`ಪದವಿ ಪ್ರದಾನ ಸಮಾರಂಭವಿದೆ ಸೂಟ್‌ ಹಾಕಿಕೊಂಡು ಹೋಗಬೇಕು,’ `ಇಂಟರ್ವ್ಯೂ ಇದೆ ಸೂಟ್‌ ಧರಿಸಬೇಕು,’ `ನಾಳೆ ಆಫೀಸ್‌ ವತಿಯಿಂದ ವಿಚಾರ ಸಂಕಿರಣ ಏರ್ಪಡಿಸಿದ್ದಾರೆ. ಅದರಲ್ಲಿ ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಬರಲಿದ್ದಾರೆ. ಎಲ್ಲರೂ ಸೂಟ್‌ ಧರಿಸಿ ಬರಬೇಕು ಎಂದು ಬಾಸ್‌ ಹೇಳಿದ್ದಾರೆ. ನನ್ನ ಬಳಿ ಅಂತಹ ದುಬಾರಿ ಸೂಟ್‌ ಇಲ್ಲ. ಹೊಲಿಸಬೇಕೆಂದರೆ ಅದಕ್ಕೆ ಅಷ್ಟು ಸಮಯ ಕೂಡ ಇಲ್ಲ. ನಾನೀಗ ಏನು ಮಾಡಲಿ?’

ಈ ತೆರನಾದ ಪ್ರಶ್ನೆಗಳನ್ನು ನಾವು ಹಲವರಿಂದ ಕೇಳಿರುತ್ತೇವೆ. ಇಂತಹ ದಿಢೀರ್‌ ಸಭೆ ಸಮಾರಂಭಗಳು, ಕಾರ್ಪೋರೇಟ್‌ ಮೀಟಿಂಗ್‌ಗಳು, ವಿಚಾರ ಸಂಕಿರಣಗಳು, ಮದುವೆ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಮೂಲಕ ದುಬಾರಿ ಬಟ್ಟೆಗಳನ್ನು ಬಾಡಿಗೆಗೆ ಕೊಡುವ ಉದ್ಯಮವೊಂದನ್ನು ಶ್ವೇತಾ ಪೊದ್ದಾರ್‌ ಬೆಂಗಳೂರಿನ ಕೋರಮಂಗಲದಲ್ಲಿ ಆರಂಭಿಸಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಪುರುಷರಿಗಷ್ಟೇ ಮೀಸಲಾದ ದುಬಾರಿ ಬೆಲೆಯ ಪೋಷಾಕುಗಳನ್ನು ಮಹಿಳೆಯೊಬ್ಬರು ಬಾಡಿಗೆಗೆ ಕೊಡುತ್ತಿರುವುದು ಮತ್ತೊಂದು ವಿಶೇಷ.

ಹೊಸತನದ ತವಕ

ಶ್ವೇತಾರವರ ತಂದೆ ಸಂಜಯ್‌ ಪೊದ್ದಾರ್‌ ಬಟ್ಟೆ ವ್ಯಾಪಾರಿ. ಶ್ವೇತಾಗೂ ಕೂಡ ಬಟ್ಟೆ ಉದ್ಯಮದಲ್ಲಿ ಏನನ್ನಾದರೂ ಹೊಸದನ್ನು ಸಾಧಿಸಬೇಕೆಂಬ ತವಕ ಮೊದಲಿನಿಂದಲೇ ಇತ್ತು. ಅಮೆರಿಕದಲ್ಲಿ ದುಬಾರಿ ಬೆಲೆಯ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಬಾಡಿಗೆಗೆ ಕೊಡುವ ಮಾಹಿತಿಯನ್ನು ಅವರು ಓದಿದ್ದರು. ಮುಂಬೈ, ದೆಹಲಿಯಲ್ಲೂ ಈ ಬಗೆಯ ಟ್ರೆಂಡ್‌ ಆರಂಭವಾಗಿದೆ. ಬೆಂಗಳೂರಿನಲ್ಲೂ ಆ ಟ್ರೆಂಡ್‌ ಶುರು ಮಾಡಬೇಕು ಎಂದು ಶ್ವೇತಾ ನಿರ್ಧರಿಸಿ, `ಕ್ಯಾಂಡಿಡ್‌ನಾಟ್‌’ ಹೆಸರಿನಲ್ಲಿ ಒಂದು ಉದ್ಯಮ ಶುರು ಮಾಡಿದರು.

ಮಹಿಳೆಯರ ಹಾಗೆ ಪುರುಷರು ಬಟ್ಟೆಗಳ ಆಯ್ಕೆಯಲ್ಲಿ ಅಷ್ಟೇನೂ ಆಸಕ್ತಿ ತೋರಿಸುವುದಿಲ್ಲ. ಇವರು ಒಂದೆರಡು ಬಣ್ಣಗಳು ಅಂದರೆ ಕಪ್ಪು, ಕಂದು ಬಣ್ಣದ  ಸೂಟ್‌ ಧರಿಸುತ್ತಾರೆ. ಅವರಿಗಾಗಿ, ಅವರ ನಿರೀಕ್ಷೆಗೂ ಮೀರಿದ ಉತ್ತಮ ವಿನ್ಯಾಸದ, ಉತ್ತಮ ಗುಣಮಟ್ಟದ, ಬಗೆ ಬಗೆಯ ಬಣ್ಣಗಳ ಪೋಷಾಕುಗಳನ್ನು ದೊರಕಿಸಿ ಕೊಡಬೇಕೆಂಬ ಅಪೇಕ್ಷೆಯಿಂದ ಶ್ವೇತಾ ಪೊದ್ದಾರ್‌ ಅವರ `ಕ್ಯಾಂಡಿಡ್‌ನಾಟ್‌’ ಜನ್ಮ ತಳೆಯಿತು.

ಹಣ ಉಳಿತಾಯದ ದಾರಿ

ಒಂದು ದುಬಾರಿ ಬೆಲೆಯ ಪೋಷಾಕಿನ ಖರ್ಚಿನಲ್ಲಿ 10-12 ಸಲ ಅಂಥದೇ ಬಟ್ಟೆಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಬಾಡಿಗೆಗೆ ಪಡೆದು ತಮ್ಮ ಅವಶ್ಯಕತೆ ಈಡೇರಿಸಿಕೊಳ್ಳಬಹುದು. ಜೊತೆಗೆ ಅದನ್ನು ಸ್ವಚ್ಛಗೊಳಿಸುವ, ಇಸ್ತ್ರಿ ಮಾಡುವ, ಧೂಳು ಹಿಡಿಯದಂತೆ ಕಾಪಾಡುವ ಯಾವುದೇ ಕಿರಿಕಿರಿಯೂ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ `ಕ್ಯಾಂಡಿಡ್‌ನಾಟ್‌’ ಪುರುಷರ ವಲಯದಲ್ಲಿ ಹೆಸರು ಮಾಡುತ್ತಿದೆ.

ಮನೆಬಾಗಿಲ ಸೇವೆ

`ಕ್ಯಾಂಡಿಡ್‌ನಾಟ್‌’ನ ಸೇವೆ ಸದ್ಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. 15 ಕಿ.ಮೀ. ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಬೇಕಾಗುವಂತಹ ಪೋಷಾಕುಗಳನ್ನು 3 ಗಂಟೆಗಳ ಅವಧಿಯಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಶ್ವೇತಾ ಮಾಡುತ್ತಿದ್ದಾರೆ. ಗ್ರಾಹಕನಿಗೆ ಬೇಕಾಗುವಂತಹ ಪೋಷಾಕಿನ 2-3 ಮಾದರಿಗಳನ್ನು ಇವರ ಪ್ರತಿನಿಧಿ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವುದರಿಂದ ಗ್ರಾಹಕನಿಗೆ ಆಯ್ಕೆ ಅತ್ಯಂತ ಸುಲಭವಾಗುತ್ತದೆ. ಬಟ್ಟೆಯ ಮೌಲ್ಯದ ಶೇ.10ರಷ್ಟು ಮೊತ್ತ ಹಾಗೂ ಅಷ್ಟೇ ಮೊತ್ತವನ್ನು ಸುರಕ್ಷತಾ ಠೇವಣಿಯಾಗಿ ಇಟ್ಟುಕೊಳ್ಳಲಾಗುತ್ತದೆ. ಗ್ರಾಹಕ ಬಟ್ಟೆಯನ್ನು ವಾಪಸ್‌ ಮಾಡಿದ ಬಳಿಕ ಠೇವಣಿ ಮೊತ್ತವನ್ನು ಮರಳಿಸಲಾಗುತ್ತದೆ.

ಕೋರಮಂಗಲದ ಅವರ ಕಛೇರಿಯಲ್ಲಿ ಹಲವು ಟ್ರಯಲ್ ರೂಮುಗಳಿದ್ದು, ಗ್ರಾಹಕರು ಟ್ರಯಲ್ ಮಾಡಿ ತಮಗೆ ಇಷ್ಟವಾದ ಪೋಷಾಕನ್ನು ಆಯ್ಕೆ ಮಾಡಿಕೊಂಡು ಹೋಗಬಹುದು.

“ನಮ್ಮ ಈ ಒಂದು ಹೊಸ ಪ್ರಯತ್ನವನ್ನು ಬೆಂಗಳೂರು ನಾಗರಿಕರು ಮನಃಪೂರ್ವಕವಾಗಿ ಸ್ವಾಗತಿಸಿದ್ದರಿಂದಾಗಿ ನಾವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು,” ಎಂದು ಶ್ವೇತಾ ಹೇಳುತ್ತಾರೆ.

ಮದುವೆಗಳಿಗೂ ಪೋಷಾಕು

ಶ್ವೇತಾ ಆಫೀಸು, ಕಾರ್ಪೋರೇಟ್‌ ಮೀಟಿಂಗ್‌ಗಳ ಡ್ರೆಸ್‌ಗಳ ಬಗೆಗಷ್ಟೇ ಗಮನಕೊಡದೆ, ಮದುವೆ ಸಮಾರಂಭಗಳಲ್ಲಿ ಧರಿಸುವ ದುಬಾರಿ ಬೆಲೆಯ ಪೋಷಾಕುಗಳಾದ ಕುರ್ತಾ ಪೈಜಾಮಾ, ಶೇರ್ವಾನಿ, ಪೇಟಾ, ಇಂಡೊ ವೆಸ್ಟರ್ನ್‌ ಶೈಲಿಯ ದುಬಾರಿ ಬಟ್ಟೆಗಳನ್ನು ಕೂಡ ಲಭ್ಯ ಮಾಡುವುದರ ಮೂಲಕ ಕೌಟುಂಬಿಕ ಬೇಡಿಕೆಗೂ ಸ್ಪಂದಿಸುತ್ತಿದ್ದಾರೆ.

ಹವಾಮಾನಕ್ಕೆ ತಕ್ಕಂತೆ ಹೊಸ ಸಂಗ್ರಹ

ಶ್ವೇತಾರ ಜೊತೆಗೆ 12 ಜನರ ತಂಡ ಕೆಲಸ ಮಾಡುತ್ತಿದ್ದು, ಪ್ರಸ್ತುತ ಅವರ ಬಳಿ 2500ಕ್ಕೂ ಹೆಚ್ಚು ಡ್ರೆಸ್‌ಗಳ ಸಂಗ್ರಹವಿದೆ. 16-40 ವರ್ಷ ವಯಸ್ಸಿನ ಪುರುಷರು ತಮಗೆ ಬೇಕಾದ ದುಬಾರಿ ಬೆಲೆಯ ಪೋಷಾಕುಗಳನ್ನು ಬಾಡಿಗೆಗೆ ಪಡೆಯಬಹುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹವಾಮಾನಕ್ಕನುಗುಣವಾಗಿ ಅವರ ಸಂಗ್ರಹದಲ್ಲಿ ಹೊಸ ಹೊಸ ವಿನ್ಯಾಸದ, ಬೇರೆ ಬೇರೆ ಸೈಜಿನ ಪೋಷಾಕುಗಳು ಸೇರ್ಪಡೆಗೊಳ್ಳುತ್ತವೆ.

ಶ್ವೇತಾ ಬೆಂಗಳೂರಿನ ಬೇರೆ ಬೇರೆ ಡಿಸೈನರ್‌ಗಳಿಂದಲೂ ಪೋಷಾಕುಗಳನ್ನು ಕೊಂಡುಕೊಳ್ಳುತ್ತಾರೆ. ಗ್ರಾಹಕರಿಂದ ಮರಳಿ ಬಂದ ಪೋಷಾಕುಗಳನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿ, ಇಸ್ತ್ರಿ ಮಾಡಿಸಿ ಹೊಸದರಂತೆ ಮಾಡಿ ಅದನ್ನು ವ್ಯವಸ್ಥಿತವಾಗಿ ಇಡುತ್ತಾರೆ.

ಗ್ರಾಹಕರಿಗೆ ಬೇಕಾದ ಬಟ್ಟೆಯನ್ನು ಯಾವಾಗ ಬೇಕಾದರೂ ಶೀಘ್ರ ಲಭ್ಯವಾಗುವಂತೆ ಮಾಡಲು ತಮ್ಮದೇ ಆದ ಲಾಂಡ್ರಿ ಘಟಕ ಹೊಂದಬೇಕೆನ್ನುವುದು ಶ್ವೇತಾರ ಯೋಚನೆ.

ಗ್ರಾಹಕರ ಅಭಿಪ್ರಾಯಗಳನ್ನು ಚಾಚೂ ತಪ್ಪದೇ ತೆಗೆದುಕೊಳ್ಳುವ ಅವರು, ಈ ನಿಟ್ಟಿನಲ್ಲಿ ಏನು ಸುಧಾರಣೆ ಮಾಡಬಹುದು ಎಂಬುದರ ಬಗ್ಗೆ ಯೋಜನೆ ಮಾಡುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ