಅಲ್ಲ, ನಾಸಿಕ್‌ ಮತ್ತು ಬಸ್ತರ್‌ನ ಆದಿವಾಸಿಗಳಿರುವ ಸ್ಥಳದಲ್ಲೂ ಇದೆ. ಈ ರಸೋಯಿಗಳಲ್ಲಿ ಭಕ್ತರು ಅದೆಷ್ಟು ಶ್ರದ್ಧೆಯಿಂದ ಹಣವನ್ನು ಇಡುತ್ತಾರೆಂದರೆ, ಆ ಹಣ ದೇವಸ್ಥಾನದ ಸಂಚಾಲಕರು, ಪೂಜಾರಿಗಳ ಕೈಗೆ ಹೋಗದೆ ನೇರವಾಗಿ ಸೀತಾ ಮಾತೆಯ ಬ್ಯಾಂಕ್‌ ಖಾತೆಗೆ ಹೋಗುತ್ತಿದೆ ಎಂಬಂತೆ ಹಣವನ್ನು ಸಮರ್ಪಿಸುತ್ತಿರುತ್ತಾರೆ.

ತಾವೇಕೆ ದಾನ ನೀಡುತ್ತಿದ್ದೇವೆ ಎಂದು ಯಾರೊಬ್ಬರೂ ವಿಚಾರ ಮಾಡುವುದಿಲ್ಲ. ದಾನ ತೆಗೆದುಕೊಳ್ಳುವವರು ತಮ್ಮ ಉದ್ದೇಶವನ್ನು ಬಹಿರಂಗಪಡಿಸುವುದಿಲ್ಲ. ಆದರೆ ಈ ರೀತಿಯ ದಾನದ ಹಣದ ಮೂಲಕ ಕುಳಿತಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂಬುದು ಅವರ ದುರಾಲೋಚನೆಯಾಗಿರುತ್ತದೆ.

“ಎಲ್ಲ ಅವನದ್ದೇ, ಅವನೇ ಕೊಟ್ಟಿದ್ದಾನೆ, ಅವನಿಗೆ ಒಂದಿಷ್ಟು ಕೊಡುವುದರಲ್ಲಿ ನಿಮಗೇಕೆ ಜಿಪುಣತನ?” ದಾನದಕ್ಷಿಣೆ ದೇವರಿಗೆ ಏಕೆ ಕೊಡಬೇಕು ಎಂಬ ಬಗ್ಗೆ ಭಕ್ತಾದಿಗಳ ಮನಸ್ಸಿನಲ್ಲಿ ಮೂಢನಂಬಿಕೆ ತುಂಬಲಾಗಿದೆ.

ಪಾಪ ನಿವಾರಣೆಯ ಮಾನದಂಡ

ದಾನ ದಕ್ಷಿಣೆಯಿಂದ ಪಾಪ ನಿವಾರಣೆ ಆಗುತ್ತದೆ ಎಂದಿದ್ದರೆ, ನಮ್ಮ ದೇಶದಲ್ಲಿ ಯಾರೊಬ್ಬರೂ ಪಾಪಿಗಳೇ ಇರುತ್ತಿರಲಿಲ್ಲ. ಭಿಕ್ಷುಕ ಕೂಡ ಹಗಲು ಇರುಳು ಕಷ್ಟಪಟ್ಟು ಭಿಕ್ಷೆ ಸಂಗ್ರಹಿಸುತ್ತಾನೆ. ಅದರಲ್ಲಿ ಒಂದಿಷ್ಟು ಭಾಗವನ್ನು ದೇವರಿಗೆ ಅರ್ಪಿಸುತ್ತಾನೆ. ದಾನದಕ್ಷಿಣೆ ಯಾವುದೇ ಆಸ್ಥೆಯ ಪ್ರತೀಕವಲ್ಲ. ಅದೊಂದು ರೀತಿಯ ಭಯವಾಗಿದೆ. ದಾನ ದಕ್ಷಿಣೆ ಕೊಡದೆ ಇದ್ದರೆ ಪಾಪಿ ಇಲ್ಲಿ ನಾಸ್ತಿಕ ಎಂದು ಕರೆಯಿಸಿಕೊಳ್ಳುವೆ ಎಂದು ಹೆದರಿಸಲಾಗುತ್ತದೆ. ಈ ಭಯ ಹುಟ್ಟು ಹಾಕಿದವರು ಯಾರು ಎಂದು ಪ್ರತಿಯೊಬ್ಬ ದಾನಿಗೂ  ಗೊತ್ತು. ಆದರೂ ಯಾರೊಬ್ಬರೂ ಅದರಿಂದ ಮುಕ್ತಿ ಕಂಡುಕೊಳ್ಳುವುದಿಲ್ಲ. 60 ವರ್ಷದ ಸರಾಸರಿ ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿ 5 ಲಕ್ಷ ರೂ. ಮೊತ್ತನ್ನು ದಾನದಕ್ಷಿಣೆಗಾಗಿ ವಿನಿಯೋಗಿಸುತ್ತಾನೆ. ಅದರ ಬದಲಿಗೆ ಅವನಿಗೆ ಸಿಗುವುದು ಮಾತ್ರ ಸೊನ್ನೆ.

ಅಷ್ಟೊಂದು ಮೊತ್ತವನ್ನು ಒಬ್ಬ ದಾನಿ ಒಂದು ಮಗುವಿನ ಶಿಕ್ಷಣಕ್ಕೆ ಖರ್ಚು ಮಾಡಿರುತ್ತಿದ್ದರೆ,  ಇಂದು ನಮ್ಮ ದೇಶದಲ್ಲಿ ಯಾರೊಬ್ಬರೂ ಅನಕ್ಷರಸ್ಥರೇ ಇರುತ್ತಿರಲಿಲ್ಲ.

ಅಂದಹಾಗೆ, ಜನರು ದೇಶ ಹಾಗೂ ಸಮಾಜದ ಹಿತಕ್ಕೆ ಏನನ್ನೂ ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ ತಮ್ಮ ಗಳಿಕೆಯ ಬಹುದೊಡ್ಡ ಭಾಗವನ್ನು ದಾನದ ರೂಪದಲ್ಲಿ ಕೊಟ್ಟುಬಿಡುತ್ತಾರೆ. ಯಾವಾಗ ಈ ಮನಸ್ಥಿತಿ ಬದಲಾಗುತ್ತದೋ ಆಗಲೇ ನಮ್ಮ ದೇಶದಲ್ಲಿ ಎಲ್ಲ ನದಿಗಳೂ ಹೆಣ್ಣಿನ ಹೆಸರನ್ನೇ ಹೊತ್ತಿವೆ. ದೇಶದಲ್ಲಿ ಸಮೃದ್ಧಿ ನೆಲೆಸುತ್ತದೆ.

– ಭರತ್‌ ಭೂಷಣ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ