ವಾಸ್ತುವಿನಲ್ಲಿ ಒಂದೊಂದು ಕಟ್ಟಡ ಭಿನ್ನ ಭಿನ್ನ. ನಾವು ಒಬ್ಬರಿದ್ದಂತೆ ಇನ್ನೊಬ್ಬರಿರುವುದು ಬೇಡ ಅಂತ ಅವು ಮಾತನಾಡಿಕೊಂಡಿವೆಯೋ ಏನೋ? ಆಗಸಕ್ಕೆ ಚಿಮ್ಮಿದಂತೆ ಭಾಸವಾಗುವ ಅವುಗಳ ಉಪ್ಪರಿಗೆಗಳನ್ನು ಎಣಿಸುವಾಗ ಕ್ರಮಸಂಖ್ಯೆ ತಪ್ಪುವುದು ಖಾತರಿ. ಬೃಹತ್ ಚಕ್ರದಂತೆ, ಕೊಯ್ದಿಟ್ಟ ಪೈನಾಪಲ್, ಸೇಬು, ಪತಂಗಗಳಂತೆ, ಬೆಳಕಿನಲ್ಲಿ ಕಟ್ಟಿದಂತೆ ತೋರುವ ವೈವಿಧ್ಯಮಯ ನಿರ್ಮಿತಿಗಳು. ಎಲ್ಲ ಸೀಳು ತರಚುಮುಕ್ತ. ನಿಜವಾಗಿ ಬೆರಗುಗೊಳಿಸುವುದು ಭವ್ಯ ನಿರ್ಮಾಣಗಳಲ್ಲ. ಬದಲಿಗೆ ಹೇಳಿಕೇಳಿ ಮರುಭೂಮಿಯಲ್ಲಿ ಇಂತಹ ಅದ್ಭುತ ರಚನೆಗಳು ಸಾಧ್ಯವಾಗಿದ್ದು ಹೇಗೆಂದು?! ನಿಮ್ಮ ಅಂದಾಜು ಸರಿ… ನಾನು ಬಣ್ಣಿಸುತ್ತಿರುವುದು ಅಬುಧಾಬಿಯನ್ನು. ಕಳೆದ ಫೆಬ್ರುವರಿ 22-23ರಂದು ಅಲ್ಲಿ ನೆರವೇರಿದ ಕನ್ನಡ ಸಮಾವೇಶವೊಂದರಲ್ಲಿ ಭಾಗಿಯಾದ ನನಗೆ ಊರು ಕಣ್ತುಂಬಿಕೊಳ್ಳುವ ಅವಕಾಶ ಒದಗಿತ್ತು.
ಮಂಗಳೂರಿನ `ಹೃದಯವಾಹಿನಿ’ ಮಾಸಪತ್ರಿಕೆ ಕರ್ನಾಟಕ ರಾಜ್ಯದ ಸಂಸ್ಕೃತಿ ಇಲಾಖೆಯ ಸಹಯೋಗದೊಡನೆ ನಿಯೋಜಿಸಿದ `15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ ಅದು. ಅಬುಧಾಬಿಗೆ ಯು.ಎ.ಇ.ನಲ್ಲೇ ಅತ್ಯಂತ ಸುರಕ್ಷಿತ ಪ್ರಾಂತ್ಯವೆಂಬ ಹೆಗ್ಗಳಿಕೆ. ಅಲ್ಲಿ ಮರೆತ ವಸ್ತು ಹಾಗೆಯೇ ಇದ್ದ ಸ್ಥಳದಲ್ಲೇ ಇರುತ್ತದೆ. ಬಸ್ಸಿನಲ್ಲಿ ನಿಂತು ಪ್ರಯಾಣಿಸಿದರೆ ದಂಡ ತೆರಬೇಕಾಗುತ್ತದೆ. ಪೊಲೀಸ್ ವಾಹನವನ್ನು ಹಿಂದಿಕ್ಕುವ ವಾಹನಗಳಿಗೆ ದಂಡ ವಿಧಿಸುತ್ತಾರೆ. ಎಮಿರೇಟ್ಸ್ ಎಂಬ ಪದದ ಮೂಲ ಅಮೀರ್.
ಅಮೀರ್ ಎಂದರೆ ಆಳು ಅರಸ. ಅರಸ ಅದೆಷ್ಟು ಸರಳ ಎಂದರೆ ಜನರೊಂದಿಗೆ ಬೆರೆತು ಲೋಕಾಭಿರಾಮ ನಡೆಸುವುದಿದೆ. ಶಾಲೆ ಶುಲ್ಕ ದುಬಾರಿಯಾದರೂ ಶಾಲೆಯ ಆವರಣದಲ್ಲೇ ವಿಸ್ತಾರ ಉದ್ಯಾನ, ಕ್ರೀಡಾಂಗಣ, ಭವ್ಯ ಗ್ರಂಥಾಲಯ ಮುಂತಾದವು ಸೌಲಭ್ಯವಿರುತ್ತದೆ. ಶಾಲೆಯ ತರಗತಿ ಕೊಠಡಿಗಳು ವಿಶಾಲವಾಗಿವೆ. ಕರೆನ್ಸಿ ದಿರಾನ್. ಒಂದು ದಿರಾನ್ 20 ರೂಪಾಯಿಗಳಿಗೆ ಸಮ. ಏನಾದರೂ ಕೊಳ್ಳಿ, ಹತ್ತು ದಿರಾನ್ ನೀಡಿ ಎನ್ನುವ ಫಲಕ ಕೆಲವು ಮಾಲ್‌ಗಳಲ್ಲಿ ಕಾಣಿಸುತ್ತದೆ.
ಎರಡು ವಿಮಾನಗಳಲ್ಲಿ ಹೊರಟ ನಮ್ಮ ತಂಡದ್ದು `ಕನ್ನಡ ಕಂ ಪ್ರವಾಸ’ ಆಗಿತ್ತು. ಹಿರಿಯ ಪತ್ರಕರ್ತ ಮಂಜುನಾಥ ಸಾಗರ್ ಇಡೀ ಯಾತ್ರೆಯ ನೇತೃತ್ವ ವಹಿಸಿದ್ದರು. ಬೆಂಗಳೂರಿನಿಂದ ಹೊರಟು ದುಬೈ ತಲುಪಿ ಅಲ್ಲೊಂದು ದಿನ ತಂಗಿ ಸುತ್ತಾಡಿದ್ದಾಯಿತು. `ಮರಳು ಸಫಾರಿ’ಯ ರೋಚಕ ಅನುಭವ. `ಬೆಲ್ಲಿ ನೃತ್ಯ’ ವೀಕ್ಷಣೆ ಪ್ರಮುಖ ಮಜಲುಗಳು. ಮರುದಿನ ಬೆಳಗ್ಗೆ ಬಸ್ಸಿನಲ್ಲಿ ಅಬುದಾಭಿಯತ್ತ ಪಯಣ.
ಅಬುಧಾಬಿ ಸಪ್ತ ಅರಬ್ ಪ್ರಾಂತ್ಯಗಳ ಪೈಕಿ (ಯು.ಎ.ಇ) ಒಂದು. ಅದೇ ಯು.ಎ.ಇ.ಯ ರಾಜಧಾನಿ. ಉಳಿದ ಪ್ರಾಂತ್ಯಗಳಂತೆ ವರ್ಷದಲ್ಲಿ ಒಂದೆರಡು ದಿನಗಳು ಮಳೆಯಾದರೆ ಅದೇ ಹೆಚ್ಚು. ಅಕ್ಷರಶಃ ಅಲ್ಲಿ `ತೆಗೆ ಜಡಿಂಬುದೇ ಬರಿಯ ಸುಳ್ಳು’ ಉಕ್ತಿ ಕಾರ್ಯರೂಪ ತಳೆದಿವೆ. ಸಮುದ್ರದ ನೀರಿನಲ್ಲಿ ಉಪ್ಪನ್ನು ಕಿತ್ತೊಗೆದು ತಾಜಾವಾಗಿಸಿಕೊಳ್ಳುತ್ತಾರೆ! ಸಾರ್ವಸತ್ಯವೆಂದರೆ ಕುಡಿಯಲು ಬಳಸುವ ಶುದ್ಧ ನೀರನ್ನೇ, ಶೌಚಕ್ಕೂ ಬಳಸುತ್ತಾರೆ. ಹೊರಗಿನಿಂದ ಮಣ್ಣು ತಂದು ಬೇಸಾಯ ಮಾಡುವಷ್ಟು ಕರ್ತೃತ್ವ ಶಕ್ತಿ ಅಲ್ಲಿನ ಮಂದಿಗೆ, ಪಾಮ್ ಮತ್ತು ಇತರ ಗಿಡಗಳು ದಟ್ಟವಾಗಿಯೇ ಬೆಳೆದಿರುವುದನ್ನು ನೋಡಿದರೆ `ಇಲ್ಲಾಗುವುದೆಂದರೆ ಎಲ್ಲಾಗುವುದು’ ಶರಣರ ನುಡಿ ನೆನಪಾಗುತ್ತದೆ.
ಸಮುದ್ರಕ್ಕೆ ಅಲ್ಲಲ್ಲಿ ಮಣ್ಣು ಸೇರಿಸಿ ಕೃತಕ ನಡುಗಡ್ಡೆಗಳನ್ನೇ ನಿರ್ಮಿಸಿದ್ದಾರೆ. ಗಾಫ್ ಮರಗಳನ್ನು ಬೆಳೆಸಿ ಕಾರಂಜಿ ಸಮೇತ ಉದ್ಯಾನಗಳನ್ನೂ ರೂಪಿಸಲಾಗಿದೆ. ನಿವಾಸಿಗಳ ಸ್ನೇಹ ಖರ್ಜೂರದಷ್ಟೇ ಸಿಹಿ. ಯು.ಎ.ಇ.ನಲ್ಲಿ ಶಿಸ್ತಿಗೆ, ಸಂತೋಷಕ್ಕೆ, ಕೃತಕ ಬುದ್ಧಿಮತ್ತೆಗೆ ಸಚಿವಾಲಯಗಳಿವೆ. ಅಲ್ಲಿನ `ಅಬುಧಾಬಿ ಇಂಡಿಯನ್ ಸ್ಕೂಲ್’ನ ವೇದಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿಯವರ ಸರ್ವಾಧ್ಯಕ್ಷತೆಯಲ್ಲಿ ಕನ್ನಡದ ದುಂದುಭಿ. ಅಬುಧಾಬಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಎಲ್ಲರ ಅಭಿಪ್ರಾಯ ಅದೇ, ನಾವಿಲ್ಲಿ ನೆಮ್ಮದಿಯಿಂದಿದ್ದೇವೆ. ನಮ್ಮ ಜೊತೆಗೆ ಕನ್ನಡವಿದೆ. ಆರು ತಿಂಗಳಿಗೊಮ್ಮೆಯಾದರೂ ಕರ್ನಾಟಕಕ್ಕೆ ಹೋಗಿ ಬರುವುದರಿಂದ ನಮಗೆ ಹೊರನಾಡಿನಲ್ಲಿದ್ದೇವೆ ಅಂತ ಅನ್ನಿಸುವುದೇ ಇಲ್ಲ.
ಶಿಷ್ಟಾಚಾರದಂತೆ ಮೊದಲು ಯು.ಎ.ಇ. ರಾಷ್ಟ್ರಗೀತೆ. ನಂತರ ಭಾರತದ ರಾಷ್ಟ್ರಗೀತೆಯಾಗಿ ನಂತರ ನಮ್ಮ ನಾಡಗೀತೆ ಝೇಂಕರಿಸಿತು. ತಮ್ಮ ಅಧ್ಯಕ್ಷ ಭಾಷಣದಲ್ಲಿ ವಸುಂಧರಾ ಭೂಪತಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವೇ ಪರಂತು ಇಂಗ್ಲಿಷ್‌ನಲ್ಲಿ ಅಲ್ಲ ಎಂದರು. ಎಲ್ಲರೂ ಒಕ್ಕೊರಲಿನಿಂದ ಒಬ್ಬರು ಕನ್ನಡ ಕಲಿಯುವವರಿದ್ದರೂ ಸರಿ, ಕನ್ನಡ ಶಾಲೆ ಮುಚ್ಚಬಾರದೆಂದರು. ಎರಡೂ ದಿನ ನೃತ್ಯ, ಸುಗಮ ಸಂಗೀತ, ಹಾಡು, ಹಸೆ, ಕವಿಗೋಷ್ಠಿಗಳು, ಸಂವಾದ, ಹಾಸ್ಯ, ಜಾದೂ ಇತ್ಯಾದಿ ಜನರ ಹೃದಯ ತಟ್ಟಿದವು. ಪ್ರಖ್ಯಾತ್ ಎಂಬ ಯುವ ಶಾಸ್ತ್ರೀಯ ಗಾಯಕನಿಂದ ಕಲ್ಯಾಣ ರಾಗ ಮೊಳಗಿತು. ಡಾ. ಕಿಕ್ಕೇರಿ ಕೃಷ್ಣಮೂರ್ತಿಯವರು ಶಿಶುನಾಳ ಶರೀಫ್‌ರ ಗೀತೆಗಳನ್ನು ಹಾಡಿ ಸಭಿಕರ ಮನಸೂರೆಗೊಂಡರು. ಮಿಮಿಕ್ರಿ ಗೋಪಿ, ಮುಖ್ಯಮಂತ್ರಿ ಚಂದ್ರು, ನುರಿತ ಪತ್ರಕರ್ತ ವಿಶ್ವೇಶ್ವರ ಭಟ್, ಮಹದೇವ ಸುತ್ತಿಗೇರಿಯವರ ಉಪಸ್ಥಿತಿಯೆಂದರೆ ಇನ್ನೂ ಹೇಳುವುದೇನಿದೆ?
ಎಂ.ಡಿ. ಕೌಶಿಕ್ `ಮಂಕುತಿಮ್ಮನ ಕಗ್ಗ’ದ ಸಾಲುಗಳ ಜಾದೂ ಪ್ರದರ್ಶಿಸಿ ಸಭಿಕರಿಗೆ ಮುಟ್ಟಿಸಿದ್ದು ಅಮೋಘವಾಗಿತ್ತು. ಕನ್ನಡವನ್ನು ಉಳಿಸುವುದಲ್ಲ, ಬೆಳಿಸುವುದಲ್ಲ, ಕನ್ನಡವನ್ನು ಬಳಸುವುದೇ ಮುಖ್ಯ ಎನ್ನುವ ಅರ್ಥಪೂರ್ಣ ಸಂದೇಶ ಅನುರಣಿಸಿತು. ಭೋಜನದಲ್ಲಿ ಲಡ್ಡು, ಮಜ್ಜಿಗೆ ಹುಳಿ, ಎಣಗಾಯ್, ಚಪಾತಿ, ಕ್ಯಾರೆಟ್ ಹಲ್ವಾ ಉದರ ತಣಿಸಿದ.
ಕೇಳಿದಾಗೆಲ್ಲ ಮಸಾಲೆ ಚಾ ವಿತರಿಸಲಾಗುತ್ತಿತ್ತು. ಒಂದು ಮುಖ್ಯ ಅಂಶ ಹೇಳದೆ ಬಿಡುವಂತಿಲ್ಲ. ನಮ್ಮೊಂದಿಗೆ ವಿಶೇಷ ಚೇತನದ (ವಾಕ್ ಮತ್ತು ಶ್ರವಣ ದೋಷವುಳ್ಳ) ಕಲಾವಿದರು ಪ್ರವಾಸ ಮಾಡಿದರು. ಆ ಹತ್ತು ಮಂದಿ ಉತ್ಸಾಹಿಗಳು ಚಿತ್ರಕಲಾವಿದರು. ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿದ್ದರು. ಅವರಿಗೆ ಎಲ್ಲರಿಂದ ಉತ್ತಮ ಪ್ರೋತ್ಸಾಹ ದೊರಕಿತು.
ಅಬುಧಾಬಿಯ ಶೇಕ್ ಷಫಿ ಸಯ್ಯದ್ ಹೆಸರಿನ `ಗ್ರ್ಯಾಂಡ್ ಮಾಸ್ಕ್’ ಸಂದರ್ಶಿಸಲೇಬೇಕು. ಒಮ್ಮೆಗೆ 40,000 ಮಂದಿ ಪ್ರಾರ್ಥನೆ ಸಲ್ಲಿಸಬಹುದಾದ ಈ ಮಸೀದಿ ದೂರದಿಂದ ನೋಡಿದರೆ ಆಗಷ್ಟೇ ಹಾಲಿನಲ್ಲಿ ಮಿಂದು ಎದ್ದಂತೆ ಭಾಸವಾಗುತ್ತದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಅತ್ಯುತ್ತಮ ಅಮೃತಶಿಲೆಗಳು ಲಭ್ಯವೋ ಅವನ್ನು ಅಲ್ಲಿಂದ ತರಿಸಿ ಇದರ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಪ್ರವೇಶ ಉಚಿತ. ಆದರೆ ಸಂದರ್ಶಕರು ಕಡ್ಡಾಯವಾಗಿ ಅಡಿಯಿಂದ ಮುಡಿಯವರೆಗೆ ಪೂರ್ಣ ಉಡುಪಿನಲ್ಲಿರಬೇಕು. ಶಾರ್ಟ್ಸ್, ಸ್ಕರ್ಟ್ ನಿಷಿದ್ಧ. ಬಿಗಿಯುಡುಗೆಯೂ ಕೂಡದು. ಧಿರಿಸು ಬೇಕಿದ್ದರೆ ಒದಗಿಸಲಾಗುತ್ತದೆ. ನಿಶ್ಯಬ್ದವನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು. ಅಬುಧಾಬಿಯಲ್ಲಿ ಅಗಲವಾದ ರಸ್ತೆಗಳು, ನೀವಾಗಿಯೇ ನಿಯಮ ಪಾಲಿಸಿದರೆ ನಮಗೇನು ಕೆಲಸ ಎನ್ನುವಂತೆ ಪೊಲೀಸರು ಗೈರು! ಅಂದು ಸಂಜೆ ಶಾರ್ಜಾ ವಿಮಾನ ನಿಲ್ದಾಣಕ್ಕೆ ಬಸ್ಸೇರಿ ಹೊರಟಾಗ ಏನನ್ನೋ ಕಳೆದುಕೊಳ್ಳುತ್ತಿರುವಂತೆ ಮನಸ್ಸು ಭಾರವಾಗಿತ್ತು. ಕರ್ನಾಟಕ ಸಂಘದ ಪದಾಧಿಕಾರಿಗಳು “ಯಾಕೆ ಅಗಲಿಕೆಯ ವೇದನೆ, ಮೂರೂವರೆ ತಾಸುಗಳ ದೂರವಷ್ಟೆ ನಾವು, ನೀವು,” ಎಂದು ಬೆನ್ನು ತಟ್ಟಿದ್ದರು.
– ಬಿಂಡಿಗನವಿಲೆ ಭಗವಾನ್