ಸ್ವಾತಿಗೆ ತನ್ನ ಬಾಯ್‌ಫ್ರೆಂಡ್ ರಾಹುಲ್ ಜೊತೆಗೆ ಬ್ರೇಕ್‌ಅಪ್ ಆಗಿ ಹಲವು ತಿಂಗಳುಗಳೇ ಆಗಿಹೋಗಿವೆ. ಆದರೆ ಆಕೆ ಈಗಲೂ ಅದರ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಅವಳು ರಾಹುಲ್‌ನನ್ನು ಈಗಲೂ ತನ್ನ ಮನಸ್ಸಿನಿಂದ ತೆಗೆದುಹಾಕಿಲ್ಲ. ಸ್ವಾತಿ ಹೇಳುತ್ತಾಳೆ, “ಪ್ರತಿ ಮುಂಜಾನೆ ಹಾಸಿಗೆಯಿಂದ ಎದ್ದಾಗ ನನಗೆ ಮೊದಲು ನೆನಪಾಗುವುದೇ ರಾಹುಲ್. ಆ ಬಳಿಕ ನನಗೆ ಅವನು ಜೊತೆಯಲ್ಲಿಲ್ಲದಿರುವುದು ನೆನಪಿಗೆ ಬರುತ್ತದೆ. ಆಗ ನಾನು ಅಳಲಾರಂಭಿಸುತ್ತೇನೆ. ಅವನ ಇನ್‌ಸ್ಟಾಗ್ರಾಂ ಪೇಜ್ ತೆರೆದು ಓದುತ್ತೇನೆ. ಅವನು ತನ್ನ ಜೀವನದಲ್ಲಿ ಇನ್ನಷ್ಟು ಮುಂದೆ ಹೋಗುತ್ತಿರುವುದನ್ನು ಕಂಡು ನನಗೆ ಮತ್ತಷ್ಟು ದುಃಖವಾಗುತ್ತದೆ. ನನ್ನ ಸ್ನೇಹಿತರು ನನಗೂ ಕೂಡ ಮುಂದೆ ಸಾಗುವ ಬಗ್ಗೆ ಹೇಳುತ್ತಾರೆ. ಆದರೆ ನಾನೇನು ಮಾಡಲಿ? ಅವನು ಸದಾ ನನ್ನ ಮನಸ್ಸಿನಲ್ಲಿಯೇ ಇರುತ್ತಾನೆ. ಅವನಿಲ್ಲದೆ ನನಗೆ ನೆಮ್ಮದಿಯೇ ಇಲ್ಲ.”
ಹಲವು ತಿಂಗಳುಗಳ ಬಳಿಕ ಸ್ವಾತಿ ಈ ಬ್ರೇಕ್‌ಅಪ್‌ನ ನೆನಪಿನಿಂದ ಹೊರಬರಲು ಆಗಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ಬ್ರೇಕ್‌ಅಪ್‌ನ ಬಳಿಕ ತಮ್ಮ ಮಾಜಿ ಪ್ರೇಮಿಯನ್ನು ಮರೆಯಲು ಬಹಳ ಕಸರತ್ತು ಮಾಡುತ್ತಾರೆ. ಯಾವ ವ್ಯಕ್ತಿಗೆ ತುಂಬಾ ನೋವಾಗಿರುತ್ತದೋ, ಯಾರು ನಿಮ್ಮ ಹೃದಯಕ್ಕೆ ಕೊಳ್ಳಿ ಇಟ್ಟಿರುತ್ತಾರೊ, ಆತನಿಂದ ಸಂಬಂಧ ಕಡಿದುಕೊಂಡ ಬಳಿಕ ಅವನ ಬಗ್ಗೆಯೇ ಯೋಚಿಸುತ್ತಾರೆ. ಅವನ ಅವಶ್ಯಕತೆ ಬಗ್ಗೆ ಅದೆಷ್ಟು ನೆನಪು ಮಾಡಿಕೊಳ್ಳುತ್ತಾರೆಂದರೆ, ಮೇಲಿಂದ ಮೇಲೆ ಅವನ ಸಂದೇಶ, ಫೋಟೋಗಳನ್ನು ನೋಡುತ್ತಿರುತ್ತಾರೆ. ಅವನಿಲ್ಲದೆ, ನಾನು ಏನೂ ಅಲ್ಲ ಎಂದು ಅಂದುಕೊಳ್ಳುತ್ತಾರೆ.
ಪ್ರೀತಿ ಕೂಡ ಅಮಲಿನಂತೆ
ಸಂಶೋಧನೆಗಳು ಹೇಳುವುದೇನೆಂದರೆ, ಪ್ರೀತಿ ಕೂಡ ಅಮಲಿನ ಹಾಗೆ ನಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ರೊಮ್ಯಾಂಟಿಕ್ ಸಂಬಂಧ ಕೊನೆಗೊಂಡಾಗ ಯಾವ ರೀತಿಯ ಪ್ರಭಾವ ಉಂಟಾಗುತ್ತದೆಂದರೆ, ಗಾಂಜಾ ಸೇವಿಸುವ ವ್ಯಕ್ತಿ ಅದನ್ನು ನಿಲ್ಲಿಸಿದಾಗ ಯಾತನೆ ಪಡುವಂತೆ. ಸ್ವಾತಿಯ ಮೆದುಳು ಕೂಡ ಅಮಲಿನ ವ್ಯಕ್ತಿ ಪ್ರತಿಕ್ರಿಯೆ ಕೊಡುವಂತೆಯೇ ಇತ್ತು. ಏಕೆಂದರೆ ಸ್ವಾತಿಗೆ ತನ್ನ ಮಾಜಿ ಪ್ರೇಮಿ (ಗಾಂಜಾ ರೀತಿಯಲ್ಲಿ) ಸಿಗುತ್ತಿರಲಿಲ್ಲ. ಅವಳು ಅವನ ನೆನಪಿನ ಬಂಧನದಲ್ಲಿಯೇ ಸಿಲುಕಿಕೊಂಡು ಬಿಟ್ಟಿದ್ದಳು. ಆ ನೆನಪುಗಳು ಒಂದಷ್ಟು ಸಮಯದ ಮಟ್ಟಿಗೆ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುತ್ತಿದ್ದವು. ಆದರೆ ತನ್ನ ಮಾಜಿಯನ್ನು ಭೇಟಿಯಾಗುವ ಆಸೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದವು.
ಹಾರ್ಟ್‌ಬ್ರೇಕ್ ಎಂತಹ ಒಂದು ಅಮಲು ಎಂದರೆ, ಅದರಿಂದ ಮುಕ್ತಿ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾರ್ಟ್‌ಬ್ರೇಕ್‌ನಿಂದ ಮುಕ್ತರಾಗುವುದೆಂದರೆ ಡ್ರಗ್ಸ್, ಸಿಗರೇಟು, ಮದ್ಯ, ಜೂಜಾಟದ ಚಟದಿಂದ ಮುಕ್ತರಾದಂತೆ. ನಿಮ್ಮ ಮೆದುಳು ನಿಮ್ಮ ಮೇಲೆ ಆ ಅಮಲು ಅಥವಾ ಆ ವ್ಯಕ್ತಿ ಅಥವಾ ಆ ಚಟುವಟಿಕೆಗೆ ಸಂಬಂಧಪಟ್ಟಂತೆ ಸಂಪರ್ಕ ಇರಿಸಿಕೊಳ್ಳುವಂತೆ ಒತ್ತಡ ಹೇರುತ್ತಿರುತ್ತದೆ. ನೀವು ಅದರಿಂದ ಹೊರಬರಲು ಉಪಾಯಗಳನ್ನು ಕಂಡುಕೊಳ್ಳಬೇಕು.
– ನೀವು ನಿಮ್ಮ ಮಾಜಿಯನ್ನು ಮೆದುಳಿನಿಂದ ಹೊರಹಾಕಲು ಸಂಪರ್ಕಿಸುವ ಎಲ್ಲ ದಾರಿಗಳನ್ನು ಮುಚ್ಚಬೇಕು. ನಿಮ್ಮ ಫೋನ್‌ನಿಂದ ಅವನ ನಂಬರ್‌ಗಳನ್ನು ತೆಗೆದುಹಾಕಬೇಕು. ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಿಂದ ಅವನನ್ನು ಬ್ಲಾಕ್ ಮಾಡಬೇಕು.
– ಉಸಿರಾಟದ ವ್ಯಾಯಾಮದ ಬಗ್ಗೆ ಗಮನಕೊಡಿ. ನೀವು ಎಲ್ಲಿಯವರೆಗೆ ಈ ವ್ಯಾಯಾಮ ಚಟುವಟಿಕೆ ಅನುಸರಿಸಬೇಕೆಂದರೆ, ಆತನ ನೆನಪು ನಿಮ್ಮ ಮನಸ್ಸಿನ ಅಂತಃಪಟಲದಿಂದ ಅಳಿಸಿ ಹೋಗಬೇಕು.
– ನಿಮ್ಮನ್ನು ನೀವು ಸದಾ ಬಿಜಿಯಾಗಿಡಿ. ನಿಮ್ಮ ಗಮನ ಮಾಜಿ ಮೇಲಿಂದ ದೂರ ಸರಿದು ಮತ್ಯಾವುದರ ಮೇಲಾದರೂ ಹೋಗಬೇಕು. ನೀವೆಷ್ಟು ಬಿಜಿಯಾಗಬೇಕೆಂದರೆ, ಅವನ ಬಗ್ಗೆ ಯೋಚಿಸಲು ನಿಮಗೆ ಸಮಯವೇ ಸಿಗಬಾರದು. ಯಾವ ಚಟುವಟಿಕೆ ಅಥವಾ ಯಾವ ಕಲೆಯಲ್ಲಿ ನೀವು ಪಳಗಿರುತ್ತೀರೊ, ಅದರಲ್ಲಿಯೇ ನಿಮ್ಮನ್ನು ತೊಡಗಿಸಿಕೊಳ್ಳಿ.
– ಮಾಜಿ ಜೊತೆಗೆ ನೀವು ತೆಗೆಸಿಕೊಂಡ ಫೋಟೋಗಳನ್ನು ನೋಡಲು ಹೋಗಬೇಡಿ. ಹಾಗೆ ಆಗಾಗ ನೋಡ್ತಾ ಇದ್ದರೆ ಅವನತ್ತ ಸೆಳೆತ ಇನ್ನಷ್ಟು ಜಾಸ್ತಿ ಆಗುತ್ತದೆ.
– ನೀವಿಬ್ಬರೂ ಜೊತೆಗಿದ್ದಾಗ, ನಿಮ್ಮ ಮಾಜಿ ಪ್ರೇಮಿ ಆಗ ನಿಮ್ಮ ಸುರಕ್ಷತೆ ಹಾಗೂ ಖುಷಿಗೆ ಕಾರಣವಾಗಿದ್ದ. ಈಗ ಅವನು ನಿಮ್ಮ ಜೊತೆಗಿಲ್ಲ. ಅವನು ನಿಮ್ಮ ಮನಸ್ಸನ್ನು ಚೂರು ಚೂರು ಮಾಡಿದ್ದಾನೆ. ಅವನೀಗ ಒಂದು ನಶೆಯ ರೀತಿ. ಆ ನಶೆಯಿಂದ ನೀವು ಹೊರಗೆ ಬರುವುದು ಸೂಕ್ತ. ಈಗ ಆತನಿಂದ ನಿಮಗೆ ಯಾವುದೇ ಖುಷಿ ದೊರಕದು.
ಹಾರ್ಟ್‌ಬ್ರೇಕ್‌ನಿಂದ ಹೊರಬರುವ ಏಕೈಕ ದಾರಿಯೆಂದರೆ, ಅವನನ್ನು ಮರೆತು ಬಿಡುವುದು. ಅದು ಒಂದು ನಶೆಯೆಂದು ಭಾವಿಸಿ ಅದರಿಂದ ಮುಕ್ತರಾಗಿ. ನಶೆಯಿಂದ ಮುಕ್ತರಾಗಲು ದೃಢಶಕ್ತಿ ಹೇಗೆ ಬೇಕಾಗುತ್ತದೋ, ಅದೇ ರೀತಿ ಅವನನ್ನು ಮರೆತುಬಿಡಲು ನಿಮ್ಮ ಇಚ್ಛಾಶಕ್ತಿಯನ್ನು ಒಗ್ಗೂಡಿಸಿ. ಆಗ ಗೆಲುವು ನಿಮ್ಮದೇ ಆಗಿರುತ್ತದೆ.
– ಪೂರ್ಣಿಮಾ ಆನಂದ್